ಶ್ರೀ ರಘೂತ್ತಮ ಮಠ ಕೆಕ್ಕಾರು : 08.08.2014, ಶುಕ್ರವಾರ

ಭಾರತೀ ಪ್ರಕಾಶನದ ವಿದ್ವಾನ್ ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ ವಿರಚಿತ ಗುರುಗ್ರಂಥಮಾಲಿಕೆಯ ಇಪ್ಪತ್ತೆಂಟನೆಯ ಗ್ರಂಥ ಅಗಸ್ತ್ಯಮಹರ್ಷಿ ಶ್ರೀಗಳಿಂದ ಲೋಕಾರ್ಪಣೆಗೂಂಡಿತು. ಕೆನರಾ ಬ್ಯಾಂಕ ಕುಮಟಾದ ಗಣೇಶ ಉಪ್ಪುಂದ ಪ್ರಾಯೋಜಕತ್ವ ವಹಿಸಿದ್ದರು. ಸಿಂದಗಿಯ ನಾಥಪಂಥದ ಶ್ರೀಸದ್ಗುರು ಭೀಮಾಶಂಕರ ಮಠದ ಶ್ರೀದತ್ತಪ್ಪಯ್ಯ ಸ್ವಾಮಿಗಳು ಸೌಂದರ್ಯಲಹರಿ ಕೃತಿಯನ್ನು ಬಿಡುಗಡೆಗೊಳಿಸಿದರು. ಗುಂಜಗೋಡಿನ ಶೇಷಗಿರಿ ಭಟ್ಟರವರು ಸಂಪಾದಿಸಿದ ಮಂತ್ರಮಂದಾರ ವನ್ನು ರಾಘವೇಶ್ವರರು ಲೋಕಾರ್ಪಣೆಗೊಳಿಸಿದರು. ಅಖಿಲ ಭಾರತ ಗುಡಿಗಾರ ಸಮಾಜದ ಉಪಾಧ್ಯಕ್ಷ ಎಂ. ಎನ್. ಗುರುಮೂರ್ತಿ ಮತ್ತು ಸಮಾಜ ಬಾಂಧವರು, ಹಾಗೂ ಶ್ರೀ ಕ್ಷೇತ್ರ ಸಿಗಂದೂರಿನ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ ಹಾಗೂ ಬಳಗದವರು ಶ್ರೀಗಳಿಂದ ವಿಶೇಷ ಅನುಗ್ರಹ ಪಡೆದರು.

ಶ್ರೀ ಶ್ರೀಗಳ ಪ್ರವಚನ:

’ಅಪ್ಪಣೆ ಪಾಲನೆಗೆ ಬೇಕು ಅರ್ಪಣಾಭಾವ’

ಗುರಿ ಮೀರಿದ ಸಾಧನೆ ಮಡುವವನೆ ನಿಜವಾದ ಗುರಿಕಾರ. ಶ್ರೀಮನ್ನಾರಾಯಣನ ಪ್ರತಿನಿಧಿಯಾಗಿ ಶ್ರೀರಾಮ. ಶ್ರೀರಾಮನ ಪ್ರತಿನಿಧಿಯಾಗಿ ಶ್ರೀರಾಮಚಂದ್ರಾಪುರ ಮಠ. ಮುಂದೆ ಗುರು ಪರಂಪರೆ. ಗುರುಗಳು ಮಠದ ಪ್ರತಿನಿಧಿ. ಗುರುಗಳ ಪ್ರತಿನಿಧಿಗಳು ಗುರಿಕಾರರು ಎಂದು ರಾಘವೇಶ್ವರ ಶ್ರೀಗಳು ಗುರಿಕಾರರ ಸಮಾವೇಶವನ್ನುದ್ದೇಶಿಸಿ ನುಡಿದರು. ಗುರಿಕಾರರ ಕಾರ್ಯ ಅಪರೂಪದ್ದು. ಅಪರೂಪದ್ದು ಸಿಕ್ಕಿದಮೇಲೆ ಅರೂಪದ ಕೆಲಸ ಮಾಡಬೇಕು. ಯಾವಾಗ ನಿಮ್ಮ ಬೆನ್ನು ಈ ಸಾಠಿಯನ್ನು ಹೊತ್ತಿತೊ, ಅದನ್ನು ಹೊದ್ದಿತೋ, ಆಗ ನೀವು ಜವಾಬ್ದಾರಿ ಹೊರಲು ಸಿದ್ಧರೆಂಬುದು ಸ್ಪಷ್ಟವಾಯಿತು. ಗುರಿ ಮೀರಿದ ಸಾಧನೆಯೊಂದಿಗೆ ನಿಜವಾದ ಕಾರ್ಯ ನಡೆಯಲಿ ಸೇವೆ ಮಾಡುವ ಆಸಕ್ತಿಯಿಂದ ಬಂದ ನಿಮಗೆ ಆ-ಶಕ್ತಿಯನ್ನು ಭಗವಂತನು ಕರುಣಿಸಲಿ. ಅಪ್ಪಣೆ ಪಾಲನೆಗೆ ಬೇಕು ಅರ್ಪಣಾಭಾವ ಎಲ್ಲಿ ಅರ್ಪಣೆಯಿದೆಯೋ ಅಲ್ಲಿ ಅಪ್ಪಣೆ ಪಾಲನೆಯಾಗುತ್ತದೆ. ರಾಮನ ಹಾಗೂ ಪೀಠದ ಆಶೀರ್ವಾದವನ್ನು ಸಮಾಜಕ್ಕೆ ತಲುಪಿಸುವವರಾಗಿ. ಸಮಾಜವೆಂಬ ದೇವರ ಪ್ರತಿನಿಧಿಗಳಾಗಿ ಎಂದು ಕರೆನೀಡಿದರು. ಗುರುಪೀಠದ ಕೊಡುಗೆಯೇ ಒಡನಾಟ. ಗುರುಪೀಠ ಸಮಾಜಕ್ಕೊಂದು ದಿಕ್ಕು ತೋರಿಸುತ್ತಿರುವುದು ಒಡನಾಟದಿಂದ. ಮಕ್ಕಳನ್ನು ಗುರುಪೀಠದತ್ತ ಕರೆದು ತನ್ನಿ. ಅವರು ಪೂಜೆ ನೋಡಲಿ, ಮಂತ್ರಾಕ್ಷತೆ ಪಡೆದುಕೊಳ್ಳಲಿ, ಎಲ್ಲರೊಂದಿಗೆ ಬೆರೆತು, ಬೆರೆಯುವುದನ್ನು ಕಲಿಯಲಿ ಎಂದು ನುಡಿದರು.

Facebook Comments Box