ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಜ್ಞಾನಸುಮ 10:

||ಶ್ರೀರಂಗ ಸದ್ಗುರವೇ ನಮಃ||

ಪ್ರಣವೋಪಾಸನೆ

ಶ್ರೀಮತ್ಪರಮಹಂಸೇತ್ಯಾದಿ ಶ್ರೀಶ್ರೀರಂಗಪ್ರಿಯ ಮಹಾದೇಶಿಕ ಶ್ರೀಪಾದಂಗಳವರಿಂದ, ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು

ಬ್ರಹ್ಮೀಭೂತ  ಯತಿಶ್ರೇಷ್ಠ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀಶ್ರೀರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಪವಿತ್ರಸ್ಮೃತಿಗಾಗಿ ಪ್ರಣವೋಪಾಸನೆಯನ್ನು ಕುರಿತ ಈ ಲೇಖನವು ಸಮರ್ಪಿತವಾಗುತ್ತಿದೆ. ಏಕಾಕ್ಷರ ಬ್ರಹ್ಮವೆಂದೂ, ಬ್ರಹ್ಮವ್ಯಾಪ್ತಿಯ ಆಲಂಬನೆಗಳಲ್ಲಿ ಪ್ರಶಸ್ಯತಮವೆಂದೂ ಪ್ರಸಿದ್ಧವಾಗಿರುವ ಓಂಕಾರದ ಮಹಿಮೆಯ ಅನುಸಂಧಾನಕ್ಕಿಂತಲೂ ಶ್ರೇಷ್ಠವಾದ ಬೇರಾವ ಕಾಣಿಕೆ ಪರಮಹಂಸರಿಗೆ ಅರ್ಹವಾದೀತು?

ಓಂ ಮಿತ್ಯೇಕಾಕ್ಷರಂ ಬ್ರಹ್ಮವ್ಯಾಹರಂ ಮಾಮನುಸ್ಮರಮನ್|

-ಶ್ರೀ ಗೀತಾ

ಏತದಾಲಂಬನಂ ಶ್ರೇಷ್ಠಮ್ ಏತದಾಲಂಬನಂ ಪರಮ್ |

-ಶ್ರೀ ಕಠೋಪನಿಷತ್

ಅತ ಏವ ಏತದಾವಲಂಬನಂ ಬ್ರಹ್ಮಪ್ರಾಪ್ತ್ಯವಲಂಬನಾನಾಂ ಶ್ರೇಷ್ಠಂ ಪ್ರಶಸ್ಯತಮಮ್ |

-ಶಾಂಕರಭಾಷ್ಯ ಕಠೋಪನಿಷತ್

ಉಪಾಸನೆ ಏಕೆ?

ಜ್ಞಾನವಿಲ್ಲದೆ ಮುಕ್ತಿ ಇಲ್ಲ (ಋತೇ ಜ್ಞಾನಾನ್ನ ಮುಕ್ತಿಃ). ಜ್ಞಾನದಿಂದಲೇ ಕೈವಲ್ಯಪ್ರಾಪ್ತಿ (ಜ್ಞಾನಾದೇವ ತು ಕೈವಲ್ಯಂ), ಜ್ಞಾನವಿಲ್ಲದವನು ನೂರಾರು ಜನ್ಮಗಳಲ್ಲಿಯೂ ಮುಕ್ತಿಯನ್ನು ಪಡೆಯಲಾರ (ಜ್ಞಾನವಿಹೀನಃ ಸರ್ವಮತೇನ ಮುಕ್ತಿಂ ನ ಭಜತಿ ಜನ್ಮಶತೇನ) ಎಂದು ಅಧ್ಯಾತ್ಮಶಾಸ್ತ್ರಗಳು ಸಾರುವಂತೆ ಬ್ರಹ್ಮಪ್ರಾಪ್ತಿಗೆ ಜ್ಞಾನವೇ ಸಾಕ್ಷಾತ್ತಾದ ಸಾಧನವಲ್ಲವೇ? ಹೀಗಿರುವಾಗ ಪ್ರಣವದ ಉಪಾಸನೆಯು ಮುಕ್ತಿಗೆ ಪರಮೋಪಾಯ ಹೇಗೆ ಆಗುತ್ತದೆ? ಎಂದರೆ ಉಪಾಸನೆಗಳು ಸತ್ತ್ವಶುದ್ಧಿಯನ್ನು ಉಂಟುಮಾಡಿ ಜ್ಞಾನಕ್ಕೆ ಅಧಿಕಾರವನ್ನುಂಟುಮಾಡುತ್ತವೆ ಮತ್ತು ಆಲಂಬನೆಯನ್ನು ಹೊಂದಿ ಪರಮಾರ್ಥವನ್ನು ಸಾಧಿಸುವುದಕ್ಕೆ ಸುಲಭವಾದ ಸಾಧನವಾಗಿರುವುದರಿಂದ ಅವುಗಳು ಪರಮೋಪಕಾರಕ ಎಂದು ಶ್ರೀಶಂಕರ ಭಗವತ್ಪಾದರು ಅದಕ್ಕೆ ಸಮಾಧಾನವನ್ನು ಹೇಳುತ್ತಾರೆ.

“ತಾನ್ಯೇತಾನ್ಯುಪಾಸನಾನಿ ಸತ್ತ್ವಶುದ್ಧಿಕರತ್ವೇನ
ವಸ್ತುತತ್ತ್ವಾವಭಾಸಕತ್ವಾತ್ ಅದ್ವೈತಜ್ಞಾನೋಪಕಾರಕಾಣಿ,
ಆಲಂಬನವಿಷಯತ್ವಾತ್ ಸುಸಾಧ್ಯಾನಿ ಚ|”

-ಶಾಂಕರಭಾಷ್ಯ-ಛಾಂದೋಗ್ಯೋಪನಿಷತ್

ಪ್ರಣವೋಪಾಸನೆಯ ಸ್ವರೂಪ, ರೂಪ, ಮಹಿಮಾತಿಶಯ:

ಬ್ರಹ್ಮಪ್ರಾಪ್ತಿಗೆ ನಾನಾ ಉಪಾಯಗಳನ್ನು ಅಧ್ಯಾತ್ಮ ಶಾಸ್ತ್ರಗಳು ಬೋಧಿಸುತ್ತವೆ. ಅವುಗಳಲ್ಲಿ ಓಂಕಾರದ ಉಪಾಸನೆಯು ಶ್ರೇಷ್ಠತಮವೆಂದು ಆಪ್ತವಾಣಿಯು ಬೋಧಿಸುತ್ತದೆ. ಓಂ ಅಕ್ಷರವು ಪರಮಾತ್ಮನಿಗೆ ಅತ್ಯಂತ ಸಮೀಪವರ್ತಿಯಾದ ಪ್ರಿಯತಮ ನಾಮಧೇಯವು. ಅದನ್ನು ಕೇಳಿದೊಡನೆಯೇ ಪರಮಾತ್ಮನು ಪ್ರಸನ್ನನಾಗುತ್ತಾನೆ. ತನ್ನ ಪ್ರಿಯವಾದ ನಾಮೋಚ್ಚಾರಣೆಯನ್ನು ಕೇಳಿದಾಗ ಜನರು ತುಂಬಾ ಪ್ರಸನ್ನರಾಗುವುದಿಲ್ಲವೆ? ಪ್ರಣವವು ಪರಮಾತ್ಮನ ಮೂರ್ತಿಗಳಂತೆ ಪರಮಾತ್ಮನ ಶ್ರೇಷ್ಠವಾದ ಪ್ರತೀಕವೂ ಆಗಿದೆ. ಹೀಗೆ ಭಗವಂತನ ಪ್ರಿಯತಮವಾದ ನಾಮವೂ ಆಗಿ ಪ್ರತೀಕವೂ ಆಗಿರುವುದರಿಂದ ಪರಮಾತ್ಮೋಪಾಸನೆಗೆ ಶ್ರೇಷ್ಠತಮವಾದ ಸಾಧನವು ಪ್ರಣವ ಎಂದು ಎಲ್ಲ ವೇದಾಂತಗಳೂ ಸಾರುತ್ತವೆ. ಇದಲ್ಲದೆ ಜಪ-ಕರ್ಮ-ಅಧ್ಯಯನ ಮುಂತಾದವುಗಳು ಪ್ರಾರಂಭದಲ್ಲಿಯೂ ಮತ್ತು ಅಂತ್ಯದಲ್ಲಿಯೂ ಬಹುಮಟ್ಟಿಗೆ ಪ್ರಯೋಗಿಸುವುದರಿಂದಲೂ ಇದರ ಶ್ರೇಷ್ಠತ್ವವು ಸುಪ್ರಸಿದ್ಧವಾಗಿದೆ ಎಂಬುದಾಗಿಯೂ ಶ್ರೀಶಂಕರ ಭಗವತ್ಪಾದರು ಪ್ರಣವದ ಮಹಿಮೆಯನ್ನು ಮೊಳಗುತ್ತಾರೆ.

“ಓಮಿತ್ಯೇತದಕ್ಷರಂ ಪರಮಾತ್ಮನಃ ಅಭಿಧಾನಂ ನೇದಿಷ್ಠಮ್ |
ತಸ್ಮಿನ್ ಹಿ ಪ್ರಯುಜ್ಯಮಾನೇ ಸ ಪ್ರಸೀದತಿ
ಪ್ರಿಯನಾಮಗ್ರಹಣ ಇವ ಲೋಕಃ…….. ತಥಾ ಚ
ಅರ್ಚಾದಿವತ್ ಪರಸ್ಯಾತ್ಮನಃ ಪ್ರತೀಕಂ ಸಂಪದ್ಯತೇ|
ಏವಂ ನಾಮತ್ವೇನ ಪ್ರತೀಕತ್ವೇನ ಚ
ಪರಮಾತ್ಮೋಪಾಸನಸಾಧನಂ ಶ್ರೇಷ್ಟಮಿತಿ ಸರ್ವವೇದಾನ್ತೇಷ್ವವಗತಂ |
ಜಪಕರ್ಮಸ್ವಾಧ್ಯಾಯಾದ್ಯನ್ತೇಷು ಚ ಬಹುಶಃ ಪ್ರಯೋಗಾತ್ ಪ್ರಸಿದ್ಧಮಸ್ಯ ಶ್ರೇಷ್ಠ್ಯಮ್||”

-ಶಾಂಕರಭಾಷ್ಯ ಛಾಂದೋಗ್ಯೋಪನಿಷತ್

ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ |
ಪ್ರವರ್ತನ್ತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಂ |

-ಶ್ರೀಗೀತಾ

ಹೀಗೆ ಪರಮಾತ್ಮನ ಉಪಾಸನೆಗೆ ಶ್ರೇಷ್ಠತಮವಾದ ಆಲಂಬನೆಯೆಂದು ಸಾರಲ್ಪಟ್ಟಿರುವ ಪ್ರಣವದ ಮಹಿಮೆಯನ್ನು ಕುರಿತು ಆಧ್ಯಾತ್ಮಶಾಸ್ತ್ರಗಳು ಏನು ಹೇಳುತ್ತವೆ ಎಂದು ಗಮನಿಸೋಣ. ಪ್ರಣವವು ಪರಮಾತ್ಮನಿಗೆ ಶ್ರೇಷ್ಠತಮವಾದ ವಾಚಕ. ಅದರ ಜಪ ಮತ್ತು ಅದರ ಅರ್ಥದ ಭಾವನೆಯಿಂದ ಸಮಾಧಿಸಿದ್ಧಿಯುಂಟಾಗುತ್ತದೆ ಎಂದು ಭಗವಾನ್ ಪತಂಜಲಿಗಳು ಸಾರುತ್ತಾರೆ.

ತಸ್ಯ ವಾಚಕಃ ಪ್ರಣವಃ | ತಜ್ಜಪಃ ತದರ್ಥಭಾವನಂ |’

ವಾಚಕದ ಸ್ವರೂಪವನ್ನು ಅರಿತರೆ ವಾಚ್ಯವೇ ಪ್ರಸನ್ನವಾಗುತ್ತದೆ “ವಾಚಕೇsಪಿ ಚ ವಿಜ್ಞಾತೇ ವಾಚ್ಯ ಏವ ಪ್ರಸೀದತಿ” ಅರಿವಿನಿಂದ ಆಚರಿಸಿದ ಕರ್ಮವು ತಾನೇ ವೀರ್ಯವತ್ತಾಗುತ್ತದೆ. ‘ಯದೇವ ವಿದ್ಯಯಾ ಕರೋತಿ ತದೇವ ವೀರ್ಯವತ್ತರಂ ಭವತಿ’

ಪ್ರಣವದ ಸ್ವರೂಪ, ರೂಪ, ಮಹಿಮೆ, ಉಪಾಸನಾ ಪ್ರಕಾರಗಳನ್ನು ಬೋಧಿಸುವ ಶಾಸ್ತ್ರಗಳು ಅದರ ನಾನಾ ನಾಮಧೇಯಗಳನ್ನು ಹೀಗೆ ಬೋಧಿಸುತ್ತವೆ.

ಓಂಕಾರಃ ಪ್ರಣವಸ್ತಾರಃ ಹಂಸೋ ನಾರಾಯಣೋ ಧ್ರುವಃ |
ವೇದಾತ್ಮಾ ಸರ್ವವೇದಾದಿಃ ಆದಿತ್ಯ ಸರ್ವಪಾವನಃ ||
ಮೋಕ್ಷಗೋ ಮುಕ್ತಿಮಾರ್ಗಶ್ಚ ಸರ್ವಸಂಧಾರಣಕ್ಷಮಃ ||”

ಇದಲ್ಲದೆ ವರ್ತುಲ, ವಾಮ, ಕಾರಣ, ಮಂತ್ರಾದ್ಯ, ಸತ್ಯ, ಬಿಂದು, ಶಕ್ತಿ, ತ್ರಿದೈವತ, ವೇದಸಾರ, ಅವ್ಯಕ್ತ, ಮೂಲಜ್ಯೋತಿ, ಶಿವ, ಅವ್ಯಯ, ತ್ರಿಶಿಖ, ಪಂಚರಶ್ಮಿ, ತ್ರಿಕೂಟಿ, ತ್ರಿಮಾತ್ರ, ಸಾರ್ಧತ್ರಿಮಾತ್ರ ಮುಂತಾದ ನಾಮಧೇಯಗಳೇ ಅದರ ಸ್ವರೂಪ-ಮಹಿಮೆಗಳನ್ನು ಎತ್ತಿ ಹೇಳುತ್ತವೆ.

ಉದಾಹರಣೆಗೆ ಪ್ರಣವವನ್ನು ಹಂಸ ಎಂದು ಕರೆಯಲಾಗಿದೆ. ಹಂಸ ಮಂತ್ರದಲ್ಲಿ ಓಂಕಾರವು ಅಡಕವಾಗಿರುವುದನ್ನು ಶಾಸ್ತ್ರಗಳು ನಿರೂಪಿಸುತ್ತವೆ. ಹಂಸ ಎಂಬುದರಲ್ಲಿ ಪ್ರಣವವು ಹೇಗೆ ಗರ್ಭಿತವಾಗಿದೆ ಎಂದರೆ ಹಂಸಮಂತ್ರವನ್ನು ಜಪಿಸುತ್ತಿರುವಾಗ ಅದು “ಸೋಹಂ” ಎಂಬ ರೂಪವನ್ನು ತಾಳುತ್ತದೆ. ಅದರಲ್ಲಿರುವ ವ್ಯಂಜನ(ಪ್ರಕೃತಿ) ಸ್ವರೂಪವಾದ ಸಕಾರ ಮತ್ತು ಹಕಾರಗಳನ್ನು ಲೋಪಗೊಳಿಸಿ ಪೂರ್ವರೂಪಸಂಧಿಯನ್ನು ಮಾಡಿದರೆ ಪ್ರಣವವೇ ಆಗುತ್ತದೆ ಎಂದು ಯೋಗಗ್ರಂಥಗಳು ಪ್ರತಿಪಾದಿಸುತ್ತವೆ. “ಹಕರಾರ್ಣಂ ಸಕಾರಾರ್ಣಂ ಲೋಪಯಿತ್ವಾ ಪ್ರಯೋಜಯೇತ್|

ಸಂಧಿಂ ವೈ ಪೂರ್ವರೂಪಂ ತು ತತೋsಸೌಪ್ರಣವೋ ಭವೇತ್ ||”

ಪರಮಾತ್ಮನ ವಾಚಕವೇ ಆಗಿರುವುದರಿಂದ ಅದನ್ನು ಪರಮಾತ್ಮಾ, ನಾರಾಯಣ, ಅವ್ಯಯ, ಶಿವ, ಮೂಲಜ್ಯೋತಿ, ಧ್ರುವ ಮುಂತಾದ ಶಬ್ಧಗಳಿಂದಲೂ ಕರೆಯಲಾಗಿದೆ.

ಪರಬ್ರಹ್ಮಕ್ಕೆ ಅನ್ವಯವಾಗುವ ವರ್ಣನೆಯಿಂದಲೇ ಪ್ರಣವವನ್ನೂ ವರ್ಣಿಸಲಾಗಿದೆ.

ಏತದ್ವೈ ಸತ್ಯಕಾಮ ಪರಂಚಾಪರಂ ಚ ಬ್ರಹ್ಮ ಯದೋಂಕಾರಃ |
ಓಂಕಾರೇತು ವಿಷ್ಣ್ವಾದಿಪ್ರತಿಮಾಸ್ಥಾನೀಯೇ
ಭಕ್ತ್ಯಾವೇಶಿತಬ್ರಹ್ಮಭಾವೇ ಧ್ಯಾಯಿನಾಂ ತತ್ಪ್ರಸೀದತಿ
ಇತ್ಯವಗಮ್ಯತೇ| ನೇದಿಷ್ಠಂಹ್ಯಾಲಂಬನಂ ಓಂಕಾರೋ ಬ್ರಹ್ಮಣಃ |

-ಶಾಂಕರಭಾಷ್ಯ ಪ್ರಶ್ನೋಪನಿಷತ್

ಸ ಹಿ ಆಲಂಬನಂ ಬ್ರಹ್ಮಣಃ ಪರಸ್ಯಾಪರಸ್ಯ ಚ|
ಪ್ರತಿಮೇವ ವಿಷ್ಣೋಃ |

– ತೈ.ಉ.ಭಾಷ್ಯ

ಓಮಿತಿ ಬ್ರಹ್ಮ| ಓಮಿತೀದಂ ಸರ್ವಂ |

-ತೈ.ಉಪನಿಷತ್

ಏತದ್ಧ್ಯೇವಾಕ್ಷರಂ ಬ್ರಹ್ಮ | ಏತದ್ಧ್ಯೇವಾಕ್ಷರಂ ಪರಂ |

-ಕಠೋಪನಿಷತ್

ಓಮಿತ್ಯೇತದಕ್ಷರಮ್ ಇದಂ ಸರ್ವಂ ತಸ್ಯೋಪವ್ಯಾಖ್ಯಾನಂ
ಭೂತಂ ಭವದ್ ಭವಿಷ್ಯದಿತಿ ಸರ್ವಮೋಂಕಾರ ಏವ|
ಯಚ್ಚಾನ್ಯತ್ ತ್ರಿಕಾಲಾತೀತಂ ತದಪ್ಯೋಂಕಾರ ಏವ|
ಪ್ರಣವಂ ಹೀಶ್ವರಂ ವಿದ್ಯಾತ್ ಸರ್ವಸ್ಯ ಹೃದಯಸ್ಥಿತಂ |
ಸರ್ವವ್ಯಾಪಿನಮೋಂಕಾರಂ ಮತ್ವಾ ಧೀರೋ ನ ಶೋಚತಿ
ಪ್ರಣವೋ ಬ್ರಹ್ಮ ನಿರ್ಭಯಂ |”

-ಮಾಂಡೂಕ್ಯಕಾರಿಕಾ

ಓಂ ಓಂ ಓಂ ಇತಿ ತ್ರಿರುಕ್ತ್ವಾ ಚತುರ್ಥಃ ಶಾನ್ತ ಆತ್ಮಾ”

ಪ್ರಣವವನ್ನು ಉಪಾಸನೆ ಮಾಡುವಾಗ ಜಾಗ್ರತ್- ಸ್ವಪ್ನ- ಸುಷುಪ್ತಿಗಳಿಗೆ ಅಧಿದೇವತೆಯಾದ ವೈಶ್ವಾನರ, ತೈಜಸ ಮತ್ತು ಪ್ರಾಜ್ಞರು ಪ್ರಣವದ ಆಕಾರ, ಉಕಾರ ಮತ್ತು ಮಕಾರಗಳೆಂಬ ಮೂರು ಮಾತ್ರೆಗಳೆಂದೂ, ತುರೀಯ ಪರಮಾತ್ಮನೇ ಅಮಾತ್ರ ಎಂದೂ ಉಪಾಸನೆ ಮಾಡಲ್ಪಡಬೇಕೆಂದು ಮಾಂಡೂಕ್ಯವು ಬೋಧಿಸುತ್ತದೆ.

“ಶ್ರೀಕೃಷ್ಣನು  ಪ್ರಣವದ ಅರ್ಧಮಾತ್ರಾತ್ಮಕ”
ಅರ್ಧಮಾತ್ರಾತ್ಮಕಃ ಕೃಷ್ಣಃ ಯಸ್ಮಿನ್ ಸರ್ವಂ ಪ್ರತಿಷ್ಠಿತಂ |

ಎಂದು ತಂತ್ರಶಾಸ್ತ್ರವು ಬೋಧಿಸುತ್ತದೆ.

“ಪರಬ್ರಹ್ಮವೆಂಬ ಲಕ್ಷ್ಯವನ್ನು ಸಾಧಿಸಬೇಕಾದರೆ ಪ್ರಣವವನ್ನೇ ಧನುಸ್ಸನ್ನಾಗಿಯೂ, ಆತ್ಮವನ್ನು ಬಾಣವನ್ನಾಗಿಯೂ ಭಾವಿಸಿ ಸಾವಧಾನವಾದ ಮನಸ್ಸಿನಿಂದ ಗುರಿಯನ್ನು ಸಾಧಿಸಿರಿ” ಎಂದು ಮುಂಡಕ ಶ್ರುತಿಯು ಬೋಧಿಸುತ್ತದೆ.

“ಈ ಪ್ರಣವವು ವೇದಗಳಿಗೆ ಪ್ರಧಾನ, ವಿಶ್ವರೂಪಿ. ವೇದಗಳೆಂಬ ಅಮೃತದಿಂದ ತೆಗೆಯಲ್ಪಟ್ಟ ಸಾರಿಷ್ಠ ಪದಾರ್ಥ. ಪರಮೇಶ್ವರ, ಅಮೃತಧಾರೆಯನ್ನು ದಯಪಾಲಿಸುವವನು. ಪರಮಾತ್ಮನ ಕೋಶ, ಲೌಕಿಕವಾದ ಮೇಧೆಯಿಂದ ಆವರಿಸಲ್ಪಟ್ಟು ಅಜ್ಞಾನಿಗಳಿಗೆ ಮರೆಯಾಗಿದ್ದಾನೆ…. ಇತ್ಯಾದಿ ಭಾವನೆಗಳಿಂದ ಮೇಧೆ, ಸಂಪತ್ತು, ಇಂದ್ರಿಯಗಳ ಸೌಷ್ಠವ, ವೇದರಕ್ಷಣೆ, ಅನ್ನಪಾನ, ಪಶು, ಸಚ್ಛಿಷ್ಯಪ್ರಾಪ್ತಿ ಇತ್ಯಾದಿಗಳನ್ನು ದಯಪಾಲಿಸಲೆಂದು ಪ್ರಣವದ ಉಪಾಸನೆಯನ್ನು ತೈತ್ತಿರೀಯವು ಸಾರುತ್ತದೆ.

ಪ್ರಣವವು ನಾದಬ್ರಹ್ಮ. ಶ್ರೀಕೃಷ್ಣ ಪರಮಾತ್ಮನ ಕೊಳಲು ಪ್ರಣವದ ಅರ್ಥವನ್ನೇ ಮೊಳಗುತ್ತದೆ.

“ಓಂಕಾರಾರ್ಥಮುದೀರಯನ್ ವಿಜಯತೇ ವಂಶೀನಿನಾದಃ ಶಿಶೋಃ |

ಮಹಾದೇವನ ಡಮರುವು ಪ್ರಣವಮೂಲವಾದ ಹಂಸಮಂತ್ರವನ್ನು ಮೊಳಗುತ್ತದೆ.

ಹಾಗೆಯೇ ದೇವವಾದ್ಯಗಳಾದ ವೀಣೆ, ಮೃದಂಗ, ಶಂಖ, ಘಂಟೆ ಮುಂತಾದುವುಗಳೂ ಪ್ರಣವಘೋಷವನ್ನೇ ಮಾಡುತ್ತವೆ ಎಂಬ ತಿಳುವಳಿಕೆಯಿಂದ ಪ್ರಣವವನ್ನ್ನು ಉಪಾಸನೆ ಮಾಡಬೇಕು.

ಉಪಾಸನೆ ಅಂದರೇನು?

ಉಪಾಸನೆ ಎಂದರೆ ಲೌಕಿಕ ಅರ್ಥದ ಪೂಜೆ ಮಾತ್ರವಲ್ಲ ಉಪಾಸ್ಯ ವಸ್ತುವಿನೊಡನೆ ತಾದಾತ್ಮ್ಯವನ್ನು ಪಡೆಯುವುದೇ ಉಪಾಸನೆಯ ಪರಮಾರ್ಥ.

ದೇವೋ ಭೂತ್ವಾ ದೇವಮರ್ಚಯೇತ್” ಎಂದು ಆಗಮಗಳು ಉಪದೇಶಿಸುವಂತೆ ದೇವರೇ ಆಗಿ ದೈವಭಾವದಿಂದಲೇ ದೇವರನ್ನು ಪೂಜಿಸಬೇಕು. ಉಪಾಸಕ-ಉಪಾಸನೆ-ಉಪಾಸ್ಯ ಎಂಬ ಮೂರೂ ಏಕಸ್ವರೂಪವಾಗಿ ಅನುಭವಕ್ಕೆ ಬರುವಂತೆ ಉಪಾಸನೆ ಮಾಡಬೇಕು. ಉಪಾಸಕನು ಪರಮಾತ್ಮಮಯನೇ ಆಗಿಬಿಡಬೇಕೆಂದು ಶ್ರೀವೇದಾಂತದೇಶಿಕರು ಸ್ವಾನುಭವವನ್ನು ಸಾರುತ್ತಾರೆ.

“ತ್ವಾಂ ಚಿಂತಯನ್ ತ್ವನ್ಮಯತಾಂ ಪ್ರಪನ್ನಃ”

-ಶ್ರೀ ಹಯಗ್ರೀವ ಸ್ತೋತ್ರ)

ಶ್ರೀಶಂಕರ ಭಗವತ್ಪಾದರು ಬೃಹದಾರಣ್ಯಕ ಭಾಷ್ಯದಲ್ಲಿ ಅಪ್ಪಣೆ ಕೊಡಿಸಿರುವ ಈ ವಾಕ್ಯಗಳೂ ಅತ್ಯಂತ ಗಮನೀಯವಾಗಿವೆ. ‘ಉಪಾಸನೆ ಎಂದರೆ ಮನಸ್ಸಿನಿಂದ ಬಳಿಸಾರಿ ಚಿಂತಿಸುವಿಕೆ, ಲೌಕಿಕ ಪ್ರತ್ಯಯಗಳು ಮಧ್ಯೆ ಬರದಂತೆ ಉಪಾಸ್ಯವಸ್ತುವೇ ತನ್ನ ಆತ್ಮ ಎಂಬ ಅನುಭವ ಉಂಟಾಗುವವರೆಗೂ ಚಿಂತನೆ ಮಾಡುವುದು.

ಉಪಾಸನಂ ನಾಮ ಮನಸೋಪಗಮ್ಯ ಆಸನಂ ಚಿಂತನಂ|
ಲೌಕಿಕ ಪ್ರತ್ಯಯಾವ್ಯವಧಾನೇನ ಯಾವತ್
ತದ್ದೇವತಾದಿಸ್ವರೂಪಾತ್ಮಾಭಿಮಾನಾಭಿವ್ಯಕ್ತಿಃ |
ದೇವೋ ಭೂತ್ವಾ ದೇವಾನಪ್ಯೇತಿ |
ಕಿಂದೇವತೋsಸ್ಯಾಂ ಪ್ರಾಚ್ಯಾಂ ದಿಶ್ಯಸಿ |

ಹೀಗೆ ಪ್ರಣವವೇ ತಾನು, ತಾನೇ ಪ್ರಣವ ಎಂದು ನಾದಬ್ರಹ್ಮವನ್ನು ಉಪಾಸನೆ ಮಾಡುವವನು ಅದರ ಅರ್ಥವಾದ ಪ್ರಣವದಲ್ಲಿ ತಾದಾತ್ಮ್ಯ ಹೊಂದುತ್ತಾನೆ.

ಪ್ರಣವವು ಜ್ಞಾನಿಗಳಿಗೆ ಊರ್ಧ್ವಮುಖವಾಗಿರುತ್ತದೆ. ಅಜ್ಞಾನಿಗಳಿಗೆ ಅಧೋಮುಖವಾಗಿರುತ್ತದೆ ಎಂದು ಭಾವಿಸಿ ತಾನು ಪ್ರಣವದಲ್ಲಿ ಮನಸ್ಸನ್ನು ತೊಡಗಿಸಿ ಪ್ರಣವಮಯವಾಗಬೇಕು. ನಿರ್ಭಯನಾಗಬೇಕು. ಪ್ರಣವವು ಎಲ್ಲದರ ಆದಿ, ಮಧ್ಯ ಮತ್ತು ಅಂತ್ಯ, ಸರ್ವರ ಹೃದಯದಲ್ಲಿ ಬೆಳಗುತ್ತಿರುವ ಈಶ್ವರ, ಸರ್ವವ್ಯಾಪಿ, ಅಮಾತ್ರ, ಅನಂತಮಾತ್ರ, ಶಿವ, ಅದ್ವೈತ ಎಂಬ ತತ್ತ್ವಾರ್ಥ ಭಾವನೆಯಿಂದ ಪ್ರಣವದಲ್ಲಿ ಮನಸ್ಸನ್ನು ತೊಡಗಿಸಬೇಕು.

“ಯುಂಜೀತ ಪ್ರಣವೇ ಚೇತಃ ಪ್ರಣವೋ ಬ್ರಹ್ಮ ನಿರ್ಭಯಂ |
ಸರ್ವಸ್ಯ ಪ್ರಣವೋ ಹ್ಯಾದಿಃ ಮಧ್ಯಮಂತಸ್ತಥೈವ ಚ||

ಸರ್ವವ್ಯಾಪಿನಮೋಂಕಾರಂ ಮತ್ತ್ವಾಧೀರೋನಶೋಚತಿ |
ಅಮಾತ್ರೋsನಂತಮಾತ್ರಶ್ಚದ್ವೈತಸ್ಯೋಪಶಮಃ ಶಿವಃ ||
ಹೀಗೆ ಓಂಕಾರವನ್ನು ಅರಿತವನೇ ಮುನಿಯು.

“ಓಂಕಾರೋ ವಿದಿತೋ ಯೇನ ಸ ಮುನಿರ್ನೇತರೋ ಜನಃ |

ಪ್ರಣವದ ಅರ್ಥ:

ಹಿಂದೆ ಹೇಳಿದಂತೆ ಪರಮಾತ್ಮನೇ ಪ್ರಣವದ ಪರಮಾರ್ಥ. ಅದರಲ್ಲಿರುವ ಅಕ್ಷರಗಳನ್ನು ತತ್ತ್ವಗಳನ್ನಾಗಿ ಉಪಾಸನೆ ಮಾಡುವ ರೀತಿಗಳೂ ಉಂಟು. ‘ಅ’ಕಾರ, ‘ಉ’ಕಾರ, ‘ಮ’ಕಾರಗಳನ್ನು ತ್ರಿಮೂರ್ತಿ ಭಾಗಗಳೆಂದೂ ಪ್ರಣವದ ಅರ್ಧಮಾತ್ರೆಯನ್ನು ತ್ರಿಮೂರ್ತಿಮೂಲವಾದ ಪರಬ್ರಹ್ಮವೆಂದೂ ಉಪಾಸನೆ ಮಾಡುವ ಸಂಪ್ರದಾಯವಿದೆ. ಹಾಗೆಯೇ ‘ಅ’ಕಾರವನ್ನು ವಿಷ್ಣುವೆಂದೂ, ‘ಮ’ಕಾರವನ್ನು ಜೀವವೆಂದೂ ಮತ್ತು ‘ಉ’ಕಾರವನ್ನು ಜೀವದೇವರ ಸಂಬಂಧವೆಂದೂ ಅಥವಾ ಮಹಾಲಕ್ಷ್ಮಿಯೆಂದು ಉಪಾಸನೆ ಮಾಡುವ ಯೋಜನೆಗಳೂ ಇವೆ.

‘ಅ’ಕಾರಾರ್ಥೋ ವಿಷ್ಣುಃ ಜಗದುದಯರಕ್ಷಾಪ್ರಳಯಕೃತ್ |
ಮಕಾರಾರ್ಥೋ ಜೀವಃ ತದುಪಕರಣಂ ವೈಷ್ಣವಮಿದಂ |
ಉಕಾರೋsನನ್ಯಾರ್ಹಂ ನಿಯಮಯತಿ ಸಂಬಂಧಮನಯೋಃ |
ತ್ರಯೀ ಶೀರ್ಷಸ್ಯಾತ್ಮಾ ಪ್ರಣವ ಅಮುಮರ್ಥಂ ಸಮದಿಶತ್ ||

ಪ್ರಣವಗಳಲ್ಲಿ ಅಕಾರ, ಉಕಾರ, ಮಕಾರ, ಬಿಂದುನಾದಗಳೆಂಬ ಐದು ಅಕ್ಷರಗಳಿವೆ. ಇವುಗಳಲ್ಲಿ ಅಕಾರವು ಎಲ್ಲಕ್ಕೂ ಮೂಲ. ಅದು ಭಗವಂತನ ಮಹಾವಿಭೂತಿ. “ಅಕ್ಷರಾಣಾಂ ಅಕಾರೋsಸ್ಮಿ” ಎಂದು ತಿಳಿದು ಉಪಾಸನೆ ಮಾಡುವ ವಿಧಿಯೂ ಇದೆ.

ಪ್ರಣವೋಪಾಸನೆಯು ಏಕೆ ಪೂರ್ಣವಾದ ಫಲ ಕೊಡುತ್ತಿಲ್ಲ?

ಮೇಲೆ ಹೇಳಿದ ಶಾಸ್ತ್ರವಾಕ್ಯಗಳು ವಿದ್ವಾಂಸರಿಗೆ ತಿಳಿಯುತ್ತವೆ. ಎಲ್ಲ ವೈದಿಕ ಮಂತ್ರಜಪಗಳಲ್ಲಿಯೂ ಪ್ರಣವವು ಉಚ್ಚರಿಸಲ್ಪಡುತ್ತದೆ. ಕೇವಲ ಪ್ರಣವದ ಮಂತ್ರಜಪವೂ ನಡೆಯುತ್ತಿದೆ. ಆದರೂ ಪ್ರಣವೋಪಾಸನೆಯ ಉದ್ದಿಷ್ಟವಾದ ಫಲವು ಜಾಪಕರಿಗೆ ದೊರೆಯುತ್ತಿದೆಯೇ? ಎಂಬುದಕ್ಕೆ ಅವರ ಅನುಭವವೇ ಸಾಕ್ಷಿ. ಎಲ್ಲ ಪ್ರಾಣಗಳನ್ನೂ ಪರಮಾತ್ಮನಲ್ಲಿ ಯಾವುದು ಬಗ್ಗಿಸುತ್ತದೆಯೋ ಅದು ಪ್ರಣವ. ಒಮ್ಮೆ ಉಚ್ಚರಿಸಿದರೂ ಕೂಡ ಯಾವುದು ಪರಬ್ರಹ್ಮಕ್ಕೆ ಒಯ್ಯುತ್ತದೆಯೋ ಅದು ಓಂಕಾರ.

“ಸರ್ವಾನ್ ಪ್ರಾಣಾನ್ ಪರಮಾತ್ಮನಿ ಪ್ರಣಾಮಯತಿ ಇತ್ಯೇತಸ್ಮಾತ್ ಪ್ರಣವಃ|
ಸಕೃದುಚ್ಚಾರಣಮಾತ್ರೇಣ ಪರಮಾತ್ಮಪರ್ಯನ್ತಂ ಉನ್ನಯತೀತಿ ಓಂಕಾರಃ |”

ಎಂದು ಪ್ರಣವೋಪಾಸನೆಯ ಫಲವನ್ನು ಅದರ ನಿರ್ವಚನವು ಹೇಳುತ್ತದೆ. ಈ ಫಲವು ಏಕೆ ದೊರೆಯುತ್ತಿಲ್ಲ ಎಂಬುದಕ್ಕೆ ಪ್ರಣವದ ಮೂಲಸ್ವರೂಪವನ್ನು ತಿಳಿಯಬೇಕು, ಜ್ಞಾನಿಗಳಿಂದ ತಿಳಿದು ವಿಧಿಪೂರ್ವಕವಾಗಿ ಉಪಾಸಿಸಬೇಕು. ಹಾಗೆ ಮಾಡದಿರುವುದರಿಂದಲೇ ಫಲವು ದೊರೆಯುತ್ತಿಲ್ಲವೆಂಬುದೇ ನೇರವಾದ ಉತ್ತರ.

ಪ್ರಣವವು ಅನಾಹತನಾದ:

ಪ್ರಣವವು ಮೌಲಿಕವಾಗಿ ಅನಾಹತನಾದ, ಸಂಘರ್ಷದಿಂದ ಉಂಟಾಗುವ ನಾದವಲ್ಲ. “ಹೃದ್ಯಾಕಾಶಾದಭೂನ್ನಾದಃ” ಎಂಬಂತೆ ಯೋಗಿಗಳ ಹೃದಯಾಕಾಶದಲ್ಲಿ ತನಗೆ ತಾನೇ ಮೊಳಗುತ್ತಿರುವ ನಾದ. ಯೋಗಿಗಳು ಅನ್ತರ್ಮುಖರಾಗಿ ಒಳಗೆ ಆಳವಾಗಿ ಮುಳುಗಿರುವಾಗ ಆ ಅದ್ಭುತವಾದ ಪ್ರಣವನಾದವು ಒಳಗಿವಿಗೆ ಕೇಳಿ ಬರುತ್ತದೆ. ಇದಕ್ಕೆ ಹಿಂದೆ ಕೇಳಿಬರುವ ನಾದಗಳನ್ನು ಬಿಟ್ಟು ಓಂಕಾರ ನಾದವನ್ನೇ ಸಾವಧಾನವಾಗಿ ಕೇಳುತ್ತಿರಬೇಕು. ಆ ಧ್ವನಿಯ ಒಳಗೆ ಜ್ಯೋತಿ, ಜ್ಯೋತಿಯ ಒಳಗೆ ಮನೋಲಯ, ಹಾಗೆ ಮನೋಲಯವಾದಾಗ ವಿಷ್ಣುವಿನ ಪರಮಪದವು ಅನುಭವಕ್ಕೆ ಬರುತ್ತದೆ.

ತದಗ್ರೇ ಜಾಯತೇ ನಾದಃ ಓಂ ಓಮಿತಿ ತದದ್ಭುತಂ |
ಧ್ವನೇರನ್ತರ್ಗತಂ ಜ್ಯೋತಿಃ ಜ್ಯೋತಿರಂತರ್ಗತಂ ಮನಃ |
ತನ್ಮನೋ ವಿಲಯಂ ಯಾತಿ ತದ್ವಿಷ್ಣೋಃ ಪರಮಂ ಪದಮ್ ||”

ಇಂತಹ ಪ್ರಣವನಾದವನ್ನು ಒಳಗಿವಿಯಿಂದ ಕೇಳಿರುವ ಯೋಗಿಗಳಿಂದ ಪ್ರಣವೋಪದೇಶವನ್ನು ಪಡೆಯಬೇಕು. ಒಳಗಿನ ಪ್ರಣವದ ತಾರಶ್ರುತಿಯೂ, ಅದಕ್ಕೆ ತಕ್ಕಮತಿಯೂ, ಪ್ರಣವೋಪಾಸನೆಯಲ್ಲಿರಬೇಕು. ಆ ಪ್ರಣವವನ್ನು ಅಂತೆಯೇ ಹೊರಗೆ ಮೊಳಗಿಸುವ ಕಂಠಶ್ರೀ ಇಲ್ಲದಿದ್ದರೆ, ಘಂಟೆ, ವೀಣೆ, ವೇಣು ಮುಂತಾದುವುಗಳ ಮೂಲಕ ಪ್ರಯತ್ನಪೂರ್ವಕವಾಗಿ ಅದನ್ನು ತಂದುಕೊಂಡು, ಅಂತೆಯೇ ಉಪಾಸನೆ ಮಾಡಬೇಕು ಎಂಬುದಷ್ಟನ್ನು ಮಾತ್ರ ಇಲ್ಲಿ ಸಂಕ್ಷೇಪಿಸುತ್ತೇವೆ. ಒಂದು ಪರ್ಣವು ಸಂಪೂರ್ಣವಾಗಿ ನರನಾಡಿಗಳಿಂದ ವ್ಯಾಪಿಸಲ್ಪಟ್ಟಿರುವಂತೆ ಸರ್ವವಾಙ್ಮಯವೂ ಮತ್ತು ಇಡೀ ವಿಶ್ವವೂ ಪ್ರಣವದಿಂದ ವ್ಯಾಪಿಸಲ್ಪಟ್ಟಿದೆ. ಅದರ ವಿವರಣೆಗೆ ಅತಿದೀರ್ಘ ಕಾಲಾವಕಾಶ ಬೇಕಾಗುತ್ತದೆ- ಎಂಬುದರಲ್ಲಿ ಸಂಶಯವಿಲ್ಲ. ಪಕೃತ ಕಾಲಾನುಗುಣವಾಗಿ ಪ್ರಣವೋಪಾಸನೆಯನ್ನು ಕುರಿತು ಸಂಕ್ಷೇಪವಾಗಿ ನಿರೂಪಣೆ ಮಾಡಿದ್ದೇವೆ.

ಉಪಸಂಹಾರ:

ಪ್ರಣವೋಪಾಸನೆಯ ವಿಚಾರವನ್ನು ಪ್ರಯೋಗವಿಜ್ಞಾನದ ಮೂಲಕ ನಮ್ಮಲ್ಲಿ ಮೂಡಿಸಿದವರು ಮಹಾಯೋಗಿವರೇಣ್ಯ ಶ್ರೀರಂಗಗುರುದೇವರು. ಅವರ ಪಾದಾರವಿಂದಗಳಲ್ಲಿ ಅತ್ಯಂತ ಕೃತಜ್ಞತೆಯಿಂದ ಪ್ರಾಣಪ್ರಣಾಮಗಳನ್ನು ಸಲ್ಲಿಸುತ್ತೇವೆ. ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾಗಿದ್ದು ಅಧ್ಯಾತ್ಮವಿದ್ಯೆಯ ಪ್ರತಿಷ್ಠೆ ಮತ್ತು ಪ್ರಸಾರಗಳಿಗಾಗಿ ನಾನಾಮುಖವಾಗಿ ಪ್ರಯತ್ನ ಮಾಡಿದ ಮಹಾತ್ಮರಾದ ಶ್ರೀಶ್ರೀಗಳ ಪವಿತ್ರವಾದ ಸ್ಮೃತಿಗೆ ಈ ಲೇಖನವು ಕಿರುಕಾಣಿಕೆಯಾಗಲಿ ಎಂದು ಪ್ರಾರ್ಥಿಸುತ್ತೇವೆ.

– ಶ್ರೀಶ್ರೀರಂಗಪ್ರಿಯಶ್ರೀಪಾದಶ್ರೀಶ್ರೀ

~*~

Facebook Comments