ಎಂಥವಳೀ ತಾಯಿ!? ಮಗಳನ್ನು – ಅದರಲ್ಲಿಯೂ ಇನ್ನಷ್ಟೇ ಅರಳಬೇಕಿರುವ ಮುಗುಳನ್ನು – ಮುಗ್ಧ ಋಷಿತನಯನೋರ್ವನನ್ನು ಮೋಹಗೊಳಿಸೆಂದು ಕಳುಹುವುದೇ? ತಂದೆಯಿಲ್ಲದ ಸಮಯ ಸಾಧಿಸಿ, ಜಗವ ಅರಿಯದ ಮಗನ ಮನವ ಚಂಚಲಗೊಳಿಸಿ, ಗೊತ್ತಿಲ್ಲದ ಊರಿಗೆ ಕದ್ದೊಯ್ಯಲು ತಾನು ಹೆತ್ತ ಮಗಳನ್ನು ದಾಳವಾಗಿ ಬಳಸುವುದೇ?

ಕಾರ್ಯವು ಸರಿಯೇ, ತಪ್ಪೇ ಎಂಬುದನ್ನು ಉದ್ದೇಶವನ್ನು ನೋಡಿ, ನಿರ್ಣಯಿಸಬೇಕು. ಉದ್ದೇಶವು ಒಳಿತಾಗಿದ್ದರೆ ಕಾರ್ಯವು ಕೆಡುಕಿನಂತೆ ಕಂಡರೂ ಅದು ಕೆಡುಕಲ್ಲ; ಉದ್ದೇಶವು ಕೆಡುಕಾಗಿದ್ದರೆ ಕಾರ್ಯವು ಹೊರನೋಟಕ್ಕೆ ಒಳಿತಾಗಿ ಕಂಡು ಬಂದರೂ ಅದು ನಿಜವಾಗಿ ಒಳಿತಲ್ಲ!

‘ನಿರಪರಾಧಿಯೋರ್ವನ ಹೊಟ್ಟೆಯನ್ನು ಹರಿತವಾದ ಚೂರಿಯಿಂದ ಸೀಳುವುದು’ ಎನ್ನುವ ಒಂದು ವಿಷಯವನ್ನು ತೆಗೆದುಕೊಳ್ಳುವುದಾದರೆ, ಅದನ್ನು ಡಾಕು ಮಾಡಿದರೆ ಸರಿಯಲ್ಲ, ಆದರೆ ಡಾಕ್ಟರ್ ಮಾಡಿದರೆ ಸರಿ! ಏಕೆಂದರೆ ಡಾಕುವಿನ ಉದ್ದೇಶ ಕೆಟ್ಟದು – ಕೊಲ್ಲುವುದು, ಡಾಕ್ಟರ್ ಉದ್ದೇಶ ಒಳ್ಳೆಯದು – ಬದುಕಿಸುವುದು!

ಮಗಳನ್ನು ಋಷ್ಯಶೃಂಗನ ಬಳಿ ಕಳುಹುವಾಗ ತಾಯಿಯಲ್ಲಿ ಒಂದಿನಿತೂ ಅಳುಕಿರಲಿಲ್ಲ; ಏಕೆಂದರೆ ಉದ್ದೇಶದಲ್ಲಿ ಒಂದಿನಿತೂ ಕೆಡುಕಿರಲಿಲ್ಲ. ಆಶ್ರಮದೆಡೆಗೆ ಇಡಲ್ಪಡುತ್ತಿದ್ದ ಆ ತಾಯಿಯ ಮಗಳ ಹೆಜ್ಜೆಗಳಲ್ಲಿ ಇನ್ನಿಲ್ಲದ ದೃಢತೆ ತುಂಬಿತ್ತು; ಏಕೆಂದರೆ ಆಕೆಯ ಅಂತರಾಳದಲ್ಲಿ ಕಳಂಕದ ಸುಳಿವೂ ಇರಲಿಲ್ಲ! ಆಕೆ ತಪೋಭಂಗಕ್ಕೆ ಬಂದ ಅಪ್ಸರೆಯಾಗಿರಲಿಲ್ಲ; ಕ್ಷುಲ್ಲಕ ಸುಖವನ್ನು ಬಯಸಿ ಋಷ್ಯಶೃಂಗನ ಬಳಿ ಬಂದವಳೂ ಆಗಿರಲಿಲ್ಲ! ತನ್ನ ತಾಯ್ನೆಲದ ಜೀವಸಂಕುಲದ ಉಳಿವಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳುವ, ಅಗತ್ಯ ಬಂದರೆ ಆತ್ಮಾಹುತಿಗೈಯುವ ಪರಮಪವಿತ್ರ ಮನಸ್ಥಿತಿಯಲ್ಲಿ ಮುನಿಯ ಮನೆಯ ಬಾಗಿಲಿಗೆ ಬಂದು ನಿಂತಿದ್ದಳವಳು.

ಎಂಥಾ ಸಮಾಯೋಗವಿದು! ಬೆಳಕಿನ ಅಂಗಳಕ್ಕೆ ಥಳುಕು ಬಳುಕಿ ಬಂದಿತು; ಭೋಗವು ಯೋಗದ ಕದ ತಟ್ಟಿತು; ಮೈವೆತ್ತ ಮುಗ್ಧತೆಯ ಮುಂದೆ ಮೋಸವಲ್ಲದ ಮಾಯೆಯು ಮೈದೋರಿತು!

ಮಹಾಮಹಿಮೆಯ ಮುಗ್ಧ ಮೂರ್ತಿಯನ್ನು ಕಣ್ತುಂಬ ತುಂಬಿಕೊಂಡಳು ವಾರಕನ್ನಿಕೆ. ಎವೆಯಿಕ್ಕುವುದರೊಳಗೆ ಒಂದು ರಾಜ್ಯವನ್ನೇ ಉದ್ಧರಿಸುವ ಮಹಾಯೋಗ್ಯತೆಯನ್ನು ತನ್ನೊಳಗಿಟ್ಟುಕೊಂಡೂ, ಏನೂ ಅರಿಯದ ಮುಗ್ಧತೆಯಲ್ಲಿ ಹೀಗೆ ಮಗ್ನನಾಗಿರಲು ಸಾಧ್ಯವೇ? ಎಂದು ತನಗೆ ತಾನೇ ಕೇಳಿಕೊಂಡಳು. ಆದರೆ ನೈಜವಾದ ಮುಗ್ಧತೆ-ಸರಳತೆಗಳು ಮಕ್ಕಳನ್ನು ಹೊರತು ಪಡಿಸಿದರೆ ಮಹಾಮಹಿಮರಲ್ಲಿ ಮಾತ್ರವೇ ಅಲ್ಲವೇ ಇರಲು ಸಾಧ್ಯ!

ಬೆರಗುಗಂಗಳಿಂದ ಆಕೆಯನ್ನು ವೀಕ್ಷಿಸಿದನು ಋಷ್ಯಶೃಂಗ. ಏಕೆಂದರೆ ‘ಪ್ರಪಂಚದಲ್ಲಿ ಸ್ತ್ರೀ ಎಂಬುದೊಂದು ಜಾತಿಯಿದೆ’ ಎಂಬುದರ ಪರಿವೆಯೇ ಆತನಿಗಿರಲಿಲ್ಲ! ಮನುಷ್ಯರಲ್ಲಿ, ಆವರೆಗೆ ಆತನು ನೋಡಿದ್ದು ಈರ್ವರನ್ನು ಮಾತ್ರ; ಒಂದು ತನ್ನ ತಂದೆ, ಇನ್ನೊಂದು ತಾನೇ! ಆದರೆ ಪ್ರಕೃತ ಕಣ್ಮುಂದಿರುವ ವ್ಯಕ್ತಿಯು ಇಬ್ಬರಲ್ಲಿ ಯಾರಂತೆಯೂ ಇರಲಿಲ್ಲ! ಆ ರೂಪವು ಅವನ ಕಣ್ಮನಗಳಿಗೆ ಸಂಪೂರ್ಣ ಹೊಸತು! ಕಣ್ಣಾರೆ ಕಾಣದಿದ್ದರೂ, ಬೇರೆ ಬ್ರಹ್ಮಚಾರಿಗಳ ಕುರಿತು ತನ್ನ ತಂದೆಯ ಬಾಯಿಯಿಂದ ಕೇಳಿದ್ದನಾತ. ಆದರೆ ಕಣ್ಮುಂದಿನ ವಿಚಿತ್ರ ರೂಪವು ಆ ಲಕ್ಷಣಗಳಿಗೂ ಹೊಂದುವಂತಿರಲಿಲ್ಲ. ಅನ್ಯಗ್ರಹದ ಜೀವಿಯೊಂದು ಧುತ್ತನೆ ಕಣ್ಣೆದುರು ಬಂದರೆ ನಮ್ಮ ಸ್ಥಿತಿ ಏನಿರಬಹುದೋ, ಹತ್ತಿರ ಹತ್ತಿರ ಆ ಸ್ಥಿತಿಯಲ್ಲಿದ್ದನು ಋಷ್ಯಶೃಂಗ.

ಕನ್ನಿಕೆಯ ಕಣ್ಣಲ್ಲಿ ಆದರ; ‘ನಮ್ಮ ನಾಡಿನ ಭಾಗ್ಯ ಇವನು’ ಎಂಬ ಆದರವದು.
ಋಷಿಕುಮಾರನ ಕಣ್ಣಲ್ಲಿ ಆಶ್ಚರ್ಯ; ‘ಯಾವುದು ಈ ರೂಪ ಹೊಸತು?’ ಎಂಬ ಆಶ್ಚರ್ಯವದು!

ಕನ್ನಿಕೆಯೇ ಮೊದಲಾಗಿ ಮುನಿಸುತನನ್ನು ಮಾತನಾಡಿಸಿದಳು‌. ಏಕೆಂದರೆ ಕಾರ್ಯವಾಗಬೇಕಿರುವುದು ಆಕೆಗೆ. ಮಾತ್ರವಲ್ಲ, ಆತ ಆತ್ಮಜ್ಞಾನಿ, ಆದರೆ ಲೋಕಜ್ಞಾನಿಯಲ್ಲ; ಆತ್ಮಜ್ಞಾನಕ್ಕೆ ಭಾಷೆಯಿಲ್ಲ! ಆಕೆಗೆ ಆತ್ಮಜ್ಞಾನವಿಲ್ಲದಿದ್ದರೂ ಲೋಕಜ್ಞಾನವಿದೆ; ಲೋಕಜ್ಞಾನದ ಬಂಡವಾಳವೇ ಭಾಷೆ!

ಋಷ್ಯಶೃಂಗನಲ್ಲಿ ಮಾತನಾಡುವಾಗ ಆಕೆಯನ್ನೂ ಸಂಕೋಚವು ಒಂದಿನಿತೂ ಬಾಧಿಸಲಿಲ್ಲ. ಲೋಕಜ್ಞಾನದ ದೃಷ್ಟಿಯಿಂದ ಅದಾಗ ತಾನೇ ಜನಿಸಿದ ಶಿಶುವಿನಂತಿದ್ದ ಆತನಲ್ಲಿ ಮುಜುಗರದ ಮಾತೆಲ್ಲಿ?

ಮಹಾತ್ಮರ ಸರಳತೆಗೆ ಶರಣು ಶರಣು!

ಆ ತರಳೆಯು ಈ ತಪಸ್ವಿಯನ್ನು ಮಾತನಾಡಿಸಿದ್ದು ಒಲವಿನ ಭಾಷೆಯಲ್ಲಿ; ಏಕೆಂದರೆ ಯಾವುದೇ ಜೀವಕ್ಕೆ ಬಲು ಬೇಗ ಹತ್ತಿರವಾಗುವುದು ಮತ್ತು ಹೃದಯಕ್ಕೆ ಮುಟ್ಟುವುದು ಒಲವಿನ ಭಾಷೆಯೇ! ಜೀವರಿಗೇನು, ದೇವನಿಗಾದರೂ ತಲುಪುವುದು ಅದೇ ಭಾಷೆಯೇ! ಯಾವ ಪಂಡಿತೋತ್ತಮನಿಗೂ ಸುಲಭಗಮ್ಯವಲ್ಲದ ಕೃಷ್ಣಸಂಗವನ್ನು ಪಡೆದ ಗೋಪಿಕೆಯರು ವ್ಯಾಕರಣವನ್ನು ಓದಿದ್ದರ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ!

ಆದುದರಿಂದಲೇ ಸಹಜವಾದ ಕುಶಲಪ್ರಶ್ನೆಯ ಆಕೆಯ ಮೊದಲ ಮಾತುಗಳಲ್ಲಿ ಯಾವುದೇ ವಿಶೇಷವಿರದಿದ್ದರೂ ಆತನಿಗೆ ಅವು ಆಪ್ಯಾಯಮಾನವೆನಿಸಿದವು. ಜೀವದ ಒಲವನ್ನು ಮಹಾತ್ಮರು ಬಲು ಬೇಗ ಗ್ರಹಿಸಬಲ್ಲರು.

ಋಷ್ಯಶೃಂಗನು ಮುಗ್ಧನೆಂಬುದನ್ನು ಆಕೆಗೆ ತಾಯಿಯು ಮೊದಲೇ ತಿಳಿಸಿದ್ದಳು. ಆದರೆ ಎಷ್ಟು ಮುಗ್ಧನೆಂಬುದು ಆಕೆಗೆ ಅರಿವಾಗತೊಡಗಿದ್ದು ಆತ ಮಾತನಾಡತೊಡಗಿದಾಗಲೇ! ಪಾಪ, ಆತನ ಪದಕೋಶದಲ್ಲಿ ಸ್ತ್ರೀಲಿಂಗವಾಚಕವಾದ ಪದಗಳೇ ಇರಲಿಲ್ಲ! ಪುಲ್ಲಿಂಗದ ಪದಗಳಿಂದಲೇ ಆತನು ಆಕೆಯನ್ನು ಸಂಬೋಧಿಸಿ ಮಾತನಾಡುತ್ತಿದ್ದರೆ ಆಕೆಗದು ವಿಚಿತ್ರವಾದ ನವಾನುಭವ!

ಮಹಿಮೆಯಲ್ಲಿ ಮಾತ್ರವಲ್ಲ, ಮುಗ್ಧತೆಯಲ್ಲಿಯೂ ಆತನಿಗೆ ಸಾಟಿಯಿಲ್ಲ!

ಋಷ್ಯಶೃಂಗನ ಮೊದಲ ಮಾತು: “ಯಾರಪ್ಪಾ ನೀನು, ಬೆಳಕಿನ ಬಳ್ಳಿಯಂತಿರುವೆ!?”

ಋಷ್ಯಶೃಂಗನಿಗೆ ಲಿಂಗಜ್ಞಾನವಿಲ್ಲದಿರಬಹುದು, ಆದರೆ ಆತ್ಮಜ್ಞಾನವಿತ್ತು! ಸ್ವತಃ ಆಕೆಯೇ ನೋಡಿರದ ಆಕೆಯೊಳಗಿನ ವಿಶೇಷವನ್ನು ಆತನ ದೃಷ್ಟಿ ಗುರುತಿಸಿತ್ತು! ಅಪರಿಚಿತ ಆಕೃತಿಯೊಂದು ಇದ್ದಕ್ಕಿದ್ದಂತೆ ಕಣ್ಮುಂದೆ ಕಾಣಿಸಿಕೊಂಡರೆ ಮೊದಲಾಗುವುದು ದಿಗಿಲು! ಬಳಿಕ ಬರುವುದು ಕೆಡುಕಿನ ಶಂಕೆ! ಆದರೆ ಋಷ್ಯಶೃಂಗನಿಗೆ ಆಕೆ ಕೆಡುಕಾಗಿ ಕಾಣಲಿಲ್ಲ; ಬೆಳಕಾಗಿ ಕಂಡಳು!

ವೇಶ್ಯೆಯ ಮಗಳಲ್ಲಿ ಬೆಳಕೆಲ್ಲಿಂದ ಕಾಣಬೇಕು? ಎಂದು ಮೂಗು ಮುರಿಯದಿರಿ. ಬೆಳಕು ‘ವೇಶ್ಯೆಯ ಮನೆಯಲ್ಲಿ ತಾನಿರುವುದಿಲ್ಲ’ ಎಂದು ನಿಯಮವನ್ನೇನೂ ಹಾಕಿಕೊಂಡಿಲ್ಲ! ಆಕೆಯಲ್ಲಿ ವಿಶಿಷ್ಟವಾದ ತೇಜಸ್ಸೊಂದು ಅಂತರ್ನಿಹಿತವಾಗಿ ಇಲ್ಲದಿದ್ದರೆ ಋಷ್ಯಶೃಂಗನಿಗೆ ಆಕೆ ಬೆಳಕಾಗಿ ಕಾಣಲು ಸಾಧ್ಯವಿಲ್ಲ! ಆಕೆಯು ಬೆಳಕಲ್ಲದಿದ್ದರೆ ಋಷ್ಯಶೃಂಗನನ್ನು ತಲುಪಲೂ ಸಾಧ್ಯವಿಲ್ಲ; ಆತನಿಗೆ ಹಿತವೆನಿಸಲೂ ಸಾಧ್ಯವಿಲ್ಲ; ಆತನನ್ನು ಚಿಕ್ಕ ಶಿಶುವಿನಂತೆ ಬೇಕಾದಲ್ಲಿಗೆ ಕರೆದೊಯ್ದು, ಮಹತ್ಕಾರ್ಯಗಳನ್ನು ಆತನಿಂದ ಮಾಡಿಸಲೂ ಸಾಧ್ಯವಿಲ್ಲ!

ಆದುದರಿಂದಲೇ, ಆಕೆಯ ಕುರಿತಾದ ಋಷ್ಯಶೃಂಗನ ಪ್ರಥಮಾನುಭೂತಿ(First Impression) ಮತ್ತು ಪ್ರಥಮಾಭಿವ್ಯಕ್ತಿಯೇ (First Expression) “ಋಧ್ಯಾ ಭವಾನ್ ಜ್ಯೋತಿರಿವ ಪ್ರಕಾಶತೇ!”

ಇದು ಕತ್ತಲೆಯು ಬೆಳಕನ್ನು ಭೇಟಿಯಾಗಲು ಬಂದ ಪ್ರಸಂಗವಲ್ಲ; ಬೆಳಕಿನ ಬಳ್ಳಿಯೊಂದು ಬೆಳಕಿನ ವೃಕ್ಷವನ್ನು ಅರಸಿ, ಆಶ್ರಯಿಸಿದ ಪ್ರಸಂಗ.

ಕತ್ತಲೆ-ಬೆಳಕುಗಳು ಸೇರಿದರೆ ಅಲ್ಲಿ ನಡೆಯುವುದು ಸಮರ; ಬೆಳಕಿಗೆ ಬೆಳಕು ಸೇರಿದರೆ ಅದು ಸರಸ-ಸಮರಸ!

~*~*~

(ಸಶೇಷ)

ತಿಳಿವು-ಸುಳಿವು:
ಬೆಳಕಿನೆಡೆಗೆ ಥಳುಕಿನ ಬಳುಕು ಬಂದ ಈ ಪ್ರಸಂಗವು ಬೆಳಕಿನ ಹಬ್ಬ ದೀಪಾವಳಿಯಂದೇ ಪ್ರಕಟವಾಗುತ್ತಿದೆ. ಶುಭಪರ್ವ ದೀಪಾವಳಿಯ ಶುಭಾಶೀರ್ವಾದ ಓದುಗ-ಶಿಷ್ಯವೃಂದಕ್ಕೆ ಅಕ್ಷರರೂಪದಲ್ಲಿ ಅನುಗ್ರಹವಾಗಿದೆ.

ಯಾರಪ್ಪಾ ನೀನು – ಎಂಬ ಸಂಬೋಧನೆಯಲ್ಲಿರುವ ಪುಲ್ಲಿಂಗವಾಚಕ ಶಬ್ದವು ಇಲ್ಲಿ ಗಮನೀಯ. “ಋಧ್ಯಾ ಭವಾನ್ ಜ್ಯೋತಿರಿವ ಪ್ರಕಾಶತೇ” – ಎಂಬಲ್ಲಿ ಭವಾನ್ ಎಂಬ ಶಬ್ದವು ಗೌರವಯುಕ್ತ ಪುಲ್ಲಿಂಗವಾಚಕ. ವ್ಯಾಕರಣಾನುಸಾರ ಭವತೀ ಎಂದಿರಬೇಕಿತ್ತು. ಋಷ್ಯಶೃಂಗನಿಗೆ ವ್ಯಾಕರಣದ ಲಿಂಗಜ್ಞಾನವಿರಲಿಲ್ಲ, ಏಕೆಂದರೆ ಲೌಕಿಕವಾಗಿಯೇ ಲಿಂಗಜ್ಞಾನವಿರಲಿಲ್ಲ.

ಕ್ಲಿಷ್ಟ-ಸ್ಪಷ್ಟ:

  • ಕನ್ನಿಕೆ = ಹುಡುಗಿ
  • ಬೆರಗುಗಂಗಳು = ಆಶ್ಚರ್ಯ ತುಂಬಿದ ಕಣ್ಣುಗಳು
  • ಅಂತರ್ನಿಹಿತ = ಒಳಗೆ ಹುದುಗಿರುವ / Inherent

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 49ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments