ಗೋಕರ್ಣ.ಮಾ೮. ಎಲ್ಲರನ್ನೂ ತನ್ನ ಸುತ್ತಮುತ್ತಲಿನದೆಲ್ಲವನ್ನೂ ಪ್ರೀತಿಯಿಂದ, ವಿಶ್ವಾಸದಿಂದ ನೋಡಿ ಆ ಎಲ್ಲದರ ಜೊತೆ ಆತ್ಮೀಯವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಆಗ ಅಷ್ಟೂ ಜೀವಗಳ ಪ್ರೀತಿ, ವಾತ್ಸಲ್ಯ ನಮ್ಮದಾಗುತ್ತದೆ. ಆ ಪ್ರೀತಿಯನ್ನು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಿಕೊಂಡರೆ ಸೀಮಿತವಾದ ಸುಖ ಮಾತ್ರ ದೊರೆಯಬಹುದು. ಮಹಾತ್ಮರು ಲೋಕವನ್ನೇ ತಮ್ಮದಾಗಿಸಿಕೊಳ್ಳುವ ಮೂಲಕ ಆತ್ಮವಿಸ್ತರಣೆಯ ಮಾರ್ಗವನ್ನು ಅನುಸರಿಸುತ್ತಾರೆ. ಪ್ರಭು ಶ್ರೀರಾಮಚಂದ್ರನ ಮಾರ್ಗವದು. ಆತ ವಿಶ್ವದಲ್ಲಿ ಪ್ರೀತಿಸದ ಜೀವವೊಂದಿಲ್ಲ. ಶತ್ರುವಿನ ಬಗ್ಗೆಯೂ ಆತನ ಕರುಣಾಪ್ರವಾಹ ಹರಿಯುತ್ತದೆ. ತೀರ ಅನಿವಾರ್ಯಸಂದರ್ಭಗಳಲ್ಲಿ ಮಾತ್ರವೇ ಅಂತಹವರ ಮೇಲೆ ಶಸ್ತ್ರಪ್ರಯೋಗ. ವಿಭೀಷಣ ಅಣ್ಣನಾದ ರಾವಣನನ್ನು ತ್ಯಜಿಸಿ ಶ್ರೀರಾಮನಲ್ಲಿ ಶರಣುಬಂದಾಗ ಸುಗ್ರೀವಾದಿಗಳು ವಿಭೀಷಣಸ್ವೀಕಾರಕ್ಕೆ ಒಪ್ಪಲಿಲ್ಲ. ಆದರೆ ವಿಭೀಷಣನಿರಲಿ ಅವನ ಅಣ್ಣನಾದ ರಾವಣನೇ ಸ್ವತಹ ಶರಣಾಗಿ ಬಂದರೂ ಅವನನ್ನು ಪರಿಗ್ರಹಿಸುತ್ತೇನೆ. ಲೋಕದ ಎಲ್ಲಜೀವಿಗಳಿಗೂ ಅಭಯವನ್ನು ನೀಡುವುದೇ ನನ್ನ ಪ್ರತಿಜ್ಞೆ ಎಂದೂ ಶ್ರೀರಾಮ ಘೋಷಿಸುತ್ತಾನೆ. ಇದು ಭಗವಂತನ ಭಕ್ತಪ್ರೇಮದ ಮಾದರಿ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
1
ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ ಉತ್ಸವದ ನಿಮಿತ್ತವಾಗಿ ಕಳೆದ ಮಂಗಳವಾರದಿಂದ ನಡೆಯುತ್ತಿರುವ “ರಾಮಕಥಾ” ದ ನಾಲ್ಕನೆಯ ದಿನದ ಅನುಗ್ರಹ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಲೋಕಪೀಡಕಿಯಾಗಿದ್ದ ತಾಟಕಿಯನ್ನೂ ಅಂಗಚ್ಛೇದವನ್ನಷ್ಟೇ ಮಾಡಿ ಬದುಕಲು ಬಿಟ್ಟರೂ ಕೊನೆಗೆ ವಿಶ್ವಾಮಿತ್ರರ ಆದೇಶಕ್ಕೆ ತಲೆಬಾಗಿ ಅವಳನ್ನು ವಧಿಸಿದ. ಮಾರೀಚನಂತಹ ದುಷ್ಟ ರಾಕ್ಷಸನಿಗೂ ಅವನ ತಪ್ಪನ್ನು ತಿದ್ದಿಕೊಳ್ಳಲು ಎರಡುಬಾರಿ ಅವಕಾಶವನ್ನಿತ್ತ. ಅವಲಂಬನೆಯಿಲ್ಲದವರಿಗೆ ಆಶ್ರಯವನ್ನಿತ್ತು ಕಯ್ಯಾರೆ ಮೇಲೆಬ್ಬಿಸಿ ನಿಲ್ಲಿಸಿದ. ಲೋಕದಲ್ಲಿ ಇದ್ದವರನ್ನು ಪ್ರಶಂಸಿಸುವವರಿದ್ದಾರೆ. ಗೆದ್ದವರನ್ನು ಹೆಗಲಮೇಲೆ ಹೊತ್ತವರಿದ್ದಾರೆ. ಆದರೆ ಬಿದ್ದವರನ್ನು ಕೈಹಿಡಿದೆತ್ತಿ ಅವಲಂಬನವನ್ನಿತ್ತವ ಶ್ರೀರಾಮ ಮಾತ್ರ.ಅಹಲ್ಯಾಪ್ರಕರಣದಲ್ಲಿಯೂ ಸಹ ಇಂತಹದ್ದೇ ಭಾವ.ಎಂತಹಪಾಪಿಗೂ ಒಂದುಬದುಕಿದೆ, ಪಶ್ಚಾತ್ತಾಪದಿಂದ ತಪ್ಪಸ್ಸಿನಿಂದ ಪಾಪಲೇಪದೂರಾಗಿ ಪರಿಶುದ್ಧಿಯುಂಟಾಗಲು ಸಾಧ್ಯ  ಎಂಬುದನ್ನು ರಾಮಾಯಣದ ಈ ಭಾಗ ವಿಶೇಷವಾಗಿ ಉಲ್ಲೇಖಿಸುತ್ತದೆ ಎಂದ ಪೂಜ್ಯಶ್ರೀಗಳು ಇಂತಹ ಶ್ರೀರಾಮತತ್ವಗಳು ನಮ್ಮ ಬದುಕಿನ ಔನ್ನತ್ಯಕ್ಕೆ ಸೋಪಾನವಾಗಬೇಕು ಎಂದೂ ಆಶಿಸಿದರು.
2
ಶ್ರೀರಾಮಕಥಾ ವೃಂದದ ಕಲಾವಿದರಾದ ಶ್ರೀಪಾದ ಭಟ್, ಶ್ರೀ ಟಿ.ವಿ.ಗಿರಿ, ಕುಮಾರಿ ದೀಪಿಕಾ ಭಟ್, ಕುಮಾರಿ ಪೂಜಾ,  ಇವರ  ಸುಮಧುರವಾದ ತುಂಬುಕಂಠದ ಗಾಯನ, ಪ್ರಸಿದ್ಧ ತಬಲಾವಾದಕ ಶ್ರೀ ಗೋಪಾಲಕೃಷ್ಣ ಹೆಗಡೆ ಮತ್ತು ಕುಮಾರಿ ವಿಜೇತಾ ಇವರ ತಬಲಾ, ಶ್ರೀ ಗಣೇಶರ ವೇಣುವಾದನ, ಉದಯಭಂಡಾರಿಯವರ ಕೀಬೋರ್ಡ್, ಶ್ರೀ ಲೀಲಾಶುಕರ  ಮನೋಹರ ಹಾರ್ಮೋನಿಯಂ ವಾದನಗಳು ರಾಮಕಥೆಯ ಶ್ರೋತೃಗಳಿಗೆ ಅಪೂರ್ವವಾದ ಆನಂದವನ್ನು ನೀಡಿದವು. ನೀರ್ನಳ್ಳಿ ಗಣಪತಿಯವರ ಆಶುಚಿತ್ರ ಜನರ ಗಮನಸೆಳೆಯಿತು.  ಶ್ರೀಪಾದ ಹೆಗಡೆ ಹಡಿನಬಾಳ,ವಿಷ್ಣುಭಟ್ ಮೂರೂರು,ಈಶ್ವರಭಟ್ ಕಟ್ಟೆ,ವಿಶ್ವೇಶ್ವರ ಹೆಗಡೆ ದಾಮೋದರ ನಾಯಕ ಕುಮಾರಿ ಪೂರ್ಣಿಮಾ ಶ್ರೀಶ ಹೆಗಡೆ ಮೊದಲಾದ ಕಲಾವಿದರ ಸಂಯೋಜನೆಯಲ್ಲಿ ಶ್ರೀ ಶಂಕರನಾರಾಯಣ ಉಪಾಧ್ಯಾಯ ಇವರ ನಿರ್ದೇಶನದಲ್ಲಿ “ಅಹಲ್ಯೋದ್ಧಾರ”ಎಂಬ ಸುಂದರರೂಪಕವು ಪ್ರದರ್ಶಿತವಾಯಿತು.
3
ಪ್ರಾರಂಭದಲ್ಲಿ ಮಾನ್ಯಶಾಸಕ ಶ್ರೀದಿನಕರಶೆಟ್ಟಿ, ಜಿಲ್ಲಾಪಂಚಾಯತ ಸದಸ್ಯ ಶ್ರೀ ಪ್ರದೀಪನಾಯಕ್, ಪ್ರೊ.ಶಂಭು ಭಟ್ಟ ಕಡತೋಕ, ಪಂಚಾಯತಸದಸ್ಯ ಶ್ರೀ ಮಹೇಶ ಶೆಟ್ಟಿ,ಶ್ರೀ ಜಯರಾಮ ಹೆಗಡೆ,ನ್ಯಾಯವಾದಿ ಶ್ರೀ ಜಿ.ಜಿ.ಭಟ್ಟ ಮೊದಲಾದ ಗಣ್ಯರು ರಾಮಾಯಣಗ್ರಂಥಕ್ಕೆ ಮಾಲಾರ್ಪಣೆಮಾಡುವ ಮೂಲಕ ರಾಮಕಥೆಗೆ ತಮ್ಮ ಭಕ್ತಿಶ್ರದ್ಧೆಗಳನ್ನು ಸಲ್ಲಿಸಿದರು.

Facebook Comments