ಸೃಷ್ಠಿಸುವ ಶಕ್ತಿ ಇಲ್ಲದವರಿಗೆ ನಾಶಮಾಡುವ ಹಕ್ಕಿಲ್ಲ
ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು : ಸೃಷ್ಠಿಸುವ ಶಕ್ತಿ ಇಲ್ಲದವರಿಗೆ ನಾಶಮಾಡುವ ಹಕ್ಕಿಲ್ಲ, ಸೃಷ್ಟಿಯ ಅದ್ಭುತವಾದ ಗೋವಿನ ಹಾಲು, ಗೋಮೂತ್ರ ಹಾಗೂ ಗೋಮಯಾದಿಗಳನ್ನು ಬಳಸಬೇಕು ಹೊರತು ಮಾಂಸಕ್ಕಾಗಿ ಗೋಹತ್ಯೆ ಮಾಡಿ, ಗೋಕುಲವನ್ನೇ ವಿನಾಶಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಗೋವಿಗೂ ಶಿವನಿಗೂ ವ್ಯತ್ಯಾಸವಿಲ್ಲ, ಶಿವನು ವಿಷವನ್ನು ತನ್ನೊಳಗೇ ಇಟ್ಟುಕೊಂಡು ಜಗತ್ತಿಗೆ ಶುಭವನ್ನು ಅನುಗ್ರಹಿಸುವನು, ಹಾಗೇಯೇ ಗೋವೂ ಕೂಡ ಸೇವಿಸುವ ಆಹಾರದಲ್ಲಿ ವಿಷದ ಅಂಶ ಇದ್ದರೆ ತನ್ನೊಳಗೇ ಇಟ್ಟುಕೊಂಡು, ಅಮೃತ ಸದೃಶವಾದ ಹಾಲನ್ನು ನೀಡುತ್ತದೆ. ಲಕ್ನೋ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಯು ಇದನ್ನು ದೃಡಪಡಿಸಿದೆ ಎಂದು ಹೇಳಿದರು.
ಪಂಚಗವ್ಯ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಇತ್ಯಾದಿ ರೋಗಗಳಿಂದ ಬಳಲುತ್ತಿದ್ದ 10,000 ಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಡಾ. ಡಿ.ಪಿ ರಮೇಶ್ ಹಾಗೂ 10,000ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿದ ಶೈಲೇಶ್ ಹೊಳ್ಳ ಅವರಿಗೆ ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದ ಶ್ರೀಗಳು, ವಿಷವನ್ನು ಉಂಡರೂ ಅಮೃತವನ್ನೇ ನೀಡುವ ಮಾತೃವಾತ್ಸಲ್ಯದ ಗೋವನ್ನು ಸಂತರು, ವೈದ್ಯರು , ಲೇಖಕರು , ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕು ಎಂದು ಆಗ್ರಹಿಸಿದರು.
ಕೊಡಗಿನ ಮುದ್ದಿನಕಟ್ಟೆ ಮಠದ ಶ್ರೀ ಷ.ಬ್ರ ಅಭಿನವ ಸಿದ್ದಲಿಂಗ ಶಿವಾಚಾರ್ಯಸ್ವಾಮಿಗಳವರು ಸಂತಸಂದೇಶ ನೀಡಿ,ಇಂದು ಗೋವನ್ನು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ . ಚಿನ್ನವನ್ನು ಒಡಲೊಳಗೆ ತುಂಬಿಕೊಂಡಿರುವ ಗೋವನ್ನು ಕೊಲ್ಲುವುದು, ಚಿನ್ನಕ್ಕಾಗಿ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಲ್ಲುವ ಕಥೆಯಂತಾಗುತ್ತದೆ. ಶ್ರೀರಾಮಚಂದ್ರಾಪುರಮಠದ ಗೋ ಆಂದೋಲನ ಅನುಕರಣೀಯ ಎಂದರು.
ಡಾ. ಡಿ.ಪಿ ರಮೇಶ್ ಹಾಗೂ ಶೈಲೇಶ್ ಹೊಳ್ಳ ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಸನಾತನ ಭಾರತ ಎಂಬ ಪುಸ್ತಕವನ್ನು ರಾಘವೇಶ್ವರಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಮುದ್ದಿನಕಟ್ಟೆ ಮಠದ ಶ್ರೀಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಕು. ಅಖಿಲಾ ಭಟ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಭಟ್ಕಳ, ಭವತಾರಿಣಿ ಹಾಗೂ ಮರವಂತೆ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಅರವಿಂದ ಬಂಗಲಗಲ್ಲು ಹಾಗೂ ರಾಘವೇಂದ್ರ ಕಡ್ನಮನೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಕೋಟ್ಸ್

ಗೋವಿಗೂ ಶಿವನಿಗೂ ವ್ಯತ್ಯಾಸವಿಲ್ಲ, ಶಿವನು ವಿಷವನ್ನು ತನ್ನೊಳಗೇ ಇಟ್ಟುಕೊಂಡು ಜಗತ್ತಿಗೆ ಶುಭವನ್ನು ಅನುಗ್ರಹಿಸುವನು, ಹಾಗೇಯೇ ಗೋವೂ ಕೂಡ ಸೇವಿಸುವ ಆಹಾರದಲ್ಲಿ ವಿಷದ ಅಂಶ ಇದ್ದರೆ ತನ್ನೊಳಗೇ ಇಟ್ಟುಕೊಂಡು, ಅಮೃತ ಸದೃಶವಾದ ಹಾಲನ್ನು ನೀಡುತ್ತದೆ. ಲಕ್ನೋ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಯು ಇದನ್ನು ದೃಡಪಡಿಸಿದೆ. – ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರಮಠ

ಚಿನ್ನವನ್ನು ಒಡಲೊಳಗೆ ತುಂಬಿಕೊಂಡಿರುವ ಗೋವನ್ನು ಕೊಲ್ಲುವುದು, ಚಿನ್ನಕ್ಕಾಗಿ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಲ್ಲುವ ಕಥೆಯಂತಾಗುತ್ತದೆ.
– ಕೊಡಗಿನ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು

• ಡಾ. ಡಿ.ಪಿ ರಮೇಶ್ ಹಾಗೂ ಶೈಲೇಶ್ ಹೊಳ್ಳ ಇವರಿಗೆ ಗೋ ಸೇವಾ ಪುರಸ್ಕಾರ ಪ್ರದಾನ
• ಶ್ರೀಭಾರತೀಪ್ರಕಾಶನದ ‘ಸನಾತನ ಭಾರತ’ ಪುಸ್ತಕ ಲೋಕಾರ್ಪಣೆ
• ಕೊಡಗಿನ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳ ಉಪಸ್ಥಿತಿ
ಬಾಕ್ಸ್
ಕಲಾರಾಮ – ಹಿಂದೂಸ್ಥಾನಿ ಸಂಗೀತ
ಖ್ಯಾತ ಹಿಂದೂಸ್ಥಾನಿ ಗಾಯಕರಾದ ಅಶೋಕ ಹುಗ್ಗಣ್ಣನವರ್ ಹಾಗೂ ಸಂಗಡಿಗರಿಂದ ದಿನಾಂಕ 19.08.2016 ರಂದು ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಶೋಕ ಹುಗ್ಗಣ್ಣನವರ್ ಅವರು ಹೊನ್ನಾವರದ ಎಸ್ ಡಿ ಎಂ ವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿದ್ದಾರೆ. ಗಂಗೂಬಾಯಿ ಹಾನಗಲ್ ಅವರ ಕುರಿತಾಗಿ ಸಂಶೋಧನೆಯನ್ನು ಮಾಡಿ ಡಾಕ್ಟರೇಟ್ ಪಡೆದಿರುವ ಇವರು, ಲಿಂಗರಾಜ್ ಬುವಾ ಹಾಗೂ ಕಿರಾಣಾ ಘರಾನ ಅವರ ಶಿಷ್ಯರಾಗಿದ್ದಾರೆ. ಕಲಾರಾಮದ ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರವಣ ಪೋತದಾರ್ ಹಾಗೂ ಜಗದೀಶ ಕುರ್ತುಕೋಟ ಸಾಥ್ ನೀಡಲಿದ್ದಾರೆ.

ಇಂದಿನ ಕಾರ್ಯಕ್ರಮ (18.08.2016):
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00: ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಬೆಳಗ್ಗೆ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.30 :
ಗೋಸಂದೇಶ : ಗೋ ಆಧಾರಿತ ಕೃಷಿ – ರಮೇಶ್ರಾಜು ಮಂಡ್ಯ
ಲೋಕಾರ್ಪಣೆ : ವಿಚಾರ ವಿಹಾರ ಭಾಗ 2 – ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ :
ಭಾಜನರು – ರಮೇಶ್ರಾಜು ಮಂಡ್ಯ
ಸಂತ ಸಂದೇಶ : ಶ್ರೀ ಮ| ನಿ| ಪ್ರ| ಮಲ್ಲಿಕಾರ್ಜುನ ಮಹಾಸ್ವಾಮಿಗಳು,
ಸರ್ಪಭೂಷಣ ಮಠ, ಬೆಂಗಳೂರು
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಗಾಯನ – ಕ್ಷಮಾ ಕಿರಣ್
ಪಿಟೀಲು – ರಾಘವೇಂದ್ರ
ಮೃದಂಗ : ರಾಕೇಶ್
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments