ಶ್ರೀ ಬಿ. ಕೆ. ಎಸ್. ವರ್ಮಾ
ಅಂತಾರಾಷ್ಟ್ರೀಯ ಚಿತ್ರಕಲಾವಿದರು

ಕೆಲವು ದಿನಗಳ ಹಿಂದೆ ಪವಾಡವೊಂದು ಜರುಗಿತು. ‘ಶ್ರೀಗಳು ಭಕ್ತರೊಬ್ಬರಿಗೆ ಕೊಡುವುದಕ್ಕೆ ಎರಡು ಚಿತ್ರಗಳು ಬೇಕು’ ಅಂತ ನನಗೆ ದೂರವಾಣಿ ಕರೆ ಬಂತು. ಚಿತ್ರದ ಕಾನ್ಸೆಪ್ಟ್ ಏನಿರಬೇಕೆಂದು ಶ್ರೀಗಳೇ ಲೈನ್ ಮೇಲೆ ಬಂದು ತಿಳಿಸಿದರು. ಅದನ್ನು ಕೇಳಿದ ಮೇಲೆ ನನಗನ್ನಿಸಿದ್ದು ಈ ಚಿತ್ರ ರಚಿಸಲು ೩ ತಿಂಗಳು ಬೇಕು ಅಂತ. ಚುರುಕಾಗಿ ಮಾಡುವದಾದರೂ ಒಂದೂವರೆ ತಿಂಗಳು ಬೇಕೇಬೇಕು. ನಾನು ಅದನ್ನೇ ಹೇಳಿದೆ. ಅದಕ್ಕೆ ಗುರುಗಳು ಹೇಳಿದ್ರು ’ವರ್ಮಾ ಮನಸು ಮಾಡಿದ್ರೆ ೩ ತಿಂಗಳ ಚಿತ್ರ ೩ ದಿನದಲ್ಲಿ ಆಗುತ್ತೆ’. ’೩ ತಿಂಗಳು ಬೇಕಾಗೋ ಚಿತ್ರ ಐದು ದಿನದಲ್ಲಿ ಹೇಗೆ ಆಗೋಕೆ ಸಾಧ್ಯ? ಅದೂ ಆಯಿಲ್ ಪೈಂಟ್!’ ನಾನು ಪ್ರಶ್ನಿಸಿದೆ.

ಶ್ರೀ ಬಿ. ಕೆ. ಎಸ್. ವರ್ಮಾ

’ಅದೆಲ್ಲ ಗೊತ್ತಿಲ್ಲ, ಆಗಲೇಬೇಕು, ಆಗುತ್ತೆ’ ಎಂದರು ಗುರುಗಳು!. ಸರಿ, ಆದದ್ದಾಗಲಿ ಎಂದು ಗುರುಗಳನ್ನು ಧ್ಯಾನಿಸಿ ಚಿತ್ರ ಬರೆಯಲು ಪ್ರಾರಂಭಿಸಿದೆ. ಶ್ರೀಗಳ ನಗು ಎಂದರೆ ನನಗೆ ಅತ್ಯಂತ ಪ್ರಿಯವಾದದ್ದು. ಅದನ್ನೇ ಧ್ಯಾನಿಸಿದೆ. ನೀವೇ ಚೇತನ ಕೊಡಬೇಕೆಂದು ಮನದುಂಬಿ ಪ್ರಾರ್ಥಿಸಿ ಚಿತ್ರ ಬರೆಯಲು ಪ್ರಾರಂಭಿಸಿದೆ. ಬರೆಯುವಾಗಲೆಲ್ಲ ಗುರುಗಳ ನಗುಮುಖವನ್ನೇ ಧ್ಯಾನಿಸುತ್ತಾ, ಮಧ್ಯೆ ಮಧ್ಯೆ ಮನಸ್ಸಿನಲ್ಲೇ ನಮಿಸುತ್ತಾ ಮುಂದುವರಿಸಿದೆ. ಆ ಚಿತ್ರದ್ದೋ ಹೊಚ್ಚಹೊಸ ಪರಿಕಲ್ಪನೆ. ಅವತ್ತು ಬೆಂಗಳೂರಿನಲ್ಲಿ ಜಡಿಮಳೆ. ಆಯಿಲ್ ಪೆಯಿಂಟಿನಲ್ಲಿ ಮಾಡಬೇಕಾದ ಸೂಕ್ಷ್ಮ ಕೆಲಸ. ಮಳೆ ಬೀಳುತ್ತಾ ಇದ್ದಿದ್ದರಿಂದ ಚಿತ್ರ ಬೇಗ ಬೇಗ ಒಣಗುತ್ತ ಇರಲಿಲ್ಲ. ಯಾವುದೋ ಧೈರ್ಯದ ಮೇಲೆ ಮಾಡತೊಡಗಿದೆ. ನಾನೇ ನಿರೀಕ್ಷಿಸಿರಲಿಲ್ಲ, ಇಡೀ ಐದು ದಿನಗಳಲ್ಲಿ ೨ ಚಿತ್ರ ಬರೆದು ಮುಗಿದೇ ಹೊಯಿತು! ಅದು ನನ್ನ ಅರವತ್ತು ವರ್ಷಗಳ ಚಿತ್ರ ಜೀವನದಲ್ಲಿ ಆದ ಒಂದು ಪವಾಡ

