ಶ್ರೀ ರಘೂತ್ತಮ ಮಠ ಕೆಕ್ಕಾರು : 16.08.2014, ಶನಿವಾರ

ವಿನಾಯಕ ಭಟ್ಟ ಓಡ್ಲಮನೆ ಇವರು ಬರೆದ ಮಹರ್ಷಿ ಮಾರ್ಕಂಡೇಯ ಕೃತಿ ಲೋಕಾರ್ಪಣೆ ಮಾಡಿದ ಶ್ರೀಗಳು ಯಮನ ಪಾಶ-ಭಾವ ಪಾಶದ ನಡುವೆ ನಡೆದ ಪರೀಕ್ಷೆಯಲ್ಲಿ ಭಾವ ಪಾಶಕ್ಕೆ ಜಯ ದೊರಕಿಸಿದ್ದು ಮಾರ್ಕಂಡೇಯ. ಭಾವವಿದ್ದರೆ ಜೀವಕ್ಕೆ ಸಾವಿಲ್ಲ ಎಂಬ ಸಂದೇಶವನ್ನ ಈ ಕೃತಿ ನೀಡುತ್ತದೆ. ಶಿವ ಭಾವವನ್ನು ಈ ಕೃತಿ ನಿಮ್ಮೆಲ್ಲರಲ್ಲಿ ಶಾಶ್ವತಗೊಳಿಸಲಿ ಎಂದು ನುಡಿದರು. ಕೃತಿ ಬಿಡುಗಡೆಯ ಪ್ರಾಯೋಜಕತ್ವವನ್ನು ರವಿ ಆಚಳ್ಳಿ ವಹಿಸಿದ್ದರು. ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ (ರಿ) ಕುಂಭಾಶಿಯಿಂದ ಪ್ರತಿವರ್ಷ ನೀಡುವ ಕೊಂಡದಕುಳಿ ರಾಮ ಹೆಗಡೆ ಪ್ರಶಸ್ತಿಯನ್ನು ಯಕ್ಷಗಾನ ಪ್ರಸಾದನ ತಜ್ಞ ಲಕ್ಷ್ಮಣ ನಾಯ್ಕ ಮಂಕಿ ಇವರಿಗೆ ಶ್ರೀಗಳು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಕಮಲಾ ಕೊಂಡದಕುಳಿಯವರು ಬರೆದ ’ಕೊಂಡದಕುಳಿ ರಾಮ ಹೆಗಡೆ ಲಕ್ಷ್ಮಣ ಹೆಗಡೆ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ’ಶಿವಕವಚ ಸ್ತೋತ್ರಮ್’ನ್ನು ಗಾಣಿಗ ಸಮಾಜದ ಅಧ್ಯಕ್ಷ ಮಾಧವ ಶೆಟ್ಟಿ ಹಾಗೂ ಗೋಕರ್ಣದ ಮಹೇಶ ಶೆಟ್ಟಿ ಬಿಡುಗಡೆಗೊಳಿಸಿದರು. ರವೀಂದ್ರ ಭಟ್ಟ ಸೂರಿ ಹಾಗೂ ಎಸ್. ಜಿ. ಭಟ್ಟ ಕಬ್ಬಿನಗದ್ದೆ ನಿರೂಪಿಸಿದರು. ರಾಜಾರಾಮ ಹೆಬ್ಬಾರ ಪ್ರಶಸ್ತಿ ಪತ್ರ ವಾಚಿಸಿದರು. ಮಂಗಳೂರು ಮಂಡಳದ ವಿಟ್ಲ, ಕೇಪು, ಕಲ್ಲಡ್ಕ ಹಾಗೂ ಕುಂದಾಪುರ ವಲಯಗಳು ಸರ್ವಸೇವೆ ನೆರವೇರಿಸಿದವು.

ಶ್ರೀ ಶ್ರೀಗಳ ಪ್ರವಚನ:

’ಭಾವವಿದ್ದರೆ ಜೀವಕ್ಕೆ ಸಾವಿಲ್ಲ ’

ಶ್ರೀರಾಮಚಂದ್ರಾಪುರ ಮಠದ ಗುರುಪರಂಪರೆಯ ೩೬ನೇ ಯತಿಗಳ ಚಾತುರ್ಮಾಸ್ಯದ ೩೬ನೇ ದಿನದಲ್ಲಿ ನೀವೆಲ್ಲ ಸೇರಿದ್ದೀರಿ. ನವ ಚೈತನ್ಯ ಪಡೆಯಲು ಗುರು ಸನ್ನಿಧಿಗೆ ಬಂದಿದ್ದೀರಿ. ನಿಮ್ಮೆಲ್ಲರ ಮನಸ್ಸುಗಳು ಹತ್ತಿರ ಬಂದಿವೆ. ಎಲ್ಲರ ಮುಖದಲ್ಲೂ ಮಾಸದ ನಗುವನ್ನು ಶ್ರೀರಾಮ ಕರುಣಿಸಲಿ, ಮಾಸದ ಉಲ್ಲಾಸ ನಿಮ್ಮೆಲ್ಲರದಾಗಲಿ ಎಂದು ರಾಘವೇಶ್ವರಶ್ರೀಗಳು ನುಡಿದರು.

ಅವರು ಜಯಚಾತುರ್ಮಾಸ್ಯದ ೩೬ನೇ ದಿನದ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಗಾಣಿಗ ಸಮಾಜದ ಚರಿತ್ರೆಯಲ್ಲಿ ಇಂದು ಹೊಸ ಅಧ್ಯಾಯ ಪ್ರಾರಂಭವಾಗಿದೆ. ಸಮಾಜದ ಇತಿಹಾಸದಲ್ಲೇ ಎಂದೂ ಸೇರದ ಸಂಖ್ಯೆಯಲ್ಲಿ ಗುರುಮಠದಲ್ಲಿ ನೀವು ಸೇರಿದ್ದು ಒಂದು ದಾಖಲೆ. ಬೆಳಕಿನ ಮೂಲವಾಗಿರುವ ಗಾಣಿಗ ಸಮಾಜಕ್ಕೆ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಯಲ್ಲಿ ದೀಪದ ಸೇವೆಗೆ ಮೊದಲ ಅವಕಾಶವನ್ನ ನೀಡಲಾಗಿದೆ. ಎಣ್ಣೆಗೆ ಸಂಸ್ಕೃತದಲ್ಲಿ ಸ್ನೇಹವೆನ್ನುತ್ತಾರೆ. ಸಮಾಜಕ್ಕೆ ಸ್ನೇಹ ಕೊಟ್ಟ ನಿಮಗೆ ಪ್ರಪಂಚದ ಸ್ನೇಹ ದೊರಕಲಿ, ಸಮಾಜದಲ್ಲಿ ಬೆಳಕು ಮೂಡಲಿ ಎಂದು ಇಂದಿನ ಸಮಾಜ ಸೇವೆ ನಡೆಸಿದ ಗಾಣಿಗ ಸಮಾಜಕ್ಕೆ ಶ್ರೀಗಳು ಹಾರೈಸಿದರು.

Facebook Comments