ಜ.೩ – ಇಂದು ಯಾತ್ರೆ ರತ್ಲಾಮಿನಿಂದ ಹೊರಟು ಧಾರ್ (ಧಾರಾ), ಬೇಟ್ಮಾ ಮೂಲಕ ಇಂದೋರನ್ನು ತಲುಪಿತು.

ಧಾರ್ – ಧಾರಾನಗರಿ, ಭೋಜರಾಜನ ಆಸ್ಥಾನವಾಗಿದ್ದ ಸ್ಥಳ. ಕಾಲಿದಾಸ ತನ್ನ ಕಾವ್ಯಗಳಿಂದ ರಂಜಿಸಿದ ನಾಡು. ಇದು ವನವಾಸಿ ಕ್ಷೇತ್ರ.

ಶ್ರೀ ಮಧುರ ಭಾಯ್ ಕುಲಕರ್ಣಿ ಅವರು ಪ್ರಮುಖ ಭಾಷಣ ಮಾಡಿದರು. ಅವರು ರಾ.ಸ್ವ.ಸೇ.ಸಂ.ದ ರಾಷ್ಟ್ರೀಯ ಸಮಿತಿ ಸದಸ್ಯರು. ಕೋಪನ್ ಹೇಗನ್ನಲ್ಲಿ ಇತ್ತೀಚೆಗೆ ನಡೆದ ಪರ್ಯಾವರಣ ಸಂಬಂಧೀ ಚರ್ಚೆಗಳನ್ನುದಹರಿಸಿ, ಈ ರೀತಿಯ ವಾತಾವರಣದ ವಿಪರೀತಕ್ಕೆ ಗೋ ಆಧಾರಿತ ಜೀವನಶೈಲಿ ದೂರಮಾಡಿದ್ದೇ ಕಾರಣವೆಂದರು. ವೇದಿಕೆಯಲ್ಲಿ ಪ.ಪೂ. ಅಖಿಲೇಶ್ವರಾನಂದ ಜೀ ಮಹಾರಾಜ್, ಜೈನಮುನಿಗಳಾದ ಶ್ರೀ ಸರ್ವೋದಯ ಸಾಗರ ಜೀ ಮಹಾರಾಜ್, ಚಂದ್ರರತ್ನ ಸಾಗರಜೀ ಮಹಾರಾಜ್, ಗುಣವಲ್ಲಭ ಸಾಗರಜೀ ಮಹಾರಾಜ್, ಮಹಂತ ಶ್ರೀ ನಾರಾಯಣ ಜೀ ರಕ್ಕರ್ ಹಾಗೂ ಪ.ಪೂ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ನಾಲ್ಕು ಜಿಲ್ಲೆಗಳಿಂದ ೯,೬೪,೦೦೦ ಹಸ್ತಾಕ್ಷರಗಳನ್ನು ಶಂಕರಾಚಾರ್ಯರಿಗೆ ಸಮರ್ಪಿಸಿದರು.

ಗೋ ಆಧಾರಿತ ಜೀವನ ಸಾಧಕರಿಗೆ ಸನ್ಮಾನ ಮಾಡಿದರು.

ಪ.ಪೂ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಅನುಗ್ರಹ ಭಾಷಣದಲ್ಲಿ ಸಭೆಯಲ್ಲಿರುವ ಹೆಚ್ಚಿನವರು ಗ್ರಾಮ ವಾಸಿಗಳು, ಗ್ರಾಮ ಜೀವನವನ್ನು ನೈಸರ್ಗಿಕ ಹೂವಿಗೂ, ನಗರ ಜೀವನವನ್ನು ಪ್ಲಾಸ್ಟಿಕ್ ಗೋವಿಗೂ ಹೋಲಿಸಬಹುದೆಂದರು. ನಗರಗಳಲ್ಲಿ ಬೇರೆಲ್ಲ ಇದ್ದರೂ, ಗೋವಿಲ್ಲ. ಅದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಜೀವನಕ್ಕೆ ಬೇಕಾದ ಸರ್ವಸ್ವವನ್ನು ಕೊಡುವ ಗೋವಿಗೆ ಸ್ಥಳ ಕಲ್ಪಿಸದ ನಗರದ ವಾಸ್ತವಿಕತೆಯೇ ವಿಚಿತ್ರವೆಂದರು.

ಗ್ರಾಮವೆಂದರೆ ಭಾರತ. ಇದೀಗ ಭಾರತವನ್ನು ರಕ್ಷಿಸಬೇಕಾಗಿದೆ. ಗೋವು ಮತ್ತು ಗ್ರಾಮವನ್ನು ಬಿಟ್ಟು ಜನರು ನಗರ ಸೇರುವುದೆಂದರೆ, ಭಾರತವನ್ನು ನರಕ ಮಾಡಿದಂತೆ. ಹಾಗೇ ಗೋವಿನ ಸಂಕಟ ಮುಕ್ತಿ ವಿಶ್ವವೇ ನರಕದಿಂದ ಪಾರು ಎಂದರು. ನಿಮಗೆ ಬೇಕಾದ್ದೆಲ್ಲವನ್ನು ಗೋವು ಕೊಡಬಲ್ಲುದು. ಅಂದಾಗ ಗ್ರಾಮವನ್ನೇಕೆ ತೊರೆದು ನಗರ ಸೇರುತ್ತೀರೆಂದು ಪ್ರಶ್ನಿಸಿದರು. ಸಂತರ ಹಾಗೂ ಸಮಾಜದ ಭಾವನೆ ಒಂದೇ. ಕೇವಲ ಅದರ ಅಭಿವ್ಯಕ್ತಿ ಸಂತರಿಂದ ಆಗುತ್ತಿದೆ ಎಂದರು. ಸಂತಶಕ್ತಿ ಹಾಗೂ ಸಮಾಜಶಕ್ತಿ ಒಂದುಗೂಡಿ ಸಮೃದ್ಧ ಭಾರತದ ನಿರ್ಮಾಣವನ್ನು ಗೋವಿನ ಮೂಲಕ ಮಾಡೋಣವೆಂದು ನುಡಿದರು.

ಮುಂದಿನ ಸಭೆ-ಬೇಟಮಾದಲ್ಲಿ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಾಂತರದ ಜನ ಸೇರಿದ್ದರು. ಸುಂದರ ಸಭೆ. ಬೇಟವೂ ಭಾರತದ ಮಾಳವಾ ಭೂಖಂಡದಲ್ಲಿದೆ. ಶ್ರೀ ಹುಕುಂಚಂದ್ ಸಾವ್ಲಾ ತಮ್ಮ ಜನಾಕರ್ಷಕ ಶೈಲಿಯಲ್ಲಿ ಮಾಳವಾದ ಅಳಿದುಹೋದ ರಾಜಮಹಾರಾಜರ ಬಗ್ಗೆ – ವಿಕ್ರಮಾದಿತ್ಯ, ಯಶೋಧ ಇವರ ಬಗ್ಗೆ, ಜನಮೇಜಯ, ತಕ್ಷಕ ಯಜ್ಞ ಇವೆಲ್ಲದರ ಬಗ್ಗೆ ವಿವರಿಸಿದರು.

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ವಿಕ್ರಮಾದಿತ್ಯ, ಭೋಜರಾಜನಂತಹ ಶ್ರೇಷ್ಠ ನಾಯಕರನ್ನು ಕಂಡು ಈ ಪ್ರದೇಶದ ಜನರು ಈಗಲೂ ಅಂಥ ಶ್ರೇಷ್ಠರ ಆತ್ಮವನ್ನು ತಮ್ಮಲ್ಲಿ ಆವಾಹಿಸಿಕೊಂಡು, ಗೋಮಾತೆಯ ರಕ್ಷಣೆಯ ಅತ್ಯಂತ ಪುಣ್ಯಪ್ರದ ಕೆಲಸದಲ್ಲಿ ತೊಡಗಬೇಕೆಂದರು.

ಯಾತ್ರೆ ಮುಂದುವರೆದು ಇಂದೋರ್ ನಗರವನ್ನು ಪ್ರವೇಶಿಸಿತು. ಇಂದೋರ್ ಅಹಲ್ಯಾ ಬಾಹೋಲ್ಕರ್ ಅವರ ರಾಜಧಾನಿಯಾಗಿತ್ತು. ಸುಂದರನಗರ ಅತ್ಯಂತ ಭವ್ಯ ವೇದಿಕೆ. ಅತ್ಯಂತ ವ್ಯವಸ್ಥಿತ ಸಭೆ. ವೇದಿಕೆಯಲ್ಲಿ ಇಪ್ಪತ್ತೈದಕ್ಕಿಂತ ಹೆಚ್ಚು ಸಂತರು ಉಪಸ್ಥಿತರಿದ್ದರು. ಸಭೆಯಲ್ಲಿ ಅಂದಾಜು 5-6 ಸಾವಿರ ಜನರಿದ್ದರು. ಅನೇಕ ಮಂದಿ ಶಾಸಕರು, ಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇಂದೋರ್ ಕ್ಷೇತ್ರದಿಂದ ಸಂಗ್ರಹಿಸಿದ 10 ಲಕ್ಷಕ್ಕಿಂತ ಅಧಿಕ ಹಸ್ತಾಕ್ಷರವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿದರು. ಮಾಳವಾ ಮತ್ತು ಮಧ್ಯ ಭಾರತದಿಂದ ಒಂದು ಕೋಟಿ ಹಸ್ತಾಕ್ಷರ ಸಂಗ್ರಹವಾಗಿರುವ ವಿಚಾರವನ್ನು ತಿಳಿಸಲಾಯ್ತು.

ಸಾಧಕರಿಗೆ ಸಮ್ಮಾನವನ್ನು ಮಾಡಲಾಯಿತು. ವೀರೇಂದ್ರ ಕುಮಾರ ಜೈನ್ ಇವರನ್ನು ಗೋಮೂತ್ರ ಚಿಕಿತ್ಸೆಗಾಗಿ ಸನ್ಮಾನಿಸಲಾಯಿತು. ಇವರು ನಿತ್ಯ 100 ಲೀಟರ್ ಗೋಮೂತ್ರವನ್ನು ನಿಃಶುಲ್ಕ ವಿತರಿಸುತ್ತಾರೆ.

ಓಂ ನಾರಾಯಣ ಸೋಲಂಕಿ ಇವರನ್ನು ಗೋಶಾಲೆಯ ಪಾಲನೆಗಾಗಿ, ಶ್ರೀ ದೇಶಪಾಂಡೆಯವರನ್ನು ಸಾವಯವ ಕೃಷಿಗಾಗಿ, ರಿಶೀಜೀ ತಿವಾರಿ ಇವರನ್ನು ಎತ್ತುಗಳ ಅಭಿವೃದ್ಧಿ ಮತ್ತು ಬಹೂಪಯೋಗಿತೆಗಾಗಿ ಮತ್ತು ಶ್ರೀಮತಿ ಪುಷ್ಪಾ ಗುಪ್ತ ಅವರನ್ನು ನಿತ್ಯ 50 ವರ್ಷಗಳಿಂದ ನೀಡುತ್ತಿರುವುದಕ್ಕಾಗಿ ಸನ್ಮಾನಿಸಲಾಯಿತು.

ಶ್ರೀ ಮಧು ಭಾಯ್ ಕುಲಕರ್ಣಿ, ರಾ.ಸ್ವ.ಸೇ.ಸಂ.ದ ರಾಷ್ಟ್ರೀಯ ಸಮಿತಿ ಸದಸ್ಯರು, ಗೋವಿನ ವೈಜ್ಞಾನಿಕ ಮಹತ್ವವನ್ನು ವಿವರಿಸಿದರು. ಗೋ ಆಧಾರಿತ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಇಂದೋರಿನ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.

ತಮ್ಮ ಪ್ರಧಾನ ಆಶೀರ್ವಚನದಲ್ಲಿ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಅಂದು ಅಧ್ಯಕ್ಷತೆ ವಹಿಸಿದ್ದ, ಕರ್ನಾಟಕದಿಂದ ಆಗಮಿಸಿದ ಶ್ರೀ ಬಸಪ್ಪ ವೃಷಭ ಸ್ವಾಮಿಗಳ ಬಗ್ಗೆ ವಿವರಿಸುತ್ತಾ, ವೃಷಭ ಸಾಕ್ಷಾತ್ ಧರ್ಮದ ಸಾಕಾರವೆಂದರು.
ದಿಲ್ಲಿಯ ಕೆಂಪುಕೋಟೆಯ ಮೇಲೆ ಗೋವು ರಾಷ್ಟ್ರಧ್ವಜವಾಗಿ ರಾರಾಜಿಸುವಂತೆ ಮಾಡುವುದು ತಮ್ಮ ಈ ಯಾತ್ರೆಯ ಗುರಿ ಎಂದು ಹೇಳಿದರು. ಗೋವು ಭಾರತದ ಪ್ರತೀಕ. ಗೋವು ರಾಷ್ಟ್ರಮಾತೆ. ಅಂಥ ಗೋಮಾತೆಯ ಸಂರಕ್ಷಣೆಗಾಗಿ ಕಲಿಯುಗದಲ್ಲಿ ಮಹಾಸಂಗ್ರಾಮ ನಡೆಯಬೇಕಾಗಿದೆ. ಅದರ ತಯಾರಿ ಈ ಯಾತ್ರೆ ಎಂದರು. ಗೋವಿನ ರಕ್ಷಣೆಗಾಗಿ ವಿಕ್ರಮಾದಿತ್ಯನಂತಹ ಮಹಾಪುರುಷರ ಆದರ್ಶವನ್ನು ಮುಂದಿಟ್ಟುಕೊಂಡು, ಹೋರಾಡಿ, ಪ್ರಾಣತ್ಯಾಗಕ್ಕಾದರೂ ಸಿದ್ಧರಾಗಿ ಎಂಬ ಕರೆಯನ್ನಿತ್ತರು. ಅಂಥ ಸಂದರ್ಭ ಬಂದಾಗ ಪ್ರಾಣವನ್ನು ಪಣವಾಗಿ ಒಡ್ಡಲು ತಾವು ಎಲ್ಲರಿಂದ ಮೊದಲಿರುವುದಾಗಿ ಅವರು ಭಾವುಕರಾಗಿ ನುಡಿದರು.
ಗೋವಿನ ಸಂಖ್ಯೆ ತೀವ್ರ ಗತಿಯಲ್ಲಿ ಇಳಿಮುಖವಾಗುತ್ತಿದೆ. ಇದೀಗ ನಾವು ಹೋರಾಡಿ ಗೋವನ್ನು ಉಳಿಸಿಕೊಳ್ಳದಿದ್ದಲ್ಲಿ ಮುಂದೆ ಚಿಂತಿಸಿ ಫಲವಿಲ್ಲ ಎಂದರು. ಗೋರಹಿತ ಜೀವನವೆಂದರೆ ಜೀವರಹಿತ ವಿಶ್ವ. ಹಾಗಾಗಿ ಇಡೀ ವಿಶ್ವದ ರಕ್ಷಣೆಗೆ ಎಲ್ಲರೂ ಪಣತೊಡಿ ಎಂದು ಕರೆ ನೀಡಿದರು. ಸಂತರು ಮತ್ತು ಸಮಾಜ ಒಂದಾಗಿ ಒಂದು ಮಹತ್ವದ ಗುರಿಯನ್ನು ಸಾಧಿಸೋಣ ಎಂದು ಭರವಸೆಯಿಂದ ನುಡಿದರು.

Facebook Comments