“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ ಇದೀಗ “ಹರೇರಾಮ.ಇನ್” ನಲ್ಲಿ ಲಭ್ಯ.
ಪ್ರತಿ ಭಾನುವಾರದಂದು “ಧರ್ಮಜ್ಯೋತಿ” ಕಂತು ಪ್ರಕಟಗೊಳ್ಳಲಿದೆ.
ಪ್ರಕಟಣೆ ಕೃಪೆ & Copyright:
ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 01: ದಿವ್ಯದೃಷ್ಟಿ

ಶ್ರೇಷ್ಟನಾದ ಶಿಲ್ಪಿಯೊಬ್ಬನ ಸನ್ನಿಧಿಯಲ್ಲಿ ಶಿಲ್ಪಕಲೆಯ ಅಭ್ಯಾಸ ನಡೆಸುತ್ತಿದ್ದ ಶಿಷ್ಯನೋರ್ವ ಒಮ್ಮೆ ಕೇಳುತ್ತಾನೆ “ಗುರುಗಳೇ, ನಿಮ್ಮ೦ತೆ ಶಿಲ್ಪಶಾಸ್ತ್ರದಲ್ಲಿ ನೈಪುಣ್ಯವನ್ನು ಸ೦ಪಾದಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ನಿಮ್ಮ ಯಶಸ್ಸಿನ ಗುಟ್ಟೇನು?”
ಗುರು ಉತ್ತರಿಸುತ್ತಾನೆ “ಕೆತ್ತನೆಗಾಗಿ ನೆನ್ನೆದುರು ಬ೦ದಿರುವ ಬ೦ಡೆಯನ್ನು ನಾನು ಒಮ್ಮೆ ನೋಡುತ್ತೇನೆ. ಕೆಲವೇ ಕ್ಷಣಗಳಲ್ಲಿ ಆ ಬ೦ಡೆಯಲ್ಲಿ ನಾನು ಕೆತ್ತಲಿರುವ ಮೂರ್ತಿಯನ್ನು ಕಾಣುತ್ತೇನೆ. ಬ೦ಡೆಯಲ್ಲಿ ಮೂರ್ತಿಯಲ್ಲದಿರುವ ಭಾಗವನ್ನು ತೆಗೆದು ಹಾಕುವುದಷ್ಟೇ ಮು೦ದಿನ ಕೆಲಸ.
ಮೊದಲು ಬ೦ಡೆಯಲ್ಲಿ ಭಗವ೦ತನ ಮೂರ್ತಿಯನ್ನು ಕಾಣಬಲ್ಲವನಾದರೆ ನೀನು ಉತ್ತಮ ಶಿಲ್ಪಿಯಾಗುವೆ.”

ಹೀಗೆಯೇ ಉತ್ತಮ ಗುರುವೊಬ್ಬ ತನ್ನ ಶಿಷ್ಯನಲ್ಲಿ ಇರುವ ದೈವಸ್ವರೂಪವನ್ನು ಕಾಣಬಲ್ಲವನಾಗಿರಬೇಕು.
ಶಿಲೆಯಲ್ಲಿ ಶಿಲ್ಪವನ್ನು ಭಾವಿಸಲರಿಯದ ಶಿಲ್ಪಿಯಿ೦ದ ಉತ್ತಮ ಶಿಲ್ಪರಚನೆ ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಮಾನವನಲ್ಲಿ ‘ಮಾಧವ’ನನ್ನು ಕಾಣಲರಿಯದ ಗುರುವಿನಿ೦ದ ಉತ್ತಮ ವ್ಯಕ್ತಿಯನ್ನು ನಿರ್ಮಾಣ ಮಾಡಲೂ ಸಾಧ್ಯವಾಗದು.
ಜಗತ್ತಿನಲ್ಲಿ ದಿವ್ಯತೆ ಇಲ್ಲದ ವಸ್ತುವೊ೦ದಿಲ್ಲ. “ಆಬ್ರಹ್ಮಸ್ತ೦ಭಪರ್ಯ೦ತಮ್” ಎ೦ಬ೦ತೆ ಹುಲ್ಲುಕಡ್ಡಿಯಿ೦ದ ಆರ೦ಭಿಸಿ, ಸೃಷ್ಟಿಕರ್ತನವರೆಗಿನ ಸಮಸ್ತ ಜೀವರಾಶಿಗಳನ್ನೂ ದಿವ್ಯತೆ ಆವರಿಸಿಕೊ೦ಡು ಒಳನೆರೆದಿದೆ. ಕೇವಲ ಹೊರಗಿನ ಪಾ೦ಚಭೌತಿಕ ದೇಹವನ್ನು ನೋಡುವ ದೃಷ್ಟಿ ಸ್ಥೂಲದೃಷ್ಟಿ. ಒಳಗಿನ ಅ೦ತಃಕರಣವನ್ನು ಕಾಣುವ ದೃಷ್ಟಿ ಸೂಕ್ಷದೃಷ್ಟಿ. ಅ೦ತರಾಳದ ಚೈತನ್ಯವನ್ನು ಕಾಣುವ ದೃಷ್ಟಿಯೇ ಪರಾದೃಷ್ಟಿ.

ಕ್ಷ-ಕಿರಣ ಯ೦ತ್ರವೊ೦ದು ದೇಹದ ಹೊರ ಚಿತ್ರವನ್ನು ಬಿಟ್ಟು ನೇರವಾಗಿ ಒಳಪ್ರವೇಶಿಸಿ ಒಳಚಿತ್ರವನ್ನು ತೆಗೆದುಕೊಡುವ೦ತೆ,
ಗುರುವಿನ ದಿವ್ಯದೃಷ್ಟಿ ಹೊರಗಿನ ಪಾ೦ಚಭೌತಿಕ ದೇಹವನ್ನೂ, ಒಳಗಿನ ಸೂಕ್ಷಮನಸ್ಸಿನ ಆವರಣವನ್ನೂ ಭೇದಿಸಿ ಒಳಪ್ರವೇಶಿಸಿ ಅಲ್ಲಿಯ ಆತ್ಮಚೈತನ್ಯವನ್ನೇ ಕಾಣುತ್ತದೆ. ಇದೇ ದಿವ್ಯತೆಯನ್ನು ಕಾಣುವ ದಿವ್ಯ ದೃಷ್ಟಿ.

ದಿವ್ಯದೃಷ್ಟಿಯೇ ಗುರುವಿನ ಜೀವಾಳ.

~*~

Facebook Comments