ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 18:

ಉಪನಿಷತ್ತಿನ ಕೆಲವು ವಿಚಾರಗಳು

ವಿದ್ವಾನ್ ಮಂಜುನಾಥ ನಾರಾಯಣ ಭಟ್ಟ

‘ಉಪನಿಷತ್ತು’ ‘ಭಗವದ್ಗೀತೆ’ ಎಂಬ ಹೆಸರನ್ನು ಕೇಳಿದಾಗ ಅಲ್ಲಿಯ ವಿಷಯಗಳು ನಮ್ಮ ಜೀವನಕ್ಕೆ ಸಂಬಂಧಪಟ್ಟವುಗಳಲ್ಲ, ಎಲ್ಲವನ್ನೂ ತ್ಯಾಗಮಾಡಿದ ಕೆಲವೇ ಜನರಿಗೆ ಮಾತ್ರ ಅವು ಸಂಬಂಧಪಟ್ಟಿವೆ ಎಂದು ಭಾವಿಸುವ ಜನರೇ ಇಂದು ಬಹಳವಾಗಿ ಗೋಚರಿಸುತ್ತಾರೆ. ಸ್ವಲ್ಪ ಸೂಕ್ಷ್ಮವಾಗಿ ವಿಚಾರಿಸಿದಾಗ ಅವುಗಳೆಲ್ಲವೂ ಒಂದು ವರ್ಗೀಕೃತ ಸಮಾಜಕ್ಕೆ ಸಂಬಂಧಪಟ್ಟ ವಿಷಯಗಳು ಎಂದು ಅನಿಸುತ್ತದೆ. ಅಂತಹ ಹಲವಾರು ವಿಷಯಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಚಿಂತಿಸೋಣ.

ಛಾಂದೋಗ್ಯೋಪನಿಷತ್ತಿನ ನಾಲ್ಕನೇ ಅಧ್ಯಾಯದಲ್ಲಿ ಸತ್ಯಕಾಮಜಾಬಾಲನ ಪ್ರಸಂಗವೊಂದು ಪ್ರಾಪ್ತವಾಗುತ್ತದೆ. ಅದನ್ನು ಪೂರ್ವಪರ ವಿಚಾರಿಸಿದಾಗ ಆಗಿನ ಕಾಲದಲ್ಲಿ ಬ್ರಾಹ್ಮಣನು ಬಾಲ್ಯದಲ್ಲಿ ಕುಲಪತಿಯಲ್ಲಿ ಉಪನೀತನಾಗಿ ವೇದಾಧ್ಯಯನವನ್ನು ಮಾಡುವ ಸಂಪ್ರದಾಯವಿತ್ತು. ಹಾಗೆ ಅಧ್ಯಯನಾಪೇಕ್ಷೆಯಿಂದ ಬಂದ ವ್ಯಕ್ತಿಯನ್ನು ಉಪನಯನ ಮಾಡುವ ಪೂರ್ವದಲ್ಲಿ “ಕಿಂಗೋತ್ರೋಸಿ” ಎಂಬುದಾಗಿ ಆತನ ಗೋತ್ರವನ್ನು ಪ್ರಶ್ನಿಸಿ ತಿಳಿದುಕೊಂಡೇ ಆಚಾರ್ಯನು ಆತನಿಗೆ ಉಪನಯನವನ್ನು ಮಾಡಿ ವಿದ್ಯಾದಾನವನ್ನು ಮಾಡುವ ಪರಿಪಾಠವಿತ್ತೆಂದು ತೋರಿಬರುತ್ತದೆ. ಹೀಗಿರುವಾಗ ತಂದೆ ಇಲ್ಲದ ಸತ್ಯಕಾಮನೆಂಬ ಒಬ್ಬ ಬಾಲಕನು ಬ್ರಹ್ಮಚರ್ಯದ ಅಪೇಕ್ಷೆಯಿಂದಲೂ ಗುರೂಪಸದನದ ಉದ್ದೇಶದಿಂದಲೂ ತನ್ನ ತಾಯಿಯಾದ ಜಬಾಲೆಯಲ್ಲಿ ತನ್ನ ಗೋತ್ರವನ್ನು ಕೇಳುತ್ತಾನೆ. ಗೃಹಸ್ಥಾಶ್ರಮದ ಕಾರ್ಯಬಾಹುಲ್ಯದಿಂದ ನಿನ್ನ ಗೋತ್ರದ ವಿಷಯವನ್ನು ಕೇಳಿ ತಿಳಿದುಕೊಳ್ಳುವ ಆವಕಾಶ ಒದಗಲಿಲ್ಲವೆಂತಲೂ, ತಾನು ಜಬಾಲೆ ನೀನು ಸತ್ಯಕಾಮ ಇಷ್ಟು ಮಾತ್ರ ತನಗೆ ಗೊತ್ತೆಂದು ಹೇಳುತ್ತಾಳೆ. ಸತ್ಯಕಾಮನು ಆಚಾರ್ಯ ಗೌತಮರಲ್ಲಿ ಬಂದು ತಾಯಿ ತನಗೆ ತಿಳಿಸಿದ ವಿಷಯವನ್ನು ಯಥಾವತ್ತಾಗಿ ತಿಳಿಸುತ್ತಾನೆ. ಆಗ ಆಚಾರ್ಯರ ಮುಖದಿಂದ ಒಂದು ಮಾತು ಹೊರಡುತ್ತದೆ. “ನೈತದಬ್ರಾಹ್ಮಣೋವಿವಕ್ತುಮರ್ಹತಿ”  ಎಂದು. ಇಷ್ಟು ಸರಳವಾಗಿಯೂ ಸತ್ಯವಾಗಿಯೂ ಇರುವ ಮಾತನ್ನು ಅಬ್ರಾಹ್ಮಣನಾದವನು ಹೇಳಲು ಶಕ್ಯವಿಲ್ಲ ಎಂಬುದೇ ಇದರ ಅರ್ಥ. ಇಷ್ಟು ಹೇಳಿ ಆಚಾರ್ಯನು ಅತ್ಯಂತ ಸಂತೋಷದಿಂದ ಸತ್ಯಕಾಮನಿಗೆ ಆಶ್ರಮವಿಹಿತ ಕರ್ಮಗಳನ್ನು ನೆರವೇರಿಸಲು ಮುಂದಾಗುತ್ತಾನೆ. ಈ ಪ್ರಸಂಗದಲ್ಲಿ ಆಚಾರ್ಯರ ಮುಖದಿಂದ ಹೊರಟ “ನೈತದಬ್ರಾಹ್ಮಣೋ”ಎನ್ನುವ ಈ ಮಾತು ಅತ್ಯಂತ ಗಮನಾರ್ಹವಾಗಿದೆ. ಗೋತ್ರವಿಲ್ಲದವನಿಗೆ ಅಥವಾ ಗೋತ್ರಗೊತ್ತಿಲ್ಲದವನಿಗೆ ಆಚಾರ್ಯರು ಉಪನಯನ ಮಾಡಿ ವಿದ್ಯಾಭ್ಯಾಸ ಮಾಡಿಸುವ ಪದ್ಧತಿ ಆಗಿನ ಕಾಲದಲ್ಲಿ ಇರಲಿಲ್ಲವೆಂತ “ಕಿಂಗೋತ್ರೋಸಿ” ಎಂಬ ಆಚಾರ್ಯರ ಪ್ರಶ್ನೆಯಿಂದಲೇ ಊಹಿಸಬಹುದು. ಗೋತ್ರ ಗೊತ್ತಿಲ್ಲದ ತನಗೆ ಉಪನಯನ ಹಾಗೂ ವಿದ್ಯಾಭ್ಯಾಸದ ಅವಕಾಶ ತಪ್ಪುತ್ತದೇನೋ ಎಂಬ ಭಾವನೆಯಿಂದ ಅತೀವ ವಿದ್ಯಾಕಾಂಕ್ಷಿಯಾದ ಸತ್ಯಕಾಮನು ಅಸತ್ಯವನ್ನಾಡುವ ಪ್ರಮೇಯವಿತ್ತು. ಆದರೂ ಆತ ಸತ್ಯವನ್ನೇ ನುಡಿದ. ಅದರ ಪರಿಣಾಮವೇ ಆಚಾರ್ಯರ ಮುಖದಿಂದ ಹೊರಟ ಉದ್ಗಾರ “ನೈತದಬ್ರಾಹ್ಮಣೋ” ಎನ್ನುವುದು. ಈ ಪ್ರಸಂಗವನ್ನು ಅವಲೋಕಿಸಿದಾಗ ಒಂದು ಕಾಲದಲ್ಲಿ ಬ್ರಾಹ್ಮಣ್ಯದ ಕಲ್ಪನೆ ಎಷ್ಟು ಉದಾತ್ತವಾಗಿತ್ತು ಎಂಬುದರ ಅರಿವಾಗುತ್ತದೆ. ಆಚಾರ್ಯರ ಮಾತಿನಲ್ಲಿ ಸರಳ ಹಾಗೂ ಸತ್ಯ ಎನ್ನುವ ಎರಡು ಪದಗಳು ವ್ಯಾಖ್ಯಾತವಾಗಿವೆ. ಸರಳತನ ಎನ್ನುವ ಶಬ್ದದಲ್ಲಿ ನಡೆ-ನುಡಿ, ಆಚಾರ-ವಿಚಾರ, ವ್ಯವಹಾರ ಇವೆಲ್ಲದರಲ್ಲಿಯೂ ನಿಷ್ಕಪಟತನ, ಪರಿಶುದ್ಧತೆ, ತ್ಯಾಗಮನೋಭಾವ, ವೈಶಾಲ್ಯ ಇಂತಹ ಉದಾತ್ತ ಗುಣಗಳು ಗರ್ಭಿಭೂತವಾಗಿವೆ. ‘ಸತ್ಯ’ ಎನ್ನುವ ಶಬ್ದದಲ್ಲಿ ಕಂಡಿದ್ದನ್ನು ಕಂಡ ಹಾಗೇ ಹೇಳುವುದು. ಹೆಚ್ಚೇಕೆ? “ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್” ಎಂಬಂತೆ ವ್ಯಾವಹಾರಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಅತ್ಯುದಾತ್ತ ಗುಣಗಳೇ ತುಂಬಿವೆ. ಇಂತಹ ಸರಳತೆ, ಸತ್ಯ ಇವೇ ಬ್ರಾಹ್ಮಣ್ಯದ ಹೆಗ್ಗುರುತು ಎಂಬುದು ನಮ್ಮ ಋಷಿಮುನಿಗಳ ಅಭಿಪ್ರಾಯವಾಗಿತ್ತು . ಒಟ್ಟಾರೆ ಅಂತಃಶುದ್ದಿ ಹಾಗೂ ಬಹಿಃ ಶುದ್ದಿ ಇದೇ ಬ್ರಾಹ್ಮಣ್ಯವೆಂದು ಅಂದುಕೊಳ್ಳಬಹುದೇನೋ. ಅಂತಹ ಋಷಿಮುನಿಗಳ ಗೋತ್ರಜರಾದ ನಾವು ಇಂದು ಬ್ರಾಹ್ಮಣ್ಯದ ಕಲ್ಪನೆಯನ್ನು ಹೇಗೆ ಬೆಳೆಸಿಕೊಂಡಿದ್ದೇವೆ? ಅದರ ವಿವರಣೆ ಅಗತ್ಯವಿಲ್ಲವಷ್ಟೇ? ಆದರೂ ಇಂತಹ ಉಪನಿಷದ್ದರ್ಶನದ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಈಗ ಸನ್ನಿಹಿತವಾಗಿದೆ ಎಂತ ಅನಿಸುತ್ತಿದೆ. ತೈತ್ತಿರೀಯೋಪನಿಷತ್ತಿನಲ್ಲಿ ವರುಣನ ಮಗನಾದ ಭೃಗು ಎಂಬುವನು ಬ್ರಹ್ಮೋಪದೇಶವನ್ನು ಎಂದರೆ ಆತ್ಮೋಪದೇಶವನ್ನು ಬಯಸಿ ತನ್ನ ತಂದೆಯ ಬಳಿ ಸಾರುತ್ತಾನೆ. ಆಗ ತಂದೆಯಾದ ವರುಣನು ಈ ಶರೀರದ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಹಾಗೂ ಆನಂದಮಯ ಎಂಬ ಪಂಚಕೋಶಗಳನ್ನು ವಿಚಾರ ಮಾಡಲು, ಮಗನಿಗೆ ತಿಳಿಸುತ್ತಾನೆ. ಪ್ರತಿ ಪರ್ಯಾಯದಲ್ಲಿಯೂ “ತಪಸಾ ಬ್ರಹ್ಮ ವಿಜಿಜ್ಞಾಸಸ್ವ“ಎಂಬ ವರುಣನ ವಾಕ್ಯವು ಗೋಚರಿಸುತ್ತದೆ. ಇಲ್ಲಿ ‘ತಪಸ್ಸು’ ಎಂದರೆ ಆಲೋಚನೆ. ತನ್ನನ್ನೇ ವಿಷಯೀಕರಿಸಿ ಮಾಡುವ ವಿಚಾರ ಎಂದರೆ ಅಪ್ರಸ್ತುತವಾಗಲಾರದು. ಇಂದು ಪ್ರತಿಯೊಬ್ಬ ವ್ಯಕ್ತಿಯೂ ಸಹ ವಿಚಾರಕ್ಕೆ ವಿಷಯವಾಗಿ (ಗುಣದೋಷವಿಮರ್ಶೆಗೆ) ಇನ್ನೊಬ್ಬ ವ್ಯಕ್ತಿ ಅಥವಾ ಇನ್ನೊಂದು ವಸ್ತುವನ್ನೇ ಇಟ್ಟುಕೊಳ್ಳುತ್ತಾನೆಂಬುದು ಸೂಕ್ಷ್ಮವಾಗಿ ಸಮಾಜವನ್ನು ಅವಲೋಕಿಸಿದಾಗ ಗೊತ್ತಾಗುತ್ತದೆ. ತನ್ನ ಗುಣದೋಷವನ್ನು ವಿಮರ್ಶಿಸಿ “ಅಸತೋಮಾಸದ್ಗಮಯಾ” ಎನ್ನುವ ರೀತಿಯಲ್ಲಿ ತನ್ನನ್ನು ತಾನೇ ತಿದ್ದಿಕೊಳ್ಳುವ ವ್ಯಕ್ತಿಗಳು ಸಮಾಜದಲ್ಲಿ ಎಷ್ಟು ಜನ ಸಿಗುತ್ತಾರೆ? ಅಂತಹ ವ್ಯಕ್ತಿಗಳು ಇಲ್ಲವೇ ಇಲ್ಲ ಎಂಬ ಅಭಿಪ್ರಾಯವೇನೂ ಅಲ್ಲ. ಆದರೆ ವ್ಯಾವಹಾರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಉನ್ನತಿಯ ಮೂಲವಾದ ಆತ್ಮ ವಿಮರ್ಶೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಅವನವನ ಯೋಗ್ಯತೆಗೆ ಅನುಸಾರವಾಗಿಯಾದರೂ ಮಾಡಿಕೊಂಡರೆ ಇನ್ನೊಬ್ಬರ ಉದ್ಧಾರವನ್ನು ಯಾರೂ ಮಾಡಬೇಕಾದ ಪ್ರಸಂಗವೇ ಬರುವುದಿಲ್ಲವೆಂತ ಅನಿಸುತ್ತದೆ.

ಜಗತ್ತಿನಲ್ಲಿಯ ಪ್ರತಿಯೊಂದು ವಸ್ತುವನ್ನು ಮಾನವನು ತನ್ನ ಸಂತೋಷಕ್ಕಾಗಿಯೇ ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆಂಬುದು ಸಾರ್ವಜನೀನ ಸತ್ಯತಾನೆ? ಹೀಗಿರುವಾಗ ಆ ಸಂತೋಷದ ಕೇಂದ್ರ ಬಿಂದುವೇ ತಾನು ಎಂದು ಎಂದುಕೊಳ್ಳುವ ಆತ್ಮ  ಎಂತಲೂ ಆ ಆತ್ಮನ ಸ್ವರೂಪಜ್ಞಾನವೇ ಮುಕ್ತಿ ಎಂತಲೂ, ಅದಕ್ಕಾಗಿ ಪಂಚಕೋಶಾತ್ಮಕನಾದ ತನ್ನನ್ನು ತಾನು ತಿಳಿದುಕೊಳ್ಳಬೇಕೆಂದು ಆಂತರ್ಮುಖ ವಿಚಾರವನ್ನು ಇಲ್ಲಿ ವೇದಾಂತವು ಹೇಳುತ್ತಿದೆಯಾದರೂ ತನ್ನ ಗುಣದೋಷ ವಿಮರ್ಶೆಯೂ ಸಹ ವ್ಯಾವಹಾರಿಕ ಆಧ್ಯಾತ್ಮಿಕ ಉನ್ನತಿಗೆ ಉಪಕಾರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಇದನ್ನೇ ಉಪನಿಷತ್ತು “ತಪಸಾಬ್ರಹ್ಮವಿಜಿಜ್ಞಾಸಸ್ವ” ಎಂದು ಪ್ರತಿಪಾದಿಸಿದೆ-ಎಂದರೆ ತಪ್ಪಾಗಲಾರದು. ನಮ್ಮ ಅನಿಸಿಕೆಗಳನ್ನು ವಿಮರ್ಶಿಸಿಕೊಂಡಾಗ ಅಜ್ಞಾನ ಹಾಗೂ ಆಸೆ ಇವೇ ನಮ್ಮ ಅನೇಕ ದುಖಃ, ತನ್ಮೂಲಕ ಶಾರೀರಿಕ ತೊಂದರೆ ಇವುಗಳಿಗೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದನ್ನೇ ಭಗವದ್ಗೀತೆ ಅರ್ಜುನನ ಶಸ್ತ್ರತ್ಯಾಗ ಪ್ರಸಂಗದಿಂದ ವಿವರಿಸುತ್ತದೆ. ಕೌರವರ -ಪಾಂಡವರ ಸೇನೆ ಯುದ್ಧ ಸನ್ನದ್ಧವಾಗಿದೆ. ಯುದ್ಧ ಎಂದರೆ ಹಬ್ಬವಾದ ಅರ್ಜುನನು ತನ್ನ ರಥವನ್ನು ಎರಡೂ ಸೇನೆಗಳ ಮಧ್ಯದಲ್ಲಿ ನಿಲ್ಲಿಸುವಂತೆ ಸಾರಥಿಯಾದ ಕೃಷ್ಣನಲ್ಲಿ ಕೋರುತ್ತಾನೆ. ತನ್ನವರ ಮೇಲೆ ತಾನು ಯುದ್ಧ ಮಾಡಬೇಕೆಂದು ಅರ್ಜುನನಿಗೆ ತಿಳಿದಾಗ ಮೋಹ ಅವನನ್ನು ಆವರಿಸುತ್ತದೆ. ತಾನು ಎನ್ನುವ ಅಜ್ಞಾನ, ತಮ್ಮವರು ಎಂಬ ಮೋಹವು ಹುಟ್ಟಿ ಕ್ಷತ್ರಿಯನಿಗೆ ಕರ್ತವ್ಯವಾದ ಯುದ್ಧದಿಂದ ಹಿಮ್ಮೆಟ್ಟಲು ಉದ್ಯುಕ್ತನಾಗಿದ್ದಾನೆ. ಈ ಸಂದರ್ಭವನ್ನು ಬಳಸಿಕೊಂಡು ಕೃಷ್ಣನು ಲೋಕಕ್ಕೇ ಗೀತೋಪದೇಶವನ್ನು ಮಾಡುತ್ತಾನೆ. ಬಹುಶಃ ಈ ಪ್ರಸಂಗ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಒಂದಿಲ್ಲೊಂದು ಸಂದರ್ಭದಲ್ಲಿಯಾದರೂ ನುಸುಳಿ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಇದನ್ನು ಮನಗಂಡೇ “ಅರ್ಜುನಂ ನಿಮಿತ್ತೀಕೃತ್ಯ ಆಹ ಭಗವಾನ್” ಎಂದು ಆಚಾರ್ಯ ಶಂಕರರು ವ್ಯಾಖ್ಯಾನಿಸುತ್ತಾರೆ. ಅಜ್ಞಾನ, ಮೋಹ, ಆಸೆ, ಮಿಥ್ಯಾಭಿಮಾನ ಇವುಗಳಿಂದಲೇ ಅಲ್ಲವೇ ಇಂದಿನ ಮಾನವಜನಾಂಗೀಯ ಸಂಘರ್ಷ ಹಾಗೂ ಮಾನವನ ಕಷ್ಟ ಪರಂಪರೆಗಳು ? “ಆಸೆಯೇ ದುಃಖಕ್ಕೆ ಮೂಲ” ಎಂಬ ಕನ್ನಡದ ಗಾದೆಯ ಮಾತೂ ಸಹ ಇಲ್ಲಿಂದಲೇ ಹೊರಟಿದ್ದು ಎಂದು ಎನಿಸುತ್ತದೆ. ಒಟ್ಟಾರೆ ಭಗವದ್ಗಿತೆಯ ದೃಷ್ಟಿಯಿಂದ ಪ್ರತಿಯೊಬ್ಬ ಅಜ್ಞಾನಿಯಾದ ಮಾನವನು ಅರ್ಜುನನೇ. ಪ್ರತಿಯೊಬ್ಬನಿಗೂ ಗೀತೋಪದೇಶದ ಆವಶ್ಯಕತೆ ಇದೆ. ಹೀಗೆ ಇಂತಹ ಮಾನವನ ಆದರ್ಶದ ಬದುಕಿಗೂ ಆಧ್ಯಾತ್ಮದ ಉನ್ನತಿಗೂ ಸಹಕಾರಿಯಾದಂತಹ ಎಷ್ಟೋ ವಿಷಯಗಳು ಉಪನಿಷತ್ತು ಭಗವದ್ಗೀತೆ ಇಂತಹ ಗ್ರಂಥಗಳಲ್ಲಿ ನಮಗೆ ಲಭ್ಯವಾಗುತ್ತವೆ. ತತ್ಕಾರಣ ಅಲ್ಲಿಯ ವಿಚಾರಗಳು ಕೆಲವರಿಗಷ್ಟೇ ಸೀಮಿತವಾಗಿಲ್ಲ. ಉನ್ನತಿಯನ್ನೂ, ಆನಂದವನ್ನೂ ಬಯಸುವ ಪ್ರತಿಯೊಬ್ಬ ಜೀವಿಯ ಜೀವನದ ಅವಿಭಾಜ್ಯ ಅಂಗವಾಗಿದೆ.

~*~

Facebook Comments