|| ಮರ್ತ್ಯಾವತಾರಸ್ತು ಇಹ ಮರ್ತ್ಯಶಿಕ್ಷಣಂ, ರಕ್ಷೋವಧಾಯೈವ ನ ಕೇವಲಂ ವಿಭೋಃ ||

“ಮಾಧವನು ಮಾನವನಾಗಿ ಮಣ್ಣಿಗಿಳಿದು ಬಂದುದು ಮಾನವಕೋಟಿಗೆ ಬದುಕನ್ನು ಕಲಿಸಲೆಂದು, ಕೇವಲ ರಾಕ್ಷಸಸಂಹಾರಕ್ಕಾಗಿ ಮಾತ್ರವಲ್ಲ.”

-ಭಾಗವತ(ರಾಮಾವತಾರದ ಕುರಿತಾಗಿ)

ದೇವರು ಮಾನವನಾಗಿ ಇಳಿದು ಬಂದು ನಮ್ಮ ನಡುವೆ ಬದುಕಿದರೆ ಹೇಗಿರಬಹುದು? ಮಾನವನೋರ್ವನು ಮಾನವಲೋಕದಲ್ಲಿ ದೇವರಂತೆ ಬಾಳಿದರೆ ಅದು ಹೇಗಿರಬಹುದು?

ಇವೆರಡೂ ಪ್ರಶ್ನೆಗಳಿಗೆ ಎರಡಕ್ಷರದ ಒಂದು ಉತ್ತರ- ‘ರಾಮ’

ಹೌದು, ನಮಗೆ ಬದುಕನ್ನು ಕೊಟ್ಟ ದೇವರು ಬದುಕನ್ನು ಕಲಿಸಿಕೊಡಲು ತಾಳಿದ ರೂಪವೇ ‘ರಾಮ!’ ಸ್ವರ್ಗವನ್ನು ಕೊಡುವ ದೇವರಿಗಿಂತಲೂ ಭೂಮಿಯಲ್ಲಿ ಚೆನ್ನಾಗಿ ಬದುಕಲು ಕಲಿಸಿಕೊಡುವ ದೇವರು ಮಾನವರಿಗೆ ಹೆಚ್ಚು ಹತ್ತಿರವಾಗುತ್ತಾನೆ ಮತ್ತು ಹೆಚ್ಚು ಪ್ರಸ್ತುತವಾಗುತ್ತಾನೆ. ಅದ್ಭುತ ಲೀಲೆಗಳನ್ನು, ಪವಾಡಗಳನ್ನು ತೋರುವ ಅವತಾರಗಳು ಆರಾಧನೆಗೆ ಯೋಗ್ಯವೆನಿಸಿದರೂ ಅನುಸರಣೆಗೆ ಯೋಗ್ಯವೆನಿಸಲಾರವು. ರಾಮಾವತಾರಕ್ಕೂ ಅನ್ಯ ಅವತಾರಗಳಿಗೂ ಅಂತರ ಬರುವುದೇ ಇಲ್ಲಿ; ನಾರಾಯಣನು ನರರ ನಡುವೆ ಬಂದು, ನರನಂತೆಯೇ ಬಾಳಿದ ಅವತಾರವದು!

ನಮ್ಮ ನಡುವೆ ಬಂದು, ನಮ್ಮಂತೆಯೇ ಉಪ್ಪನ್ನವನ್ನುಂಡು, ಕಷ್ಟ-ಸುಖಗಳನ್ನು ಕಂಡು ಬಾಳಿದ ಕಾರಣ ನಮಗವನ ‘ಅನುಸರಣೆಯು ಸಾಧ್ಯ’ವೆನಿಸುತ್ತದೆ; ಕಷ್ಟಪರಂಪರೆಯಲ್ಲಿಯೂ ಆದರ್ಶವನ್ನು ಬಿಡದೇ ಬಾಳಿದ ಕಾರಣ ‘ಅನುಸರಣೆಗೆ ಅದು ಯೋಗ್ಯ’ವೆನಿಸುತ್ತದೆ. ಮಾನವಲೋಕಕ್ಕೆ ಬಂದ ಬಳಿಕವೂ ದೈವತ್ವವನ್ನೇ ಪ್ರಕಟಪಡಿಸುವ, ಹೆಜ್ಜೆ-ಹೆಜ್ಜೆಗೂ ಚಮತ್ಕಾರಗಳನ್ನೇ ಚೆಲ್ಲುವ ಇತರ ಅವತಾರಗಳಿಗೆ ಜೀವರುಗಳು ದೂರದಿಂದಲೇ ಕೈಮುಗಿದುಬಿಡುತ್ತಾರೆ, ಅನುಸರಿಸುವ ಗೋಜಿಗೇ ಹೋಗುವುದಿಲ್ಲ!

ಕಗ್ಗದ ಕವಿಯ ಈ ಭಾವವನ್ನು ಗಮನಿಸಿ:

ಕಾರಿರುಳೊಳಾಗಸದಿ ತಾರೆ ನೂರಿದ್ದೇನು? |

ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ||

ದೂರದಾ ದೈವವಂತಿರಲಿ, ಮಾನುಷಸಖನ |

ಕೋರುವುದು ಬಡಜೀವ – ಮಂಕುತಿಮ್ಮ ||424||

ಮಾನವರ ಮನೆಬೆಳಕಾಗಿ ಮೂಡಿಬಂದ ದೇವಲೋಕದ ತಾರೆಯೇ ರಾಮ!

~

ರಾಮನು ಭುವಿಯಲ್ಲಿ ಬದುಕಿ ಬಾಳಿದ ಒಂದೊಂದು ಕ್ಷಣವೂ, ಆತನಿಟ್ಟ ಒಂದೊಂದು ಹೆಜ್ಜೆಯೂ ಮಾನವಕೋಟಿಗೆ ಪಾಠವೇ ಹೌದಾದರೂ- ಒಂದೆರಡು ಅಗುಳುಗಳ ಮೂಲಕ ಪಾತ್ರೆಯಲ್ಲಿರುವ ಅನ್ನವೆಲ್ಲದರ ಹದವರಿಯುವಂತೆ- ಕೆಲವೇ ಉದಾಹರಣೆಗಳ ಮೂಲಕ ರಾಮನು ನಡೆದ ಹಾದಿಯ ಹದವರಿಯಲು ಯತ್ನಿಸೋಣ.

~

ರಾಜ್ಯಕ್ಕಾಗಿ ಸತ್ಯತ್ಯಾಗವಿಲ್ಲ; ಸತ್ಯಕ್ಕಾಗಿ ರಾಜ್ಯತ್ಯಾಗ!

ಅಂದು ರಾಮನ ಮುಂದೆ ಬದುಕೇ ತಕ್ಕಡಿಯಾಗಿ ತೂಗಿತ್ತು; ‘ರಾಜ್ಯವೋ? ಸತ್ಯವೋ?’ ಯಾವುದಾದರೊಂದನ್ನು ರಾಮನು ಆರಿಸಿಕೊಳ್ಳಬೇಕಿತ್ತು; ರಾಜ್ಯವನ್ನು ಆರಿಸಿಕೊಳ್ಳುವುದಾದರೆ ಸತ್ಯವನ್ನು ಬಿಡಬೇಕಿತ್ತು; ಸತ್ಯವನ್ನೇ ಆರಿಸಿಕೊಂಡರೆ ರಾಜ್ಯವನ್ನು ಮರೆತುಬಿಡಬೇಕಿತ್ತು!

ರಾಮನು ಕೈಗೊಂಡ ನಿಶ್ಚಯ: ರಾಜ್ಯಕ್ಕಾಗಿ ಸತ್ಯತ್ಯಾಗ ಮಾಡಲಾಗದು; ‘ಸತ್ಯಕ್ಕಾಗಿ ಬೇಕಿದ್ದರೆ ರಾಜ್ಯತ್ಯಾಗ ಮಾಡಬಹುದು!’ ಮಿಥ್ಯೆಯ ಮೂಲಕ ರಾಜ್ಯವನ್ನು ಪಡೆದುಕೊಂಡರೆ- ಈವರೆಗೆ ಸತ್ಯವನ್ನು ಬಿಟ್ಟು ಗೊತ್ತಿಲ್ಲದ ಕೋಸಲದ ಪ್ರಜೆಗಳಿಗೆ ಸುಳ್ಳಿನ ದಾರಿಯನ್ನು ದೊರೆಯೇ ತೋರಿದಂತಾಗುವುದಿಲ್ಲವೇ?

ಆದುದರಿಂದಲೇ ರಾಮನು ‘ತನಗೆ ನೆಲೆಯಿಲ್ಲದಿದ್ದರೂ ಸರಿ, ಅಯೋಧ್ಯೆಯ ಸಿಂಹಾಸನದಲ್ಲಿ ಮಿಥ್ಯೆಯು ನೆಲೆಗೊಳ್ಳುವುದು ಬೇಡ’ವೆಂದು ಕಾಡಿಗೆ ನಡೆದನು.

ಮರ್ಯಾದಾಪುರುಷೋತ್ತಮನ ಮೂರು ಮಹಾತ್ಯಾಗಗಳು

೧. ರಾಜ್ಯತ್ಯಾಗ
‘ಯೇನ ಕೇನ ಪ್ರಕಾರೇಣ’ ರಾಜ್ಯಾಧಿಕಾರವನ್ನು ಪಡೆದುಕೊಳ್ಳುವುದು ಅನೇಕರಿಗೆ ಬದುಕಿನ ಮಹತ್ಸಾಧನೆಯೆನಿಸಿದೆ; ಆದರೆ ರಾಮನ ನಡೆಯೇ ಬೇರೆ; ಅನಾಯಾಸವಾಗಿ ಕೈಗೆ ಬಂದ ಮಹಾರಾಜ್ಯವನ್ನು ನಿಸ್ಪೃಹನಾಗಿ ಅವನು ತ್ಯಾಗ ಮಾಡುತ್ತಾನೆ; ನಿಜವಾದ ಮಹತ್ಸಾಧನೆಯೆಂದರೆ ಅದು!

ಲಾಭವು ಸಾಧನೆಯಲ್ಲ; ತ್ಯಾಗವು ಸಾಧನೆ! ಅಡ್ಡ ಮಾರ್ಗದ ಗಳಿಕೆಯು ಸಾಧನೆಯಲ್ಲ; ಸನ್ಮಾರ್ಗದಲ್ಲಿ ಮಾಡುವ ತ್ಯಾಗವು ಸಾಧನೆ!