ನನಗೆ ಗುರುಗಳ ಪರಿಚಯ ಆಗಿದ್ದು ೨೦೦೨ರಲ್ಲಿ ಎಂದು ನೆನಪು. ಅದಕ್ಕೂ ಹಿಂದೆಯೇ ನನ್ನ ’ಕಾವ್ಯಚಿತ್ರ’ ನೋಡಿದ್ದರು. ಆಗ ಅಷ್ಟೇನೂ ಆಪ್ತವಾದ ಪರಿಚಯ ಅಂತ ಆಗಿರಲಿಲ್ಲ. ಅದಾದ ಕೆಲವು ದಿನಗಳಲ್ಲಿ ಒಂದು ದಿನ ಪತ್ರವೊಂದು ಬಂತು, ಮುಂಬಯಿಯಿಂದ. ರಾಘವೇಶ್ವರರಿಂದ! ಸ್ವತಃ ಗುರುಗಳೇ ಬರೆದಿದ್ದರು! ನನಗೆ ಆಗ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಅದಕ್ಕೆ ಅಭಿನಂದನೆ ಮತ್ತು ಆಶೀರ್ವಾದ ತಿಳಿಸಿ.. ಎರಡೂ ಕೂಡ ಅನಿರೀಕ್ಷಿತವಾಗಿ ಆಗಿದ್ದು. ರಾಜ್ಯೋತ್ಸವ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಗುರುಗಳ ಆಶೀರ್ವಾದ ಪತ್ರವಂತೂ ಊಹಿಸಿಯೇ ಇರದ ವಿಷಯ. ಆಗ ನನಗೆ ಅನ್ನಿಸಿದ್ದು, ಒಳ್ಳೆಯ ಕೆಲಸ ಮಾಡಿದರೆ ದೇವರಿಂದ ಮತ್ತು ಗುರುಗಳಿಂದ ಪ್ರತಿಸ್ಪಂದನ ಬಂದೇ ಬರುತ್ತದೆ ಅಂತ. ಅದಾದ ನಂತರ ಬಚ್ಚಗಾರಿನಲ್ಲಿ ಕಾವ್ಯಚಿತ್ರ ನಡಿಯುತ್ತಾ ಇತ್ತು. ಆಗ ಗುರುಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಶ್ರೀಗಳು, ’ವರ್ಮಾ, ತಮ್ಮ ಚಿತ್ರನೋಡಲು ಸಮಯ ಇಲ್ಲ, ಆದರೂ ನೋಡುವ ಮನಸ್ಸಿದೆ. ವಾಹನದಲ್ಲೆ ಕುಳಿತು ಕೆಲಕಾಲ ನೋಡ್ತೇವೆ’ ಅಂತ ಹೇಳಿದರು. ಕಾರ್ಯಕ್ರಮ ಪ್ರಾರಂಭವಾಗಲು ಸ್ವಲ್ಪ ಸಮಯ ಉಳಿದದ್ದರಿಂದ ಒಂದಿಷ್ಟು ಹೊತ್ತು ಸಂಭಾಷಿಸಿದರು. ಭಾಂಧವ್ಯದ ಪ್ರಾರಂಭ ಅಲ್ಲಿ. ನಂತರ ಆಗಾಗ ಯಾರದ್ದೋ ಮನೆಗಳಿಗೆ ಹೋಗುವ ಸಂದರ್ಭಗಳಲ್ಲಿ ’ಗುರುಗಳು ಈ ತರ ಒಬ್ಬರ ಮನೆಗೆ ಹೋಗುತ್ತಾ ಇದ್ದಾರೆ. ಒಂದು ಚಿತ್ರ ಬೇಕು’ ಅಂತ ಫೋನ್ ಬರುತ್ತಾ ಇರುತ್ತದೆ. ನಾನು ’ವಾಟರ್ ಕಲರ್ ಆದ್ರೆ ಒಂದು ವಾರ ಬೇಕು’ ಅಂತ ಹೇಳುತ್ತಾ ಇದ್ದರೂ ’ಇಲ್ಲ, ನಾಳೆನೇ ಹೋಗುತ್ತಾ ಇದ್ದಾರೆ’ ಅಂತ ಅವರ ಶಿಷ್ಯರು ಹೇಳಿದರೆ ನನಗೆ ’ಆಗಲ್ಲ’ ಅಂತ ಹೇಳೋಕೆ ಮನಸು ಬರುವುದಿಲ್ಲ.. ಅಂಥ ಪ್ರೀತಿಯ ಬೆಸುಗೆ.

ಶ್ರೀ ಬಿ. ಕೆ. ಎಸ್. ವರ್ಮಾ

ಅವರ ಕಣ್ಣುಗಳಲ್ಲಿ ಅದಮ್ಯ ಚೇತನ ಇದೆ. ಯಾವತ್ತೂ ಮುಖದಲ್ಲಿ ಒಂದು ತರಹ ಲವಲವಿಕೆ, ಮನಸಿಗೆ ಸ್ಫೂರ್ತಿ ಕೊಡುವ ಮುಖಭಾವ. ಒಂದು ವಿಷಯ ನನ್ನ ಮನಸ್ಸಿಗೆ ಸದಾ ಬರುತ್ತಾ ಇರುತ್ತದೆ .. ನೂರಾರು ಜನರ ಹತ್ತಿರ ಸದಾ ಮಾತನಾಡುತ್ತಾ ಇರುತ್ತಾರೆ. ಅನುಷ್ಠಾನ ಇತ್ಯಾದಿಗಳು, ಸಂನ್ಯಾಸತ್ವದ ಕಠಿಣ ನಿಯಮಗಳು ಇರುತ್ತವೆ. ಇಷ್ಟೆಲ್ಲ ಇದ್ದರೂ ಕೂಡ ಸ್ವಲ್ಪವಾದರೂ ಡಲ್ ಆಗಿ ಇರುವುದು ನಾನು ಇದುವರೆಗೂ ಕಂಡಿಲ್ಲ. ಎಂತಹ ಚೈತನ್ಯ ಇದು! ಸದಾ ನಗುಮುಖ! ಅವರು ಪೀಠದಲ್ಲಿ ಕುಳಿತುಕೊಳ್ಳುವ ದೃಶ್ಯವೇ ಸೊಗಸು. ಪೀಠದಲ್ಲಿ ಕುಳಿತುಕೊಳ್ಳುವಾಗ ಸುಮ್ಮನೆ ಒಮ್ಮೆ ಸ್ಮೈಲ್ ಮಾಡುತ್ತಾರೆ ನೋಡಿ, ಆಗ ಕಣ್ಣಲ್ಲಿ ಏನೋ ಮಿಂಚು ಹೊಳೆದ ಹಾಗಾಗುತ್ತದೆ. ನನ್ನ ಶ್ರೀಮತಿಯವರು ಯಾವಾಗಲೂ ಹೇಳುತ್ತಾ ಇರುತ್ತಾರೆ, ’ಅವರನ್ನು ನೇರವಾಗಿ ನೋಡೋಕೆ ಸಾಧ್ಯಾನೆ ಇಲ್ಲ, ಅಂತಹ ತೇಜಸ್ಸು’ ಅಂತ. ನಾನು ಕಂಡುಕೊಂಡ ಹಾಗೆ ಶ್ರೀಗಳದ್ದು ಮಗುವಿನಂತಹ ಮನಸ್ಸು. ಗೋಸಂರಕ್ಷಣೆಗೋಸ್ಕರ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಲೋಕದಲ್ಲಿ ತಮ್ಮ ಸ್ವಾರ್ಥಕ್ಕೋಸ್ಕರ ದುಡಿಯುವವರು ತುಂಬಾ ಜನರಿದ್ದಾರೆ, ಹಣಕ್ಕೊಸ್ಕರ, ಕೀರ್ತಿಗೋಸ್ಕರ… ಆದರೆ ಗುರುಗಳು ಹಾಗಲ್ಲ, ಗೋವಿಗೋಸ್ಕರ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಸಭೆಯೊಂದರಲ್ಲಿ ಅವರು ಹೇಳಿದ ’ಗೋರಕ್ಷಣೆಗೋಸ್ಕರ  ನಮ್ಮನ್ನೇ ಅರ್ಪಿಸಿಕೊಂಡಿದ್ದೇವೆ’ ಎಂಬ ಮಾತು ನನ್ನ ಮನಸ್ಸಿನಲ್ಲಿ ನಿಂತುಹೋಗಿದೆ.

ಸ್ವಾಮಿಗಳು ಅಂದರೆ ಮಡಿ ಮಡಿ ಅಂತ ಸದಾ ಜನರನ್ನು ದೂರ ಮಾಡುವವವರು ಎಂಬ ಭಾವನೆ ಸಮಾಜದಲ್ಲಿ ಇದೆ. ಆದರೆ ಶ್ರೀಗಳ ಪ್ರೀತಿ ಎಲ್ಲರನ್ನೂ ಹತ್ತಿರ ಸೇರಿಸಿಕೊಳ್ಳುವಂತಹದ್ದು. ಮಡಿ ಮೈಲಿಗೆಗಳ ಬದಲು ಶುದ್ಧ ಪ್ರೀತಿ ಇದೆ. ಇದನ್ನು ನೋಡಿದ ನನಗೆ ನೆನಪು ಬಂದಿದ್ದು ರಾಮ ಶಬರಿಯನ್ನು ಪ್ರೀತಿಸಿದ ಘಟನೆ. ನನಗೆ ಎಷ್ಟೋ ಬಾರಿ ಅವರು ರಾಮನಾಗಿ ಕಾಣಿಸಿದ್ದಾರೆ. ಎಳೆಯ ಮುದ್ದು ಕೃಷ್ಣನಾಗಿ ಕಾಣಿಸಿದ್ದಾರೆ. ಅಂಥದೊಂದು ಚಿತ್ರ: ರಾಜ್ಯಸಂರಕ್ಷಣೆಯ ರಾಮ, ಗೋಸಂರಕ್ಷಣೆಯ ಕೃಷ್ಣ ಎರಡೂ ಶ್ರೀಗಳಲ್ಲಿರುವಂತೆ ಒಂದು ಚಿತ್ರ ಕೂಡ ಮಾಡಿದ್ದೇನೆ. ಆ ಚಿತ್ರವನ್ನು ಶ್ರೀಗಳಿಗೆ ಶ್ರೀರಾಮಾಶ್ರಮದಲ್ಲಿ ಭಕ್ತಿಯಿಂದ ಅರ್ಪಿಸಿದೆ. ಆಗ ಅದನ್ನು ನೋಡಿ ಅದೆಷ್ಟು ಸಂತೋಷ ಪಟ್ಟರೆಂದರೆ ಆಗ ಮನಸ್ಸು ಪಡೆದುಕೊಂಡ ಶಕ್ತಿ, ಆ ಅನುಭೂತಿ ಅದೆಷ್ಟೋ ಕಾಲದವರೆಗೂ ತುಂಬಿತ್ತು. ನನಗೆ ಶ್ರೀಗಳೊಂದಿಗೆ ಅದೆಷ್ಟೋ  ಬಾರಿ ಮಾತನಾಡುವ ಅವಕಾಶ ಸಿಕ್ಕಿದೆ. ಒಂದು ಕಡೆ ಕುಳಿತು ಮಾತನಾಡುತ್ತಾ ಇದ್ದಾಗ ಡಿಸ್ಟರ್ಬ್ ಆಗುತ್ತ ಇದೆ ಅನ್ನಿಸಿದರೆ ’ಬನ್ನಿ ಮತ್ತೊಂದು ಕೋಣೆಯಲ್ಲಿ ಕುಳಿತು ಮಾತನಾಡೋಣ’ ಎಂದು ಮತ್ತೊಂದು ಕೋಣೆಗೆ ಕರೆದೊಯ್ದು ಮಾತನಾಡುತ್ತಾರೆ. ಅಷ್ಟು ಸೂಕ್ಷ್ಮ! ನಾನು ಅವರ ಬಳಿ ನನ್ನ ಯೋಜನೆಗಳ ಬಗ್ಗೆ ಹೇಳುತ್ತಾ ಇರುತ್ತೇನೆ, ಈ ರೀತಿ ಗೋವರ್ಧನ ಗಿರಿ ಇರಬೇಕು, ಇಲ್ಲಿ ಹೀಗಿರಬೇಕು ಅಂತ… ಗೋಸಂಬಂಧೀ ದಿವ್ಯ ಸಮುಚ್ಚಯ, ಹಾಗೂ ಗೌ-ಪುರದ ಬಗ್ಗೆ. ಅದಕ್ಕೆ ಅವರು ಹೇಳುತ್ತಾರೆ ’ಇಲ್ಲೇ ಇದ್ಬಿಡು ವರ್ಮಾ ನೀನು’ ಅಂತ… ನಾನು ಹೃದಯ ತುಂಬಿ ಹೇಳುತ್ತಾ ಇದ್ದೆ… ’ಮಗನಿಗೊಂದು ಮದುವೆ ಆಗಲಿ ಸ್ವಾಮೀಜಿ, ಅದಾದ್ಕೂಡ್ಲೆ ಬಂದುಬಿಡ್ತೀನಿ’ ಅಂತ. ನಾನು ಮನೆಯಲ್ಲಿ ಅದೆಷ್ಟೋ ಬಾರಿ ನನ್ನ ಶ್ರೀಮತಿಯವರಿಗೆ ಹೇಳುತ್ತಾ ಇರುತ್ತೇನೆ ’ಗುರುಗಳು ನನಗೇನೋ ಹೊಸ ಚೈತನ್ಯ ಕೊಡ್ತಾ ಇದ್ದಾರೆ’ ಅಂತ.

ಗೋಕರ್ಣಕ್ಕೆ ನನ್ನನ್ನು ಕರೆಸಿದ್ದರು. ನಾನು ಅದೆಷ್ಟೋ ವರ್ಷಗಳಿಂದ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆಗಿಯೇ ಇರಲಿಲ್ಲ. ಇದ್ದಕಿದ್ದಂತೆ ಒಂದು ದಿನ ಕರೆ ಬಂತು. ಗೋಕರ್ಣದ ’ಸಾರ್ವಭೌಮ’ ಪ್ರಶಸ್ತಿ ನಿಮಗೆ ಬಂದಿದೆ ಅಂತ. ಇದು ಭಗವಂತ ಕೊಟ್ಟಿದ್ದು ಅಂತ, ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಆಯಿತು ಅಂತ ಹೋದೆ. ಅಲ್ಲಿ ಆತ್ಮಲಿಂಗ ಎಲ್ಲವನ್ನೂ ಗುರುಗಳ ಜೊತೆ ನೋಡಿ ಆದ ಸಂತೋಷ ಅತಿಶಯವಾದದ್ದು. ತುಂಬಾ ಸಂತೋಷವಾಯಿತು. ಅಂದು ಸಮುದ್ರತೀರದಲ್ಲಿ ಕುಳಿತು ’ಇಲ್ಲಿ ಮರಳಿನಲ್ಲಿ ಒಂದು ಆತ್ಮಲಿಂಗ ಮಾಡ್ಬೇಕು, ಗುರುಗಳು ಅದನ್ನು ನೋಡ್ಬೇಕು’ ಅಂತ ಕನಸು ಕಂಡಿದ್ದು ಇನ್ನೂ ನೆನಪಿದೆ.

ಶ್ರೀಗಳ ಧ್ವನಿಯಲ್ಲೊಂದು ಮಾಂತ್ರಿಕ ಶಕ್ತಿಯಿದೆ. ಅವರ ಪ್ರತಿ ಶಬ್ದಗಳಲ್ಲೂ ದಿವ್ಯವಾದ ಅರ್ಥ ಇದೆ. ಇಂದು ಮುಂಜಾನೆ ತಾನೆ ಓದುತ್ತಾ ಇದ್ದೆ.. ಶ್ರೀಗಳು ಬರೆದ ಬ್ಲಾಗ್‍ನಲ್ಲಿ… ’ಜಗತ್ತು ಉದ್ಧಾರ ಮಾಡ್ಬೇಕು ಅಂದ್ರೆ ಸಿಂಧುವಾಗಿರಬೇಕು, ಆತ್ಮೋದ್ಧಾರಕ್ಕಾದರೆ ಬಿಂದು ಸಾಕು’ ಅಂತ. ಎಷ್ಟು ಅರ್ಥಪೂರ್ಣವಾಗಿದೆ ಈ ಮಾತು.

ಶ್ರೀ ಬಿ. ಕೆ. ಎಸ್. ವರ್ಮಾ ೬೦ರ ಸಂಭ್ರಮ

ನನಗೆ ಅರವತ್ತು ವರ್ಷಗಳು ಪೂರೈಸಿದ ಸಂಧರ್ಭದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಗುರುಗಳನ್ನು ಕರೆದಿದ್ದೆವು. ಆಗ ಶ್ರೀಗಳು ತುಂಬಾ ಬ್ಯುಸಿಯಾಗಿದ್ದರು. ಕರೆಯುವುದಕ್ಕೇ ಸಂಕೋಚ ನಮಗೆ. ಆದರೂ ಏನೋ
ದೂರದ ಆಸೆಯಿಂದ ಕರೆದೆವು. ಒಪ್ಪಿಕೊಂಡರು. ಗುರುಗಳು ಅಂದು ಮಡಿಕೇರಿಯಿಂದ ಕಾರ್ಯಕ್ರಮಕ್ಕೋಸ್ಕರವೇ ಬಂದರು. ಗುರುಗಳು ಕಾರಿನಿಂದ ಇಳಿದಿದ್ದನ್ನು ಕಂಡ ಕೂಡಲೇ ರೋಮಾಂಚನವಾಯಿತು. ಕಣ್ಣುತುಂಬಿ ಬಂತು. ಆಶೀರ್ವಾದ ಮಾಡಿದರು. ಅವತ್ತು ನನಗೆ ಅರವತ್ತು ವರ್ಷದ ಬದುಕು ಸಾರ್ಥಕ ಅಂತ ಅನ್ನಿಸಿತು. ’ಗುರುಗಳು ಸಾಮಾನ್ಯವಾಗಿ ಕುಳಿತುಕೊಂಡೇ ಸನ್ಮಾನ ಮಾಡುತ್ತಾರೆ, ಆದರೆ ನಿಮ್ಮ ಸನ್ಮಾನ ಸಂದರ್ಭದಲ್ಲಿ ನಿಮ್ಮನ್ನು ಕೂರಿಸಿ ತಾವು ನಿಂತು ಸನ್ಮಾನ ಮಾಡಿದರು. ಇದು ತುಂಬಾ ಅಪರೂಪದ್ದು’ ಎಂದು ನನ್ನ ಸ್ನೇಹಿತ ಡಾ.ಪ್ರಸಾದ್ ಹೇಳಿದರು. ಇದಕ್ಕಿಂತ ಇನ್ನೇನು ಭಾಗ್ಯ ಬೇಕು ಅಂತ ಅನ್ನಿಸಿತು. ಇದನ್ನೆಲ್ಲ ಸದಾ ಮೆಲಕು ಹಾಕುತ್ತಾ ಇರುತ್ತೇನೆ.

ನನಗೆ ಅದೆಷ್ಟೋ ಬಾರಿ ಅನ್ನಿಸಿದೆ,… ನನ್ನ ದೇಹ ಒಂದು ಮಠ.. ಇದರಲ್ಲಿ ಇರುವವರು ಗುರುಗಳು ಅಂತ. ಅವರಲ್ಲೊಂದು ವಿಶೇಷ ಶಕ್ತಿಯಿದೆ. ಕಲ್ಕತ್ತಕ್ಕೂ ಕರೆದುಕೊಂಡುಹೋಗಿದ್ದರು. ಅಲ್ಲಿ ಇಮಾಮಿ ಸಂಸ್ಥೆಯ ಅಗರವಾಲ್  ಹಾಗೂ ಗೋಯೆಂಕ ಅವರು ನನ್ನ Demonstration ನೋಡಿ ಸಂತೋಷ ಪಡುತ್ತಾ ಇದ್ದರೆ ಅವರ ಮುಖ ನೋಡಿ ಗುರುಗಳಿಗೆ ಹಿಗ್ಗು.. ’ನಮ್ಮ ಹುಡುಗ ಹೇಗೆ ಮಾಡ್ತ ಇದ್ದಾನೆ, ನೋಡಿ’ ಅಂತ.

ವರ್ಮರ ಕುಂಚದಲ್ಲಿ ಅರಳಿದ ಶ್ರೀಗಳ ಚಿತ್ರ

ಒಮ್ಮೆ ಗುರುಗಳೊಂದಿಗೆ ರಾಮಚಂದ್ರಾಪುರಮಠದ ಗೋಶಾಲೆ ನೋಡುವ ಭಾಗ್ಯ ನನ್ನದಾಗಿತ್ತು. ಮಠಕ್ಕೆ ಹೋದಾಗ, ನಾನು ಗೋಶಾಲೆ ನೋಡಬೇಕು ಅಂತ ಹೊರಟೆ. ಗುರುಗಳು ತಾವೂ ನಮ್ಮೊಂದಿಗೆ ಬರುವುದಾಗಿ ಹೇಳಿದರು. ನನಗೆ ಹಿಗ್ಗಾಯಿತು. ಇಂದು ಇದೆಂಥಾ ಅದೃಷ್ಟ, ಗುರುಗಳೊಂದಿಗೆ ಗೋಶಾಲೆ ನೋಡುವ ಸುವರ್ಣಾವಕಾಶ ಸಿಕ್ಕಿತಲ್ಲ ಅಂತ. ಸರಿ, ಗುರುಗಳೊಂದಿಗೆ ಗೋಶಾಲೆಗೆ ಹೋದೆವು. ಅಲ್ಲಿ ಕರುಗಳು ತಾವು ಮುಂದೆ ತಾವು ಮುಂದೆ ಅಂತ ಬಂದು ಗುರುಗಳನ್ನು ಮುತ್ತಿಕೊಳ್ಳುತಾ ಇದ್ದ ದೃಶ್ಯ ನೋಡಿ ನನಗೆ ಶ್ರೀಕೃಷ್ಣನನ್ನು ಗೋವುಗಳು ಸುತ್ತುವರೆಯುತ್ತಿದ್ದವು ಅಂತ ಓದಿದ ವಿಷಯ ನೆನಪಾಯಿತು. ಪ್ರತಿ ಕರುವನ್ನೂ ಮೈಸವರಿ ಪ್ರೀತಿಸಿದರು. ’ಏನೋ, ಸಿಟ್ಟೇನೋ?’ ಅಂತ ಗುರುಗುಟ್ಟಿಕೊಂಡು ನೋಡುತ್ತಾ ಇದ್ದ ಕರುವನ್ನು ಮಾತನಾಡಿಸಿದರು. ’ಹೇಗಿದ್ದಿಯೋ’ ಅಂತ ಇನ್ನೊಂದನ್ನು. ಗುರುಗಳು ಕುಳಿತೆಡೆಗೆ ಹಸುಕರುಗಳೆಲ್ಲ, ಮಧ್ಯ ಇರುವ ನಮ್ಮೆಲ್ಲರನ್ನೂ ದಾಟಿಕೊಂಡು ಬರುತ್ತಾ ಇದ್ದವು. ಇದೆಂಥ ಪವಾಡ ಅಂತ ನನಗೆ ಆಶ್ಚರ್ಯ ಆಯಿತು. ಗುರುಗಳು ಹೋದೆಡೆಗೆ ಹಸುಕರುಗಳೆಲ್ಲ ಹಿಂಬಾಲಿಸಿಕೊಂಡು ಹೊಗುತ್ತಾ ಇದ್ದುದನ್ನು ನೋಡಿ ಮೂಕವಿಸ್ಮಿತನಾದೆ. ಆಗ ನನಗೆ ಗೋಪಾಲನೆ ಮಾಡುತ್ತಾ ಇರುವ ಶ್ರೀಕೃಷ್ಣನನ್ನೇ ಕಣ್ಣುತುಂಬಾ ನೋಡುತ್ತಾ ಇದ್ದೀನಿ ಎಂಬ ಹಾಗೆ ಭಾಸವಾಯಿತು. ಗುರುಗಳ ಬಗ್ಗೆ ಹೇಳಿದಷ್ಟಕ್ಕೂ ಮುಗಿಯದು. ಆದರೆ ನನಗೆ ಅಷ್ಟೇನೂ ಚನ್ನಾಗಿ ಹೇಳಲು ಬರುವುದಿಲ್ಲ. ಕುಂಚ ನನ್ನ ಅಭಿವ್ಯಕ್ತಿ ಮಾಧ್ಯಮ, ಪೆನ್ನು ಅಲ್ಲ. ನನಗೆ ಅವರನ್ನು ನೆನಪಿಸಿಕೊಂಡಾಗಲೆಲ್ಲ ಆನಂದ.. ನನಗೆ ’ಆನಂದ’ವೇ ಅವರಾಗಿದ್ದಾರೆ.

ಗುರುಗಳ ಯೋಜನೆಗಳಂತೂ ಸರ್ವಜನರಿಗೂ ಉಪಯುಕ್ತವಾದಂತವುಗಳು. ಅವುಗಳಲ್ಲಿ ಕಾಳಿನಷ್ಟೂ ಅನುಪಯುಕ್ತತೆ ಇಲ್ಲ. ಅವರು ಹೇಳುತ್ತಾರೆ, ಇದು ಬೀಜ, ನಿಮ್ಮ ಎದೆಯಲ್ಲಿ ಮೊಳಕೆ ಆಗಲಿ ಅಂತ. ಗೋಸಂರಕ್ಷಣಾ ಆಂದೋಲನದ ಬಗ್ಗೆ ನನಗೆ ಹೇಳಿದ ಮಾತು ’ವರ್ಮಾ, ವೃಕ್ಷಗಳ ಬಗೆಗೆ ಚಿತ್ರಗಳ ಮೂಲಕ ಜಾಗೃತಿ ಮೂಡಿಸಿದ್ದೀರ, ಗೋವುಗಳ ಬಗೆಗೂ ಜಾಗೃತಿ ಮೂಡಿಸಲು ಚಿತ್ರಗಳನ್ನು ಬರೆಯಿರಿ’ ಎಂಬುದು. ಗುರುಗಳ ಜೀವನಚರಿತ್ರೆಯನ್ನು ನನ್ನ ಚಿತ್ರಗಳ ಮೂಲಕ ಬಿಂಬಿಸಲು ಪ್ರಯತ್ನ ನಡಿಯುತ್ತಾ ಇರುವುದು ನನ್ನ ಸೌಭಾಗ್ಯ. ಗುರುಗಳ ಬಾಲ್ಯ, ಅವರು ಪುನರಪಿ ಜನನಂ ಶ್ಲೋಕ ಕೇಳುತ್ತ ಊಟ ಮಾಡುವುದು ಹೀಗೆ ಅವರ ಕಾಲದಲ್ಲೇ ಅವರ ಜೀವನಚರಿತ್ರೆಯನ್ನು ಚಿತ್ರಗಳ ಮೂಲಕ ಬರೆಯಲು ಅವಕಾಶ ಸಿಕ್ಕಿದೆ ಎಂಬ ಖುಶಿಯಿಂದ ಆ ಕೆಲಸದಲ್ಲಿ ತೊಡಗಿದ್ದೇನೆ. ಅವರು ತಾಯಿಯನ್ನೊಪ್ಪಿಸಿ ಸಂನ್ಯಾಸ ತೆಗೆದುಕೊಳ್ಳುವುದು, ಈಜಿಕೊಂಡು ಹೋಗಿ ಶಿವಪೂಜೆ ಮಾಡುತ್ತ ಇದ್ದಿದ್ದು.. ಈ ಎಲ್ಲ ಚಿತ್ರಗಳನ್ನೂ ಬರೆಯುವಾಗ ತುಂಬಾ ಅನುಭವಿಸಿ ಅನುಭವಿಸಿ ಬರೆದಿದ್ದೇನೆ. ಆ ಸಮಯದಲ್ಲಿ ನಾನೇ ಗುರುಗಳಾಗಿ ಭಾವಿಸಿಕೊಂಡಿದ್ದಿದೆ, ಸಂತೋಷದಲ್ಲಿ ಕಣ್ಣೀರು ಹಾಕಿದ್ದಿದೆ.

ನಾನು ಏನೇ ಮಾಡಬೇಕಾದರೂ, ಗುರುಗಳನ್ನು ನೆನಸದೇ ಹೋಗುವುದಿಲ್ಲ. ಅವರು ಏನು ಹೇಳಿದರೂ ಮಾಡುತ್ತೇನೆ. ವಿವೇಕಾನಂದರು ಹೇಳಿದಂತೆ ಇಂಥವರು ನಾಲ್ಕು ಜನ ದೇಶದ ನಾಲ್ಕು ಮೂಲೆಯಲ್ಲಿ ಇದ್ದರೆ ಈಗಿರುವ ಬಾಂಬ್ ಸಂಸ್ಕೃತಿ ಹೋಗಿ ಶಾಂತಿ ನೆಲೆಸೀತು. ನನ್ನ ಕಲ್ಪನೆಯಲ್ಲಿ ಗುರುಗಳ ಕುರಿತಾಗಿ ಒಂದಿಷ್ಟು ಚಿತ್ರಗಳನ್ನು ಮಾಡಬೇಕೆಂದುಕೊಂಡಿದ್ದೇನೆ. ಹರೇರಾಮ ವೆಬ್ಸೈಟಿನಲ್ಲಿ ಬರುತ್ತಿರುವ ಗುರುಗಳ ಬ್ಲಾಗಿಗೆ ಪೂರಕವಾದ ಚಿತ್ರಗಳನ್ನು ಬರೆಯಲು ಗುರುಗಳು ಸೂಚಿಸಿದ್ದಾರೆ. ಖಂಡಿತ ಬರೆಯುತ್ತೇನೆ ಎಂದು ಹೇಳಿದೆ. ಇದು ದೇವರೇ ಹುಡುಕಿಕೊಂಡು ಬಂದು ಕೊಟ್ಟ ಅವಕಾಶವಾಗಿ ತೋರುತ್ತದೆ. ನನಗೆ ಆಶ್ಚರ್ಯವಾಗುವುದೆಂದರೆ ಅವರಿಗೆ ಇಷ್ಟು ಬರೆಯಲು ಸಮಯ ಹೇಗೆ ಸಿಗುತ್ತದೆ ಎಂಬುದು. ಕೇಳಿದೆ, ’ರಾಮಾಯಣ ಬರೆಯೋಕೆ ಎಷ್ಟು ಏಕಾಗ್ರತೆ ಬೇಕು, ವಾತಾವರಣ ಬೇಕು, ಶಾಂತಿ ಬೇಕು. ಅಂಥದ್ದರಲ್ಲಿ ಸದಾ ಬ್ಯುಸಿ ಇರುವ ತಮಗೆ ಬರೆಯೋಕೆ ಸಮಯ ಎಲ್ಲಿ ಸಿಗುತ್ತೆ’ ಅಂತ. ’ಕಾರಿನಲ್ಲಿ ಹೋಗುತ್ತ ಇರಬೇಕಾದ್ರೆ ನಾವು ಹೇಳ್ತೇವೆ, ಮತ್ತೊಬ್ರು ಬರೆದುಕೊಳ್ತಾರೆ’ ಅಂದರು. ಛೆ, ಪ್ರಯಾಣದಲ್ಲೂ ಇವರಿಗೆ ರೆಷ್ಟ್ ಸಿಗೋದಿಲ್ವಲ್ಲ ಎನ್ನಿಸಿತು. ಅವರು ವಿಶ್ರಾಂತಿ ಯಾವಾಗ ತೆಗೆದುಕೊಳ್ಳುತ್ತಾರೆ ಎಂಬುದು ನನಗಿನ್ನೊಂದು ಕೌತುಕದ ವಿಷಯ. ರಾಮಾಯಣದ ಬಗ್ಗೆ ಅವರು ಬರೆಯುತ್ತಾ ಇರೋ ಲೇಖನ ’ಯೋಚನೆ ಮಾಡಿ’ ಬರೆಯುತ್ತಿರುವಂತಹದ್ದಲ್ಲ. ಅದು ಒಳಗಿಂದ ಹರಿದು ಬರುತ್ತಿರುವುದು.

ಯಾವುದೋ ಚಿತ್ರ ತುಂಬಾ ಚೆನ್ನಾಗಿ ಮೂಡಿತೆಂದರೆ ಒಮ್ಮೆ ಗುರುಗಳಿಗೆ ತೋರಿಸೋಣವೆಂಬ ಭಾವ ತಾನಾಗೇ ಮೂಡುತ್ತದೆ. ಚಿತ್ರ ಬರೆಯುವಾಗ ಗುರುಗಳೇ ಪಕ್ಕದಲ್ಲಿ ನಿಂತ ಹಾಗೆ ಭಾಸವಾಗಿದೆ. ನನ್ನ ತಾಯಿ ಕೂಡ ಗುರುಗಳ ಭಕ್ತೆ. ಮೊದಲಬಾರಿ ಫೋಟೋ ನೋಡಿದಾಗಲೇ ಮುಖದಲ್ಲಿ ಮಹಾಪುರುಷರ ಲಕ್ಷಣ ಕಾಣಿಸ್ತಾ ಇದೆ  ಅಂತ ಕಣ್ಣಿಗೊತ್ತಿಕೊಂಡರು. ಸದಾ ತಮ್ಮ ತಲೆದಿಂಬಿನ ಬಳಿ ಗುರುಗಳ ಫೋಟೋ ಇಟ್ಟುಕೊಳ್ಳುತ್ತಾ ಇದ್ದರು. ಆದರೆ ಗುರುಗಳ ಭೇಟಿಗೆ ಸೂಕ್ತ ಅವಕಾಶ ಕೂಡಿ ಬಂದಿರಲಿಲ್ಲ. ನಂತರ ಅವರಿಗೆ ಖಾಯಿಲೆಯಾಗಿ ಆಸ್ಪತ್ರೆಯಲ್ಲಿದ್ದಾಗ ಅಲ್ಲಿಗೆ ಗುರುಗಳು ಬೇರೆ ಯಾವುದೋ ಕಾರ್ಯನಿಮಿತ್ತ ಬಂದರು. ನನ್ನ ತಾಯಿಯವರನ್ನು ಭೇಟಿ ಮಾಡಿದರು. ನನ್ನ ತಾಯಿ ಗುರುಗಳನ್ನು ಭೇಟಿ ಮಾಡಿದಾಗ ಆಕೆಗೆ ಆದ ಸಂತೊಷ ಮುಖದಲ್ಲಿ ವ್ಯಕ್ತವಾಗಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಆಗ ಆಕೆ ತನ್ನ ಬಳಿ ಇದ್ದ ಹತ್ತು ಸಾವಿರ ರೂಪಾಯಿಗಳನ್ನು ಗುರುಚರಣಕ್ಕೆ ಅರ್ಪಿಸಿದಳು. ಅದಾಗಿ ಕೆಲದಿನಗಳಲ್ಲೆ ತೀರಿಕೊಂಡಳು. ಅವಳ ಕೊನೆದಿನಗಳಲ್ಲಿ ಶ್ರೀಗಳ ದರ್ಶನ ಆಯ್ತು. ನನಗೆ ಆಕೆ ರಾಮನಿಗೆ ಶಬರಿ ಕಾದ ಹಾಗೆ ಕಾಯುತ್ತಾ ಇದ್ದಳೇನೋ ಅನ್ನಿಸಿದೆ.

ಇಂಥ ಅನೇಕ ಅನುಭವಗಳು ಆ ಕ್ಷಣಕ್ಕೆ ಅಂಥದ್ದೇನೋ ಅನ್ನಿಸದಿರಬಹುದು. ಆದರೆ ಸಮಯ ಕಳೆದಂತೆಲ್ಲ ಸ್ಫೂರ್ತಿಯನ್ನು ಕೊಡುವಂತವುಗಳಾಗುತ್ತದೆ.

ಗುರುಗಳಿಗೂ ನನಗೂ ಅದೆಂತ ಭಾಂಧವ್ಯ ಬೆಳದಿದೆಯೆಂದರೆ ನನ್ನ ಮನಸ್ಸಿನಲ್ಲಿ ಸದಾ ಅವರಿರುತ್ತಾರೆ. ನಾನು ಯೋಚಿಸುತ್ತ ಇರುತ್ತೇನೆ.. ಎಷ್ಟು ಸಾವಿರ ಜನ ಅವರ ಭಕ್ತರು! ಆದರೆ ನನ್ನ ಮೇಲೆ ಅವರು ಎಂಥಾ ಅತಿಶಯವಾದ ಪ್ರೀತಿ ಇಟ್ಟಿದ್ದಾರೆ, ನಾನೆಷ್ಟು ಅದೃಷ್ಟವಂತ ಅಂತ. ಒಟ್ಟಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರ ಚೈತನ್ಯವೇ ಮನುಷ್ಯರೂಪವಾಗಿ ಬಂದು ಹೀಗೆ ನಮ್ಮೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತಿದೆ.

ಈ ವಾರದ ಹರೇರಾಮದ ಪ್ರಮುಖರು:

ಶ್ರೀ ಬಿ. ಕೆ. ಎಸ್. ವರ್ಮಾ
ಶ್ರೀಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ವರ್ಮಾ.
ಜನಜನಿತವಾಗಿ ಬಿ.ಕೆ. ಎಸ್. ವರ್ಮಾ.
ಜನ್ಮ ೧೯೪೯ರ ಸಪ್ಟಂಬರ್  ಐದರಂದು.
ಎಳವೆಯಲ್ಲೇ ಚಿತ್ರಕಲೆಯೆಡೆಗೆ ಸೆಳೆತ.
ಮಹಾನ್ ಕಲಾವಿದರಾದ ಶ್ರೀ ಎ.ಸಿ.ಹೆಚ್. ಆಚಾರ್ಯ ಮತ್ತ್ತುಎ.ಎಸ್.ಸುಬ್ಬರಾವರ ಪ್ರಭಾವ.
ಪ್ರಜಾಮತದ ಚಿತ್ರಕಲಾವಿದನಾಗಿ ವೃತ್ತಿ ಆರಂಭ.

೧೫ರ ಎಳೆ ಹರಯದಲ್ಲಿಯೇ ಹಿಂದಿಯ ‘ಆದ್ಮಿ’ಗೆ ಸಹಾಯಕ ಕಲಾನಿರ್ದೇಶಕ. ಅನಂತರ ಹಲವು ಕನ್ನಡ ಚಿತ್ರಗಳಲ್ಲಿ ಕೆಲಸ.ಶ್ರೀ ದೇವಿಪ್ರಸಾದ ಚೌಧರಿ, ಶ್ರೀ ಜಯಚಾಮರಾಜ ಒಡೆಯರ್,  ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್,  ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭೇಟಿ ಮಾಡಿ ಅವರ ಚಿತ್ರ ಬಿಡಿಸಿದ ವೈಶಿಷ್ಟ್ಯ.
೧೯೮೬-೮೭ರಲ್ಲಿ ವರ್ಮರ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಡಾ.ರೋರಿಚ್ ಮತ್ತು ಶ್ರೀಮತಿ ದೇವಿಕಾರಾಣಿಯವರು ಉದ್ಘಾಟಿಸಿದರು.

ವರ್ಮಾರವರು ’ಹರೇರಾಮ’ದ ಸಂಪಾದಕ ಬಳಗದೊಂದಿಗೆ..

ದೇಶ-ವಿದೇಶಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ.
ಅವರ ಅಪರೂಪದ ದಾರ ಮತ್ತು ಉಗುರಿನ ಚಿತ್ರರಚನೆ ಅಪಾರ ಜನಪ್ರಿಯ.

‘ಕಾವ್ಯ-ಚಿತ್ರ’, ‘ಗೀತ-ನೃತ್ಯ’ಗಳು ಜನಮನ್ನಣೆ ಗಳಿಸಿವೆ.
೧೯೯೭ರಲ್ಲಿ ಶತಾವಧಾನಿ ರಾ.ಗಣೇಶರೊಂದಿಗೆ ೨೪ ಗಂಟೆಗಳ ಕಾಲ ನಿರಂತರವಾಗಿ ನಡೆಸಿದ ‘ಕಾವ್ಯ-ಚಿತ್ರ’ ಒಂದು ದಾಖಲೆ.
ಪರಿಸರ ರಕ್ಷಣೆಯ ಸಂದೇಶ ನೀಡುವ ಚಿತ್ರಣದಲ್ಲಿ ವರ್ಮಾ ಪ್ರಖ್ಯಾತರು.
ಸನಾತನ ದೇವ-ದೇವತೆಗಳ ವರ್ಮರ ಚಿತ್ರ ಅತಿವಿಶಿಷ್ಟ.
ಸಂದ ಪ್ರಶಸ್ತಿಗಳು ಹಲವು;
ಅದರಲ್ಲಿ ಕೆಲವು:
  • ರಾಜ್ಯಲಲಿತ ಅಕಾಡೆಮಿ ಪ್ರಶಸ್ತಿ
  • ಆರ್ಯಭಟ ಪಶಸ್ತಿ
  • ರಾಜೀವಗ್ಧಾಂಧಿ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ
  • ಶ್ರೀ ರಾಮಚಂದ್ರಾಪುರಮಠದ ‘ಸಾರ್ವಭೌಮ ಪ್ರಶಸ್ತಿ’

ಇನ್ನೂ ಅದೆಷ್ಟೋ ಪ್ರಾದೇಶಿಕ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು.

“ನನ್ನ ಅಂತರಂಗದ ಚಾಲಕ ನನ್ನನ್ನು ಮುನ್ನಡೆಸುತ್ತಾನೆ. ನನ್ನ ಕೃತಿಗಳಾವುವೂ ನನ್ನದಲ್ಲ, ನಾನು ಅಭಿವ್ಯಕ್ತಿ ಕೇಂದ್ರ ಮಾತ್ರ”. ಎನ್ನುವುದು ವರ್ಮರ ವಿನೀತಭಾವ.
ಭಾವಚಿತ್ರಗಳು:
Facebook Comments Box