ಶ್ರೀ ರಘೂತ್ತಮ ಮಠ ಕೆಕ್ಕಾರು : 02.08.2014,ಶನಿವಾರ

ಇಂದಿನ ಸರ್ವಸೇವೆಯನ್ನು ಬೆಂಗಳೂರು ಮಂಡಲದ ಯಲಹಂಕ, ಸರ್ವಜ್ಞ ಹಾಗೂ ರಾಜಾಮಲ್ಲೇಶ್ವರ ವಲಯಗಳು ನಡೆಸಿದವು. ಅಖಿಲ ಹವ್ಯಕ ಮಹಾಸಭಾವು ಪೂರ್ಣಪ್ರಮಾಣದಲ್ಲಿ ಭಾಗಿಯಾಗಿತ್ತು.

ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 22 ನೇ ಕೃತಿ ‘ಶ್ರೀ ಚರಕಾಚಾರ್ಯ’. ಡಾ|| ಸೀತಾರಾಮ ಪ್ರಸಾದರವರು ಬರೆದ ಈ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವವನ್ನು ವಿಶ್ರಾಂತ ಜೀವವಿಮಾ ಸಹಾಯಕ ವ್ಯವಸ್ಥಾಪಕ ಕೆ. ಶಂಕರ ಪುರಾಣಿಕ ದಂಪತಿಗಳು ವಹಿಸಿದ್ದರು. ಶ್ರೀ ಭಾರತೀ ಪ್ರಕಾಶನ ಹೊರತಂದ “ಪರಮಪೂಜ್ಯರ ಮಂಕುತಿಮ್ಮನ ಕಗ್ಗ ಆಧರಿತ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು” ದಿವಾನ ಕೇಶವಕುಮಾರರು ಅನಾವರಣಗೊಳಿಸಿದರು. ಇದರ ಪ್ರಾಯೋಜಕತ್ವವನ್ನು ಜಡ್ಡು ರಾಮಚಂದ್ರ ಭಟ್ಟ ದಂಪತಿಗಳು ವಹಿಸಿದ್ದರು.
~

ಶ್ರೀ ಶ್ರೀಗಳ ಪ್ರವಚನ:

ಆತ್ಮ ಪರಮಾತ್ಮನೊಟ್ಟಿಗೆ ಸೇರಿದರೆ ಯಾವ ಸಂಕಷ್ಟವೂ ಇಲ್ಲ.
ಒಡೆದುಹೋದ ಮಡಕೆಯಿಂದ ನೀರು ಸೋರುವಂತೆ ಆಯಸ್ಸು ಸರಿದು ಹೋಗುತ್ತಿದೆ. ಜೀವನದಲ್ಲಿ ಮಾಡಬೇಕಾದದ್ದನ್ನು ಏನನ್ನೂ ಮಾಡಿಲ್ಲ. ದೇಹ ಕಳೆದು ಹೋಗುವ ಮುನ್ನ ಸಾಧನೆ ಮಾಡು. ಎಂದೆಂದಿಗೂ ನಿನ್ನ ಜೊತೆ ಬರುವಂತದ್ದನ್ನು ಸಂಪಾದಿಸು ಎಂದು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಗಳು ’ಭಜಗೋವಿಂದಂ’ ಪ್ರವಚನದ ಸಂದರ್ಭದಲ್ಲಿ ತಿಳಿಸಿದರು.

ಕೆಕ್ಕಾರಿನ ಶ್ರೀರಘೂತ್ತಮ ಮಠದಲ್ಲಿ ಜಯ ಚಾತುರ್ಮಾಸ್ಯದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿದ ಅವರು ಬಾಲ್ಯ, ಯೌವನ ಹಾಗೂ ವೃದ್ಧಾಪ್ಯದಲ್ಲಿ ನಾವು ಮಾಡಬೇಕಾದದ್ದನ್ನು ಮಾಡದೇ ಚಿಂತೆಗೆ ಬಿದ್ದಿದ್ದೇವೆ. ಜೀವ ದೇವರ ನಡುವೆ ಸಂಲಗ್ನವಿರಬೇಕು. ಲಗ್ನವೆಂದರೆ ಯೋಗ. ಪತಿ-ಪತ್ನಿ, ಗುರು-ಶಿಷ್ಯರಲ್ಲಿ ಇಂತಹ ಸಂಲಗ್ನವಿರಬೇಕು. ಆತ್ಮ ಪರಮಾತ್ಮನೊಟ್ಟಿಗೆ ಸೇರಿದಾಗಲೇ ನಮ್ಮೆಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಬದುಕಿನುದ್ದಕ್ಕೂ ಗೋವಿಂದನ ನೆನೆಯದೇ ಇದ್ದರೆ ಸಂಕಷ್ಟವಲ್ಲದೇ ಮತ್ತೇನು? ಕಾಲನಿಗೆ ಆಟ. ಮುಗಿದು ಹೋಗುತ್ತಿದೆ ನಮ್ಮ ಬಾಳಾಟ. ಆತ್ಮ ಸಾಧನೆಗೆ ತಾಯ ಗರ್ಭದಿಂದಲೇ ಮೂಡಿಬಂದವರಿದ್ದಾರೆ. ಎಳವೆಯಲ್ಲೇ ಅಗಾಧ ಸಾಧನೆ ಗೈದವರಿದ್ದಾರೆ. ಅಂತಹ ಸಾಧನೆ ನಿನ್ನದಾಗಲಿ ಎಂದರು.
~
ಯಾಗಶಾಲೆಃ
ಸವಿತಾ ಸಮಾಜದ ಶ್ರೇಯಸ್ಸನ್ನು ಬಯಸಿ ಜಯಚಾತುರ್ಮಾಸ್ಯ ಸಮಿತಿ ಕೆಕ್ಕಾರು ಶ್ರೀರಾಮತಾರಕ ಹವನ ನೆರವೇರಿಸಿದರು. ಸೀತಾ ಮತ್ತು ಲಕ್ಷ್ಮೀನಾರಾಯಣ ವೈದ್ಯ ಊರಕೇರಿ ಹಾಗೂ ಶಾಂತಿ ಮತ್ತು ಸುರೇಶ ಭಾಗ್ವತ್ ಶ್ರೀ ಅನ್ನಪೂರ್ಣೇಶ್ವರಿ ಯಾಗವನ್ನು ನಡೆಸಿಕೊಟ್ಟರು.
~

Facebook Comments