ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರನ ವಿವಾಹವು ದಿನಾಂಕ 13-11-2012 ಮಂಗಳವಾರ ನೆರವೇರಲಿದೆ. ದಿನಾಂಕ 6-11-2012 ಗಂಗಾಷ್ಟಮಿ ಶುಭ ಘಳಿಗೆಯಲ್ಲಿ ಗಂಗಾಮಾತೆಯೊಂದಿಗೆ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವನ್ನು ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಬಹುದೊಡ್ಡ ಜನ ಸಮುದಾಯದ ಮಧ್ಯದಲ್ಲಿ ಸಮಾಜ ಪ್ರಮುಖರೂ, ಊರ ಪ್ರಮುಖರು ಹಾಗೂ ವೈದಿಕ ವಿದ್ವಾಂಸರ ಉಪಸ್ಥಿತಿಯಲ್ಲಿ ವ್ಯೆಭವೋಪೇತವಾಗಿ ನಡೆಸಿಕೊಡು ಬಂದ ಜಗದೀಶ್ವರನು ದೀಪಾವಳಿಯ ಅಮಾವಾಸ್ಯೆಯ ದಿನ ಮಹಾಬಲೇಶ್ವರ ದೇವಾಲಯದ ಎದುರಿಗಿರುವ ಕಡಲ ತಡಿಯಲ್ಲಿ ಸುಮಾರು ದೂರ ಉತ್ಸವದಿಂದ ಸಾಗಿ ರುದ್ರಪಾದದ ಹತ್ತಿರ ನಿಶ್ಚಿತ ವಧುವಾದ ಗಂಗಾಮಾತೆಯನ್ನು ಸಹಸ್ರ ಸಂಖ್ಯೆಯ ಜನರ ಮದ್ಯದಲ್ಲಿ ಪಾಣಿಗ್ರಹಣ ಮಾಡಲಿದ್ದಾನೆ.

ಕಡಲ ತಡಿಯುದ್ದಕ್ಕು ಸುಂದರವಾಗಿ ತಳಿರು-ತೋರಣಗಳಿಂದ ಅಲಂಕಾರವನ್ನು ಮಾಡಿ ಊರಿನ ಜನತೆ ತುಂಬಾ ಶ್ರದ್ಧಾ ಭಕ್ತಿಯಿಂದ ಈ ವಿವಾಹವಿಧಿಯಲ್ಲಿ ಪಾಲ್ಗೊಳ್ಳುತ್ತಾರೆ . ಒಂದೆಡೆ ಭೋರ್ಗೆರೆವ ಕಡಲು, ಹಾಗೆಯೇ ಬಿಳಿ ಬಿಳಿ ಉಸುಕಿನ ರಾಶಿ. ಈ ನಿಸರ್ಗ ರಮಣೀಯತೆಯ ಪರಿಸರದಲ್ಲಿ ಜಗದೊಡೆಯನ ವಿವಾಹ ಮಹೋತ್ಸವವು ಗಂಗಾಮಾತೆಯೂಡನೆ ಜರುಗುವ ಈ ಸಂದರ್ಭಕ್ಕೆ ಶಿವಗಂಗಾ ವಿವಾಹ ಮಹೋತ್ಸವ ಎಂದು ಕರೆಯಲಾಗುತ್ತಿದ್ದು ಶ್ರೀದೇವಾಲಯದ ಪಾರಂಪರಿಕವಾದ ಉತ್ಸವಗಳಲ್ಲಿ ಇದು ಮುಖ್ಯವಾಗಿದೆ. ಸಾರ್ವಭೌಮನ ಭಕ್ತಜನರೊಂದಿಗಿನ ಬಾಂಧವ್ಯಕ್ಕೆ ಶ್ರೇಷ್ಠದೃಷ್ಟಾಂತವಾದ ಈ ಉತ್ಸವಕ್ಕೆ ಐತಿಹಾಸಿಕವಾಗಿಯೂ ವಿಶೇಷಮಹತ್ವವಿದೆ.

Facebook Comments