#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
16-08-2018:

ರಾಮಕೃಷ್ಣರಿಗೆ, ವಾಲ್ಮೀಕಿಶುಕರಿಗೆ, ಭಾಗವತ ರಾಮಾಯಣಗಳಿಗೆ ನಮಸ್ಕಾರಗಳು.

ಈಗ ಕುಳಿತು ಹಿಂದಿನ ಕಾಲದ ಬಗ್ಗೆ ಮಾತನಾಡುವುದು ಸುಲಭ ಅಲ್ಲ, ಅಂದಿನ ವಿಚಾರ, ವ್ಯವಹಾರ ಎಲ್ಲವನ್ನೂ ನೇರವಾಗಿ ಅರಿತು ಮಾತನಾಡಲು ಸಾಧ್ಯವಿಲ್ಲ, ಏನೋ ಎಲ್ಲಿಯೋ ಸಿಕ್ಕ ಕೆಲವು ಕುರುಹು, ಶಾಸನಗಳನ್ನು ಬಳಸಿ ಅಂದಾಜಿಸಬಹುದು ಅಷ್ಟೇ. ತಂತ್ರಜ್ಞಾನ ಮುಂದುವರೆದಿರುವುದರಿಂದ ಈ ದಿಸೆಯಲ್ಲಿ ಸ್ವಲ್ಪ ಸಹಾಯ ಕೂಡಾ ಆಗಬಹುದು, ಆದರೆ ಅಂದಿನ ಜನಗಳ ವಿಚಾರಧಾರೆ, ಮನಸ್ಥಿತಿ ಇವುಗಳ ಬಗ್ಗೆ ಹೇಳುವುದು ಕಷ್ಟಸಾಧ್ಯ.

ಶ್ರೀಶ್ರೀ ತತ್ತ್ವಭಾಗವತಮ್

ಆದರೆ ಅವರು ಕೆಲವು ಸಾವಿರ ವರ್ಷಗಳಷ್ಟು ಹಿಂದೆಯೇ ಕುಳಿತು, ಈಗಿನ ಕಾಲದ ವರ್ಣನೆ ಮಾಡಿದ್ದಾರೆ, ಅದರಲ್ಲಿ ಬಹಳಷ್ಟು ಈಗ ನಿಜವಾಗಿದೆ. ಅದೂ ಎಷ್ಟು ನಿಖರವಾಗಿ ಹೇಳಿದ್ದಾರೆಂದರೆ ಅದಕ್ಕೆ ಉದಾಹರಣೆ ಹೋಟೆಲುಗಳ ವಿಚಾರ, ಮುಂದೆ ಹೀಗೆ ಅನ್ನ ವಿಕ್ರಯ ನಡೆಯುತ್ತೆ ಅಂತ ಊಹಿಸುವುದೂ ವಿಶೇಷವೇ.

ಶಾಸ್ತ್ರ ಅನ್ನವನ್ನು ಮಾರಬಾರದು ಅಂತ ಹೇಳುತ್ತದೆ, ಯಾಕೆಂದರೆ, “ಸಂಪ್ರೀತಿ ಭೋಜ್ಯಾನಿ ಅನ್ನಾನಿ” ಅಂದರೆ ಪ್ರೀತಿಯನ್ನು ಸೇರಿಸಿ ಕೊಟ್ಟರೆ ಮಾತ್ರಾ ಅನ್ನವನ್ನು ಊಟಮಾಡಬೇಕು, ಅನಿವಾರ್ಯದಲ್ಲಿ ಅಂದರೆ ಆಪತ್ ಕಾಲದಲ್ಲಿ, ಪ್ರಾಣಕ್ಕೆ ಸಂಚಕಾರ ಬಂದಿರುವಾಗ ಮಾತ್ರಾ ಪ್ರೀತಿಯಿರದೆಯೂ ತಿನ್ನಬಹುದು. ಅದಕ್ಕೆ ಶ್ರೀಕೃಷ್ಣನೇ ಉದಾಹರಣೆ, ಅವನು ಇದೇ ಕಾರಣ ನೀಡಿ ದುರ್ಯೋಧನನ ಮನೆಯಲ್ಲಿ ಆಹಾರ ಸೇವನೆ ಮಾಡುವುದಿಲ್ಲ.

ಭಾರತವರ್ಷಕ್ಕೆ ಸಂಬಂಧಪಡದ ಹೊರಗಿನವರನ್ನು ಮ್ಲೇಚ್ಛರು ಎಂದು ಕರೆಯಲಾಗಿದೆ. ಅವರನ್ನು ತಾಮ್ರವದನರು ಎಂದೂ ಹೇಳಿದ್ದಾರೆ. ತಾಮ್ರಕ್ಕೂ ಮ್ಲೇಚ್ಛವರ್ಣ ಎಂದು ಹೇಳುತ್ತಾರೆ. ಬ್ರಿಟೀಷರ ಬಣ್ಣ ನೇರ ಮ್ಲೇಚ್ಛರಿಗೆ ಹೇಳಿದಂತೆಯೇ ಇದೆ. ಅವರನ್ನು ಅನಾಗರೀಕರು ಎಂದು ಹೇಳಲಾಗಿದೆ, ಅಂದರೆ ಸಂಸ್ಕಾರ ವಿಹೀನರು ಅಂತ ಅರ್ಥ. ಅವರಿಗೆ ಆಹಾರ ಬೇಯಿಸಿ ತಿನ್ನುವ ಕ್ರಮವೂ ಗೊತ್ತಿರಲಿಲ್ಲ ಅನ್ನುವ ಭಾವ. ಹಾಗೆಯೇ ಕಿರಾತರು ಅಥವಾ ತುರುಷ್ಕರು ಎಂದೂ ಕರೆದಿದ್ದಾರೆ, ಇದರರ್ಥ ಆಯುಧಗಳ ವ್ಯಾಪಾರ ಮಾಡುವವರು ಎಂದು. ಮ್ಲೇಚ್ಛ ಎನ್ನುವುದಕ್ಕೆ ಗೋಮಾಂಸಸೇವಿ ಎಂದು ಕೂಡಾ ಅರ್ಥ ಇದೆ. ಯಾವುದೇ ಆಚಾರ ಇಲ್ಲದವನು ಹಾಗೂ ಅತಿಯಾಗಿ ಮಾತಾಡುವವನು ಎಂದೂ ಹೇಳುತ್ತಾರೆ. ಇವರುಗಳ ಭಾಷೆ ಮಾತಾಡಬಾರದು ಅಂತ ಶಾಸ್ತ್ರ ಹೇಳುತ್ತದೆ! ಕಾರಣ ಆ ರೀತಿಯ ಸಂಸ್ಕಾರ ಕೂಡಾ ಜೊತೆಗೇ ಬರಬಹುದು ಅಂತ. ಇಂತಹವರು ಕಲಿಗಾಲದಲ್ಲಿ ರಾಜ್ಯಭಾರ ಮಾಡುತ್ತಾರೆ ಎಂದು ಹೇಳಿದೆ. ಈಗ ಹಿಂದಿರುಗಿ ನೋಡಿದರೆ ಅದು ನಿಜ, 1 ಸಾವಿರ ವರ್ಷಗಳ ಕಾಲ ಅವರೇ ನಮ್ಮನ್ನು ಆಳಿದರು.
ಅವರ ಆಡಳಿತದ ಬಗ್ಗೆ ಹೇಳುತ್ತಾ, ಅವರು ಪ್ರಜೆಗಳನ್ನು ಪೀಡಿಸಿ ದೋಚುತ್ತಾರೆ, ಮರಣ, ಅತ್ಯಾಚಾರ ಹಾಗೂ ಪರಂಪರೆಗೆ ವಿರುದ್ಧವಾದ ಕೆಲಸಗಳನ್ನು ಮಾಡಿಸುತ್ತಾರೆ ಎಂದಿದ್ದಾರೆ.

ಅಸಂಸ್ಕೃತರು, ನಿತ್ಯಕ್ರಿಯೆಗಳನ್ನು ಮಾಡುವುದಿಲ್ಲವಾದವರು ಹಾಗೂ ರಜ, ತಮೋಗುಣಗಳಿಂದ ಕೂಡಿದವರು ರಾಜರಾಗುತ್ತಾರೆ. ಅವರು ಸ್ತ್ರೀಯರು,ಬಾಲಕರು, ಗೋವುಗಳು ಹಾಗೂ ಬ್ರಾಹ್ಮಣರಿಗೆ ತೊಂದರೆಕೊಡುತ್ತಾರೆ.
ಆಳುವವರೇ ಸ್ತ್ರೀಯರನ್ನು ಪೀಡಿಸತೊಡಗಿದರೆ ಇನ್ನೇನು, ಇವರಿಗೆ ಪರರ ಸೊತ್ತು, ಹೆಂಡತಿ ಬೇಕು ಅಂತ ನಮ್ಮನ್ನು ದೋಚಿದರು.

ಅವರು ಹೋಗಿ ಈಗ ನಮ್ಮವರೇ ಬಂದರೂ ಅವರೂ ಮ್ಲೇಚ್ಛರ ತರಹವೇ, ಮೇಲೆ ಹೇಳಿರುವ ಎಲ್ಲ ತೊಂದರೆಗಳನ್ನೂ ಇವರೂ ಮಾಡುತ್ತಿದ್ದಾರೆ. ಮುಖ್ಯವಾಗಿ ಬ್ರಾಹ್ಮಣ ಪೀಡೆ, ಬ್ರಾಹ್ಮಣರು ಅಲ್ಪಸಂಖ್ಯಾತರಾದರೂ ಅವರೇ ಗುರಿಯಾಗುತ್ತಿದ್ದಾರೆ. ಇವರು ಅಲ್ಪಾಯಸ್ಸು ಹಾಗೂ ಅಲ್ಪ ಮನಸ್ಸಿನವರಾಗಿದ್ದರಿಂದ ಇರುವಷ್ಟು ದಿನ ದೋಚು ಎನ್ನುವ ಮನಸ್ಥಿತಿ ಇರುತ್ತದೆ. ಇವರಿಗೆ ಸಾಮರ್ಥ್ಯ ಹಾಗೂ ಆಯುಸ್ಸು ಎರಡೂ ಕಡಿಮೆ.

ಇವರ ಕೈಕೆಳಗಿನ ಜನರೂ ಅವರಂತೆಯೇ ಆಗುತ್ತಾರೆ, ಅವರ ರೀತಿಯದ್ದೇ ಚಿಂತನೆ, ಕೆಲಸ ಮತ್ತು ಮಾತುಕಥೆ, ತಮ್ಮಲ್ಲಿ ಪರಸ್ಪರ ಪೀಡೆಯನ್ನು ಉಂಟುಮಾಡುತ್ತಾರೆ.
ಅಧಿಕಾರಸ್ಥರ ಹಿಂದೆ ಒಂದು ವರ್ಗ ನಿರ್ಮಾಣ ಆಗುತ್ತೆ, ಅವರಿಗೆ ಇವರೇ ದೇವರಾಗುತ್ತಾರೆ, ಅವರಂತೆಯೇ ಬದುಕಲು ಪ್ರಾರಂಭ ಮಾಡುತ್ತಾರೆ, ಹಾಗಾಗಿ ಯಾರು ನಮ್ಮನ್ನು ಆಳಬೇಕೆಂಬುದು ಅತೀ ಮುಖ್ಯ. ಯಾರು ನಮ್ಮನ್ನು ಆಳುತ್ತಾನೋ ಅವರ ಪ್ರಭಾವ ನಮ್ಮ ಮೇಲೆ ಅಗುತ್ತದೆ.

ಕಲಿಯುಗದಲ್ಲಿ ಕ್ಷೀಣಿಸುವ ವೇಗ ಹೆಚ್ಚು, ಶಮ, ಸತ್ಯ, ಕ್ಷಮಾ, ದಯೆ ಎಲ್ಲವೂ ಕಡಿಮೆಯಾಗುತ್ತೆ. ಆಯಸ್ಸೂ ಕಡಿಮೆ ಆಗುತ್ತದೆ. ಮುಂದೆ ಮನುಷ್ಯನ ಆಯಸ್ಸು ಬರಿಯ 16 ವರ್ಷ ಆಗುತ್ತದೆ ಅಂತ ಹೇಳಿದೆ. ಕೊನೆಯಲ್ಲಿ ಸ್ಮೃತಿನಾಶ. ಲಿಪಿ ಬರುವುದಕ್ಕೆ ಮೊದಲು ಸ್ಮೃತಿಯಲ್ಲೇ ವಿದ್ಯೆ ಮುಂದುವರೆಯುತ್ತಿತ್ತು , ನಂತರ ದೌರ್ಬಲ್ಯದಿಂದಾಗಿ ಸ್ಮೃತಿ ಕಡಿಮೆಯಾಗಿ ಈ ಸ್ಥಿತಿ ಬಂದಿದೆ. ಶರೀರವೂ ಹಾಗೆಯೇ, ಸರಿಯಾಗಿ ಬಳಕೆಯಾಗದಿದ್ದರೆ ಕ್ಷೀಣವಾಗುತ್ತದೆ.

ರಾಮಾಯಣವೂ ವಾಚೋವಿಧೀಯ, ಲವಕುಶರು ಅದನ್ನು ವಾಲ್ಮೀಕಿಗಳ ಬಾಯಿಂದ ಕೇಳಿ ಬಾಯಲ್ಲಿಯೇ ಹೇಳಿದರು. ಇದು ಸಾಧ್ಯವೇ ಎಂದರೆ ಸಾಧ್ಯ, ಉಪಕರಣಗಳ ಬಳಕೆ ಹೆಚ್ಚಾದಂತೆ ಅಂತಃಕರಣದ ಶಕ್ತಿ ಕಡಿಮೆಯಾಗುತ್ತದೆ. 20 ವರ್ಷಗಳ ಅವಸ್ಥೆ ಕೇವಲ 5 ವರ್ಷಗಳಲ್ಲಿ ಮುಗಿದರೆ ಎಲ್ಲವೂ ಬೇಗ ಮುಗಿಯುತ್ತದೆ, ಹಾಗಾಗಿ ಸಾವು ಕೂಡಾ ಬೇಗ.

ಕಲಿಯುಗದಲ್ಲಿ ಹಣವೇ ಮುಖ್ಯವಾಗುತ್ತದೆ, ಕುಲ, ಆಚಾರ, ಗುಣ ಯಾವುದಕ್ಕೂ ಬೆಲೆ ಇರಲಾರದು. ವಿತ್ತವೇ ಅವಕ್ಕೆಲ್ಲವಕ್ಕೂ ಪ್ರಮಾಣ. ಹಿಂದೆ ವ್ಯಾಸ ವಸಿಷ್ಠರಂತಹವರು ಸಭೆಗೆ ಬಂದರೆ ಸಭೆ ಎದ್ದು ನಿಲ್ಲುತ್ತಿತ್ತು, ಅವರಲ್ಲಿ ಅಂತಹ ಬಲ ಏನಿತ್ತು ಅಂದರೆ ಅವರು ಜ್ಞಾನವೃದ್ಧರು, ಆದರೆ ಈಗ ಹಣವೇ ಮುಖ್ಯ.
ಹಾಗೆಯೇ ಕಲಿಗಾಲದಲ್ಲಿ ಧರ್ಮಾಧರ್ಮ ಹಾಗೂ ನ್ಯಾಯಾನ್ಯಾಯಗಳ ಬಗ್ಗೆ ಹೇಳಬೇಕಾದವನು ಬಲವಂತನಾಗಿದ್ದರೆ ಸಾಕು.
ದಾಂಪತ್ಯಕ್ಕೆ ಇಷ್ಟವಾಗುವುದೇ ಕಾರಣ, ಆದರೆ ನಿಜವಾಗಿ ಎರಡೂ ಪರಂಪರೆ, ಕುಲ, ಶರೀರದ ಸ್ಥಿತಿಗತಿ ಇತ್ಯಾದಿಗಳನ್ನು ನೋಡಿ ಕೂಡಿಸಬೇಕು. ಇಂದು ಮಾಯೆಯೇ ವ್ಯವಹಾರ, ಅಂದರೆ ಕಣ್ಕಟ್ಟು ಮಾಡಿದ್ದು ಅಂತ.
ಜನಿವಾರ ಇದ್ದರೆ ಸಾಕು ಅವನು ಬ್ರಾಹ್ಮಣ, ಆಶ್ರಮಗಳು ಕೇವಲ ಚಿಹ್ನೆಗಳಿಂದಾಗಿ ಆಚರಣೆಗಳೇ ಇಲ್ಲ, ಯಾರು ಪಂಡಿತನೆನಿಸಿಕೊಳ್ಳವನೆಂದರೆ, ಅತಿಯಾಗಿ ಬಾಯಿಗೆ ಬಂದಂತೆ ಮಾತಾಡುತ್ತಾನೋ ಅವನು. ಬಡವನಾದರೆ ಸಾಕು ಅವನನ್ನು ಕೆಟ್ಟವನು ಅಂತ ಹಣೆಪಟ್ಟಿ ಹಚ್ಚಿಬಿಡಬಹುದು, ಸಾಧು ಅನ್ನಿಸಿಕೊಳ್ಳಬೇಕಾದರೆ ಬೂಟಾಟಿಕೆ ಇರಬೇಕು. ವಿವಾಹ ಅಂದರೆ ಇಂದು ಬರೇ ಒಂದು ಹೆಣ್ಣನ್ನು ಕರೆದುಕೊಂಡು ಹೋಗುವುದು ಅಂತ, ಲಿವಿಂಗ್ ಟುಗೆದರ್ ವ್ಯವಸ್ಥೆ ಹೀಗೆಯೇ ಆಗಿರುವುದು! ಮೈಗೆ ಪ್ರಸಾಧನಗಳನ್ನು ಹಚ್ಚಿಕೊಳ್ಳುವುದೇ ಸ್ನಾನ ಆಗಿದೆ, ವಾಸ್ತವದಲ್ಲಿ ಸ್ನಾನದಲ್ಲಿ ಕಳೆದುಕೊಳ್ಳುವುದು ಇದೆ ಆದರೆ ಇಲ್ಲಿ ಮೈಗೆ ತುಂಬಿಕೊಳ್ಳುತ್ತೇವೆ, ತನ್ನ ಕುಟುಂಬದ ಪೋಷಣೆಯೇ ದಕ್ಷತೆ ಅನ್ನಿಸಿಕೊಳ್ಳುತ್ತದೆ. ಧರ್ಮಕಾರ್ಯಗಳನ್ನು ಮಾಡುವುದು ಕೇವಲ ಹೆಸರಿಗಾಗಿ, ಢಂಬಾಚರಣೆ.

ಹೀಗೆ ರಾಜರು ಕೆಟ್ಟು, ಪ್ರಜೆಗಳು ಕೆಟ್ಟು ಅಂತಹವರಿಂದಲೇ ಭೂಮಿ ತುಂಬಿದರೆ ಅದೇ ಕಲಿ.
ಯಾರು ಬಲವಂತನೋ ಅವನೇ ರಾಜ, ಹೆಸರಿಗೆ ಮಾತ್ರಾ ರಾಜ. ಆದರೆ ಸ್ವಭಾವ ಕಳ್ಳರದ್ದು, ಕರುಣೆಯೇ ಇಲ್ಲದೇ ಅವರು ಬೇರೆಯವರ ಹಣಕ್ಕಾಗಿ ಬಾಯಿಬಾಯಿ ಬಿಡುತ್ತಾರೆ. ತಮ್ಮ ಪ್ರಜೆಗಳನ್ನೇ ಲೂಟಿಮಾಡುತ್ತಾರೆ.
ರಾಜರು ಪ್ರಜೆಗಳ ಹಣ ಹಾಗೂ ಹೆಂಡಿರನ್ನು ಕಸಿದುಕೊಂಡು ಊರು ಬಿಡುವಂತೆ ಮಾಡುತ್ತಾರೆ, ಸಿಕ್ಕಿದ್ದನ್ನು ತಿಂದುಕೊಂಡು ಬದುಕುವಂತೆ ಮಾಡುತ್ತಾರೆ, ಶೀತ, ವಾತ, ಆತಪಗಳಿಂದ ಜನರು ಪೀಡೆಗೊಳಗಾಗುತ್ತಾರೆ. ಚಿಂತೆಯೂ ಸೇರಿ ಆಯುಸ್ಸು ಕಡಿಮೆ ಆಗಿ ನೆಪಮಾತ್ರಕ್ಕೆ ಬದುಕುತ್ತಾರೆ.

ವೇದಗಳಿಂದ ಪತಿತ ಜೀವನ, ಪಾಖಂಡ ಮತ ಆಚರಣೆ, ಕಳ್ಳರೇ ರಾಜರಾಗಿ ಮನುಷ್ಯರಲ್ಲಿ ಕಳ್ಳತನ, ವೃಥಾ ಹಿಂಸೆ ಇದೆಲ್ಲಾ ಬೆಳೆಯುತ್ತದೆ. ವರ್ಣಾಶ್ರಮಧರ್ಮ ನಷ್ಟವಾಗುತ್ತದೆ, ಕುರಿಯ ಬೆಲೆಯಷ್ಟೇ ಗೋವಿಗೆ ಬರುತ್ತದೆ, ಸಂಬಂಧಿಗಳಲ್ಲಿ ಭಾವಶೂನ್ಯತೆ ಆವರಿಸಿ ಬಂಧವೇ ಇರದಂತೆ ಆಗುತ್ತದೆ. ಧಾನ್ಯಗಳು ಚಿಕ್ಕದಾಗಿ ಬೆಳೆಯುತ್ತವೆ. ಮುಳ್ಳಿನ ಮರಗಳು ಹೆಚ್ಚಾಗಿ ಬೆಳೆಯುತ್ತವೆ. ಮೋಡಗಳಲ್ಲಿ ಬರೇ ಮಿಂಚು, ಮಳೆಯೇ ಬರುವುದಿಲ್ಲ.
ದೊಡ್ಡದೊಡ್ಡ ಮನೆಗಳು ಆದರೆ ಕಡಿಮೆ ಜನ, ನಿರ್ಜನ ಗೃಹಗಳು, ಪರಸ್ಪರ ಮಾತುಕಥೆ ಕೂಡಾ ಕಡಿಮೆ ಆಗುತ್ತದೆ.

ಜನರು ಕೃತಯುಗದಲ್ಲಿ ಅಸ್ಥಿಗತ ಪ್ರಾಣರಾಗಿದ್ದರು, ತ್ರೇತೆಯಲ್ಲಿ ಮಾಂಸಗತ ಪ್ರಾಣರಾಗಿದ್ದರು, ದ್ವಾಪರದಲ್ಲಿ ರಕ್ತಗತ ಪ್ರಾಣರಾಗಿದ್ದರು, ಕಲಿಯುಗದಲ್ಲಿ ಕೇವಲ ಅನ್ನಗತ ಪ್ರಾಣರು ಅಂದರೆ ಅನ್ನವಿಲ್ಲದಿದ್ದರೆ ಜೀವಹಾನಿಯಾಗುತ್ತದೆ.

ಇನ್ನೂ ಹೇಳಿದೆ, ಅಗ್ನಿಹೋತ್ರ ನಾಶವಾಗುತ್ತದೆ, ಪೂಜೆ ನಾಶವಾಗುತ್ತದೆ, ಚಿಕ್ಕಮಕ್ಕಳು ಹೆರುತ್ತಾರೆ, ಇದಂತೂ ಅಕ್ಷರಶಃ ನಿಜ ಈಗಿನ ವಿಪರೀತ ಆಹಾರ ಸೇವನೆಯಿಂದಾಗಿ ಹೆಣ್ಣುಮಕ್ಕಳು ಬೇಗನೇ ಋತುಮತಿಯರಾಗುತ್ತಿದ್ದಾರೆ, ಹಾಗೂ ಮಕ್ಕಳನ್ನು ಹೆರುತ್ತಿದ್ದಾರೆ.

ಕಲಿಸಂತರಣ ಹೇಗೆ ಮಾಡುವುದು ಎಂದರೆ, ನಾವು ಕಲಿಗೆ ಒಳಗಾಗಬಾರದು ಅಂದರೆ ಕೆಡುಕಿಗೆ ಅವಕಾಶ ಕೊಡಬಾರದು. ಹಾಗೂ ಈ ಮಂತ್ರವನ್ನು ಸಂಕೀರ್ತನೆ ಮಾಡುವುದು. ಹಿಂದಿನ ಯುಗಗಳನ್ನು ಕರೆಯುವುದು.

ಕಲಿಯುಗದ ಆರಂಭದಲ್ಲಿ ನಾರದರೇ ಕಲಿಯ ಪ್ರಭಾವ ಕಂಡು ಚಿಂತಿತರಾಗಿ ಬ್ರಹ್ಮದೇವರಲ್ಲಿ ಮೊರೆಯಿಡುತ್ತಾರೆ, “ಈ ಜನರನ್ನು ಕಲಿಯುಗದಲ್ಲಿ ಯಾವುದು ಕಾಪಾಡುತ್ತದೆ?” ಅಂತ. ಆಗ ಬ್ರಹ್ಮದೇವರು ನಾರದರಿಗೆ ಉಪದೇಶ ಮಾಡಿದ ಮಂತ್ರವೇ “ಹರೇರಾಮ ಹರೇರಾಮ ರಾಮರಾಮ ಹರೇಹರೇ, ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ”. ಇದು ಕಲಿಯ ಬಿಸಿ ನಮಗೆ ತಟ್ಟದಂತೆ ಕಾಪಾಡುತ್ತದೆ. ಈ ವಾಕ್ಯವಿಶೇಷ ಗಮನಿಸಿ, ಯಥಾರ್ಥ ಇದು ವಾಕ್ಯವೇ ಅಲ್ಲ. ಇದರಲ್ಲಿ ಕ್ರಿಯಾಪದವಿಲ್ಲ, ಕೇವಲ ಸಂಬೋಧನೆ ಮಾತ್ರಾ. ಇಂತಹ ಇನ್ನೊಂದು ವಾಕ್ಯ ಸಾಹಿತ್ಯಲೋಕದಲ್ಲಿ ನಿಮಗೆ ಸಿಗುವುದಿಲ್ಲ. ಇಲ್ಲಿ ಬರೇ ಕರೆಯೋದು ಮಾತ್ರಾ. ಇದರ ಮರ್ಮ ಏನೆಂದರೆ, ಅವನು ನಮ್ಮ ಮೊರೆಗೆ ಓಗೊಟ್ಟು ಒಮ್ಮೆ ತಿರುಗಿನೋಡಿದರೂ ಸಾಕು ಆ ಅವನ ದೃಷ್ಟಿ ಒಮ್ಮೆ ನಮ್ಮಮೇಲೆ ಬಿದ್ದರೆ ಸಾಕು ಕಲಿಯುಗ ಹೋಗಿ ಕೃತಯುಗವಾಗಿ ಬಿಡುತ್ತದೆ. ಅವನನ್ನು ಹೇಗಾದರೂ ನಮ್ಮಕಡೆ ತಿರುಗಿಸಿಕೊಳ್ಳಲಿಕ್ಕಾಗಿಯೇ ಕರೆಯುವುದು.

ಇಷ್ಟು ಹೊತ್ತೂ ಕಲಿಯ ಕೆಟ್ಟತನವನ್ನು ನೋಡಿದೆವು ಇನ್ನು ಅವನ ಒಳ್ಳೆಯತನದ ಬಗ್ಗೆ ತಿಳಿಯೋಣ, ಕೃತಯುಗದಲ್ಲಿ ಭಗವದಾರಾಧನೆಗೆ ಧ್ಯಾನಮಾರ್ಗ, ತ್ರೇತೆಯಲ್ಲಿ ಯಜ್ಞ, ದ್ವಾಪರದಲ್ಲಿ ಪೂಜೆ, ಆದರೆ ಕಲಿಯಲ್ಲಿ ಕೇವಲ ನಾಮಸಂಕೀರ್ತನೆ, ಅಷ್ಟೇ ಸಾಕು ಆ ದೇವನನ್ನು ಒಲಿಸಿಕೊಳ್ಳಲು. ಇಲ್ಲಿ ಅಲ್ಪಪ್ರಯತ್ನಕ್ಕೆ ಮಹತ್ ಫಲ ಸಿಗುತ್ತೆ. ಕೇವಲ ಮೂರುಘಳಿಗೆ ತದೇಕಚಿತ್ತನಾಗಿ ಈಶ್ವರನ ಪೂಜೆ ಮಾಡಿದರೆ ಅವನು ಈಶ್ವರನೇ ಆಗುತ್ತಾನೆ ಎನ್ನುವ ನಂಬಿಕೆ ಇದೆ. ಆದರೆ ಕಲಿಗಾಲದ ಕಷ್ಟವೆಂದರೆ ಕಲಿಯು ಅದಕ್ಕೂ ಅವಕಾಶ ಮಾಡಿಕೊಡುವುದಿಲ್ಲ.

ಕಲಿ ದೋಷಗಳ ಆಗರ, ಆದರೆ ಒಂದೇ ಗುಣವೆಂದರೆ ಕೃಷ್ಣಕೀರ್ತನೆಯಿಂದ ಮುಕ್ತಿ ಸಿಗುತ್ತದೆ. ಮಹಾಭಾರತದ ವನಪರ್ವದಲ್ಲಿ ನಳಚರಿತ್ರೆ ಬರುತ್ತದೆ, ಅವನ ಕಥಾಶ್ರವಣ ಮಾಡುವುದರಿಂದ ಕಲಿದೋಷಗಳು ನಾಶವಾಗುತ್ತದೆ ಎಂದೂ ಹೇಳಲಾಗಿದೆ, ಹಾಗಾಗಿ ಇನ್ನು ಮುಂದೆ ನಳಚರಿತ್ರೆಯ ಪಠಣ ಮಾಡೋಣ. ಬರೀ ಸಮಸ್ಯೆಗಳ ಪಟ್ಟಿಮಾಡಿಕೊಟ್ಟರೆ ಸಾಕಾಗದು ಅಲ್ಲವಾ ಅದರ ನಿವಾರಣೋಪಾಯವನ್ನೂ ಹೇಳಬೇಕು, ಇದೇ ಅದರ ಪರಿಹಾರ.

ಇಂದು ಕಲ್ಕಿಯ ಜಯಂತಿ, ಕಲಿಯನ್ನು ನಿಗ್ರಹಿಸಿದ ವಿಷ್ಣುವಿನ ದಶಾವತಾರದಲ್ಲಿ ಬರುವ ಕೊನೆಯ ಅವತಾರ. ಅವನ ನೆನಪಿನಲ್ಲಿ ಒಂದು ವಿಶೇಷದಿನ ಆಕಸ್ಮಿಕವಾಗಿ ಬಂದೊದಗಿದೆ. ಅವನ ನೆನಪು ಮಾಡಿಕೊಂಡು ಕಲಿಯಿಂದ ದೂರವಾಗೋಣ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments