ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಕನ್ನಡದ ಮಣ್ಣು, ಅದು ರನ್ನ. ಏಕೆಂದರೆ ರಾಮನ ಪಾದಸ್ಪರ್ಶ ಈ ಮಣ್ಣಿಗಾಗಿದೆ. ಮಾತ್ರವಲ್ಲ, ರಾಮನ ಪಾದಕ್ಕೆ ಅನರ್ಘ್ಯ ರತ್ನಗಳನ್ನೇ ಈ ಮಣ್ಣು ಕಾಣಿಕೆಯಾಗಿ ಕೊಟ್ಟಿದೆ. ಆ ಮಹಾಪುರುಷನ ಮಹಾಸಂಕಟದಲ್ಲಿ ಜೊತೆಯಾಗಿ ನಿಂತವರು ನಾವು. ಅಯೋಧ್ಯೆ ರಾಮನನ್ನು ಕಾಡಿಗಟ್ಟಿತು, ಸೀತೆಗೆ ಅಪವಾದ ಕೊಟ್ಟಿತು. ಆದರೆ ನಾವು, ಕನ್ನಡದವರು ರಾಮನು ಸೀತೆಯನ್ನು ಮರಳಿ ಪಡೆಯಲು ನೆರವಾದೆವು. ಮಹಾಸಂಗ್ರಾಮದಲ್ಲಿ ರಾಮನಿಗಾಗಿ ರಕ್ತಾರ್ಪಣೆಯನ್ನು, ಪ್ರಾಣಾರ್ಪಣೆಯನ್ನು ಮಾಡಿದೆವು. ಸೀತೆಗೂ ಹಾಗೆಯೇ. ಅವಳ ಬದುಕಿನ ದೃಷ್ಟಿಯಿಂದ ಕನ್ನಡನಾಡಿನ ಮಹತ್ವ ತುಂಬಾ ದೊಡ್ಡದು. ಈ ಮಣ್ಣು ರನ್ನ ಮಾತ್ರವಲ್ಲ, ಚಿನ್ನವೂ ಹೌದು. ಸೀತೆಯು ಚಿನ್ನವನ್ನು ಎಸೆದು ಅನುಗ್ರಹಿಸಿದ ನಾಡು ನಮ್ಮ ಕನ್ನಡನಾಡು. ರಾವಣನು ಸೀತೆಯನ್ನು ಗಗನಮಾರ್ಗದಲ್ಲಿ ಕದ್ದೊಯ್ಯುವಾಗ ಋಷ್ಯಮೂಕ ಪರ್ವತದ ನೆತ್ತಿಯಲ್ಲಿ, ನಮ್ಮ ಕನ್ನಡನಾಡಿನಲ್ಲಿ ಆಕೆಗೆ ಐವರು ವಾನರ ಪುಂಗವರು ಗೋಚರಿಸಿದರು. ಅವರು ಎಂಥವರೆಂದು ಆಲೋಚನೆ ಮಾಡಲು ಒಂದು ಕ್ಷಣವೂ ಕೂಡ ಸಮಯವಿಲ್ಲ. ಆದರೆ ಆಕೆಗೆ ಅವರಲ್ಲಿ ಸದ್ಭಾವ ಮೂಡಿತು. ಇವರು ನನಗೂ, ರಾಮನಿಗೂ ಸೇತುವಾದಾರು ಎಂಬ ಭಾವ ಆಕೆಯಲ್ಲಿ ಬಂತು. ಸ್ತ್ರೀಯರಿಗೆ ಆಭರಣ ಬಹಳ ಪ್ರಿಯ. ಸೀತೆಗಂತೂ ಆ ಆಭರಣಗಳು ಅತ್ಯಂತ ಪ್ರಿಯ. ಏಕೆಂದರೆ ರಾಮಕೊಟ್ಟ ಆಭರಣಗಳಿವೆ ಅವುಗಳಲ್ಲಿ. ಕೌಸಲ್ಯೆ-ದಶರಥರು, ಜನಕನೂ, ಅವಳ ತಾಯಿಯೂ ಕೊಟ್ಟದ್ದಿರಬಹುದು. ಅಂತಹ ಆಭರಣಗಳನ್ನು ಒಂದು ಕ್ಷಣವೂ ಹಿಂದೆ-ಮುಂದೆ ನೋಡದೇ ಕಳಚಿ, ಅವಳ ಪೀತಾಂಬರದ ಉತ್ತರೀಯದಲ್ಲಿ ಕಟ್ಟಿ ಎಸೆದಿದ್ದು ನಮ್ಮ ಕನ್ನಡದ ಮಣ್ಣಿಗೆ. ಹಾಗಾಗಿ ಈ ಮಣ್ಣಿಗೆ ಚಿನ್ನದ ಗುಣವನ್ನು ಕೊಟ್ಟವಳು ಸೀತೆ. ಅಂತಹ ನಾಡು ನಮ್ಮದು.

ಇಂದಿನ ಸಂದರ್ಭ ಹೇಗಿದೆಯೆಂದರೆ ರಾಮನು ಕನ್ನಡದ ಮಣ್ಣಿಗೆ, ಪಂಪಾತೀರಕ್ಕೆ ಬಂದಿದ್ದಾನೆ. ನಮ್ಮ ಕನ್ನಡನಾಡನ್ನು ರಾಮನು ಕಣ್ತುಂಬಾ ನೋಡಿ, ಬಾಯ್ತುಂಬಾ ಹೊಗಳಿದ್ದಾನೆ. ಅಂದಿನ ಕನ್ನಡನಾಡು ಹೇಗಿತ್ತು ಎಂಬುದನ್ನು ರಾಮನಿಂದ ಕೇಳಬೇಕು ನಾವು. ಮುಂದೆಕೂಡ ಇದೆ. ಅವತ್ತಿನ ಕಾಲದ ಮಳೆಗಾಲ, ಚಳಿಗಾಲ ಹೇಗಿತ್ತು ಇಲ್ಲಿ ಎಂಬುದನ್ನು ನಾವು ರಾಮನ ಬಾಯಿಯಲ್ಲಿ ಕೇಳಬೇಕು. ಇಂದು ನಾವು ಶ್ರೀರಾಮನಿಂದ ಪಂಪಾಸರೋವರದ ವರ್ಣನೆಯನ್ನು ಅವಲೋಕಿಸುತ್ತೇವೆ. ರಾಮನು ಪಂಪೆಗೆ ಬಂದಿದ್ದಾನೆ. ಅದು ಸರೋವರವೂ ಹೌದು, ಪ್ರವಾಹವೂ ಹೌದು. ಅಲ್ಲಿ ಕಮಲಗಳು, ಸ್ವಚ್ಛಂದ ನೀರಿನಲ್ಲಿ ವಿಹರಿಸುವ ಮೀನುಗಳು ಇದ್ದವು. ಕಮಲಗಳು ಸೀತೆಯ ಮುಖವನ್ನು ನೆನಪು ಮಾಡಿದರೆ, ಮೀನುಗಳು ಅವಳ ನೇತ್ರಗಳನ್ನು ನೆನಪಿಗೆ ತರುತ್ತವೆ. ಅಂತಹ ಪಂಪೆಯನ್ನು ರಾಮನು ಸೇರಿ, ಇಂದ್ರಿಯಗಳೆಲ್ಲವೂ ವ್ಯಾಕುಲಗೊಂಡು ವಿಲಪಿಸಿದನು.

ಸೊಗಸಾದದ್ದು ಸಿಕ್ಕಿದಾಗ ನಮಗೆ ಯಾರ ನೆನಪಾಗುತ್ತದೆಯೋ ಅವರು ನಮ್ಮ ನಿಜವಾದ ಪ್ರಿಯರು.

ಸಂಕಟದಲ್ಲಿಯೂ ಹಾಗೆಯೇ. ಪಂಪೆ ಭುವಿಗಿಳಿದ ಸ್ವರ್ಗ. ಅದರ ಅದ್ಭುತವಾದ ಚೆಲುವನ್ನು ಕಂಡಾಗ ರಾಮನಿಗೆ ನೆನಪಾದದ್ದು ಸೀತೆ. ಹಾಗಾಗಿಯೇ ಪಂಪೆಯನ್ನು ಕಂಡು ಮುದದಿಂದ ರೋಮಾಂಚನಗೊಂಡ ರಾಮನ ಇಂದ್ರಿಯಗಳು ಕಂಪಿಸಿದವು. ಅವನು ಸೀತೆಯ ಕುರಿತಾದ ಭಾವಕ್ಕೊಳಗಾದವನಾಗಿ ಲಕ್ಷ್ಮಣನಿಗೆ ಹೀಗೆಂದನು. ಪಂಪೆಯನ್ನು ಬಣ್ಣಿಸಿದನು. ಲಕ್ಷ್ಮಣ ವಿಮಲವಾದ ಜಲವುಳ್ಳ ಪಂಪೆಯು ಶೋಭಿಸುವುದನ್ನು ನೋಡು. ಪದ್ಮಗಳು ಮತ್ತು ಉತ್ಪಲಗಳು ( ರಾತ್ರಿ ಹಾಗು ಹಗಲಲ್ಲಿ ಅರಳುವವು) ಅರಳಿವೆ. ಸುತ್ತ ಮರ-ಗಿಡಗಳ ಮಾಲೆ. ಪಂಪಾ ಕಾನನವನ್ನು ನೋಡು ಲಕ್ಷ್ಮಣ. ಏಕೆಂದರೆ ಹಸಿರು ಶುಭ. ಈ ಕಾನನದಲ್ಲಿ ಒಂದೊಂದು ವೃಕ್ಷವೂ ಕೂಡ ಪರ್ವತದಂತಿದೆ. ಎಷ್ಟು ಚೆಲುವಾಗಿದೆ ಲಕ್ಷ್ಮಣ. ಆದರೆ ನನಗೆ ಮಾತ್ರಾ ನೋವು. ಎರಡೆರಡು ನೋವು. ಒಂದು ಭರತನ ದುಃಖ, ಇನ್ನೊಂದು ವೈದೇಹಿಯ ದುಃಖ. ಭರತನನ್ನು ಅಗಲಿ ಬಂದಾಗಿದೆ. ಅವನು ಕೈ-ಕಾಲು ಹಿಡಿದು, ಕಣ್ಣೀರಿಟ್ಟು ಬೇಡಿದ್ದೆಷ್ಟು. ನಾನು ಕಲ್ಲುಹೃದಯದಿಂದ ಅದನ್ನು ನಿರಾಕರಿಸಿದೆ. ಹಾಗೆಯೇ ಮರಳಿದ ಅವನು. ನಗರವನ್ನೂ ಪ್ರವೇಶಿಸುವುದಿಲ್ಲ. ನಗರದ ಹೊರಗೆಲ್ಲೋ ಕುಟಿಯನ್ನು ಕಟ್ಟಿ, ಚೀರ-ಕೃಷ್ಣಾಜಿನವನ್ನು ಧರಿಸಿ ಹಣ್ಣು-ಹಂಪಲುಗಳನ್ನು ಸೇವಿಸುತ್ತಾ, ಕಠಿಣ ತಪಸ್ಸನ್ನು ಮಾಡುತ್ತಾ ನನ್ನ ನೆನಪಿನಲ್ಲಿ ದಿನಗಳನ್ನು ಕಳೆಯುತ್ತಿದ್ದಾನೆ ಅವನು. ಭರತನ ಭಾವವನ್ನು ನೆನಪಿಸಿಕೊಂಡಾಗ ಮನಸ್ಸು ಭಾರವಾಗುತ್ತದೆ. ವೈದೇಹಿ ಪ್ರಾಣಸಖಿ. ಅವಳನ್ನು ದುಃಖವಾಗುವ ರೀತಿಯಲ್ಲಿ ಕಳೆದುಕೊಂಡೆ. ಈ ಎರಡು ದುಃಖಗಳು ನನ್ನನ್ನು ಪೀಡಿಸುತ್ತಿವೆ ಲಕ್ಷ್ಮಣ. ಆದರೂ ಪಂಪೆ ಶೋಭಿಸುತ್ತದೆ. ನೊಂದಾಗ ನಮಗೆ ಚೆಂದವಿರುವುದೂ ಕೂಡ ಒಳ್ಳೆಯದಾಗಿ ಕಾಣುವುದಿಲ್ಲ. ಆದರೆ ರಾಮನು ಹಾಗಲ್ಲ. ಅಷ್ಟು ನೋವಿದ್ದರೂ ಕೂಡ ನನ್ನ ಪಾಲಿಗೆ ವಿಚಿತ್ರವಾದ ಕಾಡುಗಳಿಂದ ಕೂಡಿದ ಪಂಪೆ ಶೋಭಿಸುತ್ತಿದೆ ಎಂದನು. ಬಗೆಬಗೆಯ ಹೂವುಗಳು. ಮಂಗಲಕರವಾದ ನೀರು. ಕಮಲಗಳಿಂದ ತುಂಬಿದ ನೀರು ಶುಭದರ್ಶನವಾಗಿದೆ. ಜೀವಜಾಲಗಳು. ಸರ್ಪಗಳು, ವ್ಯಾಲ(ಹೆಬ್ಬಾವು)ಗಳು. ಅದೂ ಚೆಲುವೇ. ಬಗೆಬಗೆಯ ಪ್ರಾಣಿ-ಪಕ್ಷಿಗಳಿಂದ ಕೂಡಿದೆ ಪಂಪೆ. ನೀಲಪೀತವೆಂಬ ವಿಶೇಷ ವರ್ಣದ (ನವಿಲಿನ ಕಂಠದ ವರ್ಣ) ಹುಲ್ಲುಗಾವಲು. ಇವೆಲ್ಲಾ ಅಧಿಕವಾಗಿ ಶೋಭಿಸುವುದನ್ನು ನೋಡು. ಅವುಗಳ ಮೇಲೆ ಬಣ್ಣಬಣ್ಣದ ಹೂಗಳು ಬಿದ್ದು, ರತ್ನಗಂಬಳಿಯನ್ನು ಹಾಸಿದಂತಾಗಿದೆ. ಇದು ರಾಮನ ವರ್ಣನೆ. ವೃಕ್ಷಗಳ ಶಿಖರಗಳು ಹೂವಿನ ಭಾರಕ್ಕೆ ತಲೆಬಾಗುವಂತಿದೆ. ಎಷ್ಟು ಹೂವಿರಬಹುದು. ಹೂವಿನ ಬಳ್ಳಿಗಳು ಅವನ್ನು ಸುತ್ತಿವೆ. ರಾಮಸೀತೆಯರಂತೆ ಆ ಮರ-ಬಳ್ಳಿಗಳು. ಸುಖವಾದ ಗಾಳಿ ಬೀಸುತ್ತಿದೆ. ಅದು ವಸಂತಋತು. ಆ ಕಾಲವೇ ಅಂತಹದ್ದು. ಬೇಸಿಗೆಯಲ್ಲಿ ಗಾಳಿ ಸುಖ. ಕತ್ತಲೆಯಲ್ಲಿ ದೀಪ ಶೋಭಿಸಿದಂತೆ. ವಸಂತದ ಚೈತ್ರಮಾಸಕ್ಕೆ ಗರ್ವ. ಮನುಷ್ಯನ ಮನಸ್ಸಿನಲ್ಲಿ ಭಾವತರಂಗಗಳನ್ನು ಏರ್ಪಡಿಸಿ, ಅವನನ್ನು ಸಂಪೂರ್ಣವಾಗಿ ಭಾವಪರವಶ ಮಾಡಬಲ್ಲೆ ಎಂಬ ಗರ್ವ. ಸುರಭಿಮಾಸವದು. ಹೂವು-ಹಣ್ಣುಗಳು ಮರಗಳಲ್ಲಿ ಚೆಂದ. ವನಗಳ ರೂಪವನ್ನು ನೋಡು ಲಕ್ಷ್ಮಣ. ಈ ಕಾಡುಗಳು ರಮಣೀಯವಾದ ಹೂಮಳೆಗರೆಯುತ್ತವೆ. ಗಾಳಿಯೂ ಬಿದ್ದ, ಬೀಳುತ್ತಿರುವ, ಮರದ ಮೇಲಿದ್ದ ಹೂವುಗಳ ಜೊತೆಗೆ ಆಟವಾಡುತ್ತಾನೆ. ಹೂವುಗಳೇ ಕೇಶಪಾಶದಂತೆ. ಅಷ್ಟು ಹೂಗಳಿವೆ. ಅಂತಹ ಮರಗಳ ಕೊಂಬೆಗಳನ್ನು ವಾಯುದೇವ ಆಡಿಸುತ್ತಾನೆ. ಆಗ ಅಲ್ಲಿ ಮಕರಂದವನ್ನು ಆಸ್ವಾದಿಸುವ ದುಂಬಿಗಳು ಹಾರಾಡುತ್ತವೆ. ಆಗ ಅವು ಶಬ್ಧಮಾಡುತ್ತವೆ. ಅಮಲೇರಿದ ಕೋಗಿಲೆಗಳ ಗಾಯನ. ಆ ಗಾಯನಕ್ಕೆ ವೃಕ್ಷಗಳ ನರ್ತನ. ಸೂತ್ರಧಾರ ಮಾರುತ. ಶೈಲಕಂದರಗಳಿಂದ ಹೊರಬರುವಾಗ ತಾನು ಹಾಡುತ್ತಾನೆ. ಶಾಖೆಗಳನ್ನು ಅತ್ತಿತ್ತ ತೂಗಾಡಿಸಿ ಎರಡು ಮರಗಳ ಕೊಂಬೆಯನ್ನು ಹೆಣೆದಿರುವುದು ವಾಯುವಿನ ಆಟ. ಆ ಗಾಳಿ ಹಿತವಾದ ಸ್ಪರ್ಶ. ತಂಪು ಪರಿಮಳ ಈ ಗಾಳಿಗೆ. ಶ್ರಮವೆಲ್ಲ ಪರಿಹಾರ. ಮರಗಳೂ ಸದ್ದುಮಾಡುತ್ತಿವೆ. ಜೇನಿನ ಪರಿಮಳ. ಭ್ರಮರಗಳ ಗೀತೆ. ರಮಣೀಯವಾದ ತಪ್ಪಲುಗಳಲ್ಲಿ ಮನೋಹರವಾದ ಹೂಗಳು ಮರಗಳ ಶಿಖರಗಳನ್ನು ಮುಚ್ಚಿವೆ. ಗಾಳಿಯು ಅವನ್ನು ಆಡಿಸುತ್ತಿರುತ್ತಾನೆ. ಹೂಗಳ ಮೇಲೆ ದುಂಬಿಗಳು. ಕಪ್ಪು ಪೇಟದಂತೆ. ಮರಗಳು ಅಲಂಕರಿಸಿಕೊಂಡು ಸಂಗೀತ ಹಾಡುವಂತಿದೆ. ಕರ್ಣಿಕಾರ ವೃಕ್ಷಗಳಲ್ಲಿ ಬಂಗಾರದ ಬಣ್ಣದ ಹೂಗಳು. ನೋಡಿದರೆ ಬಂಗಾರದ ಅಲಂಕಾರದಂತಿದೆ. ವಸಂತ ಋತು, ಪಕ್ಷಿಗಳ ನಿನಾದ ಸೀತೆಯಿಲ್ಲದ ನನ್ನ ಶೋಕವನ್ನು ಹೆಚ್ಚಾಗಿಸುತ್ತಿವೆ. ಕೋಗಿಲೆ ನನ್ನನ್ನು ಕರೆಯುವಂತಿದೆ. ನೀರುಕೋಳಿ ತುಂಬಾ ಸಂತೋಷದಲ್ಲಿದೆ. ರಮಣೀಯವಾದ ಕಾಡು ಮತ್ತು ಝರಿಯ ಈ ಪರಿಸರದಲ್ಲಿರುವ ನೀರುಕೋಳಿಯು ನನ್ನನ್ನು ಅಳುವಂತೆ ಮಾಡುತ್ತಿದೆ. ಅಂದೊಂದು ದಿನ ಸೀತೆ ಇದೇ ನೀರುಕೋಳಿಯು ಸದ್ದು ಮಾಡುತ್ತಿರುವಾಗ ನನ್ನನ್ನು ಕರೆದು, ತೋರಿಸಿ ಎಷ್ಟು ಸಂತೋಷಪಟ್ಟಿದ್ದಳು. ಅದನ್ನು ಅವಳಿಲ್ಲದ ಈ ಸಮಯದಲ್ಲಿ ನೆನಪಿಸಿಕೊಂಡಾಗ ಶೋಕವಾಗುತ್ತಿದೆ. ಹೀಗೆ ನಾನಾ ಪ್ರಕಾರದ ಪಕ್ಷಿಗಳು, ನಾನಾ ಬಗೆಯ ನಾದಗಳನ್ನು ಮಾಡುತ್ತಾ ವೃಕ್ಷ, ಬಳ್ಳಿಗಳ ಮೇಲೆ ಬಂದೆರಗುವುದನ್ನು ನೋಡು. ಕೆಲವು ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳ ಜೊತೆಗೆ ಸೇರಿ ಸಂತೋಷಪಡುವಾಗ ಉಳಿದ ಪಕ್ಷಿಗಳ ಗುಂಪು ಹೆಣ್ಣು ಪಕ್ಷಿಗೆ ಅಭಿನಂದಿಸುತ್ತಿದೆ. ಭೃಂಗ ಮತ್ತು ಪಕ್ಷಿಗಳು ಗಾನಮಾಡುತ್ತಿವೆ. ಪಕ್ಕದಲ್ಲಿ ಪ್ರಿಯ, ಪಕ್ಷಿಗಳ ಅಭಿನಂದನೆ, ಭ್ರಮರದ ಸಂಗೀತ ಎಲ್ಲವುಗಳಿಂದ ಸಂತೋಷಗೊಂಡು ಹೆಣ್ಣು ಪಕ್ಷಿ ಗಾನಮಾಡುವುದನ್ನು ನೋಡು. ಪಂಪೆಯ ತೀರದಲ್ಲಿ ಗುಂಪುಗುಂಪಾಗಿ ಸಂತೋಷಪಡುವ ಪಕ್ಷಿಗಳನ್ನು ನೋಡು. ನೀರುಕೋಳಿಯ, ಗಂಡು ಕೋಗಿಲೆಗಳ ನಾದವನ್ನು ಕೇಳು. ಇವೆಲ್ಲ ಸೇರಿ ನನ್ನಲ್ಲಿ ಭಾವಜಾಗರಣೆ. ಈ ವಸಂತವು ನಿಶ್ಚಯವಾಗಿ ನನ್ನನ್ನು ಸುಟ್ಟುಬಿಡುವುದು. ಅಶೋಕಪುಷ್ಪದ ಗೊಂಚಲು ಕೆಂಡ. ದುಂಬಿಗಳನಾದವೇ ಅಗ್ನಿಯ ಚಟಚಟಾತ್ಕಾರ. ಚಿಗುರುಗಳೇ ಜ್ವಾಲೆ. ವಸಂತ ನನ್ನನ್ನು ಸುಟ್ಟುಬಿಡುತ್ತಾನೆ ಲಕ್ಷ್ಮಣ. ರಾಮನು ಸೀತೆಯ ನೆನಪುಮಾಡಿಕೊಂಡ. ಸೂಕ್ಷ್ಮವಾದ ರೆಪ್ಪೆಗಳುಳ್ಳ ಕಣ್ಣವಳು ಸೀತೆ. ಸೊಗಸಾದ ಕೇಶಪಾಶದವಳು. ಮೃದು ಭಾಷಿಣಿ. ಇಂತಹ ಪ್ರೀತಿಯನ್ನು ಕಾಣದಿದ್ದರೆ ಬದುಕಿಗೆ ಅರ್ಥವಿಲ್ಲ. ಅವಳಿಗೆ ವಸಂತಋತು ತುಂಬಾ ಪ್ರಿಯವಾದದ್ದು. ಏಕೆಂದರೆ ಕಾನನವು ರುಚಿರಕಾನನವಾಗುವ ಸಮಯವಿದು. ಅವಳಿಲ್ಲದೇ ನನಗಿದು ಸುಡುವ ಕಾಲವಾಗಿ ಹೋಯಿತು. ಆಕೆಯನ್ನು ನಾನು ಕಾಣುತ್ತಿಲ್ಲ, ಈ ರಮಣೀಯ ಪ್ರಕೃತಿಯನ್ನು ಕಾಣುತ್ತಿದ್ದೇನೆ. ಎರಡೂ ಸೇರಿ ನನ್ನೊಳಗಿನ ಬೆಂಕಿ ಇಮ್ಮಡಿಯಾಗುತ್ತಿದೆ. ಕಾಣದ ಸೀತೆ ಮತ್ತು ಕಾಣುವ ವಸಂತ ನನ್ನ ಶೋಕವನ್ನು ಹೆಚ್ಚಾಗಿಸುತ್ತದೆ. ಒಮ್ಮೆ ಬೀಸಿದರೆ ಬೆವರಿಲ್ಲದಂತೆ ಮಾಡುವ ಗಾಳಿ ವೇದನೆ. ಚಿಂತೆಯು ನನ್ನನ್ನು ಬಲಾತ್ಕಾರವಾಗಿ ನೋವಿಗೆ ನೂಕುತ್ತಿದ್ದರೆ, ಸೀತೆಯ ನೆನಪು, ಕಾಡಿನ ಗಾಳಿ ನನ್ನ ಶೋಕವನ್ನು ಹೆಚ್ಚಿಸುತ್ತದೆ. ಆಗ ರಾಮನಿಗೆ ನವಿಲುಗಳು ಕಂಡವು. ಗಂಡು ನವಿಲುಗಳನ್ನು ಹೆಣ್ಣು ನವಿಲುಗಳು ಸುತ್ತುವರೆದಿದ್ದಾವೆ. ಅವು ನರ್ತಿಸುತ್ತಿದ್ದಾವೆ. ಅವುಗಳ ರೆಕ್ಕೆಗಳು ಸ್ಫಟಿಕದ ಕಿಟಕಿಗಳಂತೆ. ಅಮಲೇರಿದ ಈ ನವಿಲುಗಳು ನರ್ತಿಸುತ್ತಿರುವಾಗ ನಾನೆಲ್ಲೋ ಕಳೆದುಹೋಗುತ್ತಿದ್ದೇನೆ. ಸೀತಾಶೋಕವು ನನ್ನನ್ನು ಪೀಡಿಸುತ್ತದೆ. ಲಕ್ಷ್ಮಣನಿಗೆ ಹೆಣ್ಣುನವಿಲನ್ನು ತೋರಿಸಿ, ನರ್ತಿಸುವ ಮಯೂರವನ್ನು ಈ ಮಯೂರಿ ಅನುಸರಿಸುತ್ತಿರುವುದನ್ನು ನೋಡು. ನರ್ತಿಸುತ್ತಾ ಅವನೆಡೆಗೆ ಸಾಗುವುದನ್ನು ನೋಡು. ಅವನಲ್ಲಿ ಅವಳಿಗಿರುವ ಪ್ರೀತಿಯನ್ನು ನೋಡು. ಅದೇ ಮಯೂರಿಯನ್ನು ತನ್ನ ಹೃದಯದಲ್ಲಿ ಧಾರಣೆಮಾಡಿ ಮಯೂರನೂ ಅವಳೆಡೆಗೆ ಧಾವಿಸುತ್ತಿರುವುದನ್ನು ನೋಡು. ಮಯೂರನು ಮಯೂರಿಯೆಡೆಗೆ ಧಾವಿಸುವಾಗ ನನ್ನನ್ನು ನೋಡಿ ನಕ್ಕಂತಿದೆ. ರಾಮನು ಹುಸಿಕೋಪದಿಂದ ಹೌದು ಲಕ್ಷ್ಮಣ, ಈ ಮಯೂರವು ಆನಂದದಿಂದ ಮಯೂರಿಯೊಡನೆ ನರ್ತಿಸುತ್ತಿದೆ. ಏಕೆಂದರೆ ಇವನ ಹೆಂಡತಿಯನ್ನು ರಾಕ್ಷಸ ಕದ್ದೊಯ್ದಿಲ್ಲ, ಆದರೆ ಅವಳಿಲ್ಲದ ನನ್ನ ಸ್ಥಿತಿ ಸಹಿಸಲಾಗದು. ನೋಡು ಲಕ್ಷ್ಮಣ ಪ್ರಾಣಿ-ಪಕ್ಷಿಗಳಲ್ಲಿಯೂ ಪರಸ್ಪರ ಎಷ್ಟು ಅನುರಾಗ. ಮನುಷ್ಯರಂತೆಯೇ. ನೋಡು ಆ ಕಣ್ಣುಗಳನ್ನು, ಹೆಜ್ಜೆ, ಆ ಭಾವ. ಎಷ್ಟು ಪ್ರೀತಿಯಿಂದ ಅವನೆಡೆಗೆ ಹೋಗುತ್ತಿರುವುದು. ಇಲ್ಲಿ ಸೀತೆಯಿದ್ದಿದ್ದರೆ ಮಯೂರಿಯು ಮಯೂರನೆಡೆಗೆ ಹೋಗುವಂತೆ, ಇದೇ ಭಾವದಲ್ಲಿ ಅವಳು ನನ್ನೆಡೆಗೆ ಬರುತ್ತಿದ್ದಳು. ಆದರೆ ಕಾಲವು ಕ್ರೂರ ರಾಕ್ಷಸನಾಗಿ ಅವಳನ್ನು ಅಪಹರಿಸಿದೆ. ಹೂಗಳು ಬೀಳುತ್ತಿರುವುದು ನನ್ನ ಪಾಲಿಗೆ ನಿಶ್ಫಲ. ಸೀತೆಯಿದ್ದಿದ್ದರೆ ಸಫಲ. ಹೂಗಳೊಂದಿಗೆ ದುಂಬಿಗಳು ಕೆಳಗೆ ಬರುತ್ತಿವೆ. ಸೀತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಗುಂಪುಗುಂಪಾಗಿ ಈ ಪಕ್ಷಿಗಳು ಪರಸ್ಪರ ಕರೆಯುವುದನ್ನು ನೋಡು. ನನಗೆ ಪ್ರೇಮೋನ್ಮಾದ. ಒಂದು ವೇಳೆ ಈಗ ಸೀತೆ ಇರುವಲ್ಲಿಯೂ ವಸಂತಋತು ಬಂದಿದ್ದರೆ ನನ್ನಂತೆಯೇ ಅವಳೂ ಅಳುತ್ತಿರುತ್ತಾಳೆ. ಬಹುಶಃ ಅಲ್ಲಿ ವಸಂತವಿಲ್ಲ. ವಸಂತವು ಅಲ್ಲಿ ಹೋದರೆ ಅವಳು ಬದುಕುವುದಿಲ್ಲ. ಈ ಋತುವಿನ ಚೆಲುವು ಆಕೆಯಿರುವಲ್ಲಿ ಸ್ಪರ್ಶಿಸಿದರೆ ಅವಳು ಬದುಕಿರುವುದಿಲ್ಲ. ಅವಳು ಬದುಕಿರುವಳೆಂಬುದು ರಾಮನ ಭರವಸೆ. ಅಥವಾ ಅಲ್ಲಿಯೂ ವಸಂತವಿರಬಹುದು. ಶತ್ರುಗಳು ಅವಳನ್ನು ಬೈದು ಗದರಿಸುವಾಗ ಆಕೆ ಏನು ಮಾಡಿಯಾಳು. ಅವಳಿಗೆ ನನ್ನ ಹೆಸರು ಹೇಳಲೂ ಬಿಡುವುದಿಲ್ಲವೇನೋ. ಆ ಪದ್ಮದಳನಯನೆ, ಮೃದುಭಾಷಿಣಿ ಈ ವಸಂತದಲ್ಲಿ ಪ್ರಾಣಬಿಡುತ್ತಾಳೆ. ನಾನಿಲ್ಲದೇ ಅವಳು ಬದುಕಿರಲಾರಳು. ಇದು ನಿಶ್ಚಯ. ಏಕೆಂದರೆ ಅವಳ ಭಾವ ನನ್ನಲ್ಲಿ ಎರಕವಾಗಿದೆ. ಅವಳ ಭಾವ ಶಾಶ್ವತವಾಗಿ ನನ್ನಲ್ಲಿಯೇ ಇದೆ. ಅದು ಸುಳ್ಳಲ್ಲ. ನನ್ನದೂ ಹಾಗೆಯೇ. ನನ್ನೆಲ್ಲ ಭಾವವೂ ಅವಳಲ್ಲೇ. ಅವರ ಬದುಕಿನಲ್ಲಿ ಇನ್ನೊಬ್ಬರ ಪ್ರವೇಶವಿಲ್ಲ. ಧರ್ಮವದು. ಯಾವ ಕಾಮವು, ಯಾವ ಪ್ರೇಮವು ಧರ್ಮ ವಿರುದ್ಧವಲ್ಲವೋ ಅದು ನಾನೇ ಎಂದು ಕೃಷ್ಣ ಹೇಳಿದ್ದು. ಅದು ಪವಿತ್ರ. ಈ ಭಾವ ಪೂಜೆಗೆ ಯೋಗ್ಯ. ರಾಮನ ಬದುಕಿನಲ್ಲಿ ಮತ್ತೊಬ್ಬರು ಎಂದೂ ಪ್ರವೇಶಿಸಿಲ್ಲ. ಅಶ್ವಮೇಧದಲ್ಲೂ ಅವಳ ಪ್ರತಿಮೆಯನ್ನೇ ಇಟ್ಟುಕೊಂಡಿದ್ದ. ಸುಖಸ್ಪರ್ಶದ ಗಾಳಿ ನನಗೆ ಬೆಂಕಿ. ಇದೇ ಗಾಳಿ ಸೀತೆಯಿದ್ದಾಗ ಸುಖಕರವಾಗಿತ್ತು. ಆ ಕಾಲ ಎಷ್ಟು ಚೆನ್ನಾಗಿತ್ತು. ಅದೇ ಸಮಯದಲ್ಲಿ ಒಂದು ಕಾಗೆ ಕೂಗಿತು. ರಾಮನ ವಿದ್ಯಾಭ್ಯಾಸ ಜಾಗೃತವಾಯಿತು. ಇದೇ ಕಾಗೆ ಅಂದು ಪಂಚವಟಿಯಲ್ಲಿ ಗಗನದಿಂದ ಕೂಗಿ ನನಗೆ ಹೇಳಿತ್ತು ನಿನ್ನ ಸೀತೆಯಿಂದ ನೀನು ದೂರವಾಗುತ್ತೀಯೆಂದು. ಈಗ ಮರದ ಮೇಲೆ ಕುಳಿತು ಸಂತೋಷವಾಗಿ ಸೀತಾಸಮಾಗಮವನ್ನು ಸೂಚಿಸುತ್ತಿದೆ. ನನ್ನನ್ನು ಸೀತೆಯ ಬಳಿ ಕರೆದೊಯ್ಯುತ್ತದೆ. ಅಲ್ಲೊಂದು ದೃಶ್ಯವನ್ನು ರಾಮ ನೋಡಿದನು. ತಿಲಕಪುಷ್ಪದ ಮಂಜರಿ ಗಾಳಿಗೆ ತೂಗಾಡುತ್ತಿತ್ತು. ಅಮಲೇರಿದ ಪ್ರಿಯೆಯನ್ನು ಪ್ರಿಯ ಹಿಂಬಾಲಿಸಿದಂತೆ ದುಂಬಿ ಗೋಚರಿಸಿತು. ಅಶೋಕವೃಕ್ಷವು ತನ್ನನ್ನು ಅಣಕಿಸುವಂತೆ ತೋರುತ್ತಿದೆ. ಮಾವು ಹೂ ಬಿಟ್ಟು ಅಂಗರಾಗ ಅಂತರಂಗರಾಗ ಎರಡೂ ಸೇರಿದಂತೆ ಕಾಣುತ್ತಿದೆ. ಕಿನ್ನರರು ಜೋಡಿಯಾಗಿ ಸಂಚರಿಸುತ್ತಿದ್ದಾರೆ. ಪರಿಮಳಯುಕ್ತ ಕಮಲಗಳು ಬಾಲಸೂರ್ಯನ ಪ್ರತಿಬಿಂಬದಂತೆ ಪಂಪಾಜಲದಲ್ಲಿ ಇದ್ದವು. ತಿಳಿಯಾದ ನೀರು. ಹಂಸ-ಕಾರಂಡವಗಳು ಅಲ್ಲಿವೆ. ಸರೋವರವು ಬಣ್ಣಬಣ್ಣದ ಸೀರೆಯುಟ್ಟಂತೆ ಕಾಣುತ್ತಿದೆ. ಆನೆಗಳು, ಜಿಂಕೆಗಳು ಬಂದು ನೀರು ಕುಡಿಯುತ್ತಿವೆ. ಗಾಳಿ ಬೀಸಿದಾಗ ಅಲೆಗಳು ಕಮಲಗಳನ್ನು ಕಂಪನಗೊಳಿಸುತ್ತಿವೆ. ರಾಮನಿಗೆ ಸೀತೆಯಿಲ್ಲದೆ ಜೀವವೇ ಬೇಡವೆನಿಸುತ್ತಿದೆ. ಪ್ರೇಮವೆಂಬುದು ಎಷ್ಟು ವಾಮ. ಇಲ್ಲದ ಸೀತೆಯನ್ನು ನೆನಪಿಸಿ ನನ್ನನ್ನು ನೋಯಿಸುತ್ತಿದೆ. ಕಲ್ಯಾಣಿ ಅವಳು. ಅವಳ ಮಾತು ಮತ್ತೂ ಕಲ್ಯಾಣ. ಈ ಪ್ರೇಮ ಎಲ್ಲಿ ನೋಡಿದರೂ ಅವಳ ನೆನಪು ಮಾಡಿಕೊಡುತ್ತಿದೆ. ವಿರಹವನ್ನು ನಾನು ಹೇಗೋ ಧಾರಣೆ ಮಾಡುತ್ತಿದ್ದೆ. ಆದರೆ ಈ ವಸಂತ ನನ್ನನ್ನು ಪ್ರಹರಿಸಿ ನನ್ನಿಂದ ಸಾಧ್ಯವಿಲ್ಲ ಎಂಬುವಂತೆ ಮಾಡಿದ್ದಾನೆ. ಪದ್ಮದಳಗಳು ನನ್ನ ಸೀತೆಯ ಕಣ್ಣುಗಳ ರೆಪ್ಪೆಗಳು. ಗಾಳಿ ಬೀಸಿ ಬರುತ್ತಿದೆ. ಅದು ಪದ್ಮಪರಿಮಳ ಹೊಂದಿದೆ. ಅದು ಸೀತೆಯ ನಿಶ್ವಾಸದಂತೆ ಎಂದು ಭಾವಿಸಿದ. ಅಲ್ಲಿನ ನಾನಾಪ್ರಕಾರದ ಮರಗಳನ್ನು ರಾಮ ವರ್ಣಿಸಿದ. ಜೇನು ಪರಿಮಳದ ಸಸ್ಯಗಳು ಅವೆಲ್ಲವೂ. ಜಾಜಿ, ಕರವೀರ, ಇರುವಂತಿಗೆ, ಕಾಡುಮಲ್ಲಿಗೆ, ಮಾವು, ಮತ್ತಿ, ಕೇದಗೆ, ಮುತ್ತುಗ, ಶ್ರೀಗಂಧ ಇನ್ನೂ ಅನೇಕ ಮರಗಳಿದ್ದವು. ಅವುಗಳನ್ನು ಸುತ್ತಿದ ಬಳ್ಳಿಗಳು. ಗಾಳಿಯು ಮರದಿಂದ ಮರಕ್ಕೆ, ಬೆಟ್ಟದಿಂದ ಬೆಟ್ಟಕ್ಕೆ ಬೀಸುತ್ತಲೇ ಇದೆ. ಕೆಲವು ವೃಕ್ಷಗಳಲ್ಲಿ ತುಂಬಾ ಹೂಗಳು, ಇನ್ನು ಕೆಲವು ಮೊಗ್ಗುಗಳು. ಆದ್ದರಿಂದ ದುಂಬಿಗಳಿಗೆ ಎಲ್ಲಿ ಹೋಗಬೇಕೆಂಬುದು ತಿಳಿಯದಾಗಿದೆ. ನೆಲದಲ್ಲಿ ಪುಷ್ಪಗಳ ಹಾಸಿಗೆಯಾಗಿದೆ. ಮರಗಳಲ್ಲಿ ಹೂಬಿಡುವ ಸ್ಪರ್ಧೆ. ಕಾರಂಡವಗಳು ನೀರಿನಲ್ಲಿ ಮುಳುಗೇಳುವಾಗ ನನಗೆ ಸೀತೆಯ ನೆನಪು. ಈ ಪಂಪೆ ಗಂಗೆಯಂತೆ. ಅಂತಹ ಗುಣಗಳು ಈ ನೀರಿಗಿದೆ. ಒಂದು ವೇಳೆ ಸೀತೆ ಮರಳಿ ಪಂಪೆಯೊಂದಿಗೆ ಸಿಕ್ಕಿದರೆ ಆ ಸೊಬಗು ಅಯೋಧ್ಯೆಯೂ ಅಲ್ಲ. ಅಮರಾವತಿಯೂ ಅಲ್ಲ. ಸೀತೆಯೊಂದಿಗೆ ನಾನಿಲ್ಲಿ ವಿರಮಿಸುವಾಗ ಇನ್ಯಾವ ಚಿಂತೆಯೂ ಬಾರದು. ಹೀಗೆ ಪಂಪೆಯ ಸೌಂದರ್ಯದ ಅದ್ಭುತ ವರ್ಣನೆಯನ್ನು ಯಾವ ಕವಿಗೂ ಕಡಿಮೆಯಿಲ್ಲದಂತೆ ಮಾಡಿದ ರಾಮ. ಆದರೆ ಜೊತೆಗೆ ಸೀತೆಯಿಲ್ಲದಿರುವುದರಿಂದ ನೋವು. ನನ್ನೊಡನೆ ಮತ್ತೆ ಸೀತೆಯು ಈ ಪಂಪಾವನವನ್ನು ಸೇವಿಸುವುದಾದರೆ ಮಾತ್ರ ಬದುಕುವೆ. ಇಷ್ಟು ಹಿಡಿಸಿತು ಪಂಪೆ ರಾಮನಿಗೆ. ಜೊತೆಗೆ ಸೀತೆಯಿರಬೇಕು. ಪಂಪಾವನದ ಮಂಗಳ ಮಾರುತವನ್ನು ಸೇವಿಸುವವರು ಧನ್ಯರು. ಇದು ಕನ್ನಡದ ಮಣ್ಣಿಗೆ ರಾಮನ ಬಾಯಿಂದ ಬಂದ ಪ್ರಶಸ್ತಿಗಳು. ಆಗ ಸೀತೆಯ ಶೋಕ ಹೆಚ್ಚಾಯಿತು ರಾಮನಿಗೆ.

ಅವಳು ಹೇಗೆ ತಾನೇ ಬದುಕಿಯಾಳು ನಾನಿಲ್ಲದೇ? ಜನಕನಿಗೇನು ಹೇಳಲಿ. ತಂದೆಯು ನನ್ನನ್ನು ಕಾಡಿಗೆ ಕಳುಹಿದಾಗ ಅಯೋಧ್ಯೆಯ ಸುಖವನ್ನು ತ್ಯಜಿಸಿ ಮಂದವಾಗಿ ನನ್ನನ್ನು ಹಿಂಬಾಲಿಸಿದಳು. ಪ್ರೀತಿಯ ಮೌಲ್ಯವನ್ನು ತೋರಿಸಿದಳು. ಅವಳೆಲ್ಲಿ? ಅವಳಿಲ್ಲದೇ ದೀನನಾಗಿ ನಾನು ಬದುಕಿಯೇನೇ? ರಾಜ್ಯವಿಲ್ಲದೇ ದಾರಿದ್ರ್ಯವನ್ನು ಹೊಂದಿದ ನನ್ನನ್ನು ಹಿಂಬಾಲಿಸಿದಳಲ್ಲ, ಅವಳ ಸೊಗಸಾದ ಕಣ್ಣಿನ ರೆಪ್ಪೆಗಳು, ಮುಖದ ಸುಗಂಧ, ಒಂದೂ ಕಲೆಯಿಲ್ಲದ ಆ ಮುಖವನ್ನು ನೋಡದ ನನ್ನ ಮನಸ್ಸು ಸೀದುಹೋಗುತ್ತಿದೆ. ಅವಳ ಮಾತಿನಲ್ಲಿ ನಗುವಿಲ್ಲದಿಲ್ಲ. ವಿನೋದಶೀಲೆ. ಗುಣವತ್ತಾದ ಮಧುರವಾದ, ಹಿತವಾದ ಮಾತುಗಳು. ಅಂತಹ ಮಾತುಗಳನ್ನು ಇನ್ನೆಂದು ಕೇಳುತ್ತೇನೆ ನಾನು? ಕಾಡಿನಲ್ಲಿ ಎಷ್ಟು ದುಃಖವಿದ್ದರೂ ನನ್ನಲ್ಲೆಂದೂ ಹೇಳಲಿಲ್ಲ. ಸುಖವಾಗಿರುವಂತೆ ಇದ್ದಳು. ನನ್ನ ದುಃಖವನ್ನು ದೂರ ಮಾಡುತ್ತಿದ್ದಳು. ನನ್ನೊಂದಿಗೆ ಪ್ರೀತಿಯ ಮಾತನಾಡುತ್ತಿದ್ದಳು. ಆ ಸೀತೆಯೆಲ್ಲಿ? ದುಃಖವನ್ನು ಹೋಗಲಾಡಿಸಿ, ಹರ್ಷವನ್ನು ಕೊಡುವ ಮಾತುಗಳು. ಆಗ ಕೌಸಲ್ಯೆಯ ನೆನಪಾಯಿತು. ಅವಳಿಗೆ ಸೀತೆಯೆಂದರೆ ತುಂಬಾ ಪ್ರೀತಿ. ಅಯೋಧ್ಯೆಗೆ ಮರಳಿದರೆ ಅಮ್ಮ ಕೇಳುತ್ತಾಳೆ. ತನ್ನ ಪ್ರೀತಿಯ ಸೊಸೆಯೆಲ್ಲಿ ಎಂದು ಕೇಳಿದರೆ ಏನು ಹೇಳಲಿ. ಕೌಸಲ್ಯೆ ಮತ್ತು ಸೀತೆ ತಾಯಿ-ಮಗಳಂತೆ ಇದ್ದರು. ಹಾಗಾಗಿ ನಾನು ಅಯೋಧ್ಯೆಗೆ ಮರಳುವುದಿಲ್ಲ. ಅಮ್ಮನಿಗೆ ಮುಖ ತೋರಿಸಲಾರೆ. ನೀನು ಹೋಗು ಲಕ್ಷ್ಮಣ. ನನ್ನನ್ನು ಅತಿಶಯವಾಗಿ ಪ್ರೀತಿಸುವ ಭರತನಿದ್ದಾನೆ. ಹೋಗಿ ಅವನನ್ನು ಕಾಣು. ಅವನನ್ನು ನನ್ನ ಪರವಾಗಿ ತಬ್ಬಿ ಅಣ್ಣ ಅತ್ತಿಗೆ ಕಾಡಿನಲ್ಲಿ ಮುಗಿದು ಹೋದರು ಎಂದು ಹೇಳು. ಸೀತೆಯಿಲ್ಲದೇ ಬದುಕಿಲ್ಲ ಎಂಬುದು ಅವನ ಮಾತಿನ ಭಾವ. ರಾಮ-ಸೀತೆಯರ ಭಾವ ಪರಸ್ಪರ ಹೀಗಿತ್ತು. ಇಂತಹ ಪತಿಯೆಲ್ಲಿರಲು ಸಾಧ್ಯ? ಶಿವಧನುಸ್ಸು ಮುರಿದು ಪತ್ನಿಯ ಪಡೆದುಕೊಂಡ ಪತಿ, ಅವಳನ್ನು ಮರಳಿ ಪಡೆಯುವ ಸಲುವಾಗಿ ಕಪಿ-ಕರಡಿಗಳ ಸೈನ್ಯ ಕಟ್ಟಿ , ಸಮುದ್ರ ದಾಟಿ ಹೋಗಿ ಹೋರಾಡಿದ. ಒಂದು ಜೀವದ ಭಾವಕ್ಕಾಗಿ ಎಂತಹ ಹೋರಾಟ ಅದು. ಸೀತೆಯೂ ಹಾಗೆಯೇ. ಎಷ್ಟು ದೃಢವಾದ ಭಾವ ಪರಸ್ಪರರಲ್ಲಿ ಇತ್ತು ಅವರಿಗೆ ಎಂಬುದು ಇಲ್ಲಿ ಗೊತ್ತಾಗುತ್ತದೆ. ಹೀಗೆ ಅನಾಥನಂತೆ ವಿಲಪಿಸುತ್ತಿರುವ ರಾಮನನ್ನು ಲಕ್ಷ್ಮಣ ಸಂತೈಸಿದ.

ಆಗ ಲಕ್ಷ್ಮಣ ಇಂತೆಂದನು, ಅಣ್ಣ, ಧೃತಿಯನ್ನು ತಾಳು. ನಿನಗೆ ಮಂಗಳವಾಗಲಿ. ಅಳಬೇಡ. ನೀನು ಪುರುಷೋತ್ತಮ. ನಿನ್ನಂತಹ ನಿರ್ಮಲಾತ್ಮಕರ ಮತಿ ಮಂದವಾಗುವುದಿಲ್ಲ. ಈ ವಿಯೋಗದ ದುಃಖವನ್ನು ಕಂಡಮೇಲೆ ಪ್ರೀತಿಯೇ ತಪ್ಪೆಂದು ನನಗನ್ನಿಸುತ್ತಿದೆ. ಏಕೆಂದರೆ ಬತ್ತಿ ಒದ್ದೆಯಾಗಿದ್ದರೂ ಕೂಡ ಸ್ನೇಹದ ಕಾರಣದಿಂದ ಸುಡಲ್ಪಡುತ್ತದೆ. ಸ್ನೇಹವೆಂದರೆ ಎಣ್ಣೆ. ಮನುಷ್ಯನ ಮನಸ್ಸು ಕೂಡಾ ಹಾಗೆಯೇ. ಅತಿಯಾದ ಸ್ನೇಹದಿಂದ ಸುಡುತ್ತದೆ ಎಂದು ಲಕ್ಷ್ಮಣನಿಗೆ ವೈರಾಗ್ಯ ಭಾವ ಬಂದಿತು. ಬಳಿಕ ವೀರ ಭಾವ ಬಂತು. ಆ ರಾವಣನು ಪಾತಾಳಕ್ಕೆ ಹೋಗಿ ಬೀಳಲಿ. ಅವನನ್ನು ಇನ್ನಿಲ್ಲದಂತೆ ಮಾಡುತ್ತೇನೆ. ನನ್ನ ಕೋಪಕ್ಕೆ ತುತ್ತಾಗಿ ಅವನು ಬದುಕಲಾರ. ಆ ಪಾಪರಾಕ್ಷಸನ ಸುದ್ದಿಯೊಂದು ಸಿಕ್ಕಲಿ. ಅವನು ಸೀತೆಯನ್ನು ಬಿಟ್ಟು ಕೊಡಬೇಕು ಅಥವಾ ಸಾಯಬೇಕು. ಮತ್ತೆ ಬೇಕಾದರೆ ದಿತಿಯ ಗರ್ಭವನ್ನು ಸೇರಲಿ. ಆದರೂ ಬಿಡಲಾರೆ. ಕೊಂದುಹಾಕುತ್ತೇನೆ ಎಂದು ಅಬ್ಬರಿಸಿದ. ಸಮಾಧಾನಗೊಂಡು, ಮಂಗಳ ಭಾವವನ್ನು ತಾಳು, ದೈನ್ಯವನ್ನು ಬಿಡು ಅಣ್ಣ. ಹೀಗೆಯೇ ಇದ್ದರೆ ಸೀತೆ ಸಿಕ್ಕುವುದಿಲ್ಲ. ನಾವು ಹುಡುಕಬೇಕು. ಅಳುತ್ತಾ ಕುಳಿತರೆ ಕಳೆದು ಹೋದ ಅನರ್ಘ್ಯ ವಸ್ತುವು ಸಿಗಿವುದಿಲ್ಲ. ಅದಕ್ಕಾಗಿ ಹುಡುಕಬೇಕು. ಉತ್ಸಾಹಕ್ಕೆ ದೊಡ್ಡ ಶಕ್ತಿಯಿದೆ. ಅದರಿಂದ ಸೀತೆಯನ್ನು ಮರಳಿ ಪಡೆಯೋಣ. ಚಿಂತೆಯನ್ನು ಬಿಡು ಅಣ್ಣ. ಈ ಮಾತುಗಳು ಪ್ರಯೋಜನವಾಗಲಿಲ್ಲ. ಆಗ ಲಕ್ಷ್ಮಣನು ರಾಮನಿಗೆ ಯಾರು ನೀನು, ನಿನ್ನೊಳಗಿನ ಆತ್ಮ ಯಾವುದು, ಲೋಕಕ್ಕೆ ಹಿರಿದಾದ ಆತ್ಮ ನಿನ್ನೊಳಗಿದೆ. ಅದನ್ನು ಗುರುತಿಸದಾದೆಯಾ ಎಂದು ಕೇಳಿದಾಗ ಅದು ರಾಮನಿಗೆ ತಗುಲಿತು. ಆಗ ಅವನು ಶೋಕವನ್ನು ತ್ಯಜಿಸಿ, ಮೈಮರೆವನ್ನು ಬಿಟ್ಟು ಧೈರ್ಯಗೊಂಡನು. ಇದು ಲಕ್ಷ್ಮಣನ ಕಾರ್ಯ. ಅಚಿಂತ್ಯಪರಾಕ್ರಮನು ಏಕಾಗ್ರನಾಗಿ ಪಂಪೆಯಲ್ಲಿ ಸಂಚರಿಸಿದನು. ಅವನನ್ನು ಲಕ್ಷ್ಮಣನು ಧರ್ಮ, ಬಲದ ಮೂಲಕ ರಕ್ಷಿಸಿದನು. ಮುಂದೆ ರಾಮನು ಹೋಗುತ್ತಿದ್ದರೆ ಹಿಂದೆ ಮದಿಸಿದ ಆನೆಯಂತೆ ನಡೆಯುತ್ತಿದ್ದ ಲಕ್ಷ್ಮಣ. ಅಣ್ಣನೇ ಸರ್ವಸ್ವವಾಗಿ ಅವನನ್ನು ಹಿಂಬಾಲಿಸಿದ.

ಋಷ್ಯಮೂಕಪರ್ವತದ ಪರಿಸರದಲ್ಲಿ ಸಂಚರಿಸುತ್ತಿರುವ ಅವನು ಇವರನ್ನು ನೋಡಿದ. ಹೇಗನಿಸಿತು ಅವನಿಗೆ? ಅದ್ಭುತ ದರ್ಶನವದು. ಆ ಮುಖ, ನಿಲುವು, ನಡೆ, ಬಾಹುಗಳು, ಮಹಾಧನುಸ್ಸುಗಳು, ಆ ದೃಷ್ಟಿ, ಪ್ರಭೆಯನ್ನು ಕಂಡು ಅವನಿಗೆ ಅದ್ಭುತವೆನ್ನಿಸಿತು. ಇದು ಈ ಲೋಕದ್ದಲ್ಲವೆಂದು ಅವನಿಗೆ ತಿಳಿಯಿತು. ಯಾರವನು?! ಅವನು ಬಲಾಢ್ಯ. ಅವನಿಗೂ ಕೂಡಾ ಇವರಿಬ್ಬರನ್ನು ಕಂಡಾಗ ವಿಶೇಷವಾದ ಭಯವಾಯಿತು. ಅವನ ಕೈಕಾಲುಗಳು ಅಲುಗಾಡಲಿಲ್ಲ. ದೃಷ್ಟಿ ಸ್ಥಿರವಾಯಿತು. ಶಾಖಾಮೃಗಗಳ ನಾಯಕನು ಅವನು. ಅವನೂ ಮಹಾತ್ಮನೇ. ರಾಮಲಕ್ಷ್ಮಣರು ಭಯಪ್ರದರಲ್ಲ. ಆದರೂ ಇವನು ಅವರನ್ನು ಕಂಡು ಭಯಭಾರಮಗ್ನನಾದನು. ರಾಮಲಕ್ಷ್ಮಣರನ್ನು ಕಂಡು, ಅವರನ್ನು ಕಂಡು ಹೆದರಿದ ಇವನನ್ನು ಕಂಡು ಉಳಿದ ಕಪಿಗಳು ಭಯಗೊಂಡರು. ಅವರೆಲ್ಲಾ ಮತಂಗಾಶ್ರಮದ ಪರಿಸರಕ್ಕೆ ಧಾವಿಸಿದರು. ಅಲ್ಲಿ ಭಯವಿಲ್ಲ. ವಾಲಿ ಅಲ್ಲಿ ಬರುವಂತಿಲ್ಲ. ಬಂದರೆ ತಲೆ ಚೂರಾಗುವುದು. ಹಾಗಾಗಿ ಈ ಕಪಿಗಳು ಭಯವಾದಾಗ ಅಲ್ಲಿ ಬರುತ್ತಿದ್ದವು. ಅದು ರಕ್ಷಣೆ. ಒಂದು ಕಾಲದಲ್ಲಿ ಎಲ್ಲಾ ಕಪಿಗಳೂ ವಿಹರಿಸುತ್ತಿದ್ದ ಭೂಮಿ ಅದು. ಈಗ ಈ ಐವರು ಮಾತ್ರ. ಸೀತೆ ಯಾರೆಡೆಗೆ ತನ್ನ ಚಿನ್ನವನ್ನು ಎಸೆದಿದ್ದಳೋ ಆ ಐವರು ಮತಂಗಾಶ್ರಮವನ್ನು ಸೇರಿದರು. ಇಲ್ಲಿ ಯಾರೂ ಪ್ರವೇಶ ಮಾಡಲು ಸಾಧ್ಯವಿಲ್ಲ. ಹಾವು ಕಚ್ಚಿದಾಗ ಹೂವು ಕಂಡರೂ ಭಯವಾದಂತೆ. ತೆನಾಲಿರಾಮನ ಬೆಕ್ಕಿಗೆ ಹಾಲು ಕಂಡು ಭಯವಾದಂತೆ. ಹಾಗಿದೆ ಸುಗ್ರೀವನ ಪರಿಸ್ಥಿತಿ. ವಾಲಿಯ ಪೀಡೆ. ರಾಮಲಕ್ಷ್ಮಣರು ವಾಲಿಯಲ್ಲ. ಆದರೂ ಭಯ. ಸುಗ್ರೀವನ ಚುರುಕಾದ ಕಣ್ಣುಗಳು ಇವರು ಮಹಾಸಾಮರ್ಥ್ಯರೆಂಬುದನ್ನು ಗುರುತಿಸಿವೆ. ಹಾಗಾಗಿ ವಾಲಿಯ ಕಡೆಯವರಿರಬಹುದೆಂಬ ಭಯ. ಭಯದಿಂದ ಕುಳಿತ ಸುಗ್ರೀವ ಛಂಗನೆ ನೆಗೆದ. ಎಲ್ಲಿಗೆ ಎಂಬುದನ್ನು ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments