#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
12-09-2018:

ಬಾಹುಕ ಭಾವುಕ

ನಮ್ಮ ರೂಪ ನಮಗೇ ಮರೆತು ಹೋದಾಗ, ನಮ್ಮ ಸ್ವರೂಪ ನಾವು ಮರೆತಾಗ ಅದನ್ನು ನೆನಪಿಸುವವನು ಭಗವಂತ, ಕೆಲವೊಮ್ಮೆ ಗುರುರೂಪಿಯಾಗಿ ಇನ್ನೊಮ್ಮೆ ದೇವರೂಪಿಯಾಗಿ ನೆನಪು ಮಾಡುವವನು ಅವನು, ಅವನ ಚರಣಗಳಿಗೆ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾ ಮುಂದುವರೆಯೋಣ.

ಶ್ರೀಶ್ರೀ…

ಕಥೆ ಮುಗಿದಂತೆ ಕಾಣುತ್ತದೆ ಆದರೆ ಮುಗಿದಿಲ್ಲ, ಇನ್ನಷ್ಟು ತಿರುವುಗಳಿಂದ ರೋಚಕವಾಗಿರುತ್ತದೆ. ಬದುಕೂ ಹೀಗೆಯೇ, ದಮಯಂತಿ ಈಗ ದ್ವಂದ್ವದಲ್ಲಿದ್ದಾಳೆ. ನಾದ ನಳನದು, ರೂಪ ನಳನದಲ್ಲ. ಕಿವಿ ನಲ ನಲ ಅಂತಿದ್ದರೆ ಕಣ್ಣು ಅಲ್ಲ ಅಲ್ಲ ಅಂತಿದೆ. ರಥಘೋಷ ನಲನದು ಆದರೆ ರೂಪ ಮಾತ್ರಾ ನಲನದಲ್ಲ, ನಲನಿಗೂ ಆ ರೂಪಕ್ಕೂ ಯಾವುದೇ ಸಂಬಂಧವಿಲ್ಲ, ಆದ್ದರಿಂದಲೇ ದ್ವಂದ್ವ. ಅವಳು ಯೋಚಿಸುತ್ತಾಳೆ, ನಳ ಅಲ್ಲದಿದ್ದರೆ ಬೇರೆ ಯಾರು ಹೀಗೆ ಓಡಿಸುವವರು ರಥವನ್ನು? ವಾರ್ಷ್ಣೆಯನೇ. ಅವಳಿಗೆ ವಾರ್ಷ್ಣೆಯನ ಪರಿಚಯ ಇದೆ, ಅವನು ಹೀಗೆ ಬರಲು ಸಾಧ್ಯವಿಲ್ಲ. ಈ ರಥಘೋಷ, ಈ ವೇಗ, ಅದೇ ನಲನವಿದ್ಯೆ ವಾರ್ಷ್ಣೆಯನೂ ಕಲಿತಿರಬಹುದೇ ತನಗೆ ತಿಳಿಯದಂತೆ, ನಲನೇ ಕಲಿಸಿರಬಹುದೇ ಎಂದು ಅನ್ನಿಸಿತು. ಆದರೆ ಹಾಗೆ ಸಾಧ್ಯವಿಲ್ಲ ಅಂತಲೂ ಅವಳಿಗೆ ಅನ್ನಿಸಿತು. ಇನ್ನು ಋತುಪರ್ಣನೇ ಆಗಿರಬಹುದೇ ಎಂದರೆ ಅವಳಿಗೆ ಅವನ ಬಗ್ಗೆ ತಿಳಿದಿಲ್ಲ. ಆದರೂ ಅವನೂ ನಳನಷ್ಟೇ ವಿದ್ಯಾ ಪ್ರವೀಣನಾಗಿದ್ದರೂ ಓಡಿಸುವ ಕ್ರಮ ಬೇರೆ ಇರುತ್ತದೆ, ಶೈಲಿ ಬೇರೆ ಇರುತ್ತದೆ.
ಈಗ ಕಣ್ಣನ್ನು ತೆಗೆದುಕೊಂಡರೆ, ಪ್ರತಿಯೊಬ್ಬರ ಕಣ್ಣೂ ಬೇರೆಯೇ. ಎಷ್ಟು ಕೋಟಿ ಜನ ಭೂಮಿಯಲ್ಲಿ ಹುಟ್ಟಿದರೂ ಅವರ ದೃಷ್ಟಿ ಬೇರೆ ಬೇರೆಯಾಗಿರುತ್ತೆ, ಒಂದೇ ಅಲ್ಲ. ಹಾಗೆಯೇ ಹೆಬ್ಬೆಟ್ಟು, ಅದೂ ಒಂದೇ ರೀತಿ ಇರುವುದಿಲ್ಲ, ಬೇರೆ ಬೇರೆಯೇ ಆಗಿರುತ್ತದೆ. ಹಾಗೆ ಒಬ್ಬರ ತರಹನೇ ಇನ್ನೊಬ್ಬರು ಇರಲು ಸಾಧ್ಯವೇ ಇಲ್ಲ. ಅವಳಿಗಳಲ್ಲಿಯೇ ಆದರೂ, ಕೊಂಚವಾದರೂ ವ್ಯತ್ಯಾಸ ಇರುತ್ತೆ. ಹೀಗೇ ವಿದ್ಯೆಯಲ್ಲಿಯೂ ಆಗುತ್ತದೆ. ಹಾಗಾಗಿ ಇವರಿಬ್ಬರೂ ಶಕ್ಯವಿಲ್ಲ, ಇನ್ನು ಮೂರನೆಯವ ವಿಕಟಾಕಾರ, ಅವನು ನಳ ಆಗಿರಬಹುದೇ? ಎಲ್ಲಿಯಾದರೂ ನಳನೇ ಆ ರೂಪದಲ್ಲಿ ಬಂದಿರಬಹುದೇ ಎನ್ನುವ ಗೊಂದಲ ಆಯಿತು ದಮಯಂತಿಗೆ.
ಆಕಾರವೋ ವಿಕಾರವೋ ಅದು ಬಾಹುಕನದ್ದು. ಆದರೆ ಆ ಕಲೆಗಳ ಕೌಶಲ ಏನಿದೆ ಅದು ನಳನದ್ದೇ, ಯಾವುದೇ ಸಂದೇಹವಿಲ್ಲ.

ಹೀಗೆ ಭ್ರಮೆಗೆ ಒಳಗಾಯಿತು ಚಿತ್ತ, ಭ್ರಮೆ ಎಂಬ ಪದಕ್ಕೆ ಸಂಸ್ಕೃತದಲ್ಲಿ ಸುತ್ತುವುದು ಅಂತಲೇ ಅಥ೯, ಕನ್ನಡದಲ್ಲಿ ಅದಕ್ಕೆ ತಪ್ಪುಕಲ್ಪನೆ ಅಂತ ಅರ್ಥ. ಇಲ್ಲಿಯೂ ಮನಸ್ಸು ಹೀಗೇ ಸುತ್ತುತ್ತಾ ಇರುತ್ತದೆ. ಹೌದು ಎನ್ನುವಂತಿಲ್ಲ ಅಲ್ಲ ಎಂತಲೂ ಅನ್ನುವಂತಿಲ್ಲ. ಆದರೆ ಕ್ಷಣಕ್ಷಣಕ್ಕೂ ಅವಳ ಶಂಕೆ ದೃಢವಾಗುತ್ತಾ ಹೋಯಿತು. ಬಾಹುಕ ಎಷ್ಟೇ ವಿಕಾರನಾಗಿದ್ದಿರಬಹುದು. ಆದರೆ ಅವನನ್ನು ಕಂಡಾಗಲೆಲ್ಲಾ ಮನಕ್ಕೆ ತುಷ್ಟಿ, ಹೃದಯಕ್ಕೆ ತಂಪು. ಅದೇ ಕಣ್ಣರಿಯದಿದ್ದರೂ ಹೃದಯ ಅರಿಯದಿದ್ದೀತೆ. ತಾಯಿಯಲ್ಲಿಯಾದರೆ ಕರುಳು, ಪ್ರಿಯನಲ್ಲಿ ಹೃದಯ, ರೂಪದ ಮೇಲೆ ನಿಂತಿಲ್ಲ ವಿವಾಹ ಅನ್ನುವುದಕ್ಕೆ ಇದು ನಿದರ್ಶನ, ಹಾಗೆ ನಿಂತಿದ್ದಿದ್ದಾದರೆ ಒಂದು ವಯಸ್ಸು ದಾಟಿದರೆ ಬಾಂಧವ್ಯ ದೃಢವಾಗಿರುತ್ತದೆಯೇ?
ವಿವಾಹ ಎಂದರೆ ಲಗ್ನ. ಲಗ್ನ ಎಂಬುದರ ಅಥ೯ ಕೂಡುವಿಕೆ ಅಂತ. ಇದು ಕೇವಲ ಶರೀರಗಳ ಮಧ್ಯ ಆದರೆ ಯೌವನ ಇರುವವರೆಗೆ ಮಾತ್ರಾ ಇರುತ್ತದೆ. ಮನಸ್ಸುಗಳ ನಡುವೆ ಆದರೆ ಜೀವನ ಇರುವವರೆಗೂ ಇರುತ್ತದೆ. ಅದೇ ಆತ್ಮಗಳ ನಡುವೆ ಆದರೆ ಜೀವನೋತ್ತರಜೀವನದಲ್ಲಿಯೂ ಮುಂದುವರೆಯುತ್ತೆ. ಇಲ್ಲಿ ಇವರಿಬ್ಬರ ಲಗ್ನ ಬರೀ ಶಾರೀರಿಕ ಆಗಿರಲಿಲ್ಲ. ಹಾಗೂ ಹೀಗೂ ತೊಯ್ದಾಡಿ ಇವನು ಅವನೇ ಇರಬಹುದು ಅನ್ನುವಂಥ ನಿರ್ಣಯಕ್ಕೆ ಬಂತು ಅವಳ ಮನಸ್ಸು. ಒಂದು ವೇಳೆ ಅವನೇ ಆಗಿದ್ದರೆ, ಅಂತಹ ಸುರಸುಂದರಾಂಗನಿಗೆ ಇಂತಹ ವಿಕಾರ ರೂಪ ಬಂದು ಬಿಡ್ತೇ ”ಛೇ”! ಎಂದಳು. ಕಲಿ ತೊಲಗಿದ್ದರಿಂದ ಈಗ ಆ ಅಪರೂಪದ ದಿವ್ಯಪ್ರಭೆಯನ್ನು ಅವಲೋಕಿಸುತ್ತಾಳೆ ಅವಳು. ಕಾಯ ಕಳೆಗುಂದಿದೆ. ಕಪ್ಪಡರಿ ರೋಮ ಉದುರಿದೆ, ನಳ ಈ ರೂಪ ತಾಳಿರಬಹುದೇ! ಅನ್ನುವ ಶಂಕೆ ತೋರಿತು. ಇದು ಹೌದಾದಲ್ಲಿ, ಮನುಷ್ಯರಾರಿಗೂ ಇದು ತಿಳಿದಿರಲ್ಲ, ಗೊತ್ತಾದರೆ ಒಬ್ಬನಿಗೆ ಮಾತ್ರಾ ಅದು ಮುರಹರನಿಗೆ, ಶಿವನಿಗೆ ಗೊತ್ತಿರಬೇಕು ಈ ಸತ್ಯ ಅಷ್ಟೇ.

ನಳನನ್ನು ಕಂಡಾಗ ಆಕೆಗೆ ದುಃಖ ಉಮ್ಮಳಿಸಿ ಬಂತು. ಆದರೂ ಆಕೆ ಮಹಾರಾಣಿ, ದುಃಖದ ಮಧ್ಯೆ ಕೂಡಾ ಕರ್ತವ್ಯವನ್ನು ಮಾಡಿ ಗೊತ್ತು. ಅದಕ್ಕೆ ಬೇಕಾದ ಕೌಶಲ, ಬುದ್ಧಿಸಾಮಥ್ಯ೯ ಅವಳಲ್ಲಿದೆ, ಅವಳು ಯೋಚಿಸುತ್ತಾಳೆ, ಮುಂದಿನ ನಡೆಯೇನು? ಅಂದರೆ ಇನ್ನಷ್ಟು ಪರೀಕ್ಷಿಸಬೇಕು ನಳನನ್ನು. ಹಾಗಾಗಿ ಕುಶಲಳಾದ ತನ್ನ ದೂತಿಯೊಬ್ಬಳನ್ನು ಕರೆಯುತ್ತಾಳೆ. ಮುಂದೆ ಕಾದಿದೆ ಬಾಹುಕನ ಪರೀಕ್ಷೆ.
ಆ ದೂತಿಯ ಹೆಸರು ಕೇಶಿನೀ ಎಂದು. ಅವಳನ್ನು ದಮಯಂತಿ ಕರೆದು ಹೇಳುತ್ತಾಳೆ, ಎಲೈ ಕೇಶಿನೀ, ನೀನು ರಥದ ಬಳಿಯಿರುವ ಸೂತನಲ್ಲಿ ಹೋಗಿ ಅವನು ಯಾರು? ರಥ ಓಡಿಸಿದವರು ಯಾರು, ಇದನ್ನು ತಿಳಿ. ಎಚ್ಚರ, ಮುನ್ನ ಕುಶಲ ಪ್ರಶ್ನೆಗಳನ್ನು ಮಾಡಿ ಮಾತನಾಡಿಸು ಎಂದು. ಸಾಮಾನ್ಯವಾಗಿ ದೊಡ್ಡವರಿಗೆ ಇಲ್ಲದ ಗತ್ತು ದೂತರಿಗೆ ಬಂದು ಬಿಡುತ್ತದೆ.. ದೊಡ್ಡವರು ಅಂದರೇ ಗತ್ತು ಇಲ್ಲದವರು ಎಂದು ಅರ್ಥ, ಇಂಥ ಗತ್ತು ಹೆಚ್ಚಿನ ಬಾರಿ ದೂತರಲ್ಲಿಯೇ ಇರುತ್ತದೆ. ಅವರಲ್ಲಿ ಪಕ್ವತೆ ಇಲ್ಲದಿದ್ದಾಗ ಹೀಗೆ ಇರತ್ತದೆ. ಒಂದೊಮ್ಮೆ ಅವನು ನಳನೇ ಆಗಿದ್ದಲ್ಲಿ ದಾಸಿ ಹೋಗಿ ಏನೆಲ್ಲಾ ಮಾತನಾಡಿಸಿದರೆ ಅದು ಸರಿಯಲ್ಲ. ಮೇಲಾಗಿ ತನ್ನ ಪತಿಯಲ್ಲಿ ಅವಳು ಹಾಗೆ ಮಾತಾಡುವುದು ಇವಳಿಗೇ ಸರಿ ಕಾಣಲಿಲ್ಲ. ಅವಳ ಪತಿಪ್ರೇಮ, ಅವನು ಬೇಸರಿಸಿಕೊಂಡು ಏನಾದರೂ ಅನಾಹುತವಾದರೆ ಅನ್ನುವ ಜಾಗ್ರತೆ, ಅವಳಿಂದ ಹೀಗೆ ಮಾಡಿಸಿತು. ಹೇಳುತ್ತಾಳೆ, ಅಕ್ಷರಕ್ಷರ ಎಚ್ಚರಿಕೆಯಿಂದ ಮಾತನಾಡಿಸು. ನಮಗೆ ಬೇಕಾದ ವಿಚಾರವನ್ನು ತಿಳಿ, ಅವನೇನು? ಅವನ್ಯಾರು? ಅವನ ಅಂತಃತತ್ವ ಏನು? ಅನ್ನುವುದು ಬೇಕು ಅಂತ ಹೇಳಿ. ಏನೆಲ್ಲಾ ಕೇಳಬೇಕು ಅಂತ ತರಬೇತಿ ಕೊಟ್ಟು ಕಳುಹಿಸುತ್ತಾಳೆ. ಕಟ್ಟಕಡೆಯದಾಗಿ ಪರ್ಣಾದ ಮಾಡಿದ ಪರೀಕ್ಷೆಯನ್ನು ಇನ್ನೊಮ್ಮೆ ಮಾಡು ಎಂದು ಹೇಳುತ್ತಾಳೆ. ಆ ಪರ್ಣಾದ ದಮಯಂತಿ ಹೇಳಿಕೊಟ್ಟ ಶ್ಲೋಕವನ್ನು ಅಯೋಧ್ಯೆಯಲ್ಲಿ ಪಠಿಸಿದಾಗಲೇ ಅಲ್ಲವೇ ಅದಕ್ಕೆ ಒಬ್ಬ ವಿರೂಪಿ ಏಕಾಂತದಲ್ಲಿ ಉತ್ತರ ಕೊಟ್ಟದ್ದು. ಆ ನಂತರದಲ್ಲಿ ಅವಳು ಯುಕ್ತಿಯಿಂದ ಸ್ವಯಂವರದ ಕಥೆ ಕಟ್ಟಿ ಅವರನ್ನು ಇಲ್ಲಿಗೆ ಕರೆಸಿದ್ದು, ಅವನು ಇವನೇ ಆಗಿದ್ದಲ್ಲಿ ಈಗ ಉತ್ತರ ನೀಡುತ್ತಾನೆ ಎನ್ನುವ ಭರವಸೆ ಆಕೆಗೆ.

ಸರಿ ಕೇಶಿನಿ ಅಪ್ಪಣೆ ಪಡೆದು ಹೊರಟಳು. ಅವಳಿಗೂ ಈ ಮಹತ್ಕಾಯ೯ದಲ್ಲಿ ಭಾಗಿಯಾಗುವ ಉತ್ಸುಕತೆಯಿದೆ. ಇದೊಂದು ಸದವಕಾಶ ಅವಳಿಗೆ, ಅವಳು ಇದರಲ್ಲಿ ಸಫಲಳಾಗಿ, ಕೆಲಸ ಪೂರ್ಣವಾದರೆ ಇತಿಹಾಸದಲ್ಲಿ ನಳ, ದಮಯಂತಿಯರ ಜೊತೆಗೆ ಅವಳ ಹೆಸರೂ ಶಾಶ್ವತವಾಗುತ್ತದೆ. ಅವಳ ಹೆಸರೇ ಕೇಶಿನೀ, ಅಂದರೆ ಅಂದದ ಕೂದಲುಳ್ಳವಳು ಅಂತ. ಹಿಂದಿನ ಕಾಲದಲ್ಲಿ ಸ್ತ್ರೀ ಪುರುಷ ಇಬ್ಬರಿಗೂ ಕೂದಲು ವಿಶೇಷವಾಗಿತ್ತು. ಅದನ್ನು ಅಲಂಕರಿಸಿಕೊಳ್ಳುವ ಪರಿಪಾಠವೂ ಇತ್ತು. ಕೇಶ ಇರಬೇಕೆಂದರೆ ತಲೆಯೂ ಇರಬೇಕು. ಚಿತ್ತವೃತ್ತಿಗಳೇ ಹೀಗೆ ಕೇಶರೂಪವಾಗಿ ಹೊರಬಂದಿರುತ್ತವೆ. ಹೀಗಾಗಿ ಮನದೊಳಗೆ ಮೂಡುವ ಭಾವಗಳಿಗೂ ಕೇಶಗಳಿಗೂ ಹತ್ತಿರದ ಸಂಬಂಧ. ಕೇಶಿನಿ ಹೋಗಿ ನಳನನ್ನು ಮಾತನಾಡಿಸುತ್ತಾಳೆ.

ಎಲೈ ನರೇಶನೇ, ಅಂತ ಸಂಬೋಧನೆ ಮಾಡಿದಾಗ ಆತ ಅದನ್ನು ಸಹಜವಾಗಿ ಸ್ವೀಕರಿಸುತ್ತಾನೆ ಅಂದರೆ, ಅವನಿಗೆ ಹಾಗೆ ಕರೆಸಿಕೊಂಡು ಅಭ್ಯಾಸ ಇದೆ. ಇಲ್ಲಿ ಒಂದು ಜಾಣತನವೂ ಇದೆ. ನರೇಶ ಎಂದರೆ ರಾಜ ಎಂದೂ ಆಗುತ್ತದೆ ಹಾಗೂ ಪುರುಷ ಶ್ರೇಷ್ಠ ಎಂದೂ ಆಗುತ್ತದೆ. ಹಾಗಾಗಿ ಈ ಚಾತುರ್ಯದ ಸಂಬೋಧನೆ. ಅವನು ಹಿಂದೆ ಮೆರವಣಿಗೆಯಲ್ಲಿ ಎಷ್ಟು ಬಾರಿ ಇಲ್ಲಿಗೆ ಬಂದಿರಬಹುದು? ಎಂತಹ ಸ್ವಾಗತ ಸಿಕ್ಕಿರಬಹುದು ಅವನಿಗೆ.
ಕೇಶಿನಿ ಈಗ ಹೋಗಿ ಕೇಳುತ್ತಾಳೆ ನೀನು ಇಲ್ಲಿಗೆ ಬಂದಿದ್ದು ಸಂತೋಷವಾಯಿತು. ನಿನಗೆ ಸ್ವಾಗತ, ದಮಯಂತಿಯು ನಿನ್ನ ಕುಶಲವನ್ನು ಕೇಳುತ್ತಿದ್ದಾಳೆ, ನಾನು ಅವಳ ಸಖಿ ಎನ್ನುತ್ತಾಳೆ. ನಳ ಏನು ಹೇಳಬೇಕು ಈಗ? ಚೆನ್ನಾಗಿಲ್ಲ ಅಂತ ಹೇಳಬೇಕಾ? ಎದೆ ಝಗ್ಗೆಂದಿತು ನಳನಿಗೆ, ಹಿಂದೆ ಋತುಪರ್ಣನ ಆಸ್ಥಾನದಲ್ಲಿ ಪರ್ಣಾದನನ್ನು ಎದುರಿಸಿದ್ದ, ಈಗ ದಮಯಂತಿಯ ದೂತಿ ಬಂದಿದ್ದೇನೆ ಅಂದಾಗ ಅವನಿಗೆ ಹಳೆಯ ವಿಚಾರಗಳು ನೆನಪಾಗುತ್ತವೆ. ದಮಯಂತಿ ಎಂದರೆ ಅವನಲ್ಲಿ ಸಂತೋಷ ಮಾತ್ರವಲ್ಲ ಉತ್ಕಟತೆಯೂ ಇದೆ, ಸಂಕಟವೂ ಇದೆ ಅವನಲ್ಲಿ. ಕೇಶಿನಿ ಮುಂದುವರೆಸಿ ದಮಯಂತಿ ಕೇಳಲು ಬಯಸಿದ್ದಾಳೆ, ಯಾವಾಗ ಹೊರಟಿರಿ ಮತ್ತು ಯಾವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿರಿ? ನಿಜವಾಗಿ, ನ್ಯಾಯವಾಗಿ, ತತ್ವಶಃ ಹೇಳು ಎಂದು ಹೇಳುತ್ತಾಳೆ. ಈ ಪ್ರಶ್ನೆ ಯಾಕೆ ಎಂದರೆ, ದಮಯಂತಿಗೆ ತನ್ನ ಪ್ರಯತ್ನ ಅಯೋಧ್ಯೆ ತಲುಪಿ ಆನಂತರ, ಅದಕ್ಕಾಗಿಯೇ ಹೊರಟು ಇವರು ಬಂದಿದ್ದಾರಾ ಹೇಗೆ? ಅಂತ. ಯಾವಾಗ ಹೊರಟಿರಿ ಅಂದಾಗ ನಿನ್ನೆ ಅಂತ ಉತ್ತರ ಬಂದರೆ ಅವಳ ಯತ್ನ ಫಲಿಸಿದೆ, ಅಂತ. ಅದು ಹೌದು ನಿನ್ನೆ ಹೊರಟಿದ್ದು ಅಂತಾದರೆ, ಅವನು ನಳನೇ, ಸಂದೇಹವೇ ಇಲ್ಲ. ಏಕೆಂದರೆ ಆ ವೇಗ ನಳನಿಗೆ ಮಾತ್ರವೇ ಸಾಧ್ಯ. ಮತ್ತು ಮುಂದಿನ ಪ್ರಶ್ನೆ ಯಾಕಾಗಿ ಬಂದದ್ದು ಅಂತ, ಸ್ವಯಂವರದ ವಿಷಯವಾಗಿಯೇ ಅಂತ. ನಳ ಸತ್ಯವಾದಿ, ಸುಳ್ಳಾಡಲಾರ. ಇದ್ದ ವಿಷಯ ಇದ್ದಂತೆಯೇ ಮಾತನಾಡುತ್ತಾನೆ. ಅದೂ ಅಲ್ಲದೇ ಕೇಳುತ್ತಿರುವವಳು ದಮಯಂತಿಯೇ ಆದ್ದರಿಂದ ಸತ್ಯವನ್ನೇ ಹೇಳುತ್ತಾನೆ. ಸ್ವಯಂವರದ ವಿಚಾರಕ್ಕಾಗಿ ಬಂದದ್ದು ಎಂಬುದಾಗಿ.
ಆದರೆ ಅಲ್ಲಿ ಋತುಪರ್ಣ ಅದನ್ನು ಹೇಳಿಲ್ಲ. ದಮಯಂತಿಯ ಎರಡನೇ ಸ್ವಯಂವರದ ವಾರ್ತೆ ಬಂದಿದೆ ಎಂದು ಹೇಳುವಾಗ, ಕಣ್ಣಂಚಿನಲ್ಲಿ ನೀರು, ಹೃದಯದೊಳಗೆ ಮಹಾಸಂಕಟ. ಯಾರಿಗಾದರೂ ತನ್ನ ಹೆಂಡತಿ, ತನ್ನ ಮಹಾರಾಣಿಗೆ ಎರಡನೇ ಸ್ವಯಂವರ, ತನ್ನ ಅರ್ಧ ಜೀವವಾದವಳಿಗೆ ಮದುವೆ ಅಂದರೆ ಕಣ್ಣಲ್ಲಿ ನೀರು ಬರದಿದ್ದರೆ ಹೇಗೆ? ಹೇಳಿ. ಪ್ರಕೃತ ನಳನಲ್ಲಿಯೂ ಹೀಗೇ ಆಗಿದೆ.

ಈಗ ನಳನೊಳಗೆ ಕಲಿ ಇಲ್ಲ. ಅವನಿದ್ದಿದ್ದರೆ ಏಳಿಗೆ ಇಲ್ಲ. ಮೂಲರೂಪ ಮರಳಿ ಪಡೆಯಲು ಈಗ ಸಾಧ್ಯ. ದ್ಯೂತ ಸಿದ್ಧಿ ಆಗಿರುವುದರಿಂದ ರಾಜ್ಯವನ್ನು ಮರಳಿ ಪಡೆಯಬಲ್ಲ. ಹಾಗಾಗಿ ರಾಜ್ಯ,ಕೋಶ,ರೂಪ ಯಾವುದೂ ದುರ್ಲಭ ಅಲ್ಲ. ಮಕ್ಕಳೂ ಸಿಗಬಹುದು ಆದರೆ ದಮಯಂತಿ? ಅವಳು ಹಾಲು- ಜೇನಿನ ಮನಸ್ಸು ಒಡೆದು ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗಲು ಸಿದ್ಧಳಾಗಿದ್ದಾಳೆ ಎಂದರೆ ಹೃದಯ ಬಿರಿದಂತೆ ಆಗುತ್ತದೆ. ಆದರೆ ದಮಯಂತಿಯ ಶೀಲ, ರೂಪ, ಸ್ವಭಾವಗಳನ್ನು ನೆನಪು ಮಾಡಿಕೊಂಡರೆ ಆ ವಿಚಾರ ಸುಳ್ಳು ಅಂತ ಅನಿಸುತ್ತದೆ. ಅಲ್ಲದೇ ಹೀಗೆ ಹೇಳುವಾಗ ಅವನ ಕಣ್ಣಿನಲ್ಲಿ ಕಣ್ಣೀರು ಏಕೆ? ಅಂದರೆ ಅವನು ಅವಳಿಗೆ ಸಂಬಂಧಿಸಿದವನೇ ಆಗಿರಬೇಕಲ್ಲವೇ?

ಕಲಿತೊಲಗಿದರೂ ಅವನು ಮಾಡಿದ ಅನಾಹುತಗಳ ಪರಿಣಾಮ ಇನ್ನೂ ಮುಗಿದಿಲ್ಲ, ಹಬ್ಬ ಮುಗಿದರೂ ಹೋಳಿಗೆ ಮುಗಿಯಲಿಲ್ಲ ಎನ್ನುವಂತೆ, ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎನ್ನುವಂತೆ, ಗಾಯ ಮಾಗಿದರೂ ಕಲೆ ಮಾಗಲಿಲ್ಲ ಎನ್ನುವಂತೆ ಕಲಿಯ ಪ್ರಭಾವವೂ ಆಗಿದೆ. ಎಲ್ಲದಕ್ಕಿಂತ ದೊಡ್ಡದು ಈ ದಮಯಂತಿಯ ಸ್ವಯಂವರ ಅವನ ಪಾಲಿಗೆ. ದುಃಖ ಒತ್ತರಿಸಿಕೊಂಡು ಬಂತು, ಆದರೆ ದಾಸಿಯ ಮುಂದೆ ತೋರ್ಪಡಿಸಲಾಗದೆ ಅಳು ನುಂಗಿಕೊಂಡ. ವಿಚಿತ್ರವೆಂದರೆ ಅವಳ ಎರಡನೇ ಪ್ರಶ್ನೆಗೆ ಮೊದಲು ಉತ್ತರ ಕೊಡುತ್ತಾನೆ. ಅಂದರೆ ಅವಳ ಸ್ವಯಂವರದ ವಿಚಾರವೇ ಅವನ ತಲೆಯ ತುಂಬಾ ತುಂಬಿಕೊಂಡಿದೆ ಅಂತ. ಅದೇ ವಿಚಾರ ಅವನನ್ನು ಬಿಡದೇ ಕಾಡುತ್ತಿದೆ ಅಂತ ಇದರಿಂದ ತಿಳಿಯುತ್ತೆ.
ನಂತರ ನಳ ಮುಂದುವರೆಸಿದ ಸ್ವಯಂವರದ ಮಾತು ಕೇಳಿ ನನ್ನ ಒಡೆಯ ನೂರು ಯೋಜನ ದೂರ ಸಾಗಬಲ್ಲ, ವಾಯವೇಗದಲ್ಲಿ ಚಲಿಸುವ ಕುದುರೆಗಳನ್ನು ಹೂಡಿದ ರಥವನ್ನೇರಿ ಹೊರಟ. ನಾನವನ ಸಾರಥಿ ಎಂದು ಹೇಳಿದ. ಇಂದು ಬೆಳಿಗ್ಗೆಯೇ ಹೊರಟದ್ದು ಅಯೋಧ್ಯೆಯಿಂದ, ಅಂತಲೂ ತಿಳಿಸಿದ. ಸರಿ ಕೇಶಿನಿಗೆ ಉತ್ತರ ಸ್ಪಷ್ಟವಾಗಿ ಸಿಕ್ಕಿತು.

ಇನ್ನು ನಳನ ವಿಚಾರಕ್ಕೆ ಹೇಗೆ ಹೋಗುವುದು ಅಂದರೆ, ವಾರ್ಷ್ಣೇಯನ ವಿಚಾರ ತೆಗೆದರೆ ಅದು ಸುಲಭ ಎಂದು ಭಾವಿಸಿ, ಆ ಮೂರನೆಯವನು ಯಾರು? ಯಾರಿಗೆ ಸೇರಿದವನು? ಎಂದಳು. ಇದು ಬುದ್ಧಿವಂತಿಕೆಯಿಂದ ಕೇಳಿದ ಪ್ರಶ್ನೆ, ಆಗ ಅವನು ನಳನ ವಿಚಾರ ಹೇಳುತ್ತಾನೆ ಅಂತ. ಹಾಗೆಯೇ ಮುಂದುವರೆಸಿ ಕೇಳುತ್ತಾಳೆ. ನೀನು ಯಾರು? ಎಲ್ಲಿಯವನು? ಅವನೇ ಸಾರಥಿಯಾದರೆ ನಿನಗೆ ಹೇಗೆ ಕೆಲಸ ಸಿಕ್ಕಿತು? ಇದು ಅತ್ಯಂತ ಸ್ಪಷ್ಟ ಪ್ರಶ್ನೆ ವಾರ್ಷ್ಣೆಯನೇ ಉತ್ತಮ, ಹಾಗಿರಬೇಕಾದರೆ ನಿನಗೆ ಕೆಲಸ ಸಿಕ್ಕಿದೆ, ಎಂದರೆ ನೀನು ಅವನಿಗಿಂತ ಉತ್ತಮನಿರಬೇಕಲ್ಲವೇ ಅಂತ.

ಬಾಹುಕ ಉತ್ತರಿಸಿದ, ಅವನು ಪುಣ್ಯಶ್ಲೋಕನಾದ ನಳನ ಸಾರಥಿ ವಾರ್ಷ್ಣೇಯ, (ಅಲ್ಲಿಯೂ ತನ್ನವ ಅನ್ನುವ ಭಾವ ಇದೆ ನೋಡಿ, ಋತುಪರ್ಣನ ಸಾರಥಿ ಅನ್ನುವುದಕ್ಕಿಂತ ಹೆಚ್ಚು ಇದು ಅಂತ ಭಾವ), ಆದರೆ ಯಾವಾಗ ನಳನು ಕಾಡುಪಾಲಾದನೋ, ಆಗ ಋತುಪರ್ಣನಲ್ಲಿ ಸೇರಿದ್ದಾನೆ. ಇನ್ನು ತಾನು ಅಶ್ವಕುಶಲ, ಪಾಕ ಕುಶಲನೂ ಹೌದು. ನನ್ನ ಕೌಶಲ್ಯವನ್ನು ಮೆಚ್ಚಿ ಋತುಪರ್ಣನು ನನ್ನನ್ನು ವರಿಸಿದ್ದಾನೆ. ಇಲ್ಲಿ ಒಂದು ಭಾಷಾ ವಿಶೇಷವಿದೆ. ಸಂಸ್ಕೃತದಲ್ಲಿ ಸೂದನೆಂದರೆ ಪಾಕತಜ್ಞ ತಮಿಳಿನಲ್ಲಿ ಸೂತ ಹಾಗೂ ಸೂದ ಎಂಬ ಎರಡು ಪದ ಇಲ್ಲ ಒಂದೇ ಪದ. ಎರಡಕ್ಕೂ ಸೂದ ಎಂದೇ ತಮಿಳಿನಲ್ಲಿ ತ ಕಾರವಿಲ್ಲ. ಎಂತಹ ಸೂಪಜ್ಞನೆಂದರೆ ಒಂದು ಬಾರಿ ಇವನ ಅಡುಗೆಯನ್ನು ಉಂಡರೆ, ಬೇರೆಯವರ ಕೈಯಡುಗೆಯ ಊಟ ರುಚಿಸುವುದಿಲ್ಲ. ಇದೇ ಬೇಕಾಗಿತ್ತು ಕೇಶಿನಿಗೆ. ಎರಡೂ ವಿದ್ಯೆ ಒಂದೇ ಕಡೆ ಇದೆ, ಅವಳು ಕೇಳಿದಳು. ಓ, ಹೌದಾ, ವಾರ್ಷ್ಣೇಯ ನಳ ಕಾಡು ಪಾಲಾದಾಗ ಬೇರಾದನಾ, ಹಾಗಿದ್ದರೆ ಅವನಿಗೆ ಈಗ ನಳ ಎಲ್ಲಿದಾನೆ ಅಂತ ಗೊತ್ತಿರಬೇಕಲ್ಲಾ.. ನೀವಿಬ್ಬರೂ ಜೊತೆಗೇ ಇದ್ದೀರಿ, ಈ ವಿಚಾರವಾಗಿ ನೀವು ಏನಾದರೂ ಮಾತನಾಡಿಕೊಂಡಿದ್ದೀರಾ. ಅವನು ನಿನ್ನಲ್ಲಿ ನಳನ ವಿಚಾರ ಏನಾದರೂ ಹೇಳಿದನಾ? ಕೇಶಿನಿ ಹೀಗೆ ನಳ ಎಲ್ಲಿದ್ದಾನೆ ಈಗ ಅಂತ ನಳನನ್ನೇ ಕೇಳುತ್ತಿದ್ದಾಳೆ. ಇವಳು ಪೊಲೀಸ್ ಇಲಾಖೆಯಲ್ಲಿ ಇರಬೇಕಾದಂಥವಳು ಅವನಿಗೆ ಅರಿವಿಗೇ ಬರದಂತೆ ಒಂದೊಂದೇ ಗುಟ್ಟನ್ನು ಹೊರಹಾಕುತ್ತಿದ್ದಾಳೆ.. ಪಾಪ ನಳ ಸರಳ ಸ್ವಭಾವದವನು ಇದ್ದದ್ದನ್ನು ಇದ್ದಂತೆಯೇ ನೇರವಾಗಿ ಹೇಳುತ್ತಾ ಹೋದ. ನಳ ಎಲ್ಲಿದ್ದಾನೆ? ಹೇಗಿದ್ದಾನೆ? ಯಾವ ರೀತಿ ಇದ್ದಾನೆ ಅಂತ ಯಾರಿಗೂ ತಿಳಿದಿಲ್ಲ, ಆ ಚಕ್ರವರ್ತಿ ಪಾಪ, ರೂಪವನ್ನೂ ಕಳೆದುಕೊಂಡು ಕುರೂಪಿಯಾಗಿ, ಗೂಢವಾಗಿ ಭೂಮಿಯಲ್ಲಿ ಅಲೆಯತ್ತಿದ್ದಾನೆ ಅಂತ ಹೇಳಿಬಿಟ್ಟ. ಮೊದಲೇ ಅವಳು ಚತುರೆ, ಅಂಗೈ ತೋರಿದರೆ ಮುಂಗೈ ನುಂಗುವವಳು. ಇನ್ನು ಇವನು ಇಡೀ ಕೈಯನ್ನೇ ಕೊಡುತ್ತಿದ್ದಾನೆ. ಇಷ್ಟು ಹೇಳಿದರೆ ಇನ್ನು ಕೇಳಬೇಕಾ ಆದರೆ ನಳ ಉದ್ವೇಗದಲ್ಲಿದ್ದಾನೆ, ಮತ್ತೂ ಮುಂದುವರೆದು ಹೇಳಿದ, ನಳ ಯಾರು ಅಂತ ಅವನ ಆತ್ಮಕ್ಕೆ ಮಾತ್ರವೇ ಗೊತ್ತು. ಮತ್ಯಾರೂ ಅರಿಯಲಾರರು, ಹಂ ಅವನ ಎರಡನೇ ಆತ್ಮಕ್ಕೆ ಗೊತ್ತಿರುವ ಸಾಧ್ಯತೆ ಇದೆ. (ದಮಯಂತಿಗೆ ಎಂದು ಭಾವ). ಅದೂ ಸರಿ ಇದೆ ಹಾಗಾಗಿ ತಾನೇ ಅವಳಿಗೆ ಅವನನ್ನು ಹುಡುಕಲು ಸಾಧ್ಯವಾದದ್ದು, ಅವನನ್ನು ಕುರುಹುಗಳಿಂದ ಈಗ ಪತ್ತೆ ಹಚ್ಚಲು ಸಾಧ್ಯವಿಲ್ಲ, ಯಾಕೆಂದರೆ ಆ ಮೊದಲಿನ ಕುರುಹುಗಳು ಈಗ ಇಲ್ಲ.. ಅಂತ ಹೇಳಿ ಸುಮ್ಮನಾದ. ಕೇಶಿನಿ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ಇನ್ನು ಕಡೆಯ ಅಸ್ತ್ರ ಬಿಡಬೇಕು, ಹೀಗೆ ಅವಳ ಒಳಗೆ ಮಥನ ಆಗುತ್ತಾ ಇದೆ.

ಸದ್ಯ ಕುತೂಹಲದಲ್ಲಿದ್ದಾಳೆ ಕೇಶಿನೀ, ಈ ಮೊದಲಿನ ಮಾತುಕಥೆಗಳಲ್ಲಿ ಇಲ್ಲಿರುವ ವ್ಯಕ್ತಿ ನಳನೇ ಎಂಬದು ಸ್ಪಷ್ಟವಾಗುತ್ತಿರುವಂತೆಯೇ, ತನ್ನ ಬತ್ತಳಿಕೆಯ ಪ್ರಮುಖ ಅಸ್ತ್ರ ಹೊರತೆಗೀತಾಳೆ. ಬಾಹುಕ, ಅಯೋಧ್ಯೆಗೆ ಪರ್ಣಾದನೆಂಬ ಬ್ರಾಹ್ಮಣ ಬಂದಿದ್ದನಲ್ಲವಾ ಅವನು ಹೇಳಿದ ನಾರೀವಾಕ್ಯಗಳನ್ನು ಹೇಳಿದನಲ್ಲವಾ, ಈ ಶ್ಲೋಕ ನಿನಗೆ ಚಿರಪರಿಚಿತವಲ್ಲವೇ ಎಂದು ಮತ್ತೆ ಅದನ್ನು ವಿವರವಾಗಿ ಹೇಳುತ್ತಾಳೆ. ಅಂದು ನೀನು ಇದಕ್ಕೆ ಮಾರುತ್ತರ ಕೊಟ್ಟೆಯಲ್ಲವೇ? ಈಗ ದಮಯಂತಿ ಆ ವಾಕ್ಯಗಳನ್ನು ಕೇಳಬೇಕಂತೆ, ಅವಳಿಗೆ ಅದು ಪರಮ ಪ್ರೀತಿಕರವಂತೆ ಅದನ್ನು ಆಲಿಸಲು. ಹೇ ಮಹಾಬುದ್ಧಿಯೇ, ಹೇ ಮಹಾಮನಸ್ವಿಯೇ ಮಾರುತ್ತರ ಹೇಳು, ಮತ್ತೆ ದಯಮಾಡಿ ಅಂತ. ಆಗ ನಳನಿಗೆ ಏನಾಯಿತು ಅಂದರೆ ಅದೇ ಇವತ್ತಿನ ಪ್ರವಚನದ ಶೀಷಿ೯ಕೆ. “ಬಾಹುಕ ಭಾವುಕ” ನಾದ ಅಂತ. ಇದುವರೆಗಿನ ಧಾಟಿ ನಳನಲ್ಲಿ ಬದಲಾಯಿತು. ಒಂದು ದೊಡ್ಡ ಬದಲಾವಣೆ ಹೊರಗಡೆ, ಇನ್ನೂ ದೊಡ್ಡದು ಒಳಗಡೆ. ಒಳಗಡೆ ಹೃದಯದ ತುಂಬಾ ನೋವು ತುಂಬಿತ್ತು. ಮೊದಲೊಮ್ಮೆ ಇರಿದ ಖಡ್ಗದಿಂದ ಮತ್ತೊಮ್ಮೆ ಇರಿದಂತಾಯಿತು. ಹೃದಯ ಶೋಕದಿಂದ ತುಂಬಿತು. ಕಣ್ಣುಗಳು ನೀರಿನಿಂದ ತುಂಬಿದವು. ಅದನ್ನು ನಿಗ್ರಹಿಸುವ ಪ್ರಯತ್ನ ಮಾಡುತ್ತಾ ಇದ್ದಾನೆ ನಳ. ಹೇಗಾದರೂ ಮುಖದ ವಿಕಾರ ತಿಳಿಯಬಾರದೆ ಕಣ್ಣಿನಿಂದ ಹೊರಬರುವ ನೀರು ಕಾಣಬಾರದೆ ಇರುವ ಪ್ರಯತ್ನ ಮಾಡುತ್ತಿದ್ದಾನೆ. ಆದರೂ ಕಣ್ಣ ತುಂಬಾ ನೀರು ತುಂಬಿದೆ. ನಳನಿಗೆ ಎಂದು ಬಿಡುಗಡೆಯೋ? ಯಾವಾಗ ಬಿಡುಗಡೆಯೋ?

ಏನೇ ಆದರೂ ಬೇಗ ಆಗಲಿ ಎಂಬ ನಮ್ಮ ಆಶಂಸನವನ್ನು ಕೃಷ್ಣ ಚರಣಗಳಲ್ಲಿ ಸಮರ್ಪಣೆ ಮಾಡೋಣ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments