#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
11-08-2018:

ಇಂದಿನ ವಿಷಯ ಉಪಸಂಹಾರ

ಮಹಾಭಾರತದ ಸಂದರ್ಭ, ದ್ರೋಣರಿಂದ ಶಿಷ್ಯರ ಬಿಲ್ವಿದ್ಯಾ ಪರೀಕ್ಷೆ, ಮರದಮೇಲಿರುವ ಗೊಂಬೆಹಕ್ಕಿಯ ಕಣ್ಣಲ್ಲಿ ಬಾಣ ಪ್ರಯೋಗದ ಗುರಿ, ಭಿಮನ ಸರದಿ ಬಂತು, ಬಾಣಪ್ರಯೋಗ ಮಾಡಿದ, ಕೂಡಲೇ ಗುರುಗಳು ಹೇಳಿದರು ಇದು ಗುರಿ ಮುಟ್ಟಲ್ಲ ಅಂತ, ಹೌದಾ ಗುರುಗಳೇ ಅಂದ ಭೀಮ ಹಾರಿ ಬಾಣವನ್ನು ವಾಪಸ್ಸು ಹಿಡಿದುಬಿಟ್ಟ. ಬಾಣ ಬಿಡುವುದು ಸುಲಭ ಹಿಂಪಡೆಯುವುದು ಕಷ್ಟ ಹಾಗೆಯೇ ಮಾತೂ ಆಡುವುದು ಸುಲಭ, ಹಿಂಪಡೆಯುವುದು ಕಷ್ಟ. ಎಷ್ಟೇ ದೊಡ್ಡ ಕೆಲಸವಾದರೂ ಪ್ರಾರಂಭ ಸುಲಭ ಮುಗಿಸುವುದು ಕಷ್ಟ. ಹಾಗೆಯೇ ಭೀಮನ ಉದಾಹರಣೆ, ಉಪಸಂಹಾರ.

ವಿವಿಧ ಉಪದೇಶಗಳ ಉಪದೇಶವಾಗುವಾಗ ಅದರಲ್ಲಿ ಎರಡು ಬಗೆ, ಮೊದಲನೆಯದು ಅದರ ಪ್ರಯೋಗ, ಎರಡನೆಯದು ಅದರ ಉಪಸಂಹಾರ ಅಂದರೆ ಹಿಂಪಡೆಯುವುದು. ಯೋಗ್ಯನಾದವನಿಗೆ ಎರಡೂ ಗೊತ್ತಿರಬೇಕು.

ಶ್ರೀಶ್ರೀ ತತ್ತ್ವಭಾಗವತಮ್

ಮಹಾಭಾರತ ಯುದ್ಧ ಮುಗಿದಿದೆ, ಪಾಂಡವರವ ಗೆಲುವಾಗಿದೆ, ಅಶ್ವತ್ಥಾಮ ರಾತ್ರೋರಾತ್ರಿ ಮಲಗಿದ್ದ ಪಾಂಡವರ ಮಕ್ಕಳನ್ನು ದಾರುಣವಾಗಿ ಹತ್ಯೆ ಮಾಡುತ್ತಾನೆ. ಅನಗತ್ಯ ದ್ವೇಷದಿಂದ ಈ ಅಕಾರ್ಯ ಮಡುತ್ತಾನೆ. ಪಾಂಚಾಲಿಗೆ ದುಃಖವಾಗುತ್ತದೆ. ಭೀಮಾರ್ಜುನರು ಸಂತೈಸಿ ಅಶ್ವತ್ಥಾಮನನ್ನು ಹಿಡಿದು ತರುವುದಾಗಿ ಹೇಳಿ ಹೋಗುತ್ತಾರೆ. ಅವನು ಗಂಗಾ ತೀರದಲ್ಲಿ ವ್ಯಾಸರ ಬಳಿಯಲ್ಲಿ ನಾರುಮಡಿಯನ್ನುಟ್ಟು, ಧರ್ಭಾಸನದಲ್ಲಿ ಕುಳಿತು ಮೈಗೆಲ್ಲಾ ತುಪ್ಪವನ್ನು ಸವರಿಕೊಂಡಿರುತ್ತಾನೆ. ಭೀಮ ಅವನನ್ನು ಹಿಡಿಯಲು ಹೋದಾಗ ಪಾಂಡವರ ನಾಶದ ಸಂಕಲ್ಪ ಮಾಡಿ, ಬ್ರಹ್ಮಶಿರೋಸ್ತ್ರದ ಪ್ರಯೋಗ ಮಾಡಿಬಿಡುತ್ತಾನೆ. ಅದು ಪ್ರಳಯಕಾರಿ ಅಸ್ತ್ರ. ಯೋಗ್ಯತೆಯಿಲ್ಲದೆಯೂ ದ್ರೋಣರಿಂದ ಅದನ್ನು ಬಲವಂತವಾಗಿ ಪಡೆದಿರುತ್ತಾನೆ, ಇಂದ್ರಿಯ/ಮನಃ ಸಂಯಮ ಇಲ್ಲದವನಿಗೆ ಇದು ಯೋಗ್ಯವಲ್ಲ.

ಆಪತ್ತು ಬಂದಾಗ ಹೇಗೆ ಸ್ವೀಕರಿಸಬೇಕೆನ್ನುವುದು ಎಲ್ಲರಿಗೂ ತಿಳಿದಿರಬೇಕಾದ ವಿಜ್ಞಾನ. ದರ್ಭೆಯಲ್ಲಿ ಪ್ರಯೋಗಿಸಿದ ಆ ಅಸ್ತ್ರಕ್ಕೆ ಎದುರಿಲ್ಲ, ಇದು ಕೃಷ್ಣನಿಗೂ ಗೊತ್ತು. ಅರ್ಜುನನಿಗೂ ಅದನ್ನೇ ಪ್ರಯೋಗ ಮಾಡಲು ಹೇಳುತ್ತಾನೆ ಕೃಷ್ಣ. ಅರ್ಜುನ ಹಾಗೇ ಮಾಡಿದ, ಆದರೆ ಸಂಕಲ್ಪ ವಿಶೇಷವಾಗಿತ್ತು: ಎಲ್ಲರಿಗೂ ಒಳಿತಾಗಲಿ, ಅಶ್ವತ್ಥಾಮನಿಗೆ ಒಳ್ಳೆಯದಾಗಲಿ ಹಾಗೂ ತಮ್ಮಗಳಿಗೆ ಯಾವುದೇ ತೊಂದರೆಯಾಗದಿರಲಿ, ಆ ಅಸ್ತ್ರ ಶಾಂತವಾಗಲಿ ಎಂಬುದಾಗಿ ಸಂಕಲ್ಪಿಸಿದ.
ಇದೇ ಒಳ್ಳೆಯತನದ ಕಾರಣದಿಂದಲೇ ಕೃಷ್ಣ ಪಾಂಡವರ ಜೊತೆಗೆ ಇದ್ದದ್ದು. ಎರಡೂ ಅಸ್ತ್ರಗಳು ಎದುರಾದವು ಸಮಸ್ತ ಜೀವರಾಶಿಗೆ ತೊಂದರೆಯಾದೀತೆನ್ನುವ ಚಿಂತೆಯಲ್ಲಿ ಎರಡು ದಿವ್ಯಚೇತನಗಳು ಅಂದರೆ ವ್ಯಾಸ ಹಾಗೂ ನಾರದರು ಅವುಗಳಿಗೆ ಅಡ್ಡ ಬಂದರು. ಸ್ವಾರ್ಥರಹಿತರಾದ ಇಂತಹ ಮಹಿಮಾನ್ವಿತರಿಂದಲೇ ಜಗತ್ತು ಉಳಿದಿದೆ. ಇಬ್ಬರಿಗೂ ಅವರು ಆ ಶಸ್ತ್ರಗಳನ್ನು ಹಿಂದೆಗೆದುಕೊಳ್ಳಲು ಹೇಳುತ್ತಾರೆ. ಇಂದ್ರಿಯ ನಿಗ್ರಹ ಹಾಗೂ ಬ್ರಹ್ಮಚರ್ಯ ಪಾಲನೆ ಮಾಡಿದವರಿಗೆ ಮಾತ್ರಾ ಅದು ಸಾಧ್ಯ. ಅರ್ಜುನ ಹಿಂತೆಗೆದುಕೊಂಡ, ಅಶ್ವತ್ಥಾಮನಿಂದ ಅದು ಸಾಧ್ಯವಾಗದೇ ಅವನು ತನ್ನ ಸಂಕಲ್ಪ ಬದಲಾಯಿಸಿ ಅದನ್ನು ಪಾಂಡವರ ಗರ್ಭವಿನಾಶಕ್ಕಾಗಿ ಪ್ರಯೋಗಿಸಿದ.

ಈ ಮೊದಲೇ ಅಶ್ವತ್ಥಾಮ ಆ ಅಸ್ತ್ರವನ್ನು ಹಿಡಿದು ಕೃಷ್ಣನೊಡನೆ ವ್ಯಾಪಾರ ಮಾಡಲು ಬಂದಿದ್ದ. ಅವನ ಅಸ್ತ್ರಕ್ಕೆ ಪ್ರತಿಯಾಗಿ ಕೃಷ್ಣನ ಸುದರ್ಶನ ಚಕ್ರ ಎಂದು, ಆದರೆ ಅವನಿಂದ ಚಕ್ರ ಒಯ್ಯಲಾಗದೇ ಬಿಟ್ಟ. ಆಗ ಕೃಷ್ಣ ಕೇಳುತ್ತಾನೆ “ಚಕ್ರ ಪಡೆಯುವ ನಿನ್ನ ಉದ್ದೇಶ ಏನಾಗಿತ್ತು?” ಆಶ್ವತ್ಥಾಮ ನಿನ್ನ ಮೇಲೇ ಪ್ರಯೋಗಿಸುವ ಉದ್ದೇಶ ಎಂದು ಕೃಷ್ಣನಿಗೇ ಹೇಳುತ್ತಾನೆ! ಅಂತಹ ಮನುಷ್ಯ ಅವನು.
ಈಗ ಕೃಷ್ಣ ಹೇಳುತ್ತಾನೆ: ನಿನ್ನ ಅಸ್ತ್ರ ಫಲಿಸಲಾರದು. ಒಂದೊಮ್ಮೆ ಗರ್ಭದಲ್ಲಿರುವ ಪಾಂಡವರ ಕುಡಿ ನಾಶವಾದರೂ, ನಾನು ಅದನ್ನು ಬದುಕಿಸುತ್ತೇನೆ. ಆದರೆ ನೀನು ಇದರಿಂದ ಪರಮ ಕಷ್ಟದ ಅವಸ್ಥೆಯನ್ನು ಪಡೆಯುತ್ತೀಯೆ, ಚಿರಂಜೀವಿಯಾದರೂ ಯಾರಿಂದಲೂ ಗುರುತಿಸಲ್ಪಡದೇ, ಏಕಾಂಗಿಯಾಗಿ ಭೂಮಂಡಲದಾದ್ಯಂತ ಪಿಶಾಚಿಯಂತೆ ಅಲೆಯುತ್ತೀಯೆ. ನಿನ್ನ ಮೈ ಕೀವು, ರಕ್ತಗಳಿಂದ ತುಂಬಿ ದುರ್ಗಂಧ ಮೈ ಎಲ್ಲಾ ಹರಿಯಲಿ, ಎಲ್ಲ ವ್ಯಾಧಿಗಳೂ ನಿನ್ನನ್ನು ಆವರಿಸಲಿ, ಆದರೆ ಈ ಗರ್ಭ ಪುನಃ ಜೀವಿತನಾಗಿ ಬದುಕಿ ಸಮಸ್ತ ವಿದ್ಯೆಗಳನ್ನು ಅಧ್ಯಯನ ಮಾಡಿ ಸರ್ವಶಾಸ್ತ್ರ ಸಂಪನ್ನನಾಗಿ 60 ವರ್ಷ ಭೂಮಂಡಲವನ್ನು ಪಾಲನೆ ಮಾಡುತ್ತಾನೆ, ಕಲಿಯೂ ಆಗ ಭೂಮಿಯನ್ನು ಮುಟ್ಟಲಾರ.
ಪುನಃ ಕೃಷ್ಣ ಪ್ರತಿಜ್ಞೆ ಮಾಡುತ್ತಾನೆ: ನಾನು ಬದುಕಿನಲ್ಲಿ ಎಂದೂ, ವಿನೋದಕ್ಕಾಗಿಯಾದರೂ ಸುಳ್ಳಾಡದಿದ್ದರೆ, ಯುದ್ಧದಲ್ಲಿ ಸೋತು ಶತ್ರುವಿಗೆ ಬೆನ್ನು ತೋರಿ ಓಡಿರದಿದ್ದರೆ, ಸತ್ಯಧರ್ಮಗಳು ನನ್ನಲ್ಲಿ ಪ್ರತಿಷ್ಟಿತವಾಗಿದ್ದರೆ, ಬ್ರಹ್ಮಜ್ಞರು ನನಗೆ ಪ್ರಿಯರಾಗಿದ್ದರೆ ಈ ಶಿಶು ಬದುಕಲಿ ಎಂದು ಹೇಳಿ ಮಗುವನ್ನು ತನ್ನ ಕಾಲಿನಿಂದ ಶಿರದಿಂದ ಪಾದದವರೆಗೂ ಸ್ಪರ್ಶಿಸುತ್ತಾನೆ. ಆಗ ಮಗು ಜೀವತಳೆಯುತ್ತದೆ. ಅವನೇ ಪರೀಕ್ಷಿತ.

ಎಂತಹ ಯೋಗ ಆ ಶಿಶುವಿನದ್ದು, ನಮಗಾದರೂ ಅಂತಹ ಒಂದು ಯೋಗ ದೊರಕಿದರೆ ಪ್ರಿಯವೇ ಅಲ್ಲವೇ! ಇಲ್ಲಿ ಗಮನಿಸಬೇಕಾದದ್ದು ಉಪಸಂಹಾರ, ಅಶ್ವತ್ಥಾಮನಂತಹ ಆಯಸ್ಸು 3000 ವರ್ಷಗಳು ಬೇಕಾ? ಇಂತಹ ಪರಿಸ್ಥಿತಿ, ಅವಸ್ಥೆ ಬೇಕಾ? ಕೃಷ್ಣನ ಶಾಪದ ಪರಿಣಾಮ ನೋಡಿ, ಬೆರೆಲ್ಲೂ ಕೃಷ್ಣ ಶಾಪಕೊಟ್ಟಿದ್ದೇ ಇಲ್ಲ. ಗರ್ಭಹಾನಿಗಾಗಿ ಅಶ್ವತ್ಥಾಮನಿಗೆ ಇಂತಹ ಶಾಪ.

ದೇವದೂತರು ಬೇರೆಬೇರೆ ದೇಶಗಳಲ್ಲಿ ಹುಟ್ಟಿದ್ದಾರೆ ಆದರೆ ದೇವರುಗಳು ಜನ್ಮಿಸಿದ್ದು ಇಲ್ಲಿ ಮಾತ್ರಾ, ಈ ಭೂಮಿಗೆ ಮಾತ್ರವೇ ಭಗವಂತನಿಗೇ ತಾಯಿಯಾಗುವ ಶಕ್ತಿ ಇರುವುದು.

ಹಕ್ಕಿ ತನ್ನ ಗೂಡಿನಿಂದ ಹೊರಹೋಗುವುದು ಪ್ರವೃತ್ತಿ, ವಾಪಸ್ಸು ಬರುವುದು ನಿವೃತ್ತಿ. ಮನುಷ್ಯನೇ ಆಗಲಿ ಮನೆಯಿಂದ ಹೊರಗೆ ಹೋದವರು ವಾಪಸ್ಸು ಬರಬೇಡವೇ? ವಾಹನಕ್ಕೆ ರಿವರ್ಸ ಗೇರ್ ಬೇಡವೇ? ಹಾಗೇ ನಮ್ಮ ಜೀವನದಲ್ಲೂ ಉಪಸಂಹಾರ ಬೇಕು.

ಒಂದು ಕಥೆ, ಒಬ್ಬ ವ್ಯಾಪಾರಿ ಸಾಯುವ ಕಾಲದಲ್ಲಿ ತನ್ನ ಮಗನಿಂದ ಎರಡು ವಚನ ತೆಗೆದುಕೊಳ್ಳುತ್ತಾನೆ. ಮೊದಲನೆಯದು: ಎಂದಿಗೂ ಕೊಟ್ಟ ಮಾತನ್ನು ತಪ್ಪಬೇಡ ಎಂದು, ಎರಡನೆಯದು: ಯಾರಿಗೂ ಮಾತು ಕೊಡಬೇಡ ಎಂದು.

ಜೀವನದಲ್ಲಿ ದೇವರುಕೊಟ್ಟಿದ್ದನ್ನು ಎಷ್ಟೋ ಪ್ರಯೋಗ ಮಾಡುತ್ತೇವೆ, ಹಿಂದೆ ತೆಗೆದುಕೊಳ್ಳುತ್ತೇವೆಯೇ? ಗಾಳಿಪಟವನ್ನ ಬಿಡುತ್ತೇವೆ ಹಿಂದೆ ತೆಗೆದುಕೊಳ್ಳುವ ಶಕ್ತಿ ಇದ್ದರೆ ಅದು ಮತ್ತೆ ಉಪಯೋಗಕ್ಕೆ ಬರುವುದು, ಇಲ್ಲದಿದ್ದರೆ ಅದು ಹಾಳಲ್ಲವೇ?
ಈ ಎರಡೂ ಜೀವನದ ಮಹಾಪಾಠಗಳು ಈ ಭಾಗದಲ್ಲಿ.
ದೇವರು ಭೂಮಿಗೆ ಬಂದಿದ್ದೇ ಜನರ ಉದ್ಧರಿಸಲು, ಅಂತಹವನಿಂದ ಶಾಪತೆಗೆದುಕೊಳ್ಳುವಂತೆ ಮಾಡುವ ಅಶ್ವತ್ಥಾಮನಂತಹಾ ಕರ್ಮ ಬೇಕಾ?

ನಮ್ಮಲ್ಲಿ ಬಹಳ ವಿಷಯಗಳಿರಬಹದು ಆದರೆ ಉಪಸಂಹರಿಸುವ ಶಕ್ತಿ ಇಲ್ಲದೇ ಪ್ರಯೋಗ ಮಾಡಬಾರದು.
ನಮಗೆ ಉಪಸಂಹರಿಸುವ ಶಕ್ತಿ ಬರಲಿ, ಆ ಸಂಯಮ, ನಿಗ್ರಹ, ನಿಯಂತ್ರಣದ ಶಕ್ತಿ ನಮಗೆ ಬರಲಿ. ಎಲ್ಲವನ್ನೂ ಅವನ ಚರಣದಲ್ಲಿ ಸಮರ್ಪಣೆ ಮಾಡೋಣ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments