ಹೊಸನಗರ : ಹುಟ್ಟಿನ ಹರ್ಷ ಎನ್ನುವುದು ದೀಪ ಆರಿಸುವ ದಿನವಾಗದೆ ದೀಪ ಬೆಳಗಿಸುವ ದಿನವಾಗಲಿ ಈ ಮೂಲಕ ಮತ್ತೊಬ್ಬರ ಬದುಕು ಕಟ್ಟಿ ಕೊಡುವ ಪುಣ್ಯ ಕಾರ್ಯವಾಗಬೇಕು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ನಡೆಯುತ್ತಿರುವ ನಂದನ ನಾಮ ಸಂವತ್ಸರ ರಾಮೋತ್ಸವ ಸಂದರ್ಭ ಸೋಮವಾರ ಆಯೋಜಿಸಿದ್ದ ಶ್ರೀಗಳವರ ಸಂನ್ಯಾಸ ಗ್ರಹಣ ದಿನದ ವಿಶೇಷ ಆಚರಣೆ ಜೀವನದಾನ ಕಾರ್ಯಕ್ರಮದಲ್ಲಿ  ಆರ್ತರಾದ ಯಲ್ಲಾಪುರ ಹುತ್ತಕಂಡದ ವೆಂಕಟರಮಣ ಸುಬ್ರಾಯ ಭಟ್ ಅವರಿಗೆ ಜೀವನ ಅಭಯ ನೀಡಿ ನಂತರ ಆಶೀರ್ವಚನ ನೀಡಿದರು.

ನಮ್ಮ ಹುಟ್ಟು ಹಬ್ಬ ನಮ್ಮ ಸಂಭ್ರಮಕ್ಕೆ ಸೀಮಿತವಾಗದೆ  ಬೇರೆಯವರು ತಮ್ಮ ಜೀವನ ಪೂರ್ತಿ ಸಂತೋಷವಾಗಿ ಕಳೆಯಲು ಬೇಕಾದ ಸಹಕಾರ ನೀಡುವ ಕ್ಷಣವಾಗಬೇಕೆಂದ ಶ್ರೀಗಳವರು ಆ ಉದ್ದೇಶಕ್ಕಾಗಿ ತಮ್ಮ ಸಂನ್ಯಾಸ  ಗ್ರಹಣದ ದಿನವನ್ನು ಆರ್ತರ ಕಣ್ಣೀರು ಒರೆಸುವ ದಿನವಾಗಿ ಸ್ವೀಕರಿಸಿದ್ದೇವೆ ಎಂದರು.  ಇದು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಲೋಕಕ್ಕೆ ಮಾದರಿಯಾಗಬೇಕು ಎಂದರು. ಲೋಕ ಸೇವೆ ಎನ್ನುವುದು ರಾಮ ಸೇವೆ ಇದ್ದಂತೆ ಹಾಗೆ ರಾಮ ಸೇವೆಯೂ ಕೂಡ ಲೋಕ ಸೇವೆಯೇ ಸರಿ ಎಂದ ಅವರು ಸಂಸಾರ ಎಂಬ ಮುಳ್ಳಿನಲ್ಲಿ ಸಿಲುಕಿರುವವರನ್ನು ಮುಳ್ಳಿನ ಪೊದೆಯಿಂದ ನೋವಾಗದಂತೆ ದಾಟಿಸಿ ಸಮಾಜ ಊರುಗೋಲಾಗಬೇಕು ಎಂದರು. ಈ ಸಂದರ್ಭ ಚಲನಚಿತ್ರ ನಟಿ ಬಿ.ವಿ.ರಾಧಾ, ರಾಜಕೀಯ ಮುಖಂಡ ಕಾಗೋಡು ಅಣ್ಣಪ್ಪ ಮತ್ತಿತರರು ಶ್ರೀಗಳವರಿಂದ ಆಶೀರ್ವಾದ ಪಡೆದರು. ಹೆದ್ಲಿ ಬಾಲಚಂದ್ರ ಸಭಾಪೂಜೆ ನೆರವೇರಿಸಿ ಸಂಪೆಕಟ್ಟೆ ಕುಮಾರ್ ನಿರೂಪಿಸಿದರು.

ಚಿತ್ರ  ವಿವರ:

ಹೊಸನಗರ ರಾಮಚಂದ್ರಾಪುರಮಠದಲ್ಲಿ ಸೋಮವಾರ ಶ್ರೀಗಳವರು ತಮ್ಮ ಸಂನ್ಯಾಸ ಗ್ರಹಣದ ನೆನಪಿಗೆ ಆರ್ತರೊಬ್ಬರಿಗೆ ಜೀವನ ದಾನ ನೀಡಿ ಆಶೀರ್ವದಿಸಿದರು.

ಹೊಸನಗರ ರಾಮಚಂದ್ರಾಪುರಮಠದಲ್ಲಿ ಸೋಮವಾರ ನಡೆದ ಜೀವನದಾನ ಕಾರ್ಯಕ್ರಮದಲ್ಲಿ ಶ್ರೀಗಳವರ ಸಂನ್ಯಾಸ ಗ್ರಹಣದ ವಿಶೇಷ ದಿನದ ಪ್ರಯುಕ್ತ ಮಾತೆಯರು ಶ್ರೀಗಳವರಿಗೆ ಮಂಗಳಾರತಿ ಬೆಳಗಿದರು.

Facebook Comments