ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ :

ದೀಪ ಬೆಳಗಿಸುವುದರ ಮೂಲಕ ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೆರವೇರಿಸಿದರು. ಅದರೊಂದಿಗೆ ನೂತನ ಕಟ್ಟಡದ ಉದ್ಘಾಟನೆ ಮಕ್ಕಳ ಚಟುವಟಿಕೆಯ ಮೂಲಕ ಆರಂಭಗೊಂಡಿತು. ಉದ್ಘಾಟನಾ ಸಂದರ್ಭದಲ್ಲಿ ಮಕ್ಕಳು ಹಣತೆಯನ್ನು ಹಚ್ಚಿ “ಕುಸುಮ ಕೋಮಲ, ಮೇಘಶ್ಯಾಮಲ, ರಾಮಚಂದಿರ ಜೈ ’’ ಎಂದು ಹಾಡುತ್ತಾ ಕುಣಿದ ದೃಶ್ಯವು ಸೇರಿದವರ ಮನಸೂರೆಗೊಂಡಿತು.

ಪ್ರಾಣದ ಆಂಜನೇಯನಿಗೆ ಕೋಟಿ ಕೋಟಿ ನಮನ, ನಮ್ಮೆಲ್ಲರ ಬದುಕು ನಂದನವಾಗಲಿ, ಹೂವುಗಳರಳಲಿ ಶ್ರೀರಾಮನ ದಯೆಯಿಂದ. ಕಾಡಿನಲ್ಲಿ ಹೇಗೆ ಮರಗಿಡಗಳು ತಾನಾಗಿಯೇ ಬೆಳೆಯುತ್ತದೆಯೋ ಅದೇ ರೀತಿ ಶ್ರೀ ಭಾರತೀ ವಿದ್ಯಾಪೀಠವು ಬೆಳೆದಿದೆ. ಕಾಡಿನಲ್ಲಿ ಉತ್ತಿದವರಿಲ್ಲ, ಬಿತ್ತಿದವರಿಲ್ಲ ಅದು ಸಹಜವಾಗಿ ಬೆಳೆಯುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ನಾಡಿನಲ್ಲಿ ಬೆಳೆಸಿದ ಕೃಷಿಗೆ ರೋಗಗಳು ಜಾಸ್ತಿ, ಕಾಡಿನಲ್ಲಿ ಬೆಳೆದ ಸಸ್ಯಗಳು ತುಂಬಾ ಆರೋಗ್ಯವಂತವಾಗಿರುತ್ತದೆ ಹಾಗೆಯೇ ಶ್ರೀ ಭಾರತೀ ವಿದ್ಯಾಪೀಠವು ಆರೋಗ್ಯವಂತ ಶಾಲೆಯಾಗಿದೆ.

ಗುರುಕೃಪೆಯ ಗಾಳಿ ಬೀಸಿದ್ದರಿಂದ ಇಲ್ಲಿನ ಮಕ್ಕಳು ಕೂಡಾ ಆರೋಗ್ಯವಂತರಾಗಿದ್ದಾರೆ. ಇಂತಹ ಶಾಲೆಯಲ್ಲಿ ಬೆಳೆದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ. ಕನ್ನಡವ ಹುಡುಕುವ ನಾಡಲ್ಲಿ ಕನ್ನಡದ ದೀಪ ಬೆಳಗಲಿ, ಮಕ್ಕಳು ನಾಡಿನ ಆಸ್ತಿಯಾಗಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ನೂತನ ಕಟ್ಟಡಕ್ಕೆ ದೇಣಿಗೆಯನ್ನಿತ್ತು ಮಾದರಿಯಾದರು, ಅನೇಕ ಮಂದಿ ಹೆತ್ತವರು ಹಾಗೂ ಊರವರು ಕೂಡಾ ದೇಣಿಗೆಯನ್ನಿತ್ತರು.
ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಅವರು ಶಾಲೆಯ ಪರವಾಗಿ ಶ್ರೀಗಳವರಿಗೆ ಫಲಕಾಣಿಕೆಯನ್ನಿತ್ತರು.
ಡಾ| ವೈ.ವಿ.ಕೃಷ್ಣಮೂರ್ತಿ ಸಭಾಪೂಜೆಗೈದರು.

ಮುಳ್ಳೇರಿಯ ಮಂಡಲಾಧ್ಯಕ್ಷರಾದ ಬಿ.ಜಿ. ರಾಮಭಟ್, ಎಂ.ಬಿ. ಮುಳಿಯ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ೧೦೦೦ಕ್ಕಿಂತಲೂ ಮಿಕ್ಕಿ ಜನರು ಭಾಗವಹಿಸಿದ್ದು ಶಾಲೆಯ ಬಗ್ಗೆ ಊರವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತಿತ್ತು.

ಚಿತ್ರಗಳು :
ಅಶ್ವಿನಿ ಸ್ಟುಡಿಯೋ, ಬದಿಯಡ್ಕ (ಶ್ಯಾಮಪ್ರಸಾದ ಸರಳಿ)

Facebook Comments