ಶ್ರೀ ರಘೂತ್ತಮ ಮಠ ಕೆಕ್ಕಾರು : 30.07.2014,ಬುಧವಾರ

ಇಂದು¸ ಸಾಗರ ಮಂಡಲದ ಉಳವಿ, ಕ್ಯಾಸನೂರು, ಕೆಳದಿ, ಇಕ್ಕೇರಿ ವಲಯಗಳ ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಯಿತು. ಶ್ರೀ ಮಠದ ದಂತ ಸಿಂಹಾಸನ ನಿರ್ಮಿಸಿದ ಅಮರ ಶಿಲ್ಪಿ ಹುಟ್ಟಿದ ಸಮಾಜ ಗುಡಿಗಾರ ಸಮಾಜದ ಬಾಂಧವರು ಶ್ರೀಗಳಿಂದ ಆಶೀರ್ವಾದ ಪಡೆದರು.

ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 19 ನೇ ಕೃತಿಯಾದ ‘ಅತ್ರಿ ಮಹರ್ಷಿ’, ಬಾಲಕೃಷ್ಣ ಭಟ್ಟ ಬಾಳೆಗದ್ದೆಯವರು ಬರೆದ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕರಾದ ಸಾಲ್ಕೋಡಿನ ಎನ್.ಎಸ್.ಹೆಗಡೆ ದಂಪತಿಗಳು ಹಾಜರಿದ್ದರು. ಶ್ರೀ ಭಾರತೀ ಪ್ರಕಾಶನ ಹೊರತಂದ “ಆದಿತ್ಯ ಹೃದಯಂ” ಪುಸ್ತಕವನ್ನು ವೇದಮೂರ್ತಿ ಕೃಷ್ಣ ಭಟ್ಟ ಅಮ್ಮನವರಮನೆ ನವಿಲಗೋಣ ಬಿಡುಗಡೆಗೊಳಿಸಿದರು.

ದಿವಂಗತ ಗಣೇಶ ಗಣಪತಿ ಭಟ್ಟ ಚಿತ್ರಗಿ ಅವರ ಮಕ್ಕಳು ವಿವಿಧ ಯೋಜನೆಗಾಗಿ ಗುರು ಸನ್ನಿಧಿಗೆ 22 ಲಕ್ಷ ರೂಪಾಯಿ ಕಾಣಿಕೆ ನೀಡಿದರು.

ಶ್ರೀ ಶ್ರೀಗಳ ಪ್ರವಚನ:
ಎಳವೆ ಕ್ರೀಡೆಯಲ್ಲಿ ಹೋಯಿತು; ಯೌವನ ಭೋಗ ಹಾಗೂ ವಿಷಯ ಸುಖದಲ್ಲಿ ಹೋಯಿತು; ಮುಪ್ಪು ಜೀವನದ ಚಿಂತೆಯಲ್ಲಿ ಹೋಯಿತು. ಮೃತ್ಯು ಬಂದಾಗ ಕೈಯಲ್ಲಿ ಏನೂ ಇಲ್ಲ. ಬರೀ ಶೂನ್ಯ. ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲ, ಹುಟ್ಟಿದ್ದು ಹೌದಾದರೆ ಸಾವೂ ಅಷ್ಟೇ ಸತ್ಯ. ಹುಟ್ಟಿಲ್ಲದ ಸಾವಿಲ್ಲದ ಆ ಗೋವಿಂದನು ಮಾತ್ರ ಅವಿನಾಶಿ. ಆ ದಾರಿ ಒಬ್ಬನೇ ಹೋಗುವ ದಾರಿ ಆಗಿರುತ್ತದೆ. ಅದೇ ಏಕಾಂತ. ಗೋವಿಂದನ ಸ್ಮರಣೆಯಿಂದ ಮಾತ್ರ ಅದು ಸಾಧ್ಯ ಎಂದು ಶ್ರೀಗಳವರು ‘ಭಜಗೋವಿಂದಂ’ ಪ್ರವಚನದಲ್ಲಿ ತಿಳಿಸಿದರು

ನಾವು ಯಾರಿಗೆ ಸಲ್ಲಬೇಕೋ ಅವರಿಗೇ ಸಲ್ಲಬೇಕು. ನಮಗೂ ದೇವರಿಗೂ ಸೇತು ‘ಭಜಗೋವಿಂದಂ’ ಎಂದು ಭಾವಿಸಿದರೆ ಸಾಕು, ಭಾವವೇ ಸೇತುವೆಯಾಗುತ್ತದೆ. ಮಾಯೆಯ ಕೋಟೆಯ ಆಚೆ ಅರಿವಿನ, ಬೆಳಕಿನ ರಾಜ್ಯವಿದೆ. ಆದರೆ ನಾವೆಲ್ಲಾ ಮಾಯೆಯ ಕೋಟೆಯೋಳಗೆ ತೊಳಲಾಡುತ್ತಿದ್ದೇವೆ. ಅದನ್ನು ದಾಟಿ ಶಾಶ್ವತ ಆನಂದವನ್ನು ಕರುಣಿಸುವ ಆ ರಾಮನಿಗೆ ಶರಣು ಹೋಗಲು ಕರೆಯಿತ್ತರು.
~
ಯಾಗಶಾಲೆಃ
ಚಾತುರ್ಮಾಸ್ಯ ಸಮಿತಿಯವರು ಗುಡಿಗಾರು ಸಮಾಜದ ಉನ್ನತಿಗಾಗಿ ರಾಮತಾರಕ ಹವನ ನೆರವೇರಿಸಿದರು.
~

Facebook Comments