ಶ್ರೀ ರಘೂತ್ತಮ ಮಠ ಕೆಕ್ಕಾರು : 07.08.2014, ಗುರುವಾರ

’ಕೆಕ್ಕಾರಿನಲ್ಲಿ ಮೆರೆದ ಮೃದುತರಂಗ’

ರಾಮಚಂದ್ರಾಪುರ ಮಹಾಸಂಸ್ಥಾನದ – ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಜಯ ಸಂವತ್ಸರದ ಚಾತುರ್ಮಾಸ್ಯದಲ್ಲಿ ಸಾಂಸ್ಕೃತಿಕ ವೈಭವ ಮೆರೆಯಿತು. ಇಪ್ಪತ್ತೊಂದು ದಿನ ಸತತ ಮೃದಂಗ ನುಡಿಸಿ ಗಿನ್ನಿಸ್ ದಾಖಲೆ ಸಾಧಿಸಿದ ಕಲಾರತ್ನ ಶ್ರೀ ಕೆ. ರಾಮಕೃಷ್ಣನ್ ಅವರ ತಂಡದ ಮೃದು ಮಧುರ ಮೃದಂಗ ವಾದನ ಜನಮನ ಸೆಳೆಯಿತು. ಈ ಕಾರ್ಯಕ್ರಮ ಎರಡುವರೆ ತಾಸಿನಷ್ಟು ಸುದೀರ್ಘ ಕಾಲ ಶ್ರೋತೃವರ್ಗದ ಮನಸ್ಸಿಗೆ ಮುದ ನೀಡಿತು.

ಶ್ರಾವಣ ಶುಕ್ಲ ಏಕಾದಶಿಯ ಮುಸ್ಸಂಜೆಗೆ ಕಾರ್ಯಕ್ರಮ ಕಲ್ಯಾಣ ರಾಗದಲ್ಲಿ ಗಣಪತಿ ಸ್ತುತಿಯೊಂದಿಗೆ ಪ್ರಾರಂಭಗೊಂಡು ಖರಹರ ಪ್ರಿಯದ ಶಾರದಾ ಸ್ತುತಿ, ಹಂಸಧ್ವನಿಯ ವಾತಾಪಿ ಗಣಪತಿಂ ಭಜೇ, ಆನಂದ ಭೈರವಿಯ ಹೊತ್ತಿಸೆನ್ನಾತ್ಮದಲಿ ಶ್ರೀರಾಮ ಜ್ಯೋತಿ, (ರಾಮಕಥೆಯಲ್ಲಿ ಶ್ರೀಗಳೇ ಹಾಡಿ ರಂಜಿಸುವ ಆಧ್ಯಾತ್ಮಿಕ ಪದ್ಯ) ಈ ಪದ್ಯಗಳ ಮುಖೇನ ರಂಗೇರಿಸಿ ’ಆದಿ ತಾಳ’, ಜಂಪೆತಾಳ, ’ಏಕತಾಳ’, ಮಿಶ್ರ ಛಾಪು ಹಾಗೂ ಇನ್ನೂ ಹಲವು ತಾಳಗಳಲ್ಲಿ ಮೃದುತರಂಗ ನುಡಿಸಿ ಕಾರ್ಯಕ್ರಮಕ್ಕೆ ರಾಮಕೃಷ್ಣನ್ ಜೀವ ತುಂಬಿದರು. ಕೆ. ರಾಮಕೃಷ್ಣನ್ ಅವರೇ ಸಂಶೋಧಿಸಿ ಸಿದ್ಧಪಡಿಸಿದ ಮೃದುತರಂಗ (ಮೃದಂಗ) ಅಷ್ಟೇನೂ ಮೃದು ಎನಿಸದಿದ್ದರೂ ಮಧುರವೆನಿಸಿತ್ತು. ಸಮುದ್ರದ ತೆರೆಗಳು ಸುನಾಮಿಯಂತೆ ಅಪ್ಪಳಿಸಿ ಕ್ರಮೇಣ ಮತ್ತೆ ಶಾಂತ ಸಾಗರವಾಗುವಂತೆ ಮೃದಂಗ ತರಂಗಗಳು ಏರಿಳಿತವನ್ನು ಕಂಡು ತುಂಬಾ ರಂಜನೆ ನೀಡಿದವು. ಕೇಳುಗರ ಅದ್ಭುತ ಪ್ರತಿಕ್ರಿಯೆಯನ್ನು ಕಂಡು ಹಿಗ್ಗಿದ ರಾಮಕೃಷ್ಣನ್ ಒಮ್ಮೆಯಂತೂ ವೇದಿಕೆಯಿಂದ ಕುಣಿಯುತ್ತಾ ಸಭೆಗೇ ಬಂದು ಶ್ರೋತೃಗಳ ಚಪ್ಪಾಳೆಯೊಟ್ಟಿಗೆ ಮೃದಂಗ ತರಂಗದ ಅಲೆಯೆಬ್ಬಿಸಿ ಕುಪ್ಪಳಿಸಿದರು. ಆಗ ಕಲಾವಿದನ ಆತ್ಮಾನಂದ ಶ್ರೋತೃಗಳ ಆನಂದ ಸಾಗರವಾಗಿ ಪರಿವರ್ತನೆಗೊಂಡಿತು.

’ವಯೊಲಿನ್’ನಲ್ಲಿ ಶ್ರೀ ಅನುಪ್ ಭಾಸ್ಕರ್, ಕೊಳಲಿನಲ್ಲಿ ಶ್ರೀ ರಾಜೇಶ್ ಪಾಲಿಕ್ಕಾಡ್, ಒಂದೊಂದೇ ರಾಗದಲ್ಲಿ ಪರಸ್ಪರ ಸ್ಪರ್ಧೆ ಏರ್ಪಡಿಸುತ್ತ ಜನಪ್ರಿಯ ಹಾಡುಗಳನ್ನು ತುಂಬಾ ಲಯಬದ್ಧವಾಗಿ – ವಿಲಂಬಿತದಲ್ಲೂ – ದ್ರುತದಲ್ಲೂ – ಅತಿದ್ರುತದಲ್ಲೂ ನುಡಿಸುವಾಗ ವಾದ್ಯಗಾರರು ಮಾತ್ರವಲ್ಲ ಶ್ರೋತೃವರ್ಗವೂ ಆನಂದಿಸುತ್ತಿದ್ದರು. ಎಡಕ್ಯ ಮತ್ತು ಚಂಡೆಯಲ್ಲಿ ಶ್ರೀ ಪಲ್ಲಾವೂರ್ ಕುಮಾರ್ ಮೃದಂಗಕ್ಕೆ ತುಂಬಾ ಒಳ್ಳೇ ಸ್ಪರ್ಧೆ ನೀಡಿದರು, ಇಂಗ್ಲೀಷ್ ವಾದ್ಯ ರೀದಮ್ ಪೇಡಿನಲ್ಲೂ ಬೆರಳುಗಾರಿಕೆ ಮೆರೆದ ಶ್ರೀ ಕಣ್ಣನ್ ಪಾಲಕ್ಕಾಡು ಜನಮನ ಗೆದ್ದರು. ಲಯಕ್ಕೆ ತಕ್ಕಂತೆ ತಂತು ನುಡಿಸುವ ’ಮುಖರಶಂಖದ’ (ಮೋರಚಿಂಗ್) ಶ್ರೀ ಆರ್. ರಾಜಶೇಖರರು ಕಾರ್ಯಕ್ರಮಕ್ಕೆ ತುಂಬು ಮೆರಗು ನೀಡಿದರು.

ಪರಮಪೂಜ್ಯ ಶ್ರೀ ರಾಘವೇಶ್ವರರು ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿದರು. ಮುಕ್ತಾಯದಲ್ಲಿ ಕಲಾವಿದರುಗಳಿಗೆ ಶ್ರೀಗಳು ಶಾಲು ಹೊದೆಸಿ, ಫಲನೀಡಿ ಚಾತುರ್ಮಾಸ್ಯ ಮಂತ್ರಾಕ್ಷತೆಯಿತ್ತು ಮುಕ್ತ ಕಂಠದಿಂದ ಪ್ರಶಂಸಿಸಿ ಆಶೀರ್ವದಿಸಿದರು. ಶ್ರೀ ಗುರುಗಳ ಆಣತಿಯನ್ನನುಸರಿಸಿ ಈ ಸಮಗ್ರ ಕಾರ್ಯಕ್ರಮದ ಸಂಘಟನೆಯಲ್ಲಿ ಮುಖ್ಯ ಪಾತ್ರವಹಿಸಿದ ಪಂ|| ವಿಷ್ಣು ಪ್ರಸಾದರನ್ನು ಜಯಚಾತುರ್ಮಾಸ್ಯ ಸಮಿತಿ ಅಭಿವಂದಿಸಿತು. ಧ್ವನಿ ವ್ಯವಸ್ಥೆಯ ನಿನಾದ ರಾಮಣ್ಣ, ಕಲಾವಿದರು ಹಾಗೂ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು.

ಪ್ರಾರಂಭದಲ್ಲಿ ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ ಪ್ರೊ|| ಶಂಭು ಭಟ್ಟ ಕಲಾವಿದರೆಲ್ಲರನ್ನು ಪರಿಚಯಿಸುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಎಂ. ಕೆ. ಹೆಗಡೆ ಕಲಾವಿದರೆಲ್ಲರಿಗೆ ಫಲಪುಷ್ಪ ವೀಳ್ಯಗಳನ್ನರ್ಪಿಸಿ ಗೌರವ ಸ್ವಾಗತ ನೀಡಿದರು. ಕೊನೆಯಲ್ಲಿ ಸದಸ್ಯ ಶ್ರೀ ರಾಜಾರಾಮ ಹೆಬ್ಬಾರ ಪ್ರಶಂಸಾತ್ಮಕ ನುಡಿಗಳನ್ನಾಡಿದರು. ಪ್ರಿನ್ಸಿಪಾಲ್ ಎಸ್. ಜಿ. ಭಟ್ಟ ಕಬ್ಬಿನಗದ್ದೆ ಹಾಗೂ ಶ್ರೀ ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರ್ವಹಿಸಿದರು.

ಡಾ|| ಗಣಪತಿ ಜೋಯಿಸ್, ಮಣಿಪಾಲ್ ಬರೆದ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ ೨೭ನೇ ಗ್ರಂಥ ’ಮಹರ್ಷಿ ಕಪಿಲ’ವನ್ನು ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳು ಲೋಕಾರ್ಪಣೆಗೊಳಿಸಿದರು. ಶ್ರೀಮತಿ ಲಲಿತಲಕ್ಷ್ಮೀ ಭಟ್ರವರು ಬರೆದ ೩೩ನೇ ರಾಘವೇಶ್ವರಭಾರತಿಗಳ ಕುರಿತ ಕೃತಿಯನ್ನು ಕೆ. ರಾಮಕೃಷ್ಣ ಪಾಲಕ್ಕಾಡು ಬಿಡುಗಡೆಗೊಳಿಸಿದರು.

Facebook Comments