ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 28:

ಯಜ್ಞ ತತ್ತ್ವ

        ವಿದ್ವಾನ್ ಶ್ರೀ ಸಾಂಬ ದೀಕ್ಷಿತ, ಗೋಕರ್ಣ

“ಯಜ ದೇವಪೂಜಾ ಸಂಗತಿಕರಣದಾನೇಷು” ಎಂಬ ಯಜ್ ಧಾತುವಿನಿಂದ ಯಜ್ಞ ಶಬ್ದವು ಉಂಟಾಗಿದೆ. ಮೊದಲನೆಯದಾಗಿ ಯಜ್ಞವೆಂಬುದು ನಮ್ಮ ಧರ್ಮವಾಗಿತ್ತು. ಧರ್ಮವೆಂಬುದು ವೇದದಲ್ಲಿ “ಧರ್ಮನ್” ಎಂದು ನಪುಂಸಕಲಿಂಗದಲ್ಲಿದೆ. “ತಾನಿ ಧರ್ಮಾಣಿ ಪ್ರಥಮಾನ್ಯಾಸನ್” ಎಂದು ಮುಂತಾಗಿ ಶ್ರುತಿಯಲ್ಲಿ ಕಂಡುಬರುತ್ತದೆ. ಕಾಲಕ್ರಮದಲ್ಲಿ ಧರ್ಮ- ಶಬ್ದವು ಪುಲ್ಲಿಂಗದಲ್ಲಿಯೂ ಪ್ರಯೋಗವನ್ನು ಹೊಂದಿದೆ. ಧರ್ಮ ಶಬ್ದವು ಕರ್ಮ ಎಂಬ ಅರ್ಥದಲ್ಲಿಯೂ ಪ್ರಚುರವಾಗಿದೆ. ಯಜ್ಞವು ಶ್ರೇಷ್ಠತಮವಾದ ಕರ್ಮವೆಂಬುದಾಗಿ ವೇದದಲ್ಲಿ ಉಕ್ತವಾಗಿದೆ. “ಯಜ್ಞೋವೈಶ್ರೇಷ್ಠತಮಂ ಕರ್ಮ” ಎಂದು ಮುಂತಾದ ಶ್ರುತಿವಚನಗಳನ್ನು ಇಲ್ಲಿ ಗಮನಿಸಬೇಕು. ಯಜ್ಞ ಶಬ್ದದ ಅರ್ಥವು ಬಹಳ ವ್ಯಾಪಕವಾಗಿದೆ.

“ಅಧ್ವರ-ಅಂದರೆ ಅಹಿಂಸೆಯೇ ಯಜ್ಞ”

“ನಮ್ರತೆಯೇ ಯಜ್ಞ”

“ಯಜ್ಞವು ಅನ್ನವನ್ನು ನೀಡುತ್ತದೆ.”

“ಯಜ್ಞವು ಎಲ್ಲ ಭೂತಗಳಿಗೂ ಭೋಜನವನ್ನು ನೀಡುತ್ತದೆ.”

“ಯಜ್ಞವು ಐಶ್ವರ್ಯವೂ ಸೌಭಾಗ್ಯವೂ ಆಗಿದೆ.”

“ಯಜ್ಞವೇ ಸತ್ಯದ ಮೂಲವಾಗಿದೆ.”

“ಯಜ್ಞವು ಜೇನುಗೂಡಿನ ಜೇನುತುಪ್ಪದಂತೆ ಅತ್ಯಂತ ಮಧುರವಾದುದು.”

“ಯಜ್ಞವು ಆತ್ಮತೇಜೋರೂಪವಾದ ಮಹಿಮೆಯುಳ್ಳದ್ದು.”

“ಯಜ್ಞವೇ ಸ್ವರ್ಗವಾಗಿದೆ.”

“ಯಜ್ಞವು ಸುಖರೂಪವಾಗಿದೆ.”

“ಯಜ್ಞಗಳಲ್ಲಿ ಎಲ್ಲ ಭೂತಗಳೂ ಪ್ರವಿಷ್ಟವಾಗಿವೆ.”

“ಯಜ್ಞವು ಜ್ಞಾನವೇ ಆಗಿದೆ.”

“ಯಜ್ಞವು ಲೋಕದಲ್ಲಿ ಅತ್ಯಂತ ಜ್ಯೇಷ್ಠವಾದುದು.”

ಯಜ್ಞವು ಸಮಸ್ತ ಸೃಷ್ಟಿಯ ಕೇಂದ್ರವಾಗಿದೆ.”

“ಯಜ್ಞವು ವೀರ್ಯವೂ ಪರಾಕ್ರಮವೂ ಆಗಿದೆ.”

“ಯಜ್ಞವು ಎಲ್ಲರನ್ನೂ ರಕ್ಷಿಸುತ್ತದೆ.”

“ಯಜ್ಞವು ಓಷಧಿ ವನಸ್ಪತಿಗಳಿಂದ ಆಗುತ್ತದೆ.ಆದುದರಿಂದ ಋತುಸಂಧಿಗಳಲ್ಲಿ ಯಜ್ಞವನ್ನು ಆಚರಿಸುತ್ತಾರೆ.ಏಕೆಂದರೆ ಋತು ಸಂಧಿಗಳಲ್ಲಿ ನಾನಾರೋಗಗಳು ಉತ್ಪತ್ತಿಯಾಗುತ್ತದೆ.”

ಹೀಗೆ ಯಜ್ಞದ ವಿಷಯವಾಗಿ ವೇದ ವಾಘ್ಮಯದಲ್ಲಿ ಅತ್ಯಂತ ವ್ಯಾಪಕವಾದ ವರ್ಣನೆಯಿದೆ. ವೇದದಿಂದಲೇ ಯಜ್ಞ,ಯಜ್ಞದಿಂದಲೇ ವೇದ ಎಂಬುದಾಗಿ ಬೀಜವೃಕ್ಷನ್ಯಾಯದಂತೆ ವೇದ-ಯಜ್ಞಗಳ ಸಂಬಂಧವಿದೆ. ವೇದಗಳು ಯಜ್ಞಕ್ಕಾಗಿಯೇ ಪ್ರವೃತ್ತವಾಗಿವೆಯೆಂಬುದಾಗಿ ಲಗಧಮುನಿಯು ವೇದಾಂಗ ಜ್ಯೋತಿಷದಲ್ಲಿ ಹೇಳಿದ್ದಾನೆ. ಯಜ್ಞವು ಬಹುವಿಧವಾಗಿದೆ. ಅಥರ್ವವೇದದ ಉಚ್ಛಿಷ್ಟಸೂಕ್ತದಲ್ಲಿ ಯಜ್ಞಗಳ ಹೆಸರುಗಳು ಉಕ್ತವಾಗಿವೆ. ಉಚ್ಛಿಷ್ಟ ಎಂದರೆ ಬ್ರಹ್ಮ. ಆದ್ದರಿಂದಲೇ “ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್” ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. “ಪ್ರಜಾಪತಿಯು ಯಜ್ಞಗಳೊಡನೆ ಪ್ರಜೆಗಳನ್ನು ಸೃಷ್ಟಿಸಿ ಇವುಗಳ ಆಚರಣೆಯಿಂದ ದೇವತೆಗಳನ್ನು ಸಂತೋಷಪಡಿಸಿ ನಿಮ್ಮ ಇಷ್ಟಾರ್ಥಗಳನ್ನು ಪಡೆದು ಸುಖವಾಗಿ ಬಾಳಿರಿ; ದೇವತೆಗಳು ಮತ್ತು ಮನುಷ್ಯರು ಪರಸ್ಪರ ಭಾವನೆಯಿಂದ ಶ್ರೇಯಸ್ಸನ್ನು ಪಡೆಯಿರಿ; ಯಜ್ಞವು ನಿಮಗೆ ಕಾಮಧೇನುವಾಗಿರಲಿ ಎಂದು ಆದಿಯಲ್ಲಿ ಹೇಳಿದನು” ಎಂಬ ಭಗವದ್ಗೀತಾ ವಚನವು ಇಲ್ಲಿ ಸ್ಮರಣೀಯವಾಗಿದೆ. ಯಜ್ಞ ಮಾಡದವನ ತೇಜಸ್ಸು ಹತವಾಗುತ್ತದೆ; ದಾನವನ್ನೂ ಯಜ್ಞವೆಂದು ಭಾವಿಸಿಯೇ ಮಾಡಬೇಕು:ಯಜ್ಞವನ್ನು ಮಾಡದಿರುವವನಿಗೆ ಈ ಲೋಕವೇ ಇಲ್ಲದಿರುವಾಗ ಇನ್ನು ಪರಲೋಕವೆಲ್ಲಿಂದ ಬಂದೀತು? ಎಂದು ಮುಂತಾಗಿ ಯಜ್ಞದ ಪ್ರಶಂಸೆಯ ಜೊತೆಗೆ ಯಜ್ಞವನ್ನು ಮಾಡದವನ ನಿಂದೆಯೂ ಬಹಳವಾಗಿ ಉಕ್ತವಾಗಿದೆ. ಯಜ್ಞವು ಕಷ್ಟಸಾಧ್ಯವಾದ ಕರ್ಮ. ಶ್ರದ್ಧೆಯಿಂದ ಅದನ್ನು ಆಚರಿಸಬೇಕು. ದಕ್ಷಿಣೆಯು ಯಜ್ಞದ ಪತ್ನೀ ಎಂಬುದಾಗಿ ವರ್ಣನೆಯಿದೆ. ಆದ್ದರಿಂದ ದಕ್ಷಿಣಾ ಮತ್ತು ಯಜ್ಞಗಳ ಸಂಬಂಧವು ಧರ್ಮಮಯವಾದುದು. ಸಾತ್ತ್ವಿಕವಾದ-ಈ ಮೂರೂ ಯಜ್ಞದ ಸಂಪನ್ನತೆಗೆ ಕಾರಣಗಳು. ಕವಿಕುಲಗುರುವಾದ ಮಹಾಕವಿ ಕಾಳಿದಾಸನು ತನ್ನ ಅಮರವಾದ ಕಾವ್ಯಗಳಲ್ಲಿ ಯಜ್ಞ ಹಿರಿಮೆಯನ್ನು ಬಹುವಾಗಿ ಕೀರ್ತಿಸಿದ್ದಾನೆ. ಯಾಗವೂ ಯಜ್ಞ ಶಬ್ದದ ಪರ್ಯಾಯವಾಗಿ ರೂಢಿಯಲ್ಲಿ ಬಂದಿದೆ. ವಿಧಿವಿಹಿತವಾದ ರೀತಿಯಲ್ಲಿ ದೇವತೆಯನ್ನು ಉದ್ದೇಶಿಸಿ ಅಗ್ನಿಯಲ್ಲಿ ಮಾಡುವ ದ್ರವ್ಯತ್ಯಾಗವನ್ನು ಯಾಗವೆಂಬುದಾಗಿ ಶಾಸ್ತ್ರಕಾರರು ಪಾರಿಭಾಷಿಕವಾಗಿ ಹೇಳಿದ್ದಾರೆ. ಯಜ್ಞ ಶಬ್ದದ ಅರ್ಥದಂತೆಯೇ ಯಾಗ ಶಬ್ದದ ಅರ್ಥವೂ ಬಹಳ ವ್ಯಾಪಕವಾಗಿದೆ. ಶಾಸ್ತ್ರವಿಹಿತವಾದ ಸತ್ಕರ್ಮವೆಲ್ಲವೂ ಯಜ್ಞವಾಗುತ್ತದೆ-ಯಾಗವಾಗುತ್ತದೆ.

ಲೋಕವ್ಯವಸ್ಥೆಗೆ ಯಜ್ಞವು ಅತ್ಯಂತ ಆವಶ್ಯಕವಾಗಿದೆ. ಅಗ್ನಿಯಲ್ಲಿ ವಿಧಿಗನುಸಾರವಾಗಿ ಆಹುತಿ ಮಾಡಿದ ದ್ರವ್ಯವು ಸೂಕ್ಷ್ಮ ರೂಪವನ್ನು ತಾಳಿ ಸೂರ್ಯನನ್ನು ಹೋಗಿ ಸೇರುತ್ತದೆ. ಸೂರ್ಯನಿಂದ ಮಳೆಯಾಗುತ್ತದೆ. ಮಳೆಯಿಂದ ಸಸ್ಯಾದಿಗಳು ಉಂಟಾಗಿ ಪ್ರಜೆಗಳಿಗೆ ಅನ್ನಾಹಾರಾದಿಗಳು ಉಂಟಾಗುತ್ತದೆ. ಅನ್ನದಿಂದಲೇ ಪ್ರಜೆಗಳು ಉಂಟಾಗುತ್ತಾರೆ. ಹೀಗೆ ಹೇಳಿರುವ ಮನುವಿನ ಮಾತು ಅತ್ಯಂತ ವೈಜ್ಞಾನಿಕವಾಗಿದೆ. ಪ್ರತ್ಯಕ್ಷವಾಗಿ ನಾವು ಕೊಟ್ಟಿದ್ದನ್ನು ತಿಂದು ಸೂಕ್ಷ್ಮರೂಪಗೊಳಿಸುವ ಶಕ್ತಿಯು ಪಂಚಭೂತಗಳ ಪೈಕಿ ಅಗ್ನಿಗೆ ಮಾತ್ರವಿದೆ. ಆದುದರಿಂದ ಸೂರ್ಯನಿಗೆ ಕೊಡುವ ಆಹುತಿಯನ್ನೂ ಅಗ್ನಿಯಲ್ಲೇ ಹಾಕುತ್ತೇವೆ. ಯಾವುದೇ ದೇವತೆಗೆ ಕೊಡಬೇಕಾದ ಆಹುತಿಯನ್ನು ಅಗ್ನಿಯಲ್ಲೇ ಹಾಕಬೇಕು. ಅಗ್ನಿಯು ದೇವತೆಗಳ ದೂತನು. ಆದುದರಿಂದಲೇ ಯಜ್ಞವೆಂದರೆ ಅಗ್ನಿಯಲ್ಲೇ ಹವನ ಮಾಡುವ ಪರಂಪರೆಯಿದೆ. ಶ್ರೌತ  ಯಜ್ಞಗಳಲ್ಲಿ ಪೌಷಟ್ ಎಂಬುದಾಗಿ ಹೇಳಿ ಮತ್ತು ಸ್ಮಾರ್ತಯಜ್ಞಗಳಲ್ಲಿ ಸ್ವಾಹಾ ಎಂಬುದಾಗಿ ಹೇಳಿ ಹವನ ಮಾಡುತ್ತಾರೆ. ವೈದಿಕ ಧರ್ಮ ಪರಂಪರೆಯಲ್ಲಿ ಪಂಚಮಹಾಯಜ್ಞಗಳೂ ಪ್ರಸಿದ್ಧವಾಗಿವೆ. ಯಜ್ಞತತ್ತ್ವವನ್ನು ತಿಳಿದವರೆಲ್ಲರೂ ಯಜ್ಞಾಚರಣೆಯಿಂದ ಪಾಪವನ್ನು ಕಳೆದುಕೊಂಡು ಯಜ್ಞಶೇಷವಾದ ಅಮೃತವನ್ನು ಸೇವಿಸಿ ಸನಾತನ ಬ್ರಹ್ಮವನ್ನು ಸೇರುತ್ತಾರೆ. ಎಂದು ಶ್ರೀಕೃಷ್ಣನು ತಿಳಿಸಿದ್ದಾನೆ. ಎಲ್ಲ ವಿಧವಾದ ಯಜ್ಞಗಳೂ ಜ್ಞಾನಮಯವಾದ ಯಜ್ಞದಲ್ಲಿ ಪರ್ಯವಸಾನವಾಗುತ್ತದೆ. ಮಹಾನಾರಾಯಣೋಪನಿಷತ್ತಿನಲ್ಲಿ ತ್ರಿಸುಪರ್ಣವೆಂದು ಪ್ರಸಿದ್ಧವಾಗಿರುವ ಭಾಗದಲ್ಲಿ ಜ್ಞಾನಿಗಳ ಆಧ್ಯಾತ್ಮಿಕವಾದ ತತ್ತ್ವಮಯ ಯಜ್ಞದ ಅದ್ಭುತ ವರ್ಣನೆಯು ಮೊಳಗುತ್ತದೆ.ಬೃಹದಾರಣ್ಯಕದಲ್ಲಿ “ವಾಕ್ ಎಂಬುದೇ ಯಜ್ಞದ ಹೋತೃವು; ಚಕ್ಷಸ್ಸು ಯಜ್ಞದ ಅಧ್ವರ್ಯು; ಪ್ರಾಣವು ಯಜ್ಞದ ಉದ್ಗಾತೃವು; ಮನಸ್ಸು ಯಜ್ಞದ ಬ್ರಹ್ಮನು” ಎಂಬುದಾಗಿ ಆಧ್ಯಾತ್ಮಿಕವಾಗಿ ನಡೆಯುವ ಚಾತುರ್ಹೋತ್ರಯಜ್ಞದ ಅತ್ಯಂತ ಸುಂದರವಾದ ವರ್ಣನೆಯು ಇದೆ. ಪೂರ್ವದಲ್ಲಿ ದೇವತೆಗಳು ಯಜ್ಞದಿಂದಲೇ ಯಜ್ಞವನ್ನು ಆಚರಿಸಿದರು. ಅದೇ ಆಗ ಧರ್ಮವಾಗಿತ್ತು. ತತ್ತ್ವವನ್ನು ತಿಳಿದವರಿಗೆ ಈಗಲೂ ಅದೇ ಧರ್ಮವಾಗಿದೆ.ಅಂತಹ ಮಹಾಮಹಿಮ ಸಂಪನ್ನರು ಸರ್ವವಿಧ ದುಃಖರಹಿತವಾದ ಸ್ವರ್ಗವೆಂಬ ಆನಂದನೆಲೆಯನ್ನು ಹೋಗಿ ಸೇರುತ್ತಾರೆ. ಪುರುಷಸೂಕ್ತವು

“ಯಜ್ಞೇನಯಜ್ಞಮಯಜಂತದೇವಾಃ| ತಾನಿಧರ್ಮಾಣಿ ಪ್ರಥಮಾನ್ಯಾಸನ್| ತೇಹನಾಕಂ ಮಹಿಮಾನಃ ಸಚಂತೇ| ಯತ್ರಪೂರ್ವೇಸಾಧ್ಯಾಃಸಂತಿದೇವಾಃ||”

ಎಂಬುದಾಗಿ ಯಜ್ಞತತ್ತ್ವದ ಮಂಗಳಗೀತವನ್ನು ಮೊಳಗಿಸುತ್ತದೆ. ಹೀಗೆ ಯಜ್ಞತತ್ತ್ವವು ಅತ್ಯಂತ ಗಂಭೀರವೂ ಸುಂದರವೂ ಆಗಿದೆ. ಇದನ್ನು ಸ್ವಲ್ಪವಾದರೂ ತಿಳಿದು ಆಚರಿಸುವವರು ಮಹಾಭಯದಿಂದ ಪಾರಾಗುತ್ತಾರೆ. “ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇಮಹತೋಭಯಾತ್.”  “ಸರ್ವಂಖಲ್ವಿದಂಬ್ರಹ್ಮ” ಎನ್ನುವಂತೆ ಎಲ್ಲವೂ ಬ್ರಹ್ಮವೇ ಆಗಿರುವುದರಿಂದ, “ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್| ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ||” ಎಂದು ಓಂ ತತ್ಸದ್ ಬ್ರಹ್ಮಾರ್ಪಣಮಸ್ತು ಎಂದಾಗಲಿ !

ರಾಘವೇಶ್ವರ ಭಾರತೀ ಗುರುದೇವ ಪದಾಂಬುಜೇ |
ಯಜ್ಞತತ್ವಾಖ್ಯಲೇಖೋ$ಯಂ ಮಯಾ ಭಕ್ತ್ಯಾಸಮರ್ಪ್ಯತೇ ||
ಸಾಂಬದೀಕ್ಷಿತವರ್ಯೇಣ ಯಜ್ಞತತ್ತ್ವಸುಮಾಲಿಕಾ |
ರಾಘವೇಂದ್ರಸುಭಾರತೀ ಪದಾಂಬುಜೇ ಸಮರ್ಪಿತಾ ||

            || ಶಿವಮಸ್ತು ||

Facebook Comments