ಶ್ರೀ ರಘೂತ್ತಮ ಮಠ ಕೆಕ್ಕಾರು : 03.08.2014,ರವಿವಾರ

ಇಂದಿನ ಸರ್ವಸೇವೆಯನ್ನು ಬೆಂಗಳೂರು ಮಂಡಲದ ಜಯಪ್ರಕಾಶ ವಲಯ, ಸರ್ವಧಾರಿ ವಲಯ, ಬನಶಂಕರಿ ವಲಯ ಮತ್ತು ಕೋರಮಂಗಲ ವಲಯಗಳು ನೆರವೇರಿಸಿದರು.

ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 23 ನೇ ಕೃತಿ ‘ಶ್ರೀಕೃಷ್ಣಚೈತನ್ಯ’.ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರವರು ಬರೆದ ಈ ಕೃತಿಯನ್ನು ರಾಘವೇಶ್ವರ ಶ್ರೀಗಳು ಬಿಡುಗಡೆಗೊಳಿಸಿದರು. ಈಶ್ವರ ಗಣೇಶ ಭಟ್ಟ ಕೋರಮಂಗಲ ಪ್ರಾಯೋಜಕತ್ವ ವಹಿಸಿದ್ದರು. ಭಜಗೋವಿಂದಂ ಭಾಗ ಎರಡು ಧ್ವನಿ ಮುದ್ರಿಕೆಯನ್ನು ಇಸ್ರೋ ವಿಜ್ಞಾನಿ ಪಿ. ಜೆ. ಭಟ್ಟ ಬಿಡುಗಡೆಗೊಳಿಸಿದರು.
ಬೆಂಗಳೂರು ಮಂಡಲ ಉಸ್ತುವಾರಿ ಎಂ. ಕೆ. ಹೆಗಡೆ, ಕೂಜಳ್ಳಿ ವಲಯಸಭೆ ನಡೆಸಿದರು. ನಾಗವೇಣಿ ಮತ್ತು ಈಶ್ವರ ಜೋಶಿ ಕೆಕ್ಕಾರು ಅನ್ನಪೂರ್ಣೇಶ್ವರಿ ಯಾಗದ ಪ್ರಾಯೋಜಕತ್ವ ವಹಿಸಿದ್ದರು. ನಾರಾಯಣ ಶಂಕರ ಭಟ್ಟ ದೇವನಿಮಠ ಗುಡೇಅಂಗಡಿ ಶ್ರೀರಾಮ ಪಟ್ಟಾಭಿಷೇಕ ನೆರವೇರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಂಸನಾಪತ್ರ ನೀಡಲಾಯಿತು ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿ ನಿರೂಪಿಸಿದರು. ಸ್ಟೇಟ್ ಬೆಂಕ ಆಫ್ ಮೈಸೂರಿನ ಎ. ಜಿ. ಎಂ ಆದ ಕೆ. ನರಸಿಂಹ ಭಟ್ಟ ಹಾಗೂ ಮುಖ್ಯ ವ್ಯವಸ್ಥಾಪಕ ಸತ್ಯನಾರಾಯಣ, ಎಚ್. ವಿ. ಹೆಗಡೆ ಹಾಗೂ ವಕೀಲರ ಬಳಗದವರು ವಿಶೇಷ ಅನುಗ್ರಹಕ್ಕೆ ಪಾತ್ರರಾದರು.
~

ಶ್ರೀ ಶ್ರೀಗಳ ಪ್ರವಚನ:

ಬುದ್ಧಿ ಸಾಮ್ರಾಜ್ಯದಲ್ಲಿ ಭಕ್ತಿಗೆ ಜಾಗವಿಲ್ಲವಾಗಿದೆ.
ಆಧುನಿಕ ಸಮಾಜದಲ್ಲಿ ಭಕ್ತಿ ಭಾವಗಳು ಮರೆಯಾಗುತ್ತಿದೆ. ನಾವು ಬಾಲ್ಯಕ್ಕೆ ಹೋದಾಗ ಮುಕುಂದನಿಗೆ ಹತ್ತಿರವಾಗುತ್ತೇವೆ. ಮುಂದುವರಿದಂತೆ ಚಿತ್ತದಲ್ಲಿ ಕಾಟಗಳದ್ದೇ ಆಟ. ದೊಡ್ಡವರ ಜೀವನದಲ್ಲಿ ಕಷ್ಟಗಳೂ ದೊಡ್ಡದಿರುತ್ತದೆ. ಬುದ್ಧಿ ಸಾಮ್ರಾಜ್ಯದಲ್ಲಿ ಭಕ್ತಿಗೆ ಜಾಗವಿಲ್ಲವಾಗಿದೆ ಎಂದು ರಾಘವೇಶ್ವರ ಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ಇಪ್ಪತ್ಮೂರನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡಿದ ಇವರು ಬಾಲ್ಯದಲ್ಲಿ ನಿರ್ಮಲತೆ ಇದೆ ಮಕ್ಕಳು ಏನಾದರೂ ಆಗಬೇಕಾದರೆ ಸಂಸ್ಕಾರ ಆಗ-ಬೇಕು. ಅವರ ಓದಿನಲ್ಲೂ ಸೂಕ್ತ ಆಯ್ಕೆ ಇರಲಿ ’ಮಸ್ತಕದ ಕೊಳಕು ಹಾಗೂ ಮಸ್ತಕದ ಬೆಳಕು ಎರಡೂ ಪುಸ್ತಕವಾಗಿ ಬರುತ್ತವೆ’. ಎಷ್ಟೋ ಪುಸ್ತಕಗಳು ಮಕ್ಕಳ ಬುದ್ಧಿ ಕೆಡಿಸುತ್ತವೆ. ಹಾಗಾಗಿ ಉತ್ತಮ ಪುಸ್ತಕಗಳನ್ನು ಮಾತ್ರ ಓದಲು ಪ್ರೇರೇಪಿಸಿ ಎಂದರು. ಹುಟ್ಟಿದ ಕೂಡಲೇ ಕಣ್ ತೆರೆಯದ – ಅಳದ – ಕಾಲು ಮುಂದಾಗಿ ಹುಟ್ಟಿದ ಮಗು ಜ್ಞಾನಿಯಾಗುತ್ತದೆ ಮಹಾತ್ಮನಾಗುತ್ತದೆ ಎಂಬುದಕ್ಕೆ ದೃಷ್ಟಾಂತಗಳಿವೆ. ಅಳುವುದಕ್ಕೆ ದೈಹಿಕ – ಅಳದಿರುವುದಕ್ಕೆ ದೈವಿಕ ಕಾರಣವಿದೆ ಎಂದರು. ನಾವು ಪ್ರಪಂಚವನ್ನು ಮುಟ್ಟುವವರು, ಮಹಾತ್ಮರು ಪರಮಾತ್ಮನನ್ನು ಮುಟ್ಟುವವರು, ಪರಮಾತ್ಮ ಪ್ರಪಂಚ ಎರಡನ್ನೂ ಒಮ್ಮೆಲೇ ಮುಟ್ಟುವ ಸಾಮರ್ಥ್ಯ ಶಂಕರಾಚಾರ್ಯರಂತಹ ಮಹಾತ್ಮರಿಗೆ ಮಾತ್ರ ಸಾಧ್ಯ. ನಮ್ಮ ಇಂದ್ರಿಯ ಮನಸ್ಸುಗಳೇ ನಮ್ಮ ಮಾತನ್ನು ಕೇಳುವುದಿಲ್ಲ ಬೇರೆಯವರು ಹೇಗೆ ಕೇಳಿಯಾರು? ಯಾರು ತಮ್ಮನ್ನು ತಾವು ಆಳಬಲ್ಲರೋ ಅವರು ಜಗತ್ತನ್ನೇ ಆಳಬಲ್ಲರು ನಾವು ಕೊಡುವ ಭಾವನೆಗಳನ್ನು ಮಕ್ಕಳು ಬೇಗ ಸ್ವೀಕರಿಸುತ್ತಾರೆ. ಆದರೆ ನಾವು ಕೊಡುತ್ತಿಲ್ಲ ಇಲ್ಲವೇ ಕೊಡುವಲ್ಲಿ ತಡವಾಗುತ್ತಿದೆ. ನಿಮ್ಮ ಮಕ್ಕಳಿಗೆ ಏನನ್ನು ಕೊಡದಿದ್ದರೂ ಯಾವುದಾದರೂ ರೂಪದಲ್ಲಿ ರಾಮನನ್ನು ಕೊಡಿ ಎಂಬ ಸಂದೇಶವನ್ನು ಶ್ರೀಗಳು ನೀಡಿದರು.

Facebook Comments