|| ಹರೇ ರಾಮ ||

ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು..

ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ ವ್ಯಕ್ತವಾಗುವುದು..!?
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ ಯೋಜನೆಗಳಲ್ಲವೆ,

ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?
ಕದನಗಳು ಮೊದಲಾಗುವುದು ಮನಸಿನಲ್ಲಿ ..
ಪತನಗಳು ಮೊದಲಾಗುವುದು ಮನಸಿನಲ್ಲಿ..
ವಿಜಯ-ಪರಾಭವಗಳು ಮೊದಲಾಗುವುದು ಮನಸಿನಲ್ಲಿ ..
ಹುಟ್ಟುವುದೆಲ್ಲವೂ ಮೊದಲು ಒಳಗೇ ಹುಟ್ಟಬೇಕು..
ಸಾಯುವುದೆಲ್ಲವೂ ಮೊದಲು ಒಳಗೇ ಸಾಯಬೆಕು..
ಇದು ಸೃಷ್ಟಿಯ ನಿಯಮ..

ಪ್ರಾಣಿಗಳು ಅಮ್ಮನ ಒಳಗೆ ಗರ್ಭವಾಗಿ ಮೊದಲು ಹುಟ್ಟುತ್ತವೆ,
ಜಗತ್ತಿಗೆ ಪ್ರಸವದ ಮೂಲಕ ಪ್ರಕಟವಾಗುತ್ತವೆ..
ಪಕ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನ್ಮ ತಾಳುತ್ತವೆ..
ಅಮ್ಮನ ಹೊಟ್ಟೆಯೊಳಗೆ – ಅದರೊಳಗಿನ ಮೊಟ್ಟೆಯೊಳಗೆ ಜನ್ಮ ತಾಳುತ್ತವೆ..!
ಸಾವಂತೂ ಸದ್ದಿಲ್ಲದಂತೆ ಮೊದಲೊಳಸೇರಿ..
ಗೆದ್ದಲಿನಂತೆ ಕೆಲಸವನ್ನು  ಮಾಡಿ, ಮತ್ತೆ ಸುದ್ದಿಯಾಗುತ್ತದೆ..!

ಹೆಚ್ಚು ಮಾತೇಕೆ..?
ವಿಶ್ವ ಸೃಷ್ಟಿಯೇ ಹೀಗೆ..
ಈಶ್ವರನ ಅಂತರಂಗದಲ್ಲಿ ಮಹಾಸಂಕಲ್ಪ ರೂಪದಲ್ಲಿ ಜಗವು ಮೊದಲು ಸೃಷ್ಟಿಯಾಯಿತು..
ಆಮೇಲೆ ತಾನೇ ಬಹಿರಂಗದಲ್ಲಿ ವಿಶ್ವರೂಪವಾಗಿ ಪ್ರಕಟವಾದದ್ದು..?

ಈ ಸನ್ನಿವೇಶದಲ್ಲಿ ಪೂಜ್ಯ. ರಾಮಭದ್ರಾಚಾರ್ಯರು ಕೊಡುತ್ತಿದ್ದ ಉದಾಹರಣೆಯೊಂದು ನೆನಪಾಗುತ್ತದೆ..
ಕೆ.ಆರ್.ಎಸ್.ಕಟ್ಟಿದ್ದು ವಿಶ್ವೇಶ್ವರಯ್ಯನವರೆಂದು ಜಗತ್ತೇ ಹೇಳುತ್ತದೆ.
ನಿಜವಾಗಿಯೂ ಆ ಕೆಲಸ ಮಾಡಿದ್ದು ಸಾಮಾನ್ಯ ಕೂಲಿಕಾರರು- ಮೇಸ್ತ್ರಿಗಳಲ್ಲವೇ.?
ವಿಶ್ವೇಶ್ವರಯ್ಯನವರೇನು ಕಲ್ಲು-ಮಣ್ಣುಗಳನ್ನು ಹೊತ್ತಿದ್ದುಂಟೇ..?
ಗಾರೆ ಕಲಸಿ ಮೆತ್ತಿದ್ದುಂಟೇ…?
ನಿಜ, ವಿಶ್ವೇಶ್ವರಯ್ಯನವರು ಜಲ್ಲಿಕಲ್ಲುಗಳನ್ನು ಮುಟ್ಟದಿರಬಹುದು..
ಆದರೆ, ಕೆ.ಆರ್.ಎಸ್.ಮೊದಲು ನಿರ್ಮಾಣವಾದದ್ದು ಅವರ ಬುದ್ದಿ-ಹೃದಯಗಳಲ್ಲಿ..!
ಅವರ ಕಲ್ಪನೆ-ಯೋಜನೆಗಳಿಗೆ ಬಹಿರಂಗದಲ್ಲಿ ಆಕಾರ ಕೊಟ್ಟವರು ಕಾರ್ಮಿಕರು-ಮೇಸ್ತ್ರಿಗಳು..
ವಿಶ್ವೇಶ್ವರಯ್ಯನವರ ಯೋಜನೆಯಿಲ್ಲದಿದ್ದರೆ ಕೂಲಿಕಾರರು- ಮೇಸ್ತ್ರಿಗಳು ಕಟ್ಟುವುದಾದರೂ ಏನನ್ನು..?
ಕಾರ್ಮಿಕರು ಇಲ್ಲದಿದ್ದರೆ ವಿಶ್ವೇಶ್ವರಯ್ಯನವರು ಯೋಜನೆಯನ್ನಿಟ್ಟುಕೊಂಡು ಮಾಡುವುದಾದರೂ ಏನನ್ನು..?

ಒಳ-ಹೊರಗಳು ಸೇರಿಯೇ ಬದುಕು ಪೂರ್ಣ..!
ಹಾಗೆ ನೋಡಿದರೆ ಜೀವನಕ್ಕೆ ಎರಡೇ ಅಂಗಗಳು..!
ಅಂತರಂಗವೊಂದು.. ಬಹಿರಂಗವಿನ್ನೊಂದು..
ಒಂದಿಲ್ಲದೆ ಇನ್ನೊಂದು ಪೂರ್ಣವಲ್ಲ.
ಬಹಿರಂಗವಿಲ್ಲದ ಅಂತರಂಗ.. ದೇಹವಿಲ್ಲದ ಜೀವದಂತೆ..ಪ್ರೇತ..!
ಅಂತರಂಗವಿಲ್ಲದ ಬಹಿರಂಗ ಜೀವವಿಲ್ಲದ ದೇಹದಂತೆ..ಶವ..!

ಈಗ ರಾಮಾಯಣಕ್ಕೆ ಬನ್ನಿ..
ಅಂತರಂಗ-ಬಹಿರಂಗಗಳ ಅನ್ಯೋನ್ಯಾಶ್ರಯದ ಆಟವನ್ನು ಇಲ್ಲಿಯೂ ನೋಡಿ…
ಶಬ್ಧಗಳು ಅನುಭವದಲ್ಲಿ ಪರ್ಯವಸಾನವಾಗಬೇಕು..
ಅನುಭವಗಳು ಪುನಃ ಶಬ್ದರೂಪವನ್ನು ತಾಳಬೇಕು..

ಅಂತರಂಗದಲ್ಲೇ ರಾಮಾಯಣವ ಕಂಡ ಮಹಾಮುನಿ

ಅಂತರಂಗದಲ್ಲೇ ರಾಮಾಯಣವ ಕಂಡ ಮಹಾಮುನಿ

ರಾಮನ ಕುರಿತು ಕೇಳಿದ್ದು ಅನುಭವಕ್ಕೆ ಬಂದರೆ ಆತ್ಮೋದ್ಧಾರ..
ರಾಮನ ಅನುಭವ ಶಬ್ದಗಳ ರೂಪದಲ್ಲಿ ಅಭಿವ್ಯಕ್ತಗೊಂಡರೆ ಅದು ಲೋಕೋದ್ಧಾರ..
ಮನದ ಮನೆಯೊಳಗೆ ಮೌನದಲ್ಲಿ – ತನ್ಮಯತೆಯಲ್ಲಿ ಕುಳಿತು ವಾಲ್ಮೀಕಿಗಳು ನಾರದರಿಂದ ಸಂಕ್ಷೇಪವಾಗಿ ಕೇಳಿದ್ದನ್ನು ಬಹು ವಿಸ್ತಾರವಾಗಿ ನೋಡಿದರು..
ಬಳಿಕ ಬ್ರಹ್ಮನಾಣತಿಯಂತೆ ರಾಮಾಯಣದರ್ಶನದ ಅನುಭೂತಿಗೆ ಶಬ್ದಗಳ ರೂಪವನ್ನು ನೀಡಿದರು..
ಅಬ್ಬಾ..!
ಅದೆಂಥಾ ವಿಸ್ತಾರ..!

ಒಂದೊಂದು ಶ್ಲೋಕದಲ್ಲಿ ಮೂವತ್ತೆರಡು ಅಕ್ಷರಗಳು..
ಅಂತಹ ಶ್ಲೋಕಗಳು ಇಪ್ಪತ್ತನಾಲ್ಕು ಸಾವಿರ…!
ಒಂದೊಂದು ಅಧ್ಯಾಯದಲ್ಲಿ ಅದೆಷ್ಟೋ ಶ್ಲೋಕಗಳು..
ಅಂತಹ ಅಧ್ಯಾಯಗಳು ಐದುನೂರು..!
ಒಂದೊಂದು ಕಾಂಡದಲ್ಲಿ ಅದೆಷ್ಟೋ ಅಧ್ಯಾಯಗಳು..
ಅಂತಹ ಕಾಂಡಗಳು ಏಳು..!
ಈ ಮೇರುಕೃತಿ ಯಾವುದೇ ಲಿಪಿಯ ಸಹಾಯವಿಲ್ಲದೆ ಮುನಿಯ ಮನದಲ್ಲಿಯೇ ರಚಿತವಾಯಿತೆಂದರೆ ಆ ಮೇಧಾಶಕ್ತಿ ಅದೆಂಥದ್ದಿರಬೇಕು..!

ಇಲ್ಲಿಗೆ ರಾಮಾಯಣಾವತಾರದ ಅಂತರಂಗದ ಭಾಗ ಮುಗಿದಿತ್ತು..
ಬಹಿರಂಗದ ಭಾಗವಿನ್ನಷ್ಟೇ ಪ್ರಾರಂಭವಾಗಬೇಕಿತ್ತು…!
ಸತ್ಯದ ಅನ್ವೇಷಣೆ ಮುಗಿದಿತ್ತು..
ಸೇತುವಿನ ಅನ್ವೇಷಣೆ ಆರಂಭವಾಗಿತ್ತು..!
ಇತ್ತ ವಾಲ್ಮೀಕಿಗಳ ಮನದಲ್ಲಿ ರಾಮಾಯಣದ ರಚನೆಯಾಗಿತ್ತು..
ಅತ್ತ ಲೋಕಕ್ಕೆ ಅದರ ಅಗತ್ಯವೂ ಅಗಾಧವಾಗಿತ್ತು..!
ಇನ್ನುಳಿದ ಪ್ರಶ್ನೆ- ನಡುವೆ ಸೇತುವಾಗುವವರು ಯಾರು..?
ದೇವರನ್ನು ಲೋಕಕ್ಕೆ ತೋರಲು ದ್ವಾರವೊಂದು ಬೇಕಾಗುತ್ತದೆ..
ಕೌಸಲ್ಯೆಯ ಒಡಲಲ್ಲಿ ಅವತರಿಸಿದ ರಾಮನು ಲೋಕಕ್ಕೆ ಪ್ರಕಟಗೊಳ್ಳಲು ಅಯೋಧ್ಯೆಯು ದ್ವಾರವಾಯಿತು..
ವಾಲ್ಮೀಕಿಯ ಮನದಲ್ಲಿ ಅವತರಿಸಿದ ರಾಮನ ಶಬ್ದರೂಪವು – ರಾಮಾಯಣವು ವಿಶ್ವ ಮುಖಕ್ಕೆ ಪ್ರಕಟಗೊಳ್ಳಲು ದ್ವಾರವಾವುದು..?
ಅನುಭವವು ಅಕ್ಷರವಾಗಿತ್ತು..ಅಕ್ಷರಕ್ಕೊಂದು ಧ್ವನಿ ಬೇಕಿತ್ತು..!
ದೇವರ ಹೆಜ್ಜೆಗಳನ್ನು ಲೋಕಕ್ಕೆ ತೋರಬಲ್ಲ ದಿವ್ಯಧ್ವನಿಗಾಗಿ ವಾಲ್ಮೀಕಿಗಳ ಹುಡುಕಾಟ ನಡೆದಿತ್ತು..!
ಥಿಯರಿ (Theory) ಮತ್ತು ಪ್ರಾಕ್ಟಿಕಲ್ (Practical) ಎಂಬ ಎರಡು ಶಬ್ದಗಳು ಲೋಕದಲ್ಲಿ ಬಹಳವಾಗಿ ಬಳಕೆಯಲ್ಲಿವೆ..
ಥಿಯರಿ ಎಂಬುದು ಅಂತರಂಗದ ಕಾರ್ಯವಾದರೆ, ಪ್ರಾಕ್ಟಿಕಲ್ ಬಹಿರಂಗ ಕ್ಷೇತ್ರಕ್ಕೆ ಸಂಬಂಧಿಸಿದ್ದು..
ರಾಮಾಯಣವೆಂಬುದು ಥಿಯರಿಗೆ ಸೀಮಿತವಲ್ಲ..
ಅದೊಂದು ಪ್ರಯೋಗಕಾವ್ಯ..
ಪ್ರಯೋಗವೆಂದ ಮೇಲೆ ಪರಿಣಾಮವಿರಲೇಬೇಕಲ್ಲವೇ..?
ಸರಿಯಾಗಿ ಪ್ರಯೋಗಿಸಲ್ಪಟ್ಟಾಗ ಜೀವಗಳ ಮೇಲೆ ಅತ್ಯಂತ ಶುಭವಾದ ಪರಿಣಾಮವನ್ನು ಬೀರಬಲ್ಲ ಕಾವ್ಯವದು..!
ಬದುಕಿನಲ್ಲಿ ‘ರಾಮ’ಗುಣಗಳನ್ನು ತುಂಬಬಲ್ಲ,’ರಾವಣ’ದೋಷಗಳನ್ನು ನಿವಾರಿಸಬಲ್ಲ ಶಬ್ದಾರ್ಥರಸಗಳ ತ್ರಿವೇಣೀಸಂಗಮವದು..!
ರಾಮಾಯಣದ ವಿಷಯ-ವಿನ್ಯಾಸದಲ್ಲಿ ವಿಜ್ಞಾನವಿದೆ..
ಅಕ್ಷರಜೋಡಣೆಯಲ್ಲಿ ವಿಜ್ಞಾನವಿದೆ..
ಉಚ್ಚಾರಣ ಪ್ರಕಾರದಲ್ಲಿ ವಿಜ್ಞಾನವಿದೆ..
ರಾಗ-ತಾಳಗಳ ಸಂಯೋಜನೆ-ಪ್ರಸ್ತುತಿಯಲ್ಲಿ ವಿಜ್ಞಾನವಿದೆ..!

ಮರ್ಮವರಿತು ಪ್ರಯೋಗಿಸಲ್ಪಟ್ಟಾಗ ದಾನವತೆಯಿಂದ ಮಾನವತೆಗೆ..
ಮಾನವತೆಯಿಂದ ಮಾಧವತೆಗೆ ಏರಿಸಬಲ್ಲ ಜೀವನ ಪರಿವರ್ತನೆಯ ಮಹಾಕಾವ್ಯವದು..!
ಕೇವಲ ಟೈಂಪಾಸ್ ಕಾವ್ಯವಲ್ಲ..!
ಯಾವ ಸ್ಥಿತಿಯಲ್ಲಿ (wave length) ರಾಮನು ಬದುಕನ್ನನುಭವಿಸಿದನೋ,
ಆ ಸ್ಥಿತಿ (wave length) ವಾಲ್ಮೀಕಿಗಳಲ್ಲುಂಟಾದಾಗ ತಾನೆ ಅವರಿಗೂ ರಾಮಾಯಣ ದರ್ಶನವಾಯಿತು ..!
ಅದನ್ನು ಲೋಕಮುಖಕ್ಕೆ ಪ್ರಸ್ತುತಪಡಿಸಲು, ಆ ಸ್ಥಿತಿಯನ್ನು (wave length) ತಲುಪಿ ಹಾಡುವವರೇ ಬೇಕಲ್ಲವೇ..?
ಆದರೆ.. ಅಂಥವರೆಲ್ಲಿ. . .? ಎಲ್ಲಿ . . ?  ಎಲ್ಲಿ . . ?
ರಾಮಭಾವವನ್ನು ರಾಮನಾದದಲ್ಲಿ, ರಾಮರಾಗದಲ್ಲಿ, ರಾಮತಾಳದಲ್ಲಿ ಹೊರಗೆ ತರಬಲ್ಲ ಕುಶಲರೆಲ್ಲಿ..?
ಅದೋ..ಬಂದರು..ಬಂದರು..
ವಂದಿಸಿಕೊಂಡರು..
ಭಾವ-ರಾಗ-ತಾಳ ಕುಶಲರು…
ಕುಶ-ಲವರು..!

{ಚಿತ್ರಕೃಪೆ: ಅಂತರ್ಜಾಲ }

Facebook Comments Box