“ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ” ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ

ಗರ್ತೀಕೆರೆ ರಾಘಣ್ಣ ಸಂಗೀತದ ಸಂತ, ಸಂತರು ತಾವು ಕಂಡುಕೊಂಡ ಆನಂದವನ್ನು ಸಮಾಜಕ್ಕೆ ಹಂಚಿದರೆ, ರಾಘಣ್ಣ ಸಂಗೀತದ ಮೂಲಕ ಜನರಿಗೆ ಸಂತೋಷವನ್ನು ಹಂಚುತ್ತಿರುವವರು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ರಾಗ ಬೈರಾಗಿ ಗರ್ತಿಕೆರಯ ರಾಘಣ್ಣ ಅವರ ೮೦ರ ಸಂಭ್ರಮದ ಕಾಲದಲ‍್ಲಿ ಡಾ.ಗಜಾನನ ಶರ್ಮರು ಬರೆದು ಶ್ರೀಭಾರತೀ ಪ್ರಕಾಶನ ಹೊರತಂದಿರುವ “ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ” ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು,  ಅಧ್ಯಾತ್ಮ- ಸಂಗೀತಗಳನ್ನು ಹೋಲಿಸಿ, ಅವೆರಡರ ಗಮ್ಯವೂ ಆನಂದೇ ಆಗಿದೆ ಎಂದು  ನುಡಿದರು. ರಾಘಣ್ಣ ಅವರದ್ದು ತಳುಕು ಬಳುಕು ಇಲ್ಲದ ಸರಳ ಜೀವನ ,ಅವರು ತಮ್ಮ ಸಹಜ ಸಂಗೀತದ ಮೂಲಕ ಹಲವರಿಗೆ ಆನಂದವನ್ನು ಹಂಚಿದ್ದಾರೆ. ಅವರು ಹಲವುಕಾಲ ಬಾಳಿ ಸಂಗೀತ ಸೇವೆಯನ್ನು ಮುಂದುವರಿಸಲಿ ಎಂದು ಆಶಿಸಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಗಿರೀಶ್ ರಾವ್ ಜೋಗಿ, ಗರ್ತಿಕೆರೆ ರಾಘಣ್ಣ ಅವರದ್ದು ಸರಳ-ಸಹಜ ಬದುಕು, ಹಲವಾರು ಗಣ್ಯರ ಒಡನಾಟವಿದ್ದರೂ ತಮ್ಮ ಸ್ವಾರ್ಥಕ್ಕೆ ಎನ್ನನ್ನೂ ಬಳಸಿಕೊಳ್ಳದ ಆದರ್ಶಮಯವಾದ ಬದುಕು ಅವರದ್ದು. ಲೋಕಾರ್ಪಣೆಗೊಂಡ ಪುಸ್ತಕವು ಕೇವಲ ಅವರ ಜೀವನ ಚರಿತ್ರೆಯಾಗಿರದೇ, ಅದು ಅವರ ಕಾಲಘಟ್ಟದ ಸಾಮಾಜಿಕ ಚಿತ‍್ರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿ.ಆರ್ ಲಕ್ಷ್ಮಣ ರಾವ್ ಮಾತನಾಡಿ, ಇಂದಿನ ಹಾಡುಗಳು ಭಾವ-ಅರ್ಥಗಳನ್ನು ಕಳೆದುಕೊಳ್ಳುತ್ತಿವೆ, ಆದರೆ ರಾಘಣ್ಣ ಅವರ ಸಂಗೀತ ಭಾವಪೂರ್ಣವಾದದ್ದು, ಬಯಲುಸೀಮೆಯವನಾದ ನನಗೂ ಮಲೆನಾಡಿನ ಸೊಗಡನ್ನು ಅವರು ತಮ್ಮ ಸಂಗೀತದ ಮೂಲಕ ಉಣಬಡಿಸಿದರು ಎಂದ ಅವರು, ವಿಶಿಷ್ಟರೀತಿಯಲ್ಲಿ ಸಂಪನ್ನವಾದ ಲೋಕಾರ್ಪಣೆಯ ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿದರು.

ಲೇಖಕ ಡಾ.ಗಜಾನನ ಶರ್ಮ ಹಾಗೂ ಪತ್ರಕತ್ರರಾದ ಅಚ್ಯುತನ್ ಅವರು ಗರ್ತಿಕೆರೆ ರಾಘಣ್ಣ ಅವರಜೊತೆಗಿನ ತಮ್ಮ ಒಡನಾಟವನ್ನು ಸಭೆಯಮುಂದೆ ಬಿಚ್ಚಿಟ್ಟರು.

ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ನ ಪ್ರಾಂಗಣದಲ್ಲಿ ಸಂಪನ್ನವಾದ ಈ ಕಾರ್ಯಕ್ರಮದಲ್ಲಿ ರಾಘಣ್ಣ ಅವರ ‘ಎಂದಾದರೊಂದು ದಿನ’ ಹಾಗೂ ಸಾಕೇತ ಶರ್ಮ ಹಾಡಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡುಗಳ ಸಿಡಿ ಲೋಕಾರ್ಪಣೆಗೊಂಡಿತು.

ಸಮಾರಂಭದಲ್ಲಿ ಸಾಹಿತಿಗಳಾದ ಚಿಂತಾಮಣೀ ಕೂಡ್ಲಕೆರೆ, ಗಾಯಕರಾದ ಸಂಗೀತ ಕಟ್ಟಿ, ನರಹರಿ ದೀಕ್ಷಿತ್  ಸೇರಿದಂತೆ ಸಂಗೀತ ಕ್ಷೇತ್ರದ ಹಲವು ದಿಗ್ಗಜರು ಉಪಸ್ಥಿತರಿದ್ದರು.

“Kadu kaniveya haadu hakki: Garthikere Raghanna” Book Release

Facebook Comments