#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
03-08-2018:

ಶ್ರೀಕೃಷ್ಣ ಭಾಗ್ಯವಿರುವ ಜೀವಿಗಳನ್ನು ತನ್ನೆಡೆಗೆ ಸೆಳೆದು, ತನ್ನೊಳಗೆ ಎಳೆದುಕೊಳ್ಳುವ.

ಶ್ರೀಸಂಸ್ಥಾನದವರ ಅಮೃತವಾಣಿಯಲ್ಲಿ ಹರಿದು ಬರುತ್ತಿರುವ ತತ್ತ್ವಭಾಗವತಮ್ ಮಾಲಿಕೆ…

ಆಲಯಂ ಅಂದರೆ ಲಯದವರೆಗೆ..
ಶರೀರ ಲಯದವರೆಗೆ ಎಂದರೆ ಮರಣದವರೆಗೆ..
ಮನಸ್ಸು ಲಯವಾಗುವವರೆಗೆ ಎಂದರೆ ಸಮಾಧಿಯವರೆಗೆ..
ಜೀವ ದೇವನಲ್ಲಿ ಲಯವಾಗುವವರೆಗೆ ಎಂದರೆ ಮುಕ್ತಿಯವರೆಗೆ..

ಪಿಬತ ಭಾಗವತಂ ರಸಮಾಲಯಂ::ಲಯದವರೆಗೆ ಭಾಗವತವನ್ನ ಪಾನ ಮಾಡಿ.

ಪರೀಕ್ಷಿತ ರಾಜನ ಅವಸಾನ ಹಾಗೂ ಭಾಗವತದ ಅವತರಣವೆರಡೂ ಒಂದೇ ಪ್ರಕರಣ.

ಪರೀಕ್ಷಿತ ಅರ್ಜುನನ ಮೊಮ್ಮಗ, ಶ್ರೀಕೃಷ್ಣನ ಮೊಮ್ಮಗನೂ ಹೌದು. ಕುರುಕುಲಕ್ಕೆ ಉಳಿದ ಏಕೈಕ ಕುಡಿ. ಕುರುಕ್ಷೇತ್ರ ಯುದ್ಧದ ಬಳಿಕ ಉಳಿದ ಅಭಿಮನ್ಯುವಿನ ಏಕೈಕ ಕುಡಿ.

ಯಾವುದೇ ಯುದ್ಧವು ಒಳ್ಳೆಯದನ್ನು ಮಾಡುವುದಿಲ್ಲ. ಯುದ್ಧದ ಕೊನೆಯಲ್ಲಿ ಉಳಿಯುವುದು ಸುಟ್ಟ ಬೂದಿ, ಹಿಡಿ ಮಣ್ಣು ಮಾತ್ರ.
ಕುರುವಂಶವೇ ಪರೀಕ್ಷೀಣವಾಗುವಾಗ ಹುಟ್ಟಿ ಬಂದವನಾದ್ದರಿಂದ ಅವನಿಗೆ ಪರೀಕ್ಷಿತನೆಂಬ ಹೆಸರು.
ಬ್ರಹ್ಮಶಿರೋಸ್ತವು ಗರ್ಭಸ್ಥ ಶಿಶುವಿನ ಮೇಲೆ ಪ್ರಯೋಗವಾದಾಗ, ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟ ಪರೀಕ್ಷಿತ ಮುಂದೆ ಮಹಾನ್ ಧರ್ಮಿಷ್ಠ ಚಕ್ರವರ್ತಿಯಾಗುತ್ತಾನೆ.

ಕಲಿಯುಗದಲ್ಲಿ ಪ್ರಾಬಲ್ಯ ಹೊಂದಿರುವ ಕಲಿಯನ್ನು ಮೆಟ್ಟಿದವನು, ಕಟ್ಟಿದವನು ಪರೀಕ್ಷಿತ.

ಜೀವನದಲ್ಲಿ ಮುಂದೆ ಮುಂದೆ ಹೋದಂತೆ ಮನುಷ್ಯ ಒಂಟಿಯಾಗುತ್ತಾನೆ.

ಬೇಟೆಗೆ ತೆರಳಿದ ರಾಜಾ ಪರೀಕ್ಷಿತನು ಮೃಗವನ್ನು ಹಿಂಬಾಲಿಸಿ ಹೋಗುತ್ತಿರಲು, ಒಂಟಿಯಾಗಿ ಹಸಿವು ಬಾಯಾರಿಕೆಗಳಿಂದ ಬಳಲಿದನು.

