ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು- ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

12513904_791465317651228_931182440139143683_o

ಕೆಲವರಲ್ಲಿ ಪ್ರತಿಭೆಗಳಿರತ್ತೆ, ಆದರೆ ಸಾಧನೆ ಮಾಡಲು ಹಣವಿರಲ್ಲ,ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ವಿದ್ಯಾನಿಧಿಯ ಕಲ್ಪನೆ ಮಾಡಲಾಗಿದೆ ಎಂದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಅವರು ಇಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ “ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣಾ ಕಾರ್ಯಕ್ರಮ’ದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬೀಜ ದೊಡ್ಡದಾಗಿ ಮರವಾಗಿ ಬೆಳೆಯುತ್ತದೆ,ಹಾಗೇ ಒಂದು ಮಗುವೂ ಬೆಳೆಯುತ್ತದೆ.ಬೆಳೆಯುವುದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು,ಅಂತಹ ಒಂದು ಕಾರ್ಯಕ್ರಮವೇ ಇಂದಿನ ಕಾರ್ಯಕ್ರಮ ಎಂದು ಅವರು ತಿಳಿಸಿದರು.ಈ ಹಿಂದೆ ಸಮಾಜದ ಬೇಕಾದಷ್ಟು ವರ್ಗಗಳಿಗೆ,ಬೇಕಾದಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಯಾಗಿದೆ.ಆದರೆ ಈ ಮುಕ್ರಿ ಸಮಾಜಕ್ಕೆ ಕೊಡುವಾಗ ತುಂಬಾ ಸಂತಸವೆನಿಸುತ್ತದೆ,ಏಕೆಂದರೆ ಇದು ಆಳದಿಂದ ಮೇಲಕ್ಕೆ ಬರುತ್ತಿರುವ ಸಮಾಜ,ಅವರು ಮೇಲೆ ಏಳುವಾಗ ನಾವು ಅವರ ಜೊತೆಗಿದ್ದು ಅವರನ್ನು ಎತ್ತಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಆಗಿದ್ದ ಯಲ್ಲಾಪುರ-ಮಾಜಿ ಶಾಸಕರು ಹಾಗೂ ಸಂಕಲ್ಪ ಸಂಸ್ಥೆಯ ಶ್ರೀ ಪ್ರಮೋದ ಹೆಗಡೆಯವರು ಮಾತನಾಡಿ “ಯಾವ ಒಂದು ಜನಾಂಗ ಸಮಾಜದ ಹಿಂದುಳಿದ ಜನಾಂಗ,ಅಸ್ಪೃಶ್ಯ ಜನಾಂಗ ಎಂದೆಲ್ಲಾ ಪರಿಗಣಿಸಲ್ಪಟ್ಟಿತ್ತೋ ಅಂತಹ ಕಟ್ಟ ಕಡೆಯ ಜನಾಂಗವನ್ನೂ ರಾಘವೇಶ್ವರ ಶ್ರೀಗಳು ತಮ್ಮ ಮಕ್ಕಳಂತೆ ಸ್ವೀಕರಿಸಿದರು.ಇತರ ಸಮಾಜದ ಮಕ್ಕಳಂತೆಯೇ ಮುಕ್ರಿ ಸಮಾಜದ ಮಕ್ಕಳೂ ಬೆಳೆಯಲಿ ಎಂಬ ಶುದ್ಧ ಮನಸ್ಸಿನಿಂದ ಪ್ರೀತಿಯ ಧಾರೆ ಎರೆದು ಮುಕ್ರಿ ಸಮಾಜವನ್ನು ಪ್ರೋತ್ಸಾಹಿಸುತ್ತಿದ್ದಾರೆ.ಯಾವ್ಯಾವುದೋ ವಸ್ತುವಿನ ಮೇಲೆ ಹೂಡಿಕೆ ಮಾಡುವುದರ ಬದಲು ಬೆಳೆಯುವ ಮಕ್ಕಳ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಣ ವಿನಿಯೋಗಿಸುವುದು ಹೆಚ್ಚು ಉಪಯುಕ್ತ” ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀ ಲಕ್ಷ್ಮೀನಾರಾಯಣ ಅವರು ಮಾತಾನಾಡುತ್ತಾ, “ಮುಕ್ರಿ ಸಮಾಜಕ್ಕೆ ಕೊಡುತ್ತಿರುವ ಈ ಪ್ರೋತ್ಸಾಹ,ಪುರಸ್ಕಾರ ನಿಜವಾಗಿಯೂ ಹೆಮ್ಮೆ ತರುವ ವಿಷಯ.ಹಿಂದುಳಿದ ಸಮಾಜವನ್ನೂ ಮುಂದೆ ತರುವಲ್ಲಿ ಪ್ರಯತ್ನಿಸುತ್ತಿರುವ ಮಠವಿದ್ದರೆ ಅದು ರಾಮಚಂದ್ರಾಪುರ ಮಠ ಮಾತ್ರ ಎಂದು ಅವರು ಅಭಿಪ್ರಾಯ ಪಟ್ಟರು.ಮುಕ್ರಿ ಸಮಾಜದ ಮಕ್ಕಳೆಲ್ಲ ಬೆಳೆದು ಸಮಾಜದ ವಿವಿಧ ಹುದ್ದೆಗಳನ್ನಲಂಕರಿಸಲಿ ಎಂದು” ಹಾರೈಸಿದರು.

ಮುಕ್ರಿ ಸಮಾಜದ ಬಡ ಪ್ರತಿಭಾವಂತ ೬೩ ವಿದ್ಯಾರ್ಥಿಗಳಿಗೆ ವಿದ್ಯಾಸಹಾಯ ನೀಡಲಾಯಿತು,ವಿದ್ಯಾ ಸಹಾಯ ನಿಧಿ ಸ್ವಿಕರಿಸಿ ಮಾತನಾಡಿದ ಕುಮಾರಿ ವಿಜಯಶ್ರೀ ಮುಕ್ರಿಯವರು ಮಾತನಾಡಿ ನಮ್ಮ ಸಮಾಜಕ್ಕೆ ರಾಘವೇಶ್ವರ ಶ್ರೀಗಳು ತುಂಬಾ ಸಹಾಯ ಮಾಡಿದ್ದಾರೆ,ಅವರ ಆಶೀರ್ವಾದ ಸದಾ ನಮ್ಮ ಸಮಾಜದ ಮೇಲಿರಲಿ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಇದಕ್ಕೂ ಮುನ್ನ ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಮಚಂದ್ರಾಪುರಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಡಾ|| ಶಾರದಾ ಜಯಗೊವಿಂದ ಮಾತನಾಡಿ “ಆದಿಶಂಕರರಿಂದ ಆರಂಭಗೊಂಡ ರಾಮಚಂದ್ರಾಪುರಮಠ ಶತನಮಾನಗಳಿಂದ ವಿದ್ಯಾಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರ. ಶ್ರೀಮಠದ ೯ ಶಾಲೆಗಳು ಧರ್ಮಚಕ್ರಸಂಸ್ಥಾನ ಎಂಬ ಒಂದೇ ಸಂಸ್ಥೆಯಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿವೆ. ಹಾಗೆಯೇ ಶ್ರೀಮಠವು ಹಲವಾರು ವರ್ಷದಿಂದ ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನೂ ನೀಡುತ್ತಾ ಬಂದಿದೆ. ೨೦೧೪-೨೦೧೫ ರಲ್ಲಿ ಸಾರ್ವಭೌಮ ವೇತನ ಎಂಬ ಹೆಸರಿನಲ್ಲಿ ಗೋಕರ್ಣದ ೫ ಗ್ರಾಮದ ಹಿಂದೂ ಮುಸ್ಲಿಂ,ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲಾ ಧರ್ಮದ ೨೪೫ ವಿದ್ಯಾರ್ಥಿಗಳಿಗೆ ೧೫,೦೦,೦೦೦ ರೂಪಾಯಿಗಳನ್ನು ಹಂಚಿದೆ. ೨೦೧೫-೨೦೧೬ ರಲ್ಲಿ ೧೯,೫೦,೦೦೦ ರೂಪಾಯಿಗಳನ್ನು ೬೯೧ ವಿದ್ಯಾರ್ಥಿಗಳಿಗಿ ನೀಡಿದೆ.ಇಂದು ಕೇವಲ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗಾಗಿಯೇ ರೂಪಾಯಿ ೨,೮೮,೦೦೦ ರೂಪಾಯಿಗಳನ್ನು   ವಿತರಿಸಲಾಗಿದೆ.ಒಂದೇಸಂಸ್ಥೆ ಇಷ್ಟು ದೊಡ್ಡ  ಮೊತ್ತವನ್ನು ಪ್ರತಿವರ್ಷವೂ ಸಮಾಜಸೇವೆಗಾಗಿ ಮೀಸಲಿಡುತ್ತಿರುವುದು ಶ್ಲಾಘನೀಯವಾದ ವಿಷಯ “ ಎಂದರು. ಶ್ರೀಮಠದ ಪದಾಧಿಕಾರಿಗಳು, ಮುಕ್ರಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

12141050_791465187651241_3484504290343958241_o12888569_791465267651233_8890692933647433560_o10293778_791464964317930_4199843480565753720_o12778909_791465004317926_5949529643167712246_o 12525649_791465100984583_5434601764239065491_o

Facebook Comments Box