ಬ್ರಹ್ಮೈಕ್ಯಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಸ್ಮರಣಾರ್ಥ ದಿವ್ಯ ಜೀವನ ಲೇಖನಾಮೃತ

ವಿದ್ವಾನ್ ಜಗದೀಶ ಶರ್ಮಾ

raghavendrabharatigalu

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಹಾಸಂಸ್ಥಾನದ 35ನೆಯ ಪೀಠಾಧಿಪತಿಗಳು.
ಪರಮಪೂಜ್ಯ ಶ್ರೀಶ್ರೀಗಳವರ ಪೂರ್ವಾಶ್ರಮದ ತಂದೆ ಶ್ರೀಗಣೇಶ ಭಟ್ಟರು. ತಾಯಿ ಶ್ರೀಮತಿ ಮೂಕಾಂಬಿಕಾ ಅಮ್ಮನವರು. ಪೂರ್ವಾಶ್ರಮದ ಊರು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಮಾಗಲು ಎಂಬ ಮಲೆನಾಡಮಡಿಲ ಪುಟ್ಟ ಗ್ರಾಮ. ಅವರದ್ದು ಸಂಪ್ರದಾಯಸ್ಥ ಮನೆತನ. ಗಣೇಶ ಭಟ್ಟರು ದೊಡ್ಡವಿದ್ವಾಂಸರು, ಪುರೋಹಿತರಾಗಿದ್ದವರು. ಆ ಪ್ರದೇಶದಲ್ಲಿ ಯಾವುದೇ ಧರ್ಮಜಿಜ್ಞಾಸೆ ಬಂದರೂ ನಿರ್ಣಯ ಕೊಡುವ ಆಚಾರ್ಯರಾಗಿದ್ದರು. ವೈದ್ಯದಲ್ಲಿಯೂ ಪರಿಣತರು. ತಾಯಿ ಸದ್ಗೃಹಿಣಿ. ದೈವಭಕ್ತೆ. ಸದಾಚಾರ ಸಂಪನ್ನೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಅವರಿಗೆ ತುಂಬಾ ಪ್ರೀತಿಯ ಕೆಲಸವಾಗಿತ್ತು. ಇಂತಹ ಮನೆತನದಲ್ಲಿ ಜನಿಸಿದ ಪರಮಪೂಜ್ಯರಿಗೆ ಸಹಜವಾಗಿಯೇ ಸಂಸ್ಕಾರಶಿಕ್ಷಣ ದೊರೆಯಿತು.
ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಪರಮಪೂಜ್ಯರಿಗೆ ಎಳವೆಯಲ್ಲಿಯೇ ಧರ್ಮ, ಅಧ್ಯಾತ್ಮದೆಡೆಗೆ ಸೆಳೆತ. ಇದರಿಂದ ಅಧ್ಯಯನಕ್ಕೂ ಅದನ್ನೇ ಆರಿಸಿಕೊಂಡರು. ಲೌಕಿಕವಾಗಿ ಪ್ರಾಥಮಿಕ ಶಿಕ್ಷಣ ಪಡೆದು ಪೂಜ್ಯ ತಂದೆಯವರಲ್ಲಿ ಸಂಸ್ಕೃತ ಕಲಿಯಲಾರಂಭಿಸಿದರು. ಪುತ್ರನ ಆಸಕ್ತಿ, ಶ್ರದ್ಧೆಗಳನ್ನು ಗಮನಿಸಿದ ಗಣೇಶ ಭಟ್ಟರು ಸಕಾಲಕ್ಕೆ ಉಪನಯನ ಸಂಸ್ಕಾರ ನೀಡಿದರು. ಭಾರತೀಯ ಪರಂಪರೆಯಂತೆ ಉಪನಯನಾನಂತರ ವಟುವಿಗೆ ವೇದಾಧ್ಯಯನ ಆರಂಭವಾಯಿತು. ಮೊದಲು ತಂದೆಯವರಲ್ಲಿ ಆರಂಭಗೊಂಡು ಅನಂತರ ಕುಂಭಕೋಣಂ, ನಂಜನಗೂಡು ಮುಂತಾದ ಅಂದಿನ ಪ್ರಸಿದ್ಧ ವಿದ್ಯಾಕ್ಷೇತ್ರಗಳಲ್ಲಿ ಮುಂದುವರಿಯಿತು. ಸಂಸ್ಕೃತದ ಕೋಶ-ಕಾವ್ಯಗಳೊಂದಿಗೆ ಕೃಷ್ಣಯಜುರ್ವೇದವನ್ನು ವಿಶೇಷವಾಗಿ ಅಧ್ಯಯನ ಮಾಡಿದರು.
ಇದೇ ಸಮಯಕ್ಕೆ ಸರಿಯಾಗಿ ಶ್ರೀರಾಮಚಂದ್ರಾಪುರಮಹಾಸಂಸ್ಥಾನದ 34ನೆಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರು ತಮ್ಮ ಉತ್ತರಾಧಿಕಾರಿತ್ವಕ್ಕೆ ಯೋಗ್ಯ ವಟುವನ್ನು ಅರಸುತ್ತಿದ್ದರು.
ಪರಮಪೂಜ್ಯರ ದಿವ್ಯದೃಷ್ಟಿಗೆ ಈ ವಟು ಗೋಚರವಾದರು. ಅವರ ವೈರಾಗ್ಯಸಂಪನ್ನತೆ , ಸಂಸ್ಕಾರ, ಗುಣ, ಸಾಮರ್ಥ್ಯ, ಮೇಧಾಶಕ್ತಿ, ವ್ಯವಹಾರಚಾತುರ್ಯ, ಅಧ್ಯಯನ, ಗ್ರಹಗತಿ ಮುಂತಾದವನ್ನೆಲ್ಲ ಪರೀಕ್ಷಿಸಿ ಯೋಗ್ಯ ಉತ್ತರಾಧಿಕಾರಿಯೆಂದು ನಿಶ್ಚಯಿಸಿದರು.
ಪ್ರಧಾನ ಮಠವಾದ ಹೊಸನಗರ ಶ್ರೀರಾಮಚಂದ್ರಾಪುರಮಠದಲ್ಲಿ ದಿನಾಂಕ ೧೮-೫-೧೯೪೫ ರಂದು ವಟುವಿಗೆ ಗುರುವರ್ಯರು ಸಂನ್ಯಾಸದೀಕ್ಷೆಯನ್ನು ಅನುಗ್ರಹಿಸಿದರು.
ದಿನಾಂಕ ೨೧-೫-೧೯೪೫ರಂದು ಯೋಗಪಟ್ಟಾಭಿಷೇಕಮಾಡಿ ‘ರಾಘವೇಂದ್ರಭಾರತೀ’ ಎಂದು ಹೆಸರು ನೀಡಿದರು.

ನೂತನ ಶ್ರೀಗಳವರಿಗೆ ಸನಾತನ ವಿದ್ಯೆಯ ಸಮಗ್ರ ಅಧ್ಯಯನದ ಆಕಾಂಕ್ಷೆ. ತಮ್ಮ ಗುರುವರ್ಯರ ಮಾರ್ಗದರ್ಶನದಲ್ಲಿ ಕಾಶೀಕ್ಷೇತ್ರದಲ್ಲಿ ಶಾಸ್ತ್ರಾಧ್ಯಯನವನ್ನು ಆರಂಭಿಸಿದರು. ಅಲ್ಲಿಯ ಸುಪ್ರಸಿದ್ಧ ಶ್ರೀವಲ್ಲಭರಾಮ ಶಾಲಿಗ್ರಾಮ ಸಾಂಗವೇದ ಮಹಾವಿದ್ಯಾಲಯಕ್ಕೆ ಆ ಭಾಗ್ಯ ದೊರೆಯಿತು. ಅದರ ಕುಲಪತಿಗಳಾದ ಪಂಡಿತರಾಜ ಶ್ರೀರಾಜೇಶ್ವರ ಶಾಸ್ತ್ರೀ ದ್ರವಿಡ, ಪಂಡಿತ ಶ್ರೀಗಣಪತಿಶಾಸ್ತ್ರೀ ಹೆಬ್ಬಾರ್, ಪಂಡಿತ ಶ್ರೀಕೃಷ್ಣ ಶಾಸ್ತ್ರೀ, ಪಂಡಿತ ಶ್ರೀರಾಮಚಂದ್ರ ಶಾಸ್ತ್ರೀ, ಶ್ರೀಉಪೇಂದ್ರ ರಾಜಹಂಸ ಮೈಥಿಲ, ಪಂಡಿತ ಶ್ರೀಹರಿರಾಮ ಶಾಸ್ತ್ರೀ ಶುಕ್ಲ, ಪಂಡಿತ ಶ್ರಿಜಯರಾಮ ಶಾಸ್ತ್ರೀ ಶುಕ್ಲ ಇವರೆಲ್ಲರಲ್ಲಿ ಪರಮಪೂಜ್ಯರ ಅಧ್ಯಯನ ನೆರವೇರಿತು.
೧೯೪೯ರಲ್ಲಿ ಗುರುವರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರು ಬ್ರಹ್ಮೀಭೂತರಾದರು. ಶ್ರೀಮಠಕ್ಕೆ ಹಿಂದಿರುಗಿದ ಪರಮಪೂಜ್ಯರು ಮುಂದಿನ ಕಾರ್ಯಗಳನ್ನು ನಿರ್ವಹಿಸಿ ಮಹಾಸಂಸ್ಥಾನದ ಸರ್ವಾಧಿಕಾರವನ್ನು ಸ್ವೀಕರಿಸಿದರು. ಇನ್ನೂ ಅಧ್ಯಯನದ ಅಪೇಕ್ಷೆ ಇಂಗದ ಕಾರಣ ಮತ್ತೆ ಕಾಶಿಗೆ ತೆರಳಿದರು. ಅಲ್ಲಿ ತಪೋನಿರತರೂ ಆಗಿ, ತೀರ್ಥಕ್ಷೇತ್ರಗಳನ್ನೂ ಸಂದರ್ಶಿಸಿ ಅಧ್ಯಯನವನ್ನು ಸಮಾಪ್ತಿಗೊಳಿಸಿ ಕಾಶಿಯ ವಿದ್ವನ್ಮಂಡಲಿಯಿಂದ ವಿಶೇಷ ಗೌರವಕ್ಕೆ ಪಾತ್ರರಾದರು.
ಅಧ್ಯಯನವನ್ನು ಪೂರೈಸಿ ಹಿಂದಿರುಗಿದ ಪರಮಪೂಜ್ಯರು ಮೊದಲು ಶಿಥಿಲಗೊಂಡ ಶ್ರೀಮಠದ ವಿವಿಧ ಕಟ್ಟಡಗಳ ಪುನರ್ನಿಮಾಣಕ್ಕೆ ಅಣಿಯಾದರು. ಗೋಕರ್ಣಮಠ, ಕೆಕ್ಕಾರುಮಠ, ಹೊಸನಗರಮಠ, ತೀರ್ಥಹಳ್ಳಿಮಠ ಮುಂತಾದವುಗಳನ್ನು ಅಭಿವೃದ್ಧಿಪಡಿಸಿದರು.
ಸಿದ್ದಾಪುರ ತಾಲೂಕಿನ ಶ್ರೀಭಾನ್ಕುಳಿಮಠ ೧೯೫೪ರಲ್ಲಿ ಪರಮಪೂಜ್ಯರ ಸನ್ನಿಧಿಗೆ ಸೇರ್ಪಡೆಗೊಂಡಿತು, ಅದನ್ನೂ ಅಭಿವೃದ್ಧಿ ಪಡಿಸಿದರು. ಮಂಗಳೂರು ಭಾಗದಲ್ಲಿ ಶಿಷ್ಯರಿಗೆ ಮಠಸ್ಥಾನವೊಂದರ ಅವಶ್ಯಕತೆ ಪರಮಪೂಜ್ಯರ ಮನಸ್ಸಿಗೆ ಬಂದಿತು. ಮಾಣಿ ಸಮೀಪದ ಪೆರಾಜೆಯಲ್ಲಿ ಶಾಖಾಮಠವೊಂದನ್ನು ನಿರ್ಮಿಸಿ ೧೯೭೩ರಲ್ಲಿ ಲೋಕಾರ್ಪಣಗೊಳಿಸಿದರು. ಅಲ್ಲೊಂದು ವೇದ ಸಂಸ್ಕೃತ ವಿದ್ಯಾಲಯವನ್ನು ಆರಂಭಿಸಿದ್ದು ಪರಮಪೂಜ್ಯರ ವೇದವಿದ್ಯಾಪ್ರೀತಿಗೆ ಸಾಕ್ಷಿ. ಬೆಂಗಳೂರಿನಲ್ಲಿ ಮಠನಿರ್ಮಾಣ ಕೂಡ ಪರಮಪೂಜ್ಯರ ಹಿರಿಮೆಗಳಲ್ಲಿ ಒಂದು.
ಇದಲ್ಲದೆ ತಮ್ಮ ಸಾನ್ನಿಧ್ಯದಲ್ಲಿಯೇ ಸನಾತನ ವಿದ್ಯಾಲಯವೊಂದನ್ನು ಆರಂಭಿಸಿದರು. ಅನ್ಯ ಆಚಾರ್ಯರಲ್ಲದೆ ವಿಶೇಷವಾಗಿ ತಾವೇ ಪಾಠಪ್ರವಚನಗಳನ್ನು ನಡೆಸುತ್ತಿದ್ದರು. ೧೯೫೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಮುಗ್ವಾದಲ್ಲಿ ಸಾಮವೇದ ಪಾಠಶಾಲೆಯನ್ನು ಆರಂಭಿಸಿದರಲ್ಲದೆ ಅದನ್ನು ಸಂಸ್ಕೃತ ಮಹಾವಿದ್ಯಾಲಯವನ್ನಾಗಿಸಿದರು.
ಪರಮಪೂಜ್ಯರು ನೂರಾರು ದೇವಾಲಯಗಳ ಜೀರ್ಣೋದ್ಧಾರ, ಅಷ್ಟಬಂಧ ಮುಂತಾದ ಕಾರ್ಯಗಳನ್ನು ನೆರವೇರಿಸಿದ್ದಾರೆ; ಯಜ್ಞಗಳನ್ನು ನಡೆಸಿದ್ದಾರೆ ಮತ್ತು ಶಿಷ್ಯರನ್ನು ಅಂತಹ ಕಾರ್ಯಗಳಲ್ಲಿ ತೊಡಗಿಸಿದ್ದಾರೆ. ತಮ್ಮ ಅಸ್ಖಲಿತ ಪ್ರವಚನಧಾರೆಯಿಂದ ಮನ-ಮನಕ್ಕೆ ಸತ್ಯಸಂಸ್ಕೃತಿಯ ಸೇಚನ ಗೈದಿದ್ದಾರೆ.
ಪರಮಪೂಜ್ಯರು ಗ್ರಂಥರತ್ನಗಳನ್ನೂ ಸಹ ಜಗತ್ತಿಗೆ ನೀಡಿದ್ದಾರೆ. ಆತ್ಮವಿದ್ಯಾ ಆಖ್ಯಾಯಿಕಾ, ಸ್ತುತಿಮಂಜರೀ ಎನ್ನುವ ಗ್ರಂಥಗಳು ಸ್ವತಃ ಪರಮಪೂಜ್ಯರ ಅಂತರಂಗದಿಂದ ಹೊರಹೊಮ್ಮಿವೆ. ಇದಲ್ಲದೆ ಗುರುಮಹಿಮೆಯನ್ನು ಸಾರುವ ಅನ್ಯ ಗ್ರಂಥಗಳನ್ನು ಪ್ರೇರಣೆಯಿತ್ತು ಪ್ರಕಾಶಿಸಿದ್ದಾರೆ.
ಪರಮಪೂಜ್ಯರು ಆಶೀರ್ವದಿಸಿ ನುಡಿದ ಮಾತುಗಳು ನಿಜವಾಗಿದೆ’ ಎನ್ನುತ್ತಾರೆ ಅನುಭವಿಗಳು. ‘ಅವರು ಕಾಲಿಟ್ಟ ಪ್ರದೇಶಗಳೆಲ್ಲ ಅಭಿವೃದ್ಧಿ ಪಥದತ್ತ ಮುಖಮಾಡಿವೆ’ ಎಂದು ತೋರಿಸುತ್ತಾರೆ ಹಲವು ನಿದರ್ಶನಗಳನ್ನು.
ಇಂದು ವಿಶ್ವದ ಧಾರ್ಮಿಕನಾಯಕರೆನಿಸಿರುವ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರನ್ನು ತಮ್ಮ ದಿವ್ಯದೃಷ್ಟಿಯಿಂದ ಪರಮಪೂಜ್ಯರು ಆಯ್ಕೆ ಮಾಡಿದ್ದನ್ನು ಗಮನಿಸಿದಾಗ ಅವರ ದಿವ್ಯ ದೂರದೃಷ್ಟಿಯ ಅರಿವಾಗುತ್ತದೆ.
೧೯೯೮ರ ನವೆಂಬರ್ ೨೬ರಂದು ತಮ್ಮ ಇಹದ ವ್ಯಾಪಾರವನ್ನು ಪೂರೈಸಿ ಮುಂದೆ ಪಯಣಿಸಿದರು. ಪರಮಪೂಜ್ಯರ ಸಮಾಧಿಸ್ಥಾನ ಬೆಂಗಳೂರಿನ ಗಿರಿನಗರದಲ್ಲಿದೆ. ಪೂರ್ಣ ಶಿಲಾಮಯವಾದ ಶ್ರೀಗುರುಮೂರ್ತಿಮಂದಿರ ಇಂದು ಭಕ್ತರ ಶ್ರದ್ಧಾಕೇಂದ್ರವಾಗಿದೆ. ಬಯಸಿದ್ದನ್ನು ಕರುಣಿಸುವ ಕಾರಣಿಕ ಸ್ಥಳವಾಗಿಯೂ ಪ್ರಸಿದ್ಧವಾಗಿದೆ.
ಹೀಗೆ ಅಧಿಕಾರ ವಹಿಸಿಕೊಂಡ ೧೯೪೯ರಿಂದ ೧೯೯೮ರವರೆಗೆ ಸುದೀರ್ಘ ಕಾಲ ಶ್ರೀರಾಮಚಂದ್ರಾಪುರಮಠವನ್ನು ಮುನ್ನಡೆಸಿದರು; ಸಮಾಜವನ್ನು ಸಂಘಟಿಸಿದರು; ಧರ್ಮಪಥ ದರ್ಶಕರೆನಿಸಿದರು; ವೇದವಿದ್ಯೆಯನ್ನು ಉಳಿಸಿ ಬೆಳೆಸಿದರು. ಶಿಷ್ಯವತ್ಸಲರೆನಿಸಿದರು.

Facebook Comments