ಗೋಕರ್ಣ.ಮಾ 10. ವ್ಯಕ್ತಿಯೋರ್ವನಿಗೆ ಮಹತ್ವ ಸಿಗುವುದು, ಆತ ಸಾಮಾಜಿಕವಾಗಿ ಪ್ರಸ್ತುತನಾಗುವುದು ಕೇವಲ ಶರೀರದಾಧಿಕ್ಯದಿಂದಲೋ, ಸಂಪತ್ತಿನಿಂದಲೋ ಅಲ್ಲ. ತನ್ನ ಸತತಪ್ರಯತ್ನದಿಂದ ಸಮಾಜದ ಜನರಿಗೆ ಹೆಚ್ಚುಸಂತೋಷವನ್ನು ಕೊಡುವವನೇ ನಿಜವಾದ ಅರ್ಥದಲ್ಲಿ ದೊಡ್ಡವ್ಯಕ್ತಿ ಯಾರು ತನ್ನ ಸ್ವಾರ್ಥಕ್ಕಾಗಿ ತನ್ನವರ ಸಂತೋಷವನ್ನು ಕಿತ್ತುಕೊಳ್ಳುತ್ತಾನೋ ಅವನಂತಹ ಅಲ್ಪಜೀವಿ ಬೇರೊಂದಿಲ್ಲ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
sarvabhuma
ಇಂದು ಮಹಾಶಿವರಾತ್ರಿಯ ವಿಶೇಷಪರ್ವದಲ್ಲಿ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ವಾರ್ಷಿಕಪದ್ಧತಿಯಂತೆ ಆಯೋಜಿತವಾಗಿದ್ದ ಧರ್ಮಸಭೆಯಲ್ಲಿ ದಿವ್ಯಸಾನ್ನಿದ್ಧ್ಯವನ್ನು ನೀಡಿದ್ದ ಪೂಜ್ಯಶ್ರೀಗಳು ಈ ಸಂದರ್ಭದಲ್ಲಿ ಅನುಗ್ರಹಿಸುವ “ಸಾರ್ವಭೌಮ” ಪ್ರಶಸ್ತಿಯನ್ನು ನಾಡಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ  ಸಂಸ್ಥಾಪಕರಾದ “ನಿಟ್ಟೆ ಏಜುಕೇಷನ್ ಟ್ರಸ್ಟ್” ನ ಶ್ರೀ ವಿನಯ ಹೆಗ್ಡೆಯವರಿಗೆ ನೀಡಿ ಆಶೀರ್ವಚನ ನೀಡುತ್ತ ಶ್ರೀ ವಿನಯ ಹೆಗ್ಡೆ ಇಂತಹ ಅಪರೂಪದವ್ಯಕ್ತಿಗಳಲ್ಲಿ ಓರ್ವರು. ಹೆಸರಿಗೆ ತಕ್ಕಂತೆ ವಿಯವೇ ಮೈವೆತ್ತಿರುವಂತಿರುವ ಅವರಲ್ಲಿ ಅಹಂಕಾರ, ದರ್ಪಗಳ ಲವಲೇಶವೂ ಇಲ್ಲ. ಇಂತಹ ಸಜ್ಜನಿಕೆಯೇ ಇಂದು ಅವರನ್ನು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಅಗ್ರಸ್ಥಾನಿಯನ್ನಾಗಿ ಮಾಡಿದೆ. ನಾಡಿನ ಶ್ರೇಷ್ಠನ್ಯಾಯವೇತ್ತರಾದ ಕೆ.ಎಸ್.ಹೆಗ್ಡೆಯವರಂತಹ ತಂದೆಯಿಂದ ಉತ್ತಮ ಸಂಸ್ಕಾರವನ್ನು ಪಡೆದ ವಿನಯ ಹೆಗ್ಡೆ ಲಕ್ಷಸಂಖ್ಯೆಯ ವಿದ್ಯಾರ್ಥಿಗಳಿಗೆ ವಿವಿಧವಿಷಯಗಳಲ್ಲಿ ಉತ್ತಮವಾದ ವಿದ್ಯಾದಾನವನ್ನು ನೀಡುತ್ತಿದ್ದಾರೆ. ತನ್ನೋರ್ವನ ಬಗ್ಗೆ ಮಾತ್ರ ಯೋಚಿಸದೆ ತನ್ನಸುತ್ತಮುತ್ತಲಿನ ಸಮಾಜದ ಬಗ್ಗೆ ಅದರ ಹಿತದ ಬಗ್ಗೆ ಚಿಂತಿಸುವಾವರ ವ್ಯಕ್ತಿತ್ವ ಕಲಂಕರಹಿತವಾದದ್ದು ಎಂದು ಹೇಳಿ ಅವರ ಸಂಸ್ಕಾರ ಮತ್ತು ಸ್ಮಯಂ ಬದ್ಧತೆಗಳು ಅವರಿಗೆ ಸಾಧನೆಗೆ ತಕ್ಕ ಫಲವನ್ನು ನೀಡಿವೆ, ಶ್ರೀಮಹಾಬಲೇಶ್ವರನ ಅನುಗ್ರಹರೂಪವಾದ ಈ ಸಾರ್ವಭೌಮ ಪ್ರಶಸ್ತಿಯಿಂದಾಗಿ ಅವರು ಸಮಾಜಕ್ಕೆ ಇನ್ನೂ ಹೆಚ್ಚಿನ  ಸೇವೆಯನ್ನು ನೀಡುವಂತಾಗಲೆಂದೂ ಆಶಿಸಿದರು.

ಸನ್ಮಾನಕ್ಕೆ ಉತ್ತರಿಸಿದ ಶ್ರೀ ವಿನಯ ಹೆಗ್ಡೆ ನನ್ನ ಕಿಂಚಿತ್ಸಾಧನೆಯ ಹಿಂದಿರುವುದು ನನ್ನ ಸಹಕಾರಿಗಳ, ಸಹೋದ್ಯೋಗಿಗಳ ಬೆಂಬಲ ಮತ್ತು ನನ್ನ ಹಿರಿಯರ ಆಶೀರ್ವಾದ ಎಂದು ಹೇಳಿ ಇಂದು ಆಧುನಿಕಕಾಲದ ಥಳಕು-ಬಳಕುಗಳಲ್ಲಿ ಬದುಕಿನ ಉತ್ತಮ ಮೌಲ್ಯಗಳು ನಾಶವಾಗುತ್ತಿವೆ. ಆದರೂ  ಉತ್ತಮ ಆದರ್ಶಗಳನ್ನು ಸಮಾಜಕ್ಕೆ ತೋರಿಸಿ ಅವುಗಳ ಪುನಃಸ್ಥಾಪನೆಗಾಗಿ ರಾಮಾಯಣ ವನ್ನು ಆಧರಿಸಿದ ರಾಮಕಥಾದಂತಹ ಅತ್ಯಪೂರ್ವ ಕಲ್ಪನೆಯನ್ನು ಯೋಜಿಸಿ ಕಾರ್ಯಗತಗೊಳಿಸುತ್ತಿರುವ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ಸಾಮಾಜಿಕ ಕಳಕಳಿ ಸಮಾಜದ ಬಹುದೊಡ್ಡಭಾಗ್ಯ. ಪೂಜ್ಯಶ್ರೀಗಳ ಆಶೀರ್ವಾದರೂಪವಾಗಿ ದೊರೆತ ಈ ಸಾರ್ವಭೌಮ ಪ್ರಶಸ್ತಿ
ನನ್ನ ಮುಂದಿನಎಲ್ಲಸಾಧನೆಗಳಿಗೆ ಶ್ರೀರಕ್ಷೆಯಾಗಿರಲಿ ಎಂದೂ ನುಡಿದರು.

ಪ್ರಾರಂಭದಲ್ಲಿ ಶ್ರೀ ಚಂದ್ರಶೇಖರ ಭಟ್ ದಂಪತಿಗಳಿಂದ ಸಭಾಪೂಜೆ ಹಾಗೂ ಶ್ರೀ ಜಿ.ಕೆ.ಹೆಗಡೆಯವರಿಂದ ಅಭ್ಯಾಗತ ಸ್ವಾಗತ ಸಂಪನ್ನಗೊಂಡಿತು. ಶಿವರಾತ್ರಿ ಉತ್ಸವಸಮಿತಿಯ ಅಧ್ಯಕ್ಷ ಡಾ. ವಿ.ಆರ್.ಮಲ್ಲನ್ ಪ್ರಾಸ್ತಾವಿಕವಾಗಿ ಇತ್ತೀಚೆಗಿನ ನಾಲ್ಕು ವರ್ಷಗಳಲ್ಲಿಯ ಶಿವರಾತ್ರಿ ಉತ್ಸವದ ಜೊತೆಗೇ ನಡೆದುಬರುತ್ತಿರುವ ವಿವಿಧ ಸಾಂಸ್ಕೃತಿಕ  ಚಟುವಟಿಕೆಗಳ ಬಗ್ಗೆ ವಿವರಿಸಿದರು. ಯಲ್ಲಾಪುರದ ” ಸಂಕಲ್ಪ” ಸಂಸ್ಥೆಯ ಶ್ರೀ ಪ್ರಮೋದ ಹೆಗಡೆ ಶ್ರೀ ವಿನಯಹೆಗ್ಡೆಯವರ ಪರಿಚಯವನ್ನು ನೀಡಿ ಅಭಿನಂದಿಸಿದರು.

Facebook Comments