ಅಧಿಕಾರಕ್ಕಾಗಿ ಜನರು ಮಾಡದ ಪಾಪವಿಲ್ಲ! ನ್ಯಾಯ-ನೀತಿಗಳನ್ನು ಬಿಟ್ಟು, ಸತ್ಯ-ಧರ್ಮಗಳನ್ನು ಸುಟ್ಟು, ಬಹಳ ಕಷ್ಟ ಪಟ್ಟು ಜನರು ಅಧಿಕಾರವನ್ನು ಹಿಡಿಯುತ್ತಾರೆ! ಇತಿಹಾಸದಲ್ಲಿ ಅಣ್ಣ-ತಮ್ಮಂದಿರನ್ನು ಕೊಂದು ಪಟ್ಟಕ್ಕೆ ಬಂದವರೆಷ್ಟಿಲ್ಲ? ತಂದೆ-ತಾಯಿಗಳ, ಬಂಧು-ಮಿತ್ರರ ಶವಗಳ ಮೇಲೆ ಅಧಿಕಾರ ಮಾಡಿದವರೆಷ್ಟಿಲ್ಲ? ವರ್ತಮಾನ ಕಾಲವಂತೂ ‘ಅಧಿಕಾರಕ್ಕೆ ಬರಲು ವಾಮ ಮಾರ್ಗವು ಅನಿವಾರ್ಯ’ ಎನ್ನುವ ಸ್ಥಿತಿಯಲ್ಲಿದೆ!

ಹೀಗಿರುವಾಗ ನ್ಯಾಯಪ್ರಾಪ್ತವಾದ ಮಹಾಸಾಮ್ರಾಜ್ಯವನ್ನು ನ್ಯಾಯವಾದ ಹಕ್ಕುದಾರನೋರ್ವನು ಕೈಯಾರೆ ಬಿಟ್ಟು ಕೊಡುವುದು ಮಾನವತೆಗೆ ಮೇಲ್ಪಂಕ್ತಿಯಲ್ಲವೇ?

‘ನನ್ನನ್ನು ಸೆರೆಗಟ್ಟಿ, ನೀನೇ ದೊರೆಯಾಗು’ ಎನ್ನುವ ದೊರೆ; ‘ನೀನಲ್ಲದೇ ಬೇರಾರೂ ದೊರೆಯಾಗಲು ಸಾಧ್ಯವಿಲ್ಲ’ ಎಂದು ಏಕಾಭಿಪ್ರಾಯ ಮತ್ತು ಸ್ಪಷ್ಟಾಭಿಪ್ರಾಯದಲ್ಲಿ ಸಾರುವ ರಾಜಗುರುಗಳು, ಮಂತ್ರಿಗಳು, ಸೇನಾಪತಿಗಳು; ‘ನೀನಿರದ ನಾಡು ಕಾಡು, ನೀನಿರುವ ಕಾಡೇ ನಾಡು!’ ಎನ್ನುತ್ತ ವನವಾಸಕ್ಕೆ ರಾಮನನ್ನೇ ಅನುಸರಿಸಿ ಬರುವ ಪ್ರಜೆಗಳು; ಕೊನೆಗೆ- ರಾಮನಿಗೆ ಸಲ್ಲಬೇಕಿದ್ದ ರಾಜ್ಯವನ್ನು ಯಾರಿಗೆ ನೀಡಲಾಗಿದೆಯೋ ಆ ಭರತನೂ ರಾಮನನ್ನೇ ರಾಜನನ್ನಾಗಿಸಲು ಸರ್ವಾರ್ಪಣೆಗೆ ಸಿದ್ಧನಾಗಿದ್ದಾನೆ!

ಹೀಗೆ ರಾಜ್ಯಕ್ಕೆ ರಾಜ್ಯವೇ ಇನ್ನಿಲ್ಲದ ಒತ್ತಡವನ್ನು ಹಾಕಿದರೂ ವಿಚಲಿತನಾಗದೇ, ಕೊನೆಗೂ ಅಧಿಕಾರವನ್ನು ಬಿಟ್ಟು ಕಾಡಿಗೆ ಹೊರಟೇ ಹೋದ ರಾಮನು ತನ್ನ ಬದುಕಿನ ಮೂಲಕ ಅಂದಿನ-ಮುಂದಿನ ಪೀಳಿಗೆಗೆ ನೀಡಿದ ತ್ಯಾಗದ ಪಾಠ ಬಹು ದೊಡ್ಡದು!

೨. ಸೀತಾತ್ಯಾಗ

ಸೀತಾರಾಮರ ಅನುಪಮವಾದ ಪ್ರೇಮವನ್ನು ಹಲವಾರು ಸಾವಿರ ಶ್ಲೋಕಗಳ ಮೂಲಕ ವಾಲ್ಮೀಕಿ ರಾಮಾಯಣವು ಬಣ್ಣಿಸಿದೆ. ರಾಮನಂತೆ ಸತಿಯನ್ನು ಪ್ರೀತಿಸಿದವರಿಲ್ಲ; ರಾಮನಂತೆ ಸತಿಗಾಗಿ ಅತ್ತವರಿಲ್ಲ; ಜಗತ್ತಿನ ಚರಿತ್ರೆಯಲ್ಲಿ ತನ್ನ ಸತಿಗಾಗಿ ಸಮುದ್ರಕ್ಕೆ ಸೇತುವೆಯನ್ನು ಯಾರಾದರೂ ಕಟ್ಟಿದ್ದರೆ ಅದು ರಾಮನೋರ್ವನೇ! ಸೀತೆಗಾಗಿ ರಾಮನು ತ್ರೇತಾಯುಗದ ವಿಶ್ವಯುದ್ಧವನ್ನೇ ನಡೆಸಿದವನು!

ಹೀಗಿದ್ದರೂ, ಪ್ರಜಾಭಿಪ್ರಾಯವನ್ನು ಮಾನ್ಯ ಮಾಡಲೆಂದು ತನ್ನ ಹೃದಯವೇ ಆದ, ತನಗೆ ಪ್ರಾಣಕ್ಕಿಂತ ಮೇಲಾದ ಸೀತೆಯ ಪರಿತ್ಯಾಗ ಮಾಡುತ್ತಾನೆ.

ಘಟನೆಯ ಹಿನ್ನೆಲೆ ಹೀಗಿದೆ:

ಒಂದು ವರ್ಷ ರಾವಣನ ವಶದಲ್ಲಿದ್ದ ಸೀತೆಯ ಚಾರಿತ್ರ್ಯದ ಕುರಿತು ಅಯೋಧ್ಯೆಯ ಜನರು ಅಲ್ಲಲ್ಲಿ ಗುಂಪುಗೂಡಿ ಮಾತನಾಡಿಕೊಳ್ಳುತ್ತಿರುತ್ತಾರೆ. (ರಜಕನೋರ್ವನೇ ಸೀತೆಯ ಕುರಿತು ಮಾತನಾಡಿದನೆಂಬುದು ಅನಂತರದ ಕಲ್ಪನೆ; ಮೂಲ ರಾಮಾಯಣಕ್ಕೆ ಅದು ಸಮ್ಮತವಲ್ಲ.) ‘ಮಹಾರಾಣಿಯ ಕಥೆಯೇ ಹೀಗೆಂದ ಮೇಲೆ, ಮಹಾರಾಜನೂ ಅದನ್ನು ಒಪ್ಪಿಕೊಳ್ಳುವನೆಂದಮೇಲೆ ತಮ್ಮ ಸತಿಯರೂ ಚಾರಿತ್ರ್ಯವನ್ನು ಗಾಳಿಗೆ ತೂರಬಹುದು; ತಾವೂ ಅದನ್ನು ಒಪ್ಪಿಕೊಳ್ಳಬೇಕಾಗಬಹುದು.’ ಪ್ರಜೆಗಳ ಈ ಮಾತುಗಳು ರಾಮನನ್ನು ವಿಚಲಿತಗೊಳಿಸಿದವು. ಲೋಕದಲ್ಲಿ ಚಾರಿತ್ರ್ಯವನ್ನು ಸ್ಥಾಪಿಸಲೆಂದೇ ಬಂದವರು ಸೀತಾರಾಮರು; ಹಾಗಿರುವಾಗ ಸಮಾಜದ ಚಾರಿತ್ರ್ಯಪತನಕ್ಕೆ ತಾವು ಉದಾಹರಣೆಯಾಗಬಾರದೆಂಬ ಕಾರಣಕ್ಕೆ ರಾಮನು ಸೀತಾಪರಿತ್ಯಾಗವನ್ನು ಮಾಡುತ್ತಾನೆ.

೩. ಲಕ್ಷ್ಮಣತ್ಯಾಗ

ರಾಮನ ತ್ಯಾಗವು ಪರಾಕಾಷ್ಠೆಯನ್ನು ತಲುಪುವುದು ಲಕ್ಷ್ಮಣನ ಪರಿತ್ಯಾಗದಲ್ಲಿ! ಕಾಲಪುರುಷನೊಡನೆ ಏಕಾಂತ-ಮಾತುಕಥೆಯ ಸನ್ನಿವೇಶದಲ್ಲಿ ನಡುವೆ ಪ್ರವೇಶಿಸಿದವರಿಗೆ ಮೃತ್ಯುದಂಡದ ನಿಯಮವಿತ್ತು; ಲಕ್ಷ್ಮಣನಿಗೆ ಆ ಸಮಯದಲ್ಲಿ ಮಧ್ಯೇ ಪ್ರವೇಶಿಸದೇ ವಿಧಿಯಿರಲಿಲ್ಲ; ಲಕ್ಷ್ಮಣನಿಗೆ ‘ಮೃತ್ಯುದಂಡ’ವನ್ನಾಗಲೀ, ತತ್ಸಮಾನವಾದ ‘ಪರಿತ್ಯಾಗ’ವನ್ನಾಗಲೀ ವಿಧಿಸದೇ ರಾಮನಿಗೂ ಬೇರೆ ವಿಧಿಯಿರಲಿಲ್ಲ! ಕರ್ತವ್ಯದ ತಕ್ಕಡಿಯು ಮತ್ತೊಮ್ಮೆ ರಾಮನ ಮುಂದೆ ತೂಗಾಡಿತು; ಒಂದೆಡೆ ಲಕ್ಷ್ಮಣ, ಮತ್ತೊಂದೆಡೆ ನಿಯಮ. ರಾಮನು ಲಕ್ಷ್ಮಣನನ್ನೇ ತ್ಯಾಗ ಮಾಡಿದನೇ ಹೊರತು ನಿಯಮವನ್ನಲ್ಲ!

‘ತತ್ತ್ವಕ್ಕಾಗಿ ತ್ಯಾಗ’ದ ರಾಮನ ನಡೆಗಳನ್ನು ಅವನ ನುಡಿಗಳಲ್ಲಿಯೇ ಕೇಳಿ; ‘ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ಸೀತೆಯನ್ನಾದರೂ ಬಿಟ್ಟೇನು! ಸೀತೆಗೂ ಮಿಗಿಲೆನಿಸುವ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಸತ್ಯವನ್ನು ಮಾತ್ರ ಎಂದಿಗೂ ಬಿಡಲಾರೆ!’ ಆ ನುಡಿಗಳು ರಾಮನ ಬದುಕನ್ನು ಕಠೋರವಾಗಿ ಪರೀಕ್ಷಿಸಿದವು; ರಾಮನು ಮಾತ್ರ ಸೋಲೊಪ್ಪಿಕೊಳ್ಳಲೇ ಇಲ್ಲ!

ಸಂತನೆನಿಸುವುದು ‘ಸ್ವಂತ’ಕ್ಕೆ ಒತ್ತು ಕಡಿಮೆಯಾದಾಗ..

ಪ್ರಜೆಗಳು ಸತ್ಯವನ್ನು ಬಿಡದಿರಲೆಂದು ರಾಜ್ಯವನ್ನು ಬಿಟ್ಟ, ಪ್ರಜೆಗಳು ಚಾರಿತ್ರ್ಯವನ್ನು ಬಿಡದಿರಲೆಂದು ಸೀತೆಯನ್ನು ಬಿಟ್ಟ, ಪ್ರಜೆಗಳು ಧರ್ಮವನ್ನು ಬಿಡದಿರಲೆಂದು ಲಕ್ಷ್ಮಣನ್ನೇ ಬಿಟ್ಟ ರಾಮನು ತ್ಯಾಗದಲ್ಲಿ ಯಾವ ಸಂತರಿಗೆ ಕಡಿಮೆ? ಅಥವಾ ಯಾವ ಸಂತರು ತ್ಯಾಗದಲ್ಲಿ ರಾಮನಿಗೆಣೆ?

~

ಸೇವಕ ಮೊದಲು; ನಾಯಕ ಬಳಿಕ!

‘ಸೇವಕರಿಗೆ ಉಣಬಡಿಸಿ ಉಳಿದಿದ್ದನ್ನು ತಾನುಣ್ಣಬೇಕು; ತಾನು ತಿಂದುಳಿದಿರುವುದನ್ನು ಸೇವಕರಿಗೆ ನೀಡುವುದಲ್ಲ!’

-ಮನುಸ್ಮೃತಿ

ರಾಮನ ನಡೆಗಳನ್ನು ಗಮನಿಸಿ:

  • ರಾಮನು ತನ್ನ ವಿವಾಹದ ಮುನ್ನ ಅಹಲ್ಯಾ-ಗೌತಮರ ಮುರಿದ ದಾಂಪತ್ಯವನ್ನು ಮರಳಿ ಕೂಡಿಸುತ್ತಾನೆ.
  • ತನ್ನ ತಮ್ಮ ಭರತನಿಗೆ ಮೊದಲು ರಾಜ್ಯಭಾರದ ಅವಕಾಶವನ್ನು ನೀಡಿ, ಬಳಿಕ ತಾನು ದೊರೆಯಾಗುತ್ತಾನೆ; ಮೊದಲು ಪಾದುಕಾರಾಜ್ಯ; ಬಳಿಕ ರಾಮರಾಜ್ಯ!
  • ಅಯೋಧ್ಯೆಯಲ್ಲಿ ತಾನು ಪಟ್ಟವನ್ನೇರುವ ಮೊದಲು ಸುಗ್ರೀವನನ್ನು ಕಿಷ್ಕಿಂಧೆಯ ಸಿಂಹಾಸನದಲ್ಲಿಯೂ, ವಿಭೀಷಣನನ್ನು ಲಂಕೆಯ ಸಿಂಹಾಸನದಲ್ಲಿಯೂ ಕುಳ್ಳಿರಿಸಿ, ಪಟ್ಟಾಭಿಷೇಕ ಮಾಡಿಸುತ್ತಾನೆ!

ಭಕ್ತರ ಪ್ರಸಾದವನ್ನು ಸವಿಯುವ ಭಗವಂತನು ಯಾರೆಂದು ಕೇಳಿದಿರಾ? ಅದು ರಾಮ! ರಾಮನೊಬ್ಬನೇ!

~

ಸ್ತ್ರೀಕಾರುಣ್ಯ

“ಅವಧ್ಯಾಃ ಸರ್ವಭೂತಾನಾಂ ಪ್ರಮದಾಃ”

‘ನಾರಿಯರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ!’

-ರಾಮಾಯಣ

 

ಕಣ್ಣೆದುರು ನಿಂತಿರುವ ಕ್ರೂರ ರಕ್ಕಸಿಯಲ್ಲೂ

ಹೆಣ್ಣೆಂಬ ಕರುಣೆಯೇನೋ!

ಮಾತೃವಾತ್ಸಲ್ಯ ಸ್ಮರಣೆಯೇನೋ!

ಕಲ್ಲುಮಳೆಗರೆದಿಹಳು, ಕೊಲ್ಲಲೈತರುತಿಹಳು,

ಬಿಲ್ಲನೆತ್ತದೆ ನಿಂತೆಯೋ!

ರಾಘವನೇ, ಹೆಣ್ಣೆಂಬುದೇ ಚಿಂತೆಯೋ..

-ಗಜಾನನ ಶರ್ಮಾ

ತನ್ನ ಮೇಲೆ ಕಲ್ಲುಗಳ ಮಳೆಗರೆಯುವ ರಕ್ಕಸಿ ತಾಟಕೆಯ ಮೇಲೆ ರಾಮನು ಕರುಣೆಯ ಮಳೆಗರೆಯುತ್ತಾನೆ! ಗುರು ಕೌಶಿಕರು ‘ಕೊಲ್ಲು! ಕೊಲ್ಲು!’ ಎಂದು ಒತ್ತಾಯಿಸುತ್ತಿದ್ದರೂ ಬಾಲ ರಾಮನಿಗೆ ಆಕೆಯನ್ನು ಕೊಲ್ಲುವ ಮನಸ್ಸೇ ಇಲ್ಲ; ಕಾರಣ ಆಕೆ ಹೆಣ್ಣು! ಸ್ತ್ರೀಯರ ಸಂರಕ್ಷಣೆಯು ಭಾಷಣ-ಘೋಷಣೆಗಳಲ್ಲಿ ಮಾತ್ರವೇ ಉಳಿದಿರುವ ಈ ಕಾಲದಲ್ಲಿ ರಕ್ಕಸಿಯರ ಕುರಿತೂ ಕನಿಕರಿಸಿದ ರಾಮನ ನಡೆಯು ಪ್ರೇರಣಾದಾಯಿ!

ರಾಮನ ಸ್ತ್ರೀಕಾರುಣ್ಯವು ಕೋಲ್ಮಿಂಚಿನಂತೆ ಕ್ಷಣಿಕವಲ್ಲ; ಸೂರ್ಯೋದಯದಂತೆ ಸ್ಥಿರ. ಉದಾಹರಣೆಗಳು ಹಲವು:

ಶೂರ್ಪಣಖೆಯು ಅಕಾರಣವಾಗಿ ಸೀತೆಯ ಮೇಲೇರಿ ಹೋಗಿದ್ದಳು; ಇನ್ನೇನು ಆಕೆಯನ್ನು ಕೊಲ್ಲುವುದರಲ್ಲಿದ್ದಳು; ಕೊಲ್ಲಬಂದವರನ್ನು ಕೊಲ್ಲಬೇಕೆಂದು ಶಾಸ್ತ್ರಗಳು ಸ್ಪಷ್ಟವಾಗಿ ಸಾರುತ್ತವೆ; ಇಂದಿನ ಕಾನೂನೂ ಅದನ್ನೇ ಹೇಳುತ್ತದೆ! ಆದರೆ ರಾಮನು ಆಕೆಯನ್ನು ಕೊಲ್ಲುವುದಿಲ್ಲ! ಮತ್ತೆರಡು ಬಾರಿ ಆಕೆ ರಕ್ಕಸರ ಬಳಗವನ್ನು ಕರೆತಂದು ರಾಮನ ಮೇಲೆ ಛೂಬಿಡುತ್ತಾಳೆ; ಅವರೆಲ್ಲರನ್ನೂ ಸಂಹರಿಸಿದ ರಾಮನು ಶೂರ್ಪಣಖೆಯನ್ನು ಮಾತ್ರ ಕೊಲ್ಲುವುದೇ ಇಲ್ಲ! ಕಾರಣ ಆಕೆ ಹೆಣ್ಣು!

ರಾಮನು ಸೀತೆಯ ರಕ್ಷಣೆಗಾಗಿ ಮಹಾಪ್ರಯತ್ನವನ್ನೇ ಕೈಗೊಳ್ಳಲು ‘ಆಕೆ ತನ್ನ ಪತ್ನಿ, ಪ್ರಾಣಪ್ರಿಯೆ, ಆಶ್ರಿತೆ’ ಎಂಬುದೆಲ್ಲವೂ ಕಾರಣಗಳೇ ಹೌದಾಗಿದ್ದರೂ- ಪ್ರಥಮ ಕಾರಣವು ‘ಆಕೆಯೋರ್ವ ಸ್ತ್ರೀ, ಮತ್ತು ಸ್ತ್ರೀಯೋರ್ವಳ ಮಾನ-ಪ್ರಾಣಗಳು ಆಪತ್ತಿನಲ್ಲಿವೆ’ ಎಂಬುದೇ ಆಗಿತ್ತು! (ವಾಲ್ಮೀಕಿ ರಾಮಾಯಣ- ಸುಂದರಕಾಂಡ- ಸರ್ಗ-೧೫, ಶ್ಲೋಕ-೫೦)

ರಾಮಾಭಿಷೇಕವನ್ನು ಹಾಳುಗೈದ ಕೈಕೇಯಿಯ ಸಂಬಂಧವನ್ನು ದಶರಥನು ಕಡಿದುಕೊಳ್ಳುತ್ತಾನೆ; ಮುಂದೆ ರಾವಣವಧೆಯ ಬಳಿಕ ದಶರಥನು ರಾಮನ ಮುಂದೆ ಪ್ರಕಟನಾಗಿ ಬೇಕಾದ ವರವನ್ನು ಕೇಳೆಂದಾಗ ರಾಮನು ತನಗಾಗಿ ಏನನ್ನೂ ಕೇಳಲಿಲ್ಲ; ‘ಕೈಕೇಯಿಯನ್ನು ಬಿಟ್ಟೆನೆಂಬ ಮಾತನ್ನು ಹಿಂಪಡೆ; ಆಕೆಯನ್ನು ಮರಳಿ ಪತ್ನಿಯಾಗಿ ಪರಿಗ್ರಹಿಸು’ ಎಂದು ಕೇಳುತ್ತಾನೆ.

ಭರತನಿಗೆ ‘ತಾಯಿಯನ್ನು ನೋಯಿಸಬೇಡ; ನನ್ನ ಮೇಲಾಣೆ, ಸೀತೆಯ ಮೇಲಾಣೆ!’ ಎನ್ನುವಾಗ ರಾಮನಲ್ಲಿ ಸ್ತ್ರೀಕಾರುಣ್ಯವು ಮಾತ್ರವಲ್ಲ, ‘ಅಪಕಾರಿಗೂ ಉಪಕಾರ ಮಾಡು’ ಎಂಬ ಮಹಾಪುರುಷಭಾವ!

‘ಕೋಮಲೆಯರನ್ನು ಕೋಮಲವಾಗಿಯೇ ನೋಡಿಕೊಳ್ಳಬೇಕು; ಕಠೋರ ವ್ಯವಹಾರಕ್ಕೆ ಅವರೆಂದೂ ಅರ್ಹರಲ್ಲ’ ಎಂಬ ರಾಮನ ನಿಲುವಿಗೆ ರಾಮಾಯಣದ ಅನೇಕಾನೇಕ ಪ್ರಸಂಗಗಳು ಸಾಕ್ಷಿ ಹೇಳಿವೆ.

~

ರಾಮ- ಏಕಪತ್ನೀವ್ರತಧರ!

ನುಡಿದ ನುಡಿಯೊಂದೇ; ಹಿಡಿದ ಗುರಿಯೊಂದೇ; ಸತಿಯಾಗಿ ಹಿಡಿದ ಕೈಯೊಂದೇ; ಅದು ರಾಮ! ತನ್ನ ನಾಮಧೇಯದ ಅಕ್ಷರಸಂಖ್ಯೆಯಲ್ಲಿ ಮಾತ್ರ ಎರಡಿರುವವನು; ಬದುಕಿನಲ್ಲಿ ಎಲ್ಲಿಯೂ ಎರಡಿಲ್ಲದವನು!

ಅದು ಬಹುಪತ್ನೀಕತ್ವವು ಬಹುವಾಗಿಯೇ ಚಾಲ್ತಿಯಲ್ಲಿದ್ದ ಕಾಲ. ‘ರಾಜಾನೋ ಬಹುವಲ್ಲಭಾಃ’ ಎಂಬ ಮಾತು ರೂಢಿಗತವಾಗಿದ್ದ ಕಾಲ; ದಶರಥನಿಗೆ ಮೂವರು ಪಟ್ಟದ ರಾಣಿಯರ ಸಹಿತ ಮುನ್ನೂರೈವತ್ತು ಸತಿಯರಿದ್ದರು! ರಾವಣನ ಸ್ತ್ರೀಯರ ಸಂಖ್ಯೆ ಏಳು ಸಾವಿರ! ಮುಂದಿನ ಯುಗದ ಕೃಷ್ಣನಿಗೆ ಹದಿನಾರು ಸಾವಿರದ ನೂರೆಂಟು ಮಡದಿಯರು! ರಾಮನು ಮಾತ್ರ ಏಕಪತ್ನೀವ್ರತಸ್ಥ!

ಏಕಪತ್ನೀವ್ರತವನ್ನು ಸ್ವೀಕರಿಸಲು ರಾಮನಿಗೆ ಯಾವ ನಿರ್ಬಂಧವೂ ಇರಲಿಲ್ಲ; ಯಾರ ಅಪ್ಪಣೆಯೂ ಇರಲಿಲ್ಲ; ಆದರೆ ರಾಮನು ಸೀತೆಗೆ ಒಮ್ಮೆ ಕೊಟ್ಟ ತನ್ನ ಮನಸ್ಸನ್ನು ಬದುಕಿನ ಕೊನೆಯವರೆಗೆ ಮತ್ತಾರಿಗೂ ಕೊಡಲಿಲ್ಲ!

‘ರಾಮನು ಪರಸತಿಯರನ್ನು ಕಣ್ಣೆತ್ತಿಯೂ ನೋಡಲಾರ!’ ಎಂಬ ಮಾತು ಕೈಕೇಯಿಯ ಬಾಯಲ್ಲಿ ಬಂದಿದೆ! ಸೀತೆಯಂತೂ ರಾಮನನ್ನು ‘ಸ್ಥಿರಾನುರಾಗ’ನೆಂದು ಕರೆದಿದ್ದಾಳೆ; ‘ತನ್ನ ಹೊರತು ಅನ್ಯ ನಾರಿಯರಲ್ಲಿ ರಾಮನ ಗಮನವು ಮನದಲ್ಲಿಯೂ ಹರಿದಿಲ್ಲ’ವೆಂದು ವಿಶ್ವಾಸ-ಹೆಮ್ಮೆಗಳೊಡನೆ ಹೇಳಿಕೊಳ್ಳುತ್ತಾಳೆ!

ಸೀತಾಪರಿತ್ಯಾಗದ ಬಳಿಕ ‘ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕು’ ಎಂಬ ಕಾರಣಕ್ಕೆ ರಾಮನು ಬೇರೆ ವಿವಾಹವಾಗಬಹುದಿತ್ತು; ಅಶ್ವಮೇಧ ಯಜ್ಞಕ್ಕೆ ಪತ್ನಿಯು ಬೇಕೇಬೇಕು; ಆಗಲಾದರೂ ಮತ್ತೊಂದು ಮದುವೆಗೆ ಮುಂದಾಗಬಹುದಿತ್ತು; ರಾಮನು ಸೀತೆಯ ಸ್ವರ್ಣಪ್ರತಿಮೆಯನ್ನು ತನ್ನ ಪಕ್ಕದಲ್ಲಿ ಇರಿಸಿಕೊಂಡು ಯಜ್ಞವನ್ನು ನೆರವೇರಿಸುತ್ತಾನೆಯೇ ಹೊರತು ಬೇರೆ ಯೋಚನೆ ಮಾಡುವುದಿಲ್ಲ!

ತನ್ಮೂಲಕ ತನ್ನ ಪ್ರಜೆಗಳಿಗೆ ಮತ್ತು ಲೋಕಕ್ಕೆ ರಾಮನು ನೀಡಿದ ಅಮರಸಂದೇಶಗಳು ಎರಡು: ಒಂದನೆಯದು ‘ಸೀತೆಯು ಚೊಕ್ಕ ಚಿನ್ನ; ಅವಳಲ್ಲಿ ಯಾವ ದೋಷವೂ ಇಲ್ಲ!’ ಎನ್ನುವುದು. ಎರಡನೆಯದು ‘ಸೀತೆಯು ಇಂದಿಗೂ ತನ್ನ ಪತ್ನಿಯೇ; ತಾನವಳನ್ನು ನಿಜಾರ್ಥದಲ್ಲಿ ಎಂದೂ ಪರಿತ್ಯಜಿಸಿಲ್ಲ!’ ಎಂಬುದು. ಸೀತೆಯನ್ನು ನಿಜಾರ್ಥದಲ್ಲಿಯೂ ಪರಿತ್ಯಜಿಸಿದ್ದರೆ ಅಶ್ವಮೇಧವನ್ನು ಕೈಗೊಳ್ಳುವಂತೆಯೂ ಇಲ್ಲ; ಸೀತೆಯ ಪ್ರತಿಮೆಯನ್ನು ಪಕ್ಕದಲ್ಲಿರಿಸಿಕೊಳ್ಳಲಂತೂ ಸಾಧ್ಯವೇ ಇಲ್ಲ!

~

‘ನಿನ್ನದು ನಿನ್ನದೇ; ಜೊತೆಯಲ್ಲಿ ನನ್ನದೂ ನಿನ್ನದೇ!’ -ರಾಮ

‘ನನ್ನದು ನನ್ನದು; ನಿನ್ನದು ನಿನ್ನದು’ ಎನ್ನುವವರು ಮಾನವರು.

‘ನನ್ನದು ನನ್ನದೇ; ಜೊತೆಗೆ ನಿನ್ನದೂ ನನ್ನದೇ!’ ಎನ್ನುವವರು ದಾನವರು.

‘ನಿನ್ನದು ನಿನ್ನದೇ; ಜೊತೆಯಲ್ಲಿ ನನ್ನದೂ ನಿನ್ನದೇ!’ ಎನ್ನುವವರು ದೇವಮಾನವರು.

ರಾಮನದು ಎಂದೂ ಮೂರನೆಯ ವರ್ಗ.

‘ನಿನ್ನದೂ ನನ್ನದೇ!’ ಎನ್ನುವ ಮನೋಭಾವವು ಪ್ರಪಂಚದ ಸರ್ವ ಕಲಹ-ಕೋಲಾಹಲಗಳ ಮೂಲ;

‘ನನ್ನದು ನನ್ನದೇ’ ಎನ್ನುವಲ್ಲಿಯೂ ಕೆಲವೊಮ್ಮೆ ವ್ಯಾಜ್ಯಗಳಿಗೆ ಅವಕಾಶವಿದೆ;

ಆದರೆ ‘ನನ್ನದೂ ನಿನ್ನದೇ!’ ಎನ್ನುವಲ್ಲಿ ಯಾವ ಕಲಹಗಳಿಗೂ ಎಡೆಯಿಲ್ಲ! ಈ ವರ್ಗದವರು ಮಾನವತೆಯಿಂದ ದೇವಮಾನವತೆಗೇರುತ್ತಾರೆ! ತಾವಿರುವ ಭೂಮಿಯನ್ನು ಸ್ವರ್ಗವನ್ನಾಗಿಸುತ್ತಾರೆ!

‘ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್’ – ‘ದಶರಥನ ಸುತನಾದ ರಾಮ ನಾನು, ನಿಮ್ಮಂತೆಯೇ ಓರ್ವ ಮನುಷ್ಯನೇ ಹೌದು.’ ಎನ್ನುವ ರಾಮನು ದೇವರಾಗಿ ದೂರ ನಿಲ್ಲುವುದಕ್ಕಿಂತ ಮಾನವಸಖನಾಗಿ ನಮ್ಮ ನಿಮ್ಮ ಹತ್ತಿರ ಬರುತ್ತಾನೆ! ಮಾನವರ ನಡುವೆ ಮಾನವನೇ ಆಗಿದ್ದು ದೇವರಂತೆ ಬಾಳಿ, ಮಾನವತೆಗೆ ಮಹಾಪಾಠವಾಗಿ ಸಲ್ಲುತ್ತಾನೆ!

ಮಾನವಮಾತ್ರರಾಗಿದ್ದುಕೊಂಡೂ ತಮ್ಮನ್ನು ದೇವರೆಂದು ತಾವೇ ಕರೆದುಕೊಳ್ಳುವರಿಗೆ ಬರವಿಲ್ಲದಿರುವಾಗ, ದೇವರಾಗಿದ್ದುಕೊಂಡೂ ತನ್ನನ್ನು ಮಾನವನೆಂದು ಕರೆದುಕೊಂಡು, ಜೀವಗಳ ಬಳಿ ಸಾರುವ ರಾಮನು ದೇವರಿಗಿಂತ ದೊಡ್ಡವನಾಗಿ ಕಾಣುವನಲ್ಲವೇ?

 

ಈ ಲೋಕಲೇಖವು ಹೊಸದಿಗಂತ ಪತ್ರಿಕೆಯಲ್ಲಿಯೂ ಪ್ರಕಟವಾಗಿದ್ದು, ಇಲ್ಲಿ ಓದಬಹುದು : SriRaghaveshwaraBharathi-Lokalekha-Rama-Janmabhoomi-Ayodhya-verdict-Hosadiganta

Facebook Comments Box