ಪ್ರಕಾಶನೋತ್ಸವ

ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀಪ್ರಕಾಶನವು ತನ್ನ ವಾರ್ಷಿಕ ಹರ್ಷವಾದ “ಪ್ರಕಾಶನೋತ್ಸವ”ವನ್ನು ದಿನಾಂಕ:12.12.2015 ರಂದು ಆಚರಿಸಿಕೊಳ್ಳುತ್ತಿದೆ. ಬೆಂಗಳೂರು ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಸಂಸ್ಥೆಯ ಪ್ರೇರಕ-ಪೋಷಕ ಶಕ್ತಿಯಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಗಾಯಕ ಶ್ರೀ ಗರ್ತಿಕೆರೆರಾಘಣ್ಣ ಅಭ್ಯಾಗತರಾಗಲಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಶ್ರೀಭಾರತೀಪ್ರಕಾಶನವು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯನಿರತವಾಗಿದೆ. 200 ಪುಸ್ತಕಗಳು, ಎರಡು ಮಾಸಪತ್ರಿಕೆಗಳು, 70 ಸಿ.ಡಿ. ಗಳು, ವಿಶಿಷ್ಟವಾದ ಆಟಿಕೆಗಳು, ಸಂಸ್ಕೃತಿಯನ್ನು ಪ್ರತಿನಿಧಿಸುವ ಉಡುಗೊರೆ ವಸ್ತುಗಳನ್ನು ಪ್ರಕಾಶನವು ಹೊರತಂದಿದೆ.

ಪ್ರಕಾಶನೋತ್ಸವದಲ್ಲಿ “ಪ್ರಕಾಶನ ಪ್ರಾಯಶ್ಚಿತ್ತ” ಎನ್ನುವ ವಿಶೇಷವಾದ ಕಾರ್ಯಕ್ರಮವು ನಡೆಯಲಿದೆ. ಕಾಗದ ತಯಾರಿಕೆಗಾಗಿ ಜಗತ್ತಿನಾದ್ಯಂತ ಅಸಂಖ್ಯ ಮರಗಳು ನಾಶವಾಗುತ್ತಿವೆ. ಜೊತೆಗೆ ತಯಾರಿಕೆಯ ಹಂತದಲ್ಲಿ ಪರಿಸರ ಮಾಲಿನ್ಯ ಕೂಡ ಉಂಟಾಗುತ್ತಿದೆ. ಆದ್ದರಿಂದ ಪುಸ್ತಕಗಳ ಉಪಯೋಗ ಪಡೆದುಕೊಳ್ಳುವ ಓದುಗ ಮತ್ತು ಪ್ರಕಾಶನ ಸಂಸ್ಥೆಗಳಿಗೆ ಕಾಡನ್ನು ಬೆಳೆಸುವ ನೈತಿಕ ಹೊಣೆಗಾರಿಕೆಯಿರುತ್ತದೆ. ಹಾಗಾಗಿ ಭಾರತೀಪ್ರಕಾಶನವು ಪರಿಸರ ನಾಶಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಮರಗಳನ್ನು ಬೆಳೆಸುವ ಯೋಜನೆಯನ್ನು ಆರಂಭಿಸುತ್ತಿದೆ. ಈ ವರ್ಷ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿ ಪರಿಸರದಲ್ಲಿ ಪ್ರಕಾಶನವು ಸಾವಿರ ಮರಗಳನ್ನು ಮೊದಲ ಹಂತವಾಗಿ ಬೆಳೆಸುತ್ತಿದೆ. ಇದರ ಶುಭಾರಂಭವು ಪ್ರಕಾಶನೋತ್ಸವದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಸಂಸ್ಥೆಯ ನೂತನ “ಲೋಗೋ”, ಡಾ|| ಹಿತ್ಲಳ್ಳಿ ಸೂರ್ಯನಾರಾಯಣ ಭಟ್ ಸಂಪಾದಿಸಿದ 14ನೆಯ ಶತಮಾನದ ಅಪ್ರಕಟಿತ ಗ್ರಂಥ ವಿದ್ಯಾಮಾಧವ ಪಂಡಿತರ “ಶ್ರೀಸೂಕ್ತಭಾಷ್ಯ”, ಮಕ್ಕಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ, ಮಹಾಭಾರತದ ಪಾತ್ರಗಳನ್ನು ಪರಿಚಯಿಸುವ ಆಟಿಕೆ “ಪತ್ರಮಹಾಭಾರತ”, ಶ್ರೀಶ್ರೀಗಳವರ “ಪ್ರವಚನದ ಸಿ.ಡಿ”, ಡಾ|| ಆರ್. ಗಣೇಶ್ ವಿರಚಿತ ಶ್ರೀಮಠದ “ಸುಪ್ರಭಾತದ ಇಂಗ್ಲಿಷ್ ಆವೃತ್ತಿ” ಹಾಗೂ ಶ್ರೀಮಠದ ದಿನದರ್ಶಿಕೆ ಲೋಕಾರ್ಪಣೆಗೊಳ್ಳಲಿದೆ.

 

 

Invitation

Invitation

 

Facebook Comments