#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
17-08-2018:

ಇಂದಿನದ್ದು ಮಹಾಭಾರತದ ಕಥೆ ಆದರೆ ಕಲಿಯ ವಿಷಯವಾದ್ದರಿಂದ ಇಲ್ಲಿಗೆ ಪ್ರಸ್ತುತ. ಕಲಿಯನ್ನು ದೇಹದಲ್ಲಿಯೂ ನಿಯಂತ್ರಿಸಬೇಕು ಹಾಗೂ ದೇಶದಲ್ಲಿಯೂ ನಿಯಂತ್ರಿಸಬೇಕು ಹಾಗಾಗಿ ಇದಕ್ಕೆ ಉದಾಹರಣೆಯಾಗಿ ಈ ಕಥೆ.

ನಳ ದಮಯಂತಿಯರದ್ದು ಸೀತಾರಾಮರ ಆದರ್ಶ, ರಾಮಾಯಣದ ಸುಂದರಕಾಂಡದಲ್ಲಿ ಸೀತೆ ಸ್ವಯಂ ಆಗಿ ತಾನು ದಮಯಂತಿಯನ್ನು ಅನುಕರಿಸಿ ಇದ್ದೇನೆ ಎಂದು ಹೇಳುತ್ತಾಳೆ, ಹಾಗಾಗಿ ಈ ಚರಿತೆ ಕೂಡಾ ಅತೀ ರೋಚಕವಾಗಿದೆ. ನಳನೇನೂ ದೇವತೆಯಲ್ಲ ಹಾಗಾಗಿ ಅವನ ಚರಿತೆ ರಾಮಾಯಣ, ಮಹಾಭಾರತದಂತೆ ಪ್ರಸಿದ್ಧವಾಗಲಿಲ್ಲ, ಆದರೆ ನಳ ಸಾಮಾನ್ಯ ಮನುಷ್ಯನಾಗಿ ಏರಿದ ಎತ್ತರ ಅದ್ಭುತ, ಕಲಿ ಅವನನ್ನು ಪೀಡಿಸುತ್ತಾನೆ ಆದರೆ ಕೊನೆಯಲ್ಲಿ ಅವನೇ ಪೀಡೆಗೊಳಗಾಗುತ್ತಾನೆ, ಎಲ್ಲಿಯವರೆಗೆ ಅಂದರೆ ನಳನ ಹೆಸರು ಕೇಳಿದರೆ ಸಾಕು ಕಲಿಯ ನಿಗ್ರಹವಾಗುತ್ತದೆ.

ತತ್ತ್ವಭಾಗವತಮ್

ಮಹಾಭಾರತದ ವನಪರ್ವದಲ್ಲಿ ಪಾಂಡವರು ಋಷ್ಯಾಶ್ರಮಗಳ ಭೇಟಿ ಮಾಡುತ್ತಿದ್ದಾರೆ, ಋಷಿಮುನಿಗಳೂ ಬಂದು ಪಾಂಡವರನ್ನು ಭೇಟಿ ಮಾಡುತ್ತಿದ್ದಾರೆ. ಹಾಗೆಯೇ ಮಹರ್ಷಿ ಬೃಹದಶ್ವರೂ ಬರುತ್ತಾರೆ. ಅವರ ಉಲ್ಲೇಖ ವಾಙ್ಮಯಗಳಲ್ಲಿ ನಳೋಪಾಖ್ಯಾನದಲ್ಲಿ ಮಾತ್ರಾ ಬರುತ್ತದೆ. ಅವರಲ್ಲಿ ಧರ್ಮರಾಜ ತನ್ನ ಸಂಕಟವನ್ನು ತೋಡಿಕೊಳ್ಳುತ್ತಾನೆ, ತಾನು ಚಕ್ರವರ್ತಿಯಾಗಿದ್ದವನು ಆದರೆ ಇಂದು ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕನಂತೆ ಕಾಡುಪಾಲಾಗಿದ್ದೇನೆ, ನನ್ನಂತಹವನು ಈ ಭೂಲೋಕದಲ್ಲಿ ಇನ್ಯಾರು ಇದ್ದಾರೆ? ಯಾರೂ ಇರಲು ಸಾಧ್ಯವಿಲ್ಲ ಅಂತ ವಿಲಪಿಸುತ್ತಿರುತ್ತಾನೆ. ಆಗ ಮಹರ್ಷಿಗಳು ಅವನಿಗೆ ನಳನ ಕಥೆ ಹೇಳುತ್ತಾರೆ. ನೀನು ಪುಣ್ಯವಂತ ಕಾಡುಪಾಲಾದರೂ ತಮ್ಮಂದಿರು, ಸತಿ ಜೊತೆಗಿದ್ದಾರೆ. ಆದರೆ ಅವನು ಎಲ್ಲವನ್ನೂ ಕಳೆದುಕೊಂಡು ನಿನಗಿಂತ ನೂರುಪಟ್ಟು ಕಷ್ಟಪಟ್ಟಿದ್ದಾನೆ. ಅಖಂಡಭೂಮಂಡಲಾಧಿಪತಿಯಾಗಿದ್ದವನು ಅಕ್ಷರಶಃ ತುಂಡುಬಟ್ಟೆಯೂ ಇಲ್ಲದಂತೆ ಕಾಡಲ್ಲಿ ತಿರುಗಿದ್ದಾನೆ ಅಂತ ಹೇಳುತ್ತಾರೆ.

ಕಗ್ಗದ ಕವಿ ಹೇಳುತ್ತಾರೆ : ರೌರವಿಗೆ ಹಿತ ಮಹಾರೌರವಿಯ ನರಕ , ನಮಗಿಂತ ಕಷ್ಟಪಡುವವರನ್ನು ನೋಡಿದಾಗ ನಮ್ಮ ಕಷ್ಟ ಕಡಿಮೆಯೆನಿಸಿ ಮನಸ್ಸು ಹಗುರಾಗುತ್ತದೆ. ಕಷ್ಟದಲ್ಲಿ ನಮ್ಮ ಅವಸ್ಥೆಗಿಂತ ಕನಿಷ್ಟರನ್ನು ನೋಡಬೇಕು ಇದು ಸುಖವಾಗಿರಲು ಬೇಕಾದ ಫಾರ್ಮುಲಾ.

ನಳ ಮಹಾರಾಜ ಶ್ರೀರಾಮನಿಗಿಂತ ಹಿಂದಿನವ, ನಿಷಧದ ರಾಜ ವೀರಸೇನನ ಮಗ, ಎಲ್ಲ ರೀತಿಯಲ್ಲಿ ಶ್ರೇಷ್ಠ, ಸುಂದರ, ಲಕ್ಷಣವಂತ, ಪರಾಕ್ರಮಿ, ಉತ್ತಮ ವ್ಯಕ್ತಿತ್ವ ಹೊಂದಿದ್ದವನು. ಸಾಮಾನ್ಯವಾಗಿ ಕೋಮಲವಾಗಿರುವುದು ದುರ್ಬಲವಾಗಿರುತ್ತದೆ ಹಾಗೂ ಕಠಣವಾಗಿರುವುದು ಬಲಿಷ್ಠ, ಆದರೆ ಇವನು ಅಪವಾದ ಅದಕ್ಕೆ, ರಾಮನಲ್ಲೂ ಈ ಲಕ್ಷಣ ಹೇಳುತ್ತಾರೆ (ಸುಕುಮಾರೋ ಮಹಾಸತ್ವಃ ಎಂದು).
ಸೀತೆಯ ಬಗ್ಗೆಯೂ ಹೇಳಿದೆ ರಾವಣನಿಗೆ ಎತ್ತಲಾಗದಿದ್ದ ಬಿಲ್ಲನ್ನು ಎಡಗೈಯಿಂದ ಎತ್ತಿದ್ದಳು ಅಂತ, ಅದು ಅತಿರೇಕವಾಗುತ್ತದೆ, ಹೊಗಳಲು ಅವಳ ಸೌಶೀಲ್ಯ, ಸೌಂದರ್ಯ, ಸೌಕುಮಾರ್ಯಗಳು ಇವೆ ಅದು ಬಿಟ್ಟು ಹೀಗೆ ಹೇಳಿದರೆ ಅದು ಅಪಹಾಸ್ಯ. ಅಪರೂಪದ ಪುರುಷರಲ್ಲಿ ಎರಡೂ ಇರುತ್ತದೆ, ದುರ್ಗೆಗೂ ಅದನ್ನು ಹೇಳಿದೆ ರಕ್ಕಸ ಸಂಹಾರಕ್ಕೆ ಹೊರಟಾಗ, ಆದರೆ ಉಳಿದೆಡೆ ಸರಿಯಲ್ಲ.

ನಳ ಒಳ್ಳೆಯ ಹೃದಯವಂತ, ಸರ್ವವಿದ್ಯಾವಿಶಾರದ, ಸತ್ಯವಂತ, ಅಶ್ವಹೃದಯ ವಿದ್ಯೆ ಬಲ್ಲವನಾಗಿದ್ದ. ಇಂತಹವರು ಹುಟ್ಟಿದಾಗ ಸಾಮಾನ್ಯವಾಗಿ ಇವರಿಗೆ ಸಂವಾದಿಯಾಗಿ ಅನುರೂಪರಾದ ಮತ್ತೊಬ್ಬರು ಹುಟ್ಟಿರುತ್ತಾರೆ. (ಮೊದಲು ರಾಮನನ್ನು ನೋಡಿದ್ದ ಹನುಮಂತ, ಸೀತೆಯನ್ನು ಮೊದಲಬಾರಿಗೆ ಕಂಡತಕ್ಷಣ ಇವರು ಅನುರೂಪರು ಅಂತ ನಿರ್ಧರಿಸುತ್ತಾನೆ).
ವಿದರ್ಭ ದೇಶದಲ್ಲಿ ದಮಯಂತಿ ಹುಟ್ಟಿದ್ದಳು, ಅಲ್ಲಿಯ ರಾಜ ಭೀಮನಿಗೆ ಸಂತಾನವಿರದೇ, ದಮ ಮಹರ್ಷಿಗಳ ಆಶೀರ್ವಾದದಿಂದ ಹುಟ್ಟಿದವಳಾದ್ದರಿಂದ ಆ ಹೆಸರು ಅವಳಿಗೆ, (ದಮ ಎಂದರೇ ಬಾಹ್ಯೇಂದ್ರಿಯ ನಿಗ್ರಹ ಮಾಡುವುದು ಎಂದು). ದಮಯಂತಿ ತ್ರಿಪುರ ಸುಂದರಿ. ಹೆಸರಿನ ಪ್ರಕಾರ ಇಂದ್ರಿಯನಿಗ್ರಹಕ್ಕೆ ಕಾರಣಳು ಎಂದೂ ಆಗುತ್ತದೆ. ಇವಳಿಗೆ ಮೂವರು ಸೋದರರು, ಇವಳು ತಾನು ಬದುಕಿದ ರೀತಿಯಿಂದ ಶ್ರೇಷ್ಠಳಾದಳು, ಜಗತ್ತಿನ ಯಾವಕಾವ್ಯದಲ್ಲೂ ಇಂತಹವಳು ಸಿಗುವುದು ಸಾಧ್ಯವಿಲ್ಲ. ಸ್ವಯಂಪ್ರೇರಿತರಾಗಿ ಇವಳಿಗೆ ಸಾವಿರಾರು ಸಖಿಯರಿದ್ದರು, ಇವಳಿಂದ ಆಕರ್ಷಿತರಾಗಿ ಬರುತ್ತಿದ್ದರು. ಮೋಡದ ಮರೆಯಲ್ಲಿ ಮಿಂಚುವ ಹೊಳಪಿನಂತಹ ರೂಪ ಅವಳದು, ಇಬ್ಬರೂ ತಮ್ಮ ರೂಪಿನಿಂದ ಪ್ರಖ್ಯಾತರಾಗಿದ್ದರು, ಪರಸ್ಪರರ ರಾಜ್ಯದ ಗುಪ್ತಚಾರರಿಂದ ಪರಸ್ಪರರ ವಿಷಯ ತಿಳಿದುಕೊಂಡಿದ್ದರು. ಇಬ್ಬರಿಗೂ ಒಂದೇ ಭಾವ, ಇನ್ನೊಬ್ಬರ ಕುರಿತು ಆದರ, ಕುತೂಹಲ ಉಂಟಾಯಿತು.

ಒಮ್ಮೆ ನಳ ಅವನ ಉದ್ಯಾನದಲ್ಲಿದ್ದಾಗ ಹಂಸಗಳ ಗುಂಪು ಅಲ್ಲಿಗೆ ವಿಹಾರಕ್ಕೆ ಬರುತ್ತವೆ, ಅವುಗಳ ರಾಜನಿಗೆ ಮನುಷ್ಯರೊಡನೆ ಸಂಭಾಷಣೆ ಮಾಡುವ ಶಕ್ತಿ ಇರುತ್ತದೆ, ನಳ ಕುತೂಹಲದಿಂದ ಹಂಸರಾಜನನ್ನು ಹಿಡಿದಾಗ ಅದು ಅವನಲ್ಲಿ ನೀನು ದಮಯಂತಿಯ ಬಗ್ಗೆ ಯೋಚಿಸುತ್ತಿದ್ದೀಯೆ ಅವಳು ರೂಪವತಿ, ಗುಣವತಿ ನಾನು ಹೋಗಿ ಅವಳಲ್ಲಿ ಸಂಧಾನಮಾಡಿ ಬರುವುದಾಗಿಯೂ ತನ್ನನ್ನು ಬಿಡಬೇಕೆಂದೂ ಹೇಳುತ್ತದೆ. ಸತ್ಯವಂತನಾದ ನಳ ತಾನು ಅದರ ಮಾತನ್ನು ನಂಬಿ ಅದನ್ನು ಬಿಡುತ್ತಾನೆ. ಹಂಸಗಳು ಹಾರಿ ವಿದರ್ಭಕ್ಕೆ ಹೋಗುತ್ತವೆ.

ಈ ಕಥೆ ಕೇಳುತ್ತಾ ನಮ್ಮಲ್ಲಿ ಕೆಲವರಿಗೆ ತಮ್ಮ ಕಥೆಗಳು ನೆನಪಾಗಿರಬಹುದು, ಇಲ್ಲಿ ನಾವೂ ಕಷ್ಟಪಡಬೇಕೆನ್ನುವುದು ಉದ್ದೇಶ ಅಲ್ಲ, ಅವನ ಸ್ವಚ್ಛ ಜೀವನ ನಮಗೆ ಆದರ್ಶವಾಗಬೇಕು ಅಂತ.

ನಳನ ಬಳಿ ಅಕಸ್ಮಾತ್ ಆಗಿ ಬಂದ ಹಂಸಗಳು ದಮಯಂತಿಯಲ್ಲಿ ಉದ್ದೇಶಪೂರ್ವಕವಾಗಿ ಹೋಗುತ್ತವೆ. ಸಖಿಯರೊಡನೆ ಉದ್ಯಾನದಲ್ಲಿ ವಿಹಾರ ಮಾಡುತ್ತಿದ್ದವಳನ್ನು ಅಕರ್ಷಿಸುತ್ತವೆ, ರಾಜಹಂಸ ಉಪಾಯವಾಗಿ ಅವಳೊಬ್ಬಳನ್ನೇ ಉಳಿಯುವಂತೆ ಮಾಡಿ ಅವಳು ತನ್ನನ್ನು ಮುದ್ದು ಮಾಡುವಾಗ ನಳನ ವಿಚಾರ ಹೇಳುತ್ತದೆ ಅವನಂತಹ ರೂಪವಂತ, ಪರಾಕ್ರಮಿ ದೇವದಾನವ ಗಂಧರ್ವರಲ್ಲಿ ಯಾರೂ ಇಲ್ಲ. ಅವನಲ್ಲಿ ನಕಾರತ್ಮಕ ವಿಚಾರಗಳೇ ಇಲ್ಲ ಎಂದು ಹೇಳಿ, ನಿನ್ನ ಬಗ್ಗೆಯೂ ಅವನ ಅಭಿಪ್ರಾಯ ಹೀಗೆಯೇ ಇರಬಹುದು ಎಂತಲೂ ಹೇಳುತ್ತದೆ. ಅವಳನ್ನು ಮರುಳು ಮಾಡಿ ತನ್ನಿಂದ ಏನಾಗಬೇಕೆಂದು ಕೇಳುತ್ತದೆ. ನೀನು ಪುಣ್ಯವಂತೆ ಇದುವರೆಗೂ ನೀನು ಬಯಸಿದ್ದೆಲ್ಲ ಸಿಕ್ಕಿದೆ ಇದೂ ಸಿಗಬಹುದು ಅಂತ ಹೇಳಿ ಉತ್ತೇಜನ ಮಾಡುತ್ತದೆ.

ದಮಯಂತಿಗೆ ಒಪ್ಪಿಗೆ ಇದೆ ಆದರೆ ಲಜ್ಜೆಯಿಂದಾಗಿ ಹೇಳುವಂತಿಲ್ಲ ಆದರೂ ಅವಳು ಏನು ಹೇಳುತ್ತಾಳೆ ಎಂಬುದನ್ನು ಕವಿ ಕಾವ್ಯಚಾತುರ್ಯದಿಂದ ವರ್ಣಿಸುತ್ತಾನೆ, (ಚೇತೋನಲಂಕಾಮಯತೇ ಮದೀಯಃ) ಬೇರೆ ಯಾವುದರಲ್ಲಿಯೂ ನನಗೆ ಆಸಕ್ತಿ ಇಲ್ಲ, ನಲನನ್ನೇ ಮನಸ್ಸು ಬಯಸುತ್ತಿದೆ, ಅವನು ಸಿಗದಿದ್ದಲ್ಲಿ ನಾನು ಅಗ್ನಿಪ್ರವೇಶ ಮಾಡುತ್ತೇನೆಯೇ ಹೊರತು ಬೇರೆ ಇಲ್ಲ ಎಂಬರ್ಥ ಬರುವಂತೆ ಮಾತಾಡುತ್ತಾಳೆ. ಹಂಸ ಹೇಳುತ್ತದೆ, ನೀನು ಬಯಸಿದರೆ ನಾನು ನಳನನ್ನು ಸಂಪರ್ಕಿಸಿ ನಿನ್ನ ಬಗ್ಗೆ ಅವನಲ್ಲಿ ಅನುರಾಗ ಮೂಡುವಂತೆ ಮಾಡುತ್ತೇನೆ ಅಂತ, ಪ್ರಪಂಚದಲ್ಲಿ ಈ ರೀತಿಯ ಮಧ್ಯಸ್ಥರು ಕೆಲವೇ ಜನ ಸಿಗುತ್ತಾರೆ, ಉಳಿದವರು ಇಬ್ಬರನ್ನೂ ಬೇರೆಬೇರೆ ಮಾಡುವತ್ತಲೇ ಮನಸ್ಸಿಟ್ಟಿರುತ್ತಾರೆ. ಅವಳ ಒಪ್ಪಿಗೆ ಪಡೆದ ಹಂಸ ನಳನಲ್ಲಿಗೆ ಹೊರಡುತ್ತದೆ.

ಶ್ರೀಹರ್ಷ ಕವಿಯು ಬರೆದ ಈ ಕಾವ್ಯ ನೈಷಧ ಚರಿತೆಯೆಂದೇ ಹೆಸರುಗಳಿಸಿದೆ ಸಂಸ್ಕೃತ ಸಾಹಿತ್ಯದ ಪಂಚಮಹಾಕಾವ್ಯಗಳ ಪೈಕಿ ಒಂದು ಇದು.
ದಮಯಂತಿಯ ಮನಸ್ಸು ನಳನಲ್ಲಿ ಲೀನವಾಗಿದೆ ಅದೇ ಕೊರಗಿನಲ್ಲಿ ಕೃಶಳಾಗುತ್ತಾಳೆ, ಲಜ್ಜೆಯಿಂದಾಗಿ ಎಲ್ಲಿಯೂ ಪ್ರಕಟಮಾಡುವುದಿಲ್ಲ, ಆಗ ಕಂಗೆಟ್ಟ ರಾಜ ವೈದ್ಯರನ್ನು ಕರೆಸಿ ಪರೀಕ್ಷಿಸುತ್ತಾನೆ, ಚತುರ ಚಿಕಿತ್ಸಕರಿಗೆ ಇದು ಮನೋವ್ಯಾಧಿಯೆಂಬುದು ತಿಳಿಯುತ್ತದೆ, ಅವರು ರಾಜನಲ್ಲಿ ತಿಳಿಸಿದಾಗ, ರಾಜನು ಸ್ವಯಂವರ ಏರ್ಪಡಿಸುವ ನಿಶ್ಚಯ ಮಾಡುತ್ತಾನೆ, ಅವಳು ಬಯಸುವವರನ್ನು ಅವಳು ಸ್ವೀಕರಿಸಲಿ ಎನ್ನುವ ನಿಶ್ಚಯದಲ್ಲಿ. ಸ್ವಯಂವರ ಎರಡು ಬಗೆಯದ್ದು, ರಾಮನ ವಿಷಯದಲ್ಲಿ ಅದು ವೀರಶುಲ್ಕವಾಗಿತ್ತು, ಸೀತೆಯಂತಹ ಗುಣಾಢ್ಯಳನ್ನು ರಕ್ಷಿಸಲು ಅದು ಅನಿವಾರ್ಯವೂ ಆಗಿತ್ತು, ಆದರೆ ಇಲ್ಲಿ ಪರಸ್ಪರ ಒಪ್ಪಿರುವವರು ಒಂದುಗೂಡಲು ಎಲ್ಲ ರಾಜರುಗಳನ್ನೂ ಆಹ್ವಾನಿಸಿ, ಸಖಿಯರು ಒಬ್ಬೊಬ್ಬರಾಗಿ ಅವರನ್ನು ಪರಿಚಯ ಮಾಡಿಸುತ್ತಿದ್ದಂತೇ ಯಾರು ಇಷ್ಟವಾಗುತ್ತಾರೋ ಅವರನ್ನು ವರಿಸುವುದು ಎಂದು.

ಸರಿ ಘೋಷಣೆಯಾಯಿತು, ದೇಶವಿದೇಶಗಳಿಂದ ರಾಜರು ಬರಲು ಪ್ರಾರಂಭಿಸಿದರು, ಯುವಕರಿಂದ ಹಿಡಿದು ವೃದ್ಧರೂ ಬಂದಿದ್ದರು, ದಮಯಂತಿ ಎಂದರೆ ಬೆಳದಿಂಗಳಿನಂತೆ, ಅವಳು ಯಾರಿಗೂ ಬೇಡ ಅಂತ ಇಲ್ಲ.
ಇತ್ತ ದೇವಲೋಕದಲ್ಲಿ ಸಭೆ ಸೇರಿರುತ್ತದೆ. ಅಲ್ಲಿಗೆ ಪರ್ವತರು ಹಾಗೂ ನಾರದರು ಬರುತ್ತಾರೆ. ಇಂದ್ರನಿಗೆ ಒಂದು ಜಿಜ್ಞಾಸೆ, ಭೂಮಿಯಲ್ಲಿ ರಾಜರುಗಳ ಮಧ್ಯೆ ಕಲಹ ಸಾಮಾನ್ಯ, ಹೀಗೆ ಹೋರಾಡಿ ಮರಣಹೊಂದಿದವರಿಗೆ ವೀರಸ್ವರ್ಗ ನಿಶ್ಚಿತ, ಹೀಗೇ ನಡೆದು ಬಂದಿದೆ. ಆದರೆ ಈಗ ಹಲವು ದಿನಗಳಿಂದ ಯಾರೂ ಬರುತ್ತಿಲ್ಲ ಹೇಗೆ? ಏಕೆ? ಅಂತ.
ನಾರದರು ಉತ್ತರಿಸುತ್ತಾರೆ ಈಗ ರಾಜರುಗಳಿಗೆ ಯುದ್ಧಾಸಕ್ತಿ ಇಲ್ಲ ಯಾರೂ ಪರಸ್ಪರರಲ್ಲಿ ಯುದ್ಧ ಮಾಡುತ್ತಿಲ್ಲ ಎಲ್ಲರ ಮನಸ್ಸೂ ದಮಯಂತಿಯ ಕಡೆಗಿದೆ, ಅವಳನ್ನು ವರಿಸುವ ಚಿಂತೆಯಲ್ಲಿ ಯುದ್ಧದ ವಿಚಾರವನ್ನೇ ಮರೆತಿದ್ದಾರೆ ಅಂತ.

ಇಂದ್ರನಿಗೂ ಕುತೂಹಲ ಉಂಟಾಗುತ್ತದೆ. ತಾನೂ ಸ್ವಯಂವರಕ್ಕೆ ಹೊರಡುವ ಕುರಿತು ಚಿಂತನೆ ನಡೆಸುತ್ತಾನೆ, ಅಷ್ಟರಲ್ಲಿ ಅಗ್ನಿ, ಯಮ, ವರುಣರೂ ಅಲ್ಲಿಗೆ ಬರುತ್ತಾರೆ ಹಾಗೂ ಒಟ್ಟಿಗೇ ಸ್ವಯಂವರಕ್ಕೆ ಹೋಗುವ ನಿಶ್ಚಯ ಮಾಡುತ್ತಾರೆ.
ದಾರಿಯಲ್ಲಿ ಅವರಿಗೆ ತಾನೂ ಹೊರಟಿರುವ ನಳನ ದರ್ಶನವಾಗಿ ಅವರು ನಿರಾಶರಾಗುತ್ತಾರೆ. ನಳನನ್ನು ನೋಡಿದ ನಂತರ ದಮಯಂತಿ ತಮ್ಮನ್ಯಾರನ್ನೂ ವರಿಸಲು ಇಚ್ಚಿಸುವುದಿಲ್ಲ ಎಂದು, ಏಕೆಂದರೆ ಅವನು ಗುಣರೂಪಗಳಲ್ಲಿ ದೇವತೆಗಳನ್ನೂ ಮೀರಿಸಿದ್ದ, ಹಾಗಾಗಿ ಬುದ್ಧಿವಂತಿಕೆ ಉಪಯೋಗಿಸಿ ತಮ್ಮ ನಾಲ್ವರಲ್ಲೇ ಅವಳು ಒಬ್ಬರನ್ನು ವರಿಸುವಂತೆ ಮಾಡಲು ಅವರು ಒಂದು ಹೂಟವನ್ನು ಹೂಡುತ್ತಾರೆ. ಇದು ಮೇಲ್ನೋಟಕ್ಕೆ ಲೌಕಿಕ ಅನ್ನಿಸಿದರೂ, ಅಲೌಕಿಕವಾದ್ದು. ಈ ಕಥೆ ಚೇತೋಹಾರಿಯಾಗಿ ಪ್ರಾರಂಭವಾಗುತ್ತೆ, ಇದುವರೆಗೆ ಅವರ ಬಾಹ್ಯರೂಪ, ಶ್ರೇಷ್ಠತೆಗಳ ಬಗ್ಗೆ ಮಾತ್ರವೇ ಹೇಳಿದೆ ಹೀಗಾಗಿ ಕಲಿ ಹಾಗೂ ನಳನ ಮಧ್ಯೆ ಸ್ಪರ್ಧೆ ಏರ್ಪಟ್ಟು ಕಲಿಯೂ ನಳನಿಗೆ ಹೆದರಿ ಓಡುವಂತಾಯಿತು. ಹಾಗಾಗಬೇಕು ನಮ್ಮಲ್ಲೂ.
ಚೆಲುವಾದ ಬಾಹ್ಯ ಸೌಂದರ್ಯದಿಂದ ಮತ್ತಷ್ಟು ಚೆಲುವಾದ ಅಂತರಂಗದೆಡೆಗೆ ಚಲಿಸಬೇಕು.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments