“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 07: ಭಾರತನಾಗು !

ನಮ್ಮ ರಾಷ್ಟ್ರಕ್ಕೆ ‘ಭಾರತ’ ಎಂದು ಹೆಸರು. ನಮ್ಮ ಹಿರಿಯರು ರಾಷ್ಟ್ರಕ್ಕೆ ಈ ಹೆಸರನ್ನಿಡುವಾಗ ತುಂಬಾ ಚಿಂತಿಸಿ ಈ ಹೆಸರನ್ನಿಟ್ಟರು.
ಭಾ’ ಎಂದರೆ ಪ್ರಕಾಶ ಎಂದರ್ಥ. ‘ರತ’ ಎಂದರೆ ಅದರಲ್ಲಿ ರತಿಯನ್ನು ಹೊಂದಿದವನು, ಆಸಕ್ತಿಯನ್ನು ಹೊಂದಿದವನು, ನಿರತನಾದವನು ಎಂದರ್ಥ.
ಒಟ್ಟಾರೆ ‘ಭಾರತ’ ಎನ್ನುವ ಶಬ್ಧಕ್ಕೆ ಪ್ರಕಾಶದಲ್ಲಿ, ಜ್ಞಾನದಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದವನು, ಅದರಲ್ಲಿ ಆನಂದವನ್ನು ಕಾಣುವವನು ಎಂದರ್ಥ. ಭಾರತ ಎನ್ನುವುದು ಮೂಲತಃ ರಾಷ್ಟ್ರವಾಚಕವಲ್ಲ, ವ್ಯಕ್ತಿವಾಚಕ. ಅಂತಹ ಭಾರತರು ಇರುವ ನಾಡು ಇದಾದ್ದರಿಂದ ಇದನ್ನು ‘ಭಾರತ’ ಎಂದು ಕರೆದರು.

‘ಭಾ’ ಎಂದರೆ ಪ್ರಕಾಶ ಅಥವಾ ಜ್ಞಾನ.
ಆ ಜ್ಞಾನದ ಕಡೆಗೆ ಆಸಕ್ತಿ ಬೇಕು. ನಮ್ಮನ್ನು ಹೊತ್ತಿರುವ ಭೂಮಿ ಪ್ರಕಾಶಮಯವಾದ ಸೂರ್ಯನ ಸುತ್ತ ಸುತ್ತುತ್ತದೆ. ಮರಗಿಡಗಳು ಬೆಳಕನ್ನರಸಿ ಬೆಳೆಯುತ್ತವೆ. ನೆರಳಲ್ಲಿ ನೆಟ್ಟ ಗಿಡ ಸಹ ಬೆಳಕಿನೆಡೆಗೆ ಅಭಿಮುಖವಾಗಿ ತನ್ನ ಕೊಂಬೆಯನ್ನು ಚಾಚುತ್ತದೆ. ರಾತ್ರಿ ಹೊತ್ತಿನಲ್ಲಿ ಕ್ರಿಮಿಕೀಟಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೀಪದ ಕಡೆಗೆ ಧಾವಿಸಿ ಅದರೊಡನೆ ಐಕ್ಯವಾಗಲು ಬಯಸುತ್ತವೆ.
ಮನುಷ್ಯನೂ ಹಾಗೆಯೇ ಇರಬೇಕು. ಮನುಷ್ಯ ಎಂಬ ಶಬ್ಧದ ಅರ್ಥವೇ ಅದು.
ಮನ ಎಂದರೆ ‘ಜ್ಞಾನ’ ಎಂದರ್ಥ. ಮನುಷ್ಯ ಎಂದರೆ ಜ್ಞಾನವನ್ನು ಪಡೆಯುವಂತಹ ಯೋಗ್ಯತೆ ಹೊಂದಿದವನು. ಜಗತ್ತಿನಲ್ಲಿ ಎಷ್ಟೋ ಕ್ರಿಮಿಕೀಟಗಳಿವೆ, ಜೀವ ಜಂತುಗಳಿವೆ. ಅವಕ್ಕೆಲ್ಲ ಜ್ಞಾನವನ್ನು ಪಡೆಯುವಂಥ ಅವಕಾಶವಿಲ್ಲ. ಆದರೆ ಈ ಮನುಷ್ಯ ಜನ್ಮಕ್ಕೆ ವಿಶಿಷ್ಟವಾದ ಜ್ಞಾನವನ್ನು ಪಡೆಯಲಿಕ್ಕೆ ಅವಕಾಶ ಇದೆ.

ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ |
ಜ್ಞಾನಂ ನರಾಣಾಮಧಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಭಿಃ ಸಮಾನಾಃ ||

ನಮಗೂ ಪ್ರಾಣಿಗಳಿಗೂ ಅನೇಕ ರೀತಿಯಲ್ಲಿ ಸಮಾನತೆ ಇದೆ.
ಹಸಿವಾದಾಗ ಆಹಾರ ತಿನ್ನುವುದು ನಮಗೂ ಪ್ರಾಣಿಗಳಿಗೂ ಸಮಾನ. ಆಯಾಸವಾದಾಗ ನಿದ್ರಿಸುವುದು, ಆಪತ್ತು ಬಂದಾಗ ಭಯಪಟ್ಟು ರಕ್ಷಣೆಗಾಗಿ ಪ್ರಯತ್ನಿಸುವುದು, ಸಂತತಿಗೋಸ್ಕರ ದಾಂಪತ್ಯ ಜೀವನ ನಡೆಸುವುದು, ಈ ಯಾವ ವಿಷಯದಲ್ಲೂ ನಮಗೂ ಪ್ರಾಣಿಗಳಿಗೂ ಬೇಧವಿಲ್ಲ. ಆದರೆ ಜೀವನವನ್ನು ಬೆಳಗುವಂತ ಜ್ಞಾನ ಪಡೆವ ಶಕ್ತಿ ಪ್ರಾಣಿಗಳಿಗೆ ಇಲ್ಲವಾದ್ದರಿಂದ ಆ ವಿಷಯದಲ್ಲಿ ಮನುಷ್ಯನಿಗೆ ವೈಶಿಷ್ಟ್ಯವಿದೆ. ಮನುಷ್ಯ ಆ ಜ್ಞಾನ ಪಡೆಯುವುದಕ್ಕಾಗಿ ಹೋರಾಡಬೇಕು.
ಹಗಲು ಸೂರ್ಯ ಜಗತ್ತನು ಬೆಳಗುತ್ತಾನೆ. ರಾತ್ರಿ ಚಂದ್ರ ಜಗತ್ತನ್ನು ಬೆಳಗುತ್ತಾನೆ. ಯಾವ ಬೆಳಕೂ ಬಾರದ ಗುಹೆಯೊಳಗೆ ದೀಪದ ಬೆಳಕು ದಾರಿ ತೋರಿಸುತ್ತದೆ. ಆದರೆ ಈ ಯಾವ ಪ್ರಕಾಶಗಳೂ ಸಹ ಮನುಷ್ಯನ ಹೃದಯ ಗುಹೆಯನ್ನು ಬೆಳಗಲಾರವು. ಮನುಷ್ಯನ ಹೃದಯ ಗುಹೆಯಲ್ಲಿ ಬೆಳಗುವ ಬೆಳಕು ಜ್ಞಾನ ಮಾತ್ರ. ಮನುಷ್ಯನ ಪರಿಪೂರ್ಣತೆ ಇರುವುದು ಜ್ಞಾನದಲ್ಲಿ. ಜ್ಞಾನ ಬಂದ ಹೊರತೂ ಮನುಷ್ಯ ಪರಿಪೂರ್ಣನಲ್ಲ. “ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ” ಗೀತೆಯ ವಾಣಿ ಇದು. ಜ್ಞಾನಕ್ಕೆ ಸದೃಶವಾದ ಪವಿತ್ರ ವಸ್ತು ಇನ್ನೊಂದಿಲ್ಲ.

ನಮ್ಮ ಸ್ವರೂಪವನ್ನು ಹೊರತು ಪಡಿಸಿ ಬೇರೆ ವಸ್ತುಗಳ ಜ್ಞಾನ ನಮಗಿದೆ. ನಮಗೆ ಲೌಕಿಕ ಪದಾರ್ಥಗಳ, ಪ್ರಾಪಂಚಿಕ ವಸ್ತುಗಳ ಜ್ಞಾನವಿದೆ. ಈ ಜ್ಞಾನ ಪೂರ್ಣಜ್ಞಾನವಲ್ಲ. ಪೂರ್ಣಜ್ಞಾನ ನಮ್ಮ ಸ್ವರೂಪದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಜೊತೆಗೆ ದೀಪದಂತೆ ತನ್ನನ್ನು ತಾನೂ ಬೆಳಗಿಸಿಕೊಳ್ಳುತ್ತದೆ. ಜ್ಞಾನವನ್ನು ಬೆಳಗುವುದಕ್ಕೆ ಪುನಃ ಮತ್ತೊಂದು ಜ್ಞಾನ ಬೇಡ. ಹೊರಮುಖವಾದ ನಮ್ಮ ಇಂದ್ರಿಯ ಮನಸ್ಸುಗಳು ಒಳಮುಖವಾದಾಗ ನಮ್ಮ ಸ್ವರೂಪದ ದರ್ಶನ ನಮಗಾಗುವುದು. ಆಗ ನಾವು ಭಾರತರಾಗುತ್ತೇವೆ.

ಭಾರತೀಯರು ಭಾರತರಾದರೆ ಇಡೀ ವಿಶ್ವವೇ ಭಾರತವಾದೀತು.

~*~

Facebook Comments