ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 20: 

               ಬ್ರಹ್ಮೈಕ್ಯ ಪೂಜ್ಯಗುರುವರ್ಯರು
                  -ನಾನು ದರ್ಶನಮಾಡಿದಂತೆ

                                              ವಿದ್ವಾನ್ ಗಣೇಶ ಭಟ್ಟ.

                        “ಶ್ರೀಶಂಕರ ಸ್ವರೂಪಾಯ ಕಾಮಿತಾರ್ಥಪ್ರದಾಯಿನೇ|”
                      ಗುರುವೇ ರಾಘವೇಂದ್ರಾಯ ಭಾರತೀಯತಯೇ ನಮಃ||

         ‘ಹರಮುನಿದರೂ ಗುರುಕಾಯ್ವ’ ಎಂಬಂತೆ ಗುರುವಿನ ಸ್ಥಾನವು ಮಹತ್ವಪೂರ್ಣವೂ, ಅಪೂರ್ವವೂ ಆದುದಾಗಿದೆ. ಗುರುಭಕ್ತಿಯ ಮಹಿಮೆಯಿಂದ  ಪರಾವಿದ್ಯಾ ಹಾಗೂ ಅಪರಾವಿದ್ಯೆಗಳ ಪರಿಪೂರ್ಣ ಸಿದ್ಧಿಯು ಸುಲಭವಾಗಿ ಕರಗತವಾಗುತ್ತದೆ. ವ್ಯಕ್ತಿಯ ಶ್ರೇಯಸ್ಸಿಗೂ ಮೂಲಭೂತವಾಗಿ ಗುರುವಿನ ಅನುಗ್ರಹ ಆಶೀರ್ವಾದ ಆಶ್ರಯ ಸದಾ ಇರಬೇಕಾಗುತ್ತದೆ. ಅಂತಹ ಜೀವನವು ಸಾರ್ಥಕಮಯವಾಗಿ ಸಮೃದ್ಧವಾಗಿ ಸಾಗುತ್ತದೆ. ಶ್ರೇಯ ಸಾಧನೆಗೆ ಕರ್ಮಬೇಕಾದರೆ ಪ್ರೇಯಸ್ಸಂಪಾದನೆಗೆ ಅತ್ಮಜ್ಞಾನಬೇಕು. ಇಂತಹ ಆತ್ಮಜ್ಞಾನ ದೊರೆಯಲು ಗುರುವಿನ ಸಾನಿಧ್ಯ ಅನುಗ್ರಹ ಅವಶ್ಯ. ಅಜ್ಞಾನಿಗಳಿಗೆ ಉಪದೇಶ ಮಾಡಿದ ಈ ಜ್ಞಾನವನ್ನು ಭದ್ರವಾಗಿ ಅವರಲ್ಲಿ ನೆಲೆಸುವಂತೆ ಕಾಪಾಡುವವನೂ ಗುರುವೇ. ವಿಷ್ಣುವಿನ ಕಾರ್ಯವಾದ ಸ್ಥಿತಿ ಕಾರ್ಯವನ್ನು ಇದರ ಮೂಲಕ ಗುರುವು ಮಾಡಿದಂತಾಯಿತು. ನಾಲ್ಕು ಭುಜಗಳುಳ್ಳ ವಿಷ್ಣು ಜಗತ್ತಿನ ರಕ್ಷಕನಾದರೆ ಎರಡೇ ಭುಜಗಳುಳ್ಳ ಈ ಸದ್ಗುರು ಎಲ್ಲಾ ಮುಮುಕ್ಷು ಜನಗಳಿಗೆ ಆತ್ಮಜ್ಞಾನವೆಂಬ ಅಮೃತವನ್ನು ಧಾರೆ ಎರೆದು ಅವರನ್ನು ತನ್ನ ಸ್ಥಾನಕ್ಕೆ ಬರುವಂತೆ ಮಾಡಿಬಿಡುತ್ತಾನೆ. ಹಾಗೂ ಜ್ಞಾನರತ್ನವನ್ನು ಕೊಟ್ಟು ಅಜ್ಞಾನಿಗಳನ್ನು ಉದ್ಧರಿಸುತ್ತಾನೆ.

ಪ್ರಕೃತ ಶ್ರೀಶಂಕರ ಭಗವತ್ಪಾದ ಪ್ರತಿಷ್ಠಾಪಿತ ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಶ್ರೀಗುರುಪರಂಪರೆಯ ಮೂವತ್ತೈದನೇ ಪರಮಹಂಸರಾದ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳು, ಭಗವತ್ಪಾದ ಸ್ವರೂಪಿಗಳಾಗಿ ಈ ಪೀಠವನ್ನು ವೈಭವೀಕರಿಸಿ ಪೀಠದ ಮಾಹಿತಿಯನ್ನು ಐತಿಹಾಸಿಕಗೊಳಿಸಿ  ಬ್ರಹ್ಮೀಭೂತರಾದರು. ಆದರೆ ಅವರು ಸಮಾಜದ ಶಿಷ್ಯಬಾಂಧವರಿಗೆ ನೀಡಿದಂತಹ ಹಿತವಚನಗಳೇನಿವೆಯೋ ಇಂದಿಗೂ ಅಜರಾಮರವಾಗುವಂತಹದ್ದಾಗಿವೆ. ಪರಬ್ರಹ್ಮ ಸ್ವರೂಪಿಗಳಾದ ಬ್ರಹ್ಮೀಭೂತರು ತಮ್ಮ ಐವತ್ನಾಲ್ಕು ವರ್ಷಗಳ ಪೀಠಾಧಿಕಾರದಲ್ಲಿ ಅದ್ವಿತೀಯವಾದ ಸಾಧನೆಗೈದು ಮಠಗಳ ಅಭಿವೃದ್ಧಿ ತನ್ಮೂಲಕ ಶಿಷ್ಯ ಸಮಾಜದ ಉತ್ತರೋತ್ತರ ಕ್ಷೇಮಾಭಿವೃದ್ಧಿಗೂ ಕಾರಣೀಭೂತರಾದರು. ನಾನು ಶ್ರೀಗುರುವಿನ ಸಾಂನ್ನಿಧ್ಯಾವಕಾಶದ ಸದುಪಯೋಗವನ್ನು ಪಡೆದ ಅದೃಷ್ಟವಂತನೆಂದು ಭಾವಿಸುವೆ. ಶಿಷ್ಯಕೋಟಿಯಲ್ಲೊಬ್ಬನಾದ ನನಗೆ ಈ ಒಂದು ಅವಕಾಶ ಒದಗಿ ಬಂದದ್ದು ದೈವೀಕೃಪೆಯೆಂದು ತಿಳಿಯದೇ, ಬ್ರಹ್ಮೀಭೂತ ಶ್ರೀಗಳನ್ನು ಕೇವಲ ದರ್ಶನಮಾಡಿ ಅನುಗ್ರಹ ಪಡೆದವರಲ್ಲಿ ಸೇರದೇ, ಸ್ವತಃ ಅಧ್ಯಯನಾರ್ಥಿಯಾಗಿ ಕಿಂಚಿತ್ ಜ್ಞಾನ ಸುಧೆಯನ್ನುಂಡ ಶಿಷ್ಯಪಾಮರನಾಗಿರುವೆ. ಐವತ್ನಾಲ್ಕು ಚಾತುರ್ಮಾಸ್ಯ ವ್ರತವನ್ನಾಚರಿಸಿ ಆರಾಧ್ಯದೇವತಾಸನ್ನಿಧಿಯಲ್ಲಿ ಶಿಷ್ಯಕೋಟಿಯ ಕ್ಷೇಮಾಭಿವೃದ್ಧಿಗೆ ಅನುದಿನವೂ ಸಂಪ್ರಾರ್ಥಿಸಿ, ಧರ್ಮಾಚಾರ್ಯರಾಗಿ, ಧರ್ಮಸಾಮ್ರಾಜ್ಯದ ಸಿಂಹಾಸನಾಧಿಷ್ಠಿತರಾಗಿ, ಬೆಳಗಿದ ಮಹಾಮಹಿಮರು, ಸತ್ಪುರುಷರು, ಯೋಗಿಗಳು ವೇದಾದ್ಯಯನ ಸಂನ್ನರಾಗಿ, ಶಾಸ್ತ್ರಾಧ್ಯಯದ ಕೋವಿದರಾಗಿ ಸ್ವತಃ ಆಚರಣೆಯಲ್ಲಿ ಅನುಕರಿಸಿಕೊಂಡು ಶಿಷ್ಯಸಮಾಜಕ್ಕೂ ಜ್ಞಾನಾಮೃತವನ್ನು ಬೋಧಿಸಿದ ಜ್ಞಾನವೃದ್ಧರು ಶ್ರೀಗುರುಪುಂಗವರು.

ಪ್ರಕೃತ ವೈಯುಕ್ತಿಕವಾದ ನೆಲೆಯಲ್ಲಿ ಹೇಳುವುದಾದರೆ ಈ ಬಡವನಾದ ನನ್ನನ್ನು ಉದ್ಧರಿಸಿದ ದೇವಾಂಶಸಂಭೂತರು. ಜ್ಞಾನ ಗಂಗೆಯನ್ನು ಧಾರೆ ಎರೆದ ಮಹಿಮರು ಹಾಗೆಯೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೂ ಕಾರಣೀಕರ್ತರು. ಷಟ್ ಶಾಸ್ತ್ರದ ಆಳವಾದ ಅಧ್ಯಯನವನ್ನು ಮಾಡಿ ಸ್ವತಃ ಆಚರಣೆಯಲ್ಲಿಟ್ಟುಕೊಂಡಿದ್ದರು. ಪರಂಪರಾಗತವಾದ ಮಠೀಯ ಪ್ರಾಕ್ ಪದ್ಧತಿಯಲ್ಲಿ ಚ್ಯುತಿತರದೇ ಧರ್ಮಾಚಾರ್ಯರಾಗಿ ಮೆರೆದರು. ಕರ್ಮಭೂಮಿಯೂ ಆಧ್ಯಾತ್ಮವಿದ್ಯೆಯ ಕೇಂದ್ರವೂ ಆಗಿರುವ ಈ ಭರತ ಭೂಮಿಯಲ್ಲಿ ಜನಿಸಿದ ಪ್ರತಿಯೋರ್ವನೂ ಪ್ರತಿಭಾವಂತ. ಆದರೆ ಅವರ ಪ್ರತಿಭೆಯನ್ನು ಪ್ರಕಾಶಕ್ಕೆ ತರುವ ಪರಿಸರವನ್ನು ಶ್ರೀಗುರುಮುಖೇನ ಪ್ರಕಟಿಸಲು ಸಾಧ್ಯ. ಈ ಲೋಕದಲ್ಲಿ ಆದರ್ಶಮಯ ಜೀವನವನ್ನು ಸುಖಮಯವಾಗಿ ಸಾಗಿಸಿ ಪರದಲ್ಲಿ ಅನುತ್ತಮ ಗತಿಯಲ್ಲಿ ಪಡೆಯುವುದು, ಮಾನವ ಜೀವಿತದ ಸಾಧನೀಯ ಧ್ಯೇಯವಷ್ಟೇ. ಲೌಕಿಕ ಜೀವನವನ್ನು ಸಂತಸ ಭರಿತವನ್ನಾಗಿಸಲು ಶಾಲಾಕಾಲೇಜುಗಳಲ್ಲಿ ನೀಡುವ ಆಧುನಿಕ ಶಿಕ್ಷಣ ಅತ್ಯಗತ್ಯ. ಆದುದರಿಂದ ವೈದಿಕ ವಿದ್ಯಾಪ್ರಸಾರಕ್ಕೆ ನೀಡುವಷ್ಟೇ ಪ್ರಾಶಸ್ತ್ಯವನ್ನು ಲೌಕಿಕವಿದ್ಯಾಪ್ರಸಾರಕ್ಕೂ ನೀಡಬೇಕು ಎನ್ನುವುದು ಶ್ರೀಗುರುವರ್ಯರ ಸದಾಶಯವಾಗಿತ್ತು. ಹಾಗೆಯೇ ಶ್ರೀ ಸಂಸ್ಥಾನದ ವತಿಯಿಂದ ನೇರವಾಗಿ ಲೌಕಿಕ ವಿದ್ಯಾಸಂಸ್ಥೆಯನ್ನು ಸಂಸ್ಥಾಪಿಸದಿದ್ದರೂ ಪೂಜ್ಯ ಗುರುವರ್ಯರು ಸಮಾಜದ ಶಿಷ್ಯ ಪ್ರಮುಖರನ್ನು ಸಂಘಟಿಸಿ ಸಂಘಸಂಸ್ಥೆಯನ್ನು ಕಟ್ಟಿಕೊಂಡು ತನ್ಮೂಲಕ ಶಾಲಾಕಾಲೇಜು ತೆರೆಯಲು ಹುರಿದುಂಬಿಸಿ ಅವರೆಲ್ಲರಿಗೆ ಪೂರ್ವಪ್ರಮಾಣದ ಪ್ರೋತ್ಸಾಹ ನೀಡಿ ಆರ್ಥಿಕನೆರವು ಬರುವಂತೆಮಾಡಿ ತಾವೂ ಸ್ವತಃ ಸುವರ್ಣಮಂತ್ರಾಕ್ಷತೆಯನ್ನಿತ್ತು ಲೌಕಿಕ ವಿದ್ಯಾದಾನ ಕಾರ್ಯವು ಸುಗಮವಾಗಿ ನೆರವೇರುವಂತೆ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾವಂತ ಸಮಾಜದ ಸುಸ್ವಸ್ಥ ಮನಸ್ಸಿನ ಸ್ವಸ್ಥ ಪ್ರಜೆಗಳಿಂದಲೇ ಸಾಮಾಜಿಕ ಸರ್ವತೋಮುಖ ಪ್ರಗತಿಯನ್ನು ನಿರೀಕ್ಷಿಸಬಹುದೆಂಬುದು ಶ್ರೀಗಳ ಸದಾಪೇಕ್ಷೆ. ಉತ್ತಮ ಆದರ್ಶವನ್ನು ಸಮಾಜದ ಮುಂದಿಡಲು ಯೋಚಿಸಿದ ಶ್ರೀಗುರುವರ್ಯರು ಮೊಟ್ಟಮೊದಲಿಗೆ ತಮ್ಮ ಸನ್ನಿಧಿಯಲ್ಲಿ ಗುರುಕುಲ ಪದ್ಧತಿಯ ಒಂದು ಪಾಠಶಾಲೆಯಲ್ಲಿ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಆಶ್ರಯನೀಡಿ ವೇದಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ ಅವರಿಗೆ ಪಾಠಪ್ರವಚನ ಮಾಡಲು ವಿದ್ವಾಂಸರನ್ನು ನೇಮಿಸಿದರು. ತಾವೂ ಸ್ವತಹ ಅಧ್ಯಾಪನಾಕಾರ್ಯ ನೆರವೇರಿಸುತ್ತಿದ್ದರು ಅಂತಹ ಆಶ್ರಿತ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನು. ಶ್ರೀಗುರುವರ್ಯರು ಕಾವ್ಯ ಚಂಪೂಗ್ರಂಥಗಳನ್ನು ತರ್ಕ ವೇದಾಂತಾದಿ ಗಹನ ಶಾಸ್ತ್ರಗಳನ್ನು ಸುಲಭ ಶೈಲಿಯಲ್ಲಿ ಬೋಧಿಸುವ ಕ್ರಮ ಅಸದೃಶವಾದುದು. ಅಂಥವರ ಪ್ರಬೋಧಕ ಜ್ಞಾನ ಗಂಗೆಯಲ್ಲಿ ಮಜ್ಜನಮಾಡಿ ಪುನೀತರಾದವರು ವಾಸ್ತವಿಕವಾಗಿ ಧನ್ಯರು.

ಶ್ರೀರಾಮಚಂದ್ರನ ಅರ್ಚನೆಯಲ್ಲಿ ನಿರತನಾದ ಸಾತ್ವಿಕಮೂರ್ತಿ ಪೂಜ್ಯ ಗುರುವರ್ಯರನ್ನು ವಿವಿಧ ವಿರುದ್ಧ ಭಾವಗಳನ್ನು ಹೊಂದಿದವರೂ ಸಹ ದರ್ಶನ ಮಾಡಿ ಅವರ ಆತ್ಮೀಯ ಸಂಭಾಷಣಾ ಪೂರ್ವಕ ವ್ಯವಹಾರಗಳಿಂದ ಪೂಜ್ಯಗುರುವರ್ಯರ ಬಗ್ಗೆ ತಮ್ಮಲ್ಲಿ ಗೌರವಪೂರ್ವಕ ಭಕ್ತಿ ಭಾವವನ್ನು ಮಾತ್ರ ಉಳಿಸಿಕೊಂಡು ಮರಳಿದ ಮತ್ತು ಆ ಭಕ್ತಿಭಾವವನ್ನು ಮುಂದೆಯೂ ಬೆಳೆಸಿಕೊಂಡ ನಿದರ್ಶನಗಳು ಹಲವಾರು. ತಮ್ಮ ಈ ಆಕರ್ಷಕ ವ್ಯಕ್ತಿತ್ವದಿಂದಾಗಿ ಕಮರಿ ಕೊರಡಾಗುತ್ತಿದ್ದ ಗುರುಶಿಷ್ಯ ಸಂಬಂಧವನ್ನು ಚಿಗುರಿ ಕೊನರುವಂತೆ ಮಾಡಿದ ಪ್ರಖ್ಯಾತಿ ಶ್ರೀಗುರುವರ್ಯರದು. ಅರಳಿದ ಹೂಗಳಿಂದ ಬಿರಿದ ಮೊಗ್ಗುಗಳಿಂದ ಕೂಡಿದ ತರುಲತೆಗಳ ಸುಗಂಧ ದೂರದವರೆಗೆ ತಾನಾಗಿ ಹರಡುವಂತೆ ಸಾಮಾಜಿಕ ಹಿತಕಾರ್ಯದಲ್ಲಿ ನಿರಂತರ ನಿರತರಾದ ಪೂಜ್ಯಗುರುವರ್ಯರ ಹಿರಿಮೆಗರಿಮೆಗಳ ಕೀರ್ತಿ ಸರ್ವತ್ರ ಪಸರಿಸಿ ಜನತೆಯನ್ನು ಅವರತ್ತ ಸೆಳೆಯುವಂತೆ ಮಾಡುತ್ತಿತ್ತು. ಇತರ ಮಠಗಳೊಂದಿಗೆ ಅವರು ಹೊಂದಿದ್ದಂತಹ ಸಂಬಂಧ ಬಾಂಧವ್ಯ ಮಧುರವಾದುದು.ಸ್ಮಾರ್ತ ಪೀಠವಲ್ಲದೆ ಮಾಧ್ವ ಮಠದೊಂದಿಗೂ ನಿಖರವಾದ ಭಾವಪೂರ್ಣವಾದ ಸೌಹಾರ್ದವನ್ನು ಹೊಂದಿದ್ದರು.

ಅನಂತ ಕಲ್ಯಾಣ ಪರಿಪೂರ್ಣನಾದ ಪರಮಾತ್ಮನನ್ನು ಭಕ್ತಿಯಿಂದ ಭಜಿಸಿ ತಮ್ಮ ಅಭೀಷ್ಟಗಳನ್ನು ಈಡೇರಿಸಿಕೊಂಡವರ ಕಥೆ ಪುರಾಣಾದಿಗಳಲ್ಲಿ ವಿಪುಲವಾಗಿ ದೊರೆಯುತ್ತದೆ. ಹಾಗೆಯೇ ನಿಜಜೀವನದಲ್ಲಿ ಮೂರ್ತಿತ್ರಯ ಸ್ವರೂಪವಾದ ಸದ್ಗುರುವಿನ ಆರಾಧನೆ ಕಲ್ಪತರುವಿನಂತೆ ಈಪ್ಸಿತಾರ್ಥಾಭಿವರ್ಷಿ. ಸದ್ಗುರುವನ್ನು ಸೇವಿಸಿ ಕೃತಾರ್ಥರಾದವರು ಹಲವರು. ನಮ್ಮ ಗುರುವರೇಣ್ಯರ ಬಹುಮುಖ ಪ್ರತಿಭೆ, ಮಹಿಮಾತಿಶಯ ಹಾಗೂ ಅವರು ಗೈದ ಸಾಮಾಜಿಕ ಹಿತಾವಹಕರ್ಯ ಶ್ಲಾಘನೀಯ ಹಾಗೂ ಐತಿಹಾಸಿಕವಾದುದಾಗಿದೆ. ಸಮಾಜದ ಸರ್ವರೂ ಅವರುಗೈದ ಸಾಧನೆಗೆ ಚಿರಾಋಣಿಯಾಗಲೇಬೇಕು, ಮತ್ತು ಸದಾ ಸರ್ವದಾ ಸ್ಮರಿಸಿ ಪುನೀತರಾಗಬೇಕು ಎಂಬುದು ನನ್ನ ಆಶಯ. ಇಂತಹ ಅವಿಚ್ಛಿನ್ನ ಗುರುಪರಂಪರೆಯು ವಿಚ್ಛಿನ್ನವಾಗಬಾರದೆಂಬ ಸದಭಿಲಾಷೆಯಿಂದ ಅನಾರೋಗ್ಯ ಪರಿಸ್ಥಿತಿಯಲ್ಲೂ ಶಿಷ್ಯರ ಉತ್ಸಾಹವರ್ಧಕರಾಗಿ ಆ ಕಾರ್ಯಕ್ಕೆ ಶುಭವನ್ನು ಶೋಭೆಯನ್ನು ತಂದು,ತೇಜಃಪುಂಜಮಯವಾದ ಪರಂಪರಾಧಿಷ್ಠಿತರನ್ನು ಈ ಸಮಾಜದ ಶ್ರೇಯೋಭಿವೃದ್ಧಿಗೆ ಕರುಣಿಸಿರುವುದು ಬ್ರಹ್ಮೀಭೂತ ಶ್ರೀಗುರುವರ್ಯರ ದಿವ್ಯಜ್ಞಾನ ದೃಷ್ಠಿಯ ದ್ಯೋತಕವಾಗಿದೆ. ಜ್ಞಾನವೃದ್ಧರೂ, ಪರೇಂಗಿತ ಜ್ಞಾನಿಗಳೂ, ಮಹಿಮಾನ್ವಿತರೂ, ತಪಸ್ವಿಗಳೂ, ವ್ಯಾವಹಾರಿಕ ಚತುರರೂ ಆಗಿದ್ದ ಬ್ರಹ್ಮೀಭೂತ ಶ್ರೀರಾಘವೇಂದ್ರಭಾರತೀಸ್ವಾಮಿಗಳನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅಸದೃಶವಾದ ಮಹಿಮಾನ್ವಿತರಾದ ಪರಮಪೂಜ್ಯ ಶ್ರೀಗಳು, ಶ್ರೀಸಂಸ್ಥಾನದ ಯಾವತ್ತೂ ವ್ಯವಹಾರಗಳನ್ನು ಸುಗಮವಾಗಿ ಆದರ್ಶಪ್ರಾಯವಾಗಿ ನಡೆಸಿಕೊಂಡು ಬಂದಿರುವರು.

“ಧರ್ಮೋಮೂಲಂ ಮನುಷ್ಯಾಣಾಂ ಸಚಾಚಾರ್ಯಾವಲಂಬನಃ’’  ‘ಆಚಾರ್ಯವಾನ್ ಪುರುಷೋ ವೇದ |’ ಎಂಬಂತೆ ಮಾನವ ಸರ್ವತೋಮುಖ ಅಭಿವೃದ್ಧಿಗೆ ಧರ್ಮವೇ ಮೂಲಕಾರಣ ಆ ಧರ್ಮವು ಆಚಾರ್ಯನ ಮೂಲಕ ತಿಳಿಯಲ್ಪಡಬೇಕಾದುದು ಆದ್ದರಿಂದ ಒಳ್ಳೆಯ ಆಚಾರ್ಯನನ್ನು ಪಡೆದಿರುವ ವ್ಯಕ್ತಿ ಸಮಾಜ ಮಾತ್ರ ನೈಜಧರ್ಮವನ್ನು ಸರಿಯಾಗಿ ಅರಿಯಬಲ್ಲದು. ಇಂತಹ ಆದರ್ಶ ಮೂರ್ತಿಗಳಾಗಿದ್ದ ಧರ್ಮಾಚಾರ್ಯರನ್ನು ಪಡೆದ ನಾವುಗಳೇ ಧನ್ಯರು.

~*~

Facebook Comments