ಭೋಪಾಲ, ಜನವರಿ ೦೬ : ಇಂದು ಯಾತ್ರೆ ಭೋಪಾಲದಲ್ಲಿ ವಿಶ್ರಾಂತಿ ತೆಗೆದುಕೊಂಡಿತ್ತು. ಗಾಯತ್ರೀ ಶಕ್ತಿ ಪೀಠದಲ್ಲಿ ಯಾತ್ರಾರ್ಥಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದರು. ಯಾತ್ರೆಯ ಪ್ರವರ್ತಕರಲ್ಲಿ ಗಾಯತ್ರೀ ಪರಿವಾರದ ಸಂಸ್ಥಾಪಕರಾದ ಡಾ. ಪ್ರಣವ ಪಂಡ್ಯಾ ಅವರೂ ಒಬ್ಬರು.

ಇಂದು ಮಧ್ಯಾಹ್ನ 12 ಗಂಟೆಗೆ ಪ.ಪೂ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪತ್ರಿಕಾ ಸಮ್ಮೇಳನವನ್ನು ಆಯೋಜಿಸಿದ್ದರು. ಆನರ ಮನದಲ್ಲಿ ಗೋವಿನ ಬಗ್ಗೆ ಭಾವ ಜಾಗರಣೆ ಈ ಯಾತ್ರೆಯ ಮುಖ್ಯ ಉದ್ದೇಶವೆಂದರು. ಗೋಶಾಲೆಗಳನ್ನು ಹಾಗೂ ಗೋಸಾಕಣೆಯನ್ನು ಸಂಪೂರ್ಣ ಸ್ವಾವಲಂಬಿಯಾಗಿಸುವುದು ಮತ್ತು ಆರ್ಥಿಕ ಮೂಲಕವಾಗಿಯೂ ಮಾಡುವುದು ಇದರ ಉದ್ದೇಶವೆಂದರು.

ಮಧ್ಯಾಹ್ನ ಎರಡು ಗಂಟೆಗೆ ಭೋಪಾಲದ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯ ಮೇಲೆ ಸಂತರುಗಳಾದ ಮೋಹನದಾಸ ಜೀ ಮಹಾರಾಜ್, ಪೂ. ಹನುಮಾನ ಜೀ ಮಹಾರಾಜ್, ಪೂ. ಅಖಿಲೇಶ್ವರಾನಂದ ಜೀ ಮಹಾರಾಜ್, ಪೂ. ವಾಸುದೇವಾನಂದ ಜೀ ಮಹಾರಾಜ್ ಹಾಗೂ ಪ.ಪೂ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ನೀಡಿದ್ದರು. ನಂದೀ ಸ್ವಾಮಿಗಳಾದ ಬಸಪ್ಪ ಸ್ವಾಮಿಗಳು ಸಭಾಧ್ಯಕ್ಷತೆ ವಹಿಸಿದ್ದರು.

ಶ್ರೀ ಸೀತಾರಾಮ ಕೆದಿಲಾಯ – ಯಾತ್ರಾ ಸಂಯೋಜಕ ಇವರು ಯಾತ್ರೆಯ ಉದ್ದೇಶ, ಗ್ರಾಮ ಮತ್ತು ಪ್ರಕೃತಿಯ ಸಂರಕ್ಷಣೆ, ಸಂತರ ಮಾರ್ಗದರ್ಶನದ ಬಗ್ಗೆ ವಿವರಿಸಿದರು.

ರಾಷ್ಟ್ರದ ಪ್ರಮುಖ ಚಿಂತಕ, ಸ್ವಾಭಿಮಾನೀ ಭಾರತದ ಪ್ರಮುಖರಾದ ಶ್ರೀ ಗೋವಿಂದಾಚಾರ್ಯ ಅವರು ಇಂದಿನ ಪ್ರಮುಖ ಭಾಷಣ ಮಾಡಿದರು. ನಮ್ಮ್ ವೈದಿಕ ಪರಂಪರೆಯನ್ನು ಉದಹರಿಸಿ, ಜನ್ಮವಿತ್ತ ಮಾತೆ, ಭೂಮಾತೆ ಮತ್ತು ಗೋಮಾತೆ ಈ ಮೂವರನ್ನೂ ತಾವು ಮರೆಯುವಂತಿಲ್ಲ. ಅವರ ಸೇವೆ ಮಾಡುವುದು ಮನುಷ್ಯನ ಕರ್ತವ್ಯವೆಂದರು. ಗೋವಿನ ಪದಾರ್ಥಗಳ ಬಗ್ಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಲು ದೇವಸ್ಥಾನಗಳು, ಮಠಮಂದಿರಗಳು ಕಾರ್ಯರತರಾಗಬೇಕೆಂದರು. ಮಂದಿರಗಳಲ್ಲಿ ಕೇವಲ ಭಾರತೀಯ ಮೂಲದ ಹಸುಗಳ ಹಾಲು ಮತ್ತು ತುಪ್ಪವನ್ನು ಉಪಯೋಗಿಸುವಂತೆ ಅರ್ಚಕರು ಮಾಡಬೇಕೆಂದು ಹೇಳಿದರು.

ಶ್ರೀ ಅಖಿಲೇಶ್ವರಾನಂದ ಜೀ ಮಹಾರಾಜ್ ಅವರು ಗೋವಿನ ಬಹುಮುಖೀ ಉಪಯೋಗವನ್ನು ವಿವರಿಸಿ, ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನಿನ ತೀವ್ರ ಅನುಷ್ಠಾನ ಆಗಬೇಕೆಂದು ಆಗ್ರಹಿಸಿದರು.

ಪ.ಪೂ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಅನುಗ್ರಹ ಭಾಷಣದಲ್ಲಿ ಭೂಪಾಲರಾಗಲು ಎಲ್ಲರೂ ಆಶಿಸುತ್ತಾರೆ. ಗೋಪಾಲಕರಾಗಲು ಆಸಕ್ತಿ ಇಲ್ಲ. ಭೂಪಾಲಕರಾಗುವುದು ಸುಲಭವಲ್ಲ ಮತ್ತು ಭೂಪಾಗಿರಿ ಶಾಶ್ವತವಲ್ಲ. ಆದರೆ ಗೋಪಾಲಕರಾದಲ್ಲಿ ಶಾಂತಿ ಸಮಾಧಾನ ಮಾತ್ರ ಗೋಲೋಕದಲ್ಲಿ ಶಾಶ್ವತ ಸ್ಥಾನವನ್ನು ಕಾದಿರಿಸಬಹುದೆಂದರು.

ಗೋಪಾಲಕರಾಗಲು ಆಸಕ್ತಿ ಇಲ್ಲದಿರುವುದು ಗೋವಿನ ಬಗ್ಗೆ ಇರುವ ಅಜ್ಞಾನದಿಂದಾಗಿ, ಗೋವಿನ ಬಗ್ಗೆ ಸಂಪೂರ್ಣ ತಿಳಿದಲ್ಲಿ ಗೋಪಾಲನೆಯನ್ನು, ಗೋ ಸಾನ್ನಿಧ್ಯವನ್ನು ಜನ ಬಯಸಬಹುದೆಂದರು. ತಮ್ಮದೆಲ್ಲವೂ ಕಳಪೆ, ಇನ್ನೊಬ್ಬರದ್ದು – ವಿದೇಶದ್ದು, ವಿಶೇಷವೆಂಬ ಮನಸ್ಥಿತಿ ತೊಲಗಬೇಕೆಂದರು.

ಯಾತ್ರೆಯ ಉದ್ದೇಶ – ಅಂತರಂಗದ ಪರಿಚಯ. ಗೋವಿನ ಆರ್ಥಿಕ ಪಕ್ಷಕ್ಕೆ ಮಾತ್ರ ಒತ್ತು ಕೊಟ್ಟಲ್ಲಿ ಗೋವು ಉಳಿಯಬಹುದು. ಆದರೆ ಗೋವಿನ ಭಾವ ಪಕ್ಷದಿಂದ ಇಡೀ ದೇಶವೇ ಉಳಿಯಬಹುದು ಎಂದರು.

ನಿಮ್ಮ ಹೃದಯದಲ್ಲಿ ಗೋವನ್ನು ಪ್ರತಿಷ್ಠಾಪಿಸಿ, ಇದರಿಂದ ಮಾತ್ರವೇ ಗೋವು ಉಳಿಯಲು ಸಾಧ್ಯ – ಗೋಶಾಲೆಗಳನ್ನು ಸ್ಥಾಪನೆ ಮಾಡುವುದರಿಂದ ಮಾತ್ರವಲ್ಲ ಎಂದರು.

Facebook Comments