ಕ್ಷಣ ಮೊದಲು ಅಖಂಡ ಸಾಮ್ರಾಜ್ಯದ ಅಧಿಪತಿ; ಇದೀಗ ಚಿಕ್ಕಾಸೂ ಇಲ್ಲದ ಅಕಿಂಚನ! ಅಶ್ವಮೇಧ ಯಾಗಾಂತ್ಯದ ಹೊತ್ತಿಗೆ ದಶರಥ ಚಕ್ರವರ್ತಿಯ ಪರಿಸ್ಥಿತಿಯಿದು; ಹಾಗೆಂದು ಅವನ ಸಂಪತ್ತು ಕದ್ದು ಹೋಗಿದ್ದೇನೂ ಅಲ್ಲ; ಯಾವುದಾದರೂ ಅವಘಡದಲ್ಲಿ ನಷ್ಟವಾಗಿದ್ದೂ ಅಲ್ಲ; ತನ್ನ ಸರ್ವಸಂಪತ್ತನ್ನೂ ಆತನೇ ಕೈಯ್ಯಾರೆ ವಿತರಿಸಿದ್ದು; ಅಖಂಡ ಭೂಮಂಡಲದ ಒಡೆತನವನ್ನು ಅಶ್ವಮೇಧವನ್ನು ನೆರವೇರಿಸಿದ ವಿಪ್ರವರರಿಗೆ ದಕ್ಷಿಣೆಯಾಗಿ ಸಮರ್ಪಿಸಿ ಬರಿಗೈ ಮುಗಿದು ನಿಂತಿದ್ದನಾತ!

ದಾನೇನ ಪಾಣಿಃ, ನ ತು ಕಂಕಣೇನ” ಕಂಕಣಗಳು ಕರಗಳಿಗೆ ಬಾಹ್ಯಶೋಭೆಯನ್ನು ನೀಡಿದರೆ ನೈಜ ಶೋಭೆಯನ್ನು ನೀಡುವುದು ದಾನ. ದಶರಥನ ಮುಗಿದ ಬರಿಗೈಗಳು ಸರ್ವಸ್ವದಾನದ ಅಪೂರ್ವ ಶೋಭೆಯಲ್ಲಿ ಕಂಗೊಳಿಸಿದವು.

ಸೋಜಿಗ! ಋತ್ವಿಜರು ದಶರಥನಿತ್ತ ಮಹಾಭೂದಾನವನ್ನು ಸ್ವೀಕರಿಸಲೇ ಇಲ್ಲ! “ಭವಾನೇವ ಮಹೀಂ ಕೃತ್ಸ್ನಾಂ ಏಕೋ ರಕ್ಷಿತುಮರ್ಹತಿ” ಅವರೆಂದರು:- “ಅಖಂಡಭೂಮಂಡಲವನ್ನು ಪರಿಪಾಲಿಸಲು ನೀನೇ ಸರಿ; ನಾವಲ್ಲ! ಈ ವಿಷಯದಲ್ಲಿ ನೀನೊಬ್ಬ ಮಾಡಬಹುದಾದ ಕಾರ್ಯವನ್ನು ನಾವೆಲ್ಲರೂ ಕೂಡಿಯೂ ಮಾಡಲಾಗದು! ನಮ್ಮ ಯಜ್ಞ-ದಾನ-ತಪಸ್ಸು-ಸ್ವಾಧ್ಯಾಯಗಳು ಸುಲಲಿತವಾಗಿ ಸಾಗುವಲ್ಲಿ ಸಲ್ಲುವಂತೆ ಕಿಂಚಿತ್ ದಕ್ಷಿಣೆಯನ್ನು ನೀಡಿದಲ್ಲಿಗೆ ನಾವು ತೃಪ್ತರು.”

ಎಂಥ ಸಂಯಮವದು! ಒಮ್ಮೆ ಕಣ್ಮುಚ್ಚಿ ಕಲ್ಪಿಸಿಕೊಳ್ಳಿ:- ರಾಜನೊಬ್ಬ ಸಮಸ್ತರಾಜ್ಯವನ್ನೇ ನಿಮ್ಮ ಪದತಲಕ್ಕೆ ಒಪ್ಪಿಸುತ್ತಿದ್ದಾನೆ! ಬೇಡವೆನ್ನಲು ಸಾಧ್ಯವೇ? ಬಿಟ್ಟಿ ಸಿಕ್ಕಿದರೆ ಹತ್ತು ರೂಪಾಯಿಯನ್ನೂ ಬೇಡವೆನ್ನಲು ಮನಸಾಗದು; ಹಾಗಿರುವಾಗ ತಾನಾಗಿ ಬಂದು ಸೇರಿದ ಸಾಮ್ರಾಜ್ಯವನ್ನು ಬಿಟ್ಟುಬಿಡಲು ಸಾಧ್ಯವೇ?

ಎಂಥ ವಿವೇಕವದು! ಯೋಗ್ಯತೆಯಿಲ್ಲದೆ ಬರುವ ಯೋಗವು ಪತನಕ್ಕೆ ಕಾರಣವಾಗುವುದು! ಆದುದರಿಂದ, ನಮ್ಮ ಯೋಗ್ಯತೆಗೆ ಮೀರಿದ ಯಾವುದೇ ಯೋಗವನ್ನೂ – ಅದೆಷ್ಟೇ ದೊಡ್ಡದಾಗಿದ್ದರೂ, ತಾನಾಗಿ ಬಳಿ ಬಂದಿದ್ದರೂ – ಸ್ವೀಕರಿಸಕೂಡದು. ‘ಯಜ್ಞ-ತಪಸ್ಸುಗಳಲ್ಲಿ ತಾವು ಅತ್ಯಂತ ಯೋಗ್ಯರೇ ಇರಬಹುದು; ಆದರೆ ರಾಜ್ಯಪಾಲನೆಯಲ್ಲಿ ಅಲ್ಲ!’ ಎಂಬುದರ ಸ್ಪಷ್ಟಪ್ರಜ್ಞೆಯಿತ್ತು ಆ ಋತ್ವಿಜರಿಗೆ; ತನ್ನ ಯೋಗ್ಯತೆಯ ಅರಿವು ತನಗಿರುವುದಾದರೆ, ಸ್ವಪರಿಚಯದ ಸ್ಪಷ್ಟ ಪ್ರಜ್ಞೆಯು ಮನದಲ್ಲಿ ಮನೆ ಮಾಡಿರುವುದಾದರೆ, ಅಂಥವರು ಬದುಕಿನಲ್ಲಿ ಎಡವುವ ಸಂಭವವು ತೀರಾ ಕಡಿಮೆ!

ಯಾರು ಯಾವ ಕಾರ್ಯಕ್ಕೆ ಸೂಕ್ತವೋ ಅವರೇ ಆ ಕಾರ್ಯವನ್ನು ಮಾಡುವುದು ಕಾರ್ಯಸಿದ್ಧಿಯ ಮೂಲಮಂತ್ರ. ಕಣ್ಣು ನೋಡಬೇಕು; ಕಿವಿಯು ಕೇಳಬೇಕು; ಮಿದುಳು ಚಿಂತಿಸಬೇಕು; ಕರಗಳು ಕಾರ್ಯವೆಸಗಬೇಕು; ಇದು ಅದಲುಬದಲಾದಲ್ಲಿ ಎರಡೂ ಕಡೆಯೂ ಕಾರ್ಯಹಾನಿಯು ನಿಶ್ಚಿತ!

ಋತ್ವಿಜರೆಂದಂತೆ ದಶರಥನು ಅವರಿಗೆ ಕಿಂಚಿದ್ದಕ್ಷಿಣೆಯನ್ನೇ ಕೊಟ್ಟನು. ಆ ಕಿಂಚಿತ್ತೇ ಅದೆಷ್ಟು ಮಹತ್ತಾಗಿತ್ತೆಂದರೆ:- ಹತ್ತು ಲಕ್ಷ ಗೋವುಗಳು, ಹತ್ತು ಕೋಟಿ ಸ್ವರ್ಣಮುದ್ರಿಕೆಗಳು ಮತ್ತು ನಲವತ್ತು ಕೋಟಿ ರಜತಮುದ್ರಿಕೆಗಳು, ಹೀಗೆ ಸಂಪತ್-ಪರ್ವತವನ್ನೇ ಯಜ್ಞದಕ್ಷಿಣೆಯಾಗಿ ಸಮರ್ಪಿಸಿದನು ದಶರಥನೃಪತಿ!

ಋತ್ವಿಜರು ರಾಜನಿತ್ತ ದಕ್ಷಿಣೆಯನ್ನು ಸ್ವೀಕರಿಸಲು ಈಗಲೂ ಯಾವುದೇ ಅವಸರದಲ್ಲಿರಲಿಲ್ಲ. ರಾಜನಿತ್ತ ರತ್ನರಾಶಿಯೆಲ್ಲವನ್ನೂ ವಸಿಷ್ಠ-ಋಷ್ಯಶೃಂಗರ ಮುಂದಿಟ್ಟು ಹಗುರಾದರು ಅವರು. ಬೆಟ್ಟದ ಮೇಲೆ ಬಿದ್ದ ಮಳೆ ಕೆಳಭಾಗದಲ್ಲಿರುವ ಇಳೆಯ ಕಡೆ ಹರಿಯುವುದು ಸಹಜವಲ್ಲವೇ? ಶೃಂಗ-ತುಂಗ ವ್ಯಕ್ತಿತ್ವದ ಋಷ್ಯಶೃಂಗ-ವಸಿಷ್ಠರು ತಮ್ಮ ಮೇಲೆ ಸುರಿದ ಸಂಪದ್ವೃಷ್ಟಿಯನ್ನು ಋತ್ವಿಜರೆಲ್ಲರಿಗೂ ಯೋಗ್ಯ ಭಾಗ ಸಲ್ಲುವಂತೆ ಹರಿಯಿಸಿ ಹಗುರಾದರು. ಸಲ್ಲಬೇಕಾದವರಿಗೆ ಸಲ್ಲಬೇಕಾದುದನ್ನು ಸಲ್ಲಿಸಿದಾಗ ಆತ್ಮವು ಹಗುರಾಗುವ ಪರಿ ಅನನ್ಯವಾದುದು!

ಹೀಗೆ ಯಜ್ಞವನ್ನು ನಡೆಸಬಂದವರಿಗೆ ಭೂರಿ ದಕ್ಷಿಣೆಯನ್ನು ನೀಡಿದ ದಶರಥನು ಅಲ್ಲಿಗೆ ನಿಲ್ಲಲಿಲ್ಲ; ಯಜ್ಞವನ್ನು ನೋಡಬಂದ ವಿಪ್ರೋತ್ತಮರೆಡೆಗೂ ಕೋಟಿಕೋಟಿ ಸ್ವರ್ಣನಾಣ್ಯಗಳ ದಾನಪ್ರವಾಹವನ್ನೇ ಹರಿಸಿದನು! ದರ್ಶನಾರ್ಥಿಗಳಿಗೆ ಅಪರೂಪದಲ್ಲಿ ಅಪರೂಪದ ಅಶ್ವಮೇಧದ ದರ್ಶನಭಾಗ್ಯದ ಜೊತೆಗೆ ದಕ್ಷಿಣಾಭಾಗ್ಯ! ಯಜ್ಞವ ನೋಡಬಂದವರ ಕಣ್ತಣಿಯಿತು; ಜೀವವು ಧನ್ಯವೆನಿಸಿತು; ಜೊತೆಗೆ ಜೀವನವೇ ಸಂಪತ್ಸಮೃದ್ಧವಾಯಿತು!

ಏತನ್ಮಧ್ಯೆ ಪುಟ್ಟ ಪರೀಕ್ಷೆಯೊಂದು ದಶರಥನ ದಾನಶೀಲ ಮನಸಿಗೆ ಎದುರಾಯಿತು. ದಾನಮಾನಗಳ ದ್ವಾರಾ ದಶರಥನು ಯಜ್ಞಕ್ಕಾಗಿ ತಂದ ಸಂಪತ್ತೆಲ್ಲವೂ ತೀರಿದ ಬಳಿಕ, ಬಡಬ್ರಾಹ್ಮಣನೋರ್ವನು ಬಂದು ಯಾಚಿಸಿದನು. ತಂದ ಚಿನ್ನವು ಬರಿದಾಯಿತೆಂದು ಕ್ಷಣವೂ ಹಿಂದೆಮುಂದೆ ನೋಡದ ದಶರಥನು ತೊಟ್ಟ ಚಿನ್ನವನ್ನೇ ನಿರ್ಧನ-ವಿಪ್ರನಿಗೆ ದಾನವಾಗಿ ನೀಡಿ ಸಂಭ್ರಮಿಸಿದನು! ದೊರೆಯ ಹಸ್ತಾಭರಣವು ದರಿದ್ರನ ಹಸ್ತವನ್ನು ಸೇರಿ, ಮಿಗಿಲಾದ ಕಾಂತಿಯಿಂದ ಕಂಗೊಳಿಸಿತು! ಇತ್ತ ಸ್ವರ್ಣಾಭರಣವ ಕಳಚಿದ ದಶರಥನ ಹಸ್ತವು ದಾನಾಭರಣಭೂಷಿತವಾಗಿ, ಪುಣ್ಯದ ಹಸ್ತವಾಗಿ ಇಮ್ಮಡಿಯಾಗಿ ಕಂಗೊಳಿಸಿತು!

~*~*~

(ಸಶೇಷ)

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ68ನೇ ರಶ್ಮಿ.

 

67 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box