ಮತ್ತೆ ಆರಂಭವಾಯ್ತು ಭಾವಪೂಜೆ…

ವಿದ್ವಾನ್ ಜಗದೀಶ ಶರ್ಮಾ,
ಕಾರ್ಯದರ್ಶಿಗಳು – ಪ್ರಕಾಶನ ವಿಭಾಗ
ಶ್ರೀ ರಾಮಚಂದ್ರಾಪುರ ಮಠ

ಅದು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮ. ದಿನಾಂಕ:18/12/2014ರ ಗುರುವಾರ ರಾತ್ರಿ 8 ಗಂಟೆಯ ಸಮಯ. ಶ್ರೀರಾಮನ ಗರ್ಭಗುಡಿಯ ಸುತ್ತ ಅರ್ಧಪದ್ಮಾಸನದಲ್ಲಿ ಕಣ್ಮುಚ್ಚಿ ಜನ ಕುಳಿತಿದ್ದರು. ವಿದ್ಯುದ್ದೀಪಗಳ ಪ್ರಖರ ಪ್ರಕಾಶವಿರಲಿಲ್ಲ. ಎಣ್ಣೆದೀಪ ಎಲ್ಲೆಡೆ ಮಂದಪ್ರಕಾಶವನ್ನು ಬೀರುತ್ತಿತ್ತು.

ಜನಮಾನಸ ಶ್ರೀಸಂಸ್ಥಾನದವರ ಬರುವಿಕೆಗಾಗಿ ಕಾಯುತ್ತಿತ್ತು. ಅದು ಭಾವಪೂಜೆಯ ಮಂಗಲಸಂದರ್ಭ. ಮತ್ತೆ ಆರಂಭವಾದ ಭಾವಪೂಜೆಯಿದು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಮೆಲುನಡಿಗೆಯಲ್ಲಿ ಆಗಮಿಸಿ ದೀಪಬೆಳಗುತ್ತಿದ್ದಂತೆ ಕಲಾವಿದರ ಮಧುರ ಕಂಠದಲ್ಲಿ “ಹೊತ್ತಿಸೆದೆಯ ಭಾವದೀಪ, ಕಿತ್ತು ಎಸೆಯಲೆಲ್ಲ ಪಾಪ.. ” ಗೀತೆ ಸುಶ್ರಾವ್ಯವಾಗಿ ಮೂಡಿಬಂತು. ಶ್ರೀಪೀಠದಲ್ಲಿ ಆಸೀನರಾದ ಶ್ರೀಸಂಸ್ಥಾನ “ಮಾತಾರಾಮೋ ಮತ್ಪಿತಾ ರಾಮಚಂದ್ರಃ” ಪ್ರಾರ್ಥನೆಯನ್ನು ಗಾನಮಾಡಿದರು.

“ರಾಮ ನಮ್ಮ ಅವ್ವ, ರಾಮ ನಮ್ಮ ಅಯ್ಯ ” ಎಂದು ಮಾತಿಗಾರಂಭಿಸಿದ ಶ್ರೀಸಂಸ್ಥಾನ “ಶ್ರೀರಾಮನನ್ನು ಹೃದಯಕ್ಕೆ ಕರೆಯೋಣ ” ಎನ್ನುತ್ತಾ “ನೀರದ ನೀಲ, ನಾರದ ಲೋಲ, ದಶರಥ ಬಾಲ, ಬಾ ರಾಮ” ಎಂದು ಗಾಯನದೊಂದಿಗೆ ರಾಮನನ್ನು ಆಹ್ವಾನಿಸಿದರು. “ಬಂದ ರಾಮನಿಗೆ ಇದೀಗ ಪೂಜೆ ಸಲ್ಲಿಸೋಣ ” ಎನ್ನುತ್ತಾ, ಇದು ಉಪಕರಣವಿಲ್ಲದ ಪೂಜೆ, ಇದು ಅಂತಃಕರಣದ ಪೂಜೆಯೆಂದು ಭಾವದ ಮಹತ್ತ್ವವನ್ನು ವಿವರಿಸುತ್ತಿದ್ದಂತೆ ಹಿಂದಿಯ “ಭಾವ್ ಕೆ ಭೂಖಾ ಹ್ಞೂಂ.. ಮೈ..” ಗೀತೆಯ ಕನ್ನಡ ರೂಪಾಂತರವಾದ “ತೆರೆದು ಹೃದಯದ ಕದವ” ಗೀತೆ ಗಾಯಕರ ಕಂಠಸಿರಿಯಿಂದ ಹೊರಹೊಮ್ಮಿತು.

ಭಾವದಿಂದ ದೇವನನ್ನೊಲಿಸಿಕೊಂಡ ವಿಭೀಷಣ, ಗಜೇಂದ್ರ, ಶಬರಿ, ದ್ರೌಪದಿ, ಅಹಲ್ಯೆ, ಜಟಾಯು ಇವರುಗಳ ಬದುಕನ್ನು ಚಿತ್ರಿಸಿದ ಶ್ರೀಸಂಸ್ಥಾನ, ಭಾವಪೂಜೆಗೆ ಭಾವುಕರನ್ನು ಕರೆದೊಯ್ದರು. ಭಾವದಿಂದಲೇ ಭಗವಂತನನ್ನು ಪೂಜಿಸುವ ಕ್ರಮವನ್ನು ವಿವರಿಸುತ್ತಾ ಕವಿ ಅಂಬಿಕಾತನಯದತ್ತರ “ಚೈತನ್ಯದ ಪೂಜೆ ನಡೆದಾದ..” ಗೀತೆಯನ್ನು ತೆರೆದಿಟ್ಟರು. ಗೀತೆಗೆ ದನಿಯಾದರು ಕಲಾವಿದರು. ಅನಂತರ ಆರಂಭವಾಯಿತು ಮಾನಸ ಷೋಡಶೋಪಚಾರ ಪೂಜೆ. ಮನದಲ್ಲಿಯೇ ಭಾವಿಸಿ ಪೂಜಿಸುತ್ತಾ ಪೂಜಿಸುತ್ತಾ ಪ್ರೇಕ್ಷಕರನ್ನು ಧ್ಯಾನಕ್ಕೆ ಕರೆದೊಯ್ದರು.

ಕೆಲಕಾಲ ಅಂತರಂಗದಲ್ಲಿ ಮುಳುಗೇಳುತ್ತಿದ್ದ ಭಾವಜೀವಗಳನ್ನು ಶ್ರೀಸಂಸ್ಥಾನದವರು ಗಾಯನ ಮಾಡಿದ “ಭಕ್ತಿಯ ತೈಲದಲಿ, ಭಾವದ ಬತ್ತಿಯನು, ಹೃದಯದ ತಟ್ಟೆಯಲಿ, ಹೊತ್ತಿಸಿಡುವೆ ನಾನು” ಗೀತೆ ಎಚ್ಚರಿಸಿತು. ಬದುಕಿನೆಲ್ಲ ನೋವನ್ನು ಮರೆತು, ತನ್ನನ್ನು ತಾ ಮರೆತು, ಭಾವದಲ್ಲಿ ಮುಳುಗಿ ನೆಮ್ಮದಿಯನ್ನು ಅನುಭವಿಸಿ, ಸುರಿವ ಕಣ್ಣೀರಿನೊಂದಿಗೆ ಧನ್ಯತೆಯನ್ನು ಅನುಭವಿಸಿತು ಭಾವಜೀವಿಗಳ ವೃಂದ.

ಕಾರ್ಯಕ್ರಮದಲ್ಲಿ ಡಾ| ಗಜಾನನ ಶರ್ಮ ರಚಿಸಿದ ಕವಿತೆಗಳಿಗೆ ಶ್ರೀ ಚಂದ್ರಶೇಖರ ಕೆದಿಲಾಯ, ಸಾಕೇತ ಶರ್ಮ, ಕು. ದೀಪಿಕಾ, ಕು. ಪೃಥ್ವಿ ಗಾಯನ ಮಾಡಿದರು. ಪ್ರಜ್ಞಾನಲೀಲಾಶುಕ ಉಪಾಧ್ಯಾಯ ಹಾರ್ಮೋನಿಯಂನಲ್ಲಿ, ಗಣೇಶ್ ಕೆ. ಎಸ್. ಕೊಳಲಿನಲ್ಲಿ, ಗಣೇಶ್ ಭಾಗವತ್ ತಬಲದಲ್ಲಿ ಸಹಕರಿಸಿದರು.

ಕಾರ್ಯಕ್ರಮದ ಫೋಟೋಗಳು:

ವೀಡಿಯೋ:

Facebook Comments