#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
12-08-2018:

ಇಂದಿನ ವಿಷಯ ಮಹಾಪ್ರಸ್ಥಾನ ಅಂದರೆ ಮಹಾ ಪ್ರಯಾಣ.

ಪ್ರಯಾಣದಲ್ಲಿ ತಿರುಗಿ ಬರುವುದು ಇರುತ್ತದೆ, ಆದರೆ ಇಲ್ಲಿ ಕೇವಲ ಹೋಗುವುದು, ಮರಣ ಬರುವವರೆಗೂ ಹೋಗುತ್ತಾ ಇರುವುದು.
ಇದು ಆತ್ಮಹತ್ಯೆ ಅಲ್ಲ, ಆತ್ಮಹತ್ಯೆಯಲ್ಲಿ ದೇಹ ಆತ್ಮ ಎರಡೂ ಹಾನಿಯಾಗುತ್ತದೆ ಹಾಗಾಗಿ ಇವುಗಳನ್ನು ಹಾಳುಗೆಡವಿದ್ದಕ್ಕೆ ಶಿಕ್ಷೆ ಇದೆ.
ಶರೀರ ಎನ್ನುವುದು ದೇವ ಜೀವನಿಗೆ ಕೊಟ್ಟ ಅಪರೂಪದ ಉಡುಗೊರೆ. ಅದನ್ನು ಕೊಟ್ಟಿದ್ದು ಜೀವನ ಸಾರ್ಥಕ ಮಾಡಿಕೋ ಮುಕ್ತಿಯನ್ನು ಹೊಂದು ಎಂದು.
ಆತ್ಮಹತ್ಯೆಯಲ್ಲಿ ಈಗ ಕೆಲಸ ಮುಗಿದರೂ ಮುಂದಿನ ಸ್ಥಿತಿ ಇನ್ನೂ ಘೋರ, ಈ ಅಧ್ಯಾಯ ಮುಗಿದು ಇನ್ನೊಂದು ಪ್ರಾರಂಭ, ಇದು ಪೂರ್ಣವಿರಾಮ ಅಲ್ಲ, ಅಲ್ಪವಿರಾಮ ಅಷ್ಟೇ.

ಮಹಾಪ್ರಸ್ಥಾನ…

ಪೂರ್ಣವಿರಾಮವೆನ್ನುವುದು ರಾಮಚರಣಗಳನ್ನು ತಲುಪಿದಾಗಲಷ್ಟೇ.
ಮಹಾಪ್ರಸ್ಥಾನವೆಂದರೆ ಆತ್ಮೋದ್ಧಾರ, ಇದು ಅತ್ಯಂತ ಶ್ರೇಷ್ಠವಾದ ಒಂದು ವ್ಯವಸ್ಥೆ, ಪಾಂಡವರ ಕೊನೆ ಆಗಿದ್ದು ಹೀಗೆ.

ಧರ್ಮರಾಯ 36 ವರ್ಷ ರಾಜ್ಯಭಾರ ಮಾಡಿದ್ದು, ಅರ್ಜುನ ದ್ವಾರಕೆಯ ಸಮಾಚಾರ ತಿಳಿಯಲು ಹೋದವನು ಬಂದಿಲ್ಲ, ಅವನ ನಿರೀಕ್ಷೆಯಲ್ಲಿರುವಾಗ, ಘೋರ ಅಪಶಕುನಗಳು ದಿವಿ, ಭುವಿ, ದೇಹಗಳಲ್ಲಿ, ತಳಮಳ ಆರಂಭ ಹೊರಗೂ, ಮನದೊಳಗೂ. ನೋಡನೋಡುತ್ತಾ ಸುತ್ತಲಿನ ಜನಗಳ ಸ್ವಭಾವದಲ್ಲಿ ಬದಲಾವಣೆ ಕಾಣತೊಡಗಿತು, ಇದೆಲ್ಲ ಕಲಿಪ್ರವೇಶದ ಕುರುಹುಗಳು. ಭೀಮನಲ್ಲಿ ಸಂಶಯ ವ್ಯಕ್ತಪಡಿಸುತ್ತಾನೆ.
ನಮಗೆ ಯಾರಲ್ಲಿ ಪ್ರೀತಿ ಇರುತ್ತದೆಯೋ ಅವರ ಕುರಿತು ಏನಾದರೂ ಕೆಟ್ಟದಾಗಿರಬಹುದೇ ಎಂದೇ ಶಂಕಿಸುತ್ತಿರುತ್ತೇವೆ.
ಕಲಿಪ್ರವೇಶ ಯಾವಾಗ ಆಯಿತೆಂದರೆ ಕೃಷ್ಣಾವತಾರ ಪರಿಸಮಾಪ್ತಿಯಾದಂದೇ..
ಅರ್ಜುನ ಹಿಂದಿರುಗಿದ, ಮುಖದ ಕಳೆ ಮಾಸಿದೆ, ನಿತ್ರಾಣನಾಗಿ ಅಣ್ಣನ ಪದತಲದಲ್ಲಿ ಕುಸಿದ, ತಲೆ ಎತ್ತದೇ ರೋದನ ಮಾಡುತ್ತಿದ್ದಾನೆ, ಸಮಸ್ತ ಯಾದವರ ನಾಶವಾಗಿದೆ, ಬಲರಾಮ ದೇಹತ್ಯಾಗ ಮಾಡಿ ಆಗಿದೆ, ಚಿಕ್ಕ ನಿಮಿತ್ತವನ್ನು ಉಪಯೋಗಿಸಿ ಕೃಷ್ಣನೂ ಲೋಕ ಬಿಟ್ಟಿದ್ದಾನೆ.
ಅರ್ಜುನ ಹೇಳಲಾರದೇ ಹೇಳಿದ, “ಹರಿ ನಮ್ಮನ್ನು ವಂಚಿಸಿದ, ಹೇಳದೇ ಹೊರಟುಹೋದ”. ಧರ್ಮರಾಜನೂ ಅತಿಯಾಗಿ ವ್ಯಥೆಪಟ್ಟ.
ಯಾದವರು ಅತೀ ಬಲಿಷ್ಟರು. ಅವರಿಂದ ಉಳಿದವರ ಸಂಹಾರ ಮಾಡಿಸಿದ, ಯಾದವರನ್ನು ಅವರೊಳಗೇ ಸಂಹಾರ ಮಾಡಿಸಿದ. ನಂತರ ತಾನೂ ನಿಮಿತ್ತವೊಂದನ್ನು ಹುಡುಕಿ ದೇಹತ್ಯಾಗ ಮಾಡಿದ, ಒಟ್ಟಿನಲ್ಲಿ ಭೂಭಾರ ಹರಣವೊಂದೇ ಕಾರಣವಾಗಿತ್ತು.

ಧರ್ಮರಾಜ ಕಲಿಯ ಪ್ರವೇಶ ಮನಗಂಡು ಮಹಾಪ್ರಸ್ಥಾನದ ಸಂಕಲ್ಪ ಮಾಡಿದ, ಪ್ರಜಾಪತ್ಯೇಷ್ಟಿ ಯಾಗ ಮಡಿದ.
ಪ್ರಜಾಪತ್ಯೇಷ್ಟಿಯೆಂದರೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವುದು, ತನ್ನದಾಗಿ ಏನನ್ನೂ ಉಳಿಸಿಕೊಳ್ಳುವಂತಿಲ್ಲ. ಎಲ್ಲವನ್ನೂ ಬಿಟ್ಟು ತೆರಳುವಾಗ, ಸನ್ಯಾಸಕ್ಕೆ ಹೋಗುವಾಗ ಮಾಡುವ ಕರ್ಮ.
ಸನ್ಯಾಸವೆಂದರೇ ಮುಕ್ತಿ, ಬಾಹ್ಯ ಸನ್ಯಾಸವೆಂದರೆ ಅದರ ಲಾಂಛನ, ಮುಕ್ತಿಯ ದಾರಿಯೆಂದೇ ಅರ್ಥ.
ತನ್ನ ಮೊಮ್ಮಗನಾದ, ತನ್ನದೇ ಪ್ರತಿಕೃತಿಯೆಂದು ಭಾವಿಸುವ ಪರೀಕ್ಷಿತನಿಗೆ ಪಟ್ಟಕಟ್ಟಿದ, ತನ್ನ ವಂಶವೇ ಪರಿಕ್ಷೀಣವಾದಾಗ ಸತ್ತು ಬದುಕಿದವನಾದ್ದರಿಂದ ಅವನು ಪರೀಕ್ಷಿತ. ಕಲಿಯನ್ನು ನಿಗ್ರಹಿಸುವ ಸಾಮರ್ಥ್ಯ ಅವನಿಗಿದೆ ಎಂಬ ಚಿಂತನೆಯೂ ಅದಕ್ಕೆ ಕಾರಣ, ಕುರುಕುಲದಲ್ಲಿಯೇ ಉಳಿದ ಏಕೈಕ ಕುಡಿ ಅವನು. ನಂತರ ಮಥುರೆಯಲ್ಲಿ ಕೃಷ್ಣನ ಮೊಮ್ಮಗ ವಜ್ರನಿಗೆ ಪಟ್ಟ ಕಟ್ಟಿದ. ಇಷ್ಟಿಯ ಕೊನೆಯಲ್ಲಿ ಅಗ್ನಿಪಾನ ಮಾಡಿದ.

ಶಂಕರರು ಭಿಕ್ಷೆ ಬೇಡುತ್ತ ಸಿಕ್ಕಿದ್ದನ್ನು ಪರಿಗ್ರಹಿಸುತ್ತಿದ್ದರು, ಒಬ್ಬ ವ್ಯಾಪಾರಿಯ ಮುಂದೆ ನಿಂತಾಗ ಅವನದ್ದು ಮದ್ಯದ ವ್ಯಾಪಾರ ಅವನು ತಂದು ಮದ್ಯ ಸುರಿದ, ನಿರ್ವಿಕಾರದಿಂದ ಸ್ವೀಕರಿಸಿದರು. ಶಿಷ್ಯರು ತಬ್ಬಿಬ್ಬು. ಮುಂದಿನದು ಲೋಹಕಾರನದು ಅವನು ಕೆಂಡ ನೀಡಿದಾಗ ಅದನ್ನೂ ಸ್ವೀಕರಿಸಿದರು. ಬ್ರಹ್ಮಭಾವವೆಂದರೆ ಅದೇ.
ದ್ವಿಜರಿಗೆ ತ್ರೇತಾಗ್ನಿ ಅವಶ್ಯಕ ಜೀವನವಿರುವವರೆಗೆ, ಅದು ಮುಗಿಯಿತು ಅನ್ನುವಾಗ, ಅಗ್ನಿ ಇಲ್ಲ ಅಂತಾಗಬೇಕಾದರೆ ಅಗ್ನಿಯನ್ನು ಪಾನ ಮಾಡುವ ಕ್ರಮ ಇದೆ. ಅದರರ್ಥ ಅಗ್ನಿಯನ್ನು ಆತ್ಮ ಸಮಾರೋಪ ಮಾಡಿಕೊಳ್ಳುವುದು. ತನ್ನೊಳಗೆ ಅದನ್ನು ವಿಲೀನಗೊಳಿಸಿಕೊಳ್ಳುವುದು.

ಧರ್ಮರಾಜ ಉಟ್ಟ ಉತ್ತಮ ವಸ್ತ್ರಗಳನ್ನು ಬಿಟ್ಟ, ಆಭರಣಗಳನ್ನು ಬಿಟ್ಟ, ತನ್ನದೆನ್ನುವ ಮಮತೆಯನ್ನು ಬಿಟ್ಟ, ತಾನೆನ್ನುವ ಭಾವ ಅಂದರೆ ಅಹಂಕಾರವನ್ನೂ ತ್ಯಾಗ ಮಾಡಿದ. ಹೀಗೆ ಬಂಧನಗಳನ್ನೆಲ್ಲಾ ಕಳಚಿನಿಂತ ಧರ್ಮಜ ಗೃಹ ಬಿಟ್ಟ ಹೊರಟ. ಹಿಂದೆಯೇ ತಮ್ಮಂದಿರು ಹೊರಟರು, ಉತ್ತರ ದಿಕ್ಕಿಗೆ ಮುಖಮಾಡಿ ಹೊರಟರು, ಇದು ಒಂದು ಉತ್ತಮ ಸಂದರ್ಭ, ಉತ್ಕಟ ಸಂದರ್ಭ, ಅವರು ಎಲ್ಲವನ್ನೂ ಕಳೆದುಕೊಂಡು ಕೃಷ್ಣನನ್ನು ಮಾತ್ರ ಈಗ ಹೃದಯದಲ್ಲಿ ಉಳಿಸಿಕೊಂಡಿದ್ದಾರೆ. ಸನ್ಯಾಸವೆಂದರೆ ಯಾವ ಉತ್ತಮವಾದದನ್ನು ಉಳಿಸಿಕೊಳ್ಳುವುದಕ್ಕಾಗಿ ಉಳಿದೆಲ್ಲವನ್ನೂ ತ್ಯಾಗ ಮಾಡುವ ವಿಷಯ ಇದೆಯೋ ಅದು.

ಇದೆಲ್ಲಾ ಆದ ನಂತರ ಒಂದು ಆಶ್ಚರ್ಯದ ಹೋಮ, ಮಾಮೂಲು ಹೋಮಕ್ಕೆ ಅನ್ನ ದ್ರವ್ಯ ಎಲ್ಲ ಬೇಕು ಆದರೆ ಇಲ್ಲಿ ಅದಿಲ್ಲದೆಯೂ ಹೋಮಮಾಡಿದ, ಮೊದಲಿಗೆ ದಶೇಂದ್ರಿಯಗಳನ್ನು ಮಾತಿನಲ್ಲಿ ಸೇರಿಸಿ ಮನಸ್ಸಿನಲ್ಲಿ ಹೋಮ ಮಾಡಿದ, ಮನಸ್ಸನ್ನು ಪ್ರಾಣದಲ್ಲಿ ಹೋಮ ಮಾಡಿದ, (ಅಂದರೆ ಮನಸ್ಸನ್ನು ಪ್ರಾಣದಲ್ಲಿ ಲೀನ ಮಾಡಿದ್ದು). ಹಾಗೆಯೇ ಮುಂದೆ ಲಯಗೊಳಿಸುತ್ತ ಪಂಚಪ್ರಾಣಗಳನ್ನು ಮೃತ್ಯುವಿನಲ್ಲಿ ಹೋಮಮಾಡಿದ, ಮೃತ್ಯುವನ್ನು ಪಾಂಚಭೌತಿಕ ಶರೀರದಲ್ಲಿ ಹಾಗೂ ಪಂಚಭೂತಗಳನ್ನು ತ್ರಿಗುಣಗಳಲ್ಲಿ ಹಾಗೂ ಅದನ್ನು ಪ್ರಕೃತಿಯಲ್ಲಿ ಲೀನಮಾಡಿದ. ನಂತರ ಪ್ರಕೃತಿಯನ್ನು ಆತ್ಮದಲ್ಲಿ ನೆಲೆಗೊಳ್ಳಿಸಿದ ಆ ಜೀವಾತ್ಮನನ್ನು ದೇವನಲ್ಲಿ ಹೋಮಮಾಡಿದ ಆ ಅವಸ್ಥೆ ಅದು ಮುನಿತ್ವ. ನಂತರ ಎದ್ದು ಹೊರಟ. ಹೇಗೆ ಚೀರವಾಸ, ನಿರಾಹಾರ, ಮಾತಿಲ್ಲ, ಕೂದಲನ್ನು ಹರಡಿಬಿಟ್ಟ, ತನ್ನ ನೈಜಾತ್ಮರೂಪವನ್ನು ಸಮಾಜಕ್ಕೆ ತೋರುವವನಂತೆ, ಜಡ, ಉನ್ಮತ್ತ, ಪಿಶಾಚ ನಂತೆ ಯಾರನ್ನೂ ನೋಡದಂತೆ, ಯಾವುದನ್ನೂ ನೋಡದಂತೆ, ಹುಟ್ಟು ಕಿವುಡನಂತೆ ಏನನ್ನೂ ಕೇಳಿಸಿಕೊಳ್ಳದೇ ಉತ್ತರದಿಕ್ಕಿಗೆ ಹೊರಟುಹೋದ, ಉತ್ತರದಿಕ್ಕು ಜ್ಞಾನಪ್ರಾಪ್ತಿಯ ದಿಕ್ಕು, ಈ ಹಿಂದೆ ಅನೇಕ ಜನ ಮಹಾತ್ಮರು ಹೋದಂತೆ ಇವರೂ ಹೋದರು. ಹೃದಯದಲ್ಲಿ ಪರಬ್ರಹ್ಮನ ಅನುಸಂದಾನ ಮಾಡುತ್ತಾ, ಪುನರಾವರ್ತನೆ ಇಲ್ಲದಂತೆ ಹೊರಟ, ತಮ್ಮಂದಿರು ಅನುಸರಿಸಿದರು.
ಪಾಂಡವರೆಲ್ಲರೂ ಸಮರ್ಥರು, ಭೀಮನ ಬಲ, ಅರ್ಜುನನ ಶೌರ್ಯ, ನಕುಲನ ರೂಪು, ಸಹದೇವನ ತಿಳುವಳಿಕೆ, ದ್ರೌಪದಿಯ ಸ್ತ್ರೀತ್ವ ಹೀಗೆ ಎಲ್ಲರೂ ಸಮರ್ಥರಾದರೂ ಮರುಮಾತನಾಡದೇ ಅಣ್ಣನನ್ನು ಅನುಸರಿಸಿದರು.

ತ್ರೇತಾಯುಗದಲ್ಲಿ ರಾಮನೂ ಹೀಗೇ ನಡೆದಿದ್ದ, ಆಗಲೂ ಅವನ ಅನುಜರು ಅವನನ್ನು ಹಿಂಬಾಲಿಸಿದ್ದರು. ಅಷ್ಟೇ ಅಲ್ಲ ಪುರಜನರೂ, ದಾರಿಯಲ್ಲಿ ಅವನ ಕಂಡವರೆಲ್ಲರೂ ಹಿಂಬಾಲಿಸಿದ್ದರು.
ಕಲಿಪ್ರಭಾವದಿಂದ ಪ್ರೇರಿತ ಪ್ರಜೆಗಳನ್ನು ಗಮನಿಸಿ, ಅವರನ್ನು ಪೊರೆಯುವ ಭಾವವನ್ನು ತೊರೆದು, ನಾರಾಯಣಪದದಲ್ಲಿ ಏಕಾಂತ ಮನಸ್ಕರಾಗಿ, ಪಾಪವಿಹೀನರಾಗಿ, ಪರಿಶುದ್ಧ ಮನಸ್ಕರಾಗಿ, ಕೋಟಿಗೊಬ್ಬರಿಗೂ ಸಿಗದ ಅಪರೂಪದಲ್ಲಪರೂಪವಾದ ಗತಿಯನ್ನು ಹೊಂದಿದರು.

ನಾವು ವ್ಯಾಪ್ತಿ ಮೀರಿ ಸುಮ್ಮನೆ ಪಾಂಡವರ ಬಗ್ಗೆ ಇಲ್ಲಸಲ್ಲದ್ದು ಮಾತಾಡುತ್ತೇವೆ, ಅವರು ನಮಗೆ ಸುಲಭವಾಗಿ ಅರ್ಥವೂ ಆಗುವುದಿಲ್ಲ. ಅಂತಹ ಪರಮಪವಿತ್ರ ಗತಿಯನ್ನು ಅವರು ಹೊಂದಿದರು.

ಮಹಾಪ್ರಸ್ಥಾನವೆಂದರೆ ಅದು ಅಂತಹ ಒಂದು ಗತಿ, ಯಾವ ಮೂಲದಿಂದ ನಾವು ಹೊರಬಂದಿರುತ್ತೇವೆಯೋ ಅದೇ ಮೂಲಕ ಬಂದ ದಿಕ್ಕಿನಲ್ಲಿಯೇ ತಿರುಗಿ ಹೋಗುವುದು. ಅದು ನಮಗೆ ಸಾಧ್ಯವೋ ಇಲ್ಲವೋ ಕನಿಷ್ಟ ಭಾವನೆಯಿಂದಾದರೂ ರೋಮಾಂಚನ ಹೊಂದೋಣ. ತವರಿಗೆ, ಬೇರಿಗೆ, ಮೂಲಕ್ಕೆ ಹೋಗುವಂತೆ ಭಾವಿಸೋಣ.

ಧರ್ಮರಾಜನೆಂದರೆ ಪ್ರತ್ಯಕ್ಷ ಧರ್ಮ. ನಮ್ಮ ಮಧ್ಯೆ ಜೀವನ ಮಾಡಿದ ಸಾಕ್ಷಾತ್ ಧರ್ಮ, ಅವನು ಮುಂದೇನಾದ ಎನ್ನುವುದು ಮತ್ತಷ್ಟು ರೋಚಕ, ಮುಂದೆ ನೋಡೋಣ, ಇಂದಿನ ವಾಕ್ ಪುಷ್ಪವನ್ನು ಶ್ರೀಕೃಷ್ಣನಿಗೆ ನಿವೇದನೆ ಮಾಡೋಣ.

 

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments