ಕೆಕ್ಕಾರು ೩೧ :
ಜೀವನ ಆನಂದಕ್ಕೆ ಆಹಾರ ಕಾರಣವಾಗಬೇಕು

ವ್ಯಕ್ತಿಯ ಬದುಕಿನ ಆನಂದಕ್ಕೆ ಆಹಾರ ಕಾರಣವಾಗಬೇಕು ಆದರೆ ಇಂದು ಅದು ಬದುಕಿನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ಜಯ ಸಂವತ್ಸರದ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಕೆಕ್ಕಾರು ರಘೂತ್ತಮ ಮಠದಲ್ಲಿ ಏರ್ಪಡಿಸಿದ್ದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಾ ಆಹಾರ ಅದ್ವೈತ ಎಂಬ ಕಲ್ಪನೆ ಇಲ್ಲವಾಗಿದೆ, ಯಾವ ಸ್ಥಿತಿ ಮತ್ತು ಮನಸ್ಸಿನಲ್ಲಿ ಆಹಾರ ತಯಾರಿಸಲ್ಪಡುತ್ತದೆಯೋ ಮತ್ತು ನೀಡಲ್ಪಡುತ್ತದೆಯೋ ಅದೇ ಮನೋಭಾವ ಸ್ವೀಕರಿಸುವವರಲ್ಲಿಯೂ ಬೆಳೆಯುತ್ತದೆ; ಹಾಗಾಗಿ ಆಹಾರ ಸ್ವಭಾವಕ್ಕೂ ಕಾರಣ ಎಂದ ಅವರು, ಆಹಾರ ಹಿತವೂ ಮತ್ತು ಪ್ರಿಯವೂ ಆಗಿರಬೇಕು ಆದರೆ ವಿಷ ತುಂಬಿದ ಆಹಾರ ಸ್ವೀಕರಿಸುತ್ತಿರುವ ನಾವು ವಿಷಯುಕ್ತವಾದ ಭಾವನೆಯಿಂದ ಸಮಾಜವನ್ನು ನೋಡುತ್ತಿದ್ದೇವೆ ಎಂದರು. ಅಮ್ಮ ಮತ್ತು ಅನ್ನ ಎಂದಿಗೂ ಪೂರಕವಾದ ವಿಷಯ. ಅಮ್ಮ ಎಂದರೆ ಅದು ತ್ಯಾಗ. ಅದೇ ರೀತಿ ಅನ್ನವೂ ಪರರಿಗೆ ಕೊಟ್ಟು ಅರ್ಥಾತ್ ತ್ಯಾಗಮಾಡಿ ಪಡೆದಾಗ ಮಾತ್ರ ಪುಣ್ಯಲಭಿಸುತ್ತದೆ ಎಂದರು. ಮಾತೃ ಆದವಳಲ್ಲಿ ಮಾತೃತ್ವ ತುಂಬಿರಬೇಕು. ಅಂತಹ ಮಾತೃ ಸಮಾವೇಶ ಮರೆಯಾಗುತ್ತಿರುವ ಕಾರಣ ಸಮಾಜದಲ್ಲಿ ವೃದ್ಧಾಶ್ರಮ ಕಂಡು ಬರುತ್ತಿದೆ. ನಿಜ ಪ್ರೀತಿಯ ಮಾತೃತ್ವ ದೊರೆತರೆ, ನಿಜ ಪ್ರೀತಿಯ ಮಕ್ಕಳನ್ನು ನಾವು ಕಾಣಬಹುದು ಎಂದರು. ಇದೇ ಸಂದರ್ಭ ಕವಿ ಗಜಾನನ ಶರ್ಮ ರಚಿಸಿದ ಮಾತೃ ಮತ್ತು ಆಹಾರ ಕುರಿತಾದ ಗಾಯನವನ್ನು ದೀಪಿಕಾ ಮತ್ತು ತಂಡ ಹಾಡಿದರು. ಅಲ್ಲದೆ ಭಾರತೀ ಪ್ರಕಾಶನ ಪ್ರಕಟಿತ ಸಾಗರದ ವಿದ್ವಾನ್ ನಾಗೇಶ ಭಟ್ ವಿರಚಿತ ‘ವರಾಹಮಿಹಿರ’ ಪುಸ್ತಕ ಹಾಗೂ ಶ್ರೀ ರಾಘವೇಶ್ವರ ಶ್ರೀಗಳ ‘ಜರೆಯದಿರು ಜರೆಯ ’ ಎಂಬ ಲೇಖನಾಮೃತವನ್ನು ಲೋಕಾರ್ಪಣೆ ಗೊಳಿಸಲಾಯಿತು. ಕೆಕ್ಕಾರಿನ ಭಾಸ್ಕರ ಮಾಸ್ತರ್ ಪ್ರಾಯೋಜಕತ್ವ ವಹಿಸಿದ್ದರು. ಹವ್ಯಕ ಮಾತೃ ಪ್ರಧಾನ ಈಶ್ವರೀ ಬೇರ್ಕಡವು ಪ್ರಾಸ್ತಾವಿಕ ಮಾತನಾಡಿದರು.

ಕುಂಕುಮ ವೇಷಭೂಷಣವಲ್ಲ ಅದು ಸಂಸ್ಕಾರ ಭೂಷಣ

ಮಾತೆ ಧರಿಸುವ ಕುಂಕುಮ ಅದು ವೇಷ ಭೂಷಣವಲ್ಲ ಅದು ಸಂಸ್ಕಾರ ಭೂಷಣ ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲವ್ಯಕ್ತಿ ಶಂಕರಶಾಸ್ತ್ರಿ ಕೋಟೆಗುಡ್ಡ ಹೇಳಿದರು. ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಜಯ ಸಂವತ್ಸರದ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಕೆಕ್ಕಾರು ರಘೂತ್ತಮ ಮಠದ ಚಾತುರ್ಮಾಸ್ಯ ವೇದಿಕೆಯಲ್ಲಿ ನಡೆದ ಮಾತೃ ಸಮಾವೇಶದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಭಾರತೀಯ ನಾರಿ ಜಗನ್ಮಾತೆ ಎಂದು ಗೌರವ ಪಡೆದಿದ್ದಾಳೆ. ಇದರ ಹಿಂದೆ ಆಕೆಯ ದೇವತಾ ಸ್ವರೂಪವಾದ ಭೂಷಣ ಕಾರಣ. ಇದು ಕೇವಲ ದೈಹಿಕವಾದ ವಿಷಯವಲ್ಲ, ಬದಲಾಗಿ ಅಂತರ್ಗತವಾದ ಶಕ್ತಿ ಎಂದರು. ಹವ್ಯಕ ಸಂಸ್ಕೃತಿಯ ಆಚಾರ ವಿಚಾರದ ಹಿಂದೆ ಜೀವನ ವಿಜ್ಞಾನವಿದೆ, ಅದು ವೇದ ಶಾಸ್ತ್ರೋಕ ಮಾರ್ಗವಾಗಿದೆ. ಇಂದ್ರಿಯಾತೀತ ಶಕ್ತಿಯನ್ನು ಆಚರಣೆ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳುವ ವಿಚಾರವೇ ನಿಜವಾದ ಸಂಪ್ರದಾಯ. ವರ್ತಮಾನದ ಸ್ತ್ರೀಯ ಮಾತೃತ್ವದ ಪತ್ರೀಕವಾಗಿರುವ ಕುಂಕುಮ ಇತ್ಯಾದಿ ಭೂಷಣಗಳು ಆಚರಣೆಯಲ್ಲಿ ಮರೆಯಾಗುತ್ತಿರುವುದರಿಂದಲೇ ಹೆಣ್ಣನ್ನು ಗಮನಿಸುವ ದೃಷ್ಟಿಕೋನ ಕೂಡ ಬದಲಾಗಿದೆ. ಹೆಣ್ಣನ್ನು ಪೂಜ್ಯ ಭಾವದಿಂದ ಕಾಣಲು ಸಂಪ್ರದಾಯಿಕ ಭೂಷಣಗಳು ಅನಿವಾರ್‍ಯ ಮತ್ತು ಶೋಭೆ ಎಂದರು. ವಿಷಮುಕ್ತ ಆಹಾರ ಕುರಿತು ಸಾವಯವ ಕೃಷಿ ಸಾಧಕಿ ಅಮೃತಾ ಸತೀಶ್ ಕಿಲಾರ ಮಾತನಾಡಿ, ಇಂದು ನಮ್ಮ ಸಬೂಬುಗಳಿಂದ ನಮ್ಮ ಆಹಾರ ನಾವು ತಯಾರಿಸಿಕೊಳ್ಳುವುದರಿಂದ ದೂರವಾಗಿ ನಿತ್ಯ ವಿಷವನ್ನು ತಿನ್ನುತ್ತಿದ್ದೇವೆ. ಇದರ ಪರಿಣಾಮ ಚಿಕಿತ್ಸೆ ಇಲ್ಲದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ ಎಂದರು. ಹವ್ಯಕ ಮಹಾಮಂಡಲದ ಮಾತೃ ಪ್ರಧಾನ ಈಶ್ವರಿಬೇರ್ಕಾಡವು, ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ. ವಿ. ಕೃಷ್ಣಮೂರ್ತಿ, ಪ್ರಸಾರ ಪ್ರಧಾನ ರಮೇಶ್‌ಹೆಗಡೆ ಗುಂಡೂಮನೆ, ಆರೋಗ್ಯ ಪ್ರಧಾನ ಸತೀಶ್ ಕಿಲಾರ, ಸುಕ್ಷೇಮ ಕೆ. ಟಿ. ವೆಂಕಟೇಶ್ ಮತ್ತಿತರರು ಇದ್ದರು. ಮಾತೆಯಾದ ಯಮುನಾಭಾಗವತ್ ಸ್ವಾಗತಿಸಿದರು. ಶುಭಾ ಹೆಬ್ಬಾರ ಮತ್ತು ಎಸ್. ಜಿ. ಭಟ್ ಕಬ್ಬಿನಗದ್ದೆ ನಿರೂಪಿಸಿದರು. ಇದಕ್ಕೂ ಮುನ್ನ ತೊಟ್ಟಿಲಿನಲ್ಲಿರುವ ಪುಟ್ಟ ಕಂದಮ್ಮನಿಗೆ ಸಂಪ್ರದಾಯಿಕ ಆಹಾರ ನೀಡುವ ಮೂಲಕ ಕಾರ್ಯಕ್ರಮವನ್ನು ಮಾತೆಯರು ಉದ್ಘಾಟಿಸಿದರು.

Facebook Comments