ದೇವನನ್ನು ಸಂಪ್ರೀತಗೊಳಿಸಲು ಒಂದು ಸುಲಭ- ಸರಳ ವಿಧಾನವಿದೆ; ಅದು ಜೀವಗಳನ್ನು ಸಂತೃಪ್ತಗೊಳಿಸುವುದು. ಜೀವಗಳು ಒಲಿದರೆ ದೇವನು ತಾನೇ ಒಲಿವನು! ಮಕ್ಕಳು ನಲಿದರೆ ತಾಯಿಯು ನಲಿಯುವುದಿಲ್ಲವೇ? ಉದರವು ತೃಪ್ತವಾದರೆ ಸಮಸ್ತದೇಹವೇ ತಂಪಾಗುವುದಿಲ್ಲವೇ? ಎಲೆಗಳು ಬೆಳಕಿನಲ್ಲಿ ಮಿಂದರೆ ಸಮಸ್ತ ವೃಕ್ಷವೇ ನಳನಳಿಸುವುದಿಲ್ಲವೇ?

ಆದುದರಿಂದಲೇ ಭಾರತೀಯರ ದೇವತಾರಾಧನೆಯಲ್ಲಿ ಜಗದ ಜೀವಗಳನ್ನು ಕರೆದು, ಅನ್ನ~ಮನ್ನಣೆಗಳ, ದಾನ~ದಕ್ಷಿಣೆಗಳ ಮೂಲಕ ಅವರನ್ನು ಸಂತೃಪ್ತಗೊಳಿಸುವುದು ಅವಿಭಾಜ್ಯ ಅಂಗವಾಗಿದೆ. ‘ಯಜ್ಞೋ ವೈ ವಿಷ್ಣುಃ – ಯಜ್ಞವು ಮಹಾವಿಷ್ಣುವಿನದೇ ಕರ್ಮರೂಪ’. ಅವನ ಮನದನ್ನೆಯಾದ ಮಹಾಲಕ್ಷ್ಮಿಯೇ ಯಜ್ಞದಕ್ಷಿಣೆ! ದಕ್ಷಿಣೆಯ ವಿರಹದಲ್ಲಿ ಯಜ್ಞಪುರುಷನು ಕೊರಗುವನು- ಸೊರಗುವನು. ದಾನವಿರದಿರೆ ಅದು ಯಾಗದ ಊನ!

ದಶರಥನ ಅಶ್ವಮೇಧಕ್ಕೆ ವಿಧಿ-ವಿಧಾನಗಳು ದೇಹವಾದರೆ ದಾನವೇ ಜೀವ; ವಾಜಿಮೇಧದ* ವೇದಿಕೆಯಲ್ಲಿ ತನ್ನ ಸರ್ವಸ್ವವನ್ನೂ ಕೊಟ್ಟು, ಸರ್ವಸ್ವಕ್ಕಿಂತ ಮಿಗಿಲಾದುದನ್ನು- ಸರ್ವಶ್ರೇಷ್ಠವಾದುದನ್ನು ಪಡೆದುಕೊಂಡನು ದಶರಥ!
~

ವಸಂತದಲ್ಲಿ ಅಯೋಧ್ಯೆಯಿಂದ ಹೊರಟ ಯಜ್ಞಾಶ್ವವು ಭೂಪ್ರದಕ್ಷಿಣೆಗೈದು, ವಸಂತವು ಮರಳುವಾಗ ಅಯೋಧ್ಯೆಗೆ ಮರಳಿತು. ದಶರಥನೂ ಉತ್ತರೋತ್ತರದ ಕನಸನ್ನು ಕಟ್ಟಿಕೊಂಡು, ಸರಯೂ ನದಿಯ ಉತ್ತರತೀರದಲ್ಲಿ ಅನಾವರಣಗೊಂಡಿದ್ದ ಯಾಗಭೂಮಿಗೆ ತೆರಳಿದನು. ದಿನಕರ~ನಿಶಾಕರರ ಬೆಳಕಿನಲ್ಲಿ ದಿವಾ~ನಿಶೆಗಳು ನಡೆಯುವಂತೆ ವಸಿಷ್ಠ~ಋಷ್ಯಶೃಂಗರ ಅರಿವಿನ ಕಣ್ಗಾವಲಿನಲ್ಲಿ ಅರಸನ ಅಶ್ವಮೇಧವು ನಡೆಯತೊಡಗಿತು. ಬೆಳಕೀವ ಕಾರ್ಯದಲ್ಲಿ ಸೂರ್ಯನಿಗೆ ಸಹಸ್ರ ಕಿರಣಗಳು, ಚಂದ್ರನಿಗೆ ಸಹಸ್ರ ತಾರೆಗಳು ಸಹಯೋಗವೀವಂತೆ ಕರ್ಮತಂತ್ರಕುಶಲರಾದ ಯಾಜಕಶ್ರೇಷ್ಠರನೇಕರು* ಅಶ್ವಮೇಧದ ಅವತರಣದಲ್ಲಿ ವಸಿಷ್ಠ~ಋಷ್ಯಶೃಂಗರಿಗೆ ಸಹಯೋಗವಿತ್ತರು.

ಯಾಗದಲ್ಲಿ ಭಾಗವಹಿಸಿದ ಋತ್ವಿಜರಾದರೂ ಎಂತೆಂಥವರು! ‘ನಾವಿದ್ವಾನ್ ಬ್ರಾಹ್ಮಣಸ್ತತ್ರ ನಾಶತಾನುಚರಸ್ತಥಾ’ ಅಶ್ವಮೇಧದ ಅಂಗಳದಲ್ಲಿ ಜ್ಞಾನಿಯಲ್ಲದ ಓರ್ವ ಬ್ರಾಹ್ಮಣನಿಲ್ಲ; ನೂರಾರು ಅನುಚರರಿರದ ಒಬ್ಬನೇ ಒಬ್ಬ ಬ್ರಾಹ್ಮಣನಿಲ್ಲ!

ನಿಜವಾದ ಬ್ರಾಹ್ಮಣನ ಬದುಕೆಂದರೆ ಅದು- ‘ಅರಿವಿನ ಹರವು ಮತ್ತು ಅರಿವಿನ ಹರಿವು’. ಭವಿಷ್ಯದ ಬ್ರಾಹ್ಮಣ್ಯಕ್ಕೆ ಮೇಲ್ಪಂಕ್ತಿಯಾಗಿ ನಿಂತ ಬ್ರಾಹ್ಮಣೋತ್ತಮರನ್ನು ಬಣ್ಣಿಸುವ ಮೇಲಿನ ಪಂಕ್ತಿಯು ಹೇಳುವುದಿಷ್ಟು: ದಶರಥನ ಅಶ್ವಮೇಧದಲ್ಲಿ ಭಾಗವಹಿಸಿದ ಒಬ್ಬೊಬ್ಬ ಬ್ರಾಹ್ಮಣನೂ ಸ್ವತಃ ಜ್ಞಾನಿಯಾಗಿದ್ದನಲ್ಲದೇ ಜ್ಞಾನದನೂ* ಆಗಿದ್ದನು. ಆದುದರಿಂದಲೇ ಯಜ್ಞಕರ್ಮಗಳ ನಡುವಿನ ಎಡೆಯಲ್ಲಿ, ಯಾಗಶಾಲೆಯಲ್ಲಿ ಜೀವನಮರ್ಮಗಳನ್ನು ತೆರೆದು ತೋರುವ, ದೇವನ ದಾರಿಗೆ ದೀಪ ಹಚ್ಚುವ ಸುಜ್ಞಾನ~ಸಂವಾದಗಳು ನಡೆಯುತ್ತಿದ್ದವು.

ಅನಂತ ಕಾಲಪ್ರವಾಹದಲ್ಲಿ, ದಿನ-ರಾತ್ರಿಗಳನ್ನು ಸುವ್ಯವಸ್ಥೆಗೊಳಿಸುವ ರವಿ~ಶಶಿಗಳ ಮಹತ್-ಕರ್ತವ್ಯದಲ್ಲಿ ಎಲ್ಲಿಯೂ- ಒಮ್ಮೆಯೂ ಕರ್ಮಲೋಪವಿಲ್ಲ; ಅಂತೆಯೇ, ವಸಿಷ್ಠ~ಋಷ್ಯಶೃಂಗರ ದಿವ್ಯಮೇಧೆಯ ಬೆಳಕಲ್ಲಿ ಸಂಪನ್ನಗೊಳ್ಳುತ್ತಿರುವ ಅಶ್ವಮೇಧದಲ್ಲಿ ಎಲ್ಲಿಯೂ- ಯಾವ ಲೋಪವೂ ಇಲ್ಲ!
ಭಾವಲೋಪವಿಲ್ಲ; ಸ್ವರಲೋಪವಿಲ್ಲ; ವರ್ಣಲೋಪವಿಲ್ಲ; ಪದಲೋಪವಿಲ್ಲ; ಮಂತ್ರಲೋಪವಿಲ್ಲ; ತಂತ್ರಲೋಪವಿಲ್ಲ; ದ್ರವ್ಯಲೋಪವಿಲ್ಲ; ಕಾಲಲೋಪವಿಲ್ಲ; ಕರ್ಮಲೋಪವಿಲ್ಲ; ಯಾವ ಲೋಪವೂ ಇಲ್ಲದಂತೆ ಅಶ್ವಮೇಧ ಮಹಾಯಾಗದ – ಕುಟಿಲವಲ್ಲದ, ಆದರೆ ಅತಿಜಟಿಲವಾದ – ಪ್ರಕ್ರಿಯೆಗಳು ನೆರವೇರತೊಡಗಿದವು.

ಮಾತುಗಳಲ್ಲಿ, ಮಂತ್ರಗಳಲ್ಲಿ ಒಂದೊಂದು ಅಕ್ಷರವು ದೇಹದೊಳಗಿನ ಯಾವ ಯಾವ ಸ್ಥಾನದಿಂದ ಮೂಡಿ ಬರಬೇಕು ಮತ್ತು ಅದರ ಹಿಂದೆ ಯಾವ ಯಾವ ಸ್ಥೂಲ-ಸೂಕ್ಷ್ಮ ಪ್ರಯತ್ನಗಳು ಇರಬೇಕು ಎಂಬುದನ್ನು ಶಿಕ್ಷಾಶಾಸ್ತ್ರವು ವಿವರಿಸುತ್ತದೆ. ಹಾಗೆ ಮಾತನಾಡಿದರೆ ಆ ಮಾತುಗಳೇ ಮಂತ್ರವಾದಾವು. ಹಾಗೆ ಮಂತ್ರಗಳನ್ನು ಉಚ್ಚರಿಸಿದರೆ ಆ ಮಂತ್ರಕ್ಕೆ ಸಂಬಂಧಿಸಿದ ದೇವತೆಯು ಆ ಸ್ಥಳದಲ್ಲಿ ಕೂಡಲೇ ಉಪಸ್ಥಿತಗೊಳ್ಳಲೇಬೇಕು!

ಋಷ್ಯಶೃಂಗಾದಿಗಳ ಶಿಕ್ಷಾಕ್ಷರ-ಸಮನ್ವಿತವಾದ*, ಭಾವಭರಿತವಾದ, ಮಧುರ-ಮಂತ್ರಾಹ್ವಾನಗಳನ್ನು ಮಾನಿಸಿ, ಮಹೇಂದ್ರನೇ ಮೊದಲ್ಗೊಂಡು ದೇವತಾಮಂಡಲವು ಧರೆಗಿಳಿಯಿತು; ಯಾಗಮಂಟಪದಲ್ಲಿ ಪ್ರಕಟವಾಯಿತು; ಮನೋಮಾಧುರ್ಯ~ಮಂತ್ರಮಾಧುರ್ಯಗಳಿಂದ ಸಂಪನ್ನವಾದ ಯಾಗದ ಹವಿರ್ಭಾಗವನ್ನುಂಡು ಸಂತೃಪ್ತವಾಯಿತು.

ದೇವಲೋಕದ ದೇವರುಗಳು ಮಾತ್ರವಲ್ಲ, ಜೀವಲೋಕದ ಜೀವರುಗಳೂ ಅಶ್ವಮೇಧದ ಅಮೃತಾನ್ನವುಂಡು ಸಂತೃಪ್ತರಾದರು: ‘ನ ತೇಷ್ವಹಸ್ಸು ಶ್ರಾಂತೋ ವಾ ಕ್ಷುಧಿತೋ ವಾಪಿ ದೃಶ್ಯತೇ’ – ‘ಅಶ್ವಮೇಧವು ನಡೆಯುತ್ತಿರುವಷ್ಟು ಸಮಯವೂ ಅಲ್ಲಿ ಹಸಿದ, ಬಳಲಿದ ಒಂದೇ ಒಂದು ಮುಖವೂ ಕಂಡು ಬರಲಿಲ್ಲ!’.

ಸ್ಫುರದ್ರೂಪಿಗಳಾದ, ಸುವಸನ*-ಸುವರ್ಣಗಳಿಂದ ಸಮಲಂಕೃತರಾದ ರಾಜಸೇವಕರು ಮೃಷ್ಟಾನ್ನ-ಪರಿವೇಷಣದ ಕರ್ತವ್ಯದಲ್ಲಿ ನಿಯುಕ್ತರಾಗಿದ್ದರು; ಅವರಿಗೆ ನೆರವೀಯಲು ನಿಯುಕ್ತರಾಗಿದ್ದ ಪರಿಚಾರಕರೂ ಮಣಿಕುಂಡಲಧಾರಿಗಳಾಗಿದ್ದರು! ಪರಿಚಾರಕರ ಪರಿಚಾರಕರೂ ಮಣಿಕುಂಡಲಧಾರಿಗಳೆನ್ನುವಾಗ ದಶರಥನೃಪತಿಯ ವೈಭವವೆಂತಹದು! ತನ್ನ ಸೇವಕರ ಕುರಿತು ಅವನ ಔದಾರ್ಯವೆಂತಹದು! ಸುಲಕ್ಷಣರಾದ, ಸುಪರಿಷ್ಕೃತರಾದ, ಸರ್ವಾಭರಣ-ಸಂಪನ್ನರಾದ ಸೇವಕರನ್ನು ಬಡಿಸಲು ನಿಯೋಜಿಸುವಾಗ, ಉಣ್ಣುವವರ ಕುರಿತು ಅವನ ಕಾಳಜಿಯೆಂತಹದು!

ಮಾನವಕುಲದಲ್ಲಿ ಎಷ್ಟು ವೈವಿಧ್ಯವಿದೆಯೋ ಅವೆಲ್ಲವೂ ಅಲ್ಲಿ ದಶರಥದತ್ತವಾದ, ಬಗೆ ಬಗೆಯ ಸ್ವಾದಿಷ್ಟವಾದ ಭಕ್ಷ್ಯ-ಭೋಜ್ಯಗಳನ್ನುಂಡು ತಣಿಯಿತು. ದೇವಸೇವೆಯಲ್ಲಿ ತನ್ಮಯರಾದ ವಿಪ್ರೋತ್ತಮರು, ಜೀವಸೇವೆಯಲ್ಲಿ ದೇವರನ್ನು ಕಾಣುವ ದಾಸಜನರು, ಇವೆಲ್ಲವನ್ನೂ ಮೀರಿ ನಿರ್ಗುಣ ಪರಬ್ರಹ್ಮದಲ್ಲಿ ನೆಲೆಸಿದ ಸನ್ಯಾಸಿಗಳು, ಸನ್ಯಾಸವನ್ನೂ ಮೀರಿದ ವಾತವಸನರಾದ* ಅವಧೂತರು ದಶರಥನ ಪರಮಾನ್ನವುಂಡು, ಅವನಿಗೆ ಪರಮಾಶಿಷಗಳನ್ನಿತ್ತರು. ಇದು ಸಬಲವರ್ಗದ ಸಂತೋಷವಾದರೆ, ಇನ್ನೊಂದೆಡೆ ವೃದ್ಧರು, ವ್ಯಾಧಿತರು, ಸ್ತ್ರೀಯರು, ಬಾಲಕರು, ಎಂದೂ ಉಂಡಿರದ ಊಟವುಂಡು- ಎಂದೂ ಕಾಣದ ಸಂತೋಷವನ್ನು ಕಂಡಾಗ ದಶರಥನಿಗೆ ದೈವಕೃಪೆಯಿರುವುದು ನಿಶ್ಚಯವಾಯಿತು!

ವಿಶ್ವದ ವಿವಿಧ ದೇಶಗಳ, ಅನ್ಯಾನ್ಯ ಜನವರ್ಗಗಳಿಗೆ ಸೇರಿದ ಜನತೆಯು “ಅಹೋ! ತೃಪ್ತಾಃ ಸ್ಮ” – ಆಹಾ! ತೃಪ್ತರಾದೆವು!…”ಭದ್ರಂ ತೇ”– ನಿನಗೊಳಿತಾಗಲಿ! ಎಂದು ಉದ್ಗರಿಸುವುದನ್ನು ಕೇಳುವಾಗ ದೇವರು ಕಿವಿಗಳನ್ನಿತ್ತುದು ಸಾರ್ಥಕವೆನಿಸಿತು ದಶರಥನಿಗೆ!

ಹೀಗೆ ಜೀವರುಗಳ, ದೇವರುಗಳ ಒಲುಮೆಯ ಮೂಲಕ ದೇವದೇವನ ಒಲುಮೆಯನ್ನು ಸಾಧಿಸುವಲ್ಲಿ ವಿಪುಲವಾದ ದ್ರವ್ಯತ್ಯಾಗವನ್ನು ಮಹಾಸಂತೋಷದಿಂದಲೇ ಗೈದ ದಶರಥನು ಯಾಗಾಂತ್ಯದಲ್ಲಿ ಮಾಡಹೊರಟ ಮಹಾದಾನವಾವುದು ಗೊತ್ತೇ?

‘ಪ್ರಾಚೀಂ ಹೋತ್ರೇ ದದೌ ರಾಜಾ ದಿಶಂ ಸ್ವಕುಲವರ್ಧನಃ |
ಅಧ್ವರ್ಯವೇ ಪ್ರತೀಚೀಂ ತು ಬ್ರಹ್ಮಣೇ ದಕ್ಷಿಣಾಂ ದಿಶಮ್ ||
ಉದ್ಗಾತ್ರೇ ಚ ತಥೋದೀಚೀಮ್…’

ಯಾವುದೇ ಯಜ್ಞದಲ್ಲಿ ನಾಲ್ವರು ಪ್ರಧಾನ ಋತ್ವಿಜರು. ಋಗ್ವೇದದಿಂದ ಹೋತಾ, ಯಜುರ್ವೇದದಿಂದ ಅಧ್ವರ್ಯು, ಸಾಮವೇದದಿಂದ ಉದ್ಗಾತಾ, ಅಥರ್ವವೇದದಿಂದ ಬ್ರಹ್ಮಾ. ಮಂತ್ರಪೂರ್ವಕವಾಗಿ ದೇವತೆಗಳನ್ನು ಕರೆಯುವವನು ಹೋತಾ; ಬಂದ ದೇವತೆಗೆ ವಿಧಿಪೂರ್ವಕವಾಗಿ ಹವಿಸ್ಸನ್ನು ಸಲ್ಲಿಸುವವನು ಅಧ್ವರ್ಯು; ಬಳಿಕ ಸಾಮಗಾನದಿಂದ ದೇವತೆಯನ್ನು ಸಂತುಷ್ಟಗೊಳಿಸುವವನು ಉದ್ಗಾತಾ; ಎಲ್ಲಿಯೂ ಲೋಪವಾಗದಂತೆ ಎಲ್ಲೆಡೆ ದೃಷ್ಟಿಯಿರಿಸುವವನು ಬ್ರಹ್ಮಾ.

ದಶರಥನು ಅಶ್ವಮೇಧದ ಹೋತೃವಿಗೆ ಸಮಗ್ರವಾದ ಪೂರ್ವದಿಕ್ಕನ್ನೇ ದಾನವಾಗಿ ನೀಡಿದನು!
ಅಧ್ವರ್ಯುವಿಗೆ ಸಮಸ್ತ ಪಶ್ಚಿಮದಿಶೆಯನ್ನೇ ದಾನವಿತ್ತು ಅಧ್ವರಶೋಭೆಯನ್ನು ನೂರ್ಮಡಿಗೊಳಿಸಿದನು.
ಉದ್ಗಾತೃವಿಗೆ ಉತ್ತರದಿಕ್ಕಿನಲ್ಲಿರುವ ಭೂಮಿಯೆಲ್ಲವನ್ನೂ ಉದಾರ ದಾನದ ಉದಾಹರಣೆಯಾಗಿ ಸಲ್ಲಿಸಿದನು!
ಬ್ರಹ್ಮನಿಗೆ ದಕ್ಷಿಣದಿಶೆಯಲ್ಲಿರುವ ಧರೆಯೆಲ್ಲವನ್ನೂ ಧಾರಾದತ್ತವಾಗಿ ಒಪ್ಪಿಸಿದನು!

ಹೀಗೆ ಭೂಮಂಡಲವೆಲ್ಲವನ್ನೂ ಭೂಸುರರಿಗೆ ಯಜ್ಞದಕ್ಷಿಣೆಯಾಗಿ ಸಮರ್ಪಿಸಿದ ದಶರಥನು ಇನ್ನಿಲ್ಲದಂತೆ ಬರಿದಾದ ಕೈಗಳನ್ನು ಮುಗಿದು, ಇನ್ನಿಲ್ಲದ ಧನ್ಯತೆಯಲ್ಲಿ ತಲೆಬಾಗಿ ನಿಂತನು!

~*~*~

(ಸಶೇಷ)

ಕ್ಲಿಷ್ಟ~ಸ್ಪಷ್ಟ:

  • ವಾಜಿ = ಕುದುರೆ. (ವಾಜಿಮೇಧ = ಅಶ್ವಮೇಧ)
  • ಯಾಜಕರು = ಯಜ್ಞವನ್ನು ನೆರವೇರಿಸುವವರು
  • ಜ್ಞಾನದ = ಜ್ಞಾನವನ್ನು ದಾನಗೈಯುವವನು
  • ಸುವಸನ = ಒಳ್ಳೆಯ ವಸ್ತ್ರ
  • ಮೃಷ್ಟಾನ್ನ ಪರಿವೇಷಣ = ರುಚಿಕರವಾದ ಊಟವನ್ನೊಳಗೊಂಡ ಅನ್ನದಾನ
  • ವಾತವಸನ = ಗಾಳಿಯನ್ನೇ ಧರಿಸಿರುವವರು; ದಿಗಂಬರರು

 

ತಿಳಿವು~ಸುಳಿವು:

  • <ಶಿಕ್ಷಾಕ್ಷರ ಸಮನ್ವಿತ> : ಶಿಕ್ಷಾಶಾಸ್ತ್ರದಲ್ಲಿ ನಿರ್ದೇಶಿತವಾದ ಸೂತ್ರಗಳಂತೆ ಅಕ್ಷರಗಳನ್ನು ಒಳಗೊಂಡ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ67ನೇ ರಶ್ಮಿ.

 

66 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box