ಶ್ರೀ ರಘೂತ್ತಮ ಮಠ ಕೆಕ್ಕಾರು : 15.08.2014, ಶುಕ್ರವಾರ

ಡಾ|| ಪಾದೇಕಲ್ಲು ವಿಷ್ಣು ಭಟ್ರವರು ಬರೆದ ಶ್ರೀಕುಮಾರಿಲಭಟ್ಟರು ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶಿವರಾಜ್ ಸುಬ್ರಾಯ ಭಟ್ಟ, ಕೋಣಾರೆ ಹಾಗೂ ನಾಗರಾಜ ಗಜಾನನ ಭಟ್ಟ, ಭಡ್ತಿ ಪ್ರಾಯೋಜಕತ್ವ ವಹಿಸಿದ್ದರು. ಶ್ರೀಗಳವರ ಲೇಖನಾಮೃತದ ಕಿರು ಹೊತ್ತಗೆ ಮಡಿಲ ಮಮತೆಗೆ ಮುಡಿ ಸಮರ್ಪಿತವನ್ನು ಉ.ಕ. ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ಬಿಡುಗಡೆಗೊಳಿಸಿದರು. ಎಸ್. ಜಿ. ಭಟ್ಟ, ಕಬ್ಬಿನಗದ್ದೆ ಲೇಖಕರನ್ನು ಪರಿಚಯಿಸಿದರು. ರವೀಂದ್ರ ಭಟ್ಟ, ಸೂರಿ ಕೃತಿ ಪರಿಚಯಿಸಿ ನಿರೂಪಿಸಿದರು. ಸರ್ವಸೇವೆಯನ್ನು ಮಂಗಳೂರು ಮಂಡಳದ ಮಂಗಳೂರು ದಕ್ಷಿಣ, ಉತ್ತರ, ಮಧ್ಯ ಹಾಗೂ ಉಡುಪಿ ವಲಯಗಳು ನೆರವೇರಿಸಿದವು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.

ನಾಡವರ ಸಮಾಜದ ಒಳಿತಿಗಾಗಿ ಚಾತುರ್ಮಾಸ ಸಮಿತಿಯಿಂದ ರಾಮತಾರಕ ಹವನವನ್ನು ನಡೆಸಲಾಯಿತು. ಸಮಾಜದವರು ಶ್ರೀ ಗುರುಪಾದುಕಾ ಪೂಜೆ ನೆರವೇರಿಸಿ ಅನುಗ್ರಹ ಪಡೆದರು.

ಶ್ರೀ ಶ್ರೀಗಳ ಪ್ರವಚನ:

’ನಾವು ನಮ್ಮತನವನ್ನ ಉಳಿಸಿಕೊಳ್ಳವುದೇ ನಿಜವಾದ ಸ್ವಾತಂತ್ರ್ಯ’

ಆತ್ಮಕ್ಕೆ ಶರೀರವೇ ಬಂಧನ. ನಮ್ಮ ಇಂದ್ರಿಯಗಳು ಆತ್ಮವನ್ನು ಬಂಧನದಲ್ಲಿ ಇಟ್ಟಿವೆ. ನಮ್ಮೊಳಗಿನ ಚೈತನ್ಯಕ್ಕೆ-ಜೀವಕ್ಕೆ-ಆತ್ಮಕ್ಕೆ ಸ್ವಾತಂತ್ರ್ಯ ಲಭಿಸುವ ಸ್ಥಾನಕ್ಕೆ ಬಂದಿದ್ದೀರಿ. ಆತ್ಮಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅದೇ ನಿಜವಾದ ಸ್ವಾತಂತ್ರ್ಯ ಎಂದು ರಾಘವೇಶ್ವರ ಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ೩೫ನೇ ದಿನದ ಧರ್ಮಸಭೆಯನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.

ಗುರು ಚಿತ್ತಾಪಹಾರಕನೂ ಹೌದು ಚಿತ್ತ-ತಾಪಹಾರಕನೂ ಹೌದು. ಆತ್ಮದ ಧ್ವನಿ ಕೇಳುವುದು ಕೇಳುವುದು ಗುರುವಿಗೆ ಮಾತ್ರ. ಗುರುವಿಗೆ ಜ್ಞಾನ ಚಕ್ಷುಗಳಿವೆ. ಸಂತರ ಜೀವನ ಅದು ತೆಂಗಿನಕಾಯಿಯಂತೆ. ಹೊರಗೆ ನಿಸ್ಸಾರ. ಒಳಗೆ ಪರಿಪೂರ್ಣ ಆನಂದ. ಇರಬೇಕು-ಇದ್ದೂ ಇಲ್ಲದಂತಿರಬೇಕು. ಇದು ಕೊಬ್ಬರಿ ನಮಗೆ ನೀಡುವ ಸಂದೇಶ ಎಂದು ಅವರು ನುಡಿದರು.

ಬ್ರಿಟಿಷರು ದೇಶದಿಂದ ಹೋದರೂ ನಮ್ಮ ಮನಸ್ಸಿನಿಂದ ಹೋಗಿಲ್ಲ. ಸ್ವಾತಂತ್ರ್ಯಾ ನಂತರ ನಮ್ಮ ಮನಸ್ಸನ್ನು ಹೆಚ್ಚು ಆವರಿಸಿದರು. ಹೊಸ ಗಾಳಿಯಲ್ಲಿ, ವಿಷಗಾಳಿಯಲ್ಲಿ ನಮ್ಮತನವನ್ನು ಮರೆತೆವು. ಪರಿಣಾಮ ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ನಮಗೆ ಅನುಭವಿಸಲು ಇನ್ನೂ ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಎನ್ನುವುದು ಈ ದೇಶದಲ್ಲಿ ಇರುವುದು ನಮ್ಮ ಮಠಗಳಲ್ಲಿ ಮಾತ್ರ. ಇಲ್ಲಿನ ಬಟ್ಟೆ, ವಾತಾವರಣ, ಆಹಾರೋತ್ಸವ, ಕುಳಿತ ಆಸನ ಎಲ್ಲವುಗಳಲ್ಲಿ ನಮ್ಮತನವಿದೆ. ನಾವು ನಮ್ಮತನವನ್ನ ಉಳಿಸಿಕೊಳ್ಳವುದೇ ನಿಜವಾದ ಸ್ವಾತಂತ್ರ್ಯ. ಎಲ್ಲೆಡೆ ಭಾರತೀಯತೆ ಇದ್ದಾಗ ದೇಶಕ್ಕೆ ಸ್ವಾತಂತ್ರ್ಯ – ನಮ್ಮನ್ನು ನಾವು ಅರಿತಾಗ ಆತ್ಮಕ್ಕೆ ಸ್ವಾತಂತ್ರ್ಯ ಎಂದರು.

ಗುರುಪೀಠ ಎನ್ನುವುದು ಮಿದುಳಾದರೆ ನಾಡವರು ಅದರ ಭುಜಗಳು. ನಾಡಿನ ಪ್ರಮುಖ ಅಂಗ ನಾಡವರು. ’ಬುದ್ಧಿ ಬಲ’ ’ಭುಜ ಬಲ’ ಎರಡನ್ನೂ ಹೊಂದಿರುವ ಸಮಾಜ ನಾಡವರ ಸಮಾಜ. ಸಮಾಜದ ಸರ್ವರಿಗೂ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದರು.

Facebook Comments