#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
04-08-2018:

ಭಾಗವತ ರಸಂ ಆಲಯಂ ಪಿಬತ: ಭಾಗವತ ರಸವನ್ನು ಲಯದವರೆಗೆ ಪಾನ ಮಾಡಿ. ಭಾಗವತ ರಸವನ್ನು ಬಾರಿ ಬಾರಿ ಸವಿಯಿರಿ, ಆಳವಾಗಿ ಸವಿಯಿರಿ.

ತತ್ತ್ವಭಾಗವತಮ್

ಭಾಗವತ ಅಥವಾ ಭಗವಂತನೊಂದಿಗೆ ನಾವು ಲಗ್ನರಾದರೆ ಸಾಲದು, ಮಗ್ನರಾಗಬೇಕು. ಮಗ್ನರಾದರೆ ಸಾಲದು ಲೀನವಾಗಬೇಕು.
3 ಹಂತಗಳು:
ತಗಲಿದರೆ ಸಾಕು..ಅಂಟಿಕೊಂಡರೆ ಸಾಕು ಅದು ಲಗ್ನ. ಮುಳುಗಬೇಕು, ಆಳಕ್ಕಿಳೀಬೇಕು ಅದು ಮಗ್ನ. ನಮ್ಮ ಪ್ರತ್ಯೇಕತೆ ಉಳಿಯದಂತೆ ನಾವು ಲೀನವಾಗಬೇಕು..ಸಂಪೂರ್ಣ ಒಂದಾಗಬೇಕು ಅದು ಲೀನ.
ಲಗ್ನ,ಮಗ್ನ,ಲೀನ ಸ್ಥಿತಿಗಳು ನಮಗೆ ಬರಬೇಕು ಅದಕ್ಕಾಗಿ ಭಾಗವತವನ್ನು ಆಳಕ್ಕಿಳಿದು ಕೇಳಬೇಕು. ಪೂರ್ಣವಾಗಿ ಕೇಳಬೇಕು ಎನ್ನುವಾಗ ಆಲಯ ಎಂಬ ಪದವನ್ನ ಬಳಸಲಾಗಿದೆ. ಅಂತಃಕರಣ ಭಗವಂತನಲ್ಲಿ ಲೀನವಾಗುವವರೆಗೆ ಭಾಗವತ ರಸವನ್ನು ಪಾನ ಮಾಡಿ.

ಭಗವಂತನ ಮಾತ್ರವಲ್ಲ, ಭಾಗವತ ಮಾತ್ರ ಅಲ್ಲ ಯಾವದನ್ನಾದರೂ ನಾವು ಆಳಕ್ಕಿಳಿದು, ಎಲ್ಲ ಕೋನಗಳಿಂದ, ಪೂರ್ಣವಾಗಿ ನೋಡಬೇಕು.

ಅವಸರದಲ್ಲಿ ಏನನ್ನೂ ಮಾಡಬಾರದು
ಅವಿವೇಕ ಆಪತ್ತುಗಳ ನೆಲೆ.
ವಿಮರ್ಶೆ ಮಾಡಿ ಕಾರ್ಯಮಾಡುವವನನ್ನು ಸಂಪತ್ತು ಅರಸಿಕೊಂಡು ಬರುತ್ತದೆ ಇದು ಕವಿ ಭಾರವಿಯ ಭಾವ.

ಆಳಕ್ಕಿಳಿದು ನೋಡದೆ ನಿರ್ಣಯ ಮಾಡಬಾರದೆನ್ನುವುದು ಭಾರವಿಯ ಭಾವ ಮಾತ್ರವಲ್ಲ..ಅನುಭವವೂ ಕೂಡ

ಚಿಕ್ಕವಯಸ್ಸಿನಲ್ಲೆ ಕವಿಯಾಗಿದ್ದ ಭಾರವಿಯು ಊರಿನವರೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದ ಆದರೆ ಮಹಾಪಂಡಿತರಾದ ಅವನ ತಂದೆಯು ಪ್ರತಿಬಾರಿಯು ಕವಿತ್ವದಲ್ಲಿ ತಪ್ಪನ್ನು ಹುಡುಕುತ್ತಿದ್ದರು.
ತಂದೆಯ ಮೇಲೆ ಕುಪಿತನಾದ ಭಾರವಿಯು ಅಟ್ಟದ ಮೇಲಿಂದ ತಂದೆಯ ತಲೆಯ ಮೇಲೆ ಕಲ್ಲು ಹಾಕಬೇಕೆಂಬ ಅವಿವೇಕದ ನಿರ್ಣಯವನ್ನು ಕೈಗೊಂಡನು. ಕಲ್ಲು ಎತ್ತಿ ಹಾಕಲು ಅಟ್ಟದ ಮೇಲೆ ಭಾರವಿಯು ಏರಲಾಗಿ, ತಂದೆ ತಾಯಿಯರ ಸಂಭಾಷಣೆಯನ್ನು ಕೇಳಿಸಿಕೊಂಡನು.

ಕವಿತ್ವದಲ್ಲಿ ತನಗಿಂತಲೂ ನೂರು ಪಾಲು ಶ್ರೇಷ್ಠ ಭಾರವಿ..ಎಲ್ಲೋ ಮಧ್ಯೆ ನುಸುಳುವ ಲೋಪದೋಷಗಳನ್ನು ತಿದ್ದಿದರೆ ಅದಿನ್ನೂ ಶ್ರೇಷ್ಠವಾಗುತ್ತದೆ ಅದಕ್ಕಾಗಿ ತಪ್ಪನ್ನು ಎತ್ತಿ ತೋರಿಸುತ್ತಿರುವುದಾಗಿ ತಂದೆಯು ತಾಯಿಯ ಬಳಿ ಹೇಳತ್ತಿರುವುದನ್ನು ಕೇಳಿದ ಭಾರವಿಗೆ ಆಘಾತವಾಯಿತು.

ಪ್ರತಿಕ್ಷಣ ತನ್ನ ಹಿತಬಯಸುವ ತಂದೆಗೆ ಕೇಡು ಮಾಡ ಹೊರಟ ತನ್ನ ಬಗ್ಗೆ ತಾನೇ ತಾತ್ಸರಗೊಂಡ ಭಾರವಿಯು ತಂದೆಯ ಬಳಿ ವಿಷಯ ತಿಳಿಸಿ ಕ್ಷಮೆ ಯಾಚಿಸಿ ತಪ್ಪಿಗೆ ಶಿಕ್ಷೆ ನೀಡುವಂತೆ ಕೇಳಿಕೊಂಡನು.
6 ತಿಂಗಳು ಮಾವನ ಮನೆಯಲ್ಲಿ ಇರು ಎಂದು ಭಾರವಿಯ ತಂದೆ ಭಾರವಿಗೆ ಇದೇ ಶಿಕ್ಷೆ ಅನುಭವಿಸು ಎಂದರು.
ಅನಿರೀಕ್ಷಿತವಾಗಿ ಮಾವನ ಮನೆಗೆ ಬಂದ ಅಳಿಯ ಭಾರವಿಯನ್ನು ಮೊದಲು ಸಂಭ್ರಮದಿಂದ ಸ್ವಾಗತಿಸಿದರು.
ದಿನಕಳೆದಂತೆ ಮಾವನ ಮನೆಯ ಸತ್ಕಾರ ಕಡಿಮೆ ಆಗುತ್ತಾ ಬಂತು ಭಾರವಿಗೆ.
ಕೆಲವು ಸಮಯ ಕಳೆಯಲು ಮಾವನ ಮನೆಯಲ್ಲಿ ಸಂಪೂರ್ಣ ನಿರ್ಲಕ್ಷಕ್ಕೊಳಗಾದ ಭಾರವಿಗೆ ತಂದೆಯು ನೀಡಿದ ಶಿಕ್ಷೆಯು ಅರ್ಥವಾಯಿತು.

ಇಂತಹ ಸಂದರ್ಭದಲ್ಲಿರುವ ಭಾರವಿಯ ರಚಿಸಿದ ಸುಭಾಷಿತವಿದು: ಅವಸರದಲ್ಲಿ ಏನನ್ನೂ ಮಾಡಬಾರದು. ವಿವೇಕ ಬೇಕು, ಆಳಕ್ಕಿಳಿದು, ಎಲ್ಲಾ ದೃಷ್ಟಿಯಿಂದ ನೋಡಿ ಮಾಡಬೇಕು.

Stop,think,proceed..ನಿಂತು ಆಳಕ್ಕಿಳಿದು ಆಮೇಲೆ ಮುಂದುವರಿಯಬೇಕು.
ಜೀವನದಲ್ಲಿ ಬರುವ ಸನ್ನಿವೇಶಗಳಲ್ಲಿ ಆಳಕ್ಕಿಳಿದು ವಿವೇಕದಿಂದ ನಿರ್ಣಯ ತೆಗೆದುಕೊಳ್ಳಬೇಕು.
ಆಧ್ಯಾತ್ಮದ ಎಲ್ಲಾ ನಿಯಮಗಳು ನಮ್ಮ ನಿತ್ಯ ಜೀವನಕ್ಕೂ ಉಪಯೋಗವಾಗುವಂತಹವು, ಸಾಧಾರಣ ಜೀವನಕ್ಕೆ ತುಂಬಾ ಪ್ರಯೋಜನವಾಗುವಂತಹವು.

ಜೀವನದಲ್ಲಿ ಆಳಕ್ಕಿಳಿದು ವಿಚಾರ ಮಾಡಿದರೆ, ತಿಳಿದು ಹೆಜ್ಜೆ ಇಟ್ಟರೆ ಎಷ್ಟೋ ಅನರ್ಥಗಳು ತಪ್ಪುತ್ತವೆ.
ಇನ್ನೊಂದು ಮಜಲಿನಲ್ಲಿ ಯಾವುದಾದರೂ ಒಂದೇ ವಿಷಯದ ಆಳಕ್ಕಿಳಿದರೆ ಅಲ್ಲಿ ಸಿದ್ಧಿಯಾಗತ್ತದೆ, ಅದು ಒಲಿಯತ್ತದೆ.

ಒಂದು ಜನ್ಮಕ್ಕೆ ಒಂದೇ ಶಾಸ್ತ್ರ. ಆ ಒಂದಕ್ಕೆ ನಮ್ಮ ಪಾತಿವ್ರತ್ಯವಿರಬೇಕು. ಹಗಲಿರುಳು ಆ ಒಂದನ್ನೇ ಧ್ಯಾನಿಸಬೇಕು. ಹಾಗೆ ಒಂದು ವಿಷಯದ ಜೊತೆಗಿದ್ದರೆ ಆ ವಿಷಯ ಸಿದ್ಧಿಯಾಗುತ್ತದೆ. ಅಲ್ಲಿ ಪರಿಪೂರ್ಣತೆ ಪ್ರಾಪ್ತಿಯಾಗುತ್ತದೆ.

ಆಳಕ್ಕಿಳಿ ಎಂಬ ಭಾವದಲ್ಲಿಯೂ ಭಾಗವತದ ಆಲಯಂ ಎಂಬ ಪದ ಬಳಕೆಯಾಗಿದೆ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments