ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಶ್ರೀಗುರು ಪರಂಪರೆಯಲ್ಲಿ ನಮ್ಮನ್ನು ಅನುಗ್ರಹಿಸುತ್ತಾ ಬಂದಿರುವ ಎಲ್ಲ ಗುರುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ.

ಹರೇರಾಮ.

~

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಜ್ಞಾನಸುಮ 1

ಧರ್ಮಭೂಮಿ ಭಾರತ

ಪ್ರೊ. ಟಿ. ಕೇಶವ ಭಟ್ಟ, ಎಂ.ಎ. ವಿದ್ವಾನ್, ವಿಶಾರದ

ಭೌತಿಕ ಆಧ್ಯಾತ್ಮಿಕ ಕಾರಣಗಳಿಂದ ಮತ್ತು ಪ್ರಾಚೀನೇತಿಹಾಸದ ನೆಲೆ ಬೆಲೆಗಳಿಂದ ವಿಶ್ವದಲ್ಲೇ ಮಹೋನ್ನತಿಗೊಂಡಿರುವ ದೇಶ – ಭಾರತ. ಈ ಸತ್ಯವನ್ನು ಅರ್ಥಮಾಡಿ ತಿಳಿದುಕೊಂಡ ವಿದ್ವಾಂಸರ ಸಂಖ್ಯೆ ಈಗೀಗ ವಿರಳ. ಅದಕ್ಕೆ ಕಾರಣ, ಅಜ್ಞಾನದ ಆವರಣ ಹಾಗೂ ವಿದೇಶೀಯರ ಹೇಳಿಕೆಗಳ ಅಧಿಕ ಪ್ರಚಾರದ ಪೂರ್ವಗ್ರಹವನ್ನು ಅರ್ಥಮಾಡಿಕೊಳ್ಳದುದು ಎನ್ನಬಹುದು. ಆದುದರಿಂದ ಸತ್ಯಾಂಶಗಳನ್ನು ಪರಿಮಿತಿಯಲ್ಲಿ ಪ್ರಕಟಪಡಿಸುವುದು ಇಲ್ಲಿ ಉದ್ದೇಶ. ಭಾರತ ಮತ್ತು ಹಿಂದು ಎಂಬ ನಾಮ ಸಂಜ್ಞೆಗಳಂತೆಯೇ ‘ಧರ್ಮ’ಎಂಬ ಅರ್ಥವತ್ತಾದ ತತ್ತ್ವದ ನೆಲೆಯಾಗುಳ್ಳ ದೇಶ ಬೇರೆ ಯಾವುದಿದೆ? ಗುರುತಿಗಾಗಿ ಸ್ಥಳನಾಮವಿರಬೇಕೆಂಬ ದೃಷ್ಟಿಯಿಂದ ಹೆಸರಾಂತ ದೇಶಗಳು ಅವೆಷ್ಟೋ ಇರಬಹುದು. ಭರತ ಚಕ್ರವರ್ತಿ ಆಳಿದ ದೇಶವಾಗಿ ಭಾರತ ಹೆಸರುಗೊಂಡಿತೆಂಬುದು ಒಂದು ಐತಿಹಾಸಿಕ ಸತ್ಯ, ಅವನ ವಂಶಜನೆಂಬ ಅರ್ಥದಲ್ಲಿ ಅರ್ಜುನನನ್ನು ‘ಭಾರತ’ ಎಂದು ಶ್ರೀಕೃಷ್ಣನು ಸಂಬೋಧಿಸಿರುವುದನ್ನು ನಾವು ಭಗವದ್ಗೀತೆಯಲ್ಲಿ ಕಾಣುತ್ತೇವೆ. ತಾತ್ತ್ವಿಕಾರ್ಥ ಬೇರೆಯಿದೆ – ‘ಭಾ- ದೀಪ್ತೌ, ಭಾ ಭುವ್ಯಲಂಕೃತೌ ದೀಪ್ತೌ ಎಂದಿರುವ ಪ್ರಕಾರ – ಪ್ರಕಾಶ, ಪ್ರತಿಭೆ, ಜ್ಞಾನ ಎಂಬ ಅರ್ಥಗಳಿವೆ. ‘ಭಾಯಾಂ ರತಃ’ ಭೌತಿಕ ಆಧ್ಯಾತ್ಮಿಕ ಜ್ಞಾನಪ್ರಕಾಶದಲ್ಲಿ ತತ್ಪರನು ಎಂಬ ಅರ್ಥ ಹೊಳೆಯುತ್ತದೆ. ಇದು ‘ಧರ್ಮ’ ಎಂಬ ಶಬ್ಧಾರ್ಥದ ಚೌಕಟ್ಟಿನಲ್ಲಿಯೇ ಬರುತ್ತದೆ. ಭಾರತ ದೇಶದಲ್ಲೇ ರೂಪುಗೊಂಡ ವೈದಿಕ, ಜೈನ, ಬೌದ್ಧ, ಸಿಕ್ಖ, ವೀರಶೈವ – ಎಂಬಿವೆಲ್ಲವೂ ಧರ್ಮಾಭಿಖ್ಯೆಯನ್ನು ತಾಳಿದ್ದರೂ, ಅವುಗಳ ಆಚಾರವಿಧಿಗಳಲ್ಲಿ ವ್ಯತ್ಯಾಸಗಳಿದ್ದರೂ, ಅವು ಪ್ರತಿಪಾದಿಸುವ ಮೂಲತತ್ತ್ವಗಳು ಧರ್ಮದ ವ್ಯಾಖ್ಯೆಗೊಳಗಾಗುತ್ತವೆ. ವೇದಗಳು, ಉಪನಿಷತ್ತುಗಳು, ಪುರಾಣಗಳು, ರಾಮಾಯಣ, ಮಹಾಭಾರತ, ಇನ್ನಿತರ ಮಹಾಕಾವ್ಯಗಳು ಮಾನವರಿಗೆ ಧರ್ಮಪರಿಜ್ಞಾನವನ್ನು ಮಾಡಿಕೊಡುವ ಗುರಿಯನ್ನೇ ಇಟ್ಟುಕೊಂಡಿವೆ. ಪರಮಾತ್ಮನ ಅವತಾರಗಳು ಧರ್ಮಸಂಸ್ಥಾಪನೆಗಾಗಿಯೇ ಇರುತ್ತವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅದನ್ನೇ ಹೇಳಿದ್ದಾನೆ –

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || (4-7)

ಅಂದರೆ ಧರ್ಮಕ್ಕೆ ಗ್ಲಾನಿ (ಕ್ಷೀಣತೆ, ಅಳಿವು) ಬಂದಾಗ ಅಧರ್ಮಕ್ಕೆ ಏಳಿಗೆಯುಂಟಾದಾಗ ಸರಿಪಡಿಸುವುದಕ್ಕಾಗಿ ನನ್ನನ್ನು ಸೃಷ್ಟಿಸಿಕೊಳ್ಳುವೆನು. ಸಾಧುಗಳ ರಕ್ಷಣೆ, ದುಷ್ಟರ ನಾಶ, ಧರ್ಮಸಂಸ್ಥಾಪನೆ ಇವೇ ನನ್ನ ಅವತಾರಗಳ ಉದ್ದೇಶವೆಂದು ಹೇಳಿದ್ದಾನೆ. ಸ್ವತಃ ಪರಮಾತ್ಮನು ಧರ್ಮಕ್ಕೆ ಅದೆಂತಹ ಪ್ರಾಶಸ್ತ್ಯ ನೀಡಿರುವನೆಂಬುದು ಇದರಿಂದ ಗೊತ್ತಾಗುವುದು. ಧರ್ಮಾನುವರ್ತಿಗಳಾದ ಭಾರತೀಯರ ನಾಗರೀಕತೆ ಸಭ್ಯತೆಗಳು ಊಹಾತೀತವೆನಿಸುವಷ್ಟು ಪ್ರಾಚೀನತೆಯುಳ್ಳವು. ಕ್ರಿ.ಪೂ. ಒಂದು ಸಾವಿರ ವರ್ಷಗಳ ಹಿಂದೆ, ಆಂಗ್ಲೇಯರೇ ಮುಂತಾದ ವಿದೇಶೀಯರು ವಾಸಕ್ಕೆ ಮನೆ ಮಾಡಲರಿಯದೆ, ಬಟ್ಟೆ ತಯಾರಿಸಲರಿಯದೆ, ಬೇಯಿಸಿ ಉಣಲರಿಯದೆ, ವನ್ಯ ಜೀವಿಗಳಂತೆ ಅಲೆಯುತ್ತ ಪ್ರಾಣಿಗಳ ಹಸಿಯ ಮಾಂಸ ತಿನ್ನುತ್ತಿದ್ದರೆಂದು ಅವರ ಇತಿಹಾಸ ಹೇಳುತ್ತದೆ. ಅದೇ ಇತಿಹಾಸವನ್ನು ಭಾರತೀಯರಿಗೂ ಅನ್ವಯಿಸುತ್ತಿರುವುದು ಅಜ್ಞಾನವೇ ಸರಿ. ಭಾರತದಲ್ಲಿ ಕ್ರಿಸ್ತಪೂರ್ವದ ದ್ವಾಪರ, ತ್ರೇತಾ, ಕೃತಯುಗಗಳಲ್ಲಿ ಜನರು ವೇದವಿದ್ಯಾನಿಪುಣರಾಗಿ, ವಸ್ತ್ರಧಾರಿಗಳಾಗಿ ಹಳ್ಳಿ, ಪಟ್ಟಣ, ನಗರವಾಸಿಗಳಾಗಿ ಶಿಷ್ಟರಾಗಿ ಲೋಕಕ್ಕೆ ಅರಿವಿನ ಬೆಳಕನ್ನು ಬೀರುತ್ತಿದ್ದುದಕ್ಕೆ ಆಧಾರಗಳಿವೆ. ಸ್ಮೃತಿಶ್ಲೋಕವಿದು –

ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ ||

ಅಂದರೆ – ಪೃಥ್ವಿಯಲ್ಲಿಯ ಇತರ ದೇಶಗಳವರು ಭಾರತೀಯರ ವಿದ್ಯೆ, ಸಂಸ್ಕೃತಿ, ಜ್ಞಾನ, ಕಲೆಗಳಿಗೆ ಮನಸೋತು ಇಲ್ಲಿಗೆ ಬಂದು ಇಲ್ಲಿಯ ಅಗ್ರಜನ್ಮರಿಂದ (ಬ್ರಾಹ್ಮಣವಿದ್ವಾಂಸರಿಂದ) ತಮ್ಮ ನಡತೆಯ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು. ಈ ಕಲಿಯುಗದಲ್ಲಿ ಈ ದೇಶವನ್ನಾಳಿದ ಪಾಶ್ಚಾತ್ಯರು, ಇಲ್ಲಿಯ ಪ್ರಾಚೀನತೆಗೆ ಬೆಲೆ ಕೊಡದೆ, ತಮ್ಮ ಹೇಳಿಕೆಗಳೇ ನಿಜವೆಂಬಂತೆ ಇತಿಹಾಸರಚನೆ ಮಾಡಿದರು. ಆರ್ಯರು ಉತ್ತರದಿಕ್ಕಿನಿಂದ ಆಕ್ರಮಣಕಾರಿಗಳಾಗಿ ಬಂದು ರಾಜ್ಯವಾಳಿದರೆಂದು ಕಥೆಕಟ್ಟಿದ್ದಾರೆ. ಪರದಾಸ್ಯಭಾವದ ನಮ್ಮ ಜನರು ಅದನ್ನೇ ನಂಬಿದ್ದಾರೆ. ಪರಿಶೀಲಿಸಿದಲ್ಲಿ ಅವರೆಂದಿರುವಂತೆ ‘ಆರ್ಯ’ ಎಂಬುದೊಂದು ಜನಾಂಗವೆಂಬುದಕ್ಕೆ ಯಾವ ಆಧಾರವೂ ಇಲ್ಲ. ‘ಆರ್ಯ’ ಎಂದರೆ ಒಳ್ಳೆಯ ನಡತೆಯವನು, ಶ್ರೇಷ್ಟನು ಎಂದರ್ಥ. ‘ವೃತ್ತೇನ ಹಿ ಭವತ್ಯಾ…. ನ ಧನೇನ ನ ವಿದ್ಯಯಾ’ ಎನ್ನಲಾಗಿದೆ. ಒಂದು ಸುಭಾಷಿತದಲ್ಲಿ ಆರ್ಯನ ಹತ್ತು ಗುಣಗಳನ್ನು ಹೇಳಿದೆ –

ಶಾಂತಃ ತಿತಿಕ್ಷುಃ ದಾಂತಶ್ಚ ಸತ್ಯವಾದೀ ಜಿತೇಂದ್ರಿಯಃ |
ದಾತಾ ದಯಾಳುಃ ನಮ್ರಶ್ಚ ಆರ್ಯಃ ಸ್ಯಾದಷ್ಟಭಿರ್ಗುಣೈಃ ||

ಅಂದರೆ – ಶಾಂತತೆ, ಸಹನಶೀಲತೆ, ಸುಶಿಕ್ಷಣ, ಸತ್ಯವನ್ನೇ ಹೇಳುವಿಕೆ, ಇಂದ್ರಿಯಜಯತ್ವ, ದಾನಗುಣ, ದಯಾಪರತೆ, ವಿನಯ ಇವೇ ಆ ಎಂಟು ಸದ್ಗುಣಗಳು. ಅಂತಹ ಆರ್ಯರ ಮೂಲಭೂಮಿ ಭಾರತವೇ ಸರಿ. ಆ ಗುಣಗಳೆಲ್ಲವೂ ಧರ್ಮದ ಲಕ್ಷಣಗಳೇ ಆದುದರಿಂದ ಸರ್ವ ಮಾನವರಿಗೂ ಅನುಸರಣೀಯವಾದುವು. ಅವುಗಳ ನೆಲೆಯಾದ ಭಾರತ ಧರ್ಮಭೂಮಿ ಮಾತ್ರವಲ್ಲ, ಪುಣ್ಯಭೂಮಿ. ಈ ದೇಶದಲ್ಲಿ ಜನಿಸಿ ಬಂದ ಪುಣ್ಯವಂತರು, ಆದರ್ಶ ಸಾದ್ವಿಯರು, ಇಲ್ಲಿರುವ ಪುಣ್ಯಸ್ಥಳಗಳು, ಪುಣ್ಯಕರ ದೇವಾಲಯಗಳು, ಪುಣ್ಯತೀರ್ಥಗಳು, ಪುಣ್ಯನದಿಗಳು ಅಗಣಿತ. ಈ ದೇಶದ ಮಣ್ಣಿನ ಕಣಕಣವೂ ಪವಿತ್ರವಾಗಿದೆ. ಆದುದರಿಂದ ಪುಣ್ಯಭೂಮಿ ಎನ್ನಬಹುದಾದರೂ ವೇದದಲ್ಲಿ ಪುಣ್ಯಭೂಮಿ ಲಕ್ಷಣವನ್ನು ಹೀಗೆ ಹೇಳಲಾಗಿದೆ –

ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಂ ದೇಶಂ ಪುಣ್ಯಂ ಪ್ರಜ್ಞೇಯಂ ಯತ್ರ ದೇವಾಃ ಸಹಾಗ್ನಿನಾ ||(ಯಜು: 20-25)

ಅಂದರೆ – ಬ್ರಹ್ಮಶಕ್ತಿ, ಕ್ಷಾತ್ರಶಕ್ತಿ ಇವೆರಡೂ ಪರಸ್ಪರಪೋಷಕವಾಗಿ ಇರತಕ್ಕ ದೇಶವನ್ನು ಪುಣ್ಯದೇಶವೆಂದು ತಿಳಿಯಬೇಕು. ಅಷ್ಟೇ ಅಲ್ಲ, ಅಲ್ಲಿಯ ಬ್ರಾಹ್ಮಣರು ಲೋಕಕಲ್ಯಾಣಕ್ಕಾಗಿ ಯಾವಾಗಲೂ ಅಗ್ನಿಕಾರ್ಯಗಳನ್ನು ಮಾಡುವವರಾಗಿರುತ್ತಾರೆ. ಭಗವದ್ಗೀತೆಯ ಕೊನೆಯ ಶ್ಲೋಕದಲ್ಲಿ ಇದೇ ಅರ್ಥಚ್ಛಾಯೆಯನ್ನು ಕಾಣಬಹುದು –

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ||

ಯೋಗೇಶ್ವರನಾದ ಕೃಷ್ಣನು ಬ್ರಹ್ಮಶಕ್ತಿಯ ಪ್ರತೀಕ; ಧನುರ್ಧಾರಿಯಾದ ಅರ್ಜುನನು ಕ್ಷಾತ್ರಶಕ್ತಿಯ ದ್ಯೋತಕ. ನೀತಿಪ್ರಬುದ್ಧವಾಗಿ ಜ್ಞಾನಪ್ರದವಾಗಿ ಅಹಿಂಸಾತ್ಮಕವಾದುದು ಬ್ರಹ್ಮಶಕ್ತಿಯಾದರೆ, ಆ ನೀತಿಗೆ ಬಾಗದ ಅಸುರೀಶಕ್ತಿಯನ್ನು ಸದೆಬಡಿಯಲು, ಬ್ರಹ್ಮಶಕ್ತಿ ಒಡಗೂಡಿದ ಕ್ಷಾತ್ರಶಕ್ತಿ ಬೇಕು. ಅದು ಅಂದಿಗೂ ಇಂದಿಗೂ ಎಂದೆಂದಿಗೂ ಭಾರತಕ್ಕೆ ಅವಶ್ಯವಾದ ಧರ್ಮನೀತಿಯಾಗಿದೆ. ಧರ್ಮ ಎಂಬುದು ಒಂದೇ ಆದರೂ ಬಹುಮುಖವಾದುದು. ಲೋಕಕ್ಕೆ ಬೆಳಕುಕೊಡುವ ಸೂರ್ಯನೊಬ್ಬನೇ ಆದರೂ ಅವನ ಕಿರಣಗಳು ಅನಂತ. ಸಮಗ್ರ ವಿಶ್ವಕ್ಕೆ ಹಾಗೂ ವಿಶ್ವದ ಸರ್ವ ಚರಾಚರಗಳ ಅಸ್ತಿತ್ವಕ್ಕೆ ಆಧಾರವಾದುದು – ಧರ್ಮ. “ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ” ಎನ್ನಲಾಗಿದೆ. ಸಂಸ್ಕೃತದ ಈ ಶಬ್ಧಕ್ಕೆ ಸಮಾನಾರ್ಥಕ ಶಬ್ಧ ಬೇರೆ ಯಾವ ಭಾಷೆಯಲ್ಲಿಯೂ ಇಲ್ಲ. ಇಂಗ್ಲೀಷಿನಲ್ಲಿ ರಿಲೀಜನ್ (Religion) ಎಂಬುದು ನಂಬಿಕೆಯ ಹಾಗೂ ದೇವರ ಆರಾಧನೆಯ ವಿಶಿಷ್ಟ ಮನೋಭಾವವಾಗಿದೆ. ಫಾರ್ಸಿಭಾಷೆಯ ‘ಮಜಹಬ್’ ಎಂಬುದಕ್ಕೆ ‘ಸಂಪ್ರದಾಯ ಆಚರಣೆ’ ಎನ್ನಲಾಗಿದೆ. ಧರ್ಮ ಎಂಬುದು ‘ಧಾರಣಾತ್ ಧರ್ಮಮಿತ್ಯಾಹುಃ’ ಎಂಬ ವಿವರದಂತೆ ಧಾರಣೆ ಮಾಡುವಂತಹದು ಆಗಿರುತ್ತದೆ. ಪಂಚಭೂತಗಳಿಗೆ ಒಂದೊಂದಕ್ಕೂ ಆಧಾರವಾದ ಧರ್ಮವಿದೆ. ಬೆಂಕಿ ಸುಡುವುದು, ನೀರು ಹರಿಯುತ್ತಿರುವುದು, ಗಾಳಿ ಬೀಸುವುದು ಇತ್ಯಾದಿಗಳು ಅವುಗಳ ಧರ್ಮ ಎನ್ನಬಹುದು. ಧರ್ಮವಿಲ್ಲದುದರ ಅಸ್ತಿತ್ವವಿರದು. ಹಾಗೆಯೇ ಧರ್ಮವನ್ನಳಿದರೆ, ಮನುಷ್ಯನು ಉಳಿಯನು. ಧರ್ಮವು ಲೋಕಸೃಷ್ಟಿಯಂತೆ ಭಗವಂತನಿಂದಲೇ ಆದ ಸೃಷ್ಟಿ. ಅದನ್ನೇ ಭಾಗವತದಲ್ಲಿ ಹೀಗೆ ಹೇಳಿದೆ –

ಧರ್ಮಂ ತು ಸಾಕ್ಷಾತ್ ಭಗವತ್ ಪ್ರಣೀತಂ |
ನ ವೈ ವಿದುರ್ ಋಷಯೋ ನಾಪಿ ದೇವಾಃ |
ನ ಸಿದ್ಧಮುಖ್ಯಾಃ ಅಸುರಾ ಮನುಷ್ಯಾಃ |
ಕುತಶ್ಚ ವಿದ್ಯಾಧರ ಚಾರಣಾದಯಃ (6-3-19)

ಹಾಗಿದ್ದರೆ ಜಿನ, ಬುದ್ಧ, ಶಂಕರ, ಮಧ್ವ, ರಾಮಾನುಜ, ಬಸವಾದಿಗಳು ಮಾಡಿದುದೇನು? ಎಂಬ ಪ್ರಶ್ನೆ ಸಹಜ. ಅವರೆಲ್ಲರೂ ಆಯಾ ಕಾಲದಲ್ಲಿ ಧರ್ಮಮಾರ್ಗವನ್ನು ತಪ್ಪಿ ನಡೆದವರಿಗೆ ದಾರಿ ತೋರಿಸಿ ಧರ್ಮೋದ್ಧಾರ ಮಾಡಿದರು. ಈಗಲೂ ಈ ಕಾರ್ಯವನ್ನು ಅನೇಕ ಪೀಠಾಧಿಪತಿಗಳು, ಮಠಪತಿಗಳು, ದಾಸರು, ಶರಣರು, ಜ್ಞಾನಿಗಳು, ವಿದ್ವಾಂಸರು ತಂತಮ್ಮ ನೆಲೆಗಳಲ್ಲಿದ್ದು ಮಾಡುತ್ತಿದ್ದಾರೆ ಎನ್ನಲಡ್ಡಿಯಿಲ್ಲ. “ಯ ಏವ ಶ್ರೇಯಸ್ಕರಃ ಸ ಏವ ಧರ್ಮಶಬ್ದೇನೋಚ್ಯತೇ” ಅಂದರೆ – ಯಾವುದು ಶ್ರೇಯಸ್ಸಿಗೆ ಸಾಧನವಾಗುವುದೋ ಅದು ಧರ್ಮ ಎಂದು ಜೈಮಿನಿ ಕೃತ ಮೀಮಾಂಸಾದರ್ಶನದಲ್ಲಿ ಹೇಳಿದೆ. ಧರ್ಮನಿಷ್ಠ ರಾಜರು ಆಳುತ್ತಿದ್ದ ಕಾಲದಲ್ಲಿ ಪ್ರಜೆಗಳೂ ರಾಜರಂತೆ ಧರ್ಮಿಷ್ಠರಾಗಿದ್ದರು. ಮಹಾಭಾರತದಲ್ಲಿ ಹೀಗೆ ಹೇಳಿದೆ –

ರಾಜ್ಞಿ ಧರ್ಮಿಣಿ ಧರ್ಮಿಷ್ಠಾಃ ಪಾಪೇ ಪಾಪಪರಾಯಣಾಃ |
ರಾಜಾನಮನುವರ್ತಂತೇ ಯಥಾ ರಾಜಾ ತಥಾ ಪ್ರಜಾಃ ||

ರಾಜರ ಆಳ್ವಿಕೆಯಿಲ್ಲದಿರುವ ಈ ಕಾಲದಲ್ಲಿ ನಾವು ನಾವೇ ಆರಿಸಿರುವ ಮಂತ್ರಿಗಳಲ್ಲಿ ಅವರ ನಡತೆಯಲ್ಲಿ ಧರ್ಮನಿಷ್ಠೆಯನ್ನು ಪ್ರತೀಕ್ಷಿಸಬೇಕು. ಅದಿಲ್ಲದಿರುವುದೇ ಕಾಣಿಸುವುದಿಲ್ಲವೇ? ಇನ್ನೂ ಅತಿ ಪ್ರಾಚೀನತೆಯ ಕಡೆಗೆ – ಅಂದರೆ ರಾಜರೇ ಇಲ್ಲದಿದ್ದ ಒಂದು ಕಾಲದಲ್ಲಿ ಧರ್ಮವೇ ಸರಿಯಾಗಿ ನೆಲೆಗೊಂಡಿದ್ದ ಸತ್ಯಯುಗದ ನಮ್ಮ ದೇಶದಲ್ಲಿ ಕಳವು, ಕೊಲೆ, ಅತ್ಯಾಚಾರ, ವಂಚನೆ, ಲಂಚಗಳು ಇರಲಿಲ್ಲವಂತೆ. ಅಂತಹ ಒಂದು ಸಂದರ್ಭವನ್ನು ಮಹಾಭಾರತದಲ್ಲಿ ಹೀಗೆ ಹೇಳಿದೆ –

ನ ರಾಜ್ಯಂ ನೈವ ರಾಜಾಸೀತ್ ನ ದಂಡೋ ನ ಚ ದಾಂಡಿಕಃ |
ಧರ್ಮೇಣೈವ ಪ್ರಜಾಃ ಸರ್ವೇ ರಕ್ಷಂತಿ ಸ್ಮ ಪರಸ್ಪರಮ್ ||

ಅಂದರೆ – ಆ ಕಾಲದಲ್ಲಿ ರಾಜ್ಯವನ್ನಾಳುವವರ ಸೌಕರ್ಯಕ್ಕಾಗಿ ರಾಜ್ಯ ವಿಭಜನೆ ಇರಲಿಲ್ಲ. ರಾಜನೂ ಇರಲಿಲ್ಲ. ತಪ್ಪಿ ನಡೆದವರಿಗೆ ವಿಧಿಸಲಾಗುವ ದಂಡನೆಯೂ ಇರಲಿಲ್ಲ. ದಂಡಿಸುವವನೂ ಇರಲಿಲ್ಲ. ಅವುಗಳ ಅವಶ್ಯಕತೆ ಇರುತ್ತಿದ್ದಿಲ್ಲವೆಂದು ಅರ್ಥ. ಪ್ರಜೆಗಳೆಲ್ಲರೂ ಧರ್ಮದ ನೆಲೆಯಿಂದ ಕರ್ತವ್ಯಬುದ್ಧಿಯಿಂದ ಒಬ್ಬರನ್ನೊಬ್ಬರು ರಕ್ಷಣೆ ಮಾಡುತ್ತಿದ್ದರು. ಮುಂದೆ ಮಹಾರಾಜರು ಆಳುತ್ತಿದ್ದ ಕಾಲದಲ್ಲಿ, ಅವರು ಧರ್ಮತತ್ಪರರಾಗಿದ್ದರಿಂದ ಎಲ್ಲಿಯೂ ಅನ್ಯಾಯವಿರುತ್ತಿದ್ದಿಲ್ಲ. ಅಂತಹ ಆದರ್ಶರಾಜ್ಯವಾಗಿ ಹೆಸರಾದುದು ತ್ರೇತಾಯುಗದಲ್ಲಿ ‘ರಾಮರಾಜ್ಯ’; ದ್ವಾಪರದಲ್ಲಿ ‘ಧರ್ಮರಾಜ್ಯ’. ಗಾಂಧೀಜಿಯವರು ನಮಗೆ ಸ್ವರಾಜ್ಯ ಬಂದೊಡನೆ ರಾಮರಾಜ್ಯವಾಗುವ ಕನಸು ಕಂಡಿದ್ದರು. ಅಂತಹ ರಾಮರಾಜ್ಯದಲ್ಲಿ ಕೋರ್ಟುಕಛೇರಿಗಳಾಗಲೀ, ಸೈನ್ಯವಾಗಲೀ, (ಪೋಲೀಸು) ಆರಕ್ಷಕದಳವಾಗಲೀ ಅವಶ್ಯವಿಲ್ಲವೆಂದಿದ್ದರು. ಆದರೆ ಈ ಕಾಲದ ರಾಜಕೀಯ ಧುರೀಣಂಮನ್ಯರಿಗೆ ರಾಮರಾಜ್ಯದ ಉಚ್ಚಾರಣೆಯೇ ಆಗದು! ಅವರಿಗದು ಜಾತೀಯತೆ. ಧರ್ಮಕ್ಕೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂಬುದು ಗಿಳಿಪಾಠ. ಹಾಗೆಂದುಕೊಂಡೇ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವುದೇನು! ಗಂಧ ಕುಂಕುಮ ಬಳಿದ ಮುಖ ತೋರಿಸುವುದೇನು! ಚಂಡಿಹೋಮ ಮುಂತಾದವನ್ನು ಬ್ರಾಹ್ಮಣರಿಂದಲೇ ಮಾಡಿಸುವುದೇನು! ಅದನ್ನೇ ಅವರು ಇತರರಿಂದ ಏಕೆ ಮಾಡಿಸುವುದಿಲ್ಲ? ಧರ್ಮವೆಂಬುದು ಬಾಹ್ಯ ಪ್ರದರ್ಶನಕ್ಕಿಂತ ಹೆಚ್ಚಾಗಿ ಮನೋಬುದ್ಧಿಗಳಲ್ಲಿ ಬೇರೂರಿ, ಚಾರಿತ್ರ್ಯಶುದ್ಧಿಯಾಗಬೇಕಾದುದು. ಧರ್ಮವು ರಾಜಕೀಯದಲ್ಲಿರಬಾರದೆಂಬವರು ಗಾಂಧಿದ್ರೋಹಿಗಳು! ಗಾಂಧಿಯವರು ಹೇಳಿರುವುದು ಹೀಗಿದೆ -“ಧರ್ಮಕ್ಕೂ ರಾಜಕೀಯಕ್ಕು ಸಂಬಂಧವಿಲ್ಲವೆನ್ನುವವರಿಗೆ ಧರ್ಮವೆಂದರೇನೆಂದು ಗೊತ್ತೇ ಇಲ್ಲೆ. ಧರ್ಮವಿಲ್ಲದೆ ಬದುಕುವೆನೆನ್ನುವವನು ಮೂಗಿಲ್ಲದೆ ಮೂಸುತ್ತೇನೆ ಎಂಬಂತಾಗುತ್ತದೆ” ಎಂದಿದ್ದಾರೆ. ಇಂದಿನ ಬುದ್ಧಿಮಾಂದ್ಯದ ರಾಜಕೀಯ ಧುರೀಣಂಮನ್ಯರಿಗೆ ಹಿಂದು, ಹಿಂದುತ್ವ ಎಂಬ ಶಬ್ಧ ಕೇಳಿದರಾಗದು. ಆದರೆ, ಭಾಷಣ ಮಾಡಿ ಕೊನೆಗೆ ‘ಜೈ ಹಿಂದ್’ ಎಂದರೆ, ಹಿಂದುತ್ವಕ್ಕೆ ಜೈಕಾರ ಮಾಡಿದಂತಾಯಿತೆಂಬುದು ಅವರ ಮಂದಬುದ್ಧಿಗೆ ಹೊಳೆಯದು. ಮನುಸ್ಮೃತಿಯಲ್ಲಿ ಧರ್ಮ ಎಂಬುದಕ್ಕೆ ಹತ್ತು ಲಕ್ಷಣಗಳನ್ನು ಹೀಗೆ ಹೇಳಿದೆ-

ಧೃತಿಃ ಕ್ಷಮಾ ದಮೋsಸ್ತೇಯಃ ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||

ಧೃತಿ ಎಂದರೆ ಧೃಢತೆ ಅಥವಾ ಧೈರ್ಯ. ಸನ್ಮಾರ್ಗದಲ್ಲಿ ಮುನ್ನಡಿಯಿಡುವಾಗ ದುಷ್ಟರಿಂದ ಮೂರ್ಖರಿಂದ ಬಾಧೆ ಬರುವುದುಂಟು. ಅಂತಹ ಸಂದರ್ಭದಲ್ಲಿ ಬೆದರದೆ ಕರ್ತವ್ಯಚ್ಯುತಿಯಾಗದಂತೆ ವರ್ತಿಸುವುದೇ ಧೃತಿ. ಕ್ಷಮಾ ಎಂದರೆ ಮಾನಾಪಮಾನ, ಸ್ತುತಿನಿಂದೆ, ಲಾಭನಷ್ಟ ಪರಿಸ್ಥಿತಿಗಳಲ್ಲಿ ಇರಬೇಕಾಗುವ ಸಹನೆ. ಅಧರ್ಮದ ಭಾವನೆಗಳನ್ನು ಅದುಮಿ ಉದಾತ್ತ ಸಂಗತಿಗಳಲ್ಲಿ ಮಗ್ನವಾಗುವುದೇ ದಮ. ಅಸ್ತೇಯ ಎಂದರೆ ಕಳವು ಮಾಡದಿರುವುದು ಮಾತ್ರವಲ್ಲ, ಲೋಭಪರವಶತೆಯಿಂದ ಅವಶ್ಯಕ್ಕಿಂತ ಅಧಿಕ ಸಂಪತ್ತನ್ನು ಕೂಡಿಡುವುದು. ಕೂಡಿಸಿದುದನ್ನು ಸದ್ವಿನಿಯೋಗ ಮಾಡದಿರುವುದು. ಶೌಚ ಎಂದರೆ ಅಂತರ್ಬಾಹ್ಯ ಶುಚಿತ್ವ. ಪಾಪಾಚಾರಮುಕ್ತತೆ ಮತ್ತು ಭಗವನ್ನಾಮಸ್ಮರಣೆ ಹಾಗೂ ಭಕ್ತಿ ಭಾವನೆ ಅಂತಃಶುಚಿತ್ವದ ಲಕ್ಷಣಗಳು. ಕಾಲ್ಮೊಗ ತೊಳೆಯುವುದು, ಸ್ನಾನ, ಎಂಜಲು – ಮಡಿ – ಮೈಲಿಗೆಗಳ ತತ್ತ್ವಪರಿಪಾಲನೆ ಬಹಿಶ್ಶುಚಿಯೆನಿಸುವುದು. ಏಳನೆಯದು “ಧೀಃ” ಅಂದರೆ ಬುದ್ಧಿಯುಕ್ತವಾಗಿ ತರ್ಕಿಸಿ, ಯೋಚಿಸಿ, ವಿವೇಕದಿಂದ ನಿಶ್ಚಯಿಸಿ, ಕೌಶಲಯುಕ್ತವಾಗಿ ಕಾರ್ಯವೆಸಗುವುದು. ಇದರಿಂದ ಧರ್ಮವೆಂಬುದು ಬರೇ ಕುರುಡು ನಂಬಿಕೆಯದಲ್ಲವೆಂದು ಸ್ಪಷ್ಟವಾಗುವುದಲ್ಲವೇ? ಇದನ್ನೇ ಸಮರ್ಥಿಸುವ ನೀತಿಸೂಕ್ತಿ ಹೀಗಿದೆ –

ಕಾರಣಾತ್ ಧರ್ಮಮನ್ವಿಷ್ಯೇತ್ ನ ಲೋಕಚರಿತಂ ಚರೇತ್ “

ಅಂದರೆ- ಸಕಾರಣವಾಗಿ ಧರ್ಮಸ್ವರೂಪವನ್ನು ಅನ್ವೇಷಿಸಬೇಕು. ಲೋಕದ ಜನರು ಅನುಸರಿಸಿಕೊಂಡು ಬಂದಿದ್ದಾರೆ – ಎಂಬುದು ಮಾತ್ರ ತನ್ನ ಅನುಸರಣೆಗೆ ಕಾರಣವೆಂಬಂತಾಗಬಾರದು. ಇಂತಹ ಬುದ್ಧಿಗುಣದಿಂದಲೇ ಮನುಷ್ಯನಿಗೆ ಸತ್ಸಂಗ, ಸದ್ಗ್ರಂಥಪಠಣ, ಮದ್ಯಮಾಂಸವರ್ಜನೆ, ಹೊಗೆಬತ್ತಿಯಂತಹ ಕೆಟ್ಟ ಚಟದ ನಿವಾರಣೆ ಉಂಟಾಗುವುವು. ‘ಸತ್ಯ’ ಎಂದರೆ ತ್ರಿಕರಣಶುದ್ಧ ಸದ್ವರ್ತನೆ. ಸತ್ಯವಿದ್ದರೆ ಎತ್ತಲೂ ಭಯವಿಲ್ಲ. ಸತ್ಯಮೇವಜಯತೇ ನಾನೃತಂ, ಸತ್ಯವೇ ದೇವರು ಎಂಬ ಸೂಕ್ತಿಗಳು ಅದರ ಹಿರಿಮೆಯನ್ನು ದ್ಯೋತಿಸುತ್ತವೆ. ಧರ್ಮಲಕ್ಷಣಗಳಲ್ಲಿ ಹತ್ತನೆಯದು – ಅಕ್ರೋಧ – ಕೋಪಿಸದಿರುವುದು. ಆದರೂ ಅಧರ್ಮ, ಅನಾಚಾರ, ಗೋವಧೆ, ಪ್ರಾಣಿಹಿಂಸೆ, ಕಳ್ಳತನ, ಧರ್ಮದ್ರೋಹ, ದೇಶದ್ರೋಹಗಳನ್ನು ಪ್ರತಿಭಟಿಸುವ ಸಂಯಮಿತ ಕ್ರೋಧವು ಅಧರ್ಮವೆನಿಸದು. ಅದು ಬುದ್ಧಿಯುಕ್ತಕಾರ್ಯದಲ್ಲಿ ಅಂತರ್ಗತವಾಗುವುದು. ಈ ದಶಲಕ್ಷಣಗಳ ಧರ್ಮವು ತ್ಯಾಜ್ಯವೇ? ಸಂಕುಚಿತವೇ? ಅಂಧವಿಶ್ವಾಸಗಳ ಪ್ರತೀಕವೇ? ವಿದ್ವೇಷ್ಯವೇ? ಭಗವದ್ಗೀತೆಯಲ್ಲಿ (ಅ. 12) ಭಕ್ತಿಯೋಗವನ್ನು ವಿವರಿಸಲಾಗಿದೆ. ಭಕ್ತನ ಲಕ್ಷಣಗಳಾಗಿ – ಯಾರನ್ನೂ ದ್ವೇಷಿಸದಿರುವುದು, ಗೆಳೆತನ, ಕರುಣೆ, ಗರ್ವವಿಲ್ಲದಿರುವುದು, ಸಹನೆ, ಸಂತುಷ್ಟಿ, ಶುಚಿತ್ವ, ಸಮಾನತೆ, ಕಾರ್ಯದಕ್ಷತೆ, ಬುದ್ಧಿಸ್ಥೈರ್ಯ ಮುಂತಾದ ಸದ್ಗುಣಗಳನ್ನು ಹೇಳಿ ಅವನ್ನು ಒಟ್ಟಾಗಿ ‘ಧರ್ಮ್ಯಾಮೃತಂ’ ಎನ್ನಲಾಗಿದೆ. ಇಂತಹ ಧರ್ಮವನ್ನು ನಿರಪೇಕ್ಷಕವೆಂಬ ರಾಜಕಾರಣಿಗಳಿಗೆ ತಿಳಿವು ಏನೂ ಇಲ್ಲವಲ್ಲಾ! ಎಂದು ನಾವು ವಿಷಾದಿಸಬೇಕಾಗುತ್ತದೆ. ಇನ್ನೀಗ ಧರ್ಮದ ನಿಧಿಯೆನಿಸುವ ಹಿಂದುತ್ವದ ವಿಚಾರವನ್ನೆತ್ತಿಕೊಳ್ಳೋಣ –

“ಹಿಂದು” ಎಂಬ ಶಬ್ಧ ಈ ರಾಷ್ಟ್ರದ, ಜನತೆಯ, ಧರ್ಮಸಂಸ್ಕೃತಿಗಳ ವಾಚಕವಾಗಿ ಪೂರ್ವಕಾಲದಿಂದಲೇ ಪ್ರಸಿದ್ಧವಾದುದು. ಇಂಗ್ಲಿಷರು ಇದನ್ನು ದೇಶವಾಚಕವಾಗಿ ‘ಇಂಡಿಯಾ’ ಎಂದೂ ದೇಶದ ಜನತೆಯ ಹಾಗೂ ದೇಶಕ್ಕೆ ಸಂಬಂಧಿಸಿದ ಎಂಬ ಅರ್ಥದಲ್ಲಿ ‘ಇಂಡಿಯನ್’ ಎಂದೂ ಪ್ರಚುರಗೊಳಿಸಿದ್ದಾರೆ. ಹಿಂದುಗಳಿಗೆ ಹಲವರಿಗೆ ಈ ಶಬ್ಧ ಸಂಕುಚಿತಾರ್ಥವಾಗಿ ಕಾಣಿಸಿದೆ. ಆದುದರಿಂದ ಈ ಶಬ್ಧಕ್ಕೆ ಜಾತೀಯತೆಯ ಬಣ್ಣವನ್ನು ಬಳಿದು ಅಲ್ಪಬುದ್ಧಿಯನ್ನು ಹಿರಿತನವೆಂಬಂತೆ ಮೆರೆಯಿಸುವ ಪ್ರವೃತ್ತಿ ಬಂದಿದೆ. ‘ಜೈ ಹಿಂದ್’ ಎನ್ನಲು ಹಿಂಜರಿಯರು; ಇದು ಬೌದ್ಧಿಕ ಭ್ರಷ್ಟಾಚಾರವೆಂದು ಅವರಿಗೆ ಎನಿಸದು. ಇಲ್ಲಿಯ ಮುಸಲ್ಮಾನರು ತಮ್ಮ ಪೂರ್ವಜರು ಹಿಂದುಗಳೇ ಆಗಿದ್ದರೆಂಬ ಇತಿಹಾಸದ ಸತ್ಯವನ್ನು ಒಪ್ಪುವರು. ರಾಷ್ಟ್ರೀಯತೆಯ ದೃಷ್ಟಿಯಿಂದ ತಾವು ಹಿಂದುಗಳೆಂದು ಒಪ್ಪಿಕೊಳ್ಳಲು ಹಿಂದುಗಳೇ ಆಗಿರುವ ಧುರೀಣಂಮನ್ಯರು ಬಿಡುವುದಿಲ್ಲ. ಇಂದಿಗೂ ಹಜ್ ಯಾತ್ರೆಗೆ ಇಲ್ಲಿಂದ ತೆರಳಿದ ಮುಸಲ್ಮಾನರನ್ನು ಅಲ್ಲಿಯ ಮುಸಲ್ಮಾನರು ಹಿಂದುಗಳೆಂದೇ ಗುರುತಿಸಿ ಕರೆಯುತ್ತಾರಂತೆ. (ಹೇಳಿದವರು ನನ್ನ ಗೆಳೆಯ ಉರ್ದು ಅಧ್ಯಾಪಕರು)

‘’ಹಿಂದು’ ಎಂಬುದು ಸಿಂಧು ಎಂಬ ಶಬ್ಧದ ಪ್ರಾಕೃತರೂಪವಾಗಿದೆ. ಭೌಗೋಳಿಕವಾಗಿ ಈ ದೇಶ ಉತ್ತರಭಾಗದ ಹಿಮಾಲಯದಲ್ಲಿ ಸಿಂಧುನದಿಯಿಂದ ಹಾಗೂ ಅದರ ಪೂರ್ವಧಾರೆಯೆನಿಸುವ ಬ್ರಹ್ಮಪುತ್ರದಿಂದ ಕೂಡಿದೆ. ದಕ್ಷಿಣದ ಮೇರೆಯಾಗಿ ಸಿಂಧು (ಅಂದರೆ ಸಾಗರ) ಇದೆ. ಹೀಗೆ ಸಿಂಧುವಿನಿಂದ ಆವೃತವಾಗಿ ‘ಸಿಂಧುಸ್ಥಾನ’ ಎಂಬುದೇ ಹಿಂದುಸ್ಥಾನವಾಗಿದೆ. ಹಿಂದುತ್ವದ ಲಕ್ಷಣ ಹಾಗೂ ಶಬ್ಧಾರ್ಥ ವಿವರಣೆ ಸುಮಾರು ಎಂಟನೆಯ ಶತಮಾನದಿಂದಲೇ ಪ್ರಚುರವಾಗಿದೆ. ‘ರಾಧಾಕಾಂತ ಕಲ್ಪದ್ರುಮ’ ಎಂಬ ಕೋಶದಲ್ಲಿ “ಹೀನಂ ದೂಷಯತಿ ಇತಿ ಹಿಂದುಃ ಸಾಧುಜಾತಿ ವಿಶೇಷಃ ” ಎನ್ನಲಾಗಿದೆ. ಲೋಕಮಾನ್ಯ ತಿಲಕರು ಹಿಂದು ಧರ್ಮಲಕ್ಷಣವನ್ನು ಹೀಗೆ ತಿಳಿಸಿದ್ದಾರೆ –

ಪ್ರಾಮಾಣ್ಯಬುದ್ಧಿರ್ವೇದೇಷು ನಿಯಮಾನಾಮನೇಕತಾ |
ಉಪಾಸ್ಯಾನಾಮನಿಯಮಾ ಹಿಂದುಧರ್ಮಸ್ಯಲಕ್ಷಣಮ್ ||

ಅಂದರೆ – ಎಲ್ಲ ಸದ್ವಿಚಾರಗಳಿಗೂ ವೇದಗಳೇ ಪ್ರಮಾಣ ಎಂಬ ಬುದ್ಧಿ ಧರ್ಮಾಚರಣೆಯ ನಿಯಮಗಳಲ್ಲಿ ಅನೇಕವಿಧಗಳ ಅಸ್ತಿತ್ವ, ಉಪಾಸನೆಗೆ ತಕ್ಕುದಾವುದೆಂಬ ವಿಚಾರದಲ್ಲಿ ನಿಯಮವಿಲ್ಲದಿರುವುದು ಹಿಂದುಧರ್ಮದ ಲಕ್ಷಣ. ಹಿಂದುಧರ್ಮದ ವಿಶಾಲ ದೃಷ್ಟಿಕೋನ ಇಲ್ಲಿ ವ್ಯಕ್ತವಾಗಿದೆ. ಇಂತಹ ದೃಷ್ಟಿಕೋನವಿರುವುದರಿಂದಲೇ ಈ ದೇಶದಲ್ಲಿರುವಷ್ಟು ಮತ-ಪಂಥ-ಸಂಪ್ರದಾಯಗಳು ಬೇರೆ ದೇಶಗಳಲ್ಲಿ ಕಾಣಿಸವು. ಆದರೂ ದೇಶದ ಏಕತೆಗೆ ಭಂಗವಿಲ್ಲದೆ ಬಹುತ್ವದಲ್ಲಿ ಏಕತ್ವ ನೆಲೆಗೊಳ್ಳುವಂತಾಗಿದೆ. ಹಿಂದೂ ಧರ್ಮಕ್ಕೆ ಅತೀತವಾಗಿರುವ ಮತದವರಿಗಿಂತ ಹಿಂದು ಹೇಗೆ ಭಿನ್ನವೈಶಿಷ್ಟ್ಯವುಳ್ಳವನೆಂಬುದನ್ನು ಸಾರುವ ಹಾಗೂ ಧಾರ್ಮಿಕ ಗರಿಮೆಯನ್ನು ಎತ್ತಿ ತೋರಿಸುವ ಲಾಕ್ಷಣಿಕತೆ ’ಮಾಧವ ದಿಗ್ವಿಜಯ’ ಎಂಬ ಗ್ರಂಥದಲ್ಲಿದೆ. ಅದು ಹೀಗೆ –

ಓಂಕಾರಮೂಲಮಂತ್ರಾಢ್ಯಃ ಪುನರ್ಜನ್ಮ ಧೃಢಾಶಯಃ |
ಗೋಭಕ್ತೋ ಭಾರತಗುರುಃ ಹಿಂದುಃ ಹಿಂಸನದೂಷಕಃ ||

ಇದನ್ನಿಲ್ಲಿ ಸ್ವಲ್ಪ ವಿವರಿಸಲಾಗುವುದು. ಇಲ್ಲಿ ಹಿಂದುವಿನ ಐದು ಮುಖ್ಯ ಲಕ್ಷಣಗಳನ್ನು ಹೇಳಲಾಗಿದೆ –
1. ಓಂಕಾರ ಅಥವಾ ಪ್ರಣವವೇ ಮೂಲಮಂತ್ರವಾಗಿರುವಿಕೆ. ವೈದಿಕ, ಜೈನ, ಬೌದ್ಧ, ಸಿಕ್ಖ, ವೀರಶೈವ ಇತ್ಯಾದಿ ಭಾರತೀಯ ವರ್ಗವಾಗಿವೆ.
2. ಪುನರ್ಜನ್ಮದಲ್ಲಿ ಧೃಢವಾದ ವಿಶ್ವಾಸ – ಭಗವದ್ಗೀತೆಯಲ್ಲಿ (2-3) ಇದನ್ನು ಹೀಗೆ ಸ್ಪಷ್ಟಗೊಳಿಸಲಾಗಿದೆ – ದೇಹಧಾರಿಯಾದವನಿಗೆ ಕೌಮಾರ್ಯ, ಯೌವನ, ವೃದ್ಧಾಪ್ಯಗಳಿರುವಂತೆ, ದೇಹಾಂತರ ಪ್ರಾಪ್ತಿಯೂ (ಪುನರ್ಜನ್ಮವೂ) ಇದೆ. ವಿದೇಶೀಯ ಮತಗಳು ಇದಕ್ಕೆ ಸಹಮತವಿಲ್ಲದವು.
3. ಗೋಭಕ್ತ – ಹಿಂದುವಿಗೆ ಗೋವು ಉಪಯೋಗಿ ಜೀವಿ ಮಾತ್ರವಲ್ಲ, ಆರಾಧ್ಯೆ, ಮಾತೆ; ದೇವತೆಗಳಿಂದಲೂ, ಋಷಿಗಳಿಂದಲೂ ಪೂಜಿತೆ. ಧಾರ್ಮಿಕನಾದ ಹಿಂದು ಊಟಕ್ಕೆ ಮುನ್ನ ಗೋಗ್ರಾಸವಿಡುವುದು ರೂಢಿ. ಅದು ಧರ್ಮಾಚರಣೆಯ ಅಂಗ. ಗೋಹತ್ಯೆಯಂತೂ ಅವನಿಗೆ ಮಹಾಪಾಪಕರ. ಗಾಂಧಿಯವರು ಸ್ವಾತಂತ್ರ್ಯದ ಚಳುವಳಿಯ ವೇಳೆ ಈ ದೇಶದಲ್ಲಿ ಗೋವಧೆ ನಿಷೇಧವನ್ನು ಸಾರಿದ್ದರು. ಆದರೆ ಅವರ ಅನುಯಾಯಿಗಳಿಗೆ ಈ ಕಾಲದಲ್ಲಿ ಅದು ಬೇಕಿಲ್ಲ, ಹಿಂದೆ, ಗೋಭಕ್ತ ಹಿಂದುಗಳ ಒತ್ತಾಯಕ್ಕೆ ಮಣಿದು ಅಕ್ಬರ ಬಾದಷಹನು ಗೋವಧೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದ್ದನು ಎಂದು ಇತಿಹಾಸ ತಿಳಿಸುತ್ತದೆ.
4. ಭಾರತಗುರು – ಹಿಂದುವಿನ ಧರ್ಮಗುರು ಭಾರತೀಯನೇ ಆಗಿರುತ್ತಾನೆ ಎಂದಿಲ್ಲಿ ಹೇಳಲಾಗಿದೆ.
5. ಹಿಂಸನದೂಷಕಃ
– ಎಂದರೆ ಅಹಿಂಸಕನು. ’ಅಹಿಂಸಾ ಪರಮೋಧರ್ಮಃ’ ಎಂಬ ತತ್ತ್ವವನ್ನು ಹಿಂದು ಧರ್ಮದ ಎಲ್ಲ ಶಾಖೆಗಳೂ ಅನುಸರಿಸುತ್ತವೆ.
ಇಂತಹ ಉದಾತ್ತವಾದ ಧರ್ಮದ ನೆಲೆಯಾಗಿರುವುದು ಭಾರತದೇಶ. ಧರ್ಮವನ್ನು ಕರ್ತವ್ಯ ಸ್ವಭಾವ ಎಂಬ ಅರ್ಥಗಳಲ್ಲಿಯೂ ಪ್ರಯೋಗಿಸಲಾಗುತ್ತಿದೆ. ಅಷ್ಟೊಂದು ವ್ಯಾಪಕವಾದ ಅರ್ಥ ಅದಕ್ಕಿದೆ. ಆದರೆ ಪ್ರತಿ ಕರ್ತವ್ಯವೂ ನೀತಿಯ ನೆಲೆಗಟ್ಟುಳ್ಳದೆಂದು ತಿಳಿಯಬೇಕು. ಸಕಲಜೀವಿಗಳಿಗೂ ಲೇಸನ್ನೇ ಬಯಸುವುದು ಧರ್ಮ, ಅದೇ ಹಿಂದೂ ಧರ್ಮ. ಉಪನಿಷದ್ವಾಕ್ಯಗಳು ಅದನ್ನೇ ಸಾರಿ ಹೇಳಿವೆ –

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್ಭವೇತ್

ಇಂತಹ ಧ್ಯೇಯಸಾಧನೆಯ ಜೀವನೋದ್ದೇಶವುಳ್ಳವರೇ ಧಾರ್ಮಿಕರು. ಧರ್ಮದ ಹಾಗೂ ಧರ್ಮಸಂಪನ್ನರ ಜನ್ಮಭೂಮಿಯಾಗಿ ಭಾರತ ಧರ್ಮಭೂಮಿಯಾಗಿ ಎಂದೆಂದಿಗೂ ವಿಜೃಂಭಿಸುವಂತಾಗಲಿ ಎಂಬುದೇ ನಮ್ಮ ಆಶಯ ಮತ್ತು ಆ ದಿಶೆಯಲ್ಲಿ ನಮ್ಮ ನೆಲೆಯಲ್ಲಿ ಕಾರ್ಯಸಾಧನೆಯಾಗಿರುತ್ತದೆ.

~*~

Facebook Comments