#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
14-08-2018:

ಕೃಷ್ಣನಾಗಿ ಸನ್ನಿಹಿತಗೊಂಡ ರಾಮನಿಗೂ ಭಾಗವತವಾಗಿ ತೆರೆದುಕೊಂಡ ರಾಮಾಯಣಕ್ಕೂ, ವ್ಯಾಸಪುತ್ರನಾಗಿ ಆವಿರ್ಭೂತರಾಗಿರುವ ವಾಲ್ಮೀಕಿಗಳಿಗೂ ನಮನ.

ಸರಸ್ವತೀ ನದೀ ತೀರದಲ್ಲಿ ಹಿಮದ ಬಣ್ಣದ ನಂದಿ, ವಾತ್ಸಲ್ಯವೇ ಮೈವೆತ್ತ ಗೋವು. ಒಂದೇ ಕಾಲಿನ ನಂದಿ, ಅದರ ಮೇಲೆ ಸತತ ಪ್ರಹಾರ ಮಾಡಲಾಗುತ್ತಿದೆ. ಗೋವು ತನ್ನ ಕರುವನ್ನು ಕಳೆದುಕೊಂಡಿದೆ, ಮೇವೂ ಇಲ್ಲ, ಜೊತೆಗೆ ಒಬ್ಬ ಕ್ರೂರಿ ಅದರ ಮೇಲೂ ಪ್ರಹಾರ ಮಾಡುತ್ತಿದ್ದಾನೆ. ಅವನ ಮೈಬಣ್ಣ ಕಪ್ಪು, ಕೆಂಪು ಕಣ್ಣು, ಒರಟಾದ ಕೆದರಿದ ಕೂದಲು, ವ್ಯಗ್ರ, ವಿಕಾರ ಮುಖಭಾವ, ಕ್ರೂರಿ. ಆದರೆ ರಾಜೋಚಿತ ಉಡುಪು ಧರಿಸಿದ್ದಾನೆ, ಗೋಮಿಥುನವನ್ನು ದಂಡಿಸುತ್ತಿದ್ದಾನೆ.

ತತ್ತ್ವಭಾಗವತಮ್

ಗೋವು ಮೇವನ್ನು ಕಂಡು ಎಷ್ಟು ದಿನಗಳಾಯಿತೋ? ನಂದಿಗಂತೂ ಮೇವನ್ನು ನೆನೆಸಿಕೊಳ್ಳುವ ತ್ರಾಣವೂ ಇಲ್ಲ, ಇರುವುದು ಒಂದೇ ಕಾಲು ಅದರ ಮೇಲೂ ಪ್ರಹಾರಗಳು.
ಗೋವು ಸಾಮಾನ್ಯವಲ್ಲ ಅದು ಕರೆದರೆ ಹಾಲನ್ನಲ್ಲ, ಧರ್ಮವನ್ನೇ ಕರೆಯುತ್ತದೆ ಹಾಗಾಗಿ ಅದು ಧರ್ಮದುಘಾ.
ಅನ್ಯಾಯ ನೋಡಿ ಸಹಿಸದ ಪರೀಕ್ಷಿತ ಸಿಟ್ಟಿನಿಂದ ಧನುರ್ಬಾಣಧಾರಿಯಾಗಿ ಸ್ವರವೇರಿಸಿ ಮಾತನಾಡಿದ. ಮಾತು~ಬಾಣದ ತುದಿ ಎರಡೂ ತೀಕ್ಷ್ಣವಾಗಿತ್ತು. ಗುಡುಗಿನಂಥ ಗಂಭೀರ ಧ್ವನಿಯಿಂದ ಹೇಳಿದ “ಯಾರು ನೀನು? ನನ್ನ ರಾಜ್ಯದಲ್ಲಿ ಅಬಲರಿಗೆ ಹಿಂಸಿಸುತ್ತಿದ್ದೀ, ನಿನ್ನ ವೇಷ ರಾಜೋಚಿತ ಆದರೆ, ಕೆಲಸ ಕುತ್ಸಿತ, ನೀನೇನು ನಟನೋ? ನಿನ್ನಿಂದ ಈ ದುಸ್ಸಾಹಸ ಹೇಗೆ? ಕೃಷ್ಣನಿಲ್ಲ ಎಂತಲೋ, ಅರ್ಜುನನಿಲ್ಲ ಎಂತಲೋ? ಎಚ್ಚರ! ನೀನು ವಧಾರ್ಹನಾಗಿದ್ದೀಯೆ. ರಾಜನಾದವನು ನ್ಯಾಯಮೂರ್ತಿಯಾಗಿರಬೇಕು, ಪ್ರಾಣ ತೆಗೆಯುವವನಿಗೆ ಪ್ರಾಣ ಇಟ್ಟುಕೊಳ್ಳುವ ಹಕ್ಕೂ ಇರುವುದಿಲ್ಲ. ಯಾವುದೇ ವೇಷವಾಗಲೀ ವೇಷಕ್ಕೆ ತಕ್ಕ ವರ್ತನೆ ಬೇಕು, ಕಂಸನಂತೆ ವೇಷ ಧರಿಸಿ ಸ್ತ್ರೀಯಂತೆ ಭಾವ ಇದ್ದರೆ ಏನು ಚಂದ?
ರಾಜನಾದವನು ನಿರಪರಾಧಿಗಳನ್ನು ದಂಡಿಸುವಂತಿಲ್ಲ ಹೀಗಿರುವಾಗ ನಿರಪರಾಧಿಯ ಮೇಲೆ ನೀನೇ ದೌರ್ಜನ್ಯವೆಸಗಿದರೆ. ಹೀಗಾಗಿ ನಿನ್ನನ್ನು ಕೇಳಿದೆ ನೀನೇನು ನಟನೋ ಎಂದು!”

ನಂದಿಯನ್ನು ಕುರಿತು ಅಪಾರ ವಾತ್ಸಲ್ಯದಿಂದ ಕೇಳುತ್ತಾನೆ: “ಯಾರು ನೀನು? ನಿನ್ನ ಕಾಲುಗಳೇಕಿಲ್ಲ? ಒಂದೇ ಕಾಲಿನಿಂದ ನಿಂತಿರುವುದಲ್ಲದೇ ಓಡಾಟ ಕೂಡಾ ಮಾಡುತ್ತಿರುವೆ. ನೀನೇನು ವೃಷಭ ರೂಪದಿಂದ ಚಲಿಸುತ್ತಿರುವ ದೇವನೇ, ಯಾರು ? ನನಗೆ ನಿನ್ನ ಸಂಕಟ ಕಂಡು ವೇದನೆಯಾಗುತ್ತಿದೆ, ನನ್ನಿಂದ ಪಾಲಿತವಾಗಿರುವ ಈ ರಾಜ್ಯದಲ್ಲಿ ಯಾರ ಕಣ್ಣೀರೂ ಅನ್ಯಾಯವಾಗಿ ಬೀಳಬಾರದು. ಕಾಮಧೇನುವಿನ ಪುತ್ರ ನೀನು. ಚಿಂತೆಬಿಡು, ನಿನಗಿನ್ನು ಭಯಬೇಡ.”

ಗೋವಿನೆಡೆಗೆ ತಿರುಗಿ ಹೇಳಿದ: “ಅಮ್ಮಾ, ಅಳಬೇಡ, ನಾನು ನಿನಗೆ ನೋವನ್ನುಂಟುಮಾಡಿದವರನ್ನು ದಂಡಿಸುತ್ತೇನೆ”. (ನಾವು ಈಗ ಗೋಮಾತೆ ಎನ್ನುತ್ತೇವೆ ಆದರೆ ನೋಡಿ ಕಲಿಯುಗದ ಮೊದಲ ಚಕ್ರವರ್ತಿ ಕೂಡಾ ಗೋವನ್ನು ಸಂಬೋಧಿಸಿದ್ದು ಮಾತೆ ಎಂತಲೇ.)

ಯಾವ ರಾಜನ ರಾಜ್ಯದಲ್ಲಿ ಅಬಲರನ್ನು ಸಬಲರು ಅವಮಾನಿಸುತ್ತಾರೋ , ದಂಡಿಸುತ್ತಾರೋ ಅದರಲ್ಲಿ ಆ ರಾಜನೂ ಭಾಗಿ ಎಂದೇ ತಿಳಿಯಲಾಗುತ್ತದೆ. ಪ್ರಜೆಗಳ ಆದಾಯದಲ್ಲಿ 1/6 ಭಾಗ ರಾಜನಿಗೆ ಹಾಗಾಗಿ ಅವರ ಪಾಪದಲ್ಲಿಯೂ ರಾಜನಿಗೆ ಅಷ್ಟೇ ಪಾಲಿದೆ. (ರಾಜಾ ರಾಷ್ಟ್ರಗತಂ ಪಾಪಂ ಎಂದು ಹೇಳಲಾಗಿದೆ). ಪ್ರಜೆಗಳು ಪುಣ್ಯಕರ್ಮಿಗಳಾದರೆ, ಪುಣ್ಯವಂತನಾದರೆ ರಾಜನು ರಾಜರ್ಷಿಯಾಗುತ್ತಾನೆ. ಪ್ರಜೆಗಳು ಪಾಪಿಗಳಾದರೆ ರಾಜನು ನಾಶವಾಗುತ್ತಾನೆ.
ರಾಜಧರ್ಮದಲ್ಲಿ ಮೊದಲನೆಯದು ಅವನು ನೊಂದವರ ಕಣ್ಣೀರನ್ನು ಒರೆಸಬೇಕು, ಯಾರಿಗೆ ಏನು ತೊಂದರೆ ಬಂದರೂ ಅವನು ಅಲ್ಲಿ ಇರಬೇಕು.

ಪರೀಕ್ಷಿತ ಮುಂದುವರೆಸುತ್ತಾ, “ನಿಮಗೆ ತೊಂದರೆ ನೀಡಿದ ಜೀವದ್ರೋಹಿ, ಭೂತದ್ರೋಹಿಯನ್ನು ವಧೆಮಾಡುತ್ತೇನೆ. ವೃಷಭವೇ ನಿನ್ನ ಕಾಲನ್ನು ಯಾವನು ಕತ್ತರಿಸಿದನು ಹೇಳು, ಕೃಷ್ಣನ ಹೆಸರಿನಿಂದ ನಡೆಯುತ್ತಿರುವ ರಾಜ್ಯದಲ್ಲಿ ನಿನ್ನ ಈ ಸ್ಥಿತಿ ಇನ್ಯಾರಿಗೂ ಬರಬಾರದು, ನಿರಪರಾಧಿಗೆ ದಂಡ ವಿಧಿಸಿದವನು ದೇವತೆಯಾದರೂ ಸರಿ ಅವನ ತೋಳನ್ನು ಕತ್ತರಿಸಿಹಾಕುತ್ತೇನೆ” ಎಂದನು.

ಆಗ ನಂದಿ ಮಾತಾಡುತ್ತದೆ. (ದೊರೆ ನಂದಿಯ ಭಾಷೆಯನ್ನೂ ಅರ್ಥಮಾಡಿಕೊಳ್ಳುತ್ತಾನೆ)
“ನೀನು ಪಾಂಡವ ಸಂತಾನ ಹೌದು, ಅವರೂ ಆರ್ತರ ರಕ್ಷಣೆಗಾಗಿಯೇ ಬಾಳಿದವರು. ನನಗೆ ಕ್ಲೇಶ ಎಲ್ಲಿಂದ ಬಂತು ಅಂತ ಹೇಳಲಿ, ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳುತ್ತಾರೆ. ಕೆಲವರು ಕ್ರೀಡೆ ಎನ್ನುತ್ತಾರೆ, ಲೀಲೆ ಎನ್ನುತ್ತಾರೆ, ದೈವ, ಕರ್ಮ, ಸ್ವಭಾವ, ಅಪ್ರತರ್ಕ್ಯ, ಹೀಗೆ ವಿಧವಿಧದಲ್ಲಿ ಹೇಳುತ್ತಾರೆ. ನೀನು ತಿಳಿದವ, ಹಾಗಾಗಿ ನೀನೇ ವಿಮರ್ಶೆ ಮಾಡು ಎಂದಿತು” (ವೇದಾಂತದ ಮಾತು ನಂದಿಯ ಬಾಯಲ್ಲಿ !)

ನಮ್ಮ ಮೂಲವನ್ನು ಹುಡುಕುತ್ತಾ ಹೋದರೆ ಎಲ್ಲೋ ಒಂದೆಡೆ ನಿಲ್ಲುತ್ತದೆ, ಬುದ್ಧಿ ಸ್ತಬ್ಧವಾಗುತ್ತದೆ. ಕರ್ಮವನ್ನು ನಂಬಿದರೂ ಮೊತ್ತಮೊದಲ ಜನ್ಮದಲ್ಲಿ ಕರ್ಮ ಇರಲಿಲ್ಲವಲ್ಲ ಎಂದಾಗ ಅದು ಚಿಂತನೀಯ ವಿಷಯ. ಯಾಜ್ಞವಲ್ಕ್ಯರು ಈ ವಿಚಾರದಲ್ಲಿ ಮೈತ್ರೇಯಿಗೆ ಹೇಳುತ್ತಾರೆ: ಅತೀ ಪ್ರಶ್ನೆ ಕೇಳಬೇಡ, ಅಲ್ಲಿ ಬುದ್ಧಿ ಕೆಲಸ ಮಾಡುವುದಿಲ್ಲ ಅದು ಚದುರಿಹೋಗುತ್ತದೆ. ಆಗ ಅದು ವ್ಯರ್ಥ.
ಆಸ್ಪತ್ರೆಯಲ್ಲಿರುವವರೆಲ್ಲಾ ಗುಣವಾದ ನಂತರ ನಾನು ಅಲ್ಲಿಂದ ಹೋಗುತ್ತೇನೆ ಅಂದರೆ ಹೇಗಿರುತ್ತೆ, ಅದು ಮುಗಿಯುವುದೇ ಇಲ್ಲ, ಕರ್ಮಸಿದ್ಧಾಂತವೂ ಹೀಗೇ.

ಪರೀಕ್ಷಿತನ ತರ್ಕ ನಿಂತಿತು, ಅಂತಃಕರಣ ಎಚ್ಚರವಾಯಿತು, ಆಗ ಅದು ಯಾರು ಎಂದು ಗಮನಿಸಿದ.
ತಪಸ್ಸು ಮಾಡದೇ ದೇವರು ಸಿಗಲಾರ, ಪರೀಕ್ಷಿತ ಕಂಡದ್ದು ನಿಮಗೂ ಕಾಣಲು ಸಾಧ್ಯವೇ ನೋಡಿ, ಚಿತ್ತವನ್ನು ಕೃಷ್ಣಚಿತ್ರದಲ್ಲಿ ಇರಿಸಿ ಕೆಲವು ನಿಮಿಷಗಳ ಕಾಲವಾದರೂ ಮನಸ್ಸು, ಹೃದಯ ಇಲ್ಲಿಯೇ ಇಟ್ಟಿರಿ. ಕರಗಿದ ಮನಸ್ಸುಳ್ಳವರಾಗಿ ಹಾಡಿ, ಕೃಷ್ಣನಾಗಿ ಬಂದ ರಾಮನ ಕೀರ್ತನವನ್ನು ಹಾಡಿ, ಮನಸ್ಸನ್ನು ಹೃದಯಕ್ಕೆ ಕೊಡಿ.

ಪರೀಕ್ಷಿತ ಆವರೆಗೆ ಕಣ್ಣೀರುಗರೆವ ತೆರೆದ ಕಣ್ಣುಗಳಿಂದ ವೃಷಭವನ್ನು ನೋಡುತ್ತಿದ್ದವನು ಕಣ್ಮುಚ್ಚಿ ಧ್ಯಾನಸ್ಥನಾದ, ಅಂತಃಚಕ್ಷುವಿನಿಂದ ದುಃಖವನ್ನು ದಾಟಿ ನೋಡಿದಾಗ ವೃಷಭವು ಸಾಕ್ಷಾತ್ ಧರ್ಮವೇ ಅಂತ ಗೊತ್ತಾಯಿತು.
ಧರ್ಮಕ್ಕೆ ಅತ್ಯಂತ ಹತ್ತಿರದ ರೂಪ/ಜೀವ ವೃಷಭವೇ ಆಗಿದೆ. ಅದೇ ಕಾರಣಕ್ಕಾಗಿ ನಂದಿಯು ಶಿವನ ವಾಹನವೂ ಹೌದು, ಅಂದರೆ ಧರ್ಮವೇ ಶಿವನ ವಾಹನ. ಧರ್ಮವು ಯಾವುದಾದರೂ ರೂಪ ತಾಳಬೇಕೆಂದರೆ ಅದು ನಂದಿಯ ರೂಪವನ್ನೇ ತಾಳುತ್ತದೆ. ಹಾಗಿದ್ದೂ ಇವತ್ತು ಮೊದಲ ಪ್ರಹಾರ ನಂದಿಯ ಮೇಲೆಯೇ, ಅದು ಅನುಪಯುಕ್ತವೆನ್ನುವ ಭಾವ ಎಲ್ಲೆಡೆ.

ಆಗ ಅವನಿಗೆ ನಂದಿಯ ಪಾದಗಳು ಗೋಚರಿಸಿದವು, ತಪಸ್ಸು, ಶೌಚ, ದಯೆ, ಸತ್ಯ ಇವೇ ಆ ನಾಲ್ಕು. ಕೃತಯುಗದಲ್ಲಿ ನಾಲ್ಕೂ ಇತ್ತು, ಪ್ರಹಾರ ಬೀಳುತ್ತಾ ಬೀಳುತ್ತಾ ಹೋಗಿ ಈಗ ಈ ಯುಗದಲ್ಲಿ ಅದು ಒಂದೇ ಆಗಿದೆ. ಅದರ ಮೇಲೂ ನಿತ್ಯ ಪ್ರಹಾರ ನಡೀತಾ ಇದೆ. ಅದೂ ಪರೀಕ್ಷಿತನ ಕಾಲದಲ್ಲಿ ಹೀಗಿತ್ತು. ಭೂಮಿಯಲ್ಲಿ ಅಧರ್ಮ ಬೆಳೆದಂತೆ ಸ್ಮಯ, ಸಂಗ, ಮದ ಈ ಮೂರೂ ಅವಗುಣಗಳೂ ಬೆಳೆದು ಮೂರು ಧರ್ಮಗಳನ್ನು ನಾಶಮಾಡಿದವು. ಈಗ ಒಂದೇ ಪಾದ ಉಳಿದಿದೆ ಅದು “ಸತ್ಯ”.

ಯಾವದೇ ಪದಾರ್ಥ ತನ್ನತನದಲ್ಲಿರುವುದು ಅದು ಧರ್ಮದ ಕಾರಣದಿಂದ, ನೀರು ನೀರಿನಂತೆ, ಬೆಂಕಿ ಬೆಂಕಿಯಂತೆ, ಇಂದ್ರ ಇಂದ್ರನಂತೆ, ಚಂದ್ರ ಚಂದ್ರನಂತೆ, ನಾವು ನಾವಾಗಿ, ನೀವು ನೀವಾಗಿ ಇರಲು ಧರ್ಮವೇ ಕಾರಣ. ನಮ್ಮಲ್ಲಿ ಏನು ಕೊರತೆ ಬರುತ್ತೋ ಅಷ್ಟು ಧರ್ಮ ಇಲ್ಲವೆಂದು ಅರ್ಥ.

ಕಲಿಗೆ ಸುಳ್ಳೇ ಆಹಾರ, ಸುಳ್ಳಿನಿಂದ ಬೆಳೆದ ಕಲಿಯು ಧರ್ಮದ ಕೊನೆಪಾದಕ್ಕೂ ಪ್ರಹಾರ ಮಾಡುತ್ತಿದ್ದಾನೆ.
ಹಾಗಾದರೆ ಆ ಗೋವು? ಅದು ಭೂಮಿ, ಈಗಷ್ಟೇ ಭಗವಂತ ಅವಳ ಭಾರ ಇಳಿಸಿ ಹೋಗಿದ್ದಾನೆ, ಅವಳ ಶರೀರದ ಮೇಲೆಲ್ಲಾ ಭಗವಂತನ ಪದನ್ಯಾಸ ಇದೆ. ಕೃಷ್ಣ ಕಾಲಿಟ್ಟಲ್ಲೆಲ್ಲಾ ಧನ್ಯತೆ ಭೂದೇವಿಗೆ, ಆದರೆ ಈಗ ಕೃಷ್ಣ ಹೊರಟುಹೋದ ಮುಂದೆ ಕಷ್ಟದ ದಿನಗಳು ಕಾದಿದೆ. ರಾಜರೂಪಿ ಪ್ರಪಂಚ ಭಕ್ಷಕರು ನನ್ನನ್ನು ತಿನ್ನುತ್ತಾರೆ, ದುಷ್ಟರಿಗೆ ಭೋಗಸಾಧನವಾಗಿಬಿಡುತ್ತೇನೆ ಎಂದು ಅವಳು ದುಃಖಿಸುತ್ತಾಳೆ. ಮೇವಿಲ್ಲ ಅಂದರೆ ಮುಂದೆ ಹಸಿರಿಲ್ಲದ ದಿನಗಳು ಬರುತ್ತವೆ ಎಂದು ಅರ್ಥ.

ಪರೀಕ್ಷಿತ ಇಬ್ಬರನ್ನೂ ಸಂತೈಸಿ ಧನುರ್ಬಾಣಗಳನ್ನು ತೆಗೆದಿಟ್ಟು, ಖಡ್ಗವನ್ನು ಹಿರಿದು ಕಲಿಯ ತಲೆಗೆ ಇಡುತ್ತಾನೆ, ಈಗ ಯುದ್ಧವಾಯಿತೇ ಎಂದರೆ, ಇಲ್ಲ ಕಲಿ ಹೆದರಿ ತನ್ನ ರಾಜಪೋಷಾಕನ್ನು ತೆಗೆದು ಬಿಟ್ಟು ರಾಜನ ಕಾಲು ಹಿಡಿಯುತ್ತಾನೆ, ಶರಣಾಗುತ್ತಾನೆ.
ಅದು ಕಲಿಯ ಆರಂಭವಷ್ಟೇ, ಆಗಲೇ ಮುಗಿಸಿಬಿಟ್ಟರೆ? ಕಲಿಯ ಆಯಸ್ಸು 4,32,000 ವರ್ಷಗಳು ಈಗ ಆಗಿರುವುದು ಕೇವಲ 5500 ವರ್ಷಗಳು ಅಂದರೆ ಆಗ (ಈಗಲೂ) ಕಲಿ ಇನ್ನೂ ಶಿಶು, ಈಗಲೇ ಅವನ ಪ್ರತಾಪ ಹೀಗೆ, ಇನ್ನು ಮುಂದೆ ಹೇಗಿರಬಹುದು?

ಉತ್ತಮರಾದ ಕ್ಷತ್ರಿಯರು ಶರಣಾಗತರಲ್ಲಿ ಕತ್ತಿ ಎತ್ತುವುದಿಲ್ಲ, ಅದು ಅರಿವಿದ್ದ ಕಲಿ ಪರೀಕ್ಷಿತನ ಕಾಲು ಹಿಡಿದ. ಇದರರ್ಥವೇನೆಂದರೆ, ಕಲಿಯು ಬದುಕಬೇಕಾದರೂ ಧರ್ಮವನ್ನು ಆಶ್ರಯಿಸಿಯೇ ಬದುಕಬೇಕು. ಪರೀಕ್ಷಿತ ನಕ್ಕು ಬದುಕಿಕೋ ಹೋಗು ನನ್ನಿಂದ ನಿನಗೆ ಭಯವಿಲ್ಲ ಎಂದ. ಆದರೆ ಒಂದು ವಿಚಾರ ನನ್ನ ವ್ಯಾಪ್ತಿಯ ಭೂಮಿಯಲ್ಲಿ ನೀನು ಇರುವಂತಿಲ್ಲ, ಅದನ್ನು ಬಿಟ್ಟು ತೊಲಗು ಮತ್ತು ಮುಂದೆಂದೂ ನನಗೆ ಮುಖ ತೋರಿಸಬೇಡ ಎಂದು ಹೇಳುತ್ತಾನೆ. ಏಕೆಂದರೆ ನೀನು ಅಧರ್ಮ ಬಂಧು, ನೀನು ರಾಜರಲ್ಲಿ ಸೇರಿಕೊಂಡು ಮಾಡಬಾರದ ಕೆಲಸವನ್ನು ಮಾಡಿಸುತ್ತೀಯೆ, ನಿನ್ನ ಪೂರ್ಣ ಇತಿಹಾಸ ನನಗೆ ಗೊತ್ತು ಎಂದು ಹೇಳುತ್ತಾನೆ. ನಿನ್ನ ಹುಟ್ಟಿನ ವಿವರ ಕೇಳು ಎಂದು ಹೇಳಿ, ಪ್ರಳಯಕಾಲದಲ್ಲಿ ಚತುರ್ಮುಖ ಬ್ರಹ್ಮನ ಪೃಷ್ಟದಿಂದ ಕೆಡುಕು ಸೃಷ್ಟಿಯಾಯಿತು, ಅದೇ ಅಧರ್ಮ, ಅದರ ಪತ್ನಿ ಮಿಥ್ಯಾದೇವಿ ಎಂದು, ಅವರಿಗೆ ಇಬ್ಬರು ಮಕ್ಕಳು ಮಗ ದಂಭ ಹಾಗೂ ಮಗಳು ಮಾಯೆ. ಮಾಯೆಗೆ ಇಬ್ಬರು ಮಕ್ಕಳು ಲೋಭ ಹಾಗೂ ನಿಕೃತಿ ಎಂದು ಅವರ ಸಂಯೋಗದಿಂದಾಗಿ ಜನಿಸಿದವರು ಕ್ರೋಧ ಹಾಗೂ ಹಿಂಸೆ ಈ ಅಣ್ಣತಂಗಿಯರ ಸಂಯೋಗದಿಂದ ಜನಿಸಿದವನೇ ಕಲಿ ಅಂದರೆ ನೀನು. ಹುಟ್ಟಿನಲ್ಲೇ ಈ ಪರಿಯ ಕೆಡುಕನ್ನು ಹೊಂದಿರುವ ನಿನ್ನಲ್ಲಿ ಒಳಿತನ್ನು ಹುಡುಕಲು ಸಾಧ್ಯವಿಲ್ಲ. ನಿನ್ನದು ಅನಿಷ್ಟ ವಂಶಾವಳಿ, ನನ್ನ ಪ್ರದೇಶ ಬ್ರಹ್ಮಾವರ್ತದಲ್ಲಿ ಇರುವುದು ಸತ್ಯ ಹಾಗೂ ಬ್ರಹ್ಮ ಮಾತ್ರಾ, ಇಲ್ಲಿ ಯಜ್ಞಫಲಗಳಿಗಷ್ಟೇ ಅಧಿಕಾರ, ನಿನಗೆ ಇಲ್ಲಿ ಸ್ಥಳವಿಲ್ಲ ಹೊರಡು ಎನ್ನುತ್ತಾನೆ.

ಆಗ ಕಲಿ, ನನಗೆ ನಿನ್ನ ಭಯದಿಂದಾಗಿ ಎಲ್ಲಿ ಹೋದರೂ ನೀನೇ ಕಾಣುತ್ತೀಯೆ ನಾನು ಎಲ್ಲೂ ಹೋಗಲಾರೆ ಹಾಗಾಗಿ ದಯಮಾಡಿ ನೀನೇ ಜಾಗ ತೋರಿಸು ಎನ್ನುತ್ತಾನೆ. (ರಾಮಾಯಣದಲ್ಲಿ ಮಾರೀಚ ರಾಮನ ಬಾಣಕ್ಕೆ ಸಿಕ್ಕು ಪೆಟ್ಟುತಿಂದ ಮೇಲೆ ಅವನಿಗೂ ಹೀಗೇ ಆಗಿರುತ್ತದೆ. ಎಲ್ಲಿ ನೋಡಿದರೂ ಅವನಿಗೆ ರಾಮನ ರೂಪವೇ ತೋರಿಬರುತ್ತದೆ!) ಆಗ ಪರೀಕ್ಷಿತ ರಾಜ ಅವನಿಗೆ ನಾಲ್ಕು ಜಾಗಗಳನ್ನು ತೋರಿಸುತ್ತಾನೆ ದ್ಯೂತಸ್ಥಾನ, ಪಾನಗೃಹ, ಸ್ತ್ರೀಪುರುಷರ ಅಧಾರ್ಮಿಕ ಕೇಳಿಯ ಸ್ಥಳ ಹಾಗೂ ವಧಾಸ್ಥಾನ. ಆದರೆ ಕಲಿ ಮತ್ತೆ ಬೇಡುತ್ತಾನೆ ಇವೆಲ್ಲವೂ ಕ್ರೂರ ಸ್ಥಳಗಳೇ. ಒಂದಾದರೂ ಒಳ್ಳೆಯ ಜಾಗ ತೋರಿಸು ಅಂದಾಗ ಮರುಗಿ ಬಂಗಾರದಲ್ಲಿ ನೆಲೆಸು ಅಂತ ಹೇಳುತ್ತಾನೆ.

ಈ ಐದೂ ಜಾಗದಲ್ಲಿ ನಾವು ಜೋಪಾನವಾಗಿರಬೇಕು. ಚಿನ್ನ ಉತ್ತಮವಾದದ್ದೇ. ಸಾಧಕನಿಗೆ ಶ್ರೇಷ್ಠವಾದದ್ದೇನೋ ಸರಿ, ಆದರೆ ಅದನ್ನು ಬಳಸಿಯೇ ಅನ್ಯಾಯಗಳು ನಡೆಯುತ್ತೆ.

ಪರೀಕ್ಷಿತ ವೃಷಭಕ್ಕೆ ಮತ್ತೆ ಮೂರೂ ಕಾಲುಗಳನ್ನು ಜೋಡಿಸಿ ಸ್ವಸ್ಥವನ್ನಾಗಿ ಮಾಡುತ್ತಾನೆ. ಮುಂದೆ ಅವನ ಕಾಲದಲ್ಲಿ ಧರ್ಮವು ನಾಲ್ಕೂ ಪಾದಗಳಿಂದಲೇ ಇರುತ್ತದೆ. ಪರೀಕ್ಷಿತನಿಗೆ ಆ ಚೈತನ್ಯಶಕ್ತಿ ಇತ್ತು. ಅವನ ಧರ್ಮದೃಷ್ಟಿಗೆ ಎಲ್ಲವೂ ಗೋಚರಿಸಿತು ಹಾಗಾಗಿ ಅವನಿಗೆ ಕಲಿ ನಿಗ್ರಹ ಸಾಧ್ಯವಾಯಿತು. ಎಲ್ಲರಿಂದಲೂ ಸಾಧ್ಯವಿಲ್ಲ.

ನಾಲ್ಕು ರೀತಿಯಾದ ಜನರಿರುತ್ತಾರೆ. ಮೊದಲನೆಯ ರೀತಿಯವರು ಸೆಗಣಿಯ ಹುಳುಗಳ ಹಾಗೆ ಅಲ್ಲಿಂದ ಎಷ್ಟು ಸಾರಿ ತೆಗೆದರೂ ಮತ್ತೆ ಅಲ್ಲಿಗೇ ಹೋಗುತ್ತಾರೆ, ಎರಡನೆಯವರು ಒಳ್ಳೆಯ ದಾರಿ ಸಿಕ್ಕಿದರೆ ಒಳ್ಳೆಯವರಾಗುತ್ತಾರೆ, ಮೂರನೆಯವರು ತಾವು ಸಹಜವಾಗಿ ಒಳ್ಳೆಯವರು ಆದರೆ ಅವರಿಗೆ ಇತರರನ್ನು ಒಳ್ಳೆಯವರನ್ನಾಗಿ ಮಾಡುವ ಶಕ್ತಿ ಇರುವುದಿಲ್ಲ, ನಾಲ್ಕನೆಯವರು ಮಾತ್ರಾ ಪರೀಕ್ಷಿತನಂತೆ ತಾವಷ್ಟೇ ಅಲ್ಲದೇ ಇತರರನ್ನೂ ಒಳ್ಳೆಯವರನ್ನಾಗಿ ರೂಪಿಸಬಲ್ಲರು.

ಇದು ಇಂದಿನ ಕಲಿನಿಗ್ರಹದ ಕಥೆ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments