ಶ್ರೀ ಸ್ವಯಂಭೂ ದೇವಾಲಯ ಕಡತೋಕಾ

ಹೊನ್ನಾವರ ತಾಲೂಕು. ಉತ್ತರಕನ್ನಡ ಜಿಲ್ಲೆ

ನಮೋಸ್ತು ಸ್ಥಾಣುಭೂತಾಯ ಜ್ಯೋತಿರ್ಲಿಂಗಾವೃತಾತ್ಮನೇ

ಚತುರ್ಮೂರ್‍ತಿ ವಪುಚ್ಛಾಯ ಭಾಸಿತಾಂಗಾಯ ಶಂಭವೇ

ಕಲಿಯುಗದಲ್ಲಿ ಲೋಕಕಲ್ಯಾಣಕ್ಕಾಗಿ ಭೂಮಿಗಳಿದು ಬಂದು ದೇವಾನುದೇವತೆಗಳು ನೆಲೆಸಿರುವ ಸ್ಥಳಗಳಿಗೆ ತಮ್ಮದೇ ಆದ ಸ್ಥಳಪುರಾಣವಿರುತ್ತದೆ. ಆದಿ ಕಾಲದಲ್ಲಿ ಶಿವನ ಪರಮಭಕ್ತನಾದ ಖರಾಸುರನು ತನ್ನ ತ್ರಿಕಾಲ ಪೂಜೆಗಾಗಿ ಸಮಯಕ್ಕೆ ಅನುಗುಣವಾಗಿ ಶಿವಲಿಂಗವನ್ನು ಸ್ಥಾಪಿಸಿ, ಪೂಜೆಗೈದು ಮುಂದೆ ಸಾಗುತ್ತಿದ್ದನು. ಅಂತೆಯೇ ಮಧ್ಯಾಹ್ನದ ಸಮಯದಲ್ಲಿ ತನ್ನ ಶಿವಪೂಜೆಗಾಗಿ ಶಂಭುಲಿಂಗನನ್ನು ಸ್ಥಾಪಿಸಿ ಪೂಜೆಗೈದ. ಅದೇ ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ನೆಲೆನಿಂತ ಶ್ರೀಸ್ವಯಂಭೂ ದೇವ. ಸಮೀಪದಲ್ಲಿ ನವಿಲಗೋಣದಲ್ಲಿರುವ ನಂದಕೇಶ್ವರ ಬೆಳಗಿನ ಪೂಜೆಗಾಗಿಯೂ, ಖರಾಸುರನಿಂದ ಸ್ಥಾಪನೆಗೊಂಡವುಗಳಾಗಿವೆ.

ದೇವಾಲಯ ಪುರಾತನವಾಗಿದ್ದು ಕೆಂಪುಕಲ್ಲು, ಮಣ್ಣಿನಗೋಡೆ, ಹಂಚು, ತಾಮ್ರದ ಹೊದಿಕೆಗಳಿಂದ ಕೂಡಿದೆ. ದಕ್ಷಿಣ ಭಾರತದ ಚೋಳಮಾದರಿಯ ವೇಸರ ಶೈಲಿಯಲ್ಲಿದೆ. ಗುಡ್ಡದ ಉತ್ತಂಗದಲ್ಲಿ ವನಸಿರಿಯ ನಡುವೆ ಕಂಗೊಳಿಸುತ್ತಿದೆ. ನೂರಾರು ಮೆಟ್ಟಲುಗಳ ಕೆಳಗಡೆ ಪವಿತ್ರ ಜಲಾಶಯವಿದೆ. ಶಿವಲಿಂಗವು ಪ್ರಧಾನ ದೇವತೆಯಾದರೆ, ಮಹಾಗಣಪತಿ, ಮಹಾವಿಷ್ಣು ಹಾಗೂ ಕ್ಷೇತ್ರಪಾಲ(ಜಟಗ) ಪರಿವಾರ ದೇವತೆಗಳು. ಕ್ಷೇತ್ರಪಾಲ (ಜಟಗ)ಶಕ್ತಿದೇವತೆ. ಹಸಿರು ಪೈರಿನ ರಕ್ಷಣೆಗೆ ರೋಗರುಜಿನಗಳ ಪರಿಹಾರಕ್ಕಾಗಿ ಪೂಜೆಗೊಳ್ಳುವ ಶ್ರೀ ಸ್ವಯಂಭೂದೇವ ಅಪಾರಮಹಿಮ ಹಾಗೂ ಭಕ್ತಾಭೀಷ್ಟ ಫಲಪ್ರದ.

ಆಗಮೊಕ್ತವಾದ ಸ್ಥಳವಾದ ಇಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಕಾರ್ತಿಕ ಶುದ್ಧ ಪಾಢ್ಯದಿಂದ ಮಕರಸಂಕ್ರಮಣದ ವರೆಗೆ ನಿತ್ಯಬಲಿ ನಡೆಯುತ್ತದೆ. ಧನುರ್ಮಾಸದಲ್ಲಿ ಎರಡು ಸಲ ಬಲಿ. ಕೆಕ್ಕಾರ-ಕಡತೋಕಾ ಗ್ರಾಮದವರಿಗೆ ಗ್ರಾಮದೇವತೆ. ಹೆಗಡೆ ಕುಟುಂಬದವರಿಗೆ ಕುಲದೈವ. ಕರುಣಾಮಯಿಯಾದ ಈ ದೇವರಿಗೆ ಹೊನ್ನಾವರ, ಕುಮಟಾ, ಸಿರ್ಸಿ, ಸಿದ್ಧಾಪುರಗಳಲ್ಲದೆ ಬೆಂಗಳೂರು ಹಾಗೂ ಇತರ ಹಲವಾರು ಸ್ಥಳಗಳಲ್ಲಿ ಕುಳಾವಿಗಳಿದ್ದಾರೆ. ವಿದೇಶಗಳಲ್ಲೂ ಹಲವರು ನೆಲೆಸಿರುತ್ತಾರೆ. ದೂರ ದೂರ ಊರುಗಳಿಂದ ಕುಳಾವಿಗಳು ಬಂದು ತಮ್ಮ ಇಷ್ಟದಂತೆ, ಬಂದ ಸಂಕಟದ ಪರಿಹಾರಕ್ಕಾಗಿ ಪೂಜೆ, ಶತರುದ್ರ, ಶನಿಕತೆ, ಹವನ ಇವೇ ಮುಂತಾದ ವಿನಿಯೋಗವನ್ನು ಕೈಗೊಂಡು ತಮ್ಮ ಹರಕೆ ಪೂರೈಸಿ ಕೃತಾರ್ಥರಾಗುತ್ತಾರೆ. ದೇವರ ಅನುಗ್ರಹದಿಂದ ಅನೇಕ ಕುಳಾವಿಗಳು ಉನ್ನತ ಸ್ಥಾನ ಅಲಂಕರಿಸುತ್ತಿರುವದು ದೇವರ ಮಹಿಮೆಗೆ ಸಾಕ್ಷಿ. ಇತರ ಧರ್‍ಮೀಯರು ಸಹ ಆಗಾಗ ದೇವರಲ್ಲಿ ಮೊರಹೊಕ್ಕು ತಮ್ಮ ಕಷ್ಟವನ್ನು ಪರಿಹರಿಸಿಕೊಳ್ಳುತ್ತಿರುವದು ಇಂದಿಗೂ ನಡೆದಿದೆ.

ಇದು ದೇವಾಲಯವಾಗಿದ್ದರೂ ನಂದಿ ಇಲ್ಲದಿರುವುದು ಇಲ್ಲಿನ ವಿಶೇಷ, ನಂದಿಗೆ ಬದಲಾಗಿ ನಂದಿಮಂಟಪವಿದ್ದು ಅದರ ಮಧ್ಯದಲ್ಲಿ ಒಂದು ಶಿಲೆಕಲ್ಲು ನಂದಿಯ ಸ್ಮಾರಕವಾಗಿದೆ. ಹಿಂದೆ ಒಂದು ಕಾಲದಲ್ಲಿ ಇಲ್ಲಿಯೂ ನಂದಿ ಇತ್ತೆಂದೂ ಅದು ರಾತ್ರೆ ಹೊತ್ತು ಜೀವತಳೆದು ಬೆಳೆಯನ್ನು ತಿಂದು ಹಾಳು ಮಾಡುತ್ತಿತ್ತಂತೆ. ಅದಕ್ಕಾಗಿ ಭಕ್ತರೆಲ್ಲ ಸೆರಿ ಶ್ರೀಶನಲ್ಲಿ ಪ್ರಾರ್ಥಸಿ ನಂದಿಯನ್ನು ಹುಗಿದು ಕುರುಹಿಗಾಗಿ ನಂದಿಮಂಟಪ ರಚಿಸಿದ್ದಾರೆಂದು ದಂತಕತೆ ಹೇಳುತ್ತದೆ.

ಅನೇಕ ವರ್ಷಗಳ ಹಿಂದೆ ನಿರ್ಮಿಸಿದ ಚಂದ್ರಶಾಲೆಗಳು ಜೀರ್ಣವಾದ ಕಾರಣ ೨೦೦೦ನೇ ಇಸ್ವಿಯ ನಂತರ ಭಕ್ತರೆಲ್ಲ ಸೇರಿ ನಿರ್ಣಯಿಸಿದಂತೆ ಈಗ ಕಾಣುವ ಚಂದ್ರಶಾಲೆಯ ನಿರ್ಮಾಣ ಆಗಿದೆ. ನೀರಿನ ವ್ಯವಸ್ಥೆಗಾಗಿ ೪೦೦೦ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಿದೆ. ನೂರಾರು ಅಡಿ ಕೆಳಗಿನಿಂದ ನೀರು ವಿದ್ಯುತ್ ಪಂಪುಗಳ ಮೂಲಕ ಸರಬರಾಜು ಆಗುತ್ತಿದೆ. ಶಿಲಾಮಯವಾದ ಗರ್ಭಗುಡಿಯ ನಿರ್ಮಾಣ, ಅರ್ಚಕರ ವಸತಿಗೃಹ, ಅತಿಥಿಗಳಿಗಾಗಿ ವಸತಿಗೃಹ ಮುಂತಾದ ಮೂಲಭೂತ ಸೌಕರ್ಯಗಳ ಕಾರ್ಯ ನಡೆಯಬೇಕಾಗಿದೆ. ಶೌಚಾಲಯ-ಸ್ನಾನಗೃಹಗಳ ವ್ಯವಸ್ಥೆ ಮಾಡಲಾಗಿದೆ.

ಕಡತೋಕಾ-ಕೆಕ್ಕಾರ ಗ್ರಾಮಗಳಲ್ಲಿ ವಾಸಿಸುತ್ತಿರುವ ಹೆಗಡೆ ಮನೆ, ಕಚರನ್ ಹೆಗಡೆಮನೆ, ಮಕ್ಕಿಹೆಗಡೆಮನೆ, ಸಂತಹೆಗಡೆಮನೆ ಮತ್ತು ಲಿಂಗಪ್ಪ ಹೆಗಡೆಮನೆಯವರಿಗೆ ಕುಲದೈವ. ಈ ಕುಟುಂಬಗಳಿಂದ ಜೀವನೋಪಾಯಕ್ಕಾಗಿ ಉತ್ತರಕನ್ನಡ ಜಿಲ್ಲೆಯ ತುಂಬ ಬೇರೆ ಬೇರೆ ಕಡೆಯಲ್ಲಿ ಅರ್ಚಕರಾಗಿಯೋ ಹಲವರು ತೆರಳಿ ನೆಲೆ ನಿಂತಿದ್ದಾರೆ. ಹೀಗೆ ನಿಂತವರು ಇಂದಿಗೂ ತಮ್ಮ ಕುಲದೈವವನ್ನು ಪೂಜಿಸುತ್ತಿದ್ದಾರೆ. ಹೊನ್ನಾವರದ ಭಾಸ್ಕೇರಿ, ಕುಮಟಾದ ಹಳ್ಳಾರ, ಬರಗದ್ದೆ, ಸಿರ್ಸಿ-ಸಿದ್ಧಾಪುರಗಳಲ್ಲಿ, ತಡುಗುಣಿ, ಕೌಲಕುಳಿ, ಕಳವೆ, ಅಮ್ಮಚ್ಚಿ, ಹೆಗ್ಗರ್ಣಿಯ ಸುತ್ತುಮುತ್ತ ಹೊಸ್ತೋಟ, ವಾಜಗಾರ, ಹುಲ್ಲುಂಡೆ, ತಲಗಾರ, ವಡಗೆರೆ ಮುಂತಾದ ಅನೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ.

ಆಡಳಿತ:-

ಶ್ರೀದೇವಾಲಯವು ೯-೧-೧೯೫೩ ರಂದು ಕರ್ನಾಟಕ ಸರಕಾರದ ದತ್ತಿ ಇಲಾಖೆಯಲ್ಲಿ ನೋಂದಣಿ ಆಗಿರುತ್ತದೆ. ನೋಂದಣಿ ಸಂಖ್ಯೆ A. 89(KWR)

ಈ ದೇವಾಲಯದ ಆಡಳಿತವು ಊರಿನ ಪ್ರಮುಖ ಮೂರು ಜನ ಮೊಕ್ತೇಸರ ಮಂಡಳಿಯ ಮೂಲಕ ನಡೆಯುತ್ತಿತ್ತು. ಹೆಗಡೆ ಕುಟುಂಬದವರು ಖಾಯಂ ಓರ್ವ ಮೊಕ್ತೇಸರರಾಗಿರುತ್ತಿದ್ದರು. ವಿಶೇಷವಾಗಿ ಅವರೇ ಆಡಳಿತದ ವೈವಾಟಿ ಮೊಕ್ತೇಸರ. ಈ ಮಂಡಳಿ ಪರಸ್ಪರ ತಿಳುವಳಿಕೆ ಹಾಗೂ ಸಹಾಯ-ಸಹಕಾರದೊಂದಿಗೆ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿತ್ತು.

ಸನ್.೨೦೦೦ರ ಹೊತ್ತಿಗೆ ಆಡಳಿತ ನಡೆಸಲು ಯಾವ ಮೊಕ್ತೇಸರನೂ ಇಲ್ಲದ ಪರಿಸ್ಥಿತಿ ಉಂಟಾಯಿತು. ಮೊಕ್ತೇಸರರೆಲ್ಲ ಕಾರವರ ಜಿಲ್ಲಾ ನ್ಯಾಯಾಲಯದಿಂದ ನೇಮಕಾತಿ ಆಗಬೇಕಾಗುತ್ತದೆ. ಮೊಕ್ತೇಸರರಲ್ಲಿ ಒಬ್ಬರಾದ ಶ್ರೀಪರಮೇಶ್ವರ ವಿಷ್ಣು ಭಟ್ಟ ಕೊಂಕೇರಿ ಇವರ ನಿಧನದ ನಂತರ ಬದಲಿ ನೇಮಕಾತಿ ಇಲ್ಲದೆ ಆ ಜಾಗ ಖಾಲಿಯಾಗಿಯೇ ಇತ್ತು. ಮತ್ತೋರ್ವ ಮೊಕ್ತೇಸರರಾದ ಶ್ರೀವೆಂಕಟ್ರಮಣ ಗೋಪಾಲಭಟ್ಟ ಕಡೇಮನೆ ಇವರು ತಮ್ಮ ವಯಸ್ಸು ಹಾಗೂ ಪರ ಊರಲ್ಲಿ ವಾಸದ ನಿಮಿತ್ತ ತಮ್ಮ ಹುದ್ದೆಗೆ ರಾಜೀ ನಾಮೆ ಇತ್ತಿದ್ದರು. ಮೂರನೇ ಹಾಗೂ ಹೆಗಡೆ ಕುಟುಂಬದ ಮೊಕ್ತೇಸರರಾದ ಡಾ| ಜಿ.ಜಿ. ಹೆಗಡೆಯವರ ಸುಪರ್ದಿಯಲ್ಲೇ ಕೆಲವರ್ಷ ದೇವಾಲಯದ ಆಡಳಿತ ನಡೆಯುತ್ತಲಿತ್ತು. ದಿ. ೧೩-೦೨-೨೦೦೦ರಂದು ಡಾ| ಜಿ.ಜಿ. ಹೆಗಡೆಯವರು ದೈವಾಧೀನರಾದರು.

ಹೀಗಾಗಿ ದೇವಾಲಯದ ಆಡಳಿತ ಮೊಕ್ತೇಸರರಿಲ್ಲದೆ ಅನಾಥವಾಯಿತು. ಹೊಸ ಮೊಕ್ತೇಸರ ಮಂಡಳಿಯ ನೇಮಕಾತಿಯ ಅನಿವಾರ್ಯತೆ ಹಾಗೂ ಜವಾಬ್ದಾರಿ ಭಕ್ತರ ಮೇಲೆ ಬಿತ್ತು. ಅದಕ್ಕಾಗಿ ಭಕ್ತವೃಂದ ವಿಕ್ರಮ ಸಂ|ದ ವೈಶಾಖ ಬಹುಳ ದಶಮಿ ದಿ. ೨೮-೦೫-೨೦೦೦ರಂದು ಶ್ರೀರಘೂತ್ತಮ ಮಠ ಕೆಕ್ಕಾರದಲ್ಲಿ ಶ್ರೀ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ರಾಮಚಂದ್ರಾಪುರ ಮಠ ಹೊಸನಗರ ಇವರ ದಿವ್ಯ ಉಪಸ್ಥಿತಿಯಲ್ಲಿ ಸಭೆ ನಡೆಸಿತು. ಚರ್ಚೆ-ವಿಚರ್ಚೆಯ ನಂತರ ದೇವಾಲಯದ ಆಡಳಿತವನ್ನು ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಒಪ್ಪಿಸ ಬೇಕೆಂತ ಸರ್ವಮತದ ನಿರ್ಣಯ ಹೊರಹೊಮ್ಮಿತು. ಆ ಪ್ರಕ್ರಿಯೆಗೆ ಶ್ರೀ ಕೆ.ಎಸ್. ಮೋಹನ ಹೆಗಡೆಯವರಿಗೆ ಅಧಿಕಾರ ನೀಡಿತು.

ಅಂತೆಯೆ ಶ್ರೀ ಕೆ.ಎಸ್. ಮೋಹನ ಹೆಗಡೆಯವರು ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಶ್ರೀಸಂಸ್ಥಾನವನ್ನು ಏಕಮೇವ ಮೊಕ್ತೇಸರರನ್ನಾಗಿ ನೇಮಿಸುವವಂತೆ ಅರ್ಜಿಸಲ್ಲಿಸಿದರು. ವಾದ ವಿವಾದ ಆಲಿಸಿದ ನ್ಯಾಯಾಲಯ ಶ್ರೀ ವೆಂಕಟ್ರಮಣ ಭಟ್ಟರ ರಾಜೀನಾಮೆ ಅಂಗೀಕರಿಸಿ ಶ್ರೀಸಂಸ್ಥಾನವನ್ನು ದೇವಾಲಯದ ಟ್ರಸ್ಟೀ ಅಂತ ದಿ. ೨೮-೦೯-೨೦೦೦ ರಂದು ಆಜ್ಞೆ ಹೊರಡಿಸಿತು. ಅಂದಿನಿಂದ ಶ್ರೀಸಂಸ್ಥಾನ ಶ್ರೀ ಸ್ವಯಂಭೂ ದೇವಾಲಯದ ಟ್ರಸ್ಟೀಗಳಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಆಡಳಿತ ವಹಿಸಿಕೊಂಡ ನಂತರ ಶ್ರೀಸ್ವಾಮಿಗಳು ತಾನು ಇಲ್ಲಿಗೆ ಬಂದು ಆಡಳಿತ ನಡೆಸುವುದಿಲ್ಲ. ನಿಮ್ಮಲ್ಲಿ ಎಲ್ಲರಿಗೂ ಒಪ್ಪಿಗೆಯಾದ ಓರ್ವನನ್ನು ಆಯ್ಕೆ ಮಾಡಿ. ಆತನಿಗೆ ತಾನು ಜವಾಬ್ದಾರಿ ನೀಡುತ್ತೇನೆ ಅಂತ ಅಪ್ಪಣೆ ಕೊಡಿಸಿದರು. ಶ್ರೀಯವರ ಅಪ್ಪಣೆಯನ್ನು ಆಲಿಸಿದ ಭಕ್ತಸಮೂಹ ಹೆಗಡೆಮನೆಯ ಶ್ರೀ ನಾರಾಯಣ ಪರಮೇಶ್ವರ ಹೆಗಡೆ, ನಿವೃತ್ತ ಪ್ರಿನ್ಸಿಪಾಲರು, ಟಿ.ಸಿ.ಎಚ್. ಕಾಲೇಜ್, ಅಂಕೋಲಾ ಇವರನ್ನು ಸೂಚಿಸಿತು. ಅದನ್ನು ಅನುಮೋದಿಸಿ ಶ್ರೀಯವರು ಅಧಿಕಾರ ಪತ್ರವನ್ನು ನೀಡಿ ತನ್ನ ಪರವಾಗಿ ದೇವಾಲಯದ ಆಡಳಿತವನ್ನು ಇತರರ ಸಹಕಾರದೊಂದಿಗೆ ನಡೆಸಲು ಆಶೀರ್ವಾದ ಪೂರ್ವಕ ಅಪ್ಪಣೆಕೊಡಿಸಿದರು. ದಿ.೧೪.೦೨.೨೦೦೧ರಿಂದ ಶ್ರೀ ಎನ್.ಪಿ. ಹೆಗಡೆಯವರು ದೇವಾಲಯದ ಮೆನೇಜರಾಗಿ ಕೆಲಸ ಮಾಡುತ್ತ ಬಂದಿರುತ್ತಾರೆ.

Facebook Comments