#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
11-09-2018:

ಕಳೆಯುವ ಲೆಕ್ಕವೂ ಅಲ್ಲಿಯೇ ಇದೆ, ಕೂಡುವ ಲೆಕ್ಕವೂ ಅಲ್ಲಿಯೇ ಇದೆ. ಆ ಕೃಷ್ಣನ ಚರಣಗಳಲ್ಲಿ

ತತ್ತ್ವಭಾಗವತಮ್

ಯೇ ಕೂಡುವ, ಕಳೆಯುವ ಎರಡೂ ಲೆಕ್ಕಗಳಿವೆ. ದುರ್ದೆಸೆ ಬಂದಾಗ ಅವನೇ ಕಳೆಯುತ್ತಾನೆ, ಭಾಗ್ಯ ಬಂದಾಗ ಕೂಡಿಸುತ್ತಾನೆ. ಬದುಕಿನಲ್ಲಿ ಏನೇ ಬರಲಿ ಅವನ ಚರಣಗಳಲ್ಲಿ ನಮ್ಮನ್ನು ಕೂಡಿಸಲಿ ಅಂತ ಅವನಲ್ಲಿ ಪ್ರಾಥಿ೯ಸೋಣ.

ಯಾವುದು ಅಸಾಧ್ಯ ಎಂಬುದಾಗಿ ಋತುಪರ್ಣ ಭಾವಿಸಿದ್ದನೋ, ಅದು ಸಾಧ್ಯವಾಗಿದೆ. ವಿದರ್ಭವನ್ನು ತಲುಪಿದ್ದಾನೆ. ಅಲ್ಲಿ ತಲುಪಲಿಕ್ಕಾಗಿ ಅವನಿಗೆ ಇದ್ದದ್ದು ಕೇವಲ 1 ದಿನದ ಕಾಲಾವಕಾಶ ಮಾತ್ರ, ಆದರೆ ಅದನ್ನು ಕೇವಲ ಒಂದೇ ಹಗಲಿನಲ್ಲಿಯೇ ಕಳೆದಿದ್ದಾನೆ. ಅದರಲ್ಲಿಯೂ ಮಧ್ಯೆ ಅಶ್ವಗಳ ಪರೀಕ್ಷಿಸಲು ಬಾಹುಕ ಕಳೆದ ಸಮಯ, ಋತುಪರ್ಣನ ಅಂಗವಸ್ತ್ರ ಬಿದ್ದದ್ದು, ಮರದಲ್ಲಿನ ಎಲೆ, ಹಣ್ಣುಗಳ ಲೆಕ್ಕಹಾಕಿದ್ದು, ಅಕ್ಷವಿದ್ಯಾ ಪ್ರದಾನ, ಕಲಿಯ ವಿಲಪನ ಇವುಗಳಿಗಾಗಿ ಸಾಕಷ್ಟು ಕಾಲ ವ್ಯಯವಾಗಿದೆ. ಸಂಜೆಯ ಹೊತ್ತಿಗೆ ಕುಂಡಿನಪುರವನ್ನು ಸೇರಿದ್ದಾರೆ. ಆದರೆ ಅಲ್ಲಿ ಸ್ವಾಗತಕ್ಕೆ ಯಾವುದೇ ಸಿದ್ಧತೆ ಇರಲಿಲ್ಲ. ಅದರಲ್ಲಿಯೂ ಇವರ ರಥ ಪುರಪ್ರವೇಶ ಮಾಡಿದಾಗ ಅದನ್ನು ನೋಡಿ ದ್ವಾರರಕ್ಷಿತರು ಅಚ್ಚರಿಗೊಂಡರು, ಇದೇನು ಅನಿರೀಕ್ಷಿತ ಎನ್ನುವಂತೆ. ಅವರಿಗೂ ಅಯೋಧ್ಯೆಯ ಅರಸ ಬರುವ ಮಾಹಿತಿ ಇರಲಿಲ್ಲ. ದಮಯಂತಿಯ ಈ ತಂತ್ರ ಬೇರಾರಿಗೂ ಅರಿವಿರಲಿಲ್ಲ ಅಲ್ಲವೇ! ಕಡೆಗೆ ಕಾವಲುಭಟರು ಹಾಗೂ ಪುರಜನರು ಭೀಮರಾಜನಿಗೆ ಸುದ್ದಿ ಮುಟ್ಟಿಸಿದರು. ಅವನಿಗೆ ಮತ್ತೂ ಆಶ್ಚರ್ಯ, ಇದ್ದಕ್ಕಿದ್ದಂತೆ ಹೀಗೇನು ಆಗಮನ ಎಂದು. ಆದರೂ ಸಾವರಿಸಿಕೊಂಡು ಸ್ವಾಗತದ ವ್ಯವಸ್ಥೆ ಮಾಡಿದ. ಪರರಾಜ್ಯದೊಳಗೆ ಪ್ರವೇಶಿಸಲು ಅನುಮತಿ ಅಗತ್ಯವಲ್ಲವೇ! ಸಾಮಾನ್ಯ ಜನಗಳಾಗಿದ್ದರೆ ದಿನಗಟ್ಟಲೆ ಹೊರಗೇ ಕಾಯಬೇಕಾಗಿತ್ತು. ರಾಜನಾದ್ದರಿಂದ ಪ್ರತ್ಯೇಕ ವ್ಯವಸ್ಥೆ.

ಕುಂಡಿನಪುರವನ್ನು ಋತುಪರ್ಣನ ರಥ ಪ್ರವೇಶ ಮಾಡಿತು, ಮಾಡುವಾಗಲೇ ಗಂಭೀರವಾದ ಧ್ವನಿಯನ್ನು ದಶದಿಕ್ಕುಗಳಲ್ಲಿಯೂ ಮಾಡುತ್ತಾ ಪ್ರವೇಶಿಸಿತು. ಅದು ನಳನ ಹಿರಿಮೆ, ಅಂದರೆ ಅವನ ರಥ ನಡೆಸುವ ವಿಧಾನ, ವೈಶಿಷ್ಟ್ಯತೆ ಅದು. ಅವನು ಕೇವಲ ಪ್ರಾಣಿಗಳನ್ನಲ್ಲದೇ ಇತರ ಅಚೇತನ ವಸ್ತುಗಳನ್ನೂ ಸಹಾ, ಅಂದರೆ ರಥವನ್ನು ಕೂಡಾ ಮಾತನಾಡಿಸಿ ಸಂತೈಸುವ ಪ್ರತಿಭಾ ಸಂಪನ್ನನಾಗಿದ್ದ.

ಹೀಗೆ ರಥ ಮುಂದುವರೆಯುತ್ತಿದ್ದಂತೆ ಅಲ್ಲಿ ಒಂದು ಸ್ವಾರಸ್ಯ ನಡೆಯಿತು. ನಳನ ರಥದ ಕುದುರೆಗಳು ಅವನ ಮಕ್ಕಳ ಜೊತೆಗೆ ಕುಂಡಿನಪುರಕ್ಕೆ ಈ ಮೊದಲೇ ಬಂದಿದ್ದಾಗಿ ಹಿಂದೆ ಹೇಳಿದ್ದೆವಲ್ಲ, ಅವುಗಳಿಗೆ ಒಡೆಯನ ರಥಚಾಲನೆಯ ಶಬ್ದ ಕೇಳಿ ಗುರುತು ಸಿಕ್ಕಿತು, ಅವುಗಳು ಅವನು ಚಾಲಕನಾಗಿ ನಡೆಸಿದ ಕುದುರೆಗಳೇ, ಅಲ್ಲದೇ ಬೇರೆ ಕುದುರೆಗಳನ್ನು ಕಟ್ಟಿದ್ದರೂ ಆ ರಥದ ಶಬ್ದ ಅವುಗಳಿಗೆ ಪರಿಚಿತವಾಗಿದ್ದಾಗಿತ್ತು. ಪ್ರಾಣಿಗಳಲ್ಲಿ ಈ ರೀತಿಯಾದ ವಿಶೇಷ ಶಕ್ತಿ ಇರುತ್ತದೆ. ಎತ್ತುಗಳು ಕೂಡಾ ಹೀಗೆಯೇ ತಮ್ಮ ಒಡೆಯನನ್ನು ಗುರುತಿಸಬಲ್ಲವು. ಕೇವಲ ಅವನ ಸನ್ನೆ ಮಾತ್ರದಿಂದಲೇ ಅವನು ಇವುಗಳಿಂದ ಕೆಲಸ ಮಾಡಿಸಬಲ್ಲ. ಹೀಗೆ ಒಡೆಯನ ಆಗಮನವನ್ನು ಗುರುತಿಸಿದ ಕುದುರೆಗಳು ಸಂತೋಷದಿಂದ ಕುಣಿದಾಡಲು ತೊಡಗಿದವು. ಹೇಶಾರವ ಮಾಡಿದವು. ಎಷ್ಟು ಮುಚ್ಚಿಟ್ಟರೂ ಕಸ್ತೂರಿಯ ಪರಿಮಳ ಮುಚ್ಚಿಡಲಾದೀತೇ, ಬಾಯಿಗೆ ಏಲಕ್ಕಿ ಹಾಕಿಕೊಂಡು ಮಾತನಾಡಿದಾಗ ಮಾತಿನೊಂದಿಗೆ ಏಲಕ್ಕಿಯ ಪರಿಮಳವೂ ಬರುವಂತೆ, ನಳ ತನ್ನಿರುವನ್ನು ಮುಚ್ಚಿಟ್ಟರೂ ಅವನಿಗೆ ಪರಿಚಿತವಾದ ಜೀವಗಳು ಅವನನ್ನು ಗುರುತಿಸದಿರಲಿಲ್ಲ. ಆ ನಂತರದಲ್ಲಿ ನಳನನ್ನು ದಮಯಂತಿ ಗುರುತಿಸುತ್ತಾಳೆ. ಅವಳು ಅವನ ಅರ್ಧಾಂಗಿ, ಅವನ ಇಂಚಿಂಚು ದೇಹವೂ, ವ್ಯಕ್ತಿತ್ವವೂ ಅವಳಿಗೆ ತಿಳಿದಿದೆ. ಅವಳ ಹೃದಯ ಈಗ ಹರ್ಷದಿಂದ ಪುಟಿದೆದ್ದಿತು. ಅವಳಲ್ಲದೆ ಅವಳ ಅರಮನೆಯಲ್ಲಿನ ಉಪ್ಪರಿಗೆಯಲ್ಲಿದ್ದ ನವಿಲುಗಳು, ಗಜಶಾಲೆಯಲ್ಲಿದ್ದ ಆನೆಗಳೂ ನಳನ ಇರವನ್ನು ಗುರುತಿಸಿ ಸ್ವರವನ್ನು ಮಾಡಿದವು. ರಥದ ನೇಮಿಘೋಷಕ್ಕೆ ಪ್ರತಿಯಾಗಿ ಹೀಗೆ ಅಶ್ವಗಳ ಹೇಶಾರವ, ನವಿಲುಗಳ ಕೇಕಾರವ, ಆನೆಗಳ ಫೀಂಕಾರ ನಡೆದಿತ್ತು. ರಥದ ಸದ್ದು ಮಳೆಗಾಲದ ಮೇಘಗಳು ಗುಡುಗಿದಂತೆ ಗಂಭೀರವಾಗಿದ್ದವು.

ದಮಯಂತಿಗೆ ಕೇವಲ ಆ ರಥದ ಶಬ್ದ ಕೇಳಿಯೇ ನಳ ಬಂದ ಅಂತ ಅನಿಸಿ ಸಂತೋಷವಾಗಿದ್ದಿತು. ಈಗ ನಳ ಬಂದ ಅಂತ ಆದಾಗ, ಉಪ್ಪರಿಗೆ ಹತ್ತಿದರೆ ಸಾಕು ಅವನ ದರ್ಶನ ಮಾಡಬಹುದು ಅಂತಾದಾಗ ಆಕೆಯ ಮನಸ್ಸಿನಲ್ಲಿ ಏನೆಲ್ಲಾ ಬಂದಿತೆಂದರೆ, ಇಲ್ಲ ಇನ್ನು ಕಾಯಲಾರೆ, ಚಂದ್ರನ ಸದೃಶವಾದ ಮುಖವನ್ನು ಹೊಂದಿರುವ ಒಳ್ಳೆಯ ಗುಣಗಳ ಗಣಿಯಾದ, ಗುಣಗಳೆಂಬ ಉತ್ತಮ ಮಣಿಗಳ ಮಾಲೆಯನ್ನು ಧರಿಸಿದ ನಳನನ್ನು ಇನ್ನು ಕಾಣದಿದ್ದರೆ, ಸತ್ತು ಹೋಗುತ್ತೇನೆ, ಇಂದು ನಳನ ಸ್ಪಶ೯ವಾಗದಿದ್ದರೆ, ನಾನು ಉಳಿಯಲಾರೆ, ಅವನು ಎಂತಹವನು ಎಂದರೆ, ಅವನದ್ದು ಸಿಂಹನಡಿಗೆ, ಮದಗಜದ ನಡಿಗೆ, ಅಂತಹವನು ನನ್ನೆಡೆಗೆ ನಡೆದು ಬರದಿದ್ದರೆ ನಾನು ಸಾಯುತ್ತೇನೆ, ಇಷ್ಟುವರ್ಷಗಳ ಸಹವಾಸದಲ್ಲಿ ಏಕಾಂತದಲ್ಲಿ ಆಗಲೀ, ವಿಶ್ರಾಂತಿಯಲ್ಲಿ ಆಗಲೀ ಸ್ನೇಹಕೂಟದಲ್ಲಿಯೇ ಆಗಿಲಿ, ಒಂದೇ ಒಂದು ಬಾರಿಗೂ ಸುಳ್ಳಾಡದ, ತಪ್ಪುಮಾಡದ ಅವನು, ಆ ಪ್ರಭು ಕ್ಷಮಾವಂತ, ವೀರ ಆದರೆ ಕ್ರೂರಿಯಲ್ಲ, ಮೃದುಹೃದಯಿ, ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವವನು. ಕೆಲವರು ಗುಟ್ಟಾಗಿ ನೀಚರಾಗಿರುತ್ತಾರೆ ಆದರೆ ಇವನು ಕನಸಿನಲ್ಲೂ ಅಂತಹವನಲ್ಲ. ತನ್ನ ಪತ್ನಿಯ ಹೊರತು ಇತರರಲ್ಲಿ ನಪುಂಸಕನಂತೆ ನಡೆದುಕೊಳ್ಳುತ್ತಾನೆ. ಅಂತಹ ಸಂತುಲಿತ ವ್ಯಕ್ತಿತ್ವ ಅವನದ್ದು. ಹೀಗೆ ಅವನ ನೆನಪು ಮಾಡುತ್ತಾ, ಅವನ ಗುಣಗಳ ಸ್ಮರಿಸುತ್ತಾ, ಅವನೇ ನೆನಪು ಮತ್ತೆ ಅದೇ ಶೋಕ ಎಂದಾಗಿ, ತನ್ನ ನೋವಿನ ಧ್ವನಿಗೆ ಅಯೋಧ್ಯೆಯಲ್ಲಿ ಪ್ರತಿಧ್ವನಿ ಸಿಕ್ಕಿ ಒಂದೇ ದಿನದಲ್ಲಿ ಇಲ್ಲಿಗೆ ತಲುಪಿ, ಈಗ ಈ ರಥ ಘೋಷ ಕೇಳಿದ ನಂತರವೂ ಅವನೇ ಎಂದು ನಿಶ್ಚಯ ಆಗದಿದ್ದರೆ ಹೇಗೆ? ಹೇಳಿ. ಅವನನ್ನು ನೋಡಿ ಕಣ್ತುಂಬಿಕೊಳ್ಳುವ ಆತುರದಿಂದ ಉಪ್ಪರಿಗೆ ಏರುತ್ತಾಳೆ. ರಥದಲ್ಲಿ ಮೂರು ಜನ ಕಾಣುತ್ತಾರೆ, ಒಬ್ಬ ಋತುಪರ್ಣ, ಇನ್ನೊಬ್ಬ ವಾರ್ಷ್ಣೇಯ ಮೂರನೆಯವನು ವಿಕೃತಾಕಾರದ ಮೋಟು ಕೈಗಳ ಮನುಷ್ಯ. ಅವಳಿಗೆ ಮತ್ತೆ ನಿರಾಶೆಯಾಯಿತು, ಇವನು ನಳನಲ್ಲ, ಹಾಗಿದ್ದಲ್ಲಿ ಆ ರಥಘೋಷಕ್ಕೆ ಏನು ಅರ್ಥ? ಎಂದುಕೊಂಡಳು. ಪಾಪ ದಮಯಂತಿಯ ಮನೋರಥವೂ ನಿಂತು ಹೋಯಿತು.

ಇವಿಷ್ಟೂ ಈ ಕಡೆಯಲ್ಲಿ ಆದರೆ. ಇನ್ನು ಆ ಕಡೆಯಲ್ಲಿ ಋತುಪರ್ಣ ರಥದಿಂದ ಇಳಿಯುತ್ತಿದ್ದಾನೆ, ಅನಪೇಕ್ಷಿತ ಅತಿಥಿಯಂತೆ. ದೊಡ್ಡವರ ಸಮಸ್ಯೆ ಇದು. ಅವನು ಈಗ ರಾಜನನ್ನು ಭೇಟಿಯಾಗಬೇಕು, ಒಬ್ಬರ ಮನೆಯ ಮದುವೆಗಾಗಿ ಹೋದಾಗ ಅಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಯೇ ಕಾಣದಿದ್ದರೆ ಏನು ಮಾಡುತ್ತೀರಿ? ಇವನದ್ದು ಅದೇ ಕಥೆ. ಒಂದೇ ಒಂದು ತಳಿರು ತೋರಣ ಇಲ್ಲ, ಸ್ವಾಗತ ಕೂಡಾ ಸಮರ್ಪಕವಾಗಿಲ್ಲ, ಕಾಲೆಳೆದುಕೊಂಡು ಹೇಗೋ ಭೀಮರಾಜನಲ್ಲಿಗೆ ಹೋದ. ಮತ್ತೂ ಆಶ್ಚರ್ಯ, ಸ್ವಯಂವರದ ಸಿದ್ಧತೆಯೂ ಏನೂ ಕಾಣುತ್ತಿಲ್ಲ. ಋತುಪರ್ಣನಿಗೆ ದ್ವಂದ್ವ ಪ್ರಾರಂಭವಾಯಿತು. ಇತ್ತ ಭೀಮರಾಜನಿಗೂ ಹಾಗೇ. ಇವನನ್ನು ಯಾಕೆ ಬಂದೆ ಅಂತ ಕೇಳುವಂತಿಲ್ಲ. ಆದರೂ ಅದೇ ಮುಖಭಾವದಿಂದ ಸ್ವಾಗತ ಮಾಡಿದ, ಯಾಕೆ ಬಂದಿರಬಹುದು? ಅದೂ ಯಾವುದೇ ಕಾರಣವಿಲ್ಲದೇ, ಅವನು ಸಾಮಂತನೂ ಅಲ್ಲ, ಆದರೂ ಯಾಕೆ ಬಂದಿರಬಹುದು ಎನ್ನುವುದನ್ನು ಕುರಿತು ಆಲೋಚನೆ ಮಾಡಿದ. ಭೀಮರಾಜನಿಗೆ ತನ್ನ ಅಂತಃಪುರದಲ್ಲಿ ನಡೆದ ಅಂತರಂಗ ಸಭೆಯ ವಿಚಾರ ತಿಳಿದಿರಲಿಲ್ಲವಲ್ಲ! ಆ “ಸ್ತ್ರೀಮಂತ್ರದ” ರಹಸ್ಯ ತಿಳಿದಿಲ್ಲ, ಹಾಗಾಗಿ ಗೊಂದಲವಾಯಿತು. ಮಂತ್ರವೆಂದರೇ, ರಹಸ್ಯ ಸಮಾಲೋಚನೆ ಎಂದು ಅರ್ಥ, ಹಾಗಾಗಿ ಸಚಿವಾಲಯ ಎನ್ನುವ ಪದಕ್ಕೆ ಹಿಂದಿಯಲ್ಲಿ ಮಂತ್ರಾಲಯ ಎಂದೂ ಹೆಸರಿದೆ. ಸರಿ, ಸ್ವಾಗತ ಮಾಡಿ, ಉಚಿತಾಸನದಲ್ಲಿ ಕುಳ್ಳಿರಿಸಿ ಕುಶಲೋಪರಿ ವಿಚಾರಿಸಿದ ನಂತರ ಭೀಮರಾಜ ಹೇಳಿದ, ನೀವು ಬಂದಿದ್ದು ಸಂತೋಷ, ಏನು ಬಂದಿದ್ದು, ನಮ್ಮಿಂದ ಏನಾಗಬೇಕು ಅಂತ. ಋತುಪರ್ಣನಿಗೆ ಮಾತೇ ಹೊರಡಲಿಲ್ಲ, ಸುತ್ತಮುತ್ತ ನೋಡಿದ, ಎಲ್ಲಿಯೂ ಬೇರೆ ರಾಜರೂ ಕಾಣಲಿಲ್ಲ. ಹಾಗಾಗಿ ಯೋಚಿಸಿ ಹೇಳಿದ. ಬಹಳ ದಿವಸ ಆಗಿತ್ತು ನಿಮ್ಮನ್ನು ನೋಡಿ, ಹಾಗಾಗಿ ಬಂದು ನಿಮ್ಮಿಂದ ಆಶೀರ್ವಾದ ಪಡೆದು ಹೋಗೋಣ ಅಂತ ಬಂದೆ ಎಂದು. ಭೀಮರಾಜನಿಗೆ ಮತ್ತೂ ಆಶ್ಚಯ೯ ಆಯಿತು. ಸೂರ್ಯವಂಶಜರು ವಿದಭ೯ದ ಸಾಮಂತರಲ್ಲ ಅಂದಮೇಲೆ ಅಷ್ಟು ದೂರದಿಂದ ನೂರಾರು ಯೋಜನಗಳಷ್ಟು ಪ್ರಯಾಣ ಮಾಡಿ ಕೇವಲ ನಮಸ್ಕಾರ ಮಾಡಲು ಬಂದಿದ್ದಾ? ನಿಜವಲ್ಲ, ಬೇರೇನೋ ವಿಷಯ ಇರಬೇಕು ಅನಿಸಿತು. ಆದರೆ ಮರ್ಯಾದೆ, ಶಿಷ್ಟಾಚಾರಗಳಿಂದಾಗಿ ಹಾಗೆ ಕೇಳಲಿಲ್ಲ. (ಈ ಶಿಷ್ಟಾಚಾರ ಎನ್ನುವುದು ಬಹಳ ಸಲ ತೊಂದರೆ ಕೊಡುತ್ತದೆ.) ಅವನ ಯೋಗ್ಯತೆಗೆ ಉಚಿತವಾದ ಉಪಚಾರ ವ್ಯವಸ್ಥೆ ಮಾಡಿ, ನಿಮಗೆ ಪ್ರಯಾಣದಿಂದ ಸಾಕಷ್ಟು ಶ್ರಮವಾಗಿರಬಹುದು, ವಿಶ್ರಮಿಸಿಕೊಳ್ಳಿ ಎಂದು ಹೇಳಿ ಹೊರಟ. ಋತುಪರ್ಣನೂ ಪ್ರತಿ ಮಾತಾಡಲಿಲ್ಲ, ಶ್ರಮ ಆಗಿದ್ದಂತೂ ಹೌದು ಏಕೆಂದರೆ ಅದು ಜೀವಮಾನದ ಪ್ರಯಾಣ. ಈ ರೀತಿಯ ಪ್ರಯಾಣ ಅವನಿಗೂ ಹೊಸತು. ಆಗೇನೋ ಉತ್ಸಾಹವಿತ್ತು, ಈಗ ಶ್ರಮವಾಗಿದೆ ಅನಿಸುತ್ತಿದೆ, ಪರಿಹಾರವಾಗಲು ಒಂದೆರಡು ದಿನಗಳಾದರೂ ಬೇಕು. ಯಾವ ದೂರದ ಪ್ರಯಾಣ ಆದರೂ ಶ್ರಮವಾಗುತ್ತದೆ, ಯಾಕೆಂದರೆ ವಾತಾವರಣ ಬದಲಾಗುವುದರಿಂದ. ಮಾರ್ಗಮಧ್ಯೆ ಹಲವಾರು ವಾತಾವರಣಗಳು ಬದಲಾಗಿಯೂ ಇರುತ್ತದೆ. ಹಾಗಾಗಿ ಅವನೂ ವಿಶ್ರಾಂತಿ ಎಂದ ಕೂಡಲೇ ಮರು ನುಡಿಯದೆ ಒಪ್ಪಿದ. ಆಮೇಲೆ ಯೋಚಿಸೋಣ ಎಂಬುದಾಗಿ ಯೋಚಿಸಿ, ವಿಶ್ರಾಂತಿ ಭವನ ಹೊಕ್ಕ, ವಿಶ್ರಾಂತಿ ಮಾಡಿದ.

ಅಯೋಧ್ಯೆಯಿಂದ ಬಂದವರು ಮೂವರು, ಆದರೆ ರಾಜನ ದರ್ಶನಕ್ಕೆ ಹೋದವರು ಇಬ್ಬರೇ. ಬಾಹುಕನನ್ನು ಕರೆದೊಯ್ಯಲಿಲ್ಲ, ಏಕೆಂದರೆ ಬಹುಶಃ ಅವನ ವಿಕಾರ ಶರೀರದಿಂದಾಗಿ ಅವನು ರಾಜದರ್ಶನಕ್ಕೆ ಯೋಗ್ಯನಲ್ಲ ಎನಿಸಿರಬೇಕು, ಅಥವಾ ಬಾಹುಕನಿಗೇ ರಾಜನೆದುರು ಹೀಗೆ ಬರಲು ನಾಚಿಕೆ ಅನಿಸಿರಬೇಕು. ಹಾಗಾಗಿ ಬಾಹುಕ ಅಲ್ಲೇ ಉಳಿದ, ಉಳಿದಿಬ್ಬರು ಅರಮನೆಗೆ ಹೊರಟ ಕೂಡಲೇ ರಥಶಾಲೆಗೆ ಹೊರಟ. ಆಗಲೂ ರಥದ ಘೋಷ ಅದೇ ಇತ್ತು. ವಾಡಿಕೆಯಂತೆ ರಥ ಬಿಟ್ಟು, ಶಾಸ್ತ್ರದಲ್ಲಿ ಹೇಳಿರುವಂತೆ ದೂರ ಪ್ರಯಾಣದಿಂದ ಬಳಲಿರುವ ಕುದುರೆಗಳನ್ನು ಸಂತೈಸಿ, ಯಥೋಪಚಾರ ಮಾಡಿ, ತಾನೂ ವಿಶ್ರಾಂತಿ ಪಡೆದುಕೊಂಡು ರಥದಲ್ಲಿ ಕುಳಿತ. ಆಗ ದಮಯಂತಿ ಅಲ್ಲೇ ಇದ್ದಳು. ರಥ ಮುಂದೆ ಹೋದರೂ ನಿಶ್ಚಲಳಾಗಿ ನಿಂತು ಬಿಟ್ಟಿದ್ದಾಳೆ. ಅರ್ಥವಾಗದ ಭಾವಗಳು, ಪ್ರಶ್ನೆಗಳು ಅವಳಲ್ಲಿ! ರಥದ ಘೋಷ, ಆ ದೂರದ ಪ್ರಯಾಣವನ್ನು ವೇಗವಾಗಿ ಮುಗಿಸಿದ್ದು, ಹಿಂದೆ ಬ್ರಾಹ್ಮಣನಿಗೆ ಅವನು ನೀಡಿದ್ದ ಉತ್ತರ ಎಲ್ಲವೂ ಹೇಳುತ್ತದೆ ಇದು ನಳನೇ ಎಂದು. ಆದರೆ ಆಕಾರ ಮಾತ್ರಾ ತದ್ವಿರುದ್ಧ. ನಳನ ಉಗುರಿಗೂ ಈತ ಸಮವಲ್ಲ ಅಂತಹ ಕುರೂಪಿ, ಇಂತಹ ಉತ್ತರವಿಲ್ಲದ ನೂರು ಪ್ರಶ್ನೆಗಳನ್ನು ತಲೆಯಲ್ಲಿ ಹೊತ್ತು ಚಿಂತಿಸುತ್ತಾ ನಿಂತುಬಿಟ್ಟಳು ದಮಯಂತಿ.

 

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments