ಜ. 7 – ಯಾತ್ರೆಯ 98ನೆಯ ದಿನ ಇಂದು. ಯಾತ್ರೆ ಸಮಾಪನಗೊಳ್ಳಲು ಇನ್ನು ಕೇವಲ ೧೦ ದಿನಗಳು ಉಳಿದಿವೆ.

ಇಂದು ಯಾತ್ರೆ ಭೋಪಾಲದಿಂದ ಹೊರಟು ಒಂದು ಭಾಗ ವಿದಿಶ ನಗರಿಗೆ ತೆರಳಿದರೆ ಇನ್ನೊಂದು ಭಾಗ ಗೈರತ್ಗಂಜ್ ಪಟ್ಟಣಕ್ಕೆ ತೆರಳಿತು.

ಗೈರತ್ಗಂಜ್ ಪುಟ್ಟ ಪಟ್ಟಣ. ಭೋಪಾಲಿನಿಂದ ಅಂದಾಜು 85 ಕಿಮೀ ದೂರದಲ್ಲಿದೆ. ಮಾರ್ಗಮಧ್ಯೆ ರಾಯಸೇನಾ ಪಟ್ಟಣ ಬರುತ್ತದೆ. ಇಲ್ಲೊಂದು ಪುರಾತನ ಕೋಟೆ ಇದೆ. ಈ ಕೋಟೆಯನ್ನು ಯಾರಿಂದಲೂ – ಮುಸ್ಲಿಂ, ಶಿವಾಜಿ ಇತ್ಯಾದಿ – ಜಯಿಸಲಾಗಲಿಲ್ಲವೆಂದು ಈ ಊರವರು ಹೆಮ್ಮೆಯಿಂದ ಹೇಳಿಕೊಂಡರು. ಗ್ವಾಲಿಯರ್ ಕೋಟೆಯ ನಂತರದ ಸ್ಥಾನ (ವಿಶಾಲತೆಯಲ್ಲಿ) ಈ ಕೋಟೆಗಿದೆ ಎಂಬುದೂ ಅವರ ಅಂಬೋಣ.

ಗೈರತ್ಗಂಜ್ ನವರು ಯಾತ್ರೆಯ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದರು. ಯಾತ್ರೆ ಪಟ್ಟಣವನ್ನು ಪ್ರವೇಶಿಸಿದಾಗ ಹೆಚ್ಚಿನ ಅಂಗಡಿಗಳೆಲ್ಲ ಮುಚ್ಚಿರುವುದು ಕಂಡುಬಂತು. ಇದೇನಿದು ಇಂದು ವಾರದ ರಜೆಯೇ ಅಥವಾ ಯಾವುದಾದರೂ ಮುಷ್ಕರವೇ ಎಂಬ ಸಂದೇಹ ಬಂತು. ಸಭಾಸ್ಥಳ ಸೇರಿದ ನಂತರ ವಿಚಾರಿಸಿದಾಗ ಕಾರಣ ತಿಳಿದು ಆಶ್ಚರ್ಯ, ಸಂತೋಷ ಎರಡೂ ಆಯಿತು. ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಗೆ ಊರವರೆಲ್ಲ ಸೇರಬೇಕು. ಅಂಗಡಿ ಮುಂಗಟ್ಟುಗಳನ್ನು ತೆರೆದಲ್ಲಿ ಜನರು ಅವರವರ ಕೆಲಸಗಳಲ್ಲಿ ಮಗ್ನರಾಗಿ ಸಭೆಗೆ ಬಾರದಿರಬಹುದು ಎಂಬ ಕಾರಣಕ್ಕೆ ಊರ ವರ್ತಕ ಮಂಡಳಿ – ಇಂದು ಇಡೀ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯದಿರಲು ನಿರ್ಧರಿಸಿ ಅಂತೆಯೇ ನಡೆದುಕೊಂಡಿದ್ದರು. ಇದರಲ್ಲಿ ಎಲ್ಲ ಧರ್ಮಾನುಯಾಯಿಗಳೂ ಸಹಕರಿಸಿದ್ದರೆಂಬುದು ವಿಶೇಷ. ಒಬ್ಬ ಮುಸ್ಲಿಂ ಬಂಧುವನ್ನು ವಿಚಾರಿಸಿದಾಗ ಆತ ಗೋವಿನ ಹಾಲು ನಾವು ಕುಡಿಯುತ್ತೇವಲ್ಲ ಹಾಗಾಗಿ ಗೋ ರಕ್ಷಣೆಯಲ್ಲಿ ನಾವೂ ನಿಮ್ಮೊಂದಿಗಿದ್ದೇವೆ.

ಸಭೆಯ ವೇದಿಕೆಯಲ್ಲಿ ಪ.ಪೂ. ಜೈನ ಸಂತ ಆರಿಕರತ್ನ 1005 ಪ್ರಶಾಂತಮತೀ ಮಾತಾಜೀ, ಪೂ. ದುರ್ಗಾದಾಸ್ ಜೀ ಮಹಾರಾಜ್, ಪೂ. ಮಂಡಲೇಶ್ವರ ಅಖಿಲೇಶ್ವರಾನಂದ ಜೀ ಮಹಾರಾಜ್, ಸಂತ ಶಾಂತಿಲಾಲ್ ಜೀ ಇವರೆಲ್ಲ ದಿವ್ಯ ಉಪಸ್ಥಿತಿ ನೀಡಿದ್ದರು.

ಪೂ. ಅಖಿಲೇಶ್ವರಾನಂದ ಜೀ ಸ್ವಾಮಿಗಳು ಸಭೆಯ ಅಧ್ಯಕ್ಷತೆ ವಹಿಸಿದ, ಕರ್ನಾಟಕದಿಂದ ಆಗಮಿಸಿದ ನಂದೀಸ್ವಾಮಿ ಶ್ರೀ ಬಸಪ್ಪ ಸ್ವಾಮಿಗಳ ವಿಶೇಷ ಪರಿಚಯ ಮಾಡಿಕೊಟ್ಟು, ಯಾತ್ರೆಯ ಪ್ರಸ್ತುತತೆಯನ್ನು ವಿವರಿಸಿ, ಗೋರಕ್ಷಾ ಸಂಕಲ್ಪ ಬೋಧಿಸಿದರು.

ರಾ.ಸ್ವ.ಸೇ.ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಹಸ್ತಿಮಲ್ ಜೈನ್ ಅವರೂ ಯಾತ್ರೆ ಮತ್ತು ಗೋಮಹತ್ವದ ಬಗ್ಗೆ ಪ್ರಸ್ತಾಪಿಸಿದರು.

ಜೈನಮುನಿ ಮಾತಾ ಪ್ರಶಾಂತಮತೀ ಮಾತಾಜೀಯವರು ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಲು ಸರಕಾರ ತತ್ಕಾಲ ಮುಂದಾಗಬೇಕೆಂದು ಕರೆ ಇತ್ತರು. ಆದರೆ ನಿಜವೆಂದರೆ ಗೋವು ಪ್ರಾಣಿಯಲ್ಲ. ಅವಳು ನಮ್ಮವರೆಲ್ಲರ ಮಾತೆ. ಯಾವುದೇ ಧರ್ಮದ ಭೇದವಿಲ್ಲದೇ ಎಲ್ಲ ಮಾನವರು ಈ ಯಾತ್ರೆಯ ಸದುದ್ದೇಶ ಈಡೇರಲು ಪ್ರಯತ್ನಿಸಬೇಕೆಂಬ ಕರೆ ಇತ್ತರು.

ಮಾತಾ ಪ್ರಶಾಂತಮತಿಯವರು ಆಚಾರ್ಯ ವಿದ್ಯಾಸಾಗರ ಜೀಯವರ ಶಿಷ್ಯೆ ಆಚಾರ್ಯವರ್ಯರು ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯ ಪ್ರವರ್ತಕರಲ್ಲೊಬ್ಬರು.

ಗೈರತ್ಗಂಜ್ ವಿಭಾಗದಲ್ಲಿ ಸಂಗ್ರಹಿಸಲಾದ 1,04,000 ಹಸ್ತಾಕ್ಷರಗಳನ್ನು ಪೂ. ಅಖಿಲಾನಂದ ಮಹಾರಾಜ್ ಅವರಿಗೆ ಸಮರ್ಪಿಸಲಾಯಿತು.

ಯಾತ್ರೆಯ ಇದೇ ತಂಡ ಮುಂದೆ ರಾಹತಗಢ ಎಂಬಲ್ಲಿ ಗಣಪತಿ ಮಂದಿರ ಚೌಕದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು. ಉತ್ಸಾಹಪೂರ್ಣ ಶೋಭಾಯಾತ್ರೆ – ಸ್ವಾಗತ ತಂಡಕ್ಕೆ ದೊರೆಯಿತು. ಡಾ. ದಿನೇಶ ಜೀ ಅವರು ಯಾತ್ರೆ ಹಾಗೂ ಗೋವಿನ ವಿಶೇಷತೆ ಬಗ್ಗೆ ವಿವರಿಸಿದರು.

ಯಾತ್ರೆ ಒಂದು ಮುಂದುವರೆದು ಜಿಲ್ಲಾಕೇಂದ್ರ ಸಾಗರವನ್ನು ತಲುಪಿತು. ಶ್ರೀ ಅಲೋಕ ಮೆಹತಾ ಎಲ್ಲ ಅಭ್ಯಾಗತರನ್ನು, ಸಂತ ಮಹಂತರನ್ನು ಸ್ವಾಗತಿಸಿದರು. ಸಂಗ್ರಹವಾದ 7 ಲಕ್ಷ ಹಸ್ತಾಕ್ಷರವನ್ನು ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿದರು. ಸಭೆಗೂ ಮುನ್ನ ನಾಗರಿಕರಿಂದ ಯಾತ್ರೆಗೆ ಅತ್ಯುತ್ತಮ ಸ್ವಾಗತ ದೊರಕಿತು.

ಪೂ. ಅಖಿಲೇಶ್ವರಾನಂದ ಜೀ ಅವರು ಸಭೆಗೆ ಸಂಕಲ್ಪ ಬೋಧಿಸಿದರು.

ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಮ್ಮ ಪೂರ್ವಾಶ್ರಮದ ಹುಟ್ಟೂರು ಸಾಗರ. ಹಾಗಾಗಿ ಈ ಊರು ಒಂದು ರೀತಿಯಲ್ಲಿ ತಮ್ಮ ಹುಟ್ಟೂರು ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಗೋವಿಗೂ ಸಾಗರಕ್ಕೂ ಗಹನವಾದ ಸಂಬಂಧವಿದೆ ಎಮ್ದರು. ಗೋವು ಜನಿಸಿದ್ದು ಕ್ಷೀರ ಸಾಗರದ ಮಂಥನ ಕಾಲದಲ್ಲಿ ಆ ಮಂಥನದಲ್ಲಿ ಹಲವಾರು ರತ್ನಗಳೂ ಹುಟ್ಟಿದುವು. ಸಾಗರದ ನಾಗರಿಕರು ಅಂಥ ರತ್ನಗಳು ಯಾಕೆಂದೆರೆ ಅವರೆಲ್ಲ ಗೋಪ್ರೇಮಿಗಳು ಎಂದರು. ದಿಲ್ಲಿಯಲ್ಲಿರುವವರಿಗೆ (ಕೇಂದ್ರ ಸರಕಾರಕ್ಕೆ) ದಿಲ್ ಇಲ್ಲ. ಹಾಗಾಗಿಯೇ ಇದುವರೆಗೆ ಗೋರಕ್ಷಣೆಗೆ ಬೇಕಾದ ಕ್ರಮತೆಗೆದುಕೊಂಡಿಲ್ಲ. ಆದರೆ ಸಾಗರ ದೇಶದ ಹೃದಯ ಭಾಗದಲ್ಲಿದೆ (ದಿಲ್), ನೀವಾದರೂ ಗೋರಕ್ಷಣೆಯ ಕೆಲಸದಲಿ ಸಂಪೂರ್ಣ ತೊಡಗಿಸಿಕೊಳ್ಳಿ ಎಂಬ ಕರೆ ಇತ್ತರು.

7 ಲಕ್ಷ ಹಸ್ತಾಕ್ಷರ ಸಂಗ್ರಹಿಸಿದ್ದೀರಿ. ಇದು ತಮಗೆ ಸಂತೋಷ ತಂದಿದೆ. ಸರಕಾರದಿಂದ ನಿಮ್ಮ ನಿರೀಕ್ಷೆ ಪೂರಾ ಆಗಬೇಕಾದಲ್ಲಿ ನಿಮ್ಮ ಮತಗಳ ಮೂಲಕ, ಗೋರಕ್ಷಕರಿಗೇ ಮತವನ್ನು ನೀಡಿ ನಿಮ್ಮ ಮಾತನ್ನವರು ತೆಗೆದುಹಾಕುವಂತಿಲ್ಲವೆಂದರು.

ಗೋಹತ್ಯೆಯ ವಿಷಯದಲ್ಲಿ ನಾವೆಲ್ಲ ಪಾಪಿಗಳು, ಕಾರಣ ಗೋಹತ್ಯೆ ಮಾಡುವುದನ್ನು ಮಾತ್ರವಲ್ಲ, ಅದನ್ನು ಅನುಮತಿಸುವವನು ಮತ್ತು ನೋಡುತ್ತಾ ಸುಮ್ಮನಿರುವವನೂ ಪಾಪಿಯೇ ಎಂದರು.

ಹಾಗಾಗಿ ಗೋರಕ್ಷಣೆಯಾಗುವವರೆಗೆ ಯಾರೂ ಸುಮ್ಮನಿರಬೇಡಿ, ತೊಡಗಿಕೊಳ್ಳಿ, ಸಂತರು ನಿಮ್ಮ ಜತೆ ಇದ್ದಾರೆ. ಮುಂದೆ ನಡೆಯಲಿರುವ ಧರ್ಮ ಸಂಗ್ರಾಮಕ್ಕೆ ಈ ಯಾತ್ರೆ ಒಂದು ತಯಾರಿ ಇದೊಂದು ಸ್ವಾತಂತ್ರ್ಯ ಸಂಗ್ರಾಮ, ಯಾಕೆಂದರೆ ನಿಜ ಅರ್ಥದಲ್ಲಿ ನಾವಿನ್ನೂ ಸ್ವತಂತ್ರರಲ್ಲ. ಎಲ್ಲಿಯವರೆಗೆ ಮಾನಸಿಕವಾಗಿ ತಮ್ಮ ತನವನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ನಾವು ಸ್ವತಂತ್ರರು ಎಂದರು.

ನಮ್ಮ ಗೋವು ವಿಶ್ವದಲ್ಲೇ ಶ್ರೇಷ್ಠ. ಅಂಥ ತಳಿಯನ್ನು ವಿದೇಶದ ತಳಿಯೊಂದಿಗೆ ಸಂಕರ ಮಾಡಿ ಘೋರ ಅನ್ಯಾಯ ಮಾಡಿದ್ದಾರೆ. ನಮ್ಮ ಗೋಹತ್ಯೆ ಬೇರೆಯಲ್ಲ, ಭಾರತದ ಹತ್ಯೆ ಬೇರೆಯಲ್ಲ ಎಂದು ಅವರು ತೀವ್ರ ಭಾವುಕರಾಗಿ ನುಡಿದರು. ಸಾಗರ ಕ್ಷೀರಸಾಗರವಾಗಲಿ ಮತ್ತೆ ಮಂಥನ ನಡೆದು ಗೋಮಾತೆ ಉದಯಿಸಲಿ ಎಂದು ಹಾರೈಸಿದರು.

ವಿದಿಶಾದಲ್ಲಿ ಮಾಧವಗಂಜ ಚೌರಾಹದಲ್ಲಿ ನಡೆದ ಸಭಾ ವೇದಿಕೆಯಲ್ಲಿ ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಪೂ. ಅಖಿಲೇಶ್ವರಾನಂದ ಜೀ ಮಹಾರಾಜ್, ಪೂ. ಗೋವಿಂದ ಪ್ರಸಾದ ಶಾಸ್ತ್ರಿ ಜೀ ಮಹಾರಾಜ್, ಪೂ. ನಂದಕಿಶೋರ್ ಶಾಸ್ತ್ರಿ ಜೀ ಮಹಾರಾಜ್, ಪೂ. ಗಿರಿಜಾಶಂಕರ ಜೀ ಮಹಾರಾಜ್, ಇವರುಗಳು ದಿವ್ಯ ಉಪಸ್ಥಿತಿ ನೀಡಿದ್ದರು.

Facebook Comments