ಭಾರತೀಯ ಗೋವಂಶ

ಪರಿಚಯ

ಗೋವು ಒಂದು ಆಪ್ತ ಪರಿಚಯ

’ಗೋವು’ ಶಬ್ದ ಕೇಳಿದೊಡನೆಯೇ ಹಳೆಯ ಸವಿ ನೆನಪುಗಳು ಮನಸ್ಸನ್ನು ಅಮರಿಕೊಳ್ಳುತ್ತವೆ. ಮನೆಯ ಪಕ್ಕದಲ್ಲಿರುತ್ತಿದ್ದ ಕೊಟ್ಟಿಗೆ. ಮುಂಜಾವಿನ ಚುಮುಚುಮು ಬೆಳಗು ಬಿಚ್ಚಿಕೊಳ್ಳುತ್ತಿದ್ದುದು ಈ ಕೊಟ್ಟಿಗೆಯೊಳಗಿಂದ. ಮನೆಯ ಮನಗಳನ್ನು ಅರಳಿಸಲು ಹಾಲಿಗಾಗಿ ಅಮ್ಮಂದಿರು ಕೈಯಲ್ಲಿ ತಂಬಿಗೆ ಹಿಡಿದು ಅತ್ತ ತೆರಳುತ್ತಿದ್ದರು. ಹಸುವಿನ ಮೈದಡವಿ, ತಾವಿಟ್ಟ ಪ್ರೀತಿಯ ಹೆಸರಿನಿಂದ ಮಾತನಾಡಿಸುತ್ತ, ಕೆಚ್ಚಲಿಗೆ ಕೈ ಹಾಕಿದರೆ, ಹರಿಯುತ್ತಿತ್ತು ಅಮೃತದ ರಸಧಾರೆ. ಗೋವು ಹಾಲು ಕೊಡುತ್ತಿದ್ದುದು ತನ್ನ ಕರುವಿನ ಮೇಲೆ ವಾತ್ಸಲ್ಯ ಸುರಿಸುತ್ತ. ಅಮ್ಮಂದಿರ ಅದೇ ವಾತ್ಸಲ್ಯ ಈ ಹಾಲಿನೊಂದಿಗೆ ಸೇರಿ ಮಕ್ಕಳ ಮೈಮನಸ್ಸನ್ನು ಬೆಳೆಸುತ್ತಿತ್ತು.

ಅದೇ ಗೋವು ಮೂವತ್ತಮೂರು ಕೋಟಿ ದೇವತೆಗಳಿಗೆ ಆವಾಸಸ್ಥಾನವಾಗಿ ಚಲಿಸುವ ದೇವಾಲಯ ಎನಿಸಿ, ಪವಿತ್ರವಾದ ಪಂಚಗವ್ಯವನ್ನು ಜೀವಲೋಕಕ್ಕೆ ಕೊಡಮಾಡಿ ಚಲಿಸುವ ತೀರ್ಥಾಲಯವಾಗಿ, ರೋಗನಿವಾರಕ ಔಷಧೀಯ ಗುಣಗಣಿಯಾಗಿ ಚಲಿಸುವ ಔಷಧಾಲಯವಾಗಿ ತ್ರಿವಿಕ್ರಮ ಸ್ವರೂಪವನ್ನು ತಳೆದಿದೆ.

’ಗಾವೋ ವಿಶ್ವಸ್ಯ ಮಾತರಃ’ – ಗೋವು ಜಗತ್ತಿಗೇ ಮಾತೆ ಎಂಬುದು ದರ್ಶನ. ಗೋವು ಎಲ್ಲಿಲ್ಲ ಹೇಳಿ ? ಕೃಷಿ, ಸಾಗಾಟ, ಆಹಾರ, ಔಷಧ, ಉದ್ಯಮ, ಕ್ರೀಡೆ, ಧಾರ್ಮಿಕ ಕಲಾಪ, ಭಾವನಾತ್ಮಕ ನೆಲೆ, ಅರ್ಥ ವ್ಯವಸ್ಥೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಗೋವಿನ ಪಾತ್ರ ಇದ್ದೇಇದೆ. ಹಾಗಾಗಿ ಪುರಾಣೇತಿಹಾಸಗಳ ಕಾಲದಿಂದಲೂ ಗೋವಿಗೊಂದು ಅಗ್ರಮಾನ್ಯತೆ ಇದೆ.

ವೈಶಿಷ್ಟ್ಯ

ಗೋವಿನ ಲಕ್ಷ ಲಕ್ಷಣಗಳು

ಮೇಲ್ಮೇಲಿನ ಲಕ್ಷಣ :

ಬಾಸ್ ಗುಂಪಿನ ಇಂಡಿಕಸ್ ಪ್ರಭೇದಕ್ಕೆ ಸೇರಿದ್ದು ನಮ್ಮ ಗೋವು.

ಉನ್ನತವಾದ ಭುಜ, ಕುತ್ತಿಗೆಯ ಭಾಗದಲ್ಲಿ ಮಾಲೆಯಂತೆ ಜೋಲಾಡುವ ಗಂಗೆದೊಗಲು, ಬೆನ್ನಿನ ಮೇಲೆ ಸುರುಳಿಯಾಕಾರದಲ್ಲಿರುವ ಸೂರ್ಯಕೇತು ನಾಡಿ ಛಕ್ಕನೆ ಗುರುತಿಸಬಹುದಾದ ವಿಶೇಷತೆಗಳು.

ಸೂರ್ಯಕೇತು ನಾಡಿ ಸೂರ್ಯನ ಕಿರಣಗಳಿಂದ ಅಂದರೆ ವಾತಾವರಣದಿಂದ ಔಷಧೀಯ ಸತ್ತ್ವಗಳನ್ನು ಹೀರಿ ಹಾಲು, ಗೋಮೂತ್ರ, ಗೋಮಯಗಳನ್ನು ಇನ್ನಷ್ಟು ಪುಷ್ಟಿಕರವಾಗಿಸುತ್ತದೆ ಎಂಬುದು ಪ್ರತೀತಿ.

ಚರ್ಮ :

ಉನ್ನತ ಭುಜ, ಗಂಗೆದೊಗಲು, ನೀಳ ಕಿವಿಗಳಿಂದಾಗಿ ಚರ್ಮದ ಹರಹು ಹೆಚ್ಚಾಗಿದೆ. ಇದು ಬೆವರನ್ನು ಹೆಚ್ಚಿಸಿ, ಸೆಖೆಯನ್ನು ಸಹ್ಯವಾಗಿಸುತ್ತದೆ. ಈ ಲಕ್ಷಣ ಭಾರತದಂತಹ ಸಮಶೀತೋಷ್ಣ ವಲಯಕ್ಕೆ ಹೇಳಿಮಾಡಿಸಿದಂತಿದೆ.

ಬೆವರಿನ ಗ್ರಂಥಿಗಳು ಅಧಿಕ ಹಾಗೂ ದೊಡ್ಡ ಗಾತ್ರದವು. ಇವು ಸ್ರವಿಸುವ ಜಿಡ್ಡು ಸುವಾಸನೆಯಿಂದ ಕೂಡಿದ್ದು, ಮಳೆ-ಕೀಟಗಳಿಂದ ರಕ್ಷಣೆ ಒದಗಿಸುತ್ತದೆ.

ಮಾಂಸಪೇಶಿಗಳು ನಿರ್ದಿಷ್ಟ ಜಾಗದಲ್ಲಿಯೂ ಅದುರುವುದು ಮೈ ಮೇಲೆ ಕೂತ ಕೀಟಗಳನ್ನು ಓಡಿಸಲು ಸಹಕಾರಿಯಾಗಿದೆ.

ಚಿಕ್ಕಚಿಕ್ಕ ರೋಮಗಳು ಇರುವುದರಿಂದ ಮೈ ಶುಚಿಯಾಗಿರುತ್ತದೆ.

ಚರ್ಮದ ಈ ಎಲ್ಲ ವೈಶಿಷ್ಟ್ಯಗಳಿಂದಾಗಿ ನಾಟಿ ಎತ್ತು ಉರಿಬಿಸಿಲು, ಜಡಿಮಳೆಯಲ್ಲೂ ನಿರಾಯಾಸವಾಗಿ ಕೆಲಸ ಮಾಡಬಲ್ಲದು.

ಬಾಲ :

ನೆಲಕ್ಕೆ ತಾಗುವಷ್ಟು ಉದ್ದವಾಗಿರುತ್ತದೆ.

ಬಾಲದ ಕೀಲು ವಿಶಿಷ್ಟವಾಗಿದ್ದು, ಕುತ್ತಿಗೆಯ ವರೆಗೂ ಸುತ್ತಲೂ ತಿರುಗಿಸಬಹುದು.

ಕ್ರಿಮಿ-ಕೀಟಗಳು ಹೆಚ್ಚಾಗಿರುವ ಭಾರತದಂತಹ ಸಮಶೀತೋಷ್ಣ ದೇಶದಲ್ಲಿ ಅವುಗಳನ್ನು ಓಡಿಸುವ ಅಸ್ತ್ರವೂ ಆಗುತ್ತದೆ.

ಗೊರಸು :

ಗೊರಸು ಕೂಡಿಕೊಂಡಿರುತ್ತದೆ. ಕಸಕಡ್ಡಿ ಸಿಕ್ಕಿಹಾಕಿಕೊಳ್ಳುವುದಿಲ್ಲ.

ನಾಟಿ ಎತ್ತುಗಳ ಗೊರಸು ಚಿಕ್ಕದಾಗಿದ್ದು, ಕೂಡಿಕೊಂಡು ಗಟ್ಟಿಯಾಗಿರುತ್ತದೆ. ಇಂತಹ ಗೊರಸು ಉಳುಮೆಗೆ, ಗಾಡಿ ಎಳೆಯಲು ತಕ್ಕುದಾದುದು.

ಮತ್ತೂ ಎಂದರೆ, ಅಮೃತ್‌ಮಹಲ್, ಹಳ್ಳಿಕಾರು ಎತ್ತುಗಳ ಕಾಲಿಗೆ ಲಾಳ ಹೊಡೆಯದೆಯೂ ಕೆಲಸ ಮಾಡಿಸಬಹುದು.

ಉಳುವಾಗ ಟ್ರಾಕ್ಟರಿನಂತೆ ಮಣ್ಣನ್ನು ಗಟ್ಟಿಮಾಡಿ, ಮೇಲ್ಮೈನ ಕ್ರಿಮಿಗಳನ್ನು ನಾಶ ಮಾಡುವುದಿಲ್ಲ.

ಕ್ರೋಮೋಸೋಮ್ :

ದೇಹದ ಪ್ರತಿಯೊಂದನ್ನೂ ನಿಯಂತ್ರಿಸುವುದು ಈ ಕ್ರೋಮೋಸೋಮ್‌ಗಳು.

ಲಿಂಗ ನಿರ್ಧರಿಸುವ ವೈ ಕ್ರೋಮೋಸೋಮ್ ಅಪೇಕ್ಷಿತ ಮಟ್ಟದಲ್ಲಿರುವುದರಿಂದ ಎಷ್ಟು ತಲೆಮಾರು ಕಳೆದರೂ ಗರ್ಭ ನಿಲ್ಲುವ ತೊಂದರೆ ಎದುರಾಗುವುದಿಲ್ಲ.

ಜೀವಕೋಶಗಳ ಚಟುವಟಿಕೆ :

ವಿಷಮ ಪರಿಸ್ಥಿತಿಗಳಲ್ಲಿನ ಆಹಾರದ ಕೊರತೆಯ ಕಾರಣದಿಂದಾಗಿ ನಂತರದ ದಿನಗಳಲ್ಲಿ ಹಾಲಿನ ಇಳುವರಿ ಹಾಗೂ ಸಂತಾನಶಕ್ತಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ.

ರೋಗ ನಿರೋಧಕ ಶಕ್ತಿ :

ರೋಗ ನಿರೋಧಕ ಶಕ್ತಿ ರಕ್ತಗತವಾಗಿಯೇ ಬಂದಿದೆ. ಹಾಗಾಗಿ ಈ ವಿಷಯದಲ್ಲಿ ಗುಡ್ಡೆಗೆ ಮೇಯಲು ಹೋಗುವ ಹಸುಗಳಿಗೂ, ಹಟ್ಟಿಯಲ್ಲಿ ಕಟ್ಟಿಹಾಕಿದ ಹಸುಗಳಿಗೂ ಯಾವುದೇ ವ್ಯತ್ಯಾಸವಿಲ್ಲ.

ಹಾಗಾಗಿ ಔಷಧೋಪಚಾರಗಳ ಖರ್ಚು ಕಡಿಮೆ.

ಆದ್ದರಿಂದ ದಕ್ಷಿಣೋತ್ತರ ಅಮೆರಿಕಾದವರು, ಐರೋಪ್ಯ ದೇಶಗಳವರು ಭಾರತದಿಂದ ಗೋವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಇವುಗಳನ್ನು ಅವರ ದೇಶದ ತಳಿಗಳೊಂದಿಗೆ ಸಂಕರಗೊಳಿಸಿ, ಅವರ ತಳಿಗಳಲ್ಲಿಯೂ ರೋಗ ನಿರೋಧಕತೆಯನ್ನು ಹೆಚ್ಚಿಸುವ ಇರಾದೆ ಅವರಿಗಿದೆ.

ಕಾರ್ಯಕ್ಷಮತೆ :

ನಾಟಿ ಎತ್ತುಗಳಿಗೆ ಬಲವಾದ ಸ್ನಾಯುಗಳು ಹಾಗೂ ಮಾಂಸಪೇಶಿಗಳು ಇರುವುದಲ್ಲದೇ ಕಾಲುಗಳೂ ಉದ್ದವಾಗಿರುತ್ತವೆ. ಇದರಿಂದ ಅವು ಉಗ್ರ ಬಿಸಿಲಿನಲ್ಲಿ ನೀರು, ಆಹಾರ ಇಲ್ಲದೆಯೂ ಕೆಲಸಮಾಡುವ ಸಾಮರ್ಥ್ಯಶಾಲಿಗಳಾಗಿವೆ.

ಎತ್ತರವಾದ ಭುಜದಿಂದಾಗಿ ನೊಗ ಜಾರದಿರುವುದು ಪ್ರಯೋಜನಕಾರಿಯಾಗಿದೆ. ಹಾಗಾಗಿ ನಮ್ಮಲ್ಲಿ ಹೆಣ್ಣು ಕರುವಿಗಿಂತ ಗಂಡು ಕರುವಿಗೆ ಹೆಚ್ಚಿನ ಮೌಲ್ಯ.

ಸಾಕಣೆ :

ಸಾಮಾನ್ಯ ಕೊಟ್ಟಿಗೆಯಲ್ಲಿಯೂ ಗೋವುಗಳನ್ನು ಸಾಕಬಹುದು. ಅಕಸ್ಮಾತ್ ಅದಕ್ಕೂ ಅನುಕೂಲವಿಲ್ಲದಿದ್ದರೆ ಮರದ ಕೆಳಗೆ ಕಟ್ಟಿಯೂ ಸಾಕಬಹುದು.

ಮಲೆನಾಡು ಗಿಡ್ಡ, ಕಾಸರಗೋಡು, ಬರಗೂರು, ಜವಾರಿಗಳಂತಹ ತಳಿಗಳು ಹಿತ್ತಲಿನ ಸೊಪ್ಪು-ಸದೆಗಳನ್ನು ತಿಂದು, ಅಡುಗೆ ಮನೆಯ ಉಳಿಕೆಯನ್ನು ಸೇವಿಸಿಯೂ ಬದುಕುತ್ತವೆ.

ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ಇವು ಬೆಳಗ್ಗೆಯಿಂದ ಸಂಜೆಯವರೆಗೆ ಹೊಲ-ಗದ್ದೆ, ಕಾಡು-ಮೇಡು, ಗುಡ್ಡ-ಬೆಟ್ಟಗಳಲ್ಲಿ ಮೇಯುತ್ತಾ ಅಲೆದಾಡುತ್ತಿರುತ್ತವೆ. ಹಾಲು ಕೊಡುವಂತಹವುಗಳು ಮಾತ್ರ ಕೊಟ್ಟಿಗೆಗೆ ಮರಳುತ್ತವೆ.

ಹಾಲು :

ಭಾರತೀಯ ಗೋತಳಿಗಳಲ್ಲಿ ೧೫-೨೦ ಲೀ. ಹಾಲು ಕೊಡುವವುಗಳೂ ಇವೆ.

ಪ್ರಮುಖ ಹಾಲಿನ ತಳಿಗಳು : ಗಿರ್, ಸಾಹಿವಾಲ್, ಥಾರ್‌ಪಾರ್ಕರ್, ರಾಟಿ, ಸಿಂಧಿ

ಉತ್ತಮ ಸಾಕಣೆ, ಪೌಷ್ಟಿಕ ಆಹಾರ ಹಾಗೂ ವೈಜ್ಞಾನಿಕ ಅಭಿವೃದ್ಧಿಯ ಲಕ್ಷ್ಯ ಇಟ್ಟುಕೊಂಡಲ್ಲಿ ಮತ್ತಷ್ಟು ತಳಿಗಳನ್ನು ಹಾಲಿನ ತಳಿಗಳಾಗಿ ಮಾರ್ಪಾಡು ಮಾಡಬಹುದು.

ಪಂಚಗವ್ಯ :

ದೇಶೀ ಗೋವಿನ ಪಂಚಗವ್ಯಗಳು : ಗೋಮೂತ್ರ, ಗೋಮಯ, ಗೋಕ್ಷೀರ, ಗೋದಧಿ, ಗೋಘೃತ

ಆಹಾರ, ಔಷಧ, ಗೊಬ್ಬರ, ಕೀಟನಾಶಕಗಳ ರೂಪದಲ್ಲಿ ಬಳಸಬಹುದು.

ಇವುಗಳಿಂದ ರೋಗ ನಿರೋಧಕ ಶಕ್ತಿ ಅಧಿಕಗೊಳ್ಳುತ್ತದೆ.

ಕ್ಯಾನ್ಸರ್, ಬಿ.ಪಿ., ಸಕ್ಕರೆ ಕಾಯಿಲೆ, ಚರ್ಮರೋಗ, ಮೂತ್ರಕೋಶ ಸಮಸ್ಯೆಗಳಿಗೂ ಪರಿಹಾರ ಉಂಟು, ಅದೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ.

ಆರನೆಯ ಇಂದ್ರಿಯ

ಗೋವಿನ ಆರನೆಯ ಇಂದ್ರಿಯವೂ ಚುರುಕು

ಹಸುಗಳ ಆರನೆಯ ಇಂದ್ರಿಯ ಬಹಳ ಚುರುಕು. ಇದನ್ನೇ ಸಮರ್ಥಿಸಿಕೊಂಡು ಪುರಾಣದಲ್ಲೊಂದು ಕಥೆ. ಅಲ್ಲಿ ಗೋವಿಗೆ ಈಗಿರುವ ಎಲ್ಲ ಗುಣಸಂಪನ್ನತೆಗಳ ಒಟ್ಟಿಗೆ ಮಾತೂ ಬರುತ್ತಿತ್ತು. ಒಮ್ಮೆ ತನ್ನ ಯಜಮಾನನಿಗೆ ಆಗಲಿರುವ ಅವಗಢವನ್ನು ತಿಳಿದೇಟಿಗೇ ಹೇಳಿತಂತೆ. ಅದರಿಂದ ಆ ಅವಗಢದಿಂದ ಅವನು ಪಾರಾದ. ಆಗ ದೇವರದೇವ ಪ್ರತ್ಯಕ್ಷನಾಗಿ ಭವಿಷ್ಯವನ್ನು ನುಡಿದು, ಆಗಬೇಕಾಗಿದ್ದುದನ್ನು ತಪ್ಪಿಸಿದ್ದಕ್ಕಾಗಿ ಗೋವಿನ ವಾಕ್ಸಾಮರ್ಥ್ಯವನ್ನು ವಾಪಸ್ ಪಡೆನಂತೆ.

ಅಂತೆಕಂತೆಗಳು ಏನೇ ಇರಲಿ. ಇವತ್ತಿಗೂ ದನಕರುಗಳು ಮನೆಯವರ ಕಷ್ಟಸುಖಗಳಿಗೆ (ನಮಗಿಂತ) ಚೆನ್ನಾಗಿ ಸ್ಪಂದಿಸುತ್ತವೆ. ಮನೆಯಲ್ಲೇನಾದರೂ ಅವಗಢವಾದರೆ ಗೋವುಗಳು ಕಣ್ಣೀರು ಸುರಿಸುವುದು, ಅನ್ನ-ನೀರು ಬಿಡುವುದು, ಮಂಕಾಗುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಅವಗಢಗಳ ಮುನ್ಸೂಚನೆ ದಾಖಲಾಗಿದೆ :

  • ನೆನಪಿರಬಹುದು, ೧೯೯೩ರ ಸಪ್ಟೆಂಬರ್ ೩೦ರಂದು ಮಹಾರಾಷ್ಟ್ರದ ಲಾತೂರಿನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಭೂಕಂಪ ಸಂಭವಿಸುವ ಕೆಲವು ದಿನಗಳ ಮುಂಚಿನಿಂದಲೇ ಅಲ್ಲಿನ ದೇವನಿ ಹಸುಗಳು ಕಾರಣವಿಲ್ಲದೇ ಕೆನೆಯುತ್ತ, ಕೂಗುತ್ತ, ಕುಣಿದಾಡುತ್ತ ಇದ್ದವು. ಇದು ಆಗಲಿರುವ ಅನಾಹುತದ ಮುನ್ಸೂಚನೆಯಾಗಿತ್ತು. ದುರದೃಷ್ಟವಶಾತ್ ನಮಗೆ ತಿಳಿಯಲೇ ಇಲ್ಲ, ಭಾರೀ ಹಾನಿ ಸಂಭವಿಸಿತು.
  • ಅದೇ ರೀತಿ ೨೦೦೪ರ ಭೀಕರ ತ್ಸುನಾಮಿಯ ಮುನ್ನವೂ ಆಯಿತು. ಈ ಬಾರಿ ತಮಿಳುನಾಡಿನ ಬರಗೂರು, ಅಂಬ್ಲಾಚೆರಿ, ಕಂಗಾಯಂ ಹಸುಗಳು ವಿಚಿತ್ರವಾಗಿ ವರ್ತಿಸಿದ್ದವು. ನಾವು ಆ ಮುನ್ಸೂಚನೆಯನ್ನೂ ತಿಳಿಯದೇ ಹೋದೆವು, ಪರಿಣಾಮ ಮೊದಲಿನದಕ್ಕಿಂತ ಭಿನ್ನವಾಗೇನೂ ಇರಲಿಲ್ಲ.

ಕೆಲವು ಭಾರತೀಯ ತಳಿಯ ಗೋವುಗಳ ಭಾವಚಿತ್ರಗಳು:

Facebook Comments Box