|| ಹರೇರಾಮ ||

ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು..
ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು..

ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು..
ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..?

ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..?
ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!?
ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ ಮಡಕೆ ಚೂರುಗಳಲ್ಲಿಯೋ ಹುಡುಕುವುದುಂಟು..
ಅಂತಹವರಿಗೆ ಸಿಗುವುದು ಹರಿದ-ಮುರಿದ ಇತಿಹಾಸ ಮಾತ್ರವೇ..!
ಪೂರ್ಣ ಸತ್ಯದರ್ಶವಾಗುವುದೆಂದೂ ಅಂತಂಗದಲ್ಲಿಯೇ..!

ದೇವಮುನಿಯ ಮುಖದಿಂದ ರಾಮಕಥಾಶ್ರವಣ..
ಮತ್ತೆ ಮತ್ತೆ ಮನದಲ್ಲಿಯೇ ಮನನ..
ಧ್ಯಾನದಲ್ಲಿ ರಾಮಾಯಣದರ್ಶನ ..
ಇದು ವಾಲ್ಮೀಕಿಗಳ ತ್ರಿವಿಕ್ರಮ..!
(ತ್ರಿವಿಕ್ರಮ :- ದಿವಿ-ಭುವಿಗಳನ್ನಳೆಯುವ ಮೂರು ಹೆಜ್ಜೆಗಳು..)

ಇಂದಿನ ಕಾಲದಲ್ಲಿ ಯಾವುದಾದರೊಂದು ಘಟನೆಯ ಬಗ್ಗೆ ಬರೆಯಬೇಕೆಂದರೆ, ಮೊದಲು ಗ್ರಂಥಾಲಯದಲ್ಲಿಯೋ ಅಂತರ್ಜಾಲದಲ್ಲಿಯೋ ಹುಡುಕುತ್ತಾರೆ..
ಘಟನೆಯ ಭಾಗಿಗಳನ್ನೋ, ಸಾಕ್ಷಿಗಳನ್ನೋ ಸಂದರ್ಶನ ಮಾಡುವುದೂ ಉಂಟು..

ಆದರೆ ವಾಲ್ಮೀಕಿಗಳು ಇದಾವುದನ್ನೂ ಮಾಡಲಿಲ್ಲ..!
ಶುದ್ಧಾಚಮನ ಮಾಡಿದರು..ಬದ್ಧಾಂಜಲಿಗಳಾದರು..ಪೂರ್ವಮುಖವಾದ ದರ್ಭೆಗಳಲ್ಲಿ ಸಮಾಸೀನರಾದರು.
ರಾಮನೆಂಬ ತತ್ವದಲ್ಲಿ ತನ್ನ ಮನವನ್ನು ನೆಟ್ಟುಬಿಟ್ಟರು..!
ಅವರು ತನ್ಮಯತೆಯ ಉತ್ತುಂಗಕ್ಕೇರಿದಾಗ….
ಯೋಗವು ಅವರನ್ನು ಆಮೂಲಾಗ್ರವಾಗಿ ಆವರಿಸಿದಾಗ..
‘ರಾಮ’ನೆಂಬ ಧರ್ಮವು ಅವರನ್ನು ಆಳತೊಡಗಿದಾಗ..
ಜಗತ್ತು ಮರೆಯಾಯಿತು..
ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ರಾಮಾಯಣದ ದೃಶ್ಯಾವಳಿಗಳು ಒಂದಾದ ಮೇಲೊಂದರಂತೆ ಗೋಚರಿಸತೊಡಗಿದವು..!

ನಶ್ವರ ಬದುಕಿನಲ್ಲಿ ಘಟನೆಗಳು ನಡೆದು ಮುಗಿದೇ ಹೋಗುತ್ತವೆ..
ಹರಿದುಹೋದ ನೀರು ಮತ್ತೆ ಬಾರದಂತೆ ಅವು ಪುನಃ ಸಿಗುವುದೇ ಇಲ್ಲ..!

ಈಶ್ವರದ ಬದುಕನ್ನು ನೋಡಿ..!
ಅದು ಅವಿನಾಶಿ.. ಯುಗ-ಯುಗಗಳೇ ಕಳೆದರೂ ರಾಮನ ಬದುಕಿನ ಘಟನೆಗಳನ್ನು ಧ್ಯಾನಮಗ್ನತೆಯಲ್ಲಿ ಪುನಃ ಪುನಃ
ಕಾಣಲು ಸಾಧ್ಯವಿದೆಯೆಂದರೆ..ಎಂಥ ಅದ್ಭುತವಿದು..!

ನಿನಗಿರದ ಕಣ್-ಬಾಯಿ ವಾಲ್ಮೀಕಿಗೆಂತಾಯ್ತು?
ಮುನಿಕವಿತೆಗೆಂತು ನಿನ್ನೊದೆಯೊಳೆಡೆಯಾಯ್ತು?
ಘನಮಹಿಮನೊಳ್ ಜ್ವಲಿಸುತಿತರರೊಳ್ ನಿದ್ರಿಸುತ,
ಅನಲನೆಲ್ಲರೊಳಿಹನು – ಮಂಕುತಿಮ್ಮ||

ವಾಲ್ಮೀಕಿಯ ಕಣ್ಣು ನಮಗುಂಟಾದರೆ ರಾಮಾಯಣ ದರ್ಶನವಿಂದಿಗೂ ಸಾಧ್ಯ..
ವಾಲ್ಮೀಕಿಯ ಬಾಯಿ ನಮಗುಂಟಾದರೆ ಅದನ್ನು ಬಣ್ಣಿಸಲೂ ಸಾಧ್ಯ..
ದ್ವಾರ ಸದಾ ತೆರೆದಿದೆ…ಇನ್ನು ನಾವು ಕಣ್ತೆರೆಯುವುದೊಂದೇ ಬಾಕಿ….!

ಬ್ರಹ್ಮರ್ಷಿಗಳ ಪರಮಾನುಭವಗಳು ವೇದಗಳ ರೂಪ ತಾಳುವಂತೆ..
ನವಜಾತ ಶಿಶುವಿನ ಸುಖ-ದುಃಖಗಳು ನಗು-ಅಳುಗಳಾಗಿ ಪರಿಣಾಮವಾಗುವಂತೆ..
ಸೃಷ್ಟಿಯ ಮೂಲವಾದ ಪರಂಜ್ಯೋತಿಯು ಬರಬರುತ್ತಾ ವಿಶ್ವವಿಸ್ತರವಾಗಿ ವಿಕಸಿತವಾಗುವಂತೆ..
ಚೈತ್ರದ ಚಿಗುರನ್ನು ಸೇವಿಸುವ ಕೋಗಿಲೆಯ ಆನಂದ , ಕುಹು-ಕುಹೂ ಆಗಿ ಹೊರಹೊಮ್ಮುವಂತೆ..
ವಾಲ್ಮೀಕಿಗಳ ಅಂತಶ್ಚಕ್ಷುವಿಗೆ ಗೋಚರಿಸಿದ ರಾಮಾಯಣದ ಘಟನೆಗಳು ಅವರ ಮನದ ಮನೆಯ ಮೌನ ಮುರಿದು ಮಾತನಾಡತೊಡಗಿದವು ..!
೨೪ ಸಾವಿರ ಶ್ಲೋಕಗಳ,೫೦೦ ಅಧ್ಯಾಯಗಳ,೭ ಕಾಂಡಗಳ ಶ್ರೀಮದ್ರಾಮಾಯಣವು ಅವರೊಳಗೇ ರಚಿತವಾಗತೊಡಗಿತು…

ಬದುಕೆಂಬುದು ಸಾಧನೆ-ಶೋಧನೆ- ಬೋಧನೆಗಳ ಅನಂತ ಚಕ್ರವಾಗಬೇಕೆಂದು ಪೂಜ್ಯ ರಾಮಭದ್ರಾಚಾರ್ಯರು ಹೇಳುತ್ತಿದ್ದುದುಂಟು..
ಸಾಧನೆಯ ಫಲವಾಗಿ ವಾಲ್ಮೀಕಿಗಳು ರಾಮಾಯಣವನ್ನು ಶೋಧಿಸಿದರು..
ಹಾಗೆ ಶೋಧಿಸಿದ ರಾಮಾಯಣವನ್ನು ಕಾವ್ಯರೂಪದಲ್ಲಿ ಜಗತ್ತಿಗೆ ಬೋಧಿಸಿದರು.
ಆ ಬೋಧನೆ ತುಳಸೀದಾಸರು, ತ್ಯಾಗರಾಜರಂತಹ ಅದೆಷ್ಟೋ ಸಾಧಕರಿಗೆ ಸಾಧನೆಯ ಪ್ರೇರಣೆಯನ್ನು ಕೊಟ್ಟಿತು..!
ಅವರೂ ಶೋಧಿಸಿದರು..ಬೋಧಿಸಿದರು..
ಹೀಗೆ ಸಾಧನೆ-ಶೋಧನೆ-ಬೋಧನೆಗಳ ಅನಂತಚಕ್ರದಲ್ಲಿಯೇ ರಾಮಾಯಣವು ಅನಂತವಾಗಿ ವಿಸ್ತರಿಸತೊಡಗಿದ್ದು..!

(ಇನ್ನೂ ಇದೆ)

|| ಹರೇರಾಮ ||

Facebook Comments Box