ಮೌನವ್ರತ ನಿರತರಾದ ಶಮೀಕ ಮುನಿಗಳ ಆಶ್ರಮವನ್ನು ಪ್ರವೇಶಿಸಿದ ಪರೀಕ್ಷಿತನು, ಮುನಿಗಳನ್ನು ಬಗೆಬಗೆಯಾಗಿ ಮಾತನಾಡಿಸಲು ಪ್ರಯತ್ನಪಟ್ಟರೂ ಮುನಿಗಳು ಪ್ರತಿಕ್ರಿಯಸಲಿಲ್ಲ.
ಪ್ರತಿಕ್ರಿಯಸದ ಮುನಿಯನ್ನು ಕಂಡು ಕ್ರುಧ್ಧನಾದ ಪರೀಕ್ಷಿತನು, ವಿವೇಕ ಹೀನನಾಗಿ ಹಾವಿನ ಶವವನ್ನು ಧನಸ್ಸಿನ ಮೂಲಕ ಮುನಿಯ ಕೊರಳಿಗೆ ಹಾಕಿ ಹೊರಟು ಹೋದ.

ಶಮೀಕ ಮುನಿಯ ಮಗ ಶೃಂಗಿಗೆ ಆಟವಾಡುವಾಗ ತನ್ನ ತಂದೆಗೆ ಅವಮಾನ ಮಾಡಿದ ವಿಷಯ ತಿಳಿದು, 7 ದಿನಗಳಲ್ಲಿ ಸರ್ಪರಾಜ ತಕ್ಷಕನು ಕಚ್ಚಿ ರಾಜ ಸಾಯಲಿ ಎಂದು ಶಪಿಸಿದ.

ಮಗನು ಕೊಟ್ಟ ಶಾಪದ ವಿಷಯವನ್ನು ತಿಳಿದು ನೊಂದ ಶಮೀಕರು, ಮಗನಿಗೆ ತಿಳಿ ಹೇಳಿ, ಪರೀಕ್ಷಿತನನ್ನು ಹರಸಿದರು.

ಅವಿವೇಕವು ಚ್ಯುತಿಗೆ ಕಾರಣವಾಗುತ್ತದೆ.
ದೂತನ ಮೂಲಕ ಶಮೀಕ ಮುನಿಗಳು ಶಾಪವೃತ್ತಾಂತವನ್ನು ರಾಜನಿಗೆ ತಿಳಿಸಿದರು.

ಅವಿವೇಕದ ನಡೆಗೆ ಪಶ್ಚಾತಾಪದಿಂದ ನೊಂದ ಪರೀಕ್ಷಿತ ಮುಕ್ತಿಯ ನಿಶ್ಚಯ ಮಾಡಿ ಮಗನಾದ ಜನಮೇಜಯನಿಗೆ ಪಟ್ಟ ಕಟ್ಟಿ, ಗಂಗಾನದಿಯ ತಟದಲ್ಲಿ ಮರಣ ಪರ್ಯಂತ ಅನಶನ ವೃತ ನಿರತನಾಗುತ್ತಾನೆ.
ರಾಜನ ಮುಕ್ತಿಯ ಕ್ಷಣದ ನಿರೀಕ್ಷೆಯಲ್ಲಿ ಇತರ ಮುನಿಗಳು ಸುತ್ತುವರಿದು ಕಾಯುತ್ತಿರಲು.. ಮಹಾಪುರುಷ ಲಕ್ಷಣ ಪೂರ್ಣವಾದ, ಸುಕೋಮಲ ಸ್ವರೂಪದ, ಬಾಲ ಯೋಗಿ ಶುಕುಮುನಿಗಳ ಪ್ರವೇಶವಾಯಿತು.
ಪರೀಕ್ಷಿತ ರಾಜನು ತನ್ನ ಆಯಸ್ಸಿನ ಉಳಿದ 7 ದಿನವನ್ನು ಸಾರ್ಥಕ್ಯಗೊಳಿಸುವ ಬಗೆ ಹೇಗೆಂದು ಶುಕಮುನಿಗಳಲ್ಲಿ ನಿವೇದನೆ ಮಾಡಿಕೊಂಡನು.

ಸಕಲವನ್ನು ಮರೆತು, ಆತ್ಮಸಮರ್ಪಣೆ ಗೈದ ಪರೀಕ್ಷಿತನಿಗೆ, ಶುಕಮುನಿಗಳು ಭಾಗವತಾಮೃತವನ್ನು ಉಣಬಡಿಸಿದರು.
ಲೋಕಮುಖಕ್ಕೆ ಭಾಗವತವನ್ನು ಪರಿಚಯಿಸಿದರು.

ಕೋಟ್ಯಂತರ ಕ್ಷಣದ ಜೀವನ.. ಕೊನೆಯ ಕ್ಷಣದ ಸಿದ್ಧತೆ. ಕೊನೆಯಲ್ಲಿ ಭಗವದ್ಭಾವ ಬರಬೇಕೆಂದರೆ ಕೊನೆಯವರೆಗೂ ಭಗವಧ್ಭಾದಲ್ಲಿ ಇರಬೇಕಾಗುತ್ತದೆ.

ಭಾಗವತವನ್ನು ಕೇಳಿದ ಪರೀಕ್ಷಿತನು, ಜೀವೋದ್ಧಾರವೆಂಬ ಸಹಜ ಕಾರ್ಯನಿರತರಾದ ಶುಕಕಾರುಣ್ಯಕ್ಕೆ ನಮಿಸಿ, ಮೃತ್ಯು ಭಯವನ್ನು ಮೀರಿದವನಾಗಿ ಬ್ರಹ್ಮಭಾವದಲ್ಲಿ ಮುಳುಗಿದ.

ರಾಜನನ್ನು ಮಂತ್ರವಿದ್ಯೆಯಿಂದ ರಕ್ಷಿಸಲು ಬಂದ ಕಶ್ಯಪ ಮುನಿಯು ಮಾರ್ಗದಲ್ಲಿ ತಕ್ಷಕನನ್ನ ಭೇಟಿಯಾಗಲು.. ಪರೀಕ್ಷಿತನ ಆಯಸ್ಸು ಕೊನೆಯಾಗುತ್ತಿರುವುದನ್ನ ಮನಕಂಡು, ತಕ್ಷಕನು ನೀಡಿದ ದಕ್ಷಿಣೆಯನ್ನು ಪಡೆದು ಹಿಂದಿರುಗಿದರು.

ಪರಿಪೂರ್ಣ ಸಮಾಧಿ ಸ್ಥಿತಿಯಲ್ಲಿದ್ದ ಪರೀಕ್ಷಿತನ ದೇಹವನ್ನು ತಕ್ಷಕ ಕಚ್ಚಿದ. ಬ್ರಹ್ಮಭಾವದಲ್ಲಿದ್ದ ಪರೀಕ್ಷಿತನ ದೇಹವು ವಿಷಾಗ್ನಿ ಇಂದ ಉರಿದು ಹೋಗಿ ಭಸ್ಮವಾಯಿತು. ಆದರೆ ಆ ಅಗ್ನಿ ಪರೀಕ್ಷಿತನನ್ನು ತಟ್ಟಲಿಲ್ಲ.ಅವನು ಆ ಸ್ಥಿತಿಯನ್ನು ಮೀರಿದ್ದನು.

ಪರೀಕ್ಷಿತ ತನ್ನ ಅವಸಾನದಲ್ಲಿ ಕೊಟ್ಟ ರತ್ನವೇ ಭಾಗವತ. ಪರೀಕ್ಷಿತನೆಂಬ ಕಲಿನಿಗ್ರಹಿ, ಧರ್ಮಪುರುಷ ಭಾಗವತದಲ್ಲಿದ್ದಾನೆ.

ಆಲಯದವರೆಗೆ ಭಾಗವತವನ್ನ ಕೇಳಿ..
ಮನಸ್ಸು,ಆತ್ಮ ಲಯವಾಗುವವರೆಗೆ ಭಾಗವತವನ್ನು ಕೇಳಿ..
ಜೀವದಕೊನೆಯವರೆಗೂ ಭಾಗವತವನ್ನು ಅನುಸರಿಸಿ..
ಮುಕ್ತಿಯವರೆಗೂ ಭಾಗವತವನ್ನು ಅನುಷ್ಠಾನ ಮಾಡಿ!

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments