#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
13-08-2018:

ಇಂದಿನ ವಿಷಯ ಕಲಿನಿಗ್ರಹ.

ಕೃಷ್ಣನ ಕರುಣೆಯಿಂದ ಕಲಿಯನ್ನು ಮೆಟ್ಟಿ ಮೆರೆದ ಮಹಾಮಹಿಮನ ಕಥೆ ಇಂದು, ಅದು ಪರೀಕ್ಷಿತ ರಾಜನದ್ದು, ಅವನು ಧರ್ಮಜನ ನಂತರ 60 ವರ್ಷ ರಾಜ್ಯಭಾರ ಮಾಡಿದ.
ತನ್ನ ರಾಜ್ಯದೊಳಗೆ ಕಲಿಯ ಪ್ರವೇಶ ಆಗಿದೆ ಎನ್ನುವ ಅಪ್ರಿಯ ವಾರ್ತೆ ಕೇಳಿದ, ಅವನನ್ನು ನಿಗ್ರಹಿಸುವುದು ಹೇಗೆ? ಚಿಂತಿಸಿದ. ಯುದ್ಧಪ್ರೇಮಿ ಕ್ಷತ್ರಿಯರ ಸಮಸ್ಯೆಗಳಿಗೆ ಧನುಸ್ಸೇ ಪರಿಹಾರ.

ಶ್ರೀಶ್ರೀ ಅಮೃತವಾಣೀ…

ರಘು ಚಕ್ರವರ್ತಿ ಒಮ್ಮೆ ವಿಶ್ವಜಿದ್ಯಾಗ ಮಾಡಿ ತನ್ನಲ್ಲಿದ್ದ ಎಲ್ಲವನ್ನೂ ಸದ್ಬ್ರಾಹ್ಮಣರಿಗೆ ದಾನಮಾಡಿದ, ಆ ಯಾಗದ ಕ್ರಮವೇ ಹಾಗೆ. ಕಡೆಯಲ್ಲಿ ಈ ವಿಷಯ ತಿಳಿದ ಕೌತ್ಸನೆಂಬ ಬ್ರಾಹ್ಮಣ ಅವನ ಬಳಿಗೆ 8000 ನಾಣ್ಯಗಳನ್ನು ಬೇಡಲು ಬಂದ, ಬಂದ ಅವನಿಗೆ ಚಕ್ರವರ್ತಿಯ ಬಳಿಯಲ್ಲೇ ಏನೂ ಇಲ್ಲದೇ ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯ ಕೊಡುತ್ತಿದ್ದುದನ್ನು ಕಂಡು ಹಿಂದಿರುಗಲು ಹೊರಟಾಗ ರಘುಮಹಾರಾಜ ಅವನಲ್ಲಿ ಒಂದು ರಾತ್ರಿಯ ಅವಕಾಶ ಕೇಳಿದ, ರಾತ್ರಿಯಿಡೀ ಅದೇ ಚಿಂತೆ. ಕಡೆಗೆ ಉತ್ತರಕ್ಕೆ ಹೋಗಿ ಕುಬೇರನಲ್ಲಿ ಯುದ್ಧ ಮಾಡಿ ಧನ ತರುವುದು ಎಂದು ನಿಶ್ಚಯಿಸಿದ. ಅದೇ ರಾತ್ರಿ ಕನಸಾಗಿ, ಅದರಂತೆ ಅವನ ಕೋಶ ಧನದಿಂದ ತುಂಬಿತು. ಬೆಳಿಗ್ಗೆ ಕೌತ್ಸನ ಬೇಡಿಕೆಯಂತೆ ದಾನ ನೀಡಿದ.
ಬೇಡಿ ಬಂದವರಿಗೆ ಇಲ್ಲ ಎನ್ನಬಾರದು. ಅದು ಸತ್ಪುರುಷರ ಲಕ್ಷಣವಲ್ಲ.
ಧನುಸ್ಸಿನ ಮೂಲಕ ಅಸಾಧ್ಯವನ್ನು ಸಾಧ್ಯವಾಗಿ ಮಾಡುವವರು ನಿಜವಾದ ಕ್ಷತ್ರಿಯರು.

ಕಲಿಯ ನಿಗ್ರಹ ಸುಲಭವಲ್ಲ, ಏಕೆಂದರೆ ಅವನು ಯುಗಪುರುಷ, ದುರ್ಯೋಧನನೂ ಕಲಿಯ ಅವತಾರವೇ, ಆದರೆ ದ್ವಾಪರದಲ್ಲಿ, ಆಗಲೂ ಅವನನ್ನು ಎದುರಿಸುವುದು ಕಷ್ಟವಾಯಿತು. ಇನ್ನು ಕಲಿಯುಗದಲ್ಲಿನ ಕಲಿಯ ನಿಗ್ರಹ ಹೇಗೆ ಸುಲಭ?
ಸಮುದ್ರವೇ ಪ್ರವಾಹವಾದರೆ ಹೇಗಿರಬಹುದು, ಅದನ್ನು ಹಿಮ್ಮೆಟ್ಟಿಸಲು ಎಂತಹ ವೀರತನ ಬೇಕು, ಧರ್ಮರಾಜನೇ ಕಲಿಯ ಸಹವಾಸವೇ ಬೇಡವೆಂದು ಎಲ್ಲಾ ಬಿಟ್ಟು ಹೊರಟುಬಿಟ್ಟ. ಹೀಗಿದ್ದರೂ ಪರೀಕ್ಷಿತ ಧನಸ್ಸು ಹಿಡಿದು, ರಥವೇರಿ ಹೊರಟುಬಿಟ್ಟ, ಪ್ರಪಂಚ ಪರ್ಯಟನೆ ಮಾಡಿ ಕಲಿಯನ್ನು ಅರಸಲು.
ಕಲಿಯ ಜೊತೆ ಸೆಣೆಸಲು ಅವನು ಕಾತುರನಾಗಿದ್ದ, ಆ ಅವಕಾಶ ದೊರೆತಿದ್ದರಿಂದ ಆನಂದಿತನೂ ಆಗಿದ್ದ.

ಅವನಿಗೆ ಪಾಂಡವರು ಬದುಕಿದ್ದಾಗ ಏನೇನು ಸಾಧಿಸಿದ್ದರೋ ತಿಳಿದಿರಲಿಲ್ಲ. ಆದರೆ ಈಗ ಸಂಚಾರದಲ್ಲಿ ಕೃಷ್ಣನ ಬಗೆಗಿನ, ಪಾಂಡವರ ಬಗೆಗಿನ ವಿವಿಧ ಕಥೆಗಳನ್ನು, ಅನುಭವಗಳನ್ನು ಜನ ಹಾಡಿ ಹೊಗಳುತ್ತಿದ್ದದ್ದು, ಕೃಷ್ಣಭಕ್ತಿ ಪ್ರಚುರವಾಗುತ್ತಿದ್ದ ರೀತಿಯನ್ನು ಕಂಡ ಪರೀಕ್ಷಿತ ಸುಪ್ರಸನ್ನನಾದ.
ಪರಿಕ್ಷಿತ ಕೃಷ್ಣ ತಯಾರು ಮಾಡಿದ ಶಿಶು. ಕೃಷ್ಣ ಬಗೆಬಗೆಯಲ್ಲಿ ಪಾಂಡವರ ಸೇವೆ ಮಾಡಿದ, ಅವರಿಗಾಗಿ ದುಡಿದ, ಗೋರಕುಂಬಾರನ ಮನೆಯಲ್ಲಿ ವಿಠಲ ದುಡಿದಂತೆ ಅವರ ಮನೆಯ ಆಳಿನಂತೆ ನಡೆದುಕೊಂಡ ಆದರೆ ಪಾಂಡವರಿಗೆ ಅದು ಅರ್ಥ ಆಗಲಿಲ್ಲ,
ಅರ್ಜುನನಂತೂ ಭಗವದ್ಗೀತೆಯ ಅವತಾರದ ಸಮಯದಲ್ಲಿ ಅಧೀರನಾಗಿ ಆಶ್ಚರ್ಯವ್ಯಕ್ತಪಡಿಸುತ್ತಾನೆ, ವಿಧವಿಧವಾಗಿ ವಿಲಪಿಸುತ್ತಾನೆ, ಕೃಷ್ಣ ನಿನ್ನನ್ನು ಸ್ನೇಹಿತನಾಗಿ ನೋಡಿದೆ, ಹೇಗೆಲ್ಲಾ ಸಂಬೋಧಿಸಿದೆ, ನಿನ್ನ ಮಹಿಮೆಯನ್ನು ಅರಿಯಲೇ ಇಲ್ಲ. ನನಗೆ ಆ ಯೋಗ್ಯತೆ ಇದೆಯೋ ಎಂಬುದನ್ನೂ ಅರಿಯಲಿಲ್ಲ, ಈಗ ನಿನ್ನ ಮಹಿಮೆ ಅರಿವಾಗುತ್ತಿದೆ ಎನ್ನುತ್ತಾನೆ.

ಎಷ್ಟೋ ಸಾರಿ ದೇವರು ನಮ್ಮ ಎದುರಿಗೇ ಇರುತ್ತಾನೆ, ಯವುದೋ ಒಂದು ರೂಪದಲ್ಲಿ, ಆದರೂ ನಮಗೆ ಕಾಣಿಸುವುದೇ ಇಲ್ಲ. ಆಮೇಲೆ ನಮ್ಮ ಕಾಲ ಕಳೆದ ಮೇಲೆ ಯಾರೋ ಹೇಳುತ್ತಾರೆ, ಅವರು ಹೇಳುವ ಕಥೆಗಳು ಕೇಳಿದಾಗ ಅನಿಸುತ್ತದೆ, ದೇವರು ಮುಂದೆ ಇದ್ದರೂ ಯೋಗ್ಯ ರೀತಿಯಲ್ಲಿ ಕಾಣಲಿಲ್ಲವಲ್ಲ ಎಂದು.

ಪ್ರಪಂಚ ಪರ್ಯಟನೆ ಮಾಡಿದ ಬಳಿಕ ಅರ್ಥವಾಗುವ ವಿಚಾರ ಏನೆಂದರೆ ನನ್ನ ಊರೇ ಚಂದ ಅಂತ.
ಕೃಷ್ಣಕಥೆಯನ್ನು ಯಾರು ಹೇಳಿದರೂ ಅವರಿಗೆ ಬೇಕಾದ್ದನ್ನು ಕೊಡುತ್ತಿದ್ದ. ಅವನಿಗೆ ಅದರಿಂದ ಅಷ್ಟು ಆನಂದ ಆಗುತ್ತಿತ್ತು, ಯಾಕೆಂದರೆ ಅದು ತಾಯಿ ಬೇರು. ಹುಟ್ಟಿದ್ದು ಉತ್ತರೆಯ ಗರ್ಭದಲ್ಲಿಯಾದರೂ, ಸತ್ತುಹುಟ್ಟಿದ ಅವನನ್ನು ಆಪಾದಮಸ್ತಕ ತನ್ನ ಪದಕಮಲಗಳಿಂದ ಸ್ಪರ್ಶಿಸಿ ಬದುಕಿಸಿದ್ದು ಕೃಷ್ಣನೇ ಅಲ್ಲವೇ. ಹಾಗಾಗಿ ಕೃಷ್ಣನೇ ನಿಜವಾದ ತಾಯಿ, ತಂದೆ.
ಬೇರಿನಿಂದ ಶಾಖೆ ಬೇರೆಯಾಗಬಾರದು, ಆದರೆ ಒಣಗಿಹೋಗುತ್ತದೆ. ಜೀವರಸ ಬರುವುದೇ ಮೂಲದಿಂದ, ಮೂಲವನ್ನು ಮರೆಯಬಾರದು. ಪೂರ್ವಜರನ್ನು ಮರೆತರೆ ಆ ಜೀವಕ್ಕೆ ಉತ್ಕರ್ಷ ಇಲ್ಲ.

ಹೀಗೆ ಕಲಿಯನ್ನು ಅರಸುತ್ತಾ ಬಂದ ಪರೀಕ್ಷಿತನಿಗೆ ಸರಸ್ವತೀ ನದಿಯ ಪೂರ್ವತೀರದಲ್ಲಿ ಒಂದು ಘೋರದೃಶ್ಯ ಕಂಡುಬಂದಿತು. ಒಂದು ನಂದಿ ಹಾಗೂ ಒಂದು ನಂದಿನಿ ಎರಡೂ ಇದ್ದವು. ನಂದಿಗೆ ಒಂದೇ ಕಾಲು ಉಳಿದ ಮೂರನ್ನೂ ಕತ್ತರಿಸಿ ಇಡಲಾಗಿತ್ತು, ಅದೂ ಆ ಪಾದದ ಮೇಲೆಯೇ ಸತತ ಆಘಾತವಾಗುತ್ತಿತ್ತು. ಅವುಗಳಿಗೆ ನೀರು, ಮೇವು ಏನೂ ಇರಲಿಲ್ಲ. ಅದರ ಪಕ್ಕದಲ್ಲೊಬ್ಬ ಕರಿಯಬಣ್ಣದ ಪುರುಷ, ಕ್ರೂರವಾದ, ಕೆಂಪು ಕಣ್ಣುಗಳು, ಭೀಕರ ಸ್ವಭಾವ ಆದರೆ ವೇಷ ಮಾತ್ರಾ ರಾಜನದ್ದು. ಅವನು ಈ ಎರಡನ್ನೂ ಪೀಡಿಸುತ್ತಾ ಇದ್ದ. ಗೋವನ್ನು ಕಾಲಿನಿಂದ ಒದೆಯುತ್ತಾ ಇದ್ದ. ಪರೀಕ್ಷಿತನಿಗೆ ಸಿಟ್ಟು ಬಂತು. ತನ್ನ ಕಣ್ಣೆದುರಿಗೇ ಇಂತಹ ಘೋರಕೆಲಸ ಮಾಡಿದ ಅವನ ವಿರುದ್ಧ ಧನುರ್ಬಾಣ ಹೂಡಿ ಅವನನ್ನು ಕುರಿತು ಮಾತನಾಡಿದ.

ಆ ಮನುಷ್ಯ ಯಾರು ಮುಂದೆ ನೋಡೋಣ, ಅವನು ಸಾಮಾನ್ಯನಲ್ಲ, ದೈತ್ಯಶಕ್ತಿಯ ಮಹಾನ್ ಪುರುಷ, ಅವನೇನು ಮಾಡುತ್ತಾ ಇದ್ದನೋ ಅದು ಇವತ್ತಿನ ಗೋವಿನಸ್ಥಿತಿಯನ್ನು ಪ್ರಸ್ತುತಪಡಿಸುವ ದೃಶ್ಯ. ಅವರೆಲ್ಲ ಯಾರು? ಆ ಮಹಾನ್ ಕರಿಯ ಪುರುಷನ ಸಾಮರ್ಥ್ಯ ಏನು? ಅವನೇ ಕಲಿಯೇ? ಮುಂದೆ ನೋಡೋಣ.

ಯಾವುದು ದುಃಖವನ್ನು ತರುವುದೋ ಅದು ಕಲಿ, ಮಾಡಬೇಕಾದುದನ್ನು ಬಿಟ್ಟು ಮಾಡಬಾರದ್ದನ್ನು ಪ್ರೇರೇಪಿಸುವುದೋ ಅದು ಕಲಿ, ಆ ಕಲಿಯನ್ನು ಪರೀಕ್ಷಿತ ಮಹಾರಾಜ ನಿಗ್ರಹ ಮಾಡಿದನೋ ಇಲ್ಲವೋ ಮುಂದೆ ನೋಡೋಣ. ಆದರೆ ನಾವಂತೂ ಕಲಿಯನ್ನು ನಿಗ್ರಹ ಮಾಡಲೇಬೇಕು.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments