ನಮ್ಮ ನಡುವಿನ ಅತ್ಯಪರೂಪದ ಸುಗಮ ಸಂಗೀತ ಗಾಯಕ, ರಂಗ ಸಂಗೀತ ನಿರ್ದೇಶಕ, ಸಾಂಸ್ಕೃತಿಕ ಪರಿಚಾರಕ, ಸರಳ, ಸಭ್ಯಜೀವಿ ಗರ್ತಿಕೆರೆ ರಾಘಣ್ಣನ ಕುರಿತು ಭಾರತೀ ಪ್ರಕಾಶನವು ಪ್ರಕಾಶಿಸಿದ ರಾಮಕಥಾ ಕವಿಗಳಾದ ಡಾ.ಗಜಾನನ ಶರ್ಮಾರು ಬರೆದ ಕೃತಿ ಇದೇ ನವೆಂಬರ್ ಎಂಟರಂದು ರಾಜಾಜಿನಗರದ ಪ್ರಶಾಂತಿ ಆಯುರ್ವೇದಿಕ್ ಕ್ಲಿನಿಕ್ಕಿನ ಮಹಡಿಯಲ್ಲಿರುವ ಚರಕ ಆಡಿಟೋರಿಯಮ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಮಾರಂಭದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಯತಿಗಳ ದಿವ್ಯ ಉಪಸ್ಥಿತಿ ಇರಲಿದೆ. ಕನ್ನಡದ ಖ್ಯಾತ ಬರಹಗಾರರಾದ ಜೋಗಿ, ಕವಿಗಳಾದ ಬಿ.ಆರ್.ಲಕ್ಷ್ಮಣ್ ರಾವ್, ಡಾ ಚಿಂತಾಮಣಿ ಕೊಡ್ಲೆಕೆರೆ, ಹಿರಿಯ ಪತ್ರಕರ್ತ ಕೆ.ಎಸ.ಅಚ್ಯುತನ್ ಅತಿಥಿಗಳಾಗಿರುತ್ತಾರೆ.
ಅಂದು ಬೆಳಿಗ್ಗೆ ಹನ್ನೊಂದೂವರೆಗೆ ಸಂಪನ್ನಗೊಳ್ಳುವ ಈ ಸಮಾರಂಭದಲ್ಲಿ ಗರ್ತಿಕೆರೆ ರಾಘಣ್ಣನವರು ತಮ್ಮ ಎಂಬತ್ತು ತುಂಬಿದ ಈ ವಯಸ್ಸಿನಲ್ಲೂ ಕೆಲವು ಗೀತೆಗಳನ್ನು ಹಾಡುವ ಮೂಲಕ ತಮ್ಮ ಏಳು ದಶಕಗಳ ಸಂಗೀತ ಸಾಧನೆಯ ಒಂದು ಪುಟ್ಟ ಝಲಕ್ ನಮ್ಮೆದುರು ಬಿಚ್ಚಿಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಘಣ್ಣ ಹಾಡಿದ ರಾಮಗೀತಗುಚ್ಚ “ಎಂದಾದರೊಂದು ದಿನ” ಕೂಡ ಲೋಕಾರ್ಪಣೆಗೊಳ್ಳಲಿದೆ.

ಲೇಖಕರ ಮಾತು:

ವಿದ್ಯುತ್ ಇಲ್ಲದ ಆ ರಾತ್ರಿ, ಮಲೆನಾಡ ಮಡಿಲಿನ ಬೆಟ್ಟದಡಿಯ ಆ ಪುಟ್ಟ ಗ್ರಾಮ ಕಾಳಮಂಜಿಯ ಒಂಟಿ ಮನೆಯಲ್ಲಿ , ಸೀಮೆಯೆಣ್ಣೆ ದೀಪದ ನೆರಳು ಬೆಳಕಿನ ಏರಿಳಿತದ ನಡುವೆ, ಹಾರ್ಮೋನಿಯಮ್ ಹಿಡಿದು ಕುಳಿತಿದ್ದ ರಾಘಣ್ಣ ಒಂದಾದಮೇಲೊಂದು ಹಾಡು ಹೇಳುತ್ತಾ ಹೋಗುತ್ತಿದ್ದರು. ತಬಲ ನುಡಿಸುತ್ತಿದ್ದ ಶ್ರೀಕಾಂತ ಕಾಳಮಂಜಿಯನ್ನು ಬಿಟ್ಟರೆ, ನಾವು ದಂಪತಿಗಳು, ದೇವೇಂದ್ರಣ್ಣ ಬೆಳೆಯೂರು, ಮತ್ತು ಶ್ರೀಕಾಂತನ ಕುಟುಂಬವಷ್ಟೇ ಕೇಳುಗರು. ಎಪ್ಪತ್ತೈದರ ಹರೆಯದ ರಾಘಣ್ಣ, ಚಿರಯುವಕನಂತೆ ದೇಶಕಾಲಗಳನ್ನು ಮರೆತು ಸಂಗೀತದ ರಸಸಾಗರದಲ್ಲಿ ಮುಳುಗಿ, ನಮ್ಮನ್ನೂ ತೇಲಿಸುತ್ತಾ ಸಾಗಿದ್ದರು. ಅದೆಷ್ಟು ಕವಿಗಳು ಬಂದು ಹೋದರೋ, ಅದೆಷ್ಟು ರಾಗಗಳು ಕುಣಿದು ಹೋದವೋ……ಒಬ್ಬರಿಗೂ ಅರಿವಿಲ್ಲ. ಭಾವಗೀತೆ, ಭಕ್ತಿಗೀತೆ, ಜಾನಪದ, ಶಿಶುಗೀತೆ……ಹೀಗೆ ಗೀತವೈವಿಧ್ಯ. ರಾಘಣ್ಣನ ವಿಶೇಷತೆ ಇರುವುದೇ ಅಲ್ಲಿ. ಕೇಳುವವರ ಸಂಖ್ಯೆಯಾಗಲೀ, ಅಲಂಕೃತ ಆವರಣವಾಗಲೀ ಆತನಿಗೆ ಮುಖ್ಯವಲ್ಲ. ಆಸ್ವಾದಿಸುವವರು ಒಬ್ಬರೇ ಇದ್ದರೂ ಆತ ಸಾವಿರ ಸಂಖ್ಯೆಯ ಸಹೃದಯರ ನಡುವೆ ಹಾಡುವಷ್ಟೇ ತನ್ಮಯತೆಯಿಂದ ಸಾವಿರ ಹಾಡು ಹಾಡಬಲ್ಲ.

ಅಂದು, ಪುಣ್ಯಕ್ಕೆ ನಾವು ಊಟ ಮಾಡಿ ಕುಳಿತುಕೊಂಡಿದ್ದೆವು. ಪ್ರಾಯಶಃ ನಮ್ಮ ಬೈಠಕ್ ಮುಗಿದಾಗ ಮೂರೋ, ಮೂರೂವರೆಯೋ ಆಗಿತ್ತು. ಮಲಗುವ ಮುನ್ನ ಕಡೆಯ ಕವಳ ಹಾಕುತ್ತಾ ಕುಳಿತ ದೇವೇಂದ್ರಣ್ಣ ತನ್ನ ಮನದಾಳದ ಮಾತಿಗಿಳಿದಿದ್ದ. ನನಗೆ,ನನ್ನ ಶ್ರೀಮತಿಗೆ ಹಾಗೂ ಶ್ರೀಕಾಂತನಿಗೆ, ದೇವೇಂದ್ರಣ್ಣನ ಮಾತುಗಳೆಂದರೆ ರಾಘಣ್ಣನ ಹಾಡಿನಷ್ಟೇ ಪ್ರೀತಿ. ಆತ ರಾಘಣ್ಣನ ಕುರಿತು ತನ್ನ ವಿಶ್ಲೇಷಣೆ ಆರಂಭಿಸಿದ್ದ. “ನೋಡು, ರಾಘಣ್ಣನಂತವರ ಬದುಕಿನ ಕತೆಯೇ ಅವರು ಬಾಳಿದ ಪ್ರದೇಶದ ಇತಿಹಾಸ. ಅದರಲ್ಲೂ ಸಮುದಾಯದೊಂದಿಗೆ ಬೆರೆತು ಬದುಕಿದ ರಾಘಣ್ಣನಂತವರ ಆತ್ಮಕಥನ ಆ ಕಾಲಘಟ್ಟದ ಆ ಪ್ರದೇಶದ ಚರಿತ್ರೆ.ಇತಿಹಾಸವೆಂದರೆ ರಾಜಮಹಾರಾಜರ ಕತೆ ಅಷ್ಟೇ ಅಲ್ಲ.ಇಂತಹವರ ಜೀವನ ಕಥನವೇ ನೈಜ ಚರಿತ್ರೆ” ಆತ ಅಷ್ಟು ಹೇಳುತ್ತಿದ್ದಂತೆ,ನಾಗರತ್ನ ನನ್ನ ಕಡೆ ತಿರುಗಿ,”ರಾಘಣ್ಣನ ಬದುಕಿನ ಕತೆ ಬರೆದ್ರೆ ಚನ್ನಾಗಿರ್ತು,ಅಲ್ದಾ?” ಎಂದಳು. ಆಕೆ ಹಾಗೆ ಹೇಳುವುದರ ಒಳದ್ವನಿ ನನಗೆ ಅರ್ಥವಾದರೂ ಅರ್ಥವಾಗದಂತೆ ಸುಮ್ಮನಿದ್ದೆ. ಅದಕ್ಕೆ ದೇವೇಂದ್ರಣ್ಣ , “ಯಾರಾದ್ರೂ ಬರೆದ್ರೆ ಸರಿಯಾಗ್ತಿಲ್ಲೆ. ಶರ್ಮನಂತೋರು ಬರೆಯಕ್ಕು’ ಅಂತ ನನ್ನ ಕಡೆ ಕೈತೋರಿಸಿಬಿಟ್ಟ. ನಾನು ಆ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು, “ಯಾರಾದ್ರೂ ಬರ್ದಿರಬಹುದು, ಇಲ್ಲಾ ಬರೀತಿರಬಹುದು. ಬೆಳಿಗ್ಗೆ ರಾಘಣ್ಣನನ್ನು ಕೇಳೋಣ” ಅಂದೆ. ಅಲ್ಲ್ಯೇ ಮಲಗಿದ್ದ ರಾಘಣ್ಣನಿಗೆ ನಿದ್ದೆ ಬಂದಿದೆಯೆಂದು ಭಾವಿಸಿ ನಾವು ಮಾತನಾಡುತ್ತಿದ್ದೆವು. ಇದೀಗ ರಾಘಣ್ಣ ಮಲಗಿದ್ದಲ್ಲಿಂದ ಮೇಲೆದ್ದು, “ಅದೊಂದು ದೊಡ್ಡ ಕತೆ” ಎನ್ನುತ್ತಾ ಇಬ್ಬರು ಮಹನೀಯರು ತಮ್ಮ ಕುರಿತು ಪುಸ್ತಕ ಬರೆಯುತ್ತೇವೆಂದು ಹೇಳಿ ಕೈಬಿಟ್ಟುದನ್ನು ಹೇಳಿದರು. ನಾವು ತುಸು ಹೊತ್ತು ಅದೂ,ಇದೂ ಮಾತನಾಡಿ ಮಲಗಿದೆವು. ಯಾಕೋ ಅಂದು ಮಲಗಿದ ಮೇಲೆ ನನಗೆ, ರಾಘಣ್ಣನ ಕುರಿತು ಪುಸ್ತಕವೊಂದನ್ನು ಬರೆಯಬೇಕೆಂಬ ಇರಾದೆ ಗಟ್ಟಿಯಾಯಿತು.

ಮಾರನೆಯ ದಿನ ನಾನು ರಾಘಣ್ಣನಿಗೆ ನಿಮ್ಮ ಜೀವನದ ಕುರಿತು ಪುಸ್ತಕ ಬರೆಯುತ್ತೇನೆಂದಾಗ ರಾಘಣ್ಣನ ಕಣ್ಣಂಚಿನಲ್ಲಿ ಕಂಬನಿ ತುಳುಕಿದ ನೆನಪು ನನ್ನೊಳಗಿನ್ನೂ ಹಸಿರಾಗಿದೆ. ಎಂದೂ ಯಾರಲ್ಲಿಯೂ ಏನನ್ನೂ ಬೇಡದ ಈ ಗಾನಯೋಗಿಗೆ ತನ್ನ ಕುರಿತು ಹೇಳಿಕೊಳ್ಳಲೂ ಸಂಕೋಚ. ಹಲವು ಸಂದರ್ಭದಲ್ಲಿ ಅವರನ್ನು ಎಡತಾಕಿ ಎಷ್ಟೋ ವಿವರಗಳನ್ನು ಸಂಗ್ರಹಿಸಿದೆ. ಮತ್ತೆ ಮತ್ತೆ ಮನೆಗೆ ಆಹ್ವಾನಿಸಿ, ಅದೇ ಅದೇ ವಿಷಯಗಳನ್ನು ಕೇಳಿದೆ. ಅವರ ಶ್ರೀಮತಿಯವರನ್ನೂ ವಿವರಗಳಿಗಾಗಿ ಕಾಡಿದೆ. ಈ ಪುಸ್ತಕ ಬಂದು ನಾಲ್ಕೈದು ವರ್ಷಗಳೇ ಕಳೆದುಹೋಗಬೇಕಿತ್ತು. ಆದರೆ ಕಾರಣಾಂತರಗಳಿಂದ (ನನ್ನ ಸೋಮಾರಿತನವೂ ಸೇರಿ ) ಅದು ಮುಂದೆ ಮುಂದೆ ಸಾಗಿ ಇದೀಗ ಕೃತಿಗಿಳಿಯುತ್ತಿದೆ.

ರಾಘಣ್ಣನ ನನ್ನ ನಾಲ್ಕು ದಶಕಗಳ ಸ್ನೇಹಕ್ಕೆ ಇನ್ನೊಂದು ಆಯಾಮವೂ ಇದೆ. ಅದೆಂದರೆ ರಾಘಣ್ಣನ ಅಚ್ಚುಮೆಚ್ಚಿನ ಇಬ್ಬರು ಶಿಕ್ಷಕರಲ್ಲಿ ಒಬ್ಬರು ನನ್ನ ಶ್ರೀಮತಿ ನಾಗರತ್ನಳ ತಂದೆ ಶ್ರೀ ರಾಮಯ್ಯ ಮಾಸ್ತರು. ರಾಘಣ್ಣ ಹೊಸನಗರದಲ್ಲಿ ಶಾಲಾವಿಧ್ಯಾರ್ಥಿಯಾಗಿದ್ದಾಗ, ಅಲ್ಲಿ ಸಾಗರದ ಬೆಳೆಯೂರಿನ ಇಬ್ಬರು ಮಾಸ್ತರರು ಇದ್ದರು. ಅವರಲ್ಲಿ ಒಬ್ಬರು ಶ್ರೀ ತಿಮ್ಮಪ್ಪ ಮಾಸ್ತರು ಹಾಗೂ ಇನ್ನೊಬ್ಬರು ನನ್ನ ಮಾವ ಶ್ರೀ ರಾಮಯ್ಯ ಮಾಸ್ತರು. ಈ ಇಬ್ಬರ ಮೇಲೂ ರಾಘಣ್ಣನಿಗೆ ಅಪಾರ ಗೌರವ. ಅವರಿಬ್ಬರಿಗೂ ರಾಘಣ್ಣನನ್ನು ಕಂಡರೆ ತಮ್ಮ ಮಕ್ಕಳಷ್ಟೇ ಪ್ರೀತಿ. ಆಗಾಗ ಬೆಳೆಯೂರಿನ ಇಬ್ಬರ ಮನೆಗೂ ತೆರಳಿ, ಯೋಗಕ್ಷೇಮ ವಿಚಾರಿಸಿ ಗೌರವ ಸಮರ್ಪಿಸಿ ಬರುವುದು ರಾಘಣ್ಣನ ರೂಢಿ. ನನ್ನ ಮದುವೆಯ ನಂತರ ರಾಘಣ್ಣ ನನ್ನನ್ನು ತಮ್ಮ ಸ್ನೇಹಿತರಿಗೆ ಪರಿಚಯಿಸುತ್ತಿದ್ದುದು, “ತಮ್ಮ ಸ್ನೇಹಿತ ಮತ್ತು ಅಚ್ಚುಮೆಚ್ಚಿನ ಗುರುಗಳ ಅಳಿಯನೆಂದೇ”.

ರಾಘಣ್ಣನ ವ್ಯಕ್ತಿತ್ವ ಅಥವಾ ಸೌಜನ್ಯಪೂರ್ಣ ನಡತೆಯ ಕುರಿತು ನಾನಿಲ್ಲಿ ಏನನ್ನೂ ಹೇಳುವ ಅಗತ್ಯವಿಲ್ಲ. ಆತನ ಬದುಕೇ ಆತನ ವ್ಯಕ್ತಿತ್ವದ ಕುರಿತು ಮಾತನಾಡುತ್ತದೆ.ಆದರೆ ಒಂದು ವಿಷಯವನ್ನು ಮಾತ್ರಾ ಓದುಗರು ಗಮನಿಸಬೇಕು. ರಾಘಣ್ಣ ಜನ ಸಮುದಾಯದ ನಡುವೆ ಸಭ್ಯನಾಗಿ, ಸುಜನನಾಗಿ, ಸ್ನೇಹಿಯಾಗಿ ಬಾಳಿದವನು. ಅವನ ಬದುಕಿನಲ್ಲಿ ಹಾದು ಹೋದ ಮಿತ್ರರು, ಸಹಾಯ ಹಸ್ತ ಚಾಚಿದ ಸಹೃದಯಿಗಳು ಸಾವಿರ ಸಾವಿರ. ಇದರಲ್ಲಿ ಎಷ್ಟೋ ಹೆಸರು ಬಿಟ್ಟು ಹೋಗಿರಬಹುದು. ಅದು ರಾಘಣ್ಣನ ದೋಷವಲ್ಲ. ಅದಕ್ಕೆ ಹೊಣೆ ಈ ಲೇಖಕ. ಅವರು ಹೇಳಿದ ಹಲವು ಸಂಗತಿಗಳು, ಅವರು ಉಲ್ಲೇಖಿಸಬಯಸಿದ ಹಲವು ಹೆಸರುಗಳು ನನ್ನ ಕಣ್ತಪ್ಪು, ಕೈತಪ್ಪುಗಳಿಂದಾಗಿ ನುಣುಚಿಕೊಂಡಿರಬಹುದು. ಅದಕ್ಕಾಗಿ ಯಾರೂ ರಾಘಣ್ಣನಲ್ಲಿ ತಪ್ಪು ಕಾಣಬಾರದು. ಎಲ್ಲರನ್ನೂ ಸ್ಮರಿಸಬೇಕೆನ್ನುವ ಸ್ನೇಹಜೀವಿಯ ಸೌಜನ್ಯ ಈ ಲೇಖಕನಿಂದಾಗಿ ಮಸುಕಾಗುವುದು ಬೇಡ.

ಮೊಟ್ಟಮೊದಲನೆಯದಾಗಿ ತಮ್ಮ ಕುರಿತು ಕೃತಿ ರಚಿಸಲು ಅನುಮತಿಯಿತ್ತು, ತಮ್ಮ ಬದುಕಿನ ನೋವು ನಲಿವುಗಳನ್ನು, ಸುಖ ದುಃಖಗಳನ್ನು, ಮಾನಾಪಮಾನಗಳನ್ನು, ಏಳುಬೀಳುಗಳನ್ನು ನನ್ನೊಂದಿಗೆ ನಿರ್ಬಿಡೆಯಿಂದ ಹಂಚಿಕೊಂಡ ಗರ್ತಿಕೆರೆ ‘ನಮ್ಮ ರಾಘಣ್ಣ’ ದಂಪತಿಗಳಿಗೆ ನನ್ನ ಕೃತಜ್ಞತೆಗಳು.

ಈ ಪುಸ್ತಕಕ್ಕೆ ಯಾರಿಂದ ಮುನ್ನುಡಿಯನ್ನು ಬರೆಸೋಣವೆಂದು ರಾಘಣ್ಣನನ್ನು ಕೇಳಿದಾಗ ಅವರು ಹೇಳಿದ ಹೆಸರು ಹತ್ತಾರು. ಹೆಚ್ ಎಸ್ ವೆಂಕಟೇಶ ಮೂರ್ತಿ, ಹಿರೇಮಗಳೂರು ಕಣ್ಣನ್, ಅಚ್ಯುತನ್, ಲಕ್ಷ್ಮೀನಾರಾಯಣ ಭಟ್ಟರು, ಶಿವಮೊಗ್ಗ ಸುಬ್ಬಣ್ಣ, ನಗರದ ಶ್ರೀನಿವಾಸ ಉಡುಪರು ……ಹೀಗೆ ಹೇಳುತ್ತಾ ಹೋದರು. ಮೊದಲ ಪ್ರಯತ್ನವಾಗಿ ನಾವು ಹೆಚ್.ಎಸ್ ವಿ ಯವರನ್ನು ಕೇಳಿದೆವು. ಅವರಂತಹ ಹಿರಿಯರೇ ತತ್ ಕ್ಷಣದಲ್ಲಿ ಹೃತ್ಪೂರ್ವಕವಾಗಿ ಒಪ್ಪಿಕೊಂಡಿದ್ದರಿಂದ ಬೇರೆ ಯಾರನ್ನೂ ಕೇಳುವ ಪ್ರಮೇಯವೇ ಬರಲಿಲ್ಲ ರಾಘಣ್ಣನವರ ಫ್ಯಾನ್ ಗಳಲ್ಲಿ ಒಬ್ಬರಾದ ಹೆಚ್ ಎಸ್ ವಿ ಯವರು ಈ ಪುಸ್ತಕಕ್ಕೆ ಅದ್ಭುತವಾದ ಮುನ್ನುಡಿಯನ್ನು ಬರೆದು ಉಪಕರಿಸಿದ್ದಾರೆ. ಕನ್ನಡದ ಹೆಮ್ಮೆಯ ಕವಿಯಾದ ಈ ಹಿರಿಯ ಚೇತನಕ್ಕೆ ಕೃತಜ್ಞತೆಗಳು.

ಹಾಗೆಯೇ ಮೊಟ್ಟ ಮೊದಲು ಈ ಪುಸ್ತಕಕ್ಕೆ ಪ್ರೇರಣೆ ನೀಡಿದ ನನ್ನ ಸಾಹಿತ್ಯ ಕ್ಷೇತ್ರದ ಪ್ರತಿಯೊಂದು ಹೆಜ್ಜೆಯ ಹಿಂದೂ ತನ್ನ ಸಲಹೆ ಸಹಕಾರ ಮತ್ತು ಸ್ನೇಹಪೂರ್ಣ ನೆರವೀಯುವ, ಈ ಕೃತಿಗೆ ಬೆನ್ನುಡಿ ಬರೆದುಕೊಟ್ಟ ದೇವೇಂದ್ರ ಬೆಳೆಯೂರವರಿಗೂ ಕೃತಜ್ನತೆಗಳು.

ಹಾಗೆಯೇ ಹಲವು ದಿನಗಳ ಹಿಂದೆ ರಾಘಣ್ಣನ ಬಳಿ ಪುಸ್ತಕವನ್ನು ಯಾವ ಪ್ರಕಾಶನದ ಮೂಲಕ ಪ್ರಕಟಿಸೋಣವೆಂದು ಕೇಳಿದಾಗ ಅವರು, “ನಮ್ಮ ಮಠದಿಂದ ಸಾಧ್ಯವಾದರೆ ಅಲ್ಲಿಯೇ ಮಾಡಿಸೋಣ.ನನಗೂ ಗುರುಗಳಲ್ಲಿ ಗೌರವ.ಅದಕ್ಕಿಂತ ಹೆಚ್ಚಾಗಿ ನಮ್ಮ ತಂದೆಯವರು ತಮ್ಮ ಕೊನೆಯ ಕಠಿಣ ದಿನಗಳಲ್ಲಿ ಮಾನಸಿಕ ನೆಮ್ಮದಿಗಾಗಿ ಹೆಚ್ಚು ಆಶ್ರಯಿಸಿದ್ದು ಶ್ರೀ ರಾಮಚಂದ್ರಾಪುರ ಮಠವನ್ನು.ಹಾಗಾಗಿ ಹೊರಗಿನ ಯಾವುದೇ ಪ್ರಕಾಶನಕ್ಕಿಂತ ಮಠದಿಂದ ಸಾಧ್ಯವಾದರೆ ಅಲ್ಲಿಯೇ ಮಾಡಿಸೋಣ“ವೆಂಬ ತಮ್ಮ ದೃಢ ನಿರ್ಧಾರ ಹೊರಗೆಡವಿದರು. ನಾನು ಇದನ್ನು ಶ್ರಿ ಭಾರತೀ ಪ್ರಕಾಶನದ ಜಗದೀಶ ಶರ್ಮರಲ್ಲಿ ಹೇಳಿದಾಗ ಅವರು,”ನಮಗಂತೂ ಅತ್ಯಂತ ಸಂತೋಷ.ಆದರೆ ನೀವೇ ಒಂದು ಮಾತು ಗುರುಗಳ ಬಳಿ ಕೇಳಿಬಿಡಿ” ಎಂದರು.ನಾನು ನಮ್ಮ ಗುರುಗಳಾದ,ಶ್ರೀ ರಾಘವೇಶ್ವರ ಭಾರತೀಯವರ ಬಳಿ ಭಿನ್ನವಿಸಿದಾಗ, “ಇದು ಅತ್ಯಂತ ಸಮರ್ಪಕವಾದ ಕಾರ್ಯ. ಮಠ ಮಾನ್ಯಗಳು ಮಾಡಬೇಕಿರುವುದೇ ಇಂತಹ ಕೆಲಸ. ಅದರಲ್ಲೂ ರಾಘಣ್ಣ ನಮಗೆ ಅತ್ಯಂತ ಪ್ರಿಯ. ಜೊತೆಗೆ ಬರೆದವನು ನೀನು. ಮೊದಲು ಆ ಕೆಲಸ ಮಾಡಿ. ನಮ್ಮ ಪೂರ್ಣ ಆಶೀರ್ವಾದ ಇದೆ” ಎಂದರು.
ಈ ಪುಸ್ತಕವನ್ನು ಮುದ್ರಿಸಿ ಪ್ರಕಾಶಿಸಲು ಅನುಮತಿಯಿತ್ತ ಗುರುಗಳಿಗೂ, ಆ ಹೊಣೆ ಹೊತ್ತ ಭಾರತೀ ಪ್ರಕಾಶನದ ಸಂಪಾದಕರಾದ ಜಗದೀಶ ಶರ್ಮ ಮತ್ತು ತಂಡಕ್ಕೂ ನನ್ನ ಕೃತಜ್ಞತೆಗಳು.

ಸರಿ, ಪುಸ್ತಕದ ಮುದ್ರಣಕ್ಕೆ ವ್ಯವಸ್ಥೆ ಮಾಡಿಕೊಂಡು ನಾನೂ,ಜಗದೀಶ ಶರ್ಮರು ರಾಘಣ್ಣನಿಗೆ , “ನವೆಂಬರ್ ಎಂಟರಂದು ನೀವು ಬಿಡುವಾಗಿದ್ದೀರಾ” ಎಂದು ದೂರವಾಣಿಯ ಮೂಲಕ ಕೇಳಿದರೆ, ರಾಘಣ್ಣ ಉತ್ತರಿಸುವ ಮೊದಲು ಅಳುವುದಕ್ಕೇ ಪ್ರಾರಂಭಿಸಿಬಿಟ್ಟರು .ನಾನು ಫೋನ್ ಹಾಗೆಯೇ ಹಿಡಿದುಕೊಂಡು “ರಾಘಣ್ಣ ಯಾಕೆ,ನಿಮಗೆ ತೊಂದರೆ ಇದ್ದರೆ ಇನ್ನೊಂದು ದಿನ ಮಾಡಿದರಾಯಿತು.ನಿಮಗೆ ಈ ನವೆಂಬರ್ ಮೂರಕ್ಕೆ ಎಂಬತ್ತು ತುಂಬಿ ಎಂಬತ್ತೊಂದಕ್ಕೆ ಕಾಲಿಡುತ್ತಿದ್ದೀರಿ. ಆವತ್ತು ಮಂಗಳವಾರ. ಹಾಗಾಗಿ ಅದರ ಮುಂದಿನ ಭಾನುವಾರ ಅಂತ ಎಂಟಕ್ಕೆ ಇಟ್ಟುಕೊಳ್ಳುವುದಕ್ಕೆ ತೀರ್ಮಾನಿಸಿದ್ದೀವಿ ಅಷ್ಟೆ “ಅಂದಾಗ ತುಸು ಸುಧಾರಿಸಿಕೊಂಡ ರಾಘಣ್ಣ, “ಗುರುಗಳು ಸುಳ್ಳು ಆಪಾದನೆಯ ಸುಳಿಯಲ್ಲಿ ಸಿಕ್ಕಿ ನರಳುತ್ತಾ ಇದ್ದಾಗ ನಾವು ಅವರೆದಿರು ಕಾರ್ಯಕ್ರಮ ಹೇಗೆ ಮಾಡೋದು. ಈಗ ಬೇಡ. ಮುಂದೆ ಯಾವತ್ತಾದರೂ ನೋಡೋಣ” ಅಂತ ಮತ್ತೆ ಅಳುವುದಕ್ಕೆ ಆರಂಭಿಸಿದರು.
ನಾನು ಅವರನ್ನು ಸಮಾಧಾನ ಪಡಿಸಿ ಒಪ್ಪಿಸುವ ಹೊತ್ತಿಗೆ ಸಾಕು ಸಾಕಾಗಿ ಹೋಯಿತು. ಇದು ನಮ್ಮ ರಾಘಣ್ಣ.

ರಾಘಣ್ಣನಂತಹವರು ನಮ್ಮ ಸಮಾಜದ ಕಣ್ಮಣಿಗಳು. ಅವರು ಇಡಿಯ ಸಮುದಾಯದ ಆಸ್ತಿ. ಅಂತವರ ನಡೆ,ನುಡಿ ನಮ್ಮ ಯುವ ಪೀಳಿಗೆಗೆ ಆದರ್ಶ. ಅವರು ನಮ್ಮ ನಡುವೆಯೇ ಇನ್ನೂ ನೂರು ಕಾಲ ಬದುಕಿ ತಮ್ಮ ಹಾಡಿನ ಮೂಲಕ,ತಮ್ಮ ಹೆಜ್ಜೆಯ ಮೂಲಕ ಈ ನಾಡು ನುಡಿಯನ್ನು ಹರಸುತ್ತಿರಲೆಂಬ ಹಾರೈಕೆಯೊಂದಿಗೆ ಈ ಕೃತಿ ರಚನೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸುತ್ತೇನೆ.

~

ಡಾ ಗಜಾನನ ಶರ್ಮಾ
ಹುಕ್ಕಲು

ಸವಿನಯ ಆಮಂತ್ರಣ:

Facebook Comments